ಕಾವ್ಯ ಸಂಗಾತಿ
ಬಾಳೆಯೆಲೆಯ ಹಾಗೆ
ವಿಶ್ವನಾಥ ಎನ್ ನೇರಳಕಟ್ಟೆ
ಊಟದ ಪಂಕ್ತಿಯ ಬಾಳೆಯೆಲೆಯಲ್ಲಿ
ಇರುತ್ತವೆ ಬಗೆ ಬಗೆಯ ಭಕ್ಷ್ಯಭೋಜ್ಯಗಳು
ಸಿಹಿಗೆ ಪಾಯಸ, ಹೋಳಿಗೆ, ಜಿಲೇಬಿ
ಖಾರಕ್ಕೆ ಸಾರು, ಸಾಂಬಾರು, ಉಪ್ಪಿನಕಾಯಿ
ಬಾಯಿ ಕುರುಂಗುಟ್ಟಿಸಲು ಹಪ್ಪಳ
ಮೆಣಸುಕಾಯಿಯ ಹುಳಿ
ತಲೆಗೇರಿದ ರುಚಿಗಳನ್ನು ಇಳಿಸಲು ಕಾಯಿಹುಳಿ
ಎಲ್ಲಾ ತರಕಾರಿಗಳೂ
ತಕತಕ ಕುಣಿವ ಅವಿಲು
ತಿಂದದ್ದನ್ನೆಲ್ಲಾ ಕರಗಿಸಲು
ಕೊನೆಗೆ ಬರುವ ಮಜ್ಜಿಗೆ
ಅನಿಸುತ್ತಿದೆ ಉಂಡೆಲೆಯನ್ನು ಕಂಡ ನನಗೆ
ಇದ್ದರೆ ಇರಬೇಕು-
ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದ
ಬಾಳೆಯೆಲೆಯ ಹಾಗೆ