ವಿಶೇಷ ಬರಹ
ಪಸರಿಸಲಿ ವಿಶ್ವದಲಿ ಕನ್ನಡದ ಕಸ್ತೂರಿ ಕಂಪು
ಜಯಶ್ರೀ.ಜೆ.ಅಬ್ಬಿಗೇರಿ
ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಹುಯಿಲಗೋಳ ನಾರಾಯಣರ ಕನ್ನಡದ ಲೇಖನಿಯಿಂದ ಹೊರ ಹೊಮ್ಮಿದ ಕರ್ನಾಟಕದ ನಾಡಗೀತೆಯೆನಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ರಾಷ್ಟ್ರ ಕವಿ ಕುವೆಂಪು ವಿರಚಿತ ಜೈ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು, ಎಂತಾದರೂ ಇರು, ವರಕವಿ ಬೇಂದ್ರೆಯವರ ಒಂದೇ ಒಂದೇ ಒಂದೇ ಕರ್ನಾಟಕ ಒಂದೇ, ಡಿ ಎಸ್ ಕರ್ಕಿಯವರ ಹಚ್ಚೆವು ಕನ್ನಡದ ದೀಪ. ಕೆ ಎಸ್ ನಿಸ್ಸಾರ ಅಹ್ಮದರ ನಿತ್ಯೋತ್ಸವದ ಗೀತೆಗಳು ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡಿಗರ ಕಿವಿ ಮನಗಳನ್ನು ತಂಪಾಗಿಸುವ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಕನ್ನಡಮ್ಮನ ಮುದ್ದು ಕಂದಮ್ಮಗಳಾದ ನಾವು ನಿರಭಿಮಾನಿಗಳಾಗದಿರಲಿ ಎಂದು ಹಿರಿಯ ಸಾಹಿತಿಗಳು ನಮ್ಮಲ್ಲಿ ಪ್ರೇರಕ ಶಕ್ತಿಯಂತೆ ಇಂಥ ಸಾವಿರಾರು ಗೀತೆಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಕನ್ನಡಮ್ಮನ ಏಳ್ಗೆಯನ್ನು ಬಯಸಿದ ಅನೇಕ ಚಿಂತಕರು ನಾಡನ್ನು ಸುಭದ್ರವಾಗಿ ಕಟ್ಟೋದು ಹೇಗೆ? ಕಾಯೋದು ಹೇಗೆ? ಎನ್ನುವ ಚಿತ್ರವನ್ನು ನಮ್ಮ ಕೈಗಿತ್ತು ತೆರಳಿದ್ದಾರೆ. ಆದರೆ ನಾವಿಂದು ಪರಭಾಷೆಗಳ ವ್ಯಾಮೋಹಕ್ಕೆ ಬಲಿಯಾಗಿ ನಾಡು ನುಡಿಯನ್ನು ಪ್ರಾಮಾಣಿಕ ಕಾಳಜಿಯಿಂದ ರಕ್ಷಿಸುವ ಆದ್ಯ ಕರ್ತವ್ಯದಿಂದ ದೂರ ಸರಿಯುತ್ತಿದ್ದೇವೆ ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.
ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಭಾಷೆ ಜಾಗತಿಕವಾಗಿ ಪ್ರಸಿದ್ಧಿಯನ್ನು ಪಡೆದ ಭಾಷೆಯಾಗಿದೆ. ಕನ್ನಡದಲ್ಲಿರುವ ವಚನ, ರಗಳೆ ಸಾಹಿತ್ಯದಂಥ ಪ್ರಕಾರಗಳು ವಿಶ್ವದ ಯಾವುದೇ ಭಾಷೆಯಲ್ಲಿಲ್ಲ. ಶ್ರೀಮಂತ ಸಾಹಿತ್ಯವನ್ನು ಹೊಂದಿದ ಭಾಷೆ ನಮ್ಮದು. ಕನ್ನಡಿಗರು ಭಾಷೆಯಲ್ಲಿ ಕ್ರಿಯಾಶೀಲರಾಗಿ ಕಟ್ಟಿದ ಸಾಹಿತ್ಯದ ಸಿರಿಯನ್ನು ಕಂಡು ಇತರ ಭಾಷಿಕರು ಮೂಕ ವಿಸ್ಮಿತರಾಗಿದ್ದಾರೆ. ಆದರೆ ಇಂದು ಈ ಭಾಷೆಯನ್ನು ಉಳಿಸಲು ಗಡಿನಾಡಿನಲ್ಲಷ್ಟೇ ಅಲ್ಲ ನಡು ನಾಡಿನಲ್ಲೂ ತೀವ್ರವಾಗಿ ಹೋರಾಟ ನಡೆಸಲೇಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಾಡು ನುಡಿಗೆ ಮಸಿ ಬಳಿಯುವವರನ್ನು ಸದೆ ಬಡಿಯಬೇಕಾಗಿದೆ. ಹೊರಗಿನ ಶತ್ರುಗಳನ್ನು ಮಟ್ಟ ಹಾಕುವುದು ಸರಳ. ಒಳಗಿನ ಶತ್ರುಗಳನ್ನು ನಿರ್ನಾಮ ಮಾಡುವುದು ಸುಲಭದ ಮಾತಲ್ಲ. ಕನ್ನಡತನವನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕೆಂಬ ಸದುದ್ದೇಶದಿಂದ ಆರಂಭಗೊಡ ಹೋರಾಟಗಳು ಈಗೀಗ ಚೀರಾಟಗಳಾಗಿ ಬದಲಾಗಿವೆ. ಓಣಿ ಓಣಿಯಲ್ಲೂ ಸಂಘಟನೆಗಳು ಹುಟ್ಟಿಕೊಂಡು ಬಾಯಲ್ಲಿ ಮಾತ್ರ ಜೈಕಾರ ಕೂಗುತ್ತ ನಿಜವಾದ ಸಂಘಟನೆಗಳ ಕಾರ್ಯ ವೈಖರಿಗೆ ಅಸಹ್ಯ ಹುಟ್ಟಿಸುತ್ತಿವೆ. ಅಪ್ಪಟ ಕನ್ನಡ ಭಕ್ತರಲ್ಲಿ ಕನ್ನಡ ಪರ ನಿಲುವನ್ನು ಹೊಂದಿದ ನಿಜವಾದ ಅಹವಾಲುಗಳಿವೆ. ಅವುಗಳಿಗಾಗಿ ಉಗ್ರ ಹೋರಾಟ ನಡೆಸುವ ಛಲದ ಕೆಚ್ಚೆದೆಯೂ ಇದೆ. ನಮ್ಮನ್ನು ನಮ್ಮವರಿಂದ ರಕ್ಷಿಸಿಕೊಂಡು ಬೆಳೆಯಲು ಇಷ್ಟೆಲ್ಲ ಹೋರಾಟಗಳ ಅಗತ್ಯತೆ ಕಾಡುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ನಾಡಿನ ನೆಲ ಜಲದ ರಕ್ಷಣೆಯ ಹೆಸರಿನಲ್ಲಿ ದುಃಖ ಆಕ್ರೋಶ ಆವೇಗ ದೋಂಬಿ ಹಿಂಸಾಚಾರವನ್ನು ಎಸಗಿ ಗಲಭೆ ಕಲ್ಲು ತೂರಾಟಗಳಿಂದ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಾಶಗೊಳಿಸುವುದು ಸಾಮಾನ್ಯವಾಗಿ ಬಿಟ್ಟಿದೆ.
ನಾಡು ನುಡಿ ಸಂಸ್ಕೃತಿಯ ಉಳಿವಿಗೆ ಬೆಳವಣಿಗೆಗೆ ನಮ್ಮ ಮಕ್ಕಳಲ್ಲಿ ಅಭಿಮಾನ ಬಿತ್ತರಿಸುವ ಕೆಲಸ ಇಂದು ನಮ್ಮಿಂದ ಆಗಬೇಕಿದೆ. ಆದರೆ ಈ ಹೊಣೆಗಾರಿಕೆ ಅಲ್ಲಲ್ಲಿ ಚೂರು ಪಾರು ಎನ್ನುವಷ್ಟು ಮಾತ್ರ ನಡೆಯುತ್ತಿರುವುದು ಖೇದವೇ ಸರಿ. ನವಂಬರ್ ತಿಂಗಳಲ್ಲಿ ಮಾತ್ರ ನಾಡ ಪ್ರೇಮ ಭಾಷಾ ಪ್ರೀತಿಯನ್ನು ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಾಡು ನುಡಿಯ ಅಭಿವೃದ್ಧಿಗೆ ಕಾವಲು ಸಮಿತಿಗಳನ್ನು ಅಭಿವೃದ್ಧಿ ಪ್ರಾಧಿಕಾರಗಳನ್ನು ಹುಟ್ಟು ಹಾಕಿದರೆ ಸಾಲದು. ಅದಕ್ಕೆ ನಿರಂತರವಾದ ತಾಲೀಮು ಕೌಟುಂಬಿಕವಾಗಿ ಸಾಮಾಜಿಕವಾಗಿಯೂ ನಡೆಯುವಂತೆ ಅವಕಾಶಗಳನ್ನು ಕಲ್ಪಿಸಬೇಕಿದೆ. ಕನ್ನಡದ ಸ್ಥಾನಮಾನ ಇನ್ನಷ್ಟು ಎತ್ತರಕ್ಕೆ ಏರಲು ಬಹಳಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಕನ್ನಡಿಗರಿಗೆ ಇದು ಕಷ್ಟ ಸಾಧ್ಯವಾದ ಸಂಗತಿಯಾಗಿದೆ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲೇ ಬೇಕಿದೆ. ಗಂಡು ಮೆಟ್ಟಿದ ನಾಡು ಕಸ್ತೂರಿಯ ಬೀಡು ಎಂದೆಲ್ಲ ಅಪಾರ ಕೀರ್ತಿ ಗಳಿಸಿದ ಕನ್ನಡಮ್ಮ ಇಂದು ತನ್ನ ಮಕ್ಕಳಿಂದಲೇ ಅಲಕ್ಷö್ಯಕ್ಕೆ ಒಳಗಾಗಿದ್ದಾಳೆ. ಇಂದಿನ ಭಾಷಾ ಜಗತ್ತಿನಲ್ಲಿ ಕನ್ನಡಕ್ಕೆ ಶಾಸ್ತೀಯ ಭಾಷೆಯ ಸ್ಥಾನಮಾನ ದೊರೆತಿದೆ. ಹಾಗೆಂದು ಪೂರ್ತಿಯಾಗಿ ಎಲ್ಲವೂ ಸುಧಾರಿಸಿದೆ ಎಂದರ್ಥವಲ್ಲ.
ಬದಲಾವಣೆಯ ಭರಾಟೆಯಲ್ಲಿ ಕನ್ನಡಿಗರು ಕನ್ನಡವನ್ನು ಧಿಕ್ಕರಿಸಿ ಇಂಗ್ಲೀಷ್ ಜಾಲಕ್ಕೆ ಬಿದ್ದು ಇಂಗ್ಲೀಷ್ ಕಡೆಗೆ ಹೆಚ್ಚು ಕುತೂಹಲ ತಾಳುತ್ತಿದ್ದಾರೆ.. ಅಂಗ್ಲ ಭಾಷೆಯು ನಾಡಿನ ತುಂಬೆಲ್ಲ ಪಾರುಪತ್ಯ ಮೆರೆಯುತ್ತಿದೆ. ಆಂಗ್ಲ ಭಾ಼಼ಷೆಯನ್ನು ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲು ಬಳಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಹಾಗಂತ ಕನ್ನಡದ ಪ್ರಾಧಾನ್ಯತೆಯನ್ನು ನಿರ್ಲಕ್ಷಿಸುವಂತಿಲ್ಲ. ಯಾವುದೇ ಒಂದು ನಾಡಿನ ಸಂಸ್ಕೃತಿಯೆAದರೆ ಆ ಒಂದು ನಾಡಿನ ಜನರ ಜೀವನ ವಿಧಾನ.ಕನ್ನಡ ಸಂಸ್ಕೃತಿಯು ಭಾರತದ ಸಂಸ್ಕೃತಿಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಮೆರೆದಿದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ವೈಭವಯುತ ಚರಿತ್ರೆಯಿದೆ. ಕನ್ನಡ ಭಾಷೆ ಮಧುರವಾದುದು. ಅತಿ ಸುಂದರ ಲಿಪಿಯುಳ್ಳದ್ದು.
ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕನ್ನಡತನವನ್ನು ಮುನ್ನಡೆಸಲು ಮುಂದಾಗಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ಹಣದಾಹದ ಬೇಳೆ ಬೇಯಿಸಿಕೊಳ್ಳುವ ಜನ ನಮ್ಮನ್ನು ಮಾನಸಿಕವಾಗಿ ಸಾಕಷ್ಟು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಬೆನ್ನು ಸವರುತ್ತ ಚೂರಿ ಇರಿಯುವ ಇವರನ್ನೆಲ್ಲ ಸವಾಲಾಗಿ ಪರಿಗಣಿಸಿಬೇಕು. ಅನ್ಯ ಕಾರಣಗಳಿಂದ ಅನ್ಯ ಭಾಷಿಕರ ವಲಸೆ ನಿರಂತರವಾಗಿ ನಡೆದೇ ಇದೆ. ನಮ್ಮಿಂದ ಬೇಳೆ ಬೇಯಿಸಿಕೊಂಡು ಬೆನ್ನಹಿಂದೆ ನಮ್ಮನ್ನು ಚುಚ್ಚು ಮಾತುಗಳಿಂದ ಅವಮಾನಿಸುವ ಈ ಅನ್ಯ ಭಾಷಿಕರನ್ನು ಸಹಿಸಿ ಹೆಜ್ಜೆ ಹಿಂದಿಡುವ ಹಾಗಿಲ್ಲ. ಅವರ ಚುಚ್ಚು ಮಾತು ಅವಮಾನಗಳನ್ನೇ ನಮ್ಮ ಶಕ್ತಿಯನ್ನಾಗಿಸಿ ಎಲ್ಲವನ್ನೂ ಸಹಿಸಿಯೂ ಮುಂದುವರೆಯುವ ಛಲ ಹೊತ್ತು ಇಷ್ಟು ದೂರವಾದರೂ ನಡೆದು ಬಂದೆವಲ್ಲ ಎಂದು ಅಭಿಮಾನದಿಂದ ಹೇಳುವ ನಮ್ಮ ಅನೇಕ ಕನ್ನಡ ಮನಸ್ಸುಗಳು ಗಟ್ಟಿಯಾಗಿವೆ. ಅಂಥವರೊಂದಿಗೆ ಕೈ ಜೋಡಿಸುವ ಹೊಣೆ ನಮ್ಮದಾಗಿದೆ.
ಗುರಿಯೆಡಗಿನ ದಾರಿ ಸ್ಪಷ್ಟವಾಗಿವೆ. ಎಂದು ಕೆಲ ಅಪ್ಪಟ ಕನ್ನಡ ಸಂಘದ ಸದಸ್ಯರು ಆತ್ಮವಿಶಾಸದಿಂದ ಗೆಲುವಿನ ನಗೆಯೊಂದಿಗೆ ಹೇಳುತ್ತಾರೆ. ನಮ್ಮ ಮುಂದಿನ ಪೀಳಿಗೆಗೆ ಸುಭದ್ರ ನಾಡನ್ನು ಕೈಗಿಡಲು ಶ್ರಮಿಸುತ್ತಿರುವ ಇಂಥವರಿಗೆಲ್ಲ ನಮ್ಮ ಸಹಕಾರ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಯನ್ನು ನಾಡು ನುಡಿ ರಕ್ಷಣೆಗೆ ದುಡಿಯುವ ಮನಗಳ ಮುಂದಿಟ್ಟರೆ ಇವೆಲ್ಲ ಸಮಸ್ಯೆಗಳಲ್ಲವೇ ಅಲ್ಲ ಕನ್ನಡ ತಾಯಿಯ ಸೇವೆಯೇ ನಮ್ಮ ಬಾಳಿನ ಪರಮ ಗುರಿಯೆಂದು ಒಪ್ಪಿಕೊಂಡಿದ್ದೇವೆ ಮತ್ತು ಅದನ್ನು ಕೊನೆಯುಸಿರುವವರೆಗೂ ನಿಭಾಯಿಸುತ್ತೇವೆ. ಅಲ್ಲದೇ ಕನ್ನಡ ಬಳಗಕ್ಕೆ ಜನರ ಪ್ರತಿಕ್ರಿಯೆಯೇ ದೊಡ್ಡ ಆಧಾರ ಎನ್ನುತ್ತಾರೆ ತಮ್ಮ ಮುಂದಿನ ಹೆಜ್ಜೆಯ ಬಗ್ಗೆಯೂ ಸ್ಪಷ್ಟತೆ ಹೊಂದಿರುವ ಸಂWಟಕರು. ಇಂಥ ಸಂಘಟನೆಗಳ ಬಲವನ್ನು ನಾವೆಲ್ಲ ಕೂಡಿ ಹೆಚ್ಚಸಬೇಕು. ಕಳೆದು ಹೋದ ಗತ ವೈಭವದ ದಿನಗಳನ್ನು ಮರಳಿ ತರಲು ಕಂಕಣಬದ್ದರಾಗಬೇಕು. ಕನ್ನಡ ನಾಡಿನ ನೈಸರ್ಗಿಕ ಸಂಪತ್ತು ಖನಿಜ ಸಂಪತ್ತು ವಾಣಿಜ್ಯೋದ್ಯಮಗಳೆಲ್ಲ ಕನ್ನಡಿಗರ ಪಾಲಿಗೆ ದಕ್ಕದೇ ಅನ್ಯರ ಪಾಲಾಗುತ್ತಿರುವುದು ವಿಷಾದದ ಸಂಗತಿ. ಕನ್ನಡ ನಾಡು ಕರ್ನಾಟಕ ಎಂದು ಹೊಸ ನಾಮಕರಣ ಮಾಡಿಕೊಂಡು ಎಷ್ಟೋ ದಶಕಗಳು ಕಳೆದರೂ ಹುಯಿಲಗೋಳ ನಾರಾಯಣರ ಕವಿ ಮನದ ಬಲವಾದ ಆಶಯವನ್ನು ಈಡೇರಿಸಲಾಗದೇ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದೇ ಹಾಡುವಂತಾಗಿದೆ. ಇನ್ನಾದರೂ ಕನ್ನಡತನದ ಪ್ರಜ್ಞೆಯನ್ನು ಹೆಚ್ಚಿಸಿಕೊಂಡು ಚೆಲುವ ಕನ್ನಡ ನಾಡನ್ನು ಕಟ್ಟೋಣ. ಕವಿ ಡಿ ಎಸ್ ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ ಗೀತೆಯನ್ನು ಗುನುಗುತ್ತ ಕನ್ನಡದ ಕಸ್ತೂರಿಯ ಕಂಪನ್ನು ಮತ್ತಷ್ಟು ಮಗದಷ್ಟು ವಿಶ್ವದ ಜೀವಾಂತರಂಗದಲಿ ಪಸರಿಸೋಣ.
ಕನ್ನಡದ ಅಳಿವು ಉಳಿವಿನ ಬಗ್ಗೆ ಚಂದದ ಬರಹ ಮೇಡಂ
ಧನ್ಯವಾದಗಳು