ನಿಮ್ಮೊಂದಿಗೆ
ಸಂಪಾದಕೀಯ
ನನ್ನ ಕೊನೆಯ(ಬಹುತೇಕ) ಕವಿತೆಗಳ ಸಂಕಲನವನ್ನು(ಸಿದ್ದಾಂತಗಳ ಹೇಗೆ ಕೊಲ್ಲುವೆ) ಮುದ್ರಣಕ್ಕೆ ಕಳಿಸಿ ಕೂತ ಈ ಕ್ಷಣಕ್ಕೆ ಅನಿಸಿದ್ದು:
ಸೃಜನಶೀಲತೆಗು ಒಂದು ಕೊನೆಯಿರುತ್ತದೆ, ಮಿತಿಯಿರುತ್ತದೆ:
ಹತ್ತಾರು ಉತ್ತಮ ಸಿನಿಮಾಗಳನ್ನು ತೆಗೆದ ನಿರ್ದೇಶಕ ಕೊನೆಕೊನೆಗೆ ತೀರಾ ಕಳಪೆ ಚಿತ್ರ ತೆಗೆಯತೊಡಗುತ್ತಾನೆ.
ಹತ್ತಾರು ಅತ್ಯುತ್ತಮ ಕೃತಿಗಳನ್ನು ರಚಿಸಿದವನು ಕೊನೆಕೊನೆಗೆ ಓದುಗರು ಸಹಿಸಿಕೊಳ್ಳಲಾಗದಂತಹ ಜೊಳ್ಳು ಕೃತಿಗಳನ್ನುಬರೆಯ ತೊಡಗುತ್ತಾನೆ.
ಮೊನ್ನೆಯವರೆಗು ಮೈದಾನಕ್ಕೆ ಕಾಲಿಟ್ಟರೆ ಸಾಕು ಗೋಲು ಗ್ಯಾರಂಟಿ ಅನ್ನಿಸಿಕೊಳ್ಳುತ್ತಿದ್ದ ಆಟಗಾರ ಕೊನೆಕೊನೆಗೆ ಬಾಲು ಸಿಕ್ಕರೆ ಅದೇ ಪುಣ್ಯ ಎನ್ನುವಂತಹ ಸ್ಥಿತಿ ತಲುಪಿಬಿಡುತ್ತಾನೆ.
ವೇದಿಕೆ ಹತ್ತಿದರೆ ಸಾಕು ರಾಗಗಳ ಮಳೆಗರೆಯುತ್ತಿದ್ದ ಸಂಗೀತಗಾರ ಕೊನೆಗೊಂದು ದಿನ ಒಂದೇ ಒಂದು ರಾಗವೂ ತನ್ನ ದ್ವನಿಯಲ್ಲಿ ಹೊರಡಿಸಲಾಗದಂತಹ ಬರಗೆಟ್ಟ ಪರಿಸ್ಥಿತಿಗೆ ತಲುಪುತ್ತಾನೆ.
ಒಂದು ಹಂತದ ನಂತರ ಮನುಷ್ಯನ ಸೃಜನಶೀಲತೆ ತನ್ನ ಮೊನಚು ಕಳೆದುಕೊಳ್ಳುವ ರೀತಿಗಳಿವು.
ಹತ್ತಾರು ವರುಷಗಳ ಕಾಲ ಅಡುಗೆ ಮನೆಯಲ್ಲಿ ಈರುಳ್ಳಿ ಹೆಚ್ಚಿದ ಚಾಕುವಿಗೆ ಹೇಗೆ ಆಗಾಗ ಸಾಣೆ ಹಿಡಿಯಬೇಕೊ ಹಾಗೆಯೇ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿರುವ ಮನುಷ್ಯನೂ ಆಗಾಗ ಮೌನದ ಅಂದರೆ ಸುಮ್ಮನಿದ್ದು ಬಿಡುವ ಸಾಣೆಗೆ ಒಳಗಾಗಬೇಕು.
ಕತೆ ಕವಿತೆ ಬರೆಯುವವರಿಗೂ ಇದು ಅನ್ವಯಿಸುತ್ತದೆ. ಸದಾ ಬರೆಯುತ್ತಲೇ ಇರುತ್ತೇವೆ ಎನ್ನುವ ನಮ್ಮ ಅಹಂಕಾರ ನಮ್ಮಬರಹಗಳ ಒಳಗಿನ ಸತ್ವವನ್ನು ಹೀರಿ ಹಾಕಿ ಬಿಡುತ್ತದೆ.
ಇದನ್ನು ಅರ್ಥಮಾಡಿಕೊಳ್ಲದೆ ಅನುಗಾಲವೂ ಚಲಾವಣೆಯಲ್ಲಿರಬೇಕೆಂದು ಏನಾದರೊಂದನ್ನು ಬರೆಯುತ್ತಲೇ ಇರುವ ಕವಿಯ ಒಳಗಿನ ನಿಜವಾದ ಕವಿ ಕಳೆದು ಹೋಗಿಬಿಡುತ್ತಾನೆ,
ಕವಿತೆಯಹೊರತಾಗಿ ಬೇರೇನಾದರೂ ಬರೆಯಲಾದೀತೆ ನನ್ನಿಂದ? ಯೊಚಿಸುತ್ತಿದ್ದೇನೆ(ಇದನ್ನು ಬರೆದು ಎರಡು ವರ್ಷವಾಯ್ತು .ಈ ಅವಧಿಯಲ್ಲಿ ನಾನುಮಾತು ಮೀರಿ ಮೂರು ಕವಿತೆ ಕವಿತೆ ಬರೆದೆ)
======================
ಕು.ಸ.ಮಧುಸೂದನರಂಗೇನಹಳ್ಳಿ
28/10/2022
ಇದು ಎಲ್ಲಾ ಬರಹಗಾರರಿಗೂ ನೀಡಿದ ಪ್ರೀತಿಯ ಎಚ್ಚರಿಕೆ
ಹೌದು..
ನಿಜ , ನೂರಕ್ಕೆ ನೂರು ನಿಜ ! ಸೃಜನಶೀಲತೆಗೊಂದು ಮಿತಿಯಿದೆ , ಕೊನೆಯೂ ಇದೆ.ಸದಾ ಚಲಾವಣೆಯಲ್ಲಿರಬೇಕೆಂಬ ಬಯಕೆ “ಬರೆಯುವುದನ್ನು” “ಗೀಚುವುದನ್ನಾಗಿಸುತ್ತದೆ”. ಬರಹ ಉಳಿಯುವ ಕಾಳಾಗದೇ ಹಾರಿಹೋಗುವ ಜೊಳ್ಳಾಗುತ್ತದೆ.