ರೂಪ ಮಂಜುನಾಥ ಕಥೆ-ಬೆಲೆ

ಕಥಾ ಸಂಗಾತಿ

ಬೆಲೆ

ರೂಪ ಮಂಜುನಾಥ

ಇಪ್ಪತ್ತು ವರುಷಗಳ ಹಿಂದೆ……

         ಅರೆಕೆರೆಯಲ್ಲಿ ಎರಡೆಕರೆ ಜಮೀನು ಹೊಂದಿದ್ದ ಬಡ ರೈತ ಸೋಮಣ್ಣ. ಕೈಕೆಸರಾದರೆ ಬಾಯಿ ಮೊಸರು. ಅಂದು ದುಡಿದರೆ ಊಟ ಎನ್ನುವಂಥ ಸ್ಥಿತಿ.ಹೆಂಡತಿ ಗೌರವ್ವ, ಇಬ್ಬರು ಪುಟ್ಟ ಗಂಡು ಮಕ್ಕಳು ಸುರೇಶ, ಮಹೇಶ.ತಮ್ಮ ಜಮೀನಿನಲ್ಲಿ ಕೆಲಸವಿಲ್ಲದಾಗ ಬೇರೆಯವರ ಜಮೀನಿಗೂ ಹೋಗಿ ಕೂಲಿ ಮಾಡಿ ಹೇಗೋ ಮಕ್ಕಳು ತಮ್ಮಂತೆ ಮುಂದೆ ಕಷ್ಟಪಡಬಾರದೆಂದು ಪ್ರೀತಿಯಿಂದ ಬೆಳೆಸಿದರು. ಆಂಗ್ಲ ಮಾಧ್ಯಮದಲ್ಲೇ ಓದಿಸಿದರು. ತಾವು ತೇಪೆ ಉಟ್ಟರೂ ಮಕ್ಕಳಿಗೆ ಸಮಯಕ್ಕೆ ಹೊಸ ಅಂಗಿ ಕೊಡಿಸುತ್ತಿದ್ದರು.ಪುಟ್ಟದಾದ ಒಂದು ಹೆಂಚಿನ ಮನೆ ಜಮೀನನ್ನು ಹೊಂದಿಕೊಂಡಂತೆ ಇವರದ್ದು ಸಂತೋಷ, ನೆಮ್ಮದಿಯಿಂದಿದ್ದ ಪುಟ್ಟ ಸಂಸಾರ.

ಹದಿನೆಂಟು ವರುಷಗಳ ಹಿಂದೆ……

         ಬೆಂಗಳೂರಿನಲ್ಲಿ ತಂತ್ರಜ್ಞಾನದ ಕ್ರಾಂತಿಯೇ ಶುರುವಾಯಿತು. ವಿದೇಶಿ ಹೂಡಿಕೆದಾರರಿಗೆ ಬೆಂಗಳೂರು ಸ್ವರ್ಗದಂತೆ ಕಂಡಿತು. ಗಾರ್ಡನ್ ಸಿಟಿಯ ಅಂದಚಂದ,ಹವಾಮಾನ ಹೂಡಿಕೆದಾರರನ್ನ ಆಯಸ್ಕಾಂತದಂತೆ ಸೆಳೆಯಿತು.ಬನ್ನೇರುಘಟ್ಟದ ಸುತ್ತಮುತ್ತಲಿನ ಹಳ್ಳಿಗಳು ಅವರಿಗೆ ಅತ್ಯಂತ ಪ್ರಶಸ್ತವಾಗಿ ಕಂಡವು.ಎರಡು ವರ್ಷದ ಹಿಂದೆ ಕೇಳುವವರೇ ಇಲ್ಲದ ಜಮೀನುಗಳಿಗೆ ಈಗ ಎಕರೆಗೆ ಕೋಟಿಗಟ್ಟಲೆ ಬೆಲೆ ಬಂದುಬಿಟ್ಟಿತು.ಹಸಿರಿನ ಸಿರಿಯೆಲ್ಲಾ ಮರೆಯಾಗಿ  ನಾಯಿಕೊಡೆಗಳಂತೆ ಕಾಂಕ್ರೀಟು ಕಾಡುಗಳೆದ್ದವು.ಸೋಮಣ್ಣನ ಜಮೀನಿನ ಮೇಲೊಬ್ಬ ಹೂಡಿಕೆದಾರನ ಕಣ್ಣು ಬಿತ್ತು. ಅವನ ಕೂಡೆ ಬೆಣ್ಣೆಮಾತುಗಳಾಡುತ, ತಾನು ಜಮೀನಿಗೆ ಕೊಡುವ ಚಿನ್ನದಂಥ ಬೆಲೆ ಹೇಳಿದ. ಆಸೆ ತೋರಿಸಿ ಪೂಸಿ ಹೊಡೆದ. ಅಲ್ಲೇ ಅವನಿಗೊಂದು ಕಾಂಕ್ರೀಟಿನ ಹೊಸ ಮನೆಯನ್ನೂ ಒಂದು ಪಕ್ಕದಲ್ಲಿ ಕಟ್ಟಿಸಿಕೊಡುವುದಾಗಿ ಹೇಳಿದ.ಸೋಮಣ್ಣ ಪತ್ನಿಯೊಂದಿಗೆ ಇದರ ಬಗ್ಗೆ ಯೋಚಿಸಿದ. ಅಸೆ ಎಂಥವರ ಬುದ್ದಿಯನ್ನೂ ಮಂಕು ಮಾಡಿ ಕೆಡಿಸಿಬಿಡುತ್ತದೆ.ಕಷ್ಟ ಪಟ್ಟಿದ್ದು ತಮ್ಮ ಕಾಲಕ್ಕೇ ಸಾಕು. ಎಷ್ಟು ದುಡಿದರೂ ಬೇಸಾಯ ಆದಾಯ ಕಾಣದು ಎಂಬ ನಿರ್ಧಾರದಿಂದ ಜಮೀನನ್ನು ಮಾರಲು ಸಂತೋಷದಿಂದ ಒಪ್ಪಿದರು.ಕೋಟಿಗಟ್ಟಲೆ ಹಣ ಪಡೆದು ಬ್ಯಾಂಕೊಂದರಲ್ಲಿ ಠೇವಣಿ ಹಾಕಿದರು. ತಿಂಗಳಿಗಿಷ್ಟು ಎಂದು ಬರುತ್ತಿದ್ದ ಬಡ್ಡಿಯಲ್ಲಿ ಬಂಗಾರದಂತೆ ಜೀವನ ಸಾಗಿಸುತ್ತಿದ್ದರು.ಹಾಸಿಗೆ ಇದ್ದಷ್ಟು ಕಾಲು ಚಾಚುತ್ತಿದ್ದರು.

ನಾಲ್ಕು ವರುಷಗಳ ಹಿಂದೆ…..

     ಮಕ್ಕಳಿಬ್ಬರೂ ಬೆಳೆದರು. ಕಾಲೇಜು ಕಲಿತರು. ಮಜಾ ಉಡಾಯಿಸುವ ಗೆಳೆಯರನ್ನ ಸೇರಿದರು.ಬೇಕಾದ ಶೋಕಿಗಳೆಲ್ಲದಕ್ಕೂ ಸುಳ್ಳು ಹೇಳಿ ಅಪ್ಪನ ಬಳಿ ಕಾಸು ಕೀಳಲು ಕಲಿತರು. ಬೆಳಗಾದರೆ ಪಬ್ಬು ಬಾರು ,ಹುಡುಗಿಯರು , ಸ್ವಲ್ಪ ದಿನಗಳಲ್ಲೇ ಗಾಂಜಾ ಹೊಡೆಯುವುದೂ ಕಲಿತರು.ನಯವಾಗಿ ಅಪ್ಪನ ದುಡ್ಡು ಕೇಳುತ್ತಿದ್ದವರು,ಬರ್ತಾ ಬರ್ತಾ  ಜಗಳ ಮಾಡಿ ಪೀಕಲು ಶುರುಮಾಡಿದರು. ಕೂತು ತಿಂದರೆ……….. ಸಾಲದು. ಇನ್ನು ದುರಭ್ಯಾಸಗಳಿದ್ದರೆ¿ ಮುಂದೆ ಹೇಳೋದೇನು ಬಿಡಿ.ಫಟಿಂಗ ಪೋಕರಿಗಳಾಗಿ ಛೋಕರಿಗಳ ಹಿಂಡಿನೊಂದಿಗೆ ಮೋಜು ಮಸ್ತಿ…. ಬೆಲ್ಲಕ್ಕೆ ನೊಣಗಳು ಮುತ್ತುವಂತೆ ಇವರ ಸುತ್ತಲೂ ಗೆಳೆಯರ ಗುಂಪು.ಹೀಗೆಯೇ ಎರಡು ಮೂರು ವರುಷಗಳಲ್ಲೇ ಇಟ್ಟ ಹಣವೆಲ್ಲಾ ಖಾಲಿ ಮಾಡಿ ಮತ್ತೆ ತಿರುಪೆ ಎತ್ತುವ ಸ್ಥಿತಿಗೆ ಬಂದರು. ಇವರಾಟಗಳ ನೋಡುತ್ತಾ ಕೊರಗಿನಲ್ಲೇ ಗೌರವ್ವ ಶಿವನ ಪಾದ ಸೇರಿದಳು.

      ಅಲ್ಲಾ, ಅಲ್ಪನಿಗೆ ಐಶ್ವರ್ಯ ಬಂದರೆ……ಅಲ್ವೇ¿ಶ್ರಮದ ಸಂಪಾದನೆಗೆ ಬೆಲೆಯಿರುತ್ತೆ ಕಣ್ರೀ. ಮಕ್ಕಳು ಕಷ್ಟ ನೋಡೋದೇ ಬೇಡಾಂತ ಅಂದ್ರೆ, ಇಂಥಾ ಗತೀನೇ ನೋಡಬೇಕು. ಅವರೂ ಕಷ್ಟ ಪಡಬೇಕಲ್ವೇ?ಆಗಲೇ ತಾನೇ ಒಂದೊಂದು ಕಾಸೂ ಸಂಪಾದನೆ ಮಾಡೋದು ಎಷ್ಟು ಕಷ್ಟ ತಿಳಿಯೋದು!

 ಸೋಮಣ್ಣನ, ಅಂಧ ವ್ಯಾಮೋಹದಿಂದ ಮಕ್ಕಳು ದಾರಿ ಬಿಟ್ಟೇ ಹೊದರು.  “ ಅವ್ವಾ ಪಾಯ, ಬುವ್ವಾ ಪಾಯ( ತೆಲುಗು),” ಎನ್ನುವಂತೆ, ಪತ್ನಿ, ಜಮೀನೂ, ನೆಮ್ಮದಿ, ಸಂತೋಷ ಎಲ್ಲವನ್ನೂ ಕಳೆದುಕೊಂಡ ಸೋಮಣ್ಣ ಮುಂಚೆ ಕೇವಲ ಬಡ ರೈತನಾಗಿದ್ದ. ಈಗ ಎಲ್ಲವನ್ನೂ ಕಳೆದುಕೊಂಡ ನಿರ್ಗತಿಕ!


ರೂಪ ಮಂಜುನಾಥ

Leave a Reply

Back To Top