ಅಂಕಣ ಸಂಗಾತಿ

ಸುಜಾತಾ ರವೀಶ್ ರವರ ಲೇಖನಿಯಿಂದ

ಮೃಗವಧೆಭೇಟಿ

ಕಳೆದ ಬಾರಿ ಜುಲೈನಲ್ಲಿ ಕವಿಶೈಲ ಸಂದರ್ಶಿಸಿದಾಗಲೇ  ಮೃಗವಧೆ ಕ್ಷೇತ್ರದ ಭೇಟಿಯಾಗಬೇಕಿತ್ತು.  ಆಗಲೇ ಸಂಜೆಯಾಗಿದ್ದರಿಂದ ಜೋರು ಮಳೆಯೂ ಬರುತ್ತಿದ್ದುದರಿಂದ ಮಲೆನಾಡ ಮಳೆಗೆ ಅಂಜಿ ನೋಡದೆ ಹಿಂದಿರುಗಿದ್ದೆವು. ಈ ಬಾರಿ ಕವಿಶೈಲಕ್ಕೆ ಹೋದಾಗ ಆ ಕನಸು ನನಸಾಯಿತು . ತುಂಬಾ ಸುಂದರ ಪ್ರಶಾಂತ ಸ್ಥಳ . ಭಕ್ತಿ ಭಾವ ಮೂಡಿಸುವ ಶಿವಲಿಂಗ ಲಿಂಗದೆದುರಿನ ನಂದಿಯಂತೂ ತುಂಬಾ ಮಾಟವಾಗಿ ಕೆತ್ತಲ್ಪಟ್ಟಿದೆ.  ಹಿಂದೆಯೇ ಮೌನವಾಗಿ ಹರಿಯುವ ಬ್ರಾಹ್ಮಿ ತಟವಂತೂ ಮನೋಹರ. ಹೆಚ್ಚು ಆಳವಿರದ ನೀರಿನಿಂದ ಎದ್ದು ಬರಲೇ ಮನಸ್ಸಾಗುವುದಿಲ್ಲ.

ಶಿವಮೊಗ್ಗೆಗೆ ಪಯಣ ಹೊರಟಾಗ ಮೊದಲು ಕವಿಶೈಲ ನೊಪಡಿ ನಂತರ ಶಿವಮೊಗ್ಗಕ್ಕೆ ಹೋಗುವ ಪ್ಲಾನ್ ಮಾಡಿದ್ದೆವು.  ನಸುಕಿನಲ್ಲೇ ಹೊರಟು ಹಾಸನದಲ್ಲಿ  ಹೊಟ್ಠೆ ಪೂಜೆ ಮುಗಿಸಿ ಬಾಳೆಹೊನ್ನೂರು ಕೊಪ್ಪದ ಮೂಲಕ ಕುಪ್ಪಳ್ಳಿ ಕಡೆಗೆ.  ಪಶ್ಚಿಮ ಘಟ್ಟಗಳ ಉನ್ನತ ಗಿರಿಶಿಖರ ಪಕ್ಕದಲ್ಲೇ ಪಾತಾಳ ಕಾಣುವ ಕಣಿವೆಗಳು ಈ ನಯನ ಮನೋಹರ ಪ್ರಕೃತಿ ಸೌಂದರ್ಯದ ರಸದೂಟ ಮಾಡುತ್ತಾ ದಾರಿಯಲ್ಲಿ ಕೊಪ್ಪದ ಹೊಟೇಲೊಂದರಲ್ಲಿ ಊಟ ಮುಗಿಸಿ ಕವಿಮನೆ ತಲುಪಿದವು.  ಕವಿಶೈಲದ ವರ್ಣನೆ ಈಗಾಗಲೇ ಮಾಡಿರುವುದರಿಂದ ಈ ಬಾರಿ ಬೇಡ.  ಈ ಸಲದ ವಿಶೇಷವೆಂದರೆ ಪೂರ್ಣಚಂದ್ರ ತೇಜಸ್ವಿಯವರ ಮ್ಯೂಸಿಯಂ . ಮತ್ತೊಂದು ಬಾರಿ ಕವಿಶೈಲವನ್ನು ಕಣ್ತುಂಬಿಸಿಕೊಂಡು  ಪುಟ್ಟ ಕ್ಯಾಂಟೀನಿನ ಬಾಳೆಕಾಯಿ ಮತ್ತು ಮೆಣಸಿನಕಾಯಿ ಬಜ್ಜಿ ಟೀಯೊಂದಿಗೆ ಸವಿದು ಮೃಗಶೈಲದ ದಾರಿ ಹಿಡಿದೆವು .

ಅಬ್ಬಾ ನಿಸರ್ಗ ದೇವಿಯು ತನ್ನ ಪೂರ ಹಸಿರುಡುಗೆಯ ಸೀರೆಯನ್ನು ಅಲ್ಲೇ ಹರವಿದ್ದಾಳೋ ಎಂಬಂಥ ಸುಂದರ ದೃಶ್ಯಾವಳಿಗಳು.  ದಾರಿ ಸವೆದದ್ದೇ ತಿಳಿಯದೆ ನೇರ ದೇವಸ್ಥಾನದ ಮುಂದೆ ಬಂದಿದ್ದೆವು . ಗೂಗಲ್ ಅಣ್ಣನ ಸಹಾಯ ಇದ್ದುದರಿಂದ ಮಧ್ಯೆ ಮಧ್ಯೆ ನಿಲ್ಲಿಸಿ ಕೇಳುವ ಪ್ರಮೇಯ ಬರಲಿಲ್ಲ.  ತಂತ್ರಜ್ಞಾನ ಮುಂದುವರೆದಿದ್ದು ಒಳ್ಳೆಯದೇನೋ ಸರಿ  ಆದರೆ ಮನುಷ್ಯರ ಒಡನಾಟವೇ ಕಣ್ಮರೆಯಾಗುತ್ತಿದೆಯಲ್ಲಾ ಅಂತ ಅನ್ನಿಸಿದ್ದು ಸುಳ್ಳಲ್ಲ.

ಇದರ ಇನ್ನೊಂದು ಹೆಸರು ಮರವಸೆ .ಇದು ಪಾರ್ವತಿ ತಪಸ್ಸು ಮಾಡಿದ ಸ್ಥಳ ಅಂತೆ ಮೃಗವಧೆ ಎಂದರೆ ಮಿಗ (ಜಿಂಕೆ)ಯನ್ನು ವಧಿಸಿದ ಸ್ಥಳ . ಇದು ತೀರ್ಥಹಳ್ಳಿಯಿಂದ ೨೫ ಕಿಲೋಮೀಟರ್ ಹಾಗೂ ಕೊಪ್ಪದಿಂದ ೨೨ ಕಿಲೋಮೀಟರ್ ದೂರದಲ್ಲಿದೆ.  ಅಲ್ಲಿ ಅರ್ಚಕರು ಹೇಳಿದ ಸ್ಥಳ ಪುರಾಣದಂತೆ.  ಹಿಂದೆ ಸೀತಾಪಹರಣದ ಸಂದರ್ಭ .. ರಾವಣನು ಶಿವಪೂಜೆ ಮಾಡುತ್ತಿದ್ದ ಮಾರೀಚನ ಬಳಿ ಬಂದು ಮಾಯಾಜಿಂಕೆಯ ರೂಪ ಧರಿಸಿ ತನಗೆ ಸಹಾಯ ಮಾಡಲು ಕೋರುತ್ತಾನೆ . ಮೊದಲಿಗೆ ಮಾರೀಚ ಒಪ್ಪುವುದಿಲ್ಲ .ಕೊನೆಗೆ ರಾವಣ ಕೊಲ್ಲಲು ಮುಂದಾದಾಗ ರಾವಣನ ಕೈಲಿ ಹತವಾಗುವುದಕ್ಕಿಂತ ರಾಮನ ಮೂಲಕ ವಧೆಯಾಗುವುದೇ ಒಳಿತೆಂದು ರಾವಣನ ಮಾತಿಗೆ ಒಪ್ಪುತ್ತಾನೆ.  ಪೂಜಿಸುತ್ತಿದ್ದ ಲಿಂಗವನ್ನು ತನ್ನ ತೊಡೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಮುಂದೆ ರಾಮ ಲಕ್ಷ್ಮಣ ಸೀತೆಯರ ಮುಂದೆ ಓಡಾಡಿದ ಮಾಯಾ ಜಿಂಕೆಯನ್ನು ನೋಡಿ ಸೀತೆಯು ಬಯಸಿ  ರಾಮನಿಗೆ ಅದನ್ನು ತರುವಂತೆ ಕೋರಿದಾಗ ರಾಮನು ಅವನನ್ನು ಬೆನ್ನಟ್ಟಿ ಕೊಲ್ಲಲು ಮುಂದಾದಾಗ ಸಾಯುವಾಗ ಮಾರೀಚ ಹಾ ಲಕ್ಷ್ಮಣ ಹಾ ಸೀತಾ ಎಂದು ಕರೆದು ಲಕ್ಷ್ಮಣನು ಸೀತೆಯನ್ನು ಬಿಟ್ಟು ಹೊರಡುವಂತಹ ಸಂದರ್ಭ ಸೃಷ್ಟಿಸುತ್ತಾನೆ . . ಇತ್ತ ವಧೆಯಾದ ಮಾರೀಚನ ದೇಹದ ಮುಂಡವು ಮಂಡಗದ್ದೆಯಲ್ಲಿ ಬಿತ್ತಂತೆ. ಅವನ ರುಂಡವು ಕೋಳಾವರದಲ್ಲಿ ಬಿದ್ದಿತ್ತಂತೆ .. ಶಿವಲಿಂಗ ಈ  ಪ್ರದೇಶದಲ್ಲಿ ಬಂದು ಬಿದ್ದಿತ್ತಂತೆ . ಬ್ರಹ್ಮಹತ್ಯಾ ದೋಷದಿಂದ ಪಾರಾಗಲು ರಾಮನು ಮಾರೀಚನ ದೇಹದಿಂದ ಬಾಣ ಹಾಗೂ ಇಲ್ಲಿ ಬಿದ್ದಿದ್ದ ಶಿವಲಿಂಗವನ್ನು ತೆಗೆದು ಇಲ್ಲಿ ಪ್ರತಿಷ್ಠಾಪಿಸಿದನಂತೆ . ಈ ಲಿಂಗದ ಮೂಲ ಹೆಸರು “ಮಲಹಾನಿಕರೇಶ್ವರ” ಎಂದಿದ್ದು ಆಮೇಲೆ ಮಲ್ಲಿಕಾರ್ಜುನ ಎಂಬ ಹೆಸರು ಬಂದಿತು . ಬಾಣ ಲಿಂಗ ಎಂದು ಸಹ ಕರೆಯುತ್ತಾರೆ ದೇವಸ್ಥಾನದ ಸುತ್ತಲೂ ಈಶ್ವರನ ಸಮಸ್ತ ಗಣಗಳು ನೆಲೆಸಿವೆ ಎಂಬ ಪ್ರತೀತಿ.  

ಈಗಿರುವ ಈ ದೇವಾಲಯವನ್ನು ಚಾಲುಕ್ಯರ ಅರಸನಾದ ತ್ರಿಭುವನಮಲ್ಲನು ೧೦೬೦ರಲ್ಲಿ  ನಿರ್ಮಿಸಿದನು.  ಕಾಲಾಂತರದಲ್ಲಿ ಕೆಳದಿಯ ಸೋಮಶೇಖರನ(೧೭೧೪_೧೭೪೦) ಕಾಲದಲ್ಲಿ ಪುನರುತ್ಥಾನ ಮಾಡಿದರು .೪.೫ ಅಡಿ ಎತ್ತರದ ಆಗಮ ಶಿವಲಿಂಗ ಇಲ್ಲಿನ ವೈಶಿಷ್ಟ್ಯ.  

ರಾಮನು ಬ್ರಾಹ್ಮಿ ಮುಹೂರ್ತದಲ್ಲಿ ನದಿ ತೀರದಲ್ಲಿ ಶಿವಲಿಂಗವನ್ನು ಸ್ಥಾಪಿಸಿದ್ದರಿಂದ ಈ ನದಿಗೆ ಬ್ರಾಹ್ಮಿ ನದಿ ಎನ್ನುತ್ತಾರೆ . ಸದ್ದಿರದೆ ತುಂಬಾ ಆಳವೂ ಇರದೆ ಶಾಂತವಾಗಿ ಹರಿಯುವ ನೀರ ಹರಿವಿನಲ್ಲಿ ಇಳಿದಾಗ ಅದರ ತಂಪಿನ ಮಾರ್ದವತೆ ಮನದಾಳ ಮುಟ್ಟುತ್ತದೆ . ಮೊಗೆದು ಮುಖಕ್ಕೆ ಸುರಿದು ಕೊಂಡಾಗ ಉಂಟಾಗುವ ಹಿತ ,ಅನುಭವವೇದ್ಯ ಮಾತ್ರವೇ. ಅಕ್ಕಪಕ್ಕದ ಬೃಹತ್ ಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ ಪ್ರಶಾಂತತೆಯ ಗಾನಕ್ಕೆ ಶ್ರುತಿ ಹಿಡಿದಂತೆ ಅನಿಸುತ್ತದೆ . ಪುಟ್ಟ ಮಕ್ಕಳನ್ನು ಸಹ ಭೀತಿಗೆಡೆಯಿರದಂತೆ  ತನ್ನೊಳಗೆ ಆಟವಾಡಲು ಕರೆದುಕೊಳ್ಳುವ ಈ ನದಿ ತಟ ಅಲ್ಲಿಂದೆದ್ದು ಹೋಗುವುದೇ ಬೇಡ ಎನಿಸುವಂತೆ ಮಾಡುತ್ತದೆ.  ಆ ಪ್ರಾಂಗಣದಲ್ಲಿ ವಿಘ್ನವಿನಾಶಕನ ಪುಟ್ಟ ಗುಡಿ ಇದ್ದು ಗಣಪ ಕೈಯೆತ್ತಿ ಆಶೀರ್ವದಿಸಿದ.  ಒಂದಿಷ್ಟು ಮೆಟ್ಟಿಲು ಮೇಲೇರಿದಂತೆ ಮುಖ್ಯ ಗುಡಿ . ಶಿವನಿಗೆ ಕಾವಲಿರುವ ನಂದಿಯೂ ಎಂಥದ್ದೋ ವಿಶ್ವಾಸ ನೀಡುವಂತೆ ಭಾಸ . ಇನ್ನು ಕೃತಕ ದೀಪಗಳಿರದ ಗರ್ಭಗುಡಿಯಲ್ಲಿ ಬೆಳಗುವ ಸೊಡರ ಕಾಂತಿಯಲ್ಲಿ  ಆ ನಾಲ್ಕೂವರೆ ಅಡಿ ಎತ್ತರದ ಆಗಮ ಶಿವಲಿಂಗ ಭಕ್ತಿಭಾವವನ್ನು ಉದ್ದೀಪನಗೊಳಿಸುತ್ತದೆ.ಆ ಮಂದ ಬೆಳಕಿನಲ್ಲಿ ದೇವರ ಕಾಣುವಾಗ ಉಂಟಾಗುವ ಅನುಭೂತಿಯದು ಅವರ್ಚನೀಯ.  ಗರ್ಭಗುಡಿಯ ಸುತ್ತ ವಿಶಾಲ ಚಂದ್ರಶಾಲೆಯಲ್ಲಿ ಕೂತಾಗ ರಾಮ ಸೀತೆ ಲಕ್ಷ್ಮಣರು ಇಲ್ಲಿಯೇ ಓಡಾಡಿದ್ದಿರಬೇಕು ಎಂಬ ಭಾವ ಮನ ತುಂಬಿತ್ತು. ತ್ರಿಕಾಲ ಪೂಜೆ ನಡೆಯುವ ಈ ಪುಣ್ಯಕ್ಷೇತ್ರದಲ್ಲಿ ಮಧ್ಯಾಹ್ನ ಭೋಜನ ಪ್ರಸಾದದ ವ್ಯವಸ್ಥೆಯೂ ಇದೆ .ವಿಶಾಲ ಭೋಜನ ಶಾಲೆ ಅಚ್ಚುಕಟ್ಟುತನಕ್ಕೆ ಸಾಕ್ಷಿಯಾಗಿದೆ .

ಇತ್ತೀಚೆಗೆ ಭೇಟಿ ಕೊಟ್ಟ ದೇವಾಲಯಗಳಲ್ಲಿ ತುಂಬಾ ಆಪ್ಯಾಯವೆನಿಸಿದ್ದು ಈ ದೇಗುಲ.  ಪಾವಿತ್ರ್ಯದ ಸಂಕೇತದ ಶಿವಲಿಂಗ, ಆ ಪ್ರಾಂಗಣದಲ್ಲಿ ಕೂತಾಗ ಉಂಟಾದ ಪ್ರಶಾಂತತೆ ನಿರಾಳತೆಯ ಭಾವ ,. ವೇದ ಮಂತ್ರಗಳ ಘೋಷ ,ಇನ್ನೂ ಅನುರಣನಗೊಳ್ಳುತ್ತಿದೆಯೇನೋ ಅನ್ನಿಸುವ ಸುಮಧುರತೆ ,  ಹಿನ್ನೆಲೆಯ ಆ ನದಿಯ ಹರಿವು . ಯಾಂತ್ರಿಕ ನಗರದ ಜೀವನದಿಂದ ದೂರಾಗಿ ಕಳೆಯುವ ಇಂತಹ ಕೆಲವು ಕ್ಷಣಗಳು ಬೊಗಸೆಯಲ್ಲಿನ ಜಲದಂತೆ. ಹಿಡಿದಿಟ್ಟುಕೊಳ್ಳಲಾಗದು.  ಅನುಭವಿಸಿದ ಅನುಭಾವದ ನೆನಪ ಮೆಲುಕುಗಳು ಮಾತ್ರ  ಲಭ್ಯ.  ಆದರೂ ಬೇಕು ಇಂತಹ ಸವಿಗಳಿಗೆಗಳು.  ದೈನಂದಿನ ಜಂಜಾಟವನ್ನು ಮರೆಸುವ ಟಾನಿಕ್ಗಳಾಗಿ ಮತ್ತೆ ಮುಂದೆಂದೋ ಸಿಗಬಹುದಾದ ಇಂತಹ ಅಮೃತ ಗಳಿಗೆಗಳ ಸಂಚಯನ ಕ್ಕಾಗಿ .

ದರ್ಶನ ಮುಗಿಸಿ ಹೊರಬಂದಾಗ ದಿನಕರ ತನ್ನ ಪಾಳಿ ಮುಗಿಸಿ ಮನೆಗೆ ಹೊರಟಿದ್ದ.  ನಮಗೂ ಬೇಗ ಊರು ಸೇರುವ ತವಕವಿತ್ತು.  ಅಂತೆಯೇ ಇಂದು ನಾಳೆಯ ಸೇರಿ ವರ್ತಮಾನ ಗತವಾಗುವ ಆ ಸಂಧಿ ಕಾಲದಲ್ಲಿ ಮನವಿರದ ಮನದಿಂದ ಮೃಗವಧೆ ಕ್ಷೇತ್ರಕ್ಕೆ ಅಲ್ಲಿ ಕಳೆದ ಸವಿ  ನಿಮಿಷಗಳಿಗೆ ವಿದಾಯ ಕೋರಿ ಹೊರಟಿದ್ದೆವು.  ದಿನ ಉರುಳಿ ರಾತ್ರಿಗೆ ಜಾರುತ್ತಿತ್ತು . 


                             ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

One thought on “

  1. ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top