ಹಂಸಪ್ರಿಯ ಕವಿತೆ-ಅವ್ಯಕ್ತ

ಕಾವ್ಯ ಸಂಗಾತಿ

ಅವ್ಯಕ್ತ

ಹಂಸಪ್ರಿಯ

ಹುಡುಕಿದರು ಅಡಿಗಡಿಗೆ, ಅಡಗಿರುವೆ ಎಲ್ಲಿ?
ಕಾಣುವ ಪರಿಯಂತೋ?ಅವ್ಯಕ್ತವೆ! //ಪ //

ಬೆಳಗುವ ರವಿ
ತೋರುವನೇನೋ?
ಕತ್ತಲೆಯಲಿ ಅರಳುವ ಶಶಿ
ಹುಡುಕಿ ಕೊಡುವನೋ?

ನೀ ಲೌಕಿಕನೋ?
ಅಲೌಕಿಕನೋ?
ಅರಿಯುವ ಪರಿಯಂತೋ? ಅವ್ಯಕ್ತವೆ!

ಆಳ ಕಡಲಲಿ
ಮುಳುಗಿರುವೆ ಏನೋ?
ದಟ್ಟ ಕಾನನದಿ
ಅಡಗಿರುವೆ ಏನೋ?

ಹುಡುಕಲು ಹುಟ್ಟಿದವು
ತತ್ವ – ಸಿದ್ಧಾಂತಗಳು.
ವೇದಗಳು – ಉಪನಿಷತ್ತು- ದರ್ಶನಗಳು.
ನೀ….
ಅದ್ವೈತವೋ?ದ್ವೈತವೋ? ವಿಶಿಷ್ಟಾದ್ವೈತವೋ?
ಏಕವೋ?
ಅನೇಕವೋ?
ಹುಡುಕಿ ಹುಡುಕಿ ಸೋತವೋ… ಅವ್ಯಕ್ತವೆ!

ನೀ
ಅವ್ಯಕ್ತಕಾರವೋ?ನಿರಾಕರವೋ?
ಸಗುಣವೋ?ನಿರ್ಗುಣವೋ?
ಮಾಯೆಯೋ?ನಿರ್ಮಾಯೆಯೋ?… ಅವ್ಯಕ್ತವೆ!

ಅರಿತರೆ ಆ ಅಂತರಂಗವ
ಕಳಚಿದರೆ ಆ ಅಹಂಕಾರವ
ವ್ಯಕ್ತವಾಗುವೆ?ನೀ,ಅವ್ಯಕ್ತವೆ!


Leave a Reply

Back To Top