ಕಾವ್ಯ ಸಂಗಾತಿ
ಹಾಳು ಮರೆವು
ಗೋನವಾರ ಕಿಶನ್ ರಾವ್
ಹಾಳು ಮರೆವು
ಮರೆತುಹೋಗಿದೆ.
ಅಂದೊಂದು ದಿನ
ನಾನೂ ಹೀಗೆ ಇದ್ದೆನೆ ?
ಅದೇ ಶುದ್ದ, ಜುಳು ಜುಳು
ಹರಿವ ನೀರ ಮಂದಹಾಸ
ಆ ದಿನಗಳು ಮುಗಿದದ್ದು ಯಾಕೆ ?
ಆ ನಗು ಹೋಯಿತೆಲ್ಲಿ ?
ಈ ಅರವತ್ತರ ಅವಸರ ಯಾರಿಗೆ ಬೇಕಿತ್ತು ?
ನನಗಂತೂ ಬೇಡ !
ಬೇಕೆಂದರೂ ಸಿಗದೆಂದು ತಿಳಿದೂ
ಹುಡುಕುತಿರುವೆ
‘ಕಳೆದುದು ಸಿಕ್ಕಿದೆ’
ಬೋರ್ಡ ಎಲ್ಲಾದರೂ
ಇದ್ದೀತು. ಕಂಡವರು ಹೇಳಿ
ಏನು ? ಅದೇ ಕೆಲಸದಲ್ಲಿರುವಿರಾ ?
ಬನ್ನಿ ಹುಡುಕೋಣ
ಸಿಗುವದಿಲ್ಲೆಂದೂ ತಿಳಿದೂ
ತಿಳಿದೂ,
ಓಡುವ ಸೂರ್ಯ ಜೊತೆ
ಹೋಗಿ ಆಗಿದೆ.
ಸಿಗಲಾರದ ಕಳೆದದ್ದು,
ಸಿಕ್ಕೀತೆ ಎನುವ ಈ ದೊಂಬರಾಟ ಸಾಕಿನ್ನು.
ಯಾರದು ? ಓಹ !
ಹೌದಲ್ಲ.
ನಿನ್ನ ನೆನಪೇ ಮಸಕಾಯಿತಲ್ಲ !
ಸಂಜೆ ನಸುಕಲಿ.
ಗೋನವಾರ ಕಿಶನ್ ರಾವ್
ಚೆನ್ನಾಗಿದೆ ಅಭಿನಂದನೆಗಳು
ಕವಿ ಕನಸು ತುಂಬಾ ಸೊಗಸು. ಅಭಿನಂದನೆಗಳು.
ಅರವತ್ತಕ್ಕೇರಿದ ಎಲ್ಲರದ್ದೂ ಇದೇ ಕಾತರ. ಕಳೆದು ಹೋದ ಸುಂದರ ದಿನಗಳನ್ನು ಹುಡುಕೋದು. ನೆನಪಿನಾಳಕ್ಕಿಳಿದಾಗ ನೆನಪಾಗದಿದ್ದರೆ ಚಡಪಡಿಕೆ ಶುರು. ಅಭಿವ್ಯಕ್ತಿ ಚೆನ್ನಾಗಿ ಮೂಡಿ ಬಂದಿದೆ.
ಯಾರದು ಒಹ್!
ಹೌದಲ್ಲ.
ನಿನ್ನ ನೆನಪೇ ಮಸಕಾಯಿತಲ್ಲ !
ಸಂಜೆ ನಸುಕಲಿ.
ಹೀಗೆ ಕೊನೆಯಾಗುತ್ತಲೇ ಹೊಸ ಆರಂಭದಂಗಳದಲ್ಲಿ ರಂಗೋಲಿ ಚಿತ್ರಿಸುವ ಕುಸುರಿಗೈಯೇ ಈ ಕವಿತೆ.
ಜಗತ್ತಿನಲ್ಲಿ ಕಾಲ’ಕ್ರಮ’ ದಲ್ಲಿ ಋತುಚಕ್ರ ತನ್ನದೇ ಆಕ್ಸಿಸ್ ನ ಸುತ್ತ ಸುತ್ತುವಾಗ, ಅರಳುವ ಮೊಗ್ಗು ಕಾಯಾಗಿ, ಹ( ಹೆ)ಣ್ಣಾಗಿ ಹಣ್ಣುಹಣ್ಣಾಗುವ, ಪಕ್ವವಾಗುವ ಪ್ರಕ್ರಿಯೆಯನ್ನು ಕವಿತೆ ಸಂವಾದಿಸುತ್ತದೆ.
ಕಿಶನ್ ಸರ್ ಅವರು ಭಾಷಾವಿಜ್ಞಾನಿಯೂ ಹೌದು,ಕವಿಯೂ ಹೌದು. ಹಾಗಾಗಿ ಅವರ ಕವಿತೆಯಲ್ಲಿ ಒಂದು ರಾಸಾಯನಿಕ ಸಿಂಥೆಸಿಸ್ ಅನ್ನು ನಾವು ಕಾಣಬಹುದು.
ಯೋಚನೆಯ ಗಡಿಗೆಯೊಳಗೆ ಕಡೆಗೋಲಾಗುವ ಕವಿತೆಯಿದು ಸರ್. ತುಂಬಾ ಇಷ್ಟವಾಯಿತು. ಅಭಿನಂದನೆಗಳು.