ಛಲ – (ಸತ್ಯಕಥೆ)

ಆತ್ಮಕಥೆ

ಛಲ

ಸುರೇಖಾ ಜಿ. ರಾಠೋಡ

 –

ಕುವೈತ್‍ನಲ್ಲಿ ಮನೆಕೆಲಸ ನಿರ್ವಹಿಸುತ್ತಿರುವ 35 ವರ್ಷದ ಸುನೀತಾ ಧಾರವಾಡದ ಬಡಕುಟುಂಬದಲ್ಲಿ ಜನಿಸಿದರು. ತಂದೆ ಬಾಪುಜಿ ಕದಂ ,ತಾಯಿ ದೇವಕ್ಕ. ಈ ದಂಪತಿಗಳಿಗೆ ಒಟ್ಟು ಎಂಟು ಜನ ಮಕ್ಕಳು. ನಾಲ್ಕು ಜನ ಗಂಡು, ನಾಲ್ಕು ಜನ ಹೆಣ್ಣುಮಕ್ಕಳು. ಅವರಲ್ಲಿ ಸುನೀತಾರವರು ಏಳನೆಯ ಮಗಳು. ಇವರು ಹತ್ತನೇ ತರಗತಿಯವರೆಗೆ ಓದಿರುವರು. ಮನೆಯಲ್ಲಿ ಅಕ್ಕಂದಿರು ಯಾರು ಓದಲಿಲ್ಲ. ಏಕೆಂದರೆ ಬಡತನ ಕಾರಣ .  ಎಂಟು ಜನ ಮಕ್ಕಳನ್ನು ಸಾಕುವುದೇ ತಂದೆ ತಾಯಿಯವರಿಗೆ ಕಷ್ಟವಿದ್ದಾಗ,  ಓದಿಸಲು ಸಾಧ್ಯವಾಗಲಿಲ್ಲ. ಸುನೀತಾರವರ ತಂದೆಯವರು ಪರ್ನಿಚರ್ ಕಂಪನಿಯೊಂದರಲ್ಲಿ ಕೆಲಸ ಮಾಡುವುದರೊಂದಿಗೆ ಮನೆಯಲ್ಲಿ ಸಮಯ ಸಿಕ್ಕಾಗ ಬಡಿಗ ಕೆಲಸವನ್ನು ಮಾಡುತ್ತಿದ್ದರು. ಹಾಗೆಯೇ ಸ್ವಲ್ಪ ಜಮೀನನ್ನು ಹೊಂದಿದ್ದರಿಂದ ಮನೆಯವರೆಲ್ಲರೂ ಸೇರಿ ಹೊಲದಲ್ಲಿ ದುಡಿಯುತ್ತಿದ್ದರು.

ಸುನೀತಾರವರಿಗೆ ಹದನೈದು ವರ್ಷವಿದ್ದಾಗ ತಾಯಿ ಮದುವೆ ಮಾಡಲು ಇಚ್ಚಿಸಿದರು. ತಂದೆ ಬೇಡ ಎಂದು ಹೇಳಿದರು ತಾಯಿ ಒಳ್ಳೆಯ ಮನೆತನವಿದೆ ಮಗಳು ಮುಂದೆ ಚೆನ್ನಾಗಿ ಇರುತ್ತಾಳೆಂದು ಮದುವೆ ಮಾಡಲು ನಿರ್ಧರಿಸಿದರು. ಸುನೀತಾರವರ ಗಂಡನ ಮನೆಯವರು ತಮಗೆ ಸ್ವಂತ ಮನೆ, ಬಹಳಷ್ಟು ಆಸ್ತಿಯಿರುವುದೆಂದು ಸುಳ್ಳನ್ನು ಹೇಳಿ ಮದುವೆ ಮಾಡಿಕೊಂಡರು. ಕೇವಲ ಎರಡು ತಿಂಗಳಗಳವರೆಗೆ ಚೆನ್ನಾಗಿದ್ದರು. ನಂತರ ಅವರು ಹೇಳಿದ್ದ ಸುಳ್ಳುಗಳು ಹೊರಬರಲು ಪ್ರಾರಂಭಿಸಿದವು. ಅದಕ್ಕೆ ಸುನೀತಾ ಪ್ರಶ್ನೆ ಮಾಡಲು ಪ್ರಾರಂಭಿಸಿದಾಗ ಮನೆಯಲ್ಲಿ ಹಿಂಸೆ ಕೊಡಲು ಪ್ರಾರಂಭಿಸಿದರು. ಗಂಡನ ಕುಟುಂಬದವರು ಕೊಡುವ ಹಿಂಸೆಯನ್ನು ಸಹಿಸಿಕೊಂಡು ಅವರ ಜೊತೆಯಲ್ಲಿ ಇದ್ದು ಜೀವನ ನಡೆಸಿದರು. ಸುನೀತಾರವರಿಗೆ ಮೊದಲ ಮಗಳು ತಮ್ಮ 16ನೇ ವಯಸ್ಸಿನಲ್ಲಿ ಜನಿಸಿದರೆ, ಎರಡನೇಯ ಮಗಳು 18ನೇ ವಯಸ್ಸಿನಲ್ಲಿ ಜನಿಸಿತು. ಎರಡನೇ ಮಗಳ ಜನನದ ನಂತರ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡರು. ಇದಕ್ಕೆ ಕುಟುಂಬದವರು ಯಾರು ವಿರೋಧಿಸಲಿಲ್ಲ. ಏಕೆಂದರೆ ಆ ಸಂದರ್ಭದಲ್ಲಿ ಕೌಟಂಬಿಕ ಸ್ಥಿತಿ ಚೆನ್ನಾಗಿರಲಿಲ್ಲ.

ಸುನೀತಾ ತನ್ನ ಎರಡು ಹೆಣ್ಣುಮಕ್ಕಳೊಂದಿಗೆ ಗಂಡ ಸಾಲ ಮಾಡಿದ್ದರಿಂದ ಧಾರವಾಡಬಿಟ್ಟು ಬೆಂಗಳೂರಿಗೆ ಕೆಲಸವನ್ನು ಹುಡಿಕೊಂಡು ಬಂದರು. ಸುಮಾರು ಹತ್ತು ವರ್ಷಗಳ ಕಾಲ ಹಗಲು ರಾತ್ರಿ ದುಡಿದು ಗಂಡ ಮಾಡಿದ ಸಾಲವನ್ನು ತೀರಿಸಿದರು. ಪಿಜಿ(ಪೇಯಿಂಗ್ ಗೆಸ್ಟ್)ಒಂದರಲ್ಲಿ  ಕೆಲಸವನ್ನು ಮೊದಲು ಮಾಡಿದರು. ಅನಂತರ ತಾವೇ ಒಂದು ಸಣ್ಣ ಪಿಜಿಯನ್ನು ಪಾಟ್ನರ್ಶಿಫ್‍ನಲ್ಲಿ ಪ್ರಾರಂಭಿಸಿದರು.  ಜೀವನ ಒಂದು ಹಂತದವರೆಗೆ ಸುಧಾರಿಸುತ್ತಿರುವಾಗಲೇ ಕರೋನಾ (ಕೋವಿಡ್-19) ಮಹಾಮಾರಿ ಬಂದು ಪಿಜಿಯಲ್ಲಿರುವವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದರಿಂದ, ಮುಚ್ಚುವ ಸಂದರ್ಭ ಎದುರಾಗಿ, ಮತ್ತೇ ಜೀವನ ನಡೆಸಲು ಕಷ್ಟ ಅನುಭವಿಸಿದರು. ಅಷ್ಟೆ ಅಲ್ಲದೇ ಸ್ವಲ್ಪ ಸಾಲ ಕೂಡ ಮಾಡಿಕೊಂಡರು. ಇಂತಹ ಸಂದರ್ಭದಲ್ಲಿ ಎಲ್ಲಿಯಾದರೂ ಕೆಲಸ ಸಿಕ್ಕರೆ ಸಾಕು ಎನ್ನುತ್ತಿರುವಾಗಲೇ ಕರ್ನಾಟಕ ಸರ್ಕಾರದವರು ಹೆಣ್ಣು ಮಕ್ಕಳಿಗೆ ಮನೆಕೆಲಸಕ್ಕೆ ಕಳುಹಿಸಿಕೊಡುತ್ತಿರುವ ವಿಷಯ ತಿಳಿದು ಕೆವಿಟಿಎಸ್‍ಡಿಸಿ ಕಛೇರಿಗೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಕುವೈತ್‍ಗೆ ಹೋಗಲು ಸಿದ್ದರಾದರು. ಕೆವಿಟಿಎಸ್‍ಡಿಸಿ ಕಛೆರಿಯಲ್ಲಿ ಸುನೀತಾರವರಿಗೆ ಜನರಲ್ ಮ್ಯಾನೇಜರ ಎಲ್ಲಾ ಮಾಹಿತಿ ನೀಡಿ ಮುಂದಿನ ತಯಾರಿ ಏನು ಮಾಡಿಕೊಳ್ಳಬೇಕೆಂದು ತಿಳಿಸಿದರು. ಅದೇ ರೀತಿಯಲ್ಲಿ ಸುನೀತರವರು ಕೂಡ ಎಲ್ಲ ದಾಖಲೆಗಳನ್ನು ಸಿದ್ದ ಮಾಡಿಕೊಂಡು ಸರ್ಕಾರದ ಕಡೆಯಿಂದ ಉಚಿತವಾಗಿ ಕುವೈತ್ ಪ್ರಯಾಣವನ್ನು ಮಾಡಿದರು. ಸುನೀತಾ ಹೇಳುವಂತೆ ‘ಕೇವಲ ವೈದ್ಯಕೀಯ ವೆಚ್ಚವನ್ನು ಮಾತ್ರ ನಾನು ಭರಿಸಿರುವುದು. ವಿಮಾನ ಟಿಕೇಟ್, ವಿಸಾ ಮುಂತಾದವುಗಳ ವೆಚ್ಚವನ್ನು ಕೆವಿಟಿಎಸ್‍ಡಿಸಿಯೇ ಭರಿಸಿದೆ’.

ಸುನೀತಾರವರು “ಕುವೈತ್‍ನಲ್ಲಿ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿಯೇ ಹೆಣ್ಣು ಮಕ್ಕಳು ಭಯದಿಂದ ಇರುವಂತಹ ಸಂದರ್ಭಗಳು ಬಹಳಷ್ಟು ಇವೆ. ಆದರೆ ಇಲ್ಲಿ ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡುತ್ತಾರೆ. ನಮ್ಮ ದೇಶದಿಂದ ಕೆಲಸಕ್ಕೆ ಬರುವ ಹೆಣ್ಣು ಮಕ್ಕಳು ಸ್ವಲ್ಪ ಇಂಗ್ಲೀಷ ಮಾತನಾಡುವುದನ್ನು ಕಲಿತರೇ ಉಪಯುಕ್ತವಾಗುತ್ತದೆ. ಹೆಣ್ಣು ಮಕ್ಕಳು ಎರಡು ವರ್ಷ ದುಡಿದು ನಮ್ಮ ದೇಶಕ್ಕೆ ಹೋದರೆ, ಅಲ್ಲಿ ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನನಗೆ ನನ್ನದೇ ಆದ ಒಂದು ಸ್ವಂತ ಮನೆ ಕಟ್ಟಿ ಅದರಲ್ಲಿಯೇ ಜೀವ ಬಿಡಬೇಕೆಂಬ ಆಸೆ. ನಾನು ದುಡಿದು ನನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಅವರಿಗೆ ಚೆನ್ನಾಗಿ ನೋಡಿಕೊಳ್ಳಬೇಕು” ಎಂದು  ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸುನೀತಾರವರ ಪ್ರಕರಣ ನೋಡಿದರೆ ಹೆಣ್ಣು ತಮ್ಮ ಜೀವನದಲ್ಲಿ ಎಂತಹದ್ದೇ ಕಷ್ಟ ಬಂದರು ಗಟ್ಟಿಯಾಗಿ ನಿಂತು ಎದುರಿಸಬಲ್ಲರು. ಜೀವನ ನಿರ್ವಹಣೆಗಾಗಿ ಅಥವಾ ಕುಟುಂಬದ ನಿರ್ವಹಣೆಗಾಗಿ ದೇಶಬಿಟ್ಟು ಬೇರೆ ದೇಶಕ್ಕೂ ದುಡಿಯಲು ಮುಂದಾಗುವರು. ಹೆಣ್ಣು ಮನ್ಸಸು ಮಾಡಿದ್ದರೆ ತಾನು ಅಂದುಕೊಂಡಿದ್ದನ್ನು ಸಾಧಿಸುವವರೆ . ಅದಕ್ಕಾಗಿ  ಹಗಲು ರಾತ್ರಿ ಶ್ರಮವಹಿಸುವರು. ಛಲಬಿಡದ ಛಲಗಾರ್ತಿಯರಾಗಿ ತಮ್ಮ ಅಸ್ತಿತ್ವವನ್ನು ತಾವು ರೂಪಿಸಿ ಜಗತ್ತಿಗೆ ತೋರಿಸಬಲ್ಲ ಸಾಮರ್ಥ್ಯವನ್ನು ಹೊಂದಿದವರಾಗಿದ್ದಾರೆ.


……..

2 thoughts on “ಛಲ – (ಸತ್ಯಕಥೆ)

  1. ನಿಮ್ಮ ಛಲಕ್ಕೆ ಒಂದು ಚಪ್ಪಾಳೆ
    ಹೆಣ್ಣಿನ ಸಾಧನೆಗೆ hats off

  2. ಛಲ -ಸತ್ಯ ಕಥೆ ಓದಿದೆ.. ಓದಿಸಿಕೊಂಡು ಹೋಗುವ ನಿರೂಪಣೆಯಿಂದ ಸುನೀತಾ ರವರ ಜೀವನ ಪ್ರೀತಿಯು ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತದೆ. ಸುನೀತಾ ರವರ ಛಲಕ್ಕೆ… ಸುರೇಖಾ ರವರ ಕಥೆಗೆ ಅಭಿನಂದನೆಗಳು…

Leave a Reply

Back To Top