ನಿಶೆ ಬರೆಯುತ್ತಾರೆ- ಕಣ್ಣ ಹನಿಯ ಕಾವು ತಾಗದಿರಲಿ

ಕಾವ್ಯ ಸಂಗಾತಿ

ಕಣ್ಣ ಹನಿಯ ಕಾವು ತಾಗದಿರಲಿ

ನಿಶೆ

ಕಲ್ಲ ಬೆಟ್ಟದ ನಡುವಲಿ ಅರಳಿರುವ
ಗಂಧ ಬಣ್ಣ ಹೂಹೊತ್ತ ಪುಟ್ಟ ಬೆಟ್ಟವೇ
ಬೆನ್ನು ಬೀಸಿ ಹೊರಟೆನೆಂದು
ಆ ಬಣ್ಣವೆಂದೂ ಮಾಸದಿರಲಿ

ದಾರಿಯುದ್ದಕು ಧೇನಿಸುವುದು
ಬರೀ ಬಿಕ್ಕುಗಳು ಆದಾವೆ ಹೊರತು
ನಗುವನೆಂದು ಕಟ್ಟಿಕೊಂಡು ಬರಲಿಲ್ಲ
ಭೂಮಿಗೆ ನಾ, ಅದೆಂದೂ ಧ್ಯಾನವಲ್ಲ ಬಿಡು

ಅಸಹಾಯಕ ಸ್ಥಿತಿ ನಿನ್ನದಾದರೆ
ನಿಸ್ಸಹಾಯಕಳಾದರೆ ಸೋತೀತು ಪ್ರೀತಿ
ಎಂಬ ನೋವೇನಿಲ್ಲ ನನಗೆ
ಗಂಧವೆಂದಾದರು ತನ್ನ ಗುಣ ಮರೆತದ್ದಿದೆಯೆ

ಗಾಳಿ ಬೀಸುವದನು ಬಿಟ್ಟರೆ
ಬಿಸಿಲು ಕಾವಾಗುವುದನು ತೊರೆದರೆ
ಪೈರುಗಳು ಹಸಿರಾಗುವದೆಂತು
ಜೀವಕೆ ಉಸಿರೂಡುವುದೆಂತು

ಹೂ ಹಸಿರು ಹೊತ್ತ ಬೆಟ್ಟ ನೀ
ಜಲ ಜೋಗುಳ ಹೊತ್ತ ಜನನಿ
ಗೆಂದಾದರು ರೇಖೆ ಎಳೆಯಲಾಗದು
ಬೀಸು, ಚಿಗುರು, ನೆಮ್ಮದಿಯ ನಾಳೆಗೆ

ತಾಗದಿರಲಿ ಬಿಸಿ ಉಸಿರ ಕಸರು ಕಣ್ಣಿಗೆ
ನಗುಹನಿಗಳ ಉಪ್ಪು ಕಾವು ಕಪಾಳಕೆ
ನಿಷೇದಕ್ಕೊಳಪಡಿಸಿಕೊಂಡಿರುವೆ ನನ್ನ
ನೋವ ನೆರಳು ಸೋಕದಿರಲೆಂದು ನಿನ್ನ


Leave a Reply

Back To Top