ಬಿ.ಟಿ.ನಾಯಕ್ ಕಥೆ ಎತ್ತು  ಕತ್ತೆ 

ಕಥೆ ಸಂಗಾತಿ

ಎತ್ತು  ಕತ್ತೆ

ಬಿ.ಟಿ.ನಾಯಕ್

ಗುಡ್ಡದಹಳ್ಳಿ ಎಂಬ ಒಂದು ಊರಿನಲ್ಲಿ ಬಲಭೀಮ ಎಂಬ ಮೂವತ್ತು ವಯಸ್ಸಿನ ಯುವಕನಿದ್ದ. ಅವನು

ಬಹಳೇ ಸೋಮಾರಿ.  ಬಲಭೀಮ ಮುಂಜಾನೆ ಎದ್ದವನೇ ಮುಖ ತೊಳೆದುಕೊಂಡು ಆಕಡೆ ಈ

ಕಡೆ ನೋಡಿ ಮನೆಯಿಂದ ಜಾಗ ಖಾಲಿ ಮಾಡುವುದು ಅವನ ನಿತ್ಯ ದಿನಚರಿ. ಆತನ ತಂದೆ ಮನೇಲಿ ಇರುವ ತನಕ ಈತ ಮನೆಗೆ ಬರುವುದೇ ಇಲ್ಲ.  ಏಕೆಂದ್ರೇ ತಂದೆಯಿಂದ ಬಯ್ಯಿಸಿಕೊಳ್ಳುವ  ಪ್ರಸಂಗ ಬರಬಹುದೆಂದು ಅಂಜಿಕೆ.  ಅವನ ತಂದೆ ಮುಂಜಾನೆ

ಮನೆಯಿಂದ  ಹೊರಗೆ ಹೋಗುವವರೆಗೆ ಅವನು ಹತ್ತಿರದಲ್ಲಿಯೇ ಮನೆಯ ಸುತ್ತ ಗಿರಿಕಿ ಹೊಡೆಯುತ್ತಲೇ ಇದ್ದು, ಆಮೇಲೆ ಮನೆ ಒಳಗೆ ಬರುವುದು ಅವನ ರೂಢಿಯಾಗಿತ್ತು.  ಅದಾದ ನಂತರ ಅವನ ತಾಯಿಯನ್ನು ಪೀಡಿಸಿ ಪುಡಿ ಕಾಸು ಗಿಟ್ಟಿಸಿಕೊಂಡು ಹೊರ ನಡೆಯುವದು ಅವನಿಗೆ ಅಭ್ಯಾಸವಾಗಿಬಿಟ್ಟಿದೆ. ಅವನ ಕಾಟ ತಾಳದೇ ತಾಯೀ ಗಂಗವ್ವ ಅಲ್ಲೋ ಇಲ್ಲೋ ಇಟ್ಟ ಬಿಡಿ            ಕಾಸುಗಳನ್ನು ಜೋಡಿಸಿ ಅವನಿಗೆ ಕೊಡುತ್ತಿದ್ದಳು. ಕಾಸು ಸಿಕ್ಕ ದಿನ ಹೊರಗೆಯೇ ಕಾಲ ಕಳೆಯುತ್ತಿದ್ದ.  ಕೈ ಖಾಲಿ ಆದ ಮೇಲೆ ಮತ್ತೇ ಮನೆಗೆ ಬಂದು ತಾಯಿಯನ್ನು  ಪೀಡಿಸುತ್ತಿದ್ದ.

ಹಾಗೆಯೇ ಒಂದು ಬಾರಿ ಆತನ ಅಪ್ಪ ಮನೆಯಿಂದ ಹೊರ ನಡೆದಾಗ, ದೂರದಿಂದ ನೋಡಿದ ಭೀಮ ತನ್ನನ್ನು ತಾನೇ ಹೊರಗೆ ಬಚ್ಚಿಟ್ಟುಕೊಂಡವನು ಒಳಗೆ ಬಂದು ಸೇರಿದ. ಆಗಲೇ ತಾಯಿಯನ್ನು ದುಡ್ಡಿನ ಸಲುವಾಗಿ ಪೀಡಿಸಲು ಪ್ರಾರಂಭವಾಗಿತ್ತು. ಆದರೇ ಅವನ ಆ ಸಮಯ ಸರಿಯಾಗಿರಲಿಲ್ಲ, ಹೊರಗೆ

ಹೋದ ಅವನ ತಂದೆ ಯಾವುದೋ  ಕೆಲಸದ ಮೇಲೆ ಮರಳಿ ಮನೆಗೆ  ಬಂದೇ ಬಿಟ್ಟ.  ಇನ್ನೇನು ಭೀಮ ಪಾರಾಗುವಷ್ಟರಲ್ಲಿ, ತಂದೆ ಎದುರಿಗೆ ಪ್ರತ್ಯಕ್ಷನಾಗಿ ಬಿಟ್ಟ ! ಅಪರೂಪಕ್ಕೆ ಕೈಗೆ ಸಿಕ್ಕ ಮಗನ ಮೇಲೆ ಕೋಪದಿಂದಲೇ  ಕೇಳಿದ ;       

“ಲೋ ಭೀಮ ನೀನು ಕತ್ತೆ ಬೆಳೆದ  ಹಾಗೆ ಬೆಳೆದಿದ್ದೀಯಾ, ಆದರೆ ನಿನಗೆ ಬುದ್ಧಿ ಮಾತ್ರ ಬೆಳೆದಿಲ್ವಲ್ಲೋ ಧಡಿಯ” ಎಂದ.                                       

“ಏನೋಪ್ಪ ಸುಮ್ಮ ಸುಮ್ಮನೆ ನನಗೆ ಬೈಯುತ್ತೀಯ,  ನಾನೇನು ತಪ್ಪು ಮಾಡಿದೆ ?  ಅಂದ ಭೀಮ.

“ತಪ್ಪು ನಿನ್ನದಲ್ಲ ಕಣೋ, ನಿನ್ನ ಮುದ್ದು ಮಾಡಿದ್ದಾಳಲ್ಲ ಆ ನಿನ್ನಮ್ಮನದು.  ಅವಳಿಗೆ ಕೂಡಬುದ್ಧಿನೇ ಇಲ್ಲ, ತನ್ನ ಮಗನನ್ನು ಸರಿಯಾದ ದಾರಿಗೆ ತರಬೇಕೆಂಬುದು ಅವಳಿಗೆ ಯಾಕೆ ತಿಳಿಯುತ್ತಿಲ್ಲ ?

ಇನ್ನು ಕೆಲವು ಹೊತ್ತು ಭೀಮ ಇಲ್ಲೇ ಇದ್ರೇ ಬೈಗುಳದ ಮಳೆನೇ ಬರಹುದೆಂದು ತಾಯೀ ಮಗನಿಗೆ ಸನ್ನೆ ಮಾಡಿ, ಹೊರಗೆ ಹೋಗಲು ಸೂಚಿಸಿದಳು.  ಅದರಂತೆ ಅವನು ಅಲ್ಲಿಂದ ಕಾಲು ಕಿತ್ತ.  ಭೀಮನ ತಂದೆಗೆ ಬಹಳೇ ಕೋಪ ಬಂತು. ಗಂಗವ್ವಗೆ ಬಯ್ಯಲು ಪ್ರಾರಂಭಿಸಿದ.  ಅದು ಮುಗಿಯಲೇ ಇಲ್ಲ , ಅವಳು ಬೇರೆ ಮಾರ್ಗವಿಲ್ಲದೇ  ಮುಸಿ ಮುಸಿ ಅಳುತ್ತಲೇ ನಿಂತಳು. ಆದರೇ, ಹಠಮಾರಿಯಾಗಿ               ಸಿಟ್ಟಿನಿಂದ ಮಗನನ್ನು ಹುಡುಕಿಕೊಂಡು ತರಲು ತಂದೆ ಹೊರ ನಡೆದ.

ಸಮೀಪದ ಶಿವನಳ್ಳಿ ಊರ ಹೊರಗೆ ಒಂದು ದೇವಿ ಮಂದಿರವಿದೆ,  ಅದು ಬಲಭೀಮನ ತಾಣವಾಗಿತ್ತು.

ಅವನ ಗೆಳೆಯ ಗೋವಿಂದ ಕೂಡ ಅಲ್ಲಿಗೆ ಬಂದಾಗ ಅವರಿಬ್ಬರು ಹುಲಿ ಮನೆ ಮತ್ತು ಚೌಕಾಬಾರಾ ಆಟ ಆಡಿ ಕಾಲ ಕಳೆಯುತ್ತಿದ್ದರು. ಆ ಗೋವಿಂದ ಈದಿನ ಯಾಕೋ           ಬರಲೇ ಇಲ್ಲ. ಕಾರಣವೂ ತಿಳಿಯಲಿಲ್ಲ. ಯಾರಾದರನ್ನು  ಕೇಳೋಣ ಎಂದೆನಿಸಿದಾಗ,              ಆತನ ಅಪ್ಪ ದೂರದಲ್ಲಿ ಬರುವುದು ಕಾಣಿಸಿತು ! ಹಾಗೆಯೇ ಅಲ್ಲಿ ತಲೆ ಮರೆಸಿಕೊಂಡ. 

ಸ್ವಲ್ಪ ಹೊತ್ತಿನಲ್ಲಿ ಅವನ ತಂದೆ ಪೂರ್ತಿ ಮರೆಯಾದಾಗ ಹೊರಗೆ ಬಂದು ಎಲ್ಲಾ ದಿಕ್ಕಿನಲ್ಲಿ               ನೋಡುತ್ತಾ ನಿಂತ. ಆಮೇಲೆ ಯಾರೂ  ಕಾಣಲೇ ಇಲ್ಲ. ಆಮೇಲೆ ಗೋವಿಂದನ ಬರುವಿಕೆಗೆ ನೋಡುತ್ತಲೆಯೇ ಇದ್ದ. ಕೊನೆಗೂ ಅವನು ಬರಲೇ  ಇಲ್ಲ. ಏನು ಮಾಡೋದು ಎಂದು ಅಲ್ಲಿಂದ  ಒಂದು ಕೂಗಳತೆಯ ದೂರದಲ್ಲಿರುವ ದೊಡ್ಡ ಆಲದ ಮರದ ಕಡೆಗೆ ಹೊರಟ.  ಇದೆಲ್ಲ ಹೊತ್ತು ಕಳೆಯುವದಕ್ಕೆ ಎಂದು ಬೇರೆ       ಹೇಳಬೇಕಿಲ್ಲ. ಸುಮಾರು ಎರಡು ಮೂರು ಪ್ರದಕ್ಷಿಣೆ ಆಲದ ಮರದ ಸುತ್ತ ಆಯಿತು.                    ಆಮೇಲೆ ಮೇಲೆ  ಕೆಳಗೆ ನೋಡಿದ, ಅಕ್ಕ ಪಕ್ಕದಲ್ಲಿ ನೋಡಿದ. ಏನೂ ತಿಳಿಯದೆ ಹೋಯಿತು. ಆತ  ಸುಸ್ತಾಗಿ ಆಲದ ಮರದ ಕೆಳಗಿರುವ ಒಂದು ದೊಡ್ಡ ಬಂಡೆಯ ಮೇಲೆ ಕುಳಿತು ಕೊಂಡ.  ಏನೋ     ಗರಬಡದವನಂತೆ ಒಮ್ಮೆಲೇ ಪಕ್ಕಕ್ಕೆ ಸರಿದ. ಎಂಥಹ ಧಡ್ಡ ನಾನು, ದೇವರ ಚಿತ್ರಗಳ ಮೇಲೆ ಕುಳಿತುಕೊಂಡೆ ಅಂತ ತನ್ನನ್ನೇ ತಾನು ಬಯ್ದುಕೊಂಡ. ಆಮೇಲೆ ಚಿತ್ರಗಳನ್ನು ಕೂಲಂಕುಷವಾಗಿ ನೋಡುತ್ತಾ ನಿಂತ.  ಸುಂದರ ಕೆತ್ತನೆಯ ಚಿತ್ರಗಳಿದ್ದವು.  ಆತ ಸುಧೀರ್ಘವಾಗಿ  ಪರೀಕ್ಷಿಸಿದ.  ಆ ಬಂಡೆಯ ಮೇಲೆ ಎತ್ತು ಮತ್ತು ಕತ್ತೆಯ ಚಿತ್ರಗಳ ಕೆತ್ತನೆಯಾಗಿತ್ತು. ಇದೇನಪ್ಪ ಇಂಥಹ ವಿಚಿತ್ರ ಚಿತ್ರಗಳನ್ನೇ ನೋಡಿಲ್ಲ, ಈ ಎತ್ತಿನ ಜೊತೆಗೆ ಕತ್ತೆ ಯಾಕೆ ಇದೆ ಎಂಬುದೇ

ಅವನ ಯೋಚನೆಯಾಯಿತು.  ಏನೂ ಹೊಳೆಯಲೇ ಇಲ್ಲ. ಅವನ ತಲೆ ಕೆಟ್ಟು ಹೋಯಿತು.

ಯಾರನ್ನಾದ್ರೂ ಕೇಳಬೇಕೆಂದ್ರೆ  ಯಾರ ಸುಳಿವೇ ಇಲ್ಲ. ಅವನಿಗೆ ಅದನ್ನು ಅಲಕ್ಷ್ಯ ಮಾಡಲು ಮನಸ್ಸು ಒಪ್ಪುತ್ತಿಲ್ಲ. ತನ್ನ ತಾಯಿಗೆ ಹೇಳಿದರೆ ಆಕೆ ಏನಾದ್ರೂ ಹೇಳಬಹುದೆಂದು ಕೊಂಡ. ಮತ್ತೊಮ್ಮೆ ಯೋಚಿಸಿದ, ತನ್ನ ತಾಯೀ ಈ ಕಡೆಗೆ ತಲೆಯನ್ನೇ ಹಾಕಿಲ್ಲ, ಅದ್ಹೇಗೆ ಆಕೆಗೆ ಗೊತ್ತಾಗುತ್ತೆ ?ಬಹುಷಃ ಆಕೆಗೂ ಗೊತ್ತಾಗ್ಲಿಕ್ಕಿಲ್ಲ ಎಂದುಕೊಂಡ. ಸರಿ ಇದನ್ನು ಹೇಗಾದ್ರೂ ತಿಳಿದುಕೊಳ್ಳಲೇ ಬೇಕು ಎಂದು ಬಿಗಿ ಪಟ್ಟು ಹಿಡಿದ.  ಆಗ ಆತನಿಗೆ ಏನೋ ವಿಚಾರ ಹೊಳೆಯಿತು. ಹತ್ತಿರದಲ್ಲಿದ್ದ  ದೇವಿ ಮಂದಿರಕ್ಕೆ ಹೋಗಿ ಪ್ರಾರ್ಥನೆ ಮಾಡಿದ್ರೆ ವಿಚಾರ ಹೊಳೆಯಬಹುದು ಎಂದುಕೊಂಡು ಆ ಕಡೆಗೆ ಹೊರಟೇ ಬಿಟ್ಟ. ಹೋಗುವಾಗ                                                                  “ಎತ್ತು ಮತ್ತು ಕತ್ತೆ ” ಎನ್ನುತ್ತಲೇ ಇದ್ದ.  ದೇವಿಯ ಮೂರ್ತಿಯ ಮುಂದೆ ನಿಂತು ಕಣ್ಮುಚ್ಚಿ ಪ್ರಾರ್ಥನೆ ಮಾಡಿದ. ಸುಮಾರು ಐದು ನಿಮಿಷ ಹಾಗೆಯೆ ನಿಂತುಕೊಂಡ. ಕಣ್ಣು ತೆರೆದು ದೇವಿಯ ಕಡೆಗೆ ನೋಡಿದ.

ದೇವಿ ಅವನಿಗೆ ಆಶೀರ್ವಾದ ಮಾಡಿದ ಹಾಗೆ ಭಾಸವಾಯಿತು ! ಒಂದು ಕ್ಷಣ ಅವನು ಪುಳಕಿತನಾದಂತೆ ಅನುಭವವಾಯಿತು. ಆಗ ಆಲದ ಮರದ ಕಡೆಗೆ ಹೊರಟ. ಹಾಗೆ ಹೋಗುವಾಗ ತಪ್ಪದೇ  “ಎತ್ತು ಮತ್ತು ಕತ್ತೆ ” ಎನ್ನುವದನ್ನು ಮನನ ಮಾಡದೇ ಬಿಡಲಿಲ್ಲ.  ಹಾಗೆ ಹೋಗುತ್ತಿ ರುವಾಗ ಒಂದು ಆಳವಾದ ಗುಂಡಿ ಅಡ್ಡ ಬಂತು. ಅಲ್ಲಿ ಉಸಿರು ಬಿಗಿ ಹಿಡಿದು ” ಎತ್ತು ಮತ್ತು ಕತ್ತೆ ” ಎನ್ನುತ್ತಲೇ ಈ ತುದಿಯಿಂದ ಆ ತುದಿಗೆ ಹಾರಿದ. ಹಾರಿದ ತಕ್ಷಣ ” ಎತ್ತು ಮತ್ತು ಕತ್ತೆ ” ಹೋಗಿ ‘ಎತ್ತು ಕತ್ತೆ’ ಯಾಯಿತು. ಆಮೇಲೆ  “ಎತ್ತು, ಕತ್ತೆ ” ಎನ್ನುವದು ಬಿಡಲೇ ಇಲ್ಲ ! ಇನ್ನೂ ಜೋರಾಗಿಯೇ ” ಎತ್ತು ಕತ್ತೆ ” ಎನ್ನುತ್ತಲೇ ಮರದ ಕಡೆಗೆ ನಡೆದ.  ಹೋಗ್ತಾ ಹೋಗ್ತಾ ”  ಎತ್ತು ಕತ್ತೆ” ಅನ್ನೋದು ” ಎತ್ತೋ ಕತ್ತೆ ” ಎಂದು ಅವನಿಗರಿವಿಲ್ಲದೆಯೇ ಆಯಿತು.  ಅವನು ಈಗ ಉಸಿರು ಬಿಡದೆಯೇ ” ಎತ್ತೋ ಕತ್ತೆ ” ಅನ್ನುತ್ತಿದ್ದ.  ಆಮೇಲೆ ಒಂದು ಕ್ಷಣ ಯೋಚಿಸಿದ, ಈ ಥರ ‘ಎತ್ತೋ ಕತ್ತೆ’ ಅಂತ ಯಾಕಿರಬಹುದು ? ಆಗ ತಕ್ಷಣ

ಅವನಿಗೆ ಏನೋ ಹೊಳೆಯಿತು !

ಅಲ್ಲದೇ, ಅವನಿಗೆ ಯಾರೋ ” ಎತ್ತೋ ಕತ್ತೆ ” ಎಂದು ಕೂಗಿದ ಹಾಗೆ ಅನಿಸಿತು.  ಅವನಿಗೆ ರೋಮಾಂಚನವಾಗಿ. “ಎತ್ತೋ ಕತ್ತೆ ” ಎಂದರೆ ಆ ಬಂಡೆಯನ್ನು ಎತ್ತಲು ಹೇಳುವ ಪರಿ ಏಂದು ಗೋಚರ ಆಯಿತು.

ತಕ್ಷಣವೇ, ಬಂಡೆಯ ಸುತ್ತಲಿರುವ ಮಣ್ಣನ್ನು ಒಂದು ಕಲ್ಲಿನ ಸಹಾಯದಿಂದ ತೆಗೆದ.    ಆ ಬಂಡೆಯನ್ನು ಎತ್ತಲು ಅನುವಾಗುವಂತೆ ಸಿದ್ಧ ಮಾಡಿಕೊಂಡ.  ಆಮೇಲೆ ಶಕ್ತಿ ಹಾಕಿ ಬಂಡೆಯನ್ನು

ಸರಿಸಿ ಎತ್ತಿದ. ಆಗ ಅಲ್ಲಿ ಕಂಡದ್ದೇನು ? ಪರಮಾಶ್ಚರ್ಯ !  ಒಂದು ಕೊಪ್ಪರಿಗೆ ಪಾತ್ರೆ ಕಾಣಿಸಿತು.

ಆ ಕೊಪ್ಪರಿಗೆ ಪಾತ್ರೆಯನ್ನು ಹೊರಗೆ ತೆಗೆದ. ಅದಕ್ಕೊಂದು ಮುಚ್ಚಳವಿತ್ತು. ಅದನ್ನು  ತೆಗೆದಾಗ ಮತ್ತೇ ಆಶ್ಚರ್ಯ ! ಚಿನ್ನದ ನಾಣ್ಯಗಳು ಇದ್ದವು. ಒಂದು ಕ್ಷಣ ಆತ ಮೂಕಸ್ಮಿತನಾದ !  ಆಗಲೇ ಸೂರ್ಯ ಮುಳುಗುತ್ತಿದ್ದ. ಆ ಕೊಪ್ಪರಿಗೆಯನ್ನು  ತೆಗೆದು ಕೊಂಡು ದೇವಿ ಗುಡಿಗೆ ಹೋಗಿ, ಮೂರ್ತಿಯ ಮುಂದೆ

ಅದನ್ನಿಟ್ಟು ಒಂದು ಸಾಷ್ಟಾಂಗ ನಮಸ್ಕಾರ ಹಾಕಿ ಕೊಪ್ಪರಿಗೆಯನ್ನು ಎತ್ತಿಕೊಂಡು ಮನೆ ಕಡೆಗೆ ನಡೆದ. ಆಗ ಬಲ ಭೀಮನ  ತಾಯೀ ಅವನ ದಾರಿ ನೋಡುತ್ತಾ ಅವನ  ಬಗ್ಗೆಯೇ ಯೋಚಿಸುತ್ತಿದ್ದಳು.

ಮುಂಜಾನೆಯೇ ಹೋದ ಮಗ ಇನ್ನೂ ಬಂದಿಲ್ಲ, ಅವನು ಏನೂ ತಿಂಡಿ ತಿಂದಿಲ್ಲ ಹೇಗೆ ಇದ್ದಾನೋ

ಏನೋ  ಎಂದು ಪರಿತಪಿಸುತ್ತಲಿದ್ದಳು. ದೂರದಲ್ಲಿ ಮಗನನ್ನು ನೋಡಿ ಅವಳಿಗೆ ಸಂತೋಷವಾಯಿತು. 

ಅವನಿಗಾಗಿ ಊಟದ ತಟ್ಟೆ ಇಡಲು ಮನೆ ಒಳಗೆ ನಡೆದಳು.  ಬಲಭೀಮ ಮನೆ ಒಳಗೆ ಬಂದವನೇ,  “ಅವ್ವ…. ಅವ್ವ.” ಎರಡು ಸಾರಿ ಕೂಗಿದ.  ಒಳಗಿನಿಂದಲೇ “ಬಾರೋ ಮಗನೇ ..ಒಳಗೆ ಬಾ,

ಕೈ ಕಾಲು ಮುಖ ತೊಳೆದುಕೊಂಡು ಬಾ ಊಟಕ್ಕೆ ತಟ್ಟೆ ಇಟ್ಟಿದ್ದೇನೆ ” ಎಂದಳು. ಆಗ ಆತ ” ಅವ್ವ ನೀ ಒಳಗೇನು ಮಾಡ್ತಾ ಇದ್ದೀ ಹೊರಗೆ ಬಾ, ನನ್ನನ್ನು ನೋಡು ಮತ್ತು ನಾನು ತಂದದ್ದನ್ನು ನೋಡು “

ಎಂದ.  ಅವಳು ಹೊರಗೆ ಓಡೋಡಿ ಬಂದಳು, ಬಂದವಳೇ ಅವನ ಭುಜದ ಮೇಲಿರುವ

ಕೊಪ್ಪರಿಗೆಯನ್ನು ನೋಡಿ ಹೆದರಿದಳು.   “ಏನಿದು ಮಗಾ ? ಎಲ್ಲಿಂದ ತಂದಿದ್ದೀಯಾ.. ಹೇಳು ಮಗನೆ ?”  ಅದಕ್ಕೆ ಬಲಭೀಮ ಹೇಳಿದ ” ದೇವಿ ಗುಡಿ ಪಕ್ಕದಲ್ಲಿರುವ ಆಲದ ಮರದ ಹತ್ತಿರ ಈ ನಿಧಿ ಸಿಕ್ಕಿದೆ, ಇದು ನಮ್ಮ ದೇವಿ ಕೊಟ್ಟಿರುವ ಪ್ರಸಾದ ” ಎಂದ.

“ಏನೋ ಸುಳ್ಳು ಹೇಳ್ತೀಯ…. ಯಾರ ಮನೆಯಿಂದ ಎತ್ತಿಕೊಂಡು ಬಂದೀಯೋ ಮಗನೆ ನಿಜ ಹೇಳು ” ದುಃಖ ಭರಿತವಾಗಿ  ಕೇಳಿದಳು. ಅದಕ್ಕೆ ಅವನು ” ಅವ್ವ ನನ್ನ ನಂಬು, ನಾನೇನೋ ಸೋಮಾರಿ ಮತ್ತು ಕೆಲಸಕ್ಕೆ ಬಾರದವನು ಇರಬಹುದು ಆದರೆ ಕಳ್ಳನಲ್ಲ.  ನನಗೆ ಇಂದು ದೇವಿಯು ಆಶೀರ್ವಾದ ಮಾಡಿ ಈ ನಿಧಿಯನ್ನು ತೋರಿಸಿದ್ದಾಳೆ.  ದೇವರಾಣೆಗೂ ಇದು ನಿಜ ” ಎಂದು ಹೇಳಿದ.  ಅವಳಿಗೋ

ಆಶ್ಚರ್ಯವಾಯಿತು.  ಅವಳಿಗೆ ನಂಬಲು ಬಹಳೇ ಸಮಯ ಬೇಕಾಯಿತು.

ಅಷ್ಟರಲ್ಲಿ ಬಲಭೀಮನ  ತಂದೆಯ ಆಗಮನವಾಯಿತು. ಬಂದವನೇ ವಿಷಯ ತಿಳಿದು ಕೊಂಡ. ಅವನೂ ಕೂಡ ಮೊದಲು ವಿಶ್ವಾಸ ಮಾಡಲಿಲ್ಲ, ಆದರೆ ವಿಷಯ ವಿವರವಾಗಿ ತಿಳಿದಾಗ ಮಗನ ಬಗ್ಗೆ ಹೆಮ್ಮೆ

ಯಾಯಿತು.

“ಲೋ ಭೀಮ ನೀನು ಸಾಮಾನ್ಯದವನಲ್ಲ.  ನಿನ್ನ ಜನ್ಮ ಈಗ ಸಾರ್ಥಕವಾಯಿತು.  ನಿನ್ನ ಹೆತ್ತವರು ನಾವು ಧನ್ಯರಾದೆವು.  ಮಗಾ ಬಹಳೇ ಹಿಗ್ಗಬೇಡ. ಈ ಸಂಪತ್ತು ನಮ್ಮ ಪರಿಶ್ರಮದ ಗಳಿಕೆಯದಲ್ಲ.  ಇದು ಯಾರಿಗೆ ಸೇರಬೇಕೋ ನಮಗೆ ಗೊತ್ತಿಲ್ಲ, ”ನಾನು ಹೇಳಿದ ಹಾಗೆ ಕೇಳು ಮಗನೆ ” ಎಂದ . ಅದಕ್ಕೆ ಬಲಭೀಮ ” ಆಯಿತಪ್ಪ ನೀನು ಹೇಗೆ ಹೇಳ್ತಿಯ ಹಾಗೆಯೇ ಕೇಳ್ತೀನಿ” ಎಂದ. ಅದಕ್ಕೆ ತಂದೆ,

ತಾಯೀ ಮತ್ತು ಬಲಭೀಮ ಎಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದರು. ಆ ಕೊಪ್ಪರಿಗೆಯನ್ನು

ಸರಕಾರಕ್ಕೆ ಕೊಟ್ಟು ಬಿಟ್ಟರು. ಸರಕಾರದವರು ಇವರ ಗುಣಗಳನ್ನು ಮೆಚ್ಚಿ ಬಲಭೀಮನಿಗೆ ಒಂದು

ಲಕ್ಷ ರೂಪಾಯಿ ಬಹುಮಾನವನ್ನು ಕೊಟ್ಟು ಗೌರವಿಸಿದರು.

ಅಂದಿನಿಂದ ಬಲಭೀಮನು ತುಂಬಾ ಬದಲಾವಣೆ ಗೊಂಡ, ದುಡಿಯಲು ಹೋಗ ತೊಡಗಿದ.  

ಆತನ ಜೀವನದ ಗತಿಯೇ ಬದಲಾಯಿತು.


ಬಿ.ಟಿ.ನಾಯಕ್

12 thoughts on “ಬಿ.ಟಿ.ನಾಯಕ್ ಕಥೆ ಎತ್ತು  ಕತ್ತೆ 

  1. ಕಥೆ ಚನ್ನಾಗಿದೆ. ಎತ್ತು ಮತ್ತು ಕತ್ತೆ, ಎತ್ತೋ ಕತ್ತೆ ಯಾಗಿ ಅವನ ಜೀವನವನ್ನೇ ಬದಲಿಸಿದ್ದು ಲೇಖಕರ ಯೋಚನಾ ಲಹರಿಯನ್ನು ಮೆಚ್ಚುವಂತಿದೆ. ಅಭಿನಂದನೆಗಳು ಬಿ ಟಿ ನಾಯಕ್ ಅವರಿಗೆ.

    1. ಇದನ್ನು ಪ್ರಪ್ರಥಮ ಬಾರಿಗೆ LVD ಕಾಲೇಜ್ ಹೌಸ್ ಮ್ಯಾಗಜಿನ್ ‘ ಪ್ರಬುದ್ಧ ವಾಣಿ’ ಯಲ್ಲಿ ಮತ್ತು ದಿಂ. ಚನ್ನಣ್ಣ ವಾಲಿಕಾರ್ ಸರ್, ಕನ್ನಡ ಉಪನ್ಯಾಸಕರು ಅವರ ಮಾರ್ಗದರ್ಶನದಲ್ಲಿ 1972 ರಲ್ಲಿ ಮೂಡಿತ್ತು. ಧನ್ಯವಾದಗಳು.

  2. ಸೊಗಸಾಗಿದೆ. ಅಭಿನಂದನೆಗಳು.

  3. ಕಥೆ ಚೆನ್ನಾಗಿದೆ ಸರ್, ನಿಧಿಯನ್ನು ಸರಕಾರಕ್ಕೆ ಕೊಟ್ಟದ್ದು ಒಳ್ಳೆಯ ವಿಚಾರ.

    1. ನಿಮ್ಮ ಪ್ರೇರಣೆ ನನಗೆ ಹಿಡಿಸಿತು. ಧನ್ಯವಾದಗಳು ಜಯರಾಮನ್ ಸರ್.

  4. ಕಥೆ ತುಂಬಾ ಚನ್ನಾಗಿ ಮೂಡಿಬಂದಿದೆ. ಕೊನೆಗೂ ದುರಾಸೆ ಮಾಡದೆ ಸರ್ಕಾರಕ್ಕೆ ನಿಧಿ ಒಪ್ಪಿಸಿ ಕೊನೆಗೂಳಿಸಿದ್ದು ಸ್ಲಾಘನೀಯ್.

  5. ಕಥೆ ತುಂಬಾ ಚೆನ್ನಾಗಿ ಮೂಡಿದೆ. ಹಳೆಯ ಕಾಲದಲ್ಲಿ ಇಂಥ ಸಂಕೇತಗಳ ಮೂಲಕ ತಿಳಿಸುತ್ತಿದ್ದರು. ಬಲಭ್ ಭೀಮನ ಮನಸ್ಸಿನಲ್ಲಿ ಜಿಜ್ಞಾಸೆ ಮೂಡಿದ್ದೇ ದೊಡ್ಡ ಬದಲಾವಣೆ. ಅದೇ ಜ್ಞಾನದ ಉದಯ. ಅಭಿನಂದನೆಗಳು.

Leave a Reply

Back To Top