ಕಾವ್ಯಸಂಗಾತಿ
ಗಜಲ್
ಉಷಾಜ್ಯೋತಿ
ಗೋಕುಲದ ಒಡೆಯನೇ ಒಲವ ಬಯಸಿ ರಾಧೆಯ ಕರೆಸಿದೆಯಲ್ಲ ನೀನು
ಓಕುಳಿಯ ಚೆಲ್ಲಿದಂತೆ ಚೆಲುವ ಎರೆಸಿ ವ್ಯಥೆಯ ಮರೆಸಿದೆಯಲ್ಲ ನೀನು
ವಿರಹದುರಿಯಲಿ ಬೇಯಲು ಇನಿಯಳ ನೆನಪಾಯಿತಲ್ಲವೇ
ಕೋಪ-ತಾಪ ಬದಿಗಿರಿಸಿ ಅನುರಾಗದ ಮಳೆಯ ಸುರಿಸಿದೆಯಲ್ಲ ನೀನು
ಕೊಳಲ ನಾದಕ್ಕೆ ಹೃದಯ ಕಮಲ ಬಿರಿಯದಿರುವುದೇ ಹೇಳು
ಮೆಲು ಮಾತಿನಲಿ ಅಮೃತದ ಸವಿಯ ಬೆರೆಸಿದೆಯಲ್ಲ ನೀನು
ಬರಡು ಎದೆಯಲಿ ಭಾವ ಪಲ್ಲವಿಸದೆ ಹಟಮಾಡಿ ಕುಳಿತಿದೆ
ತಂಗಾಳಿಯಾಗಿ ಸನಿಹ ಸುಳಿದು ರಸ ಗಂಗೆಯ ಹರಿಸಿದೆಯಲ್ಲ ನೀನು
ನಲುಮೆ ಸಿರಿಗಂಧ ಪಸರಿಸುತ ಜಗಕೆಲ್ಲ ಮಾದರಿಯಾದೆ
ಉಷೆಯ ಮುದುಡಿದ ಮೊಗದಲಿ ಮಂದಹಾಸ ಬರಿಸಿದೆಯಲ್ಲ ನೀನು