ಗೋವಿಂದ ಹೆಗಡೆಯವರ ಗಜಲ್ ಒಂದು ವಿಶ್ಲೇಷಣೆ

ಗೋವಿಂದ ಹೆಗಡೆಯವರ ಗಜಲ್ ಒಂದು ವಿಶ್ಲೇಷಣೆ

ಸಂಧ್ಯಾ ಭಟ್

ಗೋವಿಂದ ಹೆಗಡೆಯವರ ಗಜಲ್

ಬದುಕಿನ ಸಮೀಕರಣಗಳಲ್ಲಿ ಗೆಲ್ಲುವುದೇನು ನವಿಲು
ಉಳ್ಳವರ ಇಲ್ಲದವರ ನಡುವೆ ಸಲ್ಲುವುದೇನು ನವಿಲು

ಕತ್ತಲಲ್ಲಿ ಓಡುತ್ತಲೇ ಇದೆ ಕಣ್ಣು ಕಟ್ಟಿದ ಕುದುರೆ
ಕೀಲಿಕೊಟ್ಟ ನಡೆಗಳಲ್ಲಿ ಮಿಡುಕುವುದೇನು ನವಿಲು

ಮೋಡವೇ ಇಲ್ಲದ ಬಾನು ಮಳೆ ಬರುವುದೇನು
ಬಣ್ಣಬಣ್ಣದ ಕಾರಂಜಿ ಕಂಡು ಕುಣಿವುದೇನು ನವಿಲು

ಅದೋ, ಯಾರದೋ ತಾಳಕ್ಕೆ ಕುಣಿವ ಗೆಜ್ಜೆಯ ಸದ್ದು
ಕನ್ನಡಿಯಲ್ಲಿ ಬಿಂಬ ಕಂಡು ನಿಲ್ಲುವುದೇನು ನವಿಲು

ಗರಿಯೊಂದನ್ನು ಹುಡುಹುಡುಕಿ ಅಲೆದಿದ್ದಾನೆ ‘ಜಂಗಮ’
ಆರ್ತತೆಯಲ್ಲಿ ಚಾಚಿದೆ ಎದೆ ದೊರೆವುದೇನು ನವಿಲು

—————-

ಗೋವಿಂದ ಹೆಗಡೆ

ಸಂಧ್ಯಾ ಭಟ್ ವಿಶ್ಲೇಷಣೆ

ಈ ಗಜಲ್ ನಲ್ಲಿ ಬದುಕಿನ ಕಹಿ ಸತ್ಯವನ್ನೂ, ಮನುಷ್ಯನ ಬೇಜವಾಬ್ದಾರಿತನದಿಂದ ಪ್ರಕೃತಿಯ ಜೀವರಾಶಿಯ ಮೇಲಾಗುವ ದುಷ್ಪರಿಣಾಮವನ್ನೂ, ಕೊನೆಗೆ ತಾನೇ ಉಣ್ಣ ಬೇಕಾಗಿರುವ ಸ್ವಯಂಕೃತ ಅಪರಾಧದ ಫಲವನ್ನೂ ಅತ್ಯಂತ ಮಾರ್ಮಿಕವಾಗಿ ಉಲ್ಲೇಖಿಸಲಾಗಿದೆ.

ಪ್ರತಿಯೊಂದು ಸಾಲೂ ಕೂಡಾ ಮೇಲ್ನೋಟಕ್ಕೆ ವ್ಯಕ್ತವಾಗುವ ಭಾವದ ಹೊರತಾಗಿಯೂ ನಾನಾ ಗೂಡಾರ್ಥಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವುದು, ವಿಷಯದ ಆಳಕ್ಕಿಳಿದಂತೆಲ್ಲಾ ಅನುಭವಕ್ಕೆ ಬರುತ್ತಾ ಹೋಗುತ್ತದೆ…

ಮೊದಲ ಸಾಲು “ಬದುಕಿನ ಸಮೀಕರಣಗಳಲ್ಲಿ ಗೆಲ್ಲುವುದೇನು ನವಿಲು….”

ಕಳಕಳಿ, ಅನುಮಾನ, ಪ್ರಶ್ನೆಗಳೊಂದಿಗೆ ಆರಂಭವಾಗುವ  ಗಜಲ್ ನ ಈ ಸಾಲು ಗಂಭೀರ ಚಿಂತನೆಗೆ ಮುನ್ನುಡಿ ಇಡುತ್ತದೆ.

ಹುಟ್ಟಿನಿಂದ ಆರಂಭವಾಗುವ ಬದುಕಿಗಾಗಿ, ಬದುಕಿನೊಂದಿಗಿನ ಸೆಣಸಾಟ  ಅಂತ್ಯವಾಗುವುದು ಸಾವಿನ ಜೊತೆಯಲ್ಲಿಯೇ…. ಪ್ರತಿಕ್ಷಣ ಅಸ್ತಿತ್ವಕ್ಕಾಗಿ ಹೋರಾಟ ಎಲ್ಲಾ ಜೀವಿಗಳ ಪಾಡು…

ಈ ಭೂಮಿಯಲ್ಲಿ ಇಲ್ಲಿರುವ ಎಲ್ಲಾ ಜೀವಿಗಳಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ. ಆದರೆ ಉಳಿದೆಲ್ಲ ಜೀವಿಗಳಿಗೆ ಹೋಲಿಸಿದರೆ ಮಾನವನ ಮೆದುಳು ಶಕ್ತಿಶಾಲಿಯಾದದ್ದು ಹಾಗೂ ವಿಕಾಸ ಹೊಂದುತ್ತಾ ಬಂದಿದೆ. ತನ್ನ ಜೀವನ ಮತ್ತಷ್ಟು ಸುಖಮಯವಾಗಿಸುವ ಆತುರದಲ್ಲಿ ಉಳಿದ ಜೀವಿಗಳ ಹಿತಾಸಕ್ತಿಯನ್ನು ಮನುಷ್ಯ ಗಣನೆಗೇ ತೆಗೆದುಕೊಳ್ಳುವುದಿಲ್ಲ…

ಭೂಮಿಯ ಎಲ್ಲಾ ಸಂಪತ್ತನ್ನು ತನ್ನ ಸ್ವಾರ್ಥಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳುವ ನರನ ಎಂದೂ ಮುಗಿಯದ ಹಪಾಹಪಿ, ಲಾಲಸೆಗೆ ಉಳಿದ ಜೀವಿಗಳು ತಮ್ಮ ನೆಲೆಯನ್ನು ಕಳೆದುಕೊಂಡು, ಅಳಿವಿನಂಚಿಗೆ ಸಾಗಿ, ಕೊನೆಗೊಮ್ಮೆ ಕಣ್ಮರೆಯಾಗಿ ಹೋಗುವುದು ದುರದೃಷ್ಟಕರ..

ಇಲ್ಲಿ ಮನುಷ್ಯನ ನಗರೀಕರಣದ ಹುಚ್ಚಿಗೆ ಕಾಡುಗಳು ಬಲಿಯಾಗಿ, ನೆಲೆ ಕಳೆದುಕೊಳ್ಳುವ ನವಿಲು, ಮಾನವ ಶೋಷಣೆಗೆ ಗುರಿಯಾಗುವ ಎಲ್ಲಾ ಜೀವಿಗಳ ಸಾಂಕೇತಿಕ ಪ್ರತಿನಿಧಿ…

ಬದುಕು ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮ ಆಯ್ಕೆ ಅಲ್ಲ ಅದು ನಮಗೊಂದು ಬಯಸದೆ ದೊರೆತ ಅದ್ಭುತ ಅವಕಾಶ. ಭೂತ ನಮ್ಮ ಅನುಭವಕ್ಕೆ ಬಂದಾಗಿದೆ… ವರ್ತಮಾನ ಅನುಭವಿಸುತ್ತಾ ಇದ್ದೇವೆ.. ಆದರೆ ಭವಿಷ್ಯ..? ತಿಳಿಯದು. ನಿಖರವಾಗಿ ಇದಮಿತ್ಥಂ ಎಂದು ಭವಿಷ್ಯವನ್ನು ನಿರ್ಣಯಿಸಿ ಹೇಳಲು ನಮ್ಮಿಂದ ಸಾಧ್ಯವಿಲ್ಲ. ಆದರೆ.. ಭೂತ ಮತ್ತು ವರ್ತಮಾನಗಳ ಸಹಾಯದಿಂದ ಭವಿಷ್ಯವನ್ನು ನಾವು ಊಹಿಸಬಲ್ಲೆವು…

ಇಲ್ಲಿ ನೋವಿದೆ ನಲಿವಿದೆ,ನಗುವಿದೆ, ಮೋಸ ವಿಶ್ವಾಸ,ಸೋಲು ಗೆಲುವು ಸುಖ,ಸಂತೋಷ, ದುಃಖವಿದೆ… ದುಃಖಕ್ಕೆ ಕಾರಣವೂ ತಿಳಿದಿದೆ. ಸಂತೋಷದ ಮೂಲವನ್ನೂ ಬಲ್ಲೆವು, ನಗುವಿನ ನೆಲೆ ಎಲ್ಲಿದೆಯೆಂದೂ ಗೊತ್ತು, ಸೋಲಿಗೆ ಶೋಕಿಸಲೂ, ಗೆಲುವನ್ನು ಸಂಭ್ರಮಿಸಲೂ ನಮ್ಮಿಂದ ಸಾಧ್ಯ.

ಆದರೂ ನಮಗೆ ಬೇಕಾದಾಗ ಈ ಸಮೀಕರಣವನ್ನು ಬಿಡಿಸಲಾರೆವು. ಆ ರಹಸ್ಯ ಸೂತ್ರ ಇರುವುದು ವಿಧಿಯ ಕೈಯಲ್ಲಿ ಮಾತ್ರ..

ನಾವೆಲ್ಲ ವಿಧಿ ಆಡಿಸಿದಂತೆ ಆಡುವ ಬೊಂಬೆಗಳು ಅಷ್ಟೇ.. ಹಾಗಾದರೆ ಬದುಕು ಮುನ್ನಡೆಯುವ ಬಗೆ ಹೇಗೆ..?

ಆದರೂ ನಿರಾಶೆ ಬೇಕಿಲ್ಲ… ಅಗಾಧ ಜೀವನೋತ್ಸಾಹ, ನಿಖರ ಗುರಿ, ಕನಸುಗಳನ್ನು ಬೆನ್ನಟ್ಟುವ ಛಲ, ಆಶಾವಾದ, ಭರವಸೆ, ಧೈರ್ಯ, ಪರಿಶ್ರಮ, ನೈತಿಕತೆಯ ಸೂತ್ರಗಳ ಮೂಲಕ ಬದುಕಿನ ಸಮೀಕರಣವನ್ನು ಯಶಸ್ವಿಯಾಗಿ ಬಿಡಿಸಬಹುದು… ಗುರಿ ತಲುಪಿ ಗೆಲ್ಲಬಹುದು..

ಆದರೆ ನಿಜವಾಗಿಯೂ ಗೆಲುವು ಇಷ್ಟು ಸುಲಭ ಸಾಧ್ಯವೇ..? ಕವಿಗಳಿಗೊಂದು ಅನುಮಾನ…

ಎರಡನೆಯ ಸಾಲು ಮೇಲಿನ ಸಂಶಯವನ್ನು ಪುಷ್ಟೀಕರಿಸುತ್ತದೆ. “ಉಳ್ಳವರ ಇಲ್ಲದವರ ನಡುವೆ ಸಲ್ಲುವುದೇನು ನವಿಲು…”

ಯಾರದು ಉಳ್ಳವರು…? ಅಧಿಕಾರದ ಮದ ತಲೆಗೇರಿಸಿಕೊಂಡವರು, ಪಟ್ಟಭದ್ರ ಹಿತಾಸಕ್ತಿಯುಳ್ಳವರು, ಮೂರು ತಲೆಮಾರು ಕುಳಿತು  ತಿಂದರೂ ಮುಗಿಯದಷ್ಟು ಸಂಪತ್ತಿನ ರಾಶಿ ಒಟ್ಟು ಮಾಡಲು ಪಣತೊಟ್ಟವರು… ನೈತಿಕತೆ, ಮಾನವೀಯತೆಯನ್ನು ಮರೆತು, ಭ್ರಷ್ಟಾಚಾರ ಅಕ್ರಮವನ್ನೇ ಉಸಿರಾಗಿಸಿಕೊಂಡವರು… ಹೀಗೆ ಪಟ್ಟಿ ಮುಂದುವರಿಯುತ್ತದೆ.

ಇನ್ನು ಉಳ್ಳವರ ಮೆರೆದಾಟ, ಹಾಗೂ ಇಲ್ಲದವರ ನಿಶ್ಚಿಂತೆಯ ನಡುವೆ ಸಲ್ಲುವುದು ಆರಕ್ಕೇರದೆ, ಮೂರಕ್ಕಿಳಿಯದೆ, ಪಡಿ ಪಾಟಲುಗಳ ಸುಳಿಯಲ್ಲಿ ಸಿಲುಕಿಕೊಂಡು ನಿಟ್ಟುಸಿರು ಬಿಡುವ ಮಧ್ಯಮವರ್ಗಕ್ಕೆ ಸೇರುವ ಅಸಹಾಯಕ ಜೀವನ…

ಒಂದು ಕಡೆ ನಾಗರಿಕರ ಸೌಲಭ್ಯಕ್ಕೋಸ್ಕರ ನಾಶವಾಗುವ ಕಾಡಿನಿಂದ ತಮ್ಮ ಆವಾಸಸ್ಥಾನವನ್ನು ಕಳೆದುಕೊಂಡು ಅಪಾಯಕ್ಕೆ ಸಿಲುಕುವ ಕಾಡುಪ್ರಾಣಿಗಳು, ಹಕ್ಕಿಗಳು…

ಮತ್ತೊಂದು ಕಡೆ ಬೇಜವಾಬ್ದಾರಿಯ, ದೂರ ದೃಷ್ಟಿಯಿಂದ ಪ್ರಭುದ್ಧವಾಗಿ ಚಿಂತಿಸಬಲ್ಲ ಶಕ್ತಿಯಿರದ ಬೌದ್ಧಿಕ ದಿವಾಳಿಗಳು

ಇನ್ನೊಂದು ಕಡೆ ಪರಿಸರ ಉಳಿಸಿ ಎಂದು ಕಿರುಚಾಡುವ ಅಧಿಕಾರ ರಹಿತ ಸ್ವಯಂ ಘೋಷಿತ ಪರಿಸರ ಪ್ರೇಮಿಗಳು…

ಮಗದೊಂದು ಕಡೆ… ನಿಜವಾಗಿಯೂ ಅಂತರಾಳದಿಂದ ಮಿಡಿಯುವ ಶುದ್ಧ ಹೃದಯಗಳ ಕ್ಷೀಣ ದನಿ…

ಈ ಎಲ್ಲಾ ಆಷಾಢಭೂತಿಗಳ, ಅಸಹಾಯಕರ ನಡುವಿನ ಗೊಂದಲದಲ್ಲಿ ನಿಜವಾಗಿಯೂ ಅರ್ಹರಿಗೆ ನ್ಯಾಯ ಸಲ್ಲುವುದೇ…?

ಮುಂದಿನ ಸಾಲು….”ಕತ್ತಲಲ್ಲಿ ಓಡುತ್ತಲೇ ಇದೆ ಕಣ್ಣು ಕಟ್ಟಿದ ಕುದುರೆ..”

ನಾವೆಲ್ಲಾ ವಿಧಿ ಆಡಿಸಿದಂತೆ ಆಡುವ ಬೊಂಬೆಗಳು ಅಷ್ಟೇ.. ಅಂತ ಅಂದುಕೊಂಡರೂ, ಹೆಜ್ಜೆ ಎತ್ತಿಡಲೇಬೇಕು. ಗೊತ್ತಿಲ್ಲದ ಹಾದಿಯಲ್ಲಿ ಬದುಕಿನ ಪಯಣವನ್ನು ಮುಂದುವರಿಸಲೇಬೇಕು.

ಮುಂದಿರುವುದು ಇರುಳು ಕವಿದ ಗಾಢಾಂಧಕಾರದ ಹಾದಿ… ಆ ದಾರಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡುವ ಕುದುರೆಗಳು ನಾವು..

ಮುಂದೆ ದುರ್ಗಮ ಪ್ರಪಾತವಿದೆಯೋ, ಎತ್ತರದ ಬೆಟ್ಟವಿದೆಯೋ, ಏರು ತಗ್ಗುಗಳಿವೆಯೋ, ಕಲ್ಲು ಮುಳ್ಳುಗಳಿವೆಯೋ, ಹೂವಿನ ಹಾಸಿಗೆ ಇದೆಯೋ…? ಒಂದು ತಿಳಿಯದು. ಹಾಗಾದರೆ ಬದುಕು ಮುನ್ನಡೆಯುವ ಬಗೆ ಹೇಗೆ..?

ಮುಂದಿರುವ ಭವಿಷ್ಯದ ಹಾದಿಯಲ್ಲಿ ಕತ್ತಲು ತುಂಬಿದೆ. ನಮಗೆ ಪ್ರತ್ಯಕ್ಷ ಗೋಚರವಾಗದು. ಅದು ನಮ್ಮ ಮಿತಿ. ನಿಜ ಒಪ್ಪಿಕೊಳ್ಳೋಣ… ಆದರೆ ಕಣ್ಣು ಕಟ್ಟಿಕೊಂಡಿರುವುದು ಏಕೆ…? ಹೇಗೂ ದಾರಿ ಕಾಣಿಸುವುದಿಲ್ಲ ಅಂದ ಮೇಲೆ ಕಣ್ಣು ಕಟ್ಟಿಕೊಳ್ಳುವ ಅಗತ್ಯವಾದರೂ ಏನು..? ಪಟ್ಟಿ ಕಟ್ಟಿಕೊಂಡರೂ ಒಂದೇ ಇಲ್ಲದಿದ್ದರೂ ಒಂದೇ ಅಲ್ವಾ..? ಈ ಪಟ್ಟಿ ಕುದುರೆಗಳೇ ಸ್ವಯಂ ಕಟ್ಟಿಕೊಂಡದ್ದಾ… ಅಲ್ಲ ಆ ಸೃಷ್ಟಿಕರ್ತ ಕಟ್ಟಿಬಿಟ್ಟದ್ದಾ..? ಹೀಗೆಲ್ಲಾ ಪ್ರಶ್ನೆಗಳು ಮನದಲ್ಲಿ ಮೂಡದಿರದು.

ಹೌದು… ಈ ಸಾಲಿನ ಪದಗಳು ಹೊಮ್ಮಿಸುವ ಭಾವದ ಬೆಳಕಿನ ಒಳಹೊಕ್ಕು ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ… ಇಲ್ಲಿ ಪಟ್ಟಿ ಕಟ್ಟಿದ್ದು ಬಾಹ್ಯ ಕಣ್ಣುಗಳಿಗಲ್ಲ. ಅಂತರಂಗದ ಒಳಗಣ್ಣಿಗೆ… ಎನ್ನುವುದು ವೇದ್ಯವಾಗುತ್ತದೆ.

ನಮ್ಮ ಅರಿವಿನ ಮೇಲೆ ಒಂದಿಷ್ಟು ಮಾಯೆಗಳ ಅಸ್ಪಷ್ಟ ಮುಸುಕು ಹಾಕಿ ಕಣ್ಣು ಕಟ್ಟಿಸಿ ಬಿಡುವ ಸೃಷ್ಟಿಕರ್ತನ ಲೀಲೆ ಒಂದೆಡೆಯಾದರೆ… ಅಳಿದುಳಿದ ದೃಷ್ಟಿಗೆ ಲಭ್ಯವಾಗುವ ಮಬ್ಬು ನೋಟಕ್ಕೆ ನಾವೇ ಸ್ವತಹ ಅಜ್ಞಾನದ ಮುಸುಕೆಳೆದುಕೊಂಡು ಕುರುಡರಾಗಿ ಬಿಡುತ್ತೇವೆ. ಕಂಡರೂ ಕಾಣದಂತೆ ನಟಿಸುವ ಜಾಣ ಕುರುಡದು.

ಕೀಲಿಕೊಟ್ಟ ನಡೆಗಳಲ್ಲಿ ಮಿಡುಕುವುದೇನು ನವಿಲು”

ಡಿ ವಿ ಗುಂಡಪ್ಪನವರು ಬರೆದ ಕಗ್ಗಗಳ ಸಾಲುಗಳನ್ನು ನೆನಪಿಸುತ್ತದೆ ಈ ಗಜಲ್ ನ ಸಾಲುಗಳು..

ಇಲ್ಲಿ ಕೀಲಿ ಯಾವುದು..? ಅದನ್ನು ಕೊಡುವವರು ಯಾರು..? ನವಿಲು ಮಿಡುಕುವುದು ಏಕೆ…?

ಈ ಪ್ರಕೃತಿಯಲ್ಲಿ ಒಳಗೆ ಯಾವುದು..? ಹೊರಗೆ ಯಾವುದು..? ಹುಡುಕಾಡುವುದು ಮೂರ್ಖತನ, ವ್ಯರ್ಥ ಪ್ರಯತ್ನ… ನಿಸರ್ಗದಲ್ಲಿ ಎಲ್ಲವೂ ಒಂದೇ… ತನ್ನ ಮಡಿಲಲ್ಲಿ ಸ್ವಚ್ಛಂದವಾಗಿ ವಿಹರಿಸುವ ಸ್ವಾತಂತ್ರ್ಯವನ್ನು ಪ್ರಕೃತಿ ಎಲ್ಲಾ ಜೀವಿಗಳಿಗೂ ಸಮಾನವಾಗಿ ನೀಡಿದೆ..

ಆದರೆ ವಿಪರ್ಯಾಸವೆಂದರೆ, ತಾನು,ಎಲ್ಲವೂ ತನ್ನದು ಮಾತ್ರ ಎನ್ನುವ ಮನುಷ್ಯನ ಭ್ರಮೆ ಎಲ್ಲದಕ್ಕೂ ಬೇಲಿಯೆಳೆಯುವ ಪ್ರಯತ್ನ ಮಾಡುತ್ತದೆ. ಸ್ವಾರ್ಥ, ಅಹಂಕಾರದಿಂದ  ಇತರ ಜೀವಿಗಳ ಆವಾಸಸ್ಥಾನವನ್ನು ಕಿತ್ತುಕೊಂಡಿರುವುದು ಮಾತ್ರವಲ್ಲ ಅವುಗಳ ವಿಹಾರ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಿದೆ.

ಕಾಡನ್ನು ಅತಿಕ್ರಮಿಸಿ, ಅಂಚಿಗೊಂದು ಗೆರೆ ಎಳೆದು, ಗೆರೆಯೊಳಗೆ ಬಂಧಿಸಿ, ತಾನು ಹೇಳಿದಂತೆ ಕುಣಿಸುವ ಮನುಷ್ಯನ ಧಾರ್ಷ್ಟ್ಯಕ್ಕೆ ತನ್ನ ಹಕ್ಕುಗಳನ್ನು ಮೊಟಕುಗೊಳಿಸಲ್ಪಟ್ಟು ಬಂಧನಕ್ಕೊಗಾಗುವ ನವಿಲು ಚಡಪಡಿಸಿ ಮಿಡುಕದೆ ಇದ್ದೀತೆ…?

ಕೀ ಕೊಟ್ಟು ತಿರುಗಿಸುವ ಗಡಿಯಾರದ ಮುಳ್ಳುಗಳು ಗಡಿಯಾರದ ಒಳಗಿನ ಪರಿಮಿತಿಯಲ್ಲಿ ತಿರುಗುವ ಹಾಗೆ, ಪಂಜರದೊಳಗಿನ ಬದುಕಿನ ಹಾಗೆ… ಕೀಲಿ ಹಾಕಿ ತಿರುಗಿಸಿದರೆ ಮಾತ್ರ ಕುಣಿಯುವ ಬೊಂಬೆಗಳಂತೆ…ಸೀಮಿತ ಸ್ವಾತಂತ್ರ್ಯ ಸಹಜ ಸಂತೋಷವನ್ನು ನೀಡದೆ, ಮಾನಸಿಕವಾಗಿ ದುರ್ಬಲವಾಗಿಸಬಹುದು.

ಮೊಗ್ಗು ತಾನಾಗಿ ಅರಳಿ ಹೂವಾಗಬೇಕು. ಅಲ್ಲದೆ ಬಲವಂತವಾಗಿ ಅರಳಿಸಲು ಹೋಗಬಾರದು.”

ಮೇಲಿನ ಅಭಿಪ್ರಾಯವನ್ನು ಮತ್ತಷ್ಟು ಬಲಪಡಿಸುವಂತದ್ದು ನಂತರದ ಸಾಲುಗಳು..

ಮೋಡವೇ ಇಲ್ಲದ ಬಾನು ಮಳೆ ಬರುವುದೇನು

ಬಣ್ಣಬಣ್ಣದ ಕಾರಂಜಿ ಕಂಡು ಕುಣಿವುದೇನು ನವಿಲು”

ಹೌದು… ಮಳೆ ಸುಮ್ಮನೆ ಬರುವುದಿಲ್ಲ. ಅಲ್ಲೊಂದು ಪ್ರಕೃತಿ ಸಹಜ ವಿದ್ಯಮಾನ ಜರಗಬೇಕು… ಬಿಸಿಲ ಝಳಕ್ಕೆ ನೀರು ಆವಿಯಾಗಬೇಕು, ಆವಿಯಾದ ನೀರು ವಾತಾವರಣ ಸೇರಿ ಅಲ್ಲಿ ಮೋಡ ಕಟ್ಟಬೇಕು.. ಅನಂತರ ಮೋಡ ತಂಪಾಗಿ ಪುನಃ ಇಳೆಗೆ ಧಾರಾಕಾರವಾಗಿ ಮಳೆಯ ಅಭಿಷೇಕವಾಗಬೇಕು. ಸುರಿದ ಮಳೆಗೆ ನೆಲ ಮಿದುವಾಗಬೇಕು. ಆಗ ಧಗೆಯಾರಿದ ಭೂಮಿಯ ಒಡಲಲ್ಲಿ ಹಸಿರಿನ ಚೆಲುವು ತಾನಾಗೇ ಪುಟಿದೇಳುತ್ತದೆ.

ಹದವಾದ ಮಳೆ-ಬಿಸಿಲು ಸೇರಿದ ಆಹ್ಲಾದಕರ ವಾತಾವರಣದಲ್ಲಿ ಕಾಮನಬಿಲ್ಲು ಬಾನಲ್ಲಿ ಮೂಡಿದರೆ ಪರಿಸರದಲ್ಲಿ ಅದೇನೋ ಸಂಭ್ರಮ… ಸುಳಿವ ತಂಗಾಳಿ, ಹಸಿರೇರಿದ ಪ್ರಕೃತಿ… ಮನದೊಳಗೊಂದು ನವಿರಾದ ಭಾವ ಸಂಚಲನಕ್ಕೆ ಪ್ರೇರಣೆ… ಜೀವಕ್ಕೆ ಸಂಗಾತಿಯನ್ನು ತನ್ನೆಡೆಗೆ ಸೆಳೆಯುವ ತವಕ.. ನವಿಲು ಖುಷಿಯಿಂದ ತನ್ನ ಸುಂದರ ಗರಿ ಬಿಚ್ಚಿ ನಾಟ್ಯವಾಡತೊಡಗುತ್ತದೆ…

ಆದರೆ ಬಾನಲ್ಲಿ ಮೋಡವೇ ಇಲ್ಲದೆ ಹೋದರೆ..? ಇಳೆಗೆ ಮಳೆ ಎಲ್ಲಿಂದ ಸುರಿದೀತು? ಬಣ್ಣ ಬಣ್ಣದ ನೀರು ಚಿಮ್ಮಿಸುವ ಮನುಷ್ಯ ನಿರ್ಮಿತ ಕೃತಕ ಕಾರಂಜಿಗಳು ಪ್ರಕೃತಿಯ ಸಹಜ ಸೌಂದರ್ಯಕ್ಕೆ ಸ್ಪಂದಿಸುವ ಜೀವಗಳ ಮನವನ್ನು ಅರಳಿಸಬಲ್ಲುದೇ..? ಮನಸೆಳೆವ ನಾಟ್ಯಕ್ಕೆ ಸ್ಪೂರ್ತಿ ನೀಡುವುದೇ..?

ಸುಂದರ ಸೃಷ್ಟಿಯನ್ನು ಕುಲಗೆಡಿಸಿ ಬಿಟ್ಟಿದ್ದಾನೆ ಮಾನವ… ಸಹಜತೆಯಲ್ಲಿ ಸೌಂದರ್ಯವಿದೆ, ಸಂತೋಷವಿದೆ. ತಾನೂ ಈ ಪ್ರಕೃತಿಯ ಒಂದು ಭಾಗವಷ್ಟೇ ಎಂಬುದನ್ನು ಮರೆತಿದ್ದಾನೆ. ತನ್ನ ಅಪರಿಮಿತ ಬುದ್ಧಿಶಕ್ತಿಯ ಬಲದಿಂದ ಪ್ರಕೃತಿಗೇ ಸಡ್ಡು ಹೊಡೆದು ನಿಲ್ಲುವ ಭಂಡತನ ಆತನದು..

ಅದೇನೇ ಇದ್ದರೂ ಕ್ಷಣಮಾತ್ರದಲ್ಲಿ ಮನುಷ್ಯನ ಅಹಂ ನುಚ್ಚು ನೂರು ಮಾಡಬಲ್ಲ ಪ್ರಕೃತಿಯ ಶಕ್ತಿಗೆ ಸರಿಸಾಟಿ ಇಲ್ಲ ಎಂಬುದು ಅದೆಷ್ಟೋ ಬಾರಿ ಸಾಬೀತಾಗಿ ಹೋದರೂ ನಾವು ಬುದ್ಧಿ ಕಲಿಯಲಾರೆವು. ವಿವೇಕದಿಂದ ವರ್ತಿಸಲಾರೆವು.

ಅದೋ, ಯಾರದೋ ತಾಳಕ್ಕೆ ಕುಣಿವ ಗೆಜ್ಜೆಯ ಸದ್ದು

ಕನ್ನಡಿಯಲ್ಲಿ ಬಿಂಬ ಕಂಡು ನಿಲ್ಲುವುದೇನು ನವಿಲು”

ಕುಣಿತ ಲಯಬದ್ಧವಾಗಿರಬೇಕಾದರೆ ತಾಳದ ಜೊತೆ ಬೇಕೇ ಬೇಕು. ಕುಣಿಯುವವರು ಒಬ್ಬರಾದರೆ, ತಾಳ ಹಾಕುವವರು ಇನ್ನೊಬ್ಬರು.. ಯಾರದೋ ತಾಳಕ್ಕೆ ಇನ್ಯಾರದ್ದೋ ನಾಟ್ಯ..

ಆದರೆ ಇದಿಷ್ಟೇ ಅಲ್ಲ.. ಈ ಸಾಲು ಇದರಾಚೆಗೂ ಏನನ್ನೋ ಹೇಳಲು ಬಯಸುತ್ತಿದೆ ಎನ್ನುವ ಭಾವ… ಯಾರದು ತಾಳ..? ಯಾವುದದು ಗೆಜ್ಜೆ ಕಟ್ಟಿಕೊಂಡು ಕುಣಿಯುವ ಹೆಜ್ಜೆಗಳು…?

ಸ್ವಯಂ ಯೋಚನಾ ಶಕ್ತಿ ಇಲ್ಲದೆ, ಸ್ವಹಿತಾಸಕ್ತಿಗಳನ್ನು ಪೂರೈಸಿಕೊಳ್ಳುವುದಕ್ಕೋಸ್ಕರವೋ.‌‌ ಕಾರಣ ಏನೇ ಇರಲಿ… ಇತರರು ಕೊಡುವ ಸಲಹೆಗಳನ್ನು ಅಥವಾ ಆದೇಶಗಳನ್ನು ಹಿಂದೂ ಮುಂದು ಯೋಚಿಸದೆ ಜಾರಿಗೆ ತರುವ ಅವಿವೇಕತನಕ್ಕೆ ಈ ಸಾಲುಗಳ ಮೂಲಕ ಕವಿಗಳು ನಯವಾಗಿ ಬಾರಿಸಿದಂತಿದೆ.

ಸಧ್ಯ ಸಮಾಜವನ್ನೂ,  ವ್ಯವಸ್ಥೆಯನ್ನೂ ಸಂಪೂರ್ಣವಾಗಿ ಆವರಿಸಿಕೊಂಡಿದೆ ಈ ತಾಳಕ್ಕೆ ತಕ್ಕ ಹಾಗೆ ಕುಣಿಯುವ ಚಾಳಿ… ಕೆಲವೊಮ್ಮೆ ಅಧಿಕಾರಶಾಹಿಯ ಆದೇಶಕ್ಕೆ ತಲೆಬಾಗಲೇಬೇಕಾದ ಹೊಟ್ಟೆಪಾಡಿನ ಅಸಹಾಯಕತೆಯೂ ಇರಬಹುದು.

ಏನೇ ಇದ್ದರೂ ಸ್ವಯಂ ಆತ್ಮ ವಿಮರ್ಶೆ ಬಹಳ ಮುಖ್ಯ ಎನ್ನುತ್ತದೆ “ಕನ್ನಡಿಯಲ್ಲಿ ಬಿಂಬ ಕಂಡು ನಿಲ್ಲುವುದೇನು ನವಿಲು” ಎಂಬ ಸಾಲು..

ಕನ್ನಡಿಯಲ್ಲಿ ಕಾಣುವುದು ನಮ್ಮದೇ ಬಿಂಬ… ಕವಿ ದ.ರಾ ಬೇಂದ್ರೆ ಅವರು ಹೇಳುವಂತೆ…

ನಿನ್ನೊಳಗೆ ನೀ ಹೊಕ್ಕು

ನಿನ್ನನೇ ನೀ ಕಂಡು

ನೀನೇ ನೀನಾಗು ಗೆಳೆಯ”

ನಾನು’ ಎಂಬ ಪದದ ಅರ್ಥವ್ಯಾಪ್ತಿ ತುಂಬ ವಿಶಾಲವಾದದ್ದು.  ‘ನಾನು’ ಎಂದರೆ ನಿಜವಾಗಿಯೂ ಯಾರು? ನಮ್ಮ ಅಂತರಂಗದ ಪ್ರಜ್ಞೆಯೋ…  ಬಹಿರಂಗದಲ್ಲಿ ಕಾಣಸಿಗುವ ನಮ್ಮ ಗುಣಸ್ವಭಾವ..? ನಮ್ಮ ಬಾಹ್ಯ ದೈಹಿಕ ರೂಪವೋ… ? ಸಂದರ್ಭಕ್ಕೆ ಸರಿಯಾಗಿ ಬದಲಾಗುತ್ತ ಹೋಗುವ ನಮ್ಮ ಅನಿಶ್ಚಿತ ವ್ಯಕ್ತಿತ್ವವೋ….? ಅಥವಾ ಇವೆಲ್ಲದರ ಒಟ್ಟು ಮೊತ್ತವೋ… ಏನು ಬೇಕಾದರೂ ಆಗಿರಬಹುದು.

ಕೆಲವೊಂದು ಪರಿಸ್ಥಿತಿಗಳು ನಮ್ಮ ಮೂಲಭೂತ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿ ನಾವು ನಾವಾಗಿ ಇರದೇ ಇನ್ನೇನೋ  ಆಗಿ ವರ್ತಿಸುವಂತೆ ಮಾಡುವುದನ್ನೂ  ಗಮನಿಸಬಹುದು.

ನಮ್ಮೊಳಗಿನ ವಿಚಾರಗಳು, ಅನುಭವಗಳು, ಗುಣಸ್ವಭಾವ ಗಳು, ಮುಂತಾದುವುಗಳನ್ವು ಅಂತರಂಗದ ಒಳಗೆ ಹೊಕ್ಕು  ಪ್ರಾಮಾಣಿಕವಾಗಿ ತಿಳಿಯಲು ಪ್ರಯತ್ನಿಸಿದರೆ, ನಮ್ಮ ನಿಜಸ್ವರೂಪದ ‘ನಾನು’ ಯಾರು ಎಂದು ಅರಿವಾಗಬಹುದು.

ಹಾಗೆ ಜ್ಞಾನೋದಯವಾದ ಗಳಿಗೆಯಲ್ಲಿ ಬೇರೆಯವರ ತಾಳಕ್ಕೆ ಸರಿಯಾಗಿ ಕುಣಿಯುವ ‘ನಾನು’ವಿನ ಹೆಜ್ಜೆಗಳ ಸದ್ದು ನಿಲ್ಲಬಹುದು…

ಗರಿಯೊಂದನ್ನು ಹುಡುಹುಡುಕಿ ಅಲೆದಿದ್ದಾನೆ ಜಂಗಮ

ಆರ್ತತೆಯಲ್ಲಿ ಚಾಚಿದೆ ಎದೆ ದೊರೆವುದೇನು ನವಿಲು”

ಈ ಸಾಲುಗಳನ್ನು ಓದಿದಾಗ “ಮಾಡಿದ್ದುಣ್ಣೋ ಮಹಾರಾಯ” ಗಾದೆ ನೆನಪಾಗದಿರದು

ಹೌದು… ಕಾಲ ಬದಲಾಗಿದೆ. ಪ್ರಕೃತಿಯ ಮೇಲಿನ ದೌರ್ಜನ್ಯ ಮೇರೆ ಮೀರುತ್ತಿದೆ. ಆಗಸಕ್ಕೆ ಕಣ್ಣು ಹಾಯಿಸುವ ನವಿಲಿಗೆ ಬಾನಿನಲ್ಲಿ ಮಳೆ ಸುರಿಸಬಲ್ಲ ಮೋಡಗಳು ಕಾಣುತ್ತಿಲ್ಲ… ಅದೀಗ ಮೊದಲಿನಂತೆ ಸಂಭ್ರಮದಿಂದ ಕುಣಿಯದು…

ಆದರೆ ಮನುಷ್ಯನಿಗೆ ಅದರ ಕುಣಿತದ ನೆನಪಿದೆ… ಮನಮೋಹಕ ನೃತ್ಯದೊಂದಿಗೆ ಅರಳಿಕೊಳ್ಳುವ ಅದರ ಗರಿಗಳ ಅಂದ ಚಂದವನ್ನು ಅವನಿನ್ನೂ ಮರೆತಿಲ್ಲ… ಮತ್ತೆ ಮತ್ತೆ ಆ ಸುಂದರ ನೋಟವನ್ನೂ, ಖುಷಿಯನ್ನೂ ತನ್ನದಾಗಿಸಿಕೊಳ್ಳುವ ಆಸೆಯವನಿಗೆ…

ಈಡೇರಿತೇ ಅವನಾಸೆ..? ಪ್ರಕೃತಿ ಮತ್ತೆ ಮೊದಲಿನಂತೆ ಶುದ್ಧವಾಗಿ ನಳನಳಿಸಬಹುದೇ…? ನವಿಲು ಮತ್ತೆ ಕುಣಿಯಬಹುದೆ..?

ಅದಕ್ಕಾಗಿಯೇ ಗತಕಾಲದಲ್ಲಿ ಎಂದೋ ಬಿದ್ದಿರಬಹುದಾದ ಅದರ ಗರಿಯೊಂದನ್ನು ಹುಡುಕಿ ಹೊರಡುತ್ತಾನೆ. ಮನದಂಗಳದಲ್ಲಿ ಮುಸುಕಾಗಿರುವ ನೆನಪಿನ ತುಣುಕುಗಳನ್ನು ಒಟ್ಟು ಮಾಡಿದವನ ಅಂತರಂಗ ಆರ್ದ್ರತೆಯಿಂದ  ಗರಿಗಾಗಿ ಮೊರೆ ಇಡುತ್ತದೆ…

ಮರಳಿ ದೊರಕೀತೇ ಅವನಿಗದು..? ಗೊತ್ತಿಲ್ಲ. ಭವಿಷ್ಯವನ್ನು ಕಂಡವರಾರು..? ಅನಿಶ್ಚಿತತೆಯಲ್ಲಿಯೇ ಕೊನೆಯಾಗುತ್ತದೆ ಗಜಲ್.


 ಸಂಧ್ಯಾ ಭಟ್

ಲೇಖಕರ ಕಿರುಪರಿಚಯ

ಶ್ರೀಮತಿ ಸಂಧ್ಯಾ ಭಟ್
ಗೃಹಿಣಿ
ಮನೆ.. ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕಿನ ಅರಂತಾಡಿ. ಪ್ರಸ್ತುತ ವಾಸ ಮಂಗಳೂರು.

ಹಾಗೆಯೇ ಕವನ, ಸಣ್ಣ ಕಥೆ, ಹಾಗೂ ಲೇಖನಗಳನ್ನು ಬರೆಯುವ ಹವ್ಯಾಸ..

ಪ್ರಸ್ತುತ ‘ಮೊಮ್ಸ್ ಪ್ರೆಸ್ಸೋ ಕನ್ನಡ’ದಲ್ಲಿ ಬ್ಲಾಗರ್.. ಹಾಗೆಯೇ ‘ಪ್ರತಿಲಿಪಿ ಕನ್ನಡ’ದಲ್ಲಿಯೂ ಕಥೆಗಳನ್ನು ಬರೆದು ಪ್ರಕಟಿಸುತ್ತಿದ್ದೇನೆ… ಇದಲ್ಲದೆ ಮುಖಪುಟದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಗ್ರೂಪ್ಗಳಲ್ಲಿ, ವಾಟ್ಸಪ್ ಬಳಗಗಳಲ್ಲಿಯೂ ಕವನ ಕಥೆ ಬರಹ ಇತ್ಯಾದಿ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದು..


ಡಾ. ಗೋವಿಂದ ಹೆಗಡೆಯವರ ಕಿರುಪರಿಚಯ

    ಎಂ ಬಿ ಬಿ ಎಸ್, ಡಿ. ಎ., ಪದವೀಧರ. ವೃತ್ತಿಯಿಂದ ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ.

     ಕಾವ್ಯ, ಸಾಹಿತ್ಯಗಳಲ್ಲಿ ಒಲವು.

ಕವಿತೆ, ಕಥೆ,ಲೇಖನ ,ಅಂಕಣ ಬರಹ, ಅನುವಾದಗಳಲ್ಲಿ ವ್ಯವಸಾಯ.

ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಇತ್ತೀಚೆಗೆ ತನಗ ಎಂಬ ಹೊಸ ಕಿರುಗವನಗಳ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ ಶ್ರೇಯಸ್ಸು ಇವರದು.

    ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನದ ಕವಿಗೋಷ್ಠಿಯೂ ಸೇರಿದಂತೆ,ಹಲವಾರು ವೇದಿಕೆಗಳಿಂದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ.

ಪ್ರಾಚಾರ್ಯ ಎಚ್ಚೆಸ್ಕೆ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ  ಎಚ್ಚೆಸ್ಕೆ ಬೆಳಕು ಕಾರ್ಯಕ್ರಮದ ಕವಿಗೋಷ್ಠಿ ಸೇರಿದಂತೆ ಹಲವು ಕವಿಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ ಗೌರವ ಇವರದು.

      ಪ್ರಕಟಿತ ಕವನ ಸಂಕಲನ ಕನಸು ಕೋಳಿಯ ಕತ್ತುಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಪ್ರೋತ್ಸಾಹ ಯೋಜನೆಯಡಿಯಲ್ಲಿ ಪುರಸ್ಕೃತವಾಗಿದೆ. ಇತ್ತೀಚಿಗೆ ಎರಡನೇ ಕವನ ಸಂಕಲನ ಪೇಟೆ ಬೀದಿಯ ತೇರು ಲೋಕಾರ್ಪಣೆಗೊಂಡಿದೆ.

ಸುವರ್ಣ ಕಾವ್ಯ‘,’ಕವಿತೆ-೨೦೧೯,’ಮತ್ತೆ ಬಂತು ಶ್ರಾವಣಾ‘, ‘ಪಾರಿಜಾತ ಪರಿಮೊದಲಾದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಇವರ ಕವನಗಳು ಸೇರ್ಪಡೆಯಾಗಿವೆ. ಹಲವು ಸಂಕಲನಗಳಲ್ಲಿ ಆಹ್ವಾನಿತ ಲೇಖನಗಳು ಪ್ರಕಟವಾಗಿವೆ.

      ಕವಿತೆ,ಕಥೆ,ಲೇಖನಗಳು ಹಲವಾರು ಪತ್ರಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾಗಿವೆ; ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿವೆ.

  ಹಲವಾರು ಹಿರಿ-ಕಿರಿಯ ಕವಿ-ಲೇಖಕರ ಆತ್ಮೀಯ ಒಡನಾಟವನ್ನು ಹೊಂದಿರುವ ಡಾ.ಹೆಗಡೆ, ಪ್ರತಿಷ್ಠಿತ ಕಾವ್ಯ ಕೇಳಿಎಂಬ ವಾಟ್ಸಾಪ್ ಗುಂಪಿನ ಸ್ಥಾಪಕ ಅಡ್ಮಿನ್. ನಮ್ಮ ಪ್ರೀತಿಯ ಗಜಲ್ಗುಂಪಿನ ಮೂಲಕ ಹಲವಾರು ಗಜಲ್ ಪ್ರತಿಭೆಗಳು ಹೊರಹೊಮ್ಮಲು ಕಾರಣರಾಗಿದ್ದಾರೆ.

    ಇತ್ತೀಚೆಗೆ ಅಂತರ್ಜಾಲ ಪತ್ರಿಕೆ ನಸುಕು.ಕಾಮ್ ನ ಸಂಪಾದಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಹತ್ತಕ್ಕೂ ಹೆಚ್ಚು  ಕವನ/ ಗಜಲ್ ಸಂಕಲನಗಳಿಗೆ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿ, ಆಶಯ ಮಾತುಗಳ ಮೂಲಕ ಇನ್ನೂ ಕೆಲವು ಸಹಲೇಖಕರ ಬೆನ್ನುತಟ್ಟಿದ್ದಾರೆ. ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆಯ ವೈದ್ಯ ಬರಹಗಾರರ ಬಳಗ ಹೊರತರುತ್ತಿರುವ

 ವೈದ್ಯ ಸಂಪದ ದ್ವೈಮಾಸಿಕ ಡಿಜಿಟಲ್ ಪತ್ರಿಕೆಯ ಕಾವ್ಯ ಸಂಪದ ವಿಭಾಗದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ


Leave a Reply

Back To Top