ಅಂಕಣ ಸಂಗಾತಿ

ಚಂದ್ರಾವತಿ ಬಡ್ಡಡ್ಕ ಅವರ ರಸಭರಿತ ಅನುಭವಗಳ ಕತೆ

ನೀವು ಕಂಡಿರುವಿರೇ ಇಂತದ್ದೊಂದು ಸಮ್ಮಾನವಾ……?

ಕನ್ನಡ ನಾಡು ಕಂಡ ಶ್ರೇಷ್ಠ ಕವಿವರ್ಯರಲ್ಲಿ ಒಬ್ಬರಾದ ಶ್ರೀಯುತ ಸುಬ್ರಾಯ ಚೊಕ್ಕಾಡಿಯವರನ್ನು ಅವರ ಅಭಿಮಾನಿ-ಶಿಷ್ಯ ಗಢಣವು ಸೆಪ್ಟೆಂಬರ್ ನಾಲ್ಕರಂದು ‘ಅರೆದು ಕುಡಿಯಿತು’! 83 ತುಂಬಿ 84 ಕ್ಕೆ ಕಾಲಿಟ್ಟ ಈ ಬಂಟಮಲೆಯ ತಪ್ಪಲಿನ ತುಂಟನಿಗೆ ಅಪರೂಪದ ಖುಷಿ ಕೊಟ್ಟು, ಗೌರವಿಸಿ, ಅಭಿನಂದಿಸಿ ಅವರೊಡನೆ ಒಡನಾಡಬೇಕೆಂದು ಕವಿಯ ಊರಿಗೆ ಧಾಂಗುಡಿ ಇಟ್ಟಿದ್ದು ಐಲೇಸಾ ತಂಡ.

ಹಾರ ತುರಾಯಿಗಳ ಗೋಜಿಲ್ಲದ ಭೀಕರ ಭಾಷಣಗಳಿಲ್ಲದ ಒಂದು ವಿಶಿಷ್ಠವಾದ ವಿಭಿನ್ನವಾದ ಕಾರ್ಯಕ್ರಮವನ್ನು ಕವಿಮನೆಯಂಗಳದಲ್ಲಿ ನಡೆಸಿ ಕವಿಮನಕ್ಕೆ ಮುದವೀಯಬೇಕೆಂದು ಉದಯರಾಗ ಹಾಡಲು ಸಮಾನ ಮನಸ್ಕರ ತಂಡ ಗುಂಪುಕಟ್ಟಿಕೊಂಡು ಸುಳ್ಯಕ್ಕೆ ಬಂದು ಸೆಪ್ಟೆಂಬರ್ ನಾಲ್ಕರ ಮುಂಜಾನೆ ಚೊಕ್ಕಾಡಿಯತ್ತ ಹೊರಟಿತು. ಚುಮುಚುಮು ಬೆಳಗಿನ ಸೂರ್ಯನ ಹೊಂಬಣ್ಣದ ಕಿರಣಗಳು ಭೂರಮೆಯನ್ನು ಸ್ಪರ್ಷಿಸುವ ಹೊತ್ತಲ್ಲಿ ಕೆಲವು ಕಾರುಗಳು ಚೊಕ್ಕಾಡಿಯ ಅಂಗಳಕ್ಕೆ ಲಗ್ಗೆ ಇಟ್ಟಿದ್ದವು. ಕವಿಗಳನ್ನು ಸಂತಸಪಡಿಸುವುದು ಮತ್ತು ಪ್ಲೆಸೆಂಟ್ ಸರ್‌ಪ್ರೈಸ್ ಪ್ಲಸ್ ಕೆಲವೊಂದು ಪ್ರೈಸ್‌ಗಳನ್ನು ಕೊಡುವುದು ಕವಿವರ್ಯರ ಶಿಷ್ಯೋತ್ತಮರ ಗುರಿಯಾಗಿದ್ದಿತು.

ಐಲೇಸಾದವರದ್ದು ನಿಶ್ಚಿತ ಕಾರ್ಯಕ್ರಮವಿದ್ದರೂ, ಮಳೆರಾಯನ ಅನಿಶ್ಚಿತ ಆಗಮನದ ಹಿನ್ನೆಲೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಸುಳ್ಯದ ಹಳೆಗೇಟಿನಲ್ಲಿರುವ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸೀಮಿತ ಸಭಿಕರ ಸಮಕ್ಷಮದಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕವಿಗಳೊಂದಿಗೆ ಸಂವಾದ, ನಾಟಕ ಪುಸ್ತಕ ಬಿಡುಗಡೆ, ಹಾಡುಗಳ ಬಿಡುಗಡೆ, ಕವಿವರ್ಯರಿಗೆ ಅವರ ಆಪ್ತರು ಕಳುಹಿಸಿದ ಸಂದೇಶಗಳ ಬಿತ್ತರ….. ಮುಂತಾದ ಒಳಕಾರ್ಯಕ್ರಮಗಳೂ ಇದ್ದವು. ರಂಗಮಾಂತ್ರಿಕ ಜೀವನ್ ರಾಂ ಸುಳ್ಯ ಅವರ ಸರ್ವಸಹಕಾರದಿಂದ ಎಲ್ಲ ಕಾರ್ಯಕ್ರಮಗಳು ಒಪ್ಪವಾಗಿ ನೆರವೇರಿದವು.

ನಮಿತಾ ಅನಂತ್ ಅವರು ನವರಸಗಳ ಭಾವಾಭಿನಯ ಪ್ರಸ್ತುತಪಡಿಸಿ ಎಲ್ಲರ ಮನಗೆದ್ದರು. ಪೇತ್ರಿ ವಿಶ್ವನಾಥ ಶೆಟ್ಟಿಯವರ ತ್ಯಾಂಪರನ ಡೋಲು ಕತೆಯನ್ನು ಆಧರಿಸಿದ ರೂಪುಗೊಳಿಸಿದ ತುಳು ನಾಟಕ ಗಿಡ್ಡಿ, ಸುಬ್ರಾಯ ಚೊಕ್ಕಾಡಿಯವರ ಹಾಡಿನ ಆಡಿಯೋ ಆಲ್ಬಂ ಬಿಡುಗಡೆ, ಶಾಂತರಾಂ ವಿ ಶೆಟ್ಟಿ ಅವರ ಮಣ್ಣ ಬಾಜನ ಕವಿತೆಯ ಅರೆಭಾಷೆ ಅವತರಣಿಕೆ,  ಹಾಡು ಬಿಡುಗಡೆ, ಅರೆಭಾಷೆಯಲ್ಲಿ ಅದರ ಭಾವಾನುವಾದದ ವಿವರಣೆ, ಆಗಮಿಸಿದ ಚೊಕ್ಕಾಡಿಯವರ ಆಪ್ತರ ಅಭಿಪ್ರಾಯ, ಶುಭಹಾರೈಕೆಗಳು ಹೀಗೆ ಬೇರೆಬೇರೆ ಬಣ್ಣಗಳಿಂದ ರಂಗುರಂಗಾಗಿತ್ತು ರಂಗಮನೆ.

ಚೊಕ್ಕಾಡಿಯವರಿಗೆ ಕಾಫಿ ಇಷ್ಟವೆಂದು ಕಾಪಿಪುಡಿ, ಕಾಪಿಫಿಲ್ಟರ್ ಕೊಟ್ಟು ಮುಖವರಳಿಸಿದರು. ಕವಿಮನ ಕಾವ್ಯವನ ರೂಪಿಸುವ ನಿಟ್ಟಿನಲ್ಲಿ ಪ್ರಕೃತಿ ಕವಿಗೆ ವಿವಿಧ ಗಿಡಗಳನ್ನಿತ್ತರು. ಕೆಂದಾಳೆ ಸಸಿಯನ್ನಿತ್ತರು. ಕೆಂದಾಳೆಯ ಗೊಂಚಲನ್ನು ಕವಿಗರ್ಪಿಸಿದರು. ಮಧ್ಯದಲ್ಲಿ ಒಂದು ಪಂಚೆ-ಶರಟೂ ಇರಲಿ ಎಂದು ಅದನ್ನೂ ಸೇರಿಸಿದರು. ಲೀಫ್ ಆರ್ಟ್ (ಅಶ್ವತ್ಥದ ಎಲೆಯಲ್ಲಿ ಚಿತ್ತಾರ) ಕಲಾವಿದ ಶಶಿ ಅಡ್ಕಾರ್ ಬಿಡಿಸಿದ ಕವಿಗಳ ಸುಂದರ ಚಿತ್ರವನ್ನು ಪ್ರದರ್ಶಿಸಿ, ಅರ್ಪಿಸಿದರು. ಜೇ ಸಾಲ್ಯಾನ್ ಅವರು ಬಿಡಿಸಿದ ಕವಿದಂಪತಿಗಳ ಕ್ರೆಯಾನ್ ಚಿತ್ರ, ದಂಪತಿಗಳ ಚಂದದ ಫೋಟೋ ಇವೆಲ್ಲವುಗಳನ್ನು ಒಂದೊಂದರಂತೆ ಕಾರ್ಯಕ್ರಮದ ಮಧ್ಯ ಮಧ್ಯೆ ಅಚ್ಚರಿಯಂತೆ, ಬಂದಿರುವ ಅತಿಥಿಗಳ ಮೂಲಕ ಒಪ್ಪಿಸಲಾಯಿತು. ನವಿರು ಹಾಸ್ಯದ ಪ್ರತಿಕ್ರಿಯೆ ಕವಿವರ್ಯರಿಂದ ಆಗಾಗ ವ್ಯಕ್ತವಾಗುತ್ತಿತ್ತು. ‘ಮುನಿಸು ಕವಿ’ಗಳಿಗೆ ಇಷ್ಟೊಂದು ಉಡುಗೊರೆಗಳ ಸಮರ್ಪಣೆ ಆಗುತ್ತಿರುವಾಗ ತನಗೇನಿಲ್ಲವೇ ಎಂಬುದಾಗಿ ಅವರ ‘ಮುಗುದೆ’ ಮುನಿಯಬಾರದೆಂದು ಮುತ್ತೈದೆಗೆ ಬೇಕಿರುವ ಸಾಧನಗಳನ್ನೊಳಗೊಂಡ ಉಡುಗೊರೆಯ ಪೊಟ್ಟಣವನ್ನು ಕವಿವರ್ಯರ ಪತ್ನಿಗೂ ಅರ್ಪಿಸಲಾಯಿತು.

ಚೊಕ್ಕಾಡಿಯವರು ಬಾಲ್ಯದಲ್ಲಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಮಧ್ಯಾಹ್ನ ಊಟವಿಲ್ಲದೆ ಬರಿ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡಿದ್ದ ದಿನಗಳಿದ್ದುವಂತೆ. ಕೆಲವೊಮ್ಮೆ ಅದೂ ಇಲ್ಲದೆ ನಿರಾಹಾರಿಯಾಗಿ. ಅದರ ಜ್ಞಾಪಕಾರ್ಥ ಅವರಿಗೆ ಮಣ್ಣಿನ ಹೂಜಿಯೊಂದನ್ನು ಉಡುಗೊರಿಸಲಾಯಿತು. ಇದಕ್ಕಾಗಿ ಅವರು ಹಿರಿಯ ಸಾಹಿತಿ ವೈವಿ ಗುಂಡೂರಾವ್ ಅವರಿಂದ ಹೂಜಿ ಮಸ್ತಾನ್ ಎಂದು ಕರೆಸಿಕೊಂಡು ನಗಿಸಿದ್ದಾಯ್ತು.

ಗುಂಡೂರಾಯರು ತಮ್ಮ ಮಾತಿನಲ್ಲಿ ಚೊಕ್ಕಾಡಿಯವರು ವಿವಿಧ ಪುಸ್ತಕಗಳಿಗೆ ಬರೆದಿರುವ ಮುನ್ನುಡಿಯನ್ನು ಪ್ರಸ್ತಾಪಿಸುತ್ತಾ, ಸಚಿನ್ ತೆಂಡೂಲ್ಕರ್ ರನ್ ಹೊಡೆದಂತೆ ಇವರು ಮುನ್ನುಡಿ ಬರೆದೂ ಬರೆದೂ ಮೈಸೂರು ಭಾಷೆಯಲ್ಲಿ ಹೇಳುವುದಾದರೆ ಮುನ್ನುಡಿ ಕೃಷ್ಣದೇವರಾಯರು ಎಂದು ಚಟಾಕಿ ಹಾರಿಸಿದರು. ಎಲೆಅಡಿಕೆ ಪ್ರಿಯರಾಗಿರುವ ಕವಿಗಳಿಗೆ ಕವಳ ಕತ್ತರಿಸಲು ಎಲೆಅಡಿಕೆ ತುಂಬಿದ ಹರಿವಾಣವನ್ನು ಅರ್ಪಿಸಲಾಯಿತು. ಚೊಕ್ಕಾಡಿಯವರ ಕವನಗಳಿಂದ ಆಯ್ದ 50 ನುಡಿಮುತ್ತುಗಳ ಸಂಗ್ರವನ್ನು ಅವರ ಮಡಿಲಲ್ಲಿಟ್ಟರು. ಮಣ್ಣ ಬಾಜನ ತುಳುಗೀತೆಯ ಅರೆಭಾಷೆ ಅವತರಣಿಕೆ ‘ಮೊಣ್ಣುನ ಮಡ್ಕೆ’ ಬಿಡುಗಡೆಯಾಗುತ್ತಲೆ ಕವಿಗಳ ಮುಂದಿದ್ದ ಟೀಪಾಯಿ ಮೇಲೆ ಪುಟ್ಟಪುಟ್ಟ ಮಣ್ಣಿನ ಲೋಟಗಳು ಬಂದು ಕುಳಿತವು. ಶಾಂತರಾಮ ಶೆಟ್ಟರು ಅಸ್ಥೆಯಿಂದ ಅವರಪಾಡಿಗೆ ಸಂದರ್ಭಕ್ಕನುಸಾರವಾಗಿ ಪ್ರತಿಯೊಂದನ್ನೂ ಜೋಡಿಸುತ್ತಿದ್ದರು. ಇವೆಲ್ಲಕ್ಕೆ ಕಿರೀಟವಿಟ್ಟಂತೆ, ಐಲೇಸಾ ತಂಡವು 83 ತುಂಬಿದ ಸುಬ್ರಾಯರೆಂಬ ಚೊಕ್ಕಾಡಿಯವರಿಗೆ 83 ಸಾವಿರ ರೂಪಾಯಿಗಳ ನಗದು ಉಡುಗೊರೆಯನ್ನಿತ್ತು ನಮಸ್ಕರಿಸಿದರು.

ಅನಂತ ರಾವ್ ಅವರ ಲವಲವಿಕೆಯ ನಿರೂಪಣೆ ಕಾರ್ಯಕ್ರಮಕ್ಕೆ ವಿಶೇಷ ಕಳೆ ಕೊಟ್ಟಿತು. ಕವಿವರ್ಯರ ‘ಕೆರಳಿಸದಿರು ಹೆಣ್ಣೇ’ ಆಡಿಯೋ ಆಲ್ಬಂ ಮಿಥುನ ರಾಜ್ ಅವರ ಧ್ವನಿಯಲ್ಲಿ ಬಿಡುಗಡೆಗೊಂಡಿತು. ಈ ಕುರಿತು ಮಾತನಾಡುತ್ತಾ ಇದು ಬರೆದದ್ದು ಯಾವಾಗ ಮತ್ತು ಕೆರಳಿಸಿದವರಾರು ಎಂದು ಕಿಚಾಯಿಸಿದಾಗ, ಸುಮಾರು ಮೂವತ್ತು ವರ್ಷಗಳ ಹಿಂದೆ ಬರೆದ ಕವಿತೆ ಇದೆನ್ನುತ್ತಾ “ಈಗಲೂ ಬರೆದೇನು ಅದರಲ್ಲೇನಿದೆ? ವಯಸ್ಸಾಗೋದು ದೇಹಕ್ಕೆ ಮನಸ್ಸಿಗೆ ವಯಸ್ಸಾಗಬಾರದು” ಎಂದು ಹಿತ ನುಡಿದರು. ಕೊನೆಗೆ ಕಾರ್ಯಕ್ರಮದ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ, ನಿಮ್ಮ ಪ್ರೀತಿಗೆ ನಿಮ್ಮ ರೀತಿಗೆ ಏನುಹೇಳಲೀ ಅನ್ನುತ್ತಾ ಭಾವತುಂದಿಲರಾಗಿ ಹನಿಗಣ್ಣಾದರು.

ಈ ಪ್ರತಿಯೊಂದೂ ಕಾರ್ಯವೂ ತುಂಬಾ ವಿಭಿನ್ನವಾಗಿತ್ತು. ವಿಶೇಷವಾಗಿತ್ತು. ಸುಮ್ಮನೇ ಹಾರ ಹಾಕಿ ಶಾಲುಹೊದಿಸಿ ಪೇಟವಿಟ್ಟು ತಂತ್ ಪ್ರಕಾರ ಮಾಡುವ ಬದಲು ಪ್ರತಿಯೊಂದೂ ಉಪಯುಕ್ತವಾಗಿರಬೇಕು; ಸುಮ್ಮನೇ ಪೋಲಾಗುವ ವಸ್ತುಗಳನ್ನು ನೀಡುವುದೇ ಇಲ್ಲ ಎಂಬುದು ಐಲೇಸಾದ ನಿಲುವು. ಇದರಂತೆ, ಕವಿಶ್ರೇಷ್ಠ ಸುಬ್ರಾಯ ಚೊಕ್ಕಾಡಿಯವರಿಗೆ ವಯೋ ಸಮ್ಮಾನ್ ಗೌರವ ಎಂಬ ಪರಿಕಲ್ಪನೆಯೊಂದಿಗೆ ಈ ಗುರುಕಾಣಿಕೆ, (ಕವಿಕಾಣಿಕೆ) ಪ್ರಯೋಗದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿತು. ಐಲೇಸಾ – ದ ವಾಯ್ಸ್ ಆಫ್ ಓಷನ್ ಎಂಬುದು ಕೊರೊನಾ ಕಾಲದಲ್ಲಿ ಹುಟ್ಟಿಕೊಂಡ ಸಂಸ್ಥೆ. ಯಾವುದೇ ಗಡಿಗಳ ಎಲ್ಲೆಗಳ ಮಿತಿ ಇಲ್ಲದ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ನೀಡುವ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದು ಅದರ ಎರಡನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಈ ವಿನೂತನ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದು ಮಾದರಿಯಾಗಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಾಂಕ್ರಾಮಿಕವಾಗಲಿ ಎಂದು ನನ್ನ ಮನಸ್ಸಿಗನ್ನಿಸಿತು.

ಆಸಕ್ತರು ಈ ಕಾರ್ಯಕ್ರಮದ ಝಲಕ್ಕನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.


ಚಂದ್ರಾವತಿ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

3 thoughts on “

  1. ಪತ್ರಿಕೆಯಲ್ಲಿ ಚುಟುಕಾಗಿ ಬಂದ ಮಾಹಿತಿ ಓದಿದ್ದ ನನಗೆ ಈ ಲೇಖನದಲ್ಲಿ ನನ್ನ ಪ್ರೀತಿಯ ಕವಿ ಚೊಕ್ಕಾಡಿಯವರ ಸನ್ಮಾನದ ಸಂದರ್ಭದ ವಿವರ ಓದಲು ಸಿಕ್ಕಿ ,ಇಲ್ಲಿ ನಾನೇ ಭಾಗವಹಿಸಿದಷ್ಟು ಖುಷಿ ಆಯಿತು.. ಧನ್ಯವಾದಗಳು .

  2. ಸಂಪೂರ್ಣ ಕಾರ್ಯಕ್ರಮ. ಬಂದು ಕಂತುಬಿಕೊಂಡಹಾಗೆ ಬರವಣಿಗೆಯ ಮೂಲಕ ನಿಮ್ಮ ವರ್ಣನೆಯ ಪದ ಪುಂಜ ಗಳಿಗೆ ನನ್ನ ಹ್ಯಾಟ್ಸ್ ಆಫ್ ಚಂದ್ರಕ್ಕ ನಿಮ್ಮ ಬರವಣಿಗೆ ಹೆಚ್ಚೆಚ್ಚು ಮೂಡಿ ಬರಲಿ ನಮಸ್ತೇ

Leave a Reply

Back To Top