ಕನ್ನಡಕ್ಕೆ ಬಂದ ಹೊಸ ಕಾವ್ಯ: ತನಗ -ಡಾ.ಗೋವಿಂದ ಹೆಗಡೆಯವರ ವಿಶೇಷ ಲೇಖನ

ವಿಶೇಷ ಲೇಖನ

ಕನ್ನಡಕ್ಕೆ ಬಂದ ಹೊಸ ಕಾವ್ಯ: ತನಗ

ಡಾ.ಗೋವಿಂದ ಹೆಗಡೆ

ಕನ್ನಡಕ್ಕೆ ಬಂದ ಹೊಸ ಕಾವ್ಯ: ತನಗಕಾವ್ಯ ಪ್ರಕಾರದ ಬಗ್ಗೆ ನಮ್ಮ ನಡುವಿನ ಕವಿಗಳಾದ ಗೋವಿಂದ ಹೆಗಡೆಯವರ ಈ ಬರಹವನ್ನು ಸಂಗಾತಿ ಓದುಗರಿಗೆ ನೀಡಲಾಗಿದೆ

ಇತ್ತೀಚಿಗೆ ಅಂತರ್ಜಾಲದಲ್ಲಿ ಜಪಾನಿ ಕಾವ್ಯ ಪ್ರಕಾರ ‘ಟಂಕಾ’ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದೆ. ಪ್ರಾಥಮಿಕ ಮಾಹಿತಿ ನನ್ನಲ್ಲಿ ಇದ್ದರೂ, ಇನ್ನಷ್ಟು ತಿಳಿದು ಟಂಕಾ ರಚನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಉದ್ದೇಶವಿತ್ತು. ಮಾಹಿತಿಯನ್ನು ಜಾಲಾಡುವಾಗ ಗೂಗಲ್ ಎಂದಿನಂತೆ ಒಂದಿಷ್ಟು ಕೊಂಡಿಗಳನ್ನು ಸೂಚಿಸಿತು. ಅವುಗಳಲ್ಲಿ ಒಂದು ‘ತನಗ’ ಪೊಯೆಮ್. ಕುತೂಹಲ ಗರಿಗೆದರಿ ಅದನ್ನು ತೆರೆದೆ. ಅದೊಂದು ‘ಯುರೇಕಾ’ ಕ್ಷಣ!

ಏನಿದು ತನಗ?

ತನಗ ಫಿಲಿಫೈನ್ಸ್ ಮೂಲದ ಕಾವ್ಯ ಪ್ರಕಾರ. ಸುಮಾರು ಮುನ್ನೂರು ವರ್ಷಗಳಿಂದ ಅಲ್ಲಿನ ನೆಲದ ನುಡಿ ತಗಲಾಗ್ ನಲ್ಲಿ ನಿರೂಪಿತವಾಗುತ್ತ ಬಂದಿದೆ.

   ಸ್ವರೂಪದಲ್ಲಿ ಈ ಕಾವ್ಯ ಪ್ರಕಾರಕ್ಕೂ ಜಪಾನಿನ ‘ಹೈಕು’ ವಿಗೂ ಕೆಲವು ಹೋಲಿಕೆಗಳಿವೆ. ಹೈಕು ಮೂರು ಸಾಲಿನ ಕವಿತೆ. ತನಗ ನಾಲ್ಕು ಸಾಲುಗಳದ್ದು. ಹೈಕು ವಿನಲ್ಲಿ 5-7-5 ಸಿಲಬಲ್‌ಗಳ ನಿಯಮವಿದ್ದರೆ ತನಗ 7-7-7-7 ಸಿಲಬಲ್‌ಗಳ ಚೌಪದಿ. ಪಾರಂಪರಿಕ ತನಗ ಅಂತ್ಯಪ್ರಾಸವುಳ್ಳ ಕವಿತೆ. ಈ ಪ್ರಾಸ ಗಳಲ್ಲಿ ವಿವಿಧ ವಿನ್ಯಾಸಗಳಿಗೆ ಆಸ್ಪದವಿದೆ. aaaa,aabb,abab,abba ಇವು  ಸಾಮಾನ್ಯವಾಗಿ ಅಂತ್ಯ ಪ್ರಾಸಗಳ ರೂಪ.

    ಹೈಕುವಿನಂತೆಯೇ ತನಗಕ್ಕೆ ಕೂಡ ಶೀರ್ಷಿಕೆ ಇಲ್ಲ. ಹೆಚ್ಚಿನ ತನಗಗಳು ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿವೆ. ಅವುಗಳಲ್ಲಿ ಗಾದೆಯಂತಹ ಸೂಕ್ತಿಗಳು ನೈತಿಕತೆಯ ಪಾಠ, ನಡಾವಳಿಯ ಸೂತ್ರಗಳು ಸಿಗುತ್ತವೆ. ಕವಿಗಳು ಇಲ್ಲಿನ ಲಯ ಛಂದಸ್ಸು ರೂಪಕಗಳನ್ನು ಬಳಸಿ ತಮ್ಮ ನಿಪುಣತೆಯನ್ನು ಪ್ರದರ್ಶಿಸುತ್ತಾರೆ. ತನಗದಲ್ಲಿ ಲಯ ಮತ್ತು ಸಿಲಬಲ್‌ನ  ನಿಬಂಧನೆಗಳು ಇರುವುದರಿಂದ ಇದು ಕವಿಯ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ. ಶಬ್ದಗಳನ್ನು ಕುಶಲತೆಯಿಂದ ಬಳಸಿ ಕಾವ್ಯ ರಚಿಸುವಂತೆ ಮಾಡುತ್ತದೆ.

   16ನೇ ಶತಮಾನದ ದಾಖಲೆಯೊಂದು ತನಗ ವನ್ನು ‘ಅದೊಂದು ಶ್ರೇಷ್ಠ ಕಾವ್ಯ ಪ್ರಕಾರ. ಅಂತ್ಯ ಪ್ರಾಸದ್ದು .ರೂಪಕಗಳಿಂದ ತುಂಬಿರುವಂಥದ್ದು’ ಎಂದು ಬಣ್ಣಿಸುತ್ತದೆ.

   ಇದೊಂದು ನಶಿಸುತ್ತಿರುವ ಕಾವ್ಯ ಕಲೆಯಾಗಿತ್ತು. ಫಿಲಿಫೈನ್ಸ್ ‌ನ ಸಾಂಸ್ಕೃತಿಕ ಕೇಂದ್ರ ಮತ್ತು ರಾಷ್ಟ್ರೀಯ ಕಲಾ ಆಯೋಗ ಈ ಪ್ರಕಾರದ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿವೆ.

ಆಧುನಿಕ ತನಗ

ಆಧುನಿಕ ತನಗ ಕೂಡ ಏಳು ಸಿಲಬಲ್‌ಗಳಲ್ಲಿ ರೂಪಿತವಾಗಿದೆ. ಪ್ರಾಸಕ್ಕೆ ಬಂದರೆ, ದ್ವಿಪ್ರಾಸ – aaaa,aabb,abab,abba-ಗಳಿಂದ, ಮುಕ್ತ ಪ್ರಾಸದ ರೀತಿಯಾದ aaab,baaa,abcd ರೂಪಗಳಲ್ಲೂ ತನಗ ಕಾಣಸಿಗುತ್ತದೆ. ಇಂದಿನ ಕವಿಗಳು ತನಗಕ್ಕೆ ಶೀರ್ಷಿಕೆಯನ್ನು ನೀಡುವುದನ್ನು ಕಾಣಬಹುದು.

ಪ್ರಾಸಂಗಿಕವಾಗಿ, ನಾಲ್ಕು ಸಾಲಿನ ಕವಿತೆಗಳಾದ ಕನ್ನಡದ ವಿಶಿಷ್ಟ ಪ್ರಕಾರವಾದ ಚುಟುಕಗಳು ಮತ್ತು ರುಬಾಯಿಗಳಿಗಿಂತ ತನಗ ಹೇಗೆ ಭಿನ್ನ ಎಂಬುದನ್ನು ನೋಡೋಣ.

ಚುಟುಕಗಳಲ್ಲಿ ಅಂತ್ಯಪ್ರಾಸ ಸಾಮಾನ್ಯ. aabb,abab, aaaa ಹೀಗೆ. ಅವು ಹೆಚ್ಚಾಗಿ ಛಂದೋಬದ್ಧವಾದ ರಚನೆಗಳು. ಎಲ್ಲ ಸಾಲುಗಳಲ್ಲೂ ಸಮಾನವಾದ ಮಾತ್ರೆಗಳು ಚುಟುಕಿನ ಲಕ್ಷಣ ಎನ್ನಬಹುದು. ಹದಿನೆಂಟು – ಇಪ್ಪತ್ತು ಮಾತ್ರೆಗಳ ದಿನಕರ ದೇಸಾಯಿ ಅವರ ಚುಟುಕಗಳು ಈ ಪ್ರಕಾರಕ್ಕೆ ಮಾದರಿ ಎನ್ನಬಹುದು. ವಿ ಜಿ ಭಟ್ಟ, ವಿಡಂಬಾರಿ,ಎಚ್ ಡುಂಡಿರಾಜ್ ಮೊದಲಾದವರು ಈ ಪ್ರಕಾರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ತನಗಕ್ಕಿಂತ ಇಲ್ಲಿ ಸಾಲುಗಳು ದೀರ್ಘ. ಇಷ್ಟೇ ಮಾತ್ರೆ ಎಂಬ ನಿಯಮವಿಲ್ಲ. ಸಾಲುಗಳಲ್ಲಿ ಮಾತ್ರೆಗಳು ಸಮಾನವಾಗಿದ್ದರೆ ಸಾಕು.

ಇನ್ನು, ರುಬಾಯಿ ಗಜಲ್ ಮಾದರಿಯ ಚೌಪದಿ. ಪಾರ್ಸಿ, ಉರ್ದು ಮೂಲಕ ಕನ್ನಡಕ್ಕೆ ಬಂದಿದ್ದು. ಇಲ್ಲಿನ ಅಂತ್ಯಪ್ರಾಸ ವ್ಯವಸ್ಥೆ aaba ಮಾದರಿಯದು. ಸಾಲುಗಳು ಸಮಾನವಾಗಿರಬೇಕು. ಇಷ್ಟೇ ಅಕ್ಷರ ಅಥವಾ ಮಾತ್ರೆ ಇರಬೇಕು ಎಂಬ ನಿಯಮವಿಲ್ಲ.         ತನಗ ನಾಲ್ಕು ಸಾಲಿನ ಕವಿತೆಗಳಲ್ಲಿ ಅತ್ಯಂತ ಹೃಸ್ವ ಸಾಲುಗಳ ರಚನೆ ಎನಿಸುತ್ತದೆ. ಇದು ತನಗದ ವಿಶೇಷ.

ಇನ್ನು ಮುಂದೆ ಕೆಲವು ಇಂಗ್ಲಿಷ್ ತನಗಗಳ  ಅನುವಾದವನ್ನು ನೋಡೋಣ. ಸಿಲಬಲ್‌ಗಳನ್ನು ಕನ್ನಡದಲ್ಲಿ ಸ್ಥೂಲವಾಗಿ ಅಕ್ಷರಗಳು ಎಂದುಕೊಳ್ಳಬಹುದು.

ಬದುಕು ಕಷ್ಟಕರ

ಪರಿಚಿತ ಹೇಳಿದ

ನಮ್ಮಿಷ್ಟ ನಡೆಯದು

ಅಷ್ಟೇ ಹೇಳಲಿದ್ದುದು

ಎಡ್ವಿನ್ ತನ್‌ಗುಮಾ

ಇದರ ಅಂತ್ಯಪ್ರಾಸ aabb ಮಾದರಿಯದು. ಇದೇ ಪ್ರಾಸದ ಇನ್ನೊಂದು ತನಗ-

ಸೂರ್ಯೋದಯವೋ ರಮ್ಯ

ಹೃದಯದ್ದೇ ಮಿಡಿತ

ತಪ್ಪಾಗಿ ತಿಳಿದರೂ

ಭಾವನೆ ಹೃದಯದ್ದು

    ಆಧುನಿಕ ಪ್ರಾಸದ ಒಂದು ತನಗ –

ಕವಿತೆಗೆ ಬಂದಾಗ

ಅನುಭವವೇ ಕೀಲಿ

ಕವಿಯೋ ಅಭಿಜಾತ

ಗಳಿಕೆ ಮಾತ್ರ ಇಲ್ಲ! (abaa)

( ಭಾವಾನುವಾದ ನನ್ನವು)

ತನಗ:ಕೆಲವು ರಚನೆಗಳು

ಈ ರಾಚನಿಕ ವಿನ್ಯಾಸಗಳನ್ನು ಅನುಸರಿಸಿ ನಾನು ಬರೆದ ಕೆಲವು ತನಗಗಳು ಹೀಗಿವೆ :

ಬಂದಿದ್ದಾನೆ ನೇಸರ

ಮೂಡಣವ ಬೆಳಗಿ

ಸ್ವಾಗತಿಸಿವೆ ಹಕ್ಕಿ

ಉಲಿದು ಚಿಲಿಪಿಲಿ

*

ಕತ್ತಲಿನ ಈ ರಾತ್ರಿ

ಅಸಂಖ್ಯ ತಾರೆಗಳು

ಮಿಂಚಿ ಮರೆಯಾಗುವ

ತಬ್ಬಲಿ ಸ್ವಪ್ನಗಳು

*

ಸೃಷ್ಟಿಶೀಲವಲ್ಲದ

ಬದುಕಿನಲ್ಲೇನಿದೆ

ಬಾಳೆಲೆಯ ಹಾಸಿದೆ

ಉಂಡು ಬೀಸಿ ಎಸೆದೆ

*

ಕೆಲ ಕವಿತೆಗಳು

ಹನಿಸುತ್ತವೆ ರಸ

ಕೊಡುತ್ತವೆ ಹಲವು

ಖಾತ್ರಿಯಾದ ಆಯಾಸ!

*

ಹನಿಯಲ್ಲಿ ಕಡಲು

ಚಣದಲ್ಲಿ ಅನಂತ

ಕನ್ನಡಿಯಲ್ಲಿ ಕರಿ

ಕವಿತೆಯ ತಾಕತ್ತು!

     ಎರಡು ಸಾಲುಗಳ ಫರ್ದ್ ( ಬಿಡಿ ದ್ವಿಪದಿ), ಮೂರು ಸಾಲುಗಳ ಹೈಕು, ತ್ರಿಪದಿ, ನಾಲ್ಕು ಸಾಲುಗಳ ಚುಟುಕ, ರುಬಾಯಿಗಳ ಜೊತೆ, ತನಗ ಕೂಡ ನಮ್ಮ ಕವಿಗಳ ಸೃಷ್ಟಿಶೀಲತೆಗೆ ಒದಗಿ ಬರಲಿ. ಈ ಪ್ರಕಾರದಲ್ಲಿ ಸಮೃದ್ಧ ಬೆಳೆ ಬೆಳೆಯಲಿ.

ತನಗ ಕ್ಕೆ ಕನ್ನಡ ಕಾವ್ಯಲೋಕ ಮಣೆ ಹಾಕಲಿ ಎಂದು ಆಶಿಸುತ್ತೇನೆ.

ಒಳ್ಳೆಯದು ಬರಲಿ

ದಿಕ್ಕು ದಿಕ್ಕುಗಳಿಂದ

ಇದುವೇ ನಮ್ಮ ರೀತಿ

‘ತನಗ’ಕ್ಕಿದೆ ಪ್ರೀತಿ


 ಡಾ. ಗೋವಿಂದ ಹೆಗಡೆ

(ಸೌಜನ್ಯ: ವಿಜಯ ಕರ್ನಾಟಕ ಮತ್ತು ಲೇಖಕರು)

3 thoughts on “ಕನ್ನಡಕ್ಕೆ ಬಂದ ಹೊಸ ಕಾವ್ಯ: ತನಗ -ಡಾ.ಗೋವಿಂದ ಹೆಗಡೆಯವರ ವಿಶೇಷ ಲೇಖನ

  1. ಉಪಯುಕ್ತ ಮಾಹಿತಿ ಕೊಟ್ಟು ಸಾಹಿತ್ಯ ಸೃಷ್ಟಿ ಪಲ್ಲವಿಸಲು ಕಾರಣರಾಗಿದ್ದೀರಿ ಸರ್ ಧನ್ಯವಾದಗಳು.

  2. ಚಂದದ ಪ್ರಕಾರ ಪ್ರಕಾರದ ಬಗ್ಗೆ ಇನ್ನಷ್ಟು ಮಾಹಿತಿ ಬೇಕು.

  3. ತನಗ ಕಿರುಕಾವ್ಯ ಪ್ರಕಾರದ ಬಗ್ಗೆ ಪರಿಚಯಾತ್ಮಕ ಲೇಖನ ಚೆನ್ನಾಗಿ ಮೂಡಿ ಬಂದಿದೆ. ತನಗ ರಚಿಸುವವರಿಗಿದು ಪ್ರೇರಣೆ ಧನ್ಯವಾದಗಳು

Leave a Reply

Back To Top