ಕಾವ್ಯಸಂಗಾತಿ
ಶೀಲಾ ಭಂಡಾರ್ಕರ್-ತನಗ
ಗಾಳಿ ತುಟಿಯೊತ್ತಿದೆ
ಹೂವಿನ ಕದಪಿಗೆ,
ಎದೆಯಾಳದ ಬೇಗೆ
ಪರಿಮಳ ಸೂಸಿದೆ.
ಮೂಕವಾದರೆ ಮಾತು
ಕಷ್ಟ- ನಷ್ಟವೇನಿದೆ
ಆತಂಕವಾಗುವುದು
ಮೌನ ಮೂಕವಾದರೆ.
ಮಳೆಯು ಹನಿಯಿತು
ಹೂವು ಚಿಗುರಿದವು
ಕೆಲ ನೆನಪುಗಳು
ಹಸಿಹಸಿಯಾದವು
ತಿರುವಿನಲ್ಲಿ ನೀನು
ನಿಂತಿದ್ದಿದ್ದರೆ ತುಸು
ಮುಂದೆ ಸರಿಯುತಿತ್ತು
ಈ ನಿಶ್ಚಲ ಬದುಕು.
ಮನವನ್ನಿಡು ನೀನು
ಸ್ವಚ್ಛ ಸಾಗರದಂತೆ
ಅರಸಿ ಬರುವುದು
ನದಿಯೇ ನಿನ್ನೆದೆಗೆ.
ಸಾಕು ಒಂದೊಂದೇ ಕ್ಷಣ
ನೋಟಗಳು ತಾಕಲು
ಆಮೇಲೆಲ್ಲ ಬರಿಯ
ಮುನಿಸು ವ ರಮಿಸು.
ಎದೆಗೂಡಿನ ಮೂಲೆ
ಅಲ್ಲೊಂದು ಖಾಲಿ ಜಾಗ
ಕೇವಲ ನಿನಗೆಂದೇ
ಮೀಸಲಿದೆ ಅದೀಗ.
ದಟ್ಟ ನೆನಪುಗಳ
ನಡುವೆ ಸರಿಯುವ
ನಿರಂತರ ಸಮಯ
ನಿನ್ನೆದುರು ತಟಸ್ಥ.
ಎತ್ತೆತ್ತಲೋ ಹರಡಿ
ಚೆಲ್ಲಿದ ಕತ್ತಲನ್ನು
ಬಾಚಿ ತಬ್ಬಿಕೊಳ್ಳಲು
ಕಾದಿಹಳು ಇರುಳು.
ಇರುಳ ಹೆಗಲಿಗೆ
ತಲೆಯಾನಿಸಿ ಚಂದ್ರ
ಕಾಣುತ್ತಿರಬಹುದೇ
ಅಂದದ ಕನಸೊಂದ.
ಮೊದಲ ಸಲ ಬಿಕ್ಕಿ
ತೊದಲು ನುಡಿಯಲಿ
ಬರೆದ ನನ್ನ ಕವಿತೆ
ನಿನಗೆ ಸಿಕ್ಕಿದೆಯೇ?
ಸಾಲುಗಳು ಎರಡೇ
ಬರೆಯುವ ಬವಣೆ
ಮರೆಯುವ ಮೊದಲೇ
ಕಳೆದು ಹೋಗಿದೆಯೆ?
ನೀನು ಹೋದ ನಂತರ
ಕವಿತೆಗಿಳಿಸಿದ
ಮುಗಿಯದ ಬರಹ
ಸಾಲು ಸಾಲು ವಿರಹ
ನನ್ನ ಕಳೆದು ಹೋದ
ಆ ಮೊದಲ ಕವಿತೆ
ಬೇಕಿದೆ ನನಗೀಗ
ಪತ್ತೆಯಾಗಬಹುದೇ?
ಸುಲಭದ ಮಾತಲ್ಲ
ಕವಿತೆ ಬರೆವುದು
ಎದೆ ಬಿಚ್ಚಿಡಬೇಕು
ಗುಟ್ಟು ಬಚ್ಚಿಡಬೇಕು.
ನಿನ್ನ ಪ್ರೀತಿ ಎಂದರೆ
ತೋಯ್ದು ಹೃದಯವನ್ನೇ
ತೊಪ್ಪೆಯಾಗಿಸೊ ಮಳೆ
ನಾ ಘಮ್ಮೆನ್ನುವ ಇಳೆ.
ಯಾವುದಾದರಿರಲಿ
ಸ್ನೇಹ ಪ್ರೇಮ ಸಂಬಂಧ
ಹುಡುಕುವುದು ಬರಿ
ನೆಮ್ಮದಿ ಪರಸ್ಪರ
ಸುಂದರ ಬರಹಗಳು….9739303226