ಅಂಕಣ ಸಂಗಾತಿ
ಗಜಲ್ ಲೋಕ
ಶೈಲಶ್ರೀಯವರ ಗಜಲ್ ಗಳಲ್ಲಿ
ಪ್ರೇಮಿಗಳ ಕಲರವ…
ಶೈಲಶ್ರೀಯವರ ಗಜಲ್ ಗಳಲ್ಲಿ ಪ್ರೇಮಿಗಳ ಕಲರವ…
ಗಜಲ್ ಗಂಗೆ ಇಂದು ಸಂಸಾರದುದ್ದಕ್ಕೂ ಹರಿಯುತಿದ್ದಾಳೆ, ರಸಿಕರ ತನು-ಮನವನ್ನು ಸಂತೈಸುತ್ತ… ಇಂಥಹ ಗಜಲ್ ಕುರಿತು ಮಾತನಾಡುತಿದ್ದರೆ ಬೆಳದಿಂಗಳ ರಾತ್ರಿಯ ಫೀಲ್ ಆಗುತ್ತೆ…!! ಆ ಅನುಭಾವದ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳೋಕೆ ಖುಷಿಯೆನಿಸುತ್ತಿದೆ. ಕರುನಾಡಿನ ಪ್ರಸಿದ್ಧ ಸುಖನವರ್ ಅವರ ಪರಿಚಯದೊಂದಿಗೆ ತಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ತಾವೆಲ್ಲರೂ ಗಜಲ್ ಚಾಂದನಿಯನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಲೆಕ್ಕಣಿಕೆಗೆ ಚಾಲ್ತಿ ನೀಡುವೆ…!!
“ಒಂದು ಮುಖವಿದೆ ಯಾವಾಗಲು ಕಣ್ಣುಗಳಲ್ಲಿ ನೆಲೆಸಿರುತ್ತದೆ
ಒಂದು ಕಲ್ಪನೆಯಿದೆ ಅದು ಒಂಟಿಯಾಗಿರಲು ಬಿಡುವುದಿಲ್ಲ”
–ಜಾವೇದ್ ನಸೀಮಿ
‘ಪ್ರೀತಿ’ ಎನ್ನುವ ಎರಡುವರೆ ಅಕ್ಷರ ಈ ಸಂಸಾರವನ್ನೆ ಆಳುತ್ತಿದೆ. ಇದನ್ನು ಅಭಿವ್ಯಕ್ತಿ ಪಡಿಸುವುದು, ಅನುಭವಿಸುವುದು ನಿಜಕ್ಕೂ ಸುಂದರವಾಗಿರುತ್ತದೆ. ಇಂಥಹ ಪ್ರೀತಿಯು ನವಿರಾದ ತುಟಿಗಳು ಮತ್ತು ಬೆರಳುಗಳಿಂದ, ಮೃದುವಾದ ದಿಂಬುಗಳಿಂದ ಹೃದಯವಂತರನ್ನು ಗಾಯಗೊಳಿಸುತ್ತದೆ. ಈ ಯೂನಿಕ್ ಪ್ರೀತಿಯನ್ನೇ ಉಸಿರಾಡುತ್ತಿರುವ ಜಗಮೆಚ್ಚಿದ ಕಾವ್ಯ ಪ್ರಕಾರವೆಂದರೆ ‘ಗಜಲ್’. ಗಜಲ್ ಎನ್ನುವುದು ದ್ವೀಪವಲ್ಲ, ಇದೊಂದು ಸೇತುವೆ. ಇದು ಕೇವಲ ಹಡಗಾಗಿರದೆ ಜೀವದ ನೌಕೆಯಾಗಿದೆ. ಈ ದಿಸೆಯಲ್ಲಿ ಗಜಲ್ ಎಂದರೆ ಈಜು ಅಲ್ಲ, ಪವಿತ್ರವಾದ ನೀರು. ನಿಜಕ್ಕೂ ಗಜಲ್ ಬರೆಯುವುದೆಂದರೆ, ಓದುವುದೆಂದರೆ ನಾವು ಜಳಕಕ್ಕೂ ಮುಂಚೆ ಬಟ್ಟೆಗಳನ್ನು ಬಿಚ್ಚಿದಂತೆ!! ನಾವು ಬಟ್ಟೆ ಒದ್ದೆಯಾಗುತ್ತವೆ ಎಂಬ ಭಯದಿಂದ ಬಟ್ಟೆ ಕಳಚುವುದಿಲ್ಲ, ಬದಲಿಗೆ ನೀರು ನಮ್ಮನ್ನು ಸ್ಪರ್ಶಿಸಲಿ ಎಂಬ ಅನನ್ಯ ಬಯಕೆಯಿಂದ. ನಾವು ಸಂಪೂರ್ಣವಾಗಿ ನೀರಿನ ಆಹ್ಲಾದತೆಯಲ್ಲಿ ಮುಳುಗಲು ಮತ್ತು ಹೊಸ ಹುಮ್ಮಸ್ಸಿನೊಂದಿಗೆ ಹೊರಹೊಮ್ಮಲು ಬಯಸುತ್ತೇವೆ. ಈ ಕಾರಣಕ್ಕಾಗಿಯೇ ಗಜಲ್ ಮೇಲಿನ ನನ್ನ ಪ್ರೀತಿ ಯಾವಾಗಲೂ
ಗಿರಿ-ಶಿಖರದಂತೆ ಆಗಸದತ್ತ ಮುಖ ಮಾಡಿಯೇ ಇರುತ್ತದೆ. ಸ್ತಬ್ಧ ಮತ್ತು ನಿರಂತರ. ಗಜಲ್ ಪ್ರೀತಿಯಲ್ಲೊಂದು ಅಮಲು ಇದೆ. ಅದಕ್ಕೇ ಈ ಜಗತ್ತು ಗಜಲ್ ನ ಮಧುಶಾಲೆಯಲ್ಲಿ ಜಗದ ಜಂಜಡವನ್ನು ಮರೆತು ಮುಳುಗುತಿದೆ. ಈ ಗಜಲ್ ಪ್ರೀತಿ ಸಹೃದಯಿಗಳನ್ನು ಹೃದಯವಂತರನ್ನಾಗಿಸುತ್ತದೆ. ಕರುನಾಡಿನಲ್ಲಿ ಇಂಥಹ ಹೃದಯವಂತರಿಗೇನೂ ಕೊರತೆಯಿಲ್ಲ. ಇಂತಹ ಗಜಲ್ ಗೋ ಅವರಲ್ಲಿ ಶ್ರೀಮತಿ ಶೈಲಶ್ರೀ ಶಶಿಧರ್ ಅವರೂ ಒಬ್ಬರು.
ಶ್ರೀಮತಿ ಶೈಲಶ್ರೀ ಶಶಿಧರ್ ಅವರು ಶ್ರೀ ಗೋಪಾಲ್ ರಾವ್ ಮತ್ತು ವನಜಾಕ್ಷಿ ರಾವ್ ದಂಪತಿಗಳ ಮಗಳಾಗಿ ದೊಡ್ಡ ಕೂಡು ಕುಟುಂಬದಲ್ಲಿ ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಜನಸಿದ್ದಾರೆ. ಇವರ ತಂದೆಯವರು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಹೋಟೆಲ್ ವ್ಯವಹಾರದಲ್ಲಿದ್ದು ನಂತರ ಉಡುಪಿಗೆ ಬಂದು ನೆಲೆಸಿದರು. ಇವರ ವಿದ್ಯಾಭ್ಯಾಸವು ಉಡುಪಿಯಲ್ಲಾಗಿದೆ. ಶಾಲಾ ದಿನಗಳಿಂದಲೂ ಕಾವ್ಯ, ಕತೆ, ಕಾದಂಬರಿ… ಓದುವ ಹವ್ಯಾಸವನ್ನು ಹೊಂದಿದ್ದು, ಕ್ರಮೇಣವಾಗಿ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮುಂದೆ ಪದವಿ ವ್ಯಾಸಂಗ ಪೂರ್ಣ ಆಗುವುದರೊಳಗೆ ವಿವಾಹವಾಗಿ, ತುಂಬು ಸಂಸಾರದ ಜವಾಬ್ದಾರಿ ಹೊತ್ತರು. ಬರಹಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವಂತೆ ತಮ್ಮ ೪೬ ನೇ ವಯಸ್ಸಿಗೆ ಕವನ ಬರೆಯಲು ಆರಂಭಿಸಿ ಇಲ್ಲಿಯವರೆಗೆ ಸುಮಾರು ೬೦೦ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಮುಂದೆ ಗಜಲ್ ವ್ಯಾಟ್ಸಪ್ ಬಳಗಗಳಿಂದ ಗಜಲ್ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿ ಗಜಲ್ ಕೃಷಿಯನ್ನು ಮಾಡುತ್ತಿದ್ದಾರೆ. ಅದರ ಫಲವೆಂಬಂತೆ ಅಸಂಖ್ಯಾತ ಗಜಲ್ ಗಳನ್ನು ಬರೆಯುತ್ತ ಕನ್ನಡ ಗಜಲ್ ಪರಂಪರೆಗೆ “ಶಶಿಯಂಗಳದ ಪಿಸುಮಾತು” ಎಂಬ ಪ್ರಥಮ ಸೆಹ್ ಗಜಲ್ ಸಂಕಲನ ಕೊಡುಗೆಯಾಗಿ ನೀಡಿದ್ದು ಇವರ ಹೆಗ್ಗಳಿಕೆಯಾಗಿದೆ. ಇದರೊಂದಿಗೆ “ರಾಧಾ ಮೋಹನ ಪ್ರೇಮಾನುರಾಗ” ಎಂಬ ರಾಧೆ ಮೋಹನರ ಪ್ರೇಮದ ಗಜಲ್ ಗಳು ಮದ್ದಣ್ಣ ಮನೋರಮೆ ಅವರ ಸಂಭಾಷಣೆಯನ್ನು ನೆನಪಿಸುವಂತಿವೆ. ಇವರ ಎರಡೂ ಗಜಲ್ ಸಂಕಲನಗಳು ಪ್ಯೂರ್ ಪ್ರೇಮಭರಿತವಾಗಿದ್ದು, ಗಜಲ್ ನ ಮೂಲ ಆಶಯವನ್ನು ಹೊಂದಿವೆ. ಇದಕ್ಕೆ ಇವರು ಬಳಸುವ ತಖಲ್ಲುಸನಾಮ ‘ಶಶಿ’ ಕೂಡ ಅಪ್ಯಾಯಮಾನವಾಗಿ ಹೊಂದಿಕೊಂಡಿದೆ. ಪ್ರಸ್ತುತವಾಗಿ ಶ್ರೀಯುತರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಕಾವ್ಯ, ಗಜಲ್ ಹಾಗೂ ಇನ್ನಿತರ ಕಾವ್ಯ ಪ್ರಕಾರಗಳು ಅಂತರ್ಜಾಲ ಹಾಗೂ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ಗಜಲ್ ಗೋಷ್ಠಿ, ಕಾವ್ಯ ಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಈ ಕ್ರಿಯಾಶೀಲತೆಯನ್ನು ಗುರುತಿಸಿ ನಾಡಿನ ಸಂಘ-ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ.
ಮನುಷ್ಯ ತಾನು ಎಷ್ಟೇ ಬೌದ್ಧಿಕವಾಗಿ ದಾಪುಗಾಲಿಟ್ಟರೂ ಅದಕ್ಕೆ ಮೆರುಗು ಬರುವುದೇ ಭಾವನೆಗಳ ಗೊಂಚಲಿನಿಂದ!! ಸಾರಸ್ವತ ಲೋಕದಲ್ಲಿ ಅಸಂಖ್ಯಾತ ಕಾವ್ಯ ಪ್ರಕಾರಗಳಿವೆ. ಅವುಗಳಲ್ಲಿ ಮನಸ್ಸಿನ ಆಳದಿಂದ ಉದಯಿಸುವ ಭಾವಾಂತರಂಗದ ಜೋಕಾಲಿ, ತಂಬೆಲರೆಂದರೆ ಗಜಲ್. ಇದು ಕಂಬನಿಯನ್ನು ಪ್ರೀತಿಸುತ್ತ ಬೆಚ್ಚನೆಯ ಆಲಿಂಗನದಿ ಭಾರವಾದ ಹೃದಯಗಳನ್ನು ಸಂತೈಸುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್ ಇಡೀ ಮನುಕುಲದ ಸಂಬಂಧಗಳ ಛಾವಣಿಯಾಗಿದೆ. ಇಂಥಹ ಗಜಲ್ ಇಂದು ಆಲದ ಮರದಂತೆ ನಾಡಿನಾದ್ಯಂತ ಪಸರಿಸಿದೆ. ಗಜಲ್ ಗೋ ಶೈಲಶ್ರೀ ಯವರು ತಮ್ಮ ಗಜಾಲ್ ಗಳನ್ನು ಪ್ರೀತಿಯಿಂದ ಅಲಂಕರಿಸಿದ್ದಾರೆ, ಓದುಗರ ಹಾದಿಯುದ್ದಕ್ಕೂ ಪ್ರೀತಿಯ ಮದಿರೆಯನ್ನು ಹಂಚುತ್ತ ; ಪ್ರೀತಿ-ವಿರಹವನ್ನೆ ಪೂಜಿಸುತ್ತ ಬಂದಿದ್ದಾರೆ. ಇವರ ಗಜಲ್ ಗಳ ಪ್ರೀತಿಯಲ್ಲಿ ವಿರಹವಿದೆ, ಒಂಟಿತನವಿದೆ, ದಾಂಪತ್ಯದ ಅಮೃತವಿದೆ, ಸಿಹಿಯಾದ ದ್ರೋಹವಿದೆ. ಇವುಗಳೊಂದಿಗೆ ಪ್ರೀತಿಯಲ್ಲಿ ಸಾಕ್ಷಾತ್ಕಾರವೂ ಇದೆ. ಪ್ರೇಮಿಗಳ ಪಿಸುಮಾತು, ಏಕಾಂತದ ನಾದ, ಹೃದಯಗಳ ಸಮಾಗಮದಿಂದ ತುಂಬಿದ ಇವರ ಗಜಲ್ ಗಳು ಓದುಗರ ಪ್ರೇಮಮಿಡಿತವನ್ನು ಜಾಗೃತಗೊಳಿಸುತ್ತದೆ.———————
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ