ಬಾನು ಬೆಳಗಿತು _  ಕಾದಂಬರಿ

ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಬಾನು ಬೆಳಗಿತು _  ಕಾದಂಬರಿ

ಲೇಖಕಿ  _  ತ್ರಿವೇಣಿ  ಅನಸೂಯಾ ಶಂಕರ್ 

ಬಾನು ಬೆಳಗಿತು _  ಕಾದಂಬರಿ

ಲೇಖಕಿ  _  ತ್ರಿವೇಣಿ  ಅನಸೂಯಾ ಶಂಕರ್ 

ಪ್ರಕಾಶಕರು _ ಶಾರದಾ ಮಂದಿರ ಮೈಸೂರು 

ಮೊದಲ ಪ್ರಕಟಣೆ _  ೧೯೫೮

ಮರುಮುದ್ರಣ   _  ೨೦೧೪

ಕನ್ನಡದ ಪ್ರಮುಖ ಕಾದಂಬರಿಕಾರ್ತಿಯರಲ್ಲೊಬ್ಬರಾದ ತ್ರಿವೇಣಿ ಕಾವ್ಯನಾಮದ ಅನಸೂಯ ಶಂಕರ್ ಜನಿಸಿದ್ದು ಸೆಪ್ಟೆಂಬರ್ 1೧೯೨೮ರಂದು ಮಂಡ್ಯದಲ್ಲಿ . ತಮ್ಮ ಮೂವತ್ನಾಲ್ಕನೆಯ ವಯಸ್ಸಿನಲ್ಲೇ ವಿಧಿವಶರಾದರು. ಕನ್ನಡದ ಕಣ್ವ ಬಿಎಂಶ್ರೀ ಇವರ ದೊಡ್ಡಪ್ಪ .ಕುಟುಂಬದಲ್ಲೆಲ್ಲ ಪ್ರಸಿದ್ಧ ಸಾಹಿತಿಗಳೇ. ವಾಣಿ (ವಿ ಎನ್ ಸುಬ್ಬಮ್ಮ) ಇವರ ಚಿಕ್ಕಮ್ಮ ಮತ್ತೊಬ್ಬ ಕಾದಂಬರಿಕಾರ್ತಿ ಆರ್ಯಾಂಬ ಪಟ್ಟಾಭಿ ಇವರ ತಂಗಿ ಕಥೆಗಾರ ಅಶ್ವತ್ಥ ಇವರ ಪತಿಯ ಭಾವ .  ಇವರ ಜನ್ಮನಾಮ ಭಾಗೀರಥಿ ಮನಃಶಾಸ್ತ್ರ ಪದವೀಧರೆಯಾದ ಇವರ ಕಾದಂಬರಿಗಳಲ್ಲಿ ಆ ಪ್ರಭಾವವನ್ನು ಕಾಣಬಹುದು . ವಿನೂತನ ಕಥಾ ವಸ್ತು ಮತ್ತು ಶೈಲಿಯ ಇವರ ಬರಹಗಳು ಜನಪ್ರಿಯವಾಗಿದ್ದವು ಹಾಗೂ 1 ಹೊಸ ಅಲೆಯನ್ನು ಮೂಡಿಸಿ ವಿಭಿನ್ನ ವರ್ಗದ ಓದುಗರನ್ನು ಸೃಷ್ಟಿಸಿದ್ದವು.  ಮನಸ್ಸಿನ ತುಡಿತ ಬಡಿತಗಳ ಮಿಡಿತವನ್ನು ವರ್ಣಿಸುತ್ತಿದ್ದ ಇವರ ಕಾದಂಬರಿ ಪಾತ್ರಗಳು ನಿಜಜೀವನದ ಪ್ರತಿಬಿಂಬ ಗಳಾಗಿದ್ದವು . ವೈಚಾರಿಕತೆಯ ನೆಲೆಗಟ್ಟು ಸ್ಪಷ್ಟ ದೃಷ್ಟಿಕೋನದ ಇವರ ಸಿದ್ಧಾಂತಗಳು ಮಹಿಳಾ ಮನೋಭೂಮಿಕೆಗೆ ಹತ್ತಿರವಾಗಿದ್ದವು ಅಂತೆಯೇ ಆಪ್ತವಾದವು ಎಂಬುದು ಇಲ್ಲಿ ಸ್ಮರಿಸಿಕೊಳ್ಳಲೇ ಬೇಕಾದ ಅಂಶ.  ಜೀವಿತದ ಅತ್ಯಲ್ಪ ಕಾಲದಲ್ಲೇ ಇಪ್ಪತ್ತು ಪೂರ್ಣ ಕಾದಂಬರಿಗಳು 3 ಕಥಾ ಸಂಕಲನಗಳನ್ನು ಹೊರತಂದಿದ್ದಾರೆ ಇಪ್ಪತ್ತೊಂದನೆಯ ಕಾದಂಬರಿ ಅವಳ ಮಗಳು ಅಪೂರ್ಣವಾಗಿದ್ದು ಎಂ ಸಿ ಪದ್ಮ ಅವರು ಅದನ್ನು ಪೂರ್ಣಗೊಳಿಸಿದ್ದಾರೆ ಹಣ್ಣೆಲೆ ಚಿಗುರಿದಾಗ ಬೆಳ್ಳಿಮೋಡ ಶರಪಂಜರ ಮುಕ್ತಿ ಹೂವು ಹಣ್ಣು ಕಂಕಣ ಈ ಕಾದಂಬರಿಗಳು ಚಲನಚಿತ್ರಗಳಾಗಿವೆ ಬೆಕ್ಕಿನ ಕಣ್ಣು ಕಾದಂಬರಿಯನ್ನು ಪುಟ್ಟಣ್ಣ ಕಣಗಾಲ್ ಅವರೇ ಮಲಯಾಳಂನಲ್ಲಿ ನಿರ್ದೇಶಿಸಿದ್ದಾರೆ. ಜೀವನದ ಹಲವು ಮುಖಗಳನ್ನು ಚಿತ್ರಿಸಿ ಸಿದ್ಧಾಂತಗಳನ್ನು ಕಥೆಯ ಮೂಲಕ ಕಟ್ಟಿಕೊಡುವ ಇವರ ಶೈಲಿ ಪಂಡಿತ ಪಾಮರರಿಬ್ಬರಿಗೂ ಪ್ರಿಯ.

ಪ್ರಸ್ತುತದ ಬಾನು ಬೆಳಗಿತು ಕೆಲವೇ ಪಾತ್ರಗಳ ಮೂಲಕ ತಲೆಮಾರುಗಳ ನಡುವಿನ ಅಂತರವನ್ನು ಮನುಷ್ಯ ಸ್ವಭಾವದ ವಿಚಿತ್ರವನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಪ್ರಯತ್ನ .ವೆಂಕಟಾಚಲಯ್ಯ ವಿಜಯಮ್ಮನವರ ಮಗಳು ಕಲ್ಯಾಣಿ ಅಣ್ಣ ಅನಂತ ಅತ್ತಿಗೆ ವತ್ಸಲೆ ಇವರ ಮಗ ಆನಂದ ಸಂತೋಷದ ಕುಟುಂಬ. ವೈಮನಸ್ಸು ಗಳಿರದ ಸರಳ ಜನ. ಕಲ್ಯಾಣಿ ಮುದ್ದಿನ ಮಗಳು ಯಾವುದಕ್ಕೂ ಯಾರಿಗೂ ಸೋಲದ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಸ್ವಭಾವದವಳು ವಿಜಯಮ್ಮನವರ ಸ್ವಭಾವ ಹಾಗೂ ಗಂಟಲು ಎರಡೂ ಜೋರು. ವೆಂಕಟಾಚಲಯ್ಯ ಎಲ್ಲವನ್ನು ಹೆಂಡತಿಗೆ ಒಪ್ಪಿಸಿ “ಅಮ್ಮಾವ್ರ ಗಂಡ” ಎನಿಸಿಕೊಂಡಿದ್ದವರು. ಕೆಲವೊಮ್ಮೆ ತಮ್ಮ ಈ ಗುಣವನ್ನು ತಾವೇ ಲೇವಡಿ ಮಾಡಿಕೊಂಡರೂ ಸಂಸಾರದ ಸಾಮರಸ್ಯಕ್ಕೆ ಇದು ಅಗತ್ಯ ಎಂದು ಅರಿತಿದ್ದವರು .ವತ್ಸಲೆಯ ಅಣ್ಣ ಸುಬ್ಬರಾಮುವಿನ ವಿವಾಹ ಸಂದರ್ಭದಲ್ಲಿ ಅವನ ಗೆಳೆಯ ರಾಮನಾಥನ ಪರಿಚಯವಾಗಿ ನಂತರ ಉಭಯ ಕುಟುಂಬದವರು ಮಾತನಾಡಿ ವಿವಾಹವು ಆಗುತ್ತದೆ .ಸಾಮಾನ್ಯ ರೂಪಿನ ಕಲ್ಯಾಣಿಯಲ್ಲಿ ರಾಮನಾಥ ತನ್ನ ಕನಸಿನ ಅರಸಿಯನ್ನು ಕಂಡು ತಮ್ಮ ವೈವಾಹಿಕ ಜೀವನದ ಬಗ್ಗೆ ನೂರು ಕನಸು ಕಟ್ಟಿಕೊಂಡಿರುತ್ತಾನೆ. ರಾಮನಾಥನ ತಾಯಿ ಸಾತಮ್ಮ ತುಂಬಾ ಪಾಪದ ಹೆಂಗಸು ಜಿಪುಣ ಸ್ವಭಾವದ ಶೇಷಯ್ಯನವರ ಅವರ ಬಯಕೆ ಗಳನ್ನೇನೋ ತೀರಿಸದಿದ್ದರೂ ಇದ್ದುದರಲ್ಲಿಯೇ ತೃಪ್ತರು .ಮದುವೆಯಾದ ಮೇಲೆ ಎರಡನೆಯ ಶಾಸ್ತ್ರವಾಗುವವರೆಗೂ ವಾರವಾರಕ್ಕೂ ರಾಮನಾಥನ ಓಡಾಟ ದಿನದಿನವೂ ಅವರ ಮಧ್ಯದ ಪತ್ರಗಳ ಓಡಾಟ ಅವರ ಪ್ರೀತಿಯನ್ನು ಬಣ್ಣಿಸುತ್ತದೆ. ಬರಬರುತ್ತಾ ವಿವಾಹವಾಗಿ 2ವರ್ಷಗಳಾಗುವಷ್ಟರಲ್ಲಿ ಜೀವನ ಉತ್ಸಾಹವೇ ಇಲ್ಲದೆ ನೀರಸತನ ಆವರಿಸುವುದನ್ನು ಮುಂದೆ ಕಾಣಬಹುದು .ರಾಮನಾಥನಿಗೆ ಕಲ್ಯಾಣಿ ಕೆಲಸಕ್ಕೆ ಹೋಗುವುದು ಇಷ್ಟವಿರದಿದ್ದರೂ ಹಠ ಮಾಡಿ ಕೆಲಸಕ್ಕೆ ಸೇರುತ್ತಾಳೆ. ನಿಭಾಯಿಸಲಾಗದೆ ಆರೋಗ್ಯ ತಪ್ಪಿದಾಗ ವಿಧಿಯಿಲ್ಲದೆ ರಾಮನಾಥ ಹೆಡ್ ಮೇಡಂಗೆ ಹೇಳಿ ಕೆಲಸದಿಂದ ತೆಗೆಸುತ್ತಾನೆ .ಅದಕ್ಕಾಗಿ ಕೋಪ ಮಾಡಿಕೊಂಡು ಕಲ್ಯಾಣಿ ತಾಯಿ ಮನೆಗೆ ಹೋಗುತ್ತಾಳೆ. ಅಲ್ಲಿ ಅವಳಿಗೆ ಸಿಕ್ಕ ಸ್ವಾಗತ ಎಂಥದ್ದು ಅವಳ ಮನ ಬದಲಾಯಿತೇ? ಅವರಿಬ್ಬರೂ ಒಂದಾದರೆ? ತಿಳಿಯಲು ಕಾದಂಬರಿ ಓದಬೇಕು.

ಇಲ್ಲಿ 4 ಜೋಡಿಗಳನ್ನು ಚಿತ್ರಿಸಿ ಸಂಸಾರ ಎಂದರೇನು ಎಂಬುದರ ಚಿತ್ರ ಕೊಡುತ್ತಾರೆ ಲೇಖಕಿ. ಕಲ್ಯಾಣಿಯ ತಂದೆತಾಯಿ ತಾಯಿಯದೇ ಮೇಲುಗೈ ಎದುರಿಸದ ಗಂಡ .ರಾಮನಾಥನ ತಂದೆ ತಾಯಿ .ತದ್ವಿರುದ್ಧ ಪತಿಯನ್ನು ಅನುಸರಿಸುವ ಪತ್ನಿ. ರೂಡಿಗತ ಸಂಪ್ರದಾಯ .ಕೋಪಿಷ್ಟ ಅನಂತನನ್ನು ಹೊಂದಿಕೊಂಡು ಒಳ್ಳೆಯತನದಲ್ಲಿ ಎಲ್ಲರೊಡನೆ ಸಂತೋಷವಾಗಿರುವ ವತ್ಸಲೆ ಹಠಮಾರಿ ತನದಿಂದ ಸುಖೀ ದಾಂಪತ್ಯವನ್ನು ಹಾಳು ಮಾಡಿಕೊಳ್ಳುವ ಕಲ್ಯಾಣಿ ರಾಮನಾಥ . ಪ್ರೀತಿಸಿ ಮದುವೆಯಾದ ಈ ಜೋಡಿ ಹೊಸದರಲ್ಲಿ ಎಲ್ಲಾ ಸಂತೋಷವನ್ನು ಸವಿದು ಆಮೇಲೆ ತೀರ ನೀರಸ ತನಕ್ಕೆ ಬೀಳುವುದು ಇಂದಿನ ಕಾಲಕ್ಕೂ ಅನ್ವಯಿಸುತ್ತದೆ ಯಾವುದೇ ವಸ್ತುವಾಗಲಿ ವಿಷಯವಾಗಲಿ ಅಪರೂಪದ್ದಾದ  ಅದರ ಸೊಗಸೇ ಬೇರೆ Familiarity breeds contempt ಅನ್ನುವಂತೆ ಅತಿಯಾಗುತ್ತಾ ಹೇವರಿಕೆ ಬರುತ್ತದೆ ಕಾಲಕಾಲಕ್ಕೆ ತಕ್ಕ ಅಗಲಿಕೆ ನಮ್ಮ ಹತೋಟಿಯಲ್ಲಿ ಇರುವ ಭಾವನೆ ನಡವಳಿಕೆಗಳು ಸಂಬಂಧಕ್ಕೆ ಹೊಸತನದ ಆಯಾಮವನ್ನು ಸಂಭ್ರಮವನ್ನು ಕೊಡುತ್ತದೆ .ಸಂಬಂಧಗಳು ಎಳೆ ಸಸಿಗಳ ಹಾಗೆ ಸತತ ಧ್ಯಾನ ಅವುಗಳ ಮೇಲಿರಬೇಕು ಯಾವುದು ಅತಿಯಾದರೂ ಬೆಳವಣಿಗೆಗೆ ಅಡ್ಡಿ .”ಅತಿ ಸರ್ವತ್ರ ವರ್ಜಯೇತ್” ಎನ್ನುವುದು ಬದುಕಿನ ಮೂಲಮಂತ್ರ ವಾಗಬೇಕು ಎಂಬುದನ್ನು ಮನದಟ್ಟು ಮಾಡುವ ಕೃತಿ. ಮದುವೆಯಾದ ಹೊಸದರಲ್ಲಿನ ಪ್ರೀತಿಯು  ಕ್ರಮೇಣ ಕಡಿಮೆಯಾಗುವುದನ್ನು ದಿನದ ವಾಕಿಂಗ್ ಮತ್ತು  ಹೂ ತರುವ ಅಭ್ಯಾಸದ ಉದಾಹರಣೆಗಳ ಮೂಲಕ ತೋರಿಸಿದ್ದಾರೆ . ಹಿರಿಯ ಜೋಡಿಗಳಲ್ಲಿ ಬಾಂಧವ್ಯ “ಆರಂಭ ಗುರ್ವೀ ಕ್ಷಯಿಣೀ ಕ್ರಮೇಣ” ಎಂಬಂತಿರದೆ ನಿರಂತರ ಹರಿಯುವ ಸಲಿಲದಂತೆ ಇದ್ದುದರಿಂದಲೇ ಅದರ ಸೊಗಸು ಸವಿ ಸೊಗಡು ತಂಪು ಉಳಿದುಕೊಂಡಿವೆ ಎಂಬುದನ್ನು ಅತಿಯಾಗಿ ಯಾವುದಕ್ಕೂ ಎಡೆಗೊಡದೆ ಜೀವನದ ಚಿಕ್ಕ ಚಿಕ್ಕ ವಿಷಯಗಳನ್ನು ಅನುಭವಿಸುವ ಆಹ್ಲಾದಿಸುವ ಮನಸ್ಸು ಬೇಕು ಎಂಬುದನ್ನು ಒತ್ತು ಶ್ಯಾವಿಗೆ ಮಾಡಲು ಪಡುವ ಸಂಭ್ರಮದ ರೂಪಕ ತೋರಿಸುತ್ತದೆ.  “ಸಾತಮ್ಮನಿಗೆ ಬದನೆಕಾಯಿ ಎಣ್ಣೆಗಾಯಿ ಮಾಡುವುದರಲ್ಲಿದ್ದ ಉತ್ಸಾಹ ಕಲ್ಯಾಣಿಗೆ ಜೀವನದಲ್ಲಿ ಇರಲಿಲ್ಲ “ಎಂಬ ಸಾಲು ನಿಜಕ್ಕೂ ಅರ್ಥಪೂರ್ಣ. ಆಗಿನ ಕಾಲಕ್ಕೆ ಅಪರೂಪವೆನಿಸುವ ಸ್ವಾತಂತ್ರ್ಯವಿತ್ತು ಕಲ್ಯಾಣಿಗೆ ಅತ್ತೆಯ ಮನೆಯಲ್ಲಿ ಗಂಡ ಮತ್ತು ಅತ್ತೆಯ ಒಳ್ಳೆಯತನದ ದುರುಪಯೋಗವಾಗಿತ್ತು ಅವಳ ಹಠದಿಂದ ಅವಶ್ಯಕತೆಯಿರದಿದ್ದರೂ ತನ್ನ ಆಡಂಬರಕ್ಕಾಗಿ ಆರೋಗ್ಯವನ್ನು ಲೆಕ್ಕಿಸದ ದುಡಿತ ಯಾವ ಪುರುಷಾರ್ಥಕ್ಕಾಗಿ ಎನಿಸುತ್ತದೆ ಅಲ್ಲದೆ ಗಂಡನ ಮಾತಿಗೂ ಬೆಲೆ ಕೊಡದಷ್ಟು ಅವಳ ಮನೋಭಾವ  ರಕ್ತದ ರುಚಿ ಕಂಡ ಹೆಬ್ಬುಲಿಯಂತಾಗಿದ್ದ ಗಳು ಹಣದ ರುಚಿ ಕಂಡ ಕಲ್ಯಾಣಿ ಎಂಬ ಮಾತು ದೃಢೀಕರಿಸುತ್ತದೆ.  ಇದೇ ರೀತಿ  ಮಾತಿನ ವೈಭವೀಕರಣವನ್ನು ಕಲ್ಯಾಣಿಯ ಮಾತಿನ ಗೆಳತಿ ಶಾರದೆಯ ಪಾತ್ರದ ಮೂಲಕ ತೋರಿಸಿದ್ದಾರೆ. ಸಹಾನುಭೂತಿ ತೋರಿಸಿ ರಾಮನಾಥನ ಜೊತೆ ಸಹಕರಿಸಿದ ಹೆಡ್ಮೇಡಮ್ ಮಾಣಿಕ್ಯಮ್ಮ ಅವರ ಪಾತ್ರ ಚಿತ್ರಣವು ಚೆನ್ನಾಗಿ ಬಿಂಬಿತವಾಗಿದೆ . ಬದುಕು ಪ್ರಕೃತಿಯ ಹಾಗೆ ನಿತ್ಯ ನವೋನ್ಮೇಷಾಲಿನಿಯಾಗಿರಬೇಕು . ಯಾವುದೂ ಅತಿ ಆಗಲು ಹೋಗಬಾರದು . ಪ್ರಕೃತಿಯಲ್ಲೂ ಅಷ್ಟೇ ಮಳೆ ಬಿಸಿಲು ಗಾಳಿಗಳು 1 ಹಾಳತ ದಲ್ಲಿದ್ದಾಗ ವಾತಾವರಣ ಸೊಗಸು ಯಾವುದೊಂದು ಅತಿಯಾದರೂ ಹಿಂಸೆಯೇ . ಆ ರೀತಿಯೇ ಬದುಕು.ಸಮತೋಲನದ ಸಹಕಾರದ ಸಹಬಾಳ್ವೆಯ ಬದುಕು ಬೇಕು ಅದಕ್ಕೆ ಕಾಲ ಸಮಯ ಸ್ಥಳಗಳ ಅಪವಾದವಿಲ್ಲ ಎಂಬುದು ಇಲ್ಲಿಯ ನೀತಿ 

 ಬರೆದು ಎಪ್ಪತ್ತು ವರ್ಷಗಳಾದರೂ ಪ್ರಸ್ತುತತೆ ಕಳೆದುಕೊಳ್ಳದ ಕಥಾವಸ್ತು ಜೀವನೋತ್ಸಾಹ ತಲೆಮಾರಿನಿಂದ ತಲೆಮಾರಿಗೆ ಕ್ಷೀಣಿಸುತ್ತಾ ಬತ್ತುತ್ತಾ ಹೋಗುತ್ತಿದೆ ಎನ್ನುವುದರಲ್ಲೆ 2 ಮಾತಿಲ್ಲ. ಬಹುಶಃ ಸವಲತ್ತುಗಳು ಹೆಚ್ಚಾಗುತ್ತಾ ಹೆಚ್ಚಾಗುತ್ತಾ ಜೀವನದ ಮೌಲ್ಯಗಳು ಸವೆಯುತ್ತಿದೆ ಏನೋ ಅನ್ನಿಸುತ್ತಿದೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಾ ಕನಸಿನ ಗಂಟಿಗೆ ಹಂಬಲಿಸುತ್ತಾ ಕಾಣದ ಮರೀಚಿಕೆಯ ಬೆನ್ನಟ್ಟುತ್ತಾ ಇರುವುದು ಮಾನವನ ಸಹಜ ದೌರ್ಬಲ್ಯ ವಿರಬಹುದು . ಅದನ್ನೇ ತಪ್ಪು ಎಂದು ವಿಮರ್ಶಿಸಿ ಸರಿದಾರಿ ತೋರುವುದರಲ್ಲಿ ಕಾದಂಬರಿ ಗೆದ್ದಿದೆ. ಹಾಗಾಗಿಯೇ ಇದು ಸಾರ್ವಕಾಲಿಕ ಸತ್ಯದ ಅನಾವರಣವೂ ಹೌದು. ತ್ರಿವೇಣಿಯವರ ಕಾದಂಬರಿಗಳು ಮೌಲಿಕವೆನಿಸುವುದು ಈ ಮೂರನೆಯ ತಲೆಮಾರಿನಲ್ಲಿಯೂ ಜನಪ್ರಿಯವಾಗಿರುವುದು  ಈ ದೃಷ್ಟಿಕೋನದಲ್ಲಿಯೇ .ಇಂತಹ ಪ್ರಬುದ್ಧ ಚಿಹ್ನೆಯ ಮಾನವ ಅಂತ ಸತ್ವಗಳ ಸಮರ್ಥ ವಿಶ್ಲೇಷಣೆಯ ಲೇಖಕಿ ಅವರನ್ನು ಬಹುಬೇಗ ಕಳೆದುಕೊಂಡಿತು ಕನ್ನಡ ಸಾರಸ್ವತ ಲೋಕದ ದೌರ್ಭಾಗ್ಯ .


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top