ಅಂಕಣ ಸಂಗಾತಿ
ಚಾಂದಿನಿ
ಭೂಮಿಗಡಗಡ; ಎದೆಡವಡವ
ತಿರುಪತಿ ಯಾತ್ರೆ ಸಂಪನ್ನಗೊಳಿಸಿ ಹಿಂತಿರುಗಿ ಮಲಗಿದ್ದೆ. ಮಾಮೂಲಿಯಾಗಿ ನನಗೆ ಬೆಳಗಾಗುವುದೇ ಕಷ್ಟದಲ್ಲಿ. ಅಂತಾದ್ದರಲ್ಲಿ ಲೇಟಾಗಿ ಮಲಗಿದ್ದು ಎಂಬ ಸಕಾರಣವಿರುವಾಗ ಬೇಗ ಎದ್ದೇಳಲಿಕ್ಕುಂಟಾ? ಬೆಳಗ್ಗೆ ಎಂತದೋ ವಿಶಿಷ್ಠ ರೀತಿಯ ಸದ್ದು ಜೊತೆಗೆ ಕಾಲಿಗೆ ಏನೋ ತಟ್ಟಿದ ಹಾಗಾಯ್ತು. ಜೊತೆಗೆ ಒಂದು ಸಣ್ಣ ವೈಬ್ರೇಶನ್, ಫ್ರಾಕ್ಷನ್ ಆಫ್ ಸೆಕುಂಡು, ಅಷ್ಟೆ. ಭೂಕಂಪ ಏನಾರು ಆಯ್ತಾ ಅನ್ನುತ್ತಾ ಗಂಟೆ ಎಷ್ಟಾಯ್ತು ಅಂತ ನೋಡಿದರೆ ಬರೊಬ್ಬರಿ ಒಂಭತ್ತು ಗಂಟೆ ಹತ್ತು ನಿಮಿಷ! ಮೊಬೈಲ್ ಓಪನ್ ಮಾಡಿ ನೋಡಿದರೆ ಎಲ್ಲೆಡೆ ಭೂಕಂಪದ್ದೇ ಸುದ್ದಿ. ದಡಬಡ ಎದ್ದು ಹಲ್ಲುಜ್ಜಿ ಮುಖ ತೊಳೆದು ನಮ್ಮ ಮನೆ ಓನರ್ ಚಿಕ್ಕಪ್ಪ-ಚಿಕ್ಕಮ್ಮನಿಗೆ ಫೋನ್ ಮಾಡಿದರೆ ಅವರಿಗೆ ಗೊತ್ತಾಗಿಲ್ಲ ಅಂದರು.
ನನ್ನ ನಿದ್ದೆಗೆ ಮನೆಯಲ್ಲಿ ಎಲ್ಲರೂ ಬಯ್ಯುವುದಿತ್ತು/ಇದೆ. ಇವಳಿಗೆ ಭೂಕಂಪ ಆದರೂ ಎಚ್ಚರವಾಗದು ಅಂತ. ಏನೋ ಈ ಒಂದು ಇನ್ಸಿಡೆಂಟ್ ಅದಕ್ಕೆ ಅಪವಾದ ಆಗಿಹೋಯ್ತು. ಬಳಿಕ ಹಲವಾರು ಬಾರಿ ಮೆತ್ತಗೆ ಭೂಮಿ ನಡುಗಿದರೂ ನನಗೆ ಒಮ್ಮೆಯಷ್ಟೆ ಅನುಭವ ಆಗಿದ್ದು. ಸುಮಾರು ಒಂದಿಪ್ಪತ್ತು ವರ್ಷದ ಹಿಂದೆ ಬೆಂಗಳೂರಲ್ಲೊಮ್ಮೆ ನನಗೆ ಭೂಕಂಪದ ಅನುಭವ ಆಗಿತ್ತು. ಎರಡನೆ ಮಹಡಿಯಲ್ಲಿದ್ದ ನನಗೆ ಚೆನ್ನಾಗಿ ತೂಗಿದಂತೆ ಆಗಿತ್ತು. ಅದರ ರಭಸ ಮೊನ್ನೆಯ ಇಲ್ಲಿನ ಕೊಡಗು ಗಡಿಯ ಆಸುಪಾಸಿನ ನಡುಕಕ್ಕಿಂತ ಹೆಚ್ಚಿತ್ತು.
ಮತ್ತೆರಡು ದಿನ ಕಳೆದು ಪುನಃ ಕಂಪನ ಆದಾಗ ಚಿಕ್ಕಪ್ಪ ಫೋನ್ ಮಾಡಿ ಕೇಳಿದಾಗಲೇ ಮತ್ತೆ ಕಂಪನ ಆಯಿತು ಅಂತ ಗೊತ್ತಾಗಿದ್ದು. ಆಮೇಲಂತೂ ನಮ್ಮ ಸುಳ್ಯ ಸುತ್ತಮತ್ತಲೆಲ್ಲ ಭೂಕಂಪದ್ದೇ ಸುದ್ದಿ. ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು. ಕಣಕಣ ಪಾತ್ರೆ ಸದ್ದಾಯಿತು, ಬೀರು ನಡುಗಿತು, ಗೋಡೆ ಬಿರುಕು ಬಿಟ್ಟಿತು, ಮಾಡಿನ ಶೀಟ್ ರಟ್ಟಿತು ಹೀಗೇ…. ಒಟ್ಟಿನಲ್ಲಿ ಎಲ್ಲರ ಎದೆಯೊಳಗೆ ಅವ್ಯಕ್ತ ಭೀತಿ. ಗಡಗಡ ಹುಟ್ಟಿಸಿದ ಡವಡವ. ಸುಮ್ಮನೆ ದೆವ್ವದಂತೆ ಕುತ್ತ ಕುಳಿತಿದ್ದಾಗಲೂ ಕಂಪಿಸಿತೋ ಎಂಬ ಭ್ರಮೆ. ನೀರು ಬಿದ್ದ ನೆಲದಲ್ಲಿ ಕಾಲೇನಾದರೂ ಜಾರಿ ವಾಲಿದಂತಾದರೂ ಡೌಟು. ರಸ್ತೆಯಲ್ಲಿ ವಾಹನದ ಸದ್ದಾದಾಗ, ಗ್ಯಾಸ್ ವಿತರಿಸುವ ಲಾರಿ ಬರುವಾಗ ಇಲ್ಲದಿದ್ದರೂ ಕಂಪನವಾದಂತೇ ಆಗುತ್ತದೆ. ಟೇರೇಸ್ ಮೇಲ್ಗಡೆ ಹಾಕಿರುವ ಶೀಟ್ ಮೇಲೆ ತೆಂಗಿನಕಾಯಿ ಏನಾದರೂ ಬಿದ್ದರಂತೂ ಕೇಳುವುದೇ ಬೇಡ. ಭೂಕಂಪವೇನೋ ಅಂತ ಟಪಕ್ಕ ಮೊಬೈಲ್ ತೆಗೆದು ನೋಡಿ ಖಾತ್ರಿ ಪಡಿಸಿಕೊಳ್ಳುವುದು. ಜೀವನ ಒಂದೆರಡು ದಿನದಲ್ಲಿ ಹೀಗಾಗಿ ಹೋಯ್ತು. ನನ್ನ ದೊಡ್ಡಕ್ಕ ಫೋನ್ ಮಾಡಿ ಹೇಳಿದಳು, ಅಲ್ಲಿ ಒಬ್ಬಳೇ ಇರಬೇಡ, ಇಲ್ಲಿ ಬಾ ಅಂತ. ಬಹುಶಃ ಹೋದರೆ ಎಲ್ಲ ಜೊತೆಯಲ್ಲೇ ಹೋಗೋಣ ಅಂತಿರಬೇಕು.
ನಮ್ಮಮ್ಮ ಹೇಳುತ್ತಿದ್ದರು. ಬಹಳ ಹಿಂದೆ ಒಮ್ಮೆ ಕಂಪನ ಆಗಿತ್ತಂತೆ. ಕಂಪನದ ರಭಸಕ್ಕೆ ಪಾತ್ರೆ ಪಗಡಿಗಳು ರಟ್ಟಿ ಬಿದ್ದಿದ್ದವು. ಪ್ರಳಯ ಆಗುತ್ತದೆ ಎಂಬ ವದಂತಿ ಹಬ್ಬಿ ಹೆದರಿದ ಜನರು ಗಮ್ಮತ್ ಮೋಜುಮಸ್ತಿ ಮಾಡಿ ತಮ್ಮ ಕೊನೆಯಾಸೆ ತೀರಿಸಿಕೊಂಡಿದ್ದರಂತೆ. ಇದು ನಾನು ಹುಟ್ಟುವ ಮುಂಚಿನ ಕತೆ. ಆ ಬಳಿಕ ನಮ್ಮೂರಲ್ಲಿ ಭೂಕಂಪ ಆಗಿದ್ದು ನನಗೆ ಗೊತ್ತಿಲ್ಲ. ಪಕ್ಕದ ಕೊಡಗಿನಲ್ಲಿ ಆದ ಅನಾಹುತ ಎಲ್ಲರಿಗೂ ತಿಳಿದದ್ದೇ. ಇತರೆಡೆಗಳಲ್ಲಿ ಭೂಕಂಪ ಆದಾಗ ಟಿವಿಯಲ್ಲಿ ನೋಡಿ ಛೇ…ಛೇ… ಶೇ… ಶೇ…. ಮಾಡಿ ಗೊತ್ತು ಅಷ್ಟೆ!
ಭೂಮಿಯೊಳಗಿಂದ ಇದ್ದಕ್ಕಿದ್ದಂತೆ ಶಕ್ತಿ ಬಿಡುಗಡೆ ಆದಾಗ ಭೂಮಿಯ ಹೊಮೈಯಲ್ಲಿ ಕಂಪಿಸುವುದು ಭೂಕಂಪ. ಭೂಗರ್ಭದಲ್ಲಿರುವ ಟೆಕ್ಟೋನಿಕ್ ಪ್ಲೇಟ್‌ಗಳು ಅಲುಗಿದಾಗ ಕಂಪನವಾಗುತ್ತದೆ ಎಂಬುದಾಗಿ ವಿಜ್ಞಾನ ಹೇಳುತ್ತದೆ. ಬಸವ ತನ್ನ ಒಂದು ಕೊಂಬಿನ ಮೇಲೆ ಭೂಮಿಯನ್ನು ಹೊತ್ತು ನಿಂತಿರುವುದಂತೆ. ಬಸವನಿಗೆ ಸುಸ್ತಾಗಿ ಒಂದು ಕೊಂಬಿನಿಂದ ಇನ್ನೊಂದು ಕೊಂಬಿಗೆ ಬದಲಾಯಿಸುವ ವೇಳೆಗೆ ಭೂಮಿ ನಡುಗುತ್ತದೆ ಎಂಬುದು ಜಾನಪದೀಯ ಕತೆ. ಇನ್ನೊಂದು ಕತೆಯ ಪ್ರಕಾರ ಏಳು ಹೆಡೆಯ ಸರ್ಪ ಭೂಮಿಯನ್ನು ಹೊತ್ತುಕೊಂಡಿದ್ದು ಹೆಡೆಯಿಂದ ಹೆಡೆಗೆ ಬದಲಿಸುವ ವೇಳೆ ಭೂಮಿ ಕಂಪಿಸುತ್ತದೆ ಎಂಬುದಾಗಿ. ಹೀಗಾಗಿದ್ದಲ್ಲಿ ಅದು ಯಾಕೆ ಕೆಲವೆಡೆ ಮಾತ್ರ ಕಂಪಿಸುವುದು ಎಂಬುದು ನನಗೆ ಗೊತ್ತಿಲ್ಲ. ಭೂಮಿ ಮೇಲೆ ಮನುಷ್ಯನ ದುರಾಚಾರ ಅನಾಚಾರಗಳು ಹೆಚ್ಚಾದಾಗ ಸಿಟ್ಟುಗೊಂಡ ಭೂತಾಯಿ ಸಿಟ್ಟಿನಿಂದ ಹೂಂಕರಿಸುತ್ತಾಳೆ ಎಂಬುದು ಮತ್ತೊಂದು ವಾದ.
ಈ ಇಂಡೋನೇಶ್ಯಾ, ಜಪಾನ್ ಮುಂತಾದೆಡೆಗಳಲ್ಲಿ ಭೂಕಂಪನ ಮಾಮೂಲು. ಇಂಡೋನೇಶ್ಯದಲ್ಲಿ ಭೂ ಕುಸಿತ ಪ್ರವಾಹ ಸದಾ ಸುದ್ದಿಯಲ್ಲಿ. ಅಲ್ಲಿನ ಮನೆಗಳೆಲ್ಲ ಬಿದಿರು, ಮರದ್ದು. ಕುಸಿದು ಹೋದರೆ ಮತ್ತೆ ಸುಲಭದಲ್ಲಿ ನಿರ್ಮಿಸಿಕೊಳ್ಳುವಂತೆ ಅಂತೆ. ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾಗ ಇಂತಹ ಸುದ್ದಿಗಳನ್ನು ಬರೆದೂ ಬರೆದೂ ಸಾಕಾಗಿ ಹೋಗಿದೆ. ಇಂಡೋನೇಶ್ಯ ಅಂದ್ರೆ ಭೂಕಂಪ, ಇರಾಕ್ ಅಂದರೆ ಬಾಂಬ್ ಸ್ಫೋಟ, ಚೀನಾ ಗಣಿ ಕುಸಿತ…. ಹೀಗೆ. ಎಲ್ಲೂ ದೂರದಲ್ಲಿ ಆಗುವ ಸುದ್ದಿಯನ್ನು ವಿಶ್ಲೇಷಿಸುವುದಕ್ಕೂ, ನಮ್ಮ ಕಾಲ್ಬುಡಕ್ಕೆ ಬಂದಾಗ ಆಗುವ ಅನುಭವಕ್ಕೂ ಬಹಳ ವ್ಯತ್ಯಾಸವಿದೆ.
ಅಲ್ಲ ಮಾರ್ರೆ, ನಾವು ನಿದ್ದೆಯಲ್ಲಿರುವಾಗ ಅದೂ ಇಹದ ಪರಿವೆಯೇ ಇಲ್ಲದಂತೆ ನಿದ್ರಿಸುತ್ತಿರುವ ನಡುರಾತ್ರಿ ನಡುಗಿದರೆ ಮಾಡುವುದೇನು? ನನ್ನ ಮಟ್ಟಿಗಂತೂ ನಿದ್ದೆಯೇ ದೇವರು. ಬಡಪೆಟ್ಟಿಗೆ ಎಚ್ಚರವಾಗುವ ಜಾತಿಯವಳಲ್ಲ ನಾನು. ನಮ್ಮ ಕೆಳಗಡೆ ಮನೆಯಲ್ಲಿ ಇರುವ ಹುಡುಗಿ ಹೇಳುತ್ತಿದ್ದಳು, ಆವಳ ಮೇಡಂ ಹೇಳಿದರಂತೆ, ಎಲ್ಲರೂ ನಿದ್ರಿಸುವ ವೇಳೆ ಭೂಕಂಪ ಆಗಿ ‘ಹೋದರೆ’ ರಗಾಳೆ ಇಲ್ಲ ಎಂಬುದಾಗಿ. ಒಮ್ಮೆಗೇ ಹೋಗುವುದಾದರೆ ನಂದೂ ಅದಕ್ಕೇ ಓಟು. ಅರೆಬರೆ ಆದರೇ? ಆದರೆ ಆ ಹುಡುಗಿಗೆ ಮಾತ್ರ ಹಗಲೇ ಆದರೆ ಚಂದವಂತೆ. ಒಂದು ಎದ್ದು ಓಡಲು ಸುಲಭ. ಎರಡನೆಯದಾಗಿ ಹಗಲಾದರೆ ಎಲ್ಲವನ್ನು ನಿಚ್ಚಳವಾಗಿ ನೋಡಬಹುದಂತೆ.
ನಂಗೆ ಭೂಮಿಯ ಈ ನಡುಗಾಟ ಆರಂಭವಾದ ನಂತರ ಹೊಸ ಡೈಲಮಾ. ಮನೆಯಲ್ಲಿರುವಾಗ ಹೇಗೆಹೇಗೋ ಇರ್ತೀವಲ್ಲ. ತಲೆಗೆ ಬಾಚಣಿಗೆ ಹಾಕದ ದಿನಗಳೂ ಇರ್ತವೆ. ಡ್ರೆಸ್ಸೂ ಹೇಗೆಹೇಗೋ. ನಡುರಾತ್ರಿ ಕಂಪಿಸಿ ಎದ್ದೋಡುವ ಪರಿಸ್ಥಿತಿ ಎದುರಾದರೆ ಹೇಗೆ? ಮನೆಯಲ್ಲೂ ಚೆನ್ನಾಗಿರೋ ಉಡುಪನ್ನೇ ತೊಟ್ಟಿರುವುದಾ, ಇಲ್ಲ ಕೈಯಲ್ಲಿ ಹಿಡಿವಷ್ಟು ಅಗತ್ಯವಸ್ತುಗಳನ್ನು ಪ್ಯಾಕ್ ಮಾಡಿದ ಒಂದು ಬ್ಯಾಗ್ ಸಿದ್ಧ ಪಡಿಸಿ ಇಡುವುದಾ, ಅಥವಾ ಮೇಲೆ ಮೇಲೆ ಎರಡೆರಡು ಬಟ್ಟೆಗಳನ್ನು ಧರಿಸಿರುವುದಾ? ಇಲ್ಲವೇ, ಮದುವೆ ಶಾಪಿಂಗ್, ಟೂರ್ ಶಾಪಿಂಗ್, ಅಥವಾ ಮಾನ್ಸೂನ್ ಶಾಪಿಂಗ್ ಎಲ್ಲ ಮಾಡಿದಂತೆ ‘ಭೂಕಂಪ ಶಾಪಿಂಗ್’ ಮಾಡಿ ರೆಡಿ ಇರುವುದಾ? ಮನೆಯಲ್ಲಿ ಗಂಜಿ ಮಾಡಿದರೆ ಊಟಮಾಡಲು ಆದೀತೆ ಅಥವಾ ಗಂಜಿ ಕೇಂದ್ರಕ್ಕೆ ಹೋಗಬೇಕಾದೀತೇ…. ಎಲ್ಲ ಅಯೋಮಯ.
ಅದೆಲ್ಲ ಇರ್ಲತ್ಲಾಗೆ, ಮಳೆ ನೀರು ಬಿದ್ದು ಒದ್ದೆಯಾದ ಟೈಲ್ಸ್ ನೆಲದಲ್ಲಿ ಬೇಗಬೇಗ ಓಡುವುದಾದರೂ ಹೇಗೇ? ಕೆಲವು ಎಲಿಜಿಬಲ್ ಬ್ಯಾಚುಲರ್ ಹುಡುಗರಿಗಂತೂ ಇನ್ನು ನಮ್ಮೂರಿನ ಹುಡುಗರಿಗೆ ಹುಡುಗಿ ಕೊಡಲಾರರು ಎಂಬ ಚಿಂತೆ. ಮತ್ತೆ ಕೆಲವರಿಗೆ ಬೆಕ್ಕು ಸಾರಿನ ಪಾತ್ರೆ ಮುಚ್ಚಳ ಬೀಳಿಸಿದರೂ ನಡುರಾತ್ರಿ ಹೆದರಿ ಎದ್ದು ಕುಳಿತುಕೊಳ್ಳುವಂತಾಯಿತಲ್ಲ ಶಿವನೇ ಪರಿಸ್ಥಿತಿ ಎಂಬ ಮಂಡೆ ಬಿಸಿ. ನಂಗಂತೂ ಇಷ್ಟೂದ್ದ ಬರೆದ ಈ ‘ಭೂಕಂಪಾಯಣ’ ಪಬ್ಲೀಶ್ ಆಗುತ್ತದೋ, ಒಂದೊಮ್ಮೆ ಆದರೆ ನೋಡಲು ನಾನಿರುತ್ತೇನೋ ಇಲ್ಲವೋ…. ಹೀಗೆಲ್ಲ ವ್ಯಥೆಗಳು.
ಈ ಸ್ಮಾರ್ಟ್ ಫೋನ್ ಬರುವ ಮೊದಲು ಹೇಗಾದರೂ ಆಗುತ್ತಿತ್ತು. ಈಗ ಹತ್ತು ನಿಮಿಷಕ್ಕೊಮ್ಮೆ ಫೋನ್ ನೋಡದಿದ್ದರೆ ತಿಂದದ್ದು ಕರಗದು. ಹೊಟ್ಟೆಗೆ ಅನ್ನವಿಲ್ಲದೆ ಎರಡು ದಿನ ಇರಬಹುದು. ಆದರೆ ಮೊಬೈಲ್ ನೋಡದೆ ಇರುವುದ ಕಷ್ಟಕಷ್ಟ. ಹೀಗಿರುವಾಗ ಗ್ರಹಚಾರ ತಪ್ಪಿ ಎಲ್ಲ ಬಿಟ್ಟು ಓಡುವ ಪರಿಸ್ಥಿತಿ ಏನಾದರೂ ಬಂದರೆ ಮೊಬೈಲ್ ಹಿಡಿದೇ ಓಡುದಾ; ಹಾಗೆ ಓಡುದಾ…. ಮೊನ್ನೆ ಫೇಸ್ಬುಕ್ಕಲ್ಲಿ ಒಂದು ಸ್ಟೇಟಸ್ ಹಾಕಿದ್ದೆ. “ಮೊಬೈಲ್, ಚಾರ್ಜರ್ ಎಲ್ಲ ಯಾವಾಗಲೂ ಎದೂರು ಕೈಗೆ ಸಿಗುವಂತೆ ಇರಿಸಬೇಕು. ಎಷ್ಟೊತ್ತಿಗೆ ಭೂಮಿ ನಡುಗುತ್ತೋ, ಎಷ್ಟೊತ್ತಿಗೆ ಓಡ್ಬೇಕಾಗುತ್ತೋ” ಅಂತ. ಅದ್ಕೆ ನನ್ನ ಬೆಂಗ್ಳೂರತ್ತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪವರ್ ಬ್ಯಾಂಕನ್ನೂ ಫುಲ್ ಚಾರ್ಚ್ ಮಾಡಿ ಇಟ್ಟುಕೋ ಅಂತ ಸಜೆಸ್ಟ್ ಮಾಡಿದರು!
ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ