ಕಾವ್ಯ ಸಂಗಾತಿ
ಕುರಿಮರಿ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಅರಿವಿರದೊಂದು ಬೃಹತ್ ಊರಿನಲಿ
ಕುರಿಮರಿಯೊಂದು ತಪ್ಪಿಸಿಕೊಂಡಿದೆ
ಹುಡುಕಿಕೊಡಲು ವಿನಂತಿ ಮತಿವಂತರಲಿ
ಆ ಪುಟ್ಟ ಮರಿ ಹೆತ್ತವ್ವನಿಗೆ ಅಂಧತ್ವ
ಸಾಕಿದವರಿಬ್ಬರೂ ಕಿವುಡರು
ಮತ್ತು ಜನನದಿಂದಲೆ ಮೂಕರು
ಅಂಥ ಯಾವ ದೈಹಿಕ ತೊಡಕಿಲ್ಲ ಮರಿಗೆ
ಸಾಕಿದವರಿಗೆ ಕೂಗಿ ಹೇಳಲು ಬಾಯಿಲ್ಲ
ಅಕ್ಷರ ಗಂಧವಂತು ಮೊದಲೆ ಇಲ್ಲ
ಕೊಟ್ಟಿಗೆಯಲಿ ಕುರುಡು ಕುರಿಯ
ಪಕ್ಕ ಇರದ ತನ್ನ ಎಳೆ ಮರಿಯ
ನೆನೆದು ಅಳಲಿನರಚು ಒಂದೇ ಸಮ
ಇಡೀ ಊರಿನ ಹಾದಿಬೀದಿಗಳಲು
ಮಾಂಸಕೆ ಹಸಿದ ಹುಚ್ಚು ಬಾಯಿಗಳು
ಯಾವೊಂದು ದಾರಿಯಲೂ ಇರದು
ಎಳೆ ಮರಿಯೆಂಬ ಕರುಣೆ ಒಂದಿನಿತು
ಆ ಪುಟ್ಟ ಮುಗ್ಧ ಕುರಿಮರಿಗೆ
ಅದರ ಮಾಲಿಕ ಇಟ್ಟ ಹೆಸರು ಸತ್ಯ
ಅದೀಗ ಎಡೆಬಿಡದೆ ಓಡುತಿದೆ ನಿತ್ಯ
ಅರಚುತ್ತ ಭಯದ ಗಲಿಬಿಲಿಯಲಿ
ಅರಿವಿರದ ಆ ಊರ ಗಲ್ಲಿಗಲ್ಲಿಗಳಲಿ
ಹಿಂದೆ ಹಿಂಬಾಲಿಸಿ ಓಡುತಿರುವ
ಹಸಿದ ಹುಲಿಯಂಥ ಹಿಂಡುನಾಯಿ!
ಸತ್ಯ ಮತ್ತು ದಬ್ಬಾಳಿಕೆಯ ದುನಿಯ
ಮನಮುಟ್ಟುವ ದಿನನಿತ್ಯದ ಕಥೆ!
Ver nice uncle