ಗಝಲ್

ಕಾವ್ಯ ಸಂಗಾತಿ

ಗಝಲ್

ವಾಣಿ ಯಡಹಳ್ಳಿಮಠ

ನನ್ನ ಮನಸಿಗೂ ಭಾವನೆಗಳಿವೆಯೆಂದು
ಯಾರಿಗೂ ತಿಳಿಯಲಿಲ್ಲ
ಎದೆಯೊಡೆದರೆ ನನಗೂ ನೋವಾಗುವುದೆಂದು
ಯಾರಿಗೂ ತಿಳಿಯಲಿಲ್ಲ

ಎಲ್ಲರನೂ ಆಲಿಸುವ ಕಾತುರದ
ಕೇಳುಗ ನಾನು
ನನ್ನಲ್ಲೂ ಮಾತುಗಳಿವೆಯೆಂದು
ಯಾರಿಗೂ ತಿಳಿಯಲಿಲ್ಲ

ತಮ್ಮಳುವಿನ ಹೊರೆಯಿಳಿಸಲು
ನನ್ನನರಸಿ ಬರುವರು ಬಲು ಬಾರಿ
ನನ್ನ ಭಾವವೂ ಭಾರವಾಗುವುದೆಂದು
ಯಾರಿಗೂ ತಿಳಿಯಲಿಲ್ಲ

ನನ್ನವರ ಕಂಬನಿಯು ಕೆಳಗಿಳಿವ ಮುನ್ನವೇ
ಕಣ್ಣೊರೆಸಲು ಕರ ಒಯ್ಯುವೆ
ಈ ಕಣ್ಣಲ್ಲೂ ಕಡಲೊಂದಿರುವುದು
ಯಾರಿಗೂ ತಿಳಿಯಲಿಲ್ಲ

‘ವಾಣಿ’ಯ ಹುಸಿನಗೆಯ ನೋಡಿ
ಹಸಿರಾಗುವವರೇ ಎಲ್ಲ
ಹಸಿಗಾಯವೊಂದು ಹಿಂಸಿಸುವುದು
ಯಾರಿಗೂ ತಿಳಿಯಲಿಲ್ಲ


2 thoughts on “ಗಝಲ್

Leave a Reply

Back To Top