ಅಂಕಣ ಸಂಗಾತಿ

ಗಜಲ್ ಲೋಕ

ಗಿರಿಯಪ್ಪನವರ ಗಜಲ್ ಝರಿಯಲ್ಲಿ

ಗಜಲ್ ಗುನುಗುತ್ತಿರುವ ಸಹೃದಯಿಗಳೆ, ತಮಗೆಲ್ಲರಿಗೂ ಗಜಲ್ ಪಾಗಲ್ ನ ದಿಲ್ ಸೇ ಸಲಾಮ್…ಗುರುವಾರ ಬಂತೆಂದರೆ ಸಾಕು, ತಾವುಗಳು ಗಜಲ್ ಗೋ ಒಬ್ಬರ ಪರಿಚಯದ ನಿರೀಕ್ಷೆಯಲ್ಲಿರುತ್ತೀರಿ ಎಂಬುದ ನಾ ಬಲ್ಲೆ… ತಮ್ಮೆಲ್ಲರ ಈ ಪ್ರೀತಿಗೆ, ಕನವರಿಕೆಗೆ ಹೇಗೆ ಪ್ರತಿಕ್ರಿಯಿಸಲಿ…ತಮ್ಮೆಲ್ಲರ ಪ್ರೀತಿಗೆ ಸೋತು ಪ್ರತಿ ವಾರದಂತೆ ಈ ವಾರವೂ ಸಹ ಓರ್ವ ಗಜಲ್ ಕಾರ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತಿದ್ದೇನೆ. ಸ್ವಾಗತಿಸುವಿರಲ್ಲವೇ….!!

ಇನ್ನೂ ಹಲವು ನೋವುಗಳಿವೆ ಪ್ರೀತಿಯನ್ನು ಹೊರತುಪಡಿಸಿ

ಸುಖಗಳು ಇನ್ನೂ ಇವೆ ಮಿಲನದ ಸುಖವನ್ನು ಹೊರತುಪಡಿಸಿ

ಫೈಜ್ ಅಹ್ಮದ್ ಫೈಜ್

         ನಮ್ಮ ಲೋಕ ನಿರಂತರವಾಗಿ ಚಲಿಸುತ್ತಲೆ ಇರುತ್ತದೆ. ನಿಂತವರಿಗೂ ಕಾಣಿಸುತ್ತದೆ, ತುಸು ಮಾತ್ರ. ನಡೆಯುತ್ತ ನೋಡುತ್ತಿರುವವರಿಗೆ ಲೋಕದೊಡನೆ ಬೆರೆಯಲು, ಅನುಸಂಧಾನಗೈಯಲು ಸಾಧ್ಯವಾಗುತ್ತದೆ. ಹಾಗೆ ಬೆರೆತಾಗ ಮಾತ್ರ ಮನುಷ್ಯ ತನ್ನನ್ನು ತಾನು ಮರೆಯಲು ಸಾಧ್ಯವಾಗಬಹುದು. ಆವಾಗ ತಾನು ಕಳೆದುಕೊಂಡದ್ದನ್ನು ಹುಡುಕಲು ಪ್ರಯತ್ನಿಸಿ ಲೌಕಿಕದಾಚೆಯ ಪರಪಂಚವನ್ನು ಎದುರುಗೊಳ್ಳುತ್ತಾನೆ. ಈ ಲೌಕಿಕ-ಅಲೌಕಿಕದ ನಡುವೆ ಇರುವ ಬಾಳು ಯಾರಿಗೂ ಅಷ್ಟು ಸರಳವಾಗಿ, ಸುಲಭವಾಗಿ ದಕ್ಕಲಾರದು. ಯಾವ ಸಂಗತಿಗಳು ನಮಗೆ ಬಿಡುಗಡೆಯ ದಾರಿಯನ್ನು ತೋರಿಸುತ್ತವೆ ಎಂದುಕೊಂಡಿರುತ್ತೇವೆಯೊ ಅವೆ ನಮಗೆ ಹಲವು ಬಾರಿ ಬಂಧಿನಕ್ಕೆ ಕಾರಣವಾಗುತ್ತವೆ! ಈ ಹಿನ್ನೆಲೆಯಲ್ಲಿ ಬದುಕು ಒಂದೇ ಬಾರಿಗೆ ಅರ್ಥವಾಗುವುದಿಲ್ಲ. ತಾಯಿಯ ಗರ್ಭದಿಂದ ಭೂಮಿಗೆ ಚುಂಬಿಸುವಾಗ ಆರಂಭವಾದ ಜೀವನವು ಮಣ್ಣಲಿ ಮಣ್ಣಾಗುವವರೆ ಸದಾ ಕಲಿಯುತ್ತಲೆ, ಕಲಿಸುತ್ತಲೆ ಇರುತ್ತದೆ. ಈ ಕಲಿಕೆಗೆ ಹಲವು ಆಯಾಮಗಳಿವೆ. ಅವುಗಳಲ್ಲಿ ಸಾಂಸ್ಕೃತಿಕ ರಾಯಭಾರತ್ವವನ್ನು ಹೊತ್ತಿರುವ ಸಾಹಿತ್ಯದ ಪಾತ್ರ ಅನಾಯಾಸವಾಗಿ ಕೈಗೆ ಎಟುಕದು. ಕಾಲಾತೀತ, ದೇಶಾತೀತವಾದ ಬರಹದ ದಾಸ್ತಾನ್ ಸಹೃದಯ ಓದುಗರ ಮನದಲ್ಲಿ ದಿನನಿತ್ಯವೂ ಪೂಜೆಗೆ ಒಳಪಡುತ್ತಿದೆ‌. ಪೂಜಿಸ್ಪಲ್ಪಡುತ್ತಿರುವ ಹಲವು ಸಾಹಿತ್ಯದ ಪ್ರಕಾರಗಳಲ್ಲಿ ‘ಗಜಲ್’ ಎಂಬ ದಿಲ್ ಕಾ ಆಯಿನಾ ಮುಂಚೂಣಿಯಲ್ಲಿದೆ.‌ ಮೋಹದ ನಿರ್ವಾಣವನ್ನು ಕಡಿತಗೊಳಿಸಿ ಲೌಕಿಕ ಮತ್ತು ಅಲೌಕಿಕ ಎರಡೂ ಒಂದೇ ಎಂದು ಹೇಳುವ ‘ಗಜಲ್’ ಮನುಕುಲದ ಐಹಿಕ ಬದುಕಿನ ಘನತೆಯನ್ನು ಹೆಚ್ಚಿಸಿದೆ. ಈ ನೆಲೆಯಲ್ಲಿ ಗಮನಿಸಿದಾಗ ಜಗತ್ತಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಗಜಲ್ ಅಲ್ಲಿಯ ಜನರ ಧ್ವನಿಯಾಗಿ ಕೇಳಿಸುತ್ತದೆ!! ಇದಕ್ಕೆ ಭಾಷೆ, ಭೌಗೋಳಿಕತೆ, ಸಂಸ್ಕೃತಿ, ತತ್ವ, ಜಾತಿ, ಧರ್ಮಗಳ ಹಂಗಿಲ್ಲ. ಎಲ್ಲ ಇದ್ದು ಏನೂ ಇಲ್ಲದಂತೆ ಬದುಕುವ, ಏನು ಇಲ್ಲದಿದ್ದರೂ ಎಲ್ಲ ಇದೆ ಎಂದು ಬಾಳಲು ಕಲಿಸುವ ಉಸ್ತಾದ್ ಎಂದರೆ ಅದು ನಮ್ಮ ಈ ಗಜಲ್. ಇದು ಮನುಷ್ಯನ ಘನತೆಯನ್ನು ಹೆಚ್ಚಿಸುತ್ತ, ಪ್ರೇಮದ ಸ್ವಾತಂತ್ರ್ಯವನ್ನು ಅನುಭಾವ ಮಾಡಿಸುತ್ತದೆ. ಇಂಥಹ ‘ಗಜಲ್’ ಗುಂಗಿನಲ್ಲಿರುವ ಅಸಂಖ್ಯಾತ ಸುಖನವರ್ ಗಳಲ್ಲಿ ಕಿರಸೂರ ಗಿರಿಯಪ್ಪ ಅವರೂ ಒಬ್ಬರು.

      ಕಿರಸೂರ ಗಿರಿಯಪ್ಪ ಎಂಬ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಗಿರಿಯಪ್ಪ ಆಸಂಗಿಯವು ಬಾಗಲಕೋಟದ ಕಿರಸೂರ ಗ್ರಾಮದವರು. ಎಂ.ಎ ಕನ್ನಡ ಪದವೀಧರರಾದ ಶ್ರೀಯುತರು ತಮ್ಮ ಕಾಲೇಜು ದಿನಗಳಿಂದಲೇ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ತಮ್ಮನ್ನು ತಾವು ಬರಹದಲ್ಲಿ ತೊಡಗಿಸಿಕೊಂಡಿದ್ದಾರೆ. ‘ನಾಭಿಯ ಚಿಗುರು’ (೨೦೧೫) ಎಂಬ ಕವನ ಸಂಕಲನ, ‘ಅಲೆವ ನದಿ’ (೨೦೨೦) ಎಂಬ ಗಜಲ್ ಸಂಕಲನಗಳನ್ನು ಪ್ರಕಟಿಸಿ ಓದುಗರ ಜ್ಞಾನದ ಮಡಿಲಿಗೆ ಹಾಕಿದ್ದಾರೆ. ಇವರ ಹಲವು ಕಾವ್ಯ, ಗಜಲ್ ಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.‌ ಸದ್ಯ ಇವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗುಗಲಗಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

        ಸದಾ ಕ್ರಿಯಾಶೀಲರಾಗಿರುವ ಕಿರಸೂರ ಗಿರಿಯಪ್ಪ ಅವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ೨೦೧೫ರಲ್ಲಿ ಇವರ ಚೊಚ್ಚಲ ಕೃತಿಗೆ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಪ್ರೋತ್ಸಾಹ ಧನ ಲಭಿಸಿದೆ. ಸಂಚಯ ಬೇಂದ್ರೆ ಸ್ಮೃತಿ ಕಾವ್ಯ ಪ್ರಶಸ್ತಿ (೨೦೧೪), ಸಂಕ್ರಮಣ ಕಾವ್ಯಪ್ರಶಸ್ತಿ (೨೦೧೫, ೨೦೧೮), ತುಷಾರ ಚಿತ್ರಕಾವ್ಯ ಬಹುಮಾನ (ಎರಡು ಸಲ), ಜನಮಿತ್ರ ಸಂಕ್ರಾಂತಿ-ಸಂಬ್ರಮದ ಪ್ರಥಮ ಕಾವ್ಯ ಪ್ರಶಸ್ತಿ (೨೦೧೭), ದಲಿತ ಯುವ ಕಾವ್ಯ ಪ್ರಶಸ್ತಿ (೨೦೧೮), ‘ಪ್ರಜಾಪ್ರಗತಿ ದೀಪಾವಳಿ’ ವಿಶೇಷಾಂಕ ಕಾವ್ಯಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (೨೦೧೮)…ಮುಂತಾದವುಗಳು ಶ್ರೀಯುತರಿಗೆ ಸಂದಿವೆ. 

         ನಮ್ಮ ಬದುಕಿನ ತಲ್ಲಣಗಳೆ ‘ಗಜಲ್’ ನ ಸ್ಥಾಯಿಭಾವ. ಅಂತಃಕರಣವೆ ಇದರ ಬೇರು. ಇಂದು ಗಜಲ್ ಒಂದು ಕಾವ್ಯ ಪ್ರಕಾರಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ದಿನನಿತ್ಯದ ಮನಸ್ಥಿತಿಯಾಗಿದೆ. ಇದು ಲೌಕಿಕ-ಅಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳದೆ ಎರಡರ ಛಾಯೆಯನ್ನು ಒಳಗೊಂಡಿದೆ. ಭೋಗ ಜೀವನದ ತುತ್ತ ತುದಿಯಲ್ಲಿ ನಿಂತು ಯೋಗಿಯಾಗುವ ಕಲೆ ಗಜಲ್ ಗೆ ಕರಗತವಾಗಿದೆ. ಬಹುತ್ವವೇ ಇದರ ಉಸಿರು, ವಿಶ್ವ ಪ್ರಜ್ಞೆಯೆ ಇದರ ಜೀವಾಳ. ಗಿರಿಯಪ್ಪನವರ ಗಜಲ್ ಗಳಲ್ಲಿ ಲೌಕಿಕ ಬದುಕಿನ ನಿತ್ಯ ಸಂಕಟಗಳ ಅನಾವರಣವಿದೆ. ಜನಪದರ ಯಶೋಗಾಥೆ, ಸಾಮಾಜಿಕ ತುಮುಲಗಳು, ಮೌಲ್ಯಗಳ ಹುಡುಕಾಟ, ಜಾಗತೀಕರಣದ ಕಪಿಮುಷ್ಟಿ, ಸಂಬಂಧಗಳ ಕಣ್ಣಾಮುಚ್ಚಾಲೆ, ದುಡ್ಡುಳ್ಳವರ ಲಂಪಟತನ, ಅಧಿಕಾರದ ಧೃತರಾಷ್ಟ್ರ ಮೋಹ, ಧರ್ಮಗಳ ಜಂಗಿ ಕುಸ್ತಿ, ಜಾತಿಗಳ ಕೆಸರೆರಚಾಟ…. ಇವುಗಳೊಂದಿಗೆ ಪ್ರೀತಿ, ಪ್ರೇಮ ಹಾಗೂ ವಿರಹಗಳ ಜುಗಲ್ ಬಂಧಿಯ ಹದವಾದ ಮಿಶ್ರಣದಿಂದ ಇವರ ‘ಗಜಲ್’ ಗಳು ಓದುಗರ ಎದೆಗೆ ದಸ್ತಕ್ ನೀಡುತ್ತಿವೆ. 

       ಮನುಷ್ಯನ ಮೂಲ ಅವಶ್ಯಕತೆಗಳಲ್ಲಿ ಅನ್ನದ ಪಾತ್ರ ಮಹತ್ವದ್ದಾಗಿದೆ. ಈ ಸಂಸಾರದಲ್ಲಿ ಪ್ರತಿಕ್ಷಣ ಹಸಿವಿನ ಬೇಗೆಗೆ ಸಿಲುಕಿ ಉಸಿರಿಗೆ ವಿದಾಯ ಹೇಳುತ್ತಿರುವವರ ಸಂಖ್ಯೆ ಆಗಸದ ತಾರೆಗಳನ್ನೂ ಮೀರಿಸುವಂತಿದೆ. ಆದಾಗ್ಯೂ.. ಆದಾಗ್ಯೂ ಪ್ರೀತಿಯಿಂದ ವಂಚಿತವಾದ ಜೀವಿಗಳು ಅದೆಷ್ಟೋ…!! ಗಜಲ್ ಗೋ ಕಿರಸೂರ ಗಿರಿಯಪ್ಪ ಅವರು ಈ ಷೇರ್ ನಲ್ಲಿ ಪ್ರೀತಿಯ ಸಾರ್ವತ್ರಿಕತೆಯನ್ನು ಸಾರಿದ್ದಾರೆ.

ಪ್ರೀತಿ ಗೆಲ್ಲದ ಪದಗಳು ಎಷ್ಟು ಹಾಡಿದರೇನು! ಬೆಳಕಿನಾಚೆ

ಎದೆಗೆ ನಾಟದ ಧರ್ಮಗಳ ಎಷ್ಟು ಹುಡುಕಿದರೇನು! ಕತ್ತಲಿನಾಚೆ” 

ನಾವಾಡುವ ಮಾತುಗಳಿಗೆ ಪ್ರೀತಿಯ ತಳಪಾಯವಿರಬೇಕು, ಕಾಳಜಿಯ ಆಲಿಂಗನವಿರಬೇಕು; ನೋವಿಗೆ ಮಿಡಿಯುವ ಹೃದಯವಿರಬೇಕು. ಇಲ್ಲದಿರೆ ಆ ಮಾತುಗಳು ಮಾತಾಗದೆ ಬರೀ ಕಿವಿ ತಮಟೆ ಹರಿಯುವ ಕರ್ಕಶ ಸದ್ದು, ಗದ್ದಲಗಳಾಗುವವು. ಇನ್ನೂ ಮೂಲಭೂತವಾಗಿ ‘ಧರ್ಮ’ ಎಂದರೆ ಬದುಕುವ ಪದ್ಧತಿ ಎಂದು. ಆದರೆ ನಮ್ಮ ಮಧ್ಯೆ ಇರುವ ಧರ್ಮಗಳು ಬಾಳಿಗೆ ಬೆಳಕಾಗುವುದಕ್ಕಿಂತ ಕತ್ತಲೆಯಾಗುತ್ತಿರೋದೆ ಹೆಚ್ಚು ಎಂದು ಗಜಲ್ ಗೋ ಆತಂಕವನ್ನು ವ್ಯಕ್ತಪಡಿಸಿದ್ದಾರೆ.‌

     ‘ಗಾಯ’ಗಳು ಗುಣವಾದರೆ ಜೀವನ ಆರೋಗ್ಯಮಯ, ಹಸಿಯಾಗಿಯೆ ಉಳಿದರೆ ಬದುಕು ಪ್ರೇಮಮಯ. ಯಾವ ಪ್ರೇಮಿಯೂ ತನ್ನ ಎದೆಗಾದ ಗಾಯ ಮಾಯಲಿ ಎಂದು ಬಯಸುವುದೆ ಇಲ್ಲ. ಅದು ಹಸಿಯಿದ್ದಷ್ಟು ಪ್ರೀತಿ ಹಚ್ಚ ಹಸಿರಾಗಿರುತ್ತದೆ. ಇದನ್ನೇ ಗಿರಿಯಪ್ಪ ನವರು ತಮ್ಮ ಅಶಅರ್ ನಲ್ಲಿ ಹೃದಯಕ್ಕೆ ನಾಟುವಂತೆ ಸೆರೆ ಹಿಡಿದಿದ್ದಾರೆ.

ನನ್ನೆದೆಯಾಗ ನಿನ್ನ ಕಾಲ್ಗೆಜ್ಜೆ ಗುರುತು ವಾಸಿಯಾಗದ ಚಿತ್ರ

ನನ್ನೆದೆಯಾಗ ನಿನ್ನ ಕೈಬಳೆ ಸಂಗೀತ ಅಳಿಸಲಾಗದ ಚಿತ್ರ

ಕಾಲ್ಗೆಜ್ಜೆ, ಕೈ ಬಳೆಗಳ ಕಲರವ ಪ್ರೀತಿಸುವ ಜೀವಿಗಳ ಆಯುಷ್ಯವನ್ನು ವೃದ್ಧಿಸುತ್ತವೆ.‌ ಇವುಗಳ ಸದ್ದು ಪ್ರೇಮಲೋಕದ ನಿನಾದವನ್ನು ಸೂಸುತ್ತದೆ. ಈ ಮೇಲಿನ ಷೇರ್ ಪ್ರೇಮಿಯೊಬ್ಬನ ಅಂತರಂಗದ ರಂಗೋಲಿಯಂತೆ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗಿರಿಯಪ್ಪ ನವರ ‘ಗಜಲ್’ಗಳು ಹೃದಯಕ್ಕೆ ಹತ್ತಿರವಾಗುತ್ತವೆ.

        ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ‘ಗಜಲ್’ ಸಾಹಿತ್ಯ ಪ್ರಕಾರವನ್ನು ಕೇಳದ, ಇಷ್ಟ ಪಡದ ಸಾಹಿತ್ಯ ಪ್ರೇಮಿಗಳು ಸಿಗುವುದು ದುರ್ಲಭವೇ ಸರಿ. ಇಂಥಹ ‘ಗಜಲ್’ ಗಂಗೆಯಲ್ಲಿ ಮೀಯುತ್ತಿರುವ ಗಜಲ್ ಗೋ ಕಿರಸೂರ ಗಿರಿಯಪ್ಪ ಅವರಿಂದ ‘ಗಜಲ್’ ಕ್ಷೇತ್ರ ಮತ್ತಷ್ಟು ಸಂಪತ್ಭರಿತವಾಗಲಿ ಎಂದು ಶುಭ ಕೋರುತ್ತೇನೆ. 

ವಿಚಿತ್ರ ದೀಪ ನಾನು ಹಗಲು ರಾತ್ರಿ ಉರಿಯುತ್ತಿದ್ದೇನೆ

ನಾನು ದಣಿದಿದ್ದೇನೆ ಗಾಳಿಗೆ ಹೇಳಿ ನನ್ನನ್ನು ನಂದಿಸಲು

ಬಶೀರ್ ಬದ್ರ

         ಗಜಲ್ ಗುಲ್ಜಾರ್ ನ ಸುತ್ತಾಟ ತಮ್ಮ ಕನಸು-ಮನಸುಗಳಿಗೆ ಮುದ ನೀಡುತ್ತಿದೆ ಎಂದುಕೊಂಡಿರುವೆ, ನಿಜವಲ್ಲವೆ… ಹೂಂ ಎಂದು ತಲೆಯಾಡಿಸುತ್ತಿರುವಿರಲ್ಲವೆ.. ತುಂಬಾ ಸಂತೋಷ. ಆದರೂ ಏನು ಮಾಡೋದು, ಕಾಲದ ಮುಂದೆ ಮಂಡಿಯೂರಲೆ ಬೇಕಲ್ಲವೇ! ನನ್ನ ಈ ಕಲಮ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ಶಾಯರ್ ಒಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಹಾಜರಾಗುವೆ.‌ ಅಲ್ಲಿಯವರೆಗೆ ಟಾಟಾ, ಬೈ ಬೈ…ಸೀ ಯುವ್, ಟೇಕ್ ಕೇರ್…!! ಧನ್ಯವಾದಗಳು..


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top