ನೀನು ಕೂಗುವ ತನಕ ತೇರಳಿ ಎನ್ ಶೇಖರ್ ಗುರುವಾಯೂರು‌

ಅನುವಾದ ಸಂಗಾತಿ

ತೇರಳಿ ಎನ್ ಶೇಖರ್ ಗುರುವಾಯೂರು‌

ನೀನು ಕೂಗುವ ತನಕ

ಹಿಟ್ಟಿನಹುಂಜ ಎಂಬಸಾಂಕೇತಿಕದೊಂದಿಗಿನ ಬದುಕು,ಏರಿಳಿತ,ನಿರಾಶೆ,ಹತಾಶೆ, ಅಭಿಲಾಶೆ,ಮತ್ತುಪ್ರತೀಕ್ಷೆಯಧ್ವನಿಪ್ರತಿಧ್ವನಿಸುವಕವಿತೆ ಬಗ್ಗೆ ಅನುಸೂಯಾ ಜಹಗೀರದಾರ್ ಬರೆದಿದ್ದಾರೆ

ನೀನುಕೂಗುವತನಕ

Free photos of Rooster

ನನ್ನ ಹಿಟ್ಟಿನ ಹುಂಜ

ಕೊಕ್ಕೋ ಕ್ಕೊ ಕ್ಕೋಎಂದು ಕೂಗಲಿಲ್ಲ

ನಿನ್ನ ಆಕಾಶದಲ್ಲಿ ರಕ್ತ ಚೆಲ್ಲಿ

ಸೂರ್ಯ ಹುಟ್ಟಲಿಲ್ಲ

ಹೀಗಾಗಿ ನನ್ನ ನಿನ್ನ

ಪ್ರಣಯಲೋಕದಲ್ಲಿ

ಗುಲಾಬಿ ಹೂವುಗಳು ಅರಳಲಿಲ್ಲ

ಮಲ್ಲಿಗೆ ಹೂವುಗಳು ಪರಿಮಳಿಸಲಿಲ್ಲ

ಇಬ್ಬನಿಯ ಹನಿಗಳು ಹೊಳೆಯಲಿಲ್ಲ

ನನ್ನ ಹಿಟ್ಟಿನ ಹುಂಜದ

ಕೊರಳಿನೊಳಗೆ ನೀನು ನುಸುಳಿ

ಕೊಕ್ಕೋ ಕ್ಕೊ ಕ್ಕೋಎಂದು

ಕೂಗುವ ತನಕ

ನಿನ್ನ ಆಕಾಶದಲ್ಲಿ ರಕ್ತ ಚೆಲ್ಲಿ

ಸೂರ್ಯ ಹುಟ್ಟುವುದಿಲ್ಲ….

———————————

ತೇರಳಿ ಎನ್ ಶೇಖರ್ ಗುರುವಾಯೂರು‌

ಅನುಸೂಯ ಜಹಗೀರದಾರ್

ಹಿಟ್ಟಿನ ಹುಂಜ ಎಂಬ ಸಾಂಕೇತಿಕದೊಂದಿಗಿನ ಬದುಕು ಏರಿಳಿತ ನಿರಾಶೆ,ಹತಾಶೆ, ಅಭಿಲಾಶೆ,ಮತ್ತು ಪ್ರತೀಕ್ಷೆಯ ಧ್ವನಿ ಪ್ರತಿಧ್ವನಿಸುವ ಕವಿತೆ*ನೀನು ಕೂಗುವ ತನಕ

ಕವಿ ಮತ್ತು ಅನುವಾದಕರಾದ ತೇರಳಿ ಎನ್ ಶೇಖರ್ ಗುರುವಾಯೂರು ಇವರ ಕವಿತೆ ಹೇಳಬಹುದಾದ ತಿರುಳನ್ನು ನನ್ನ ಕೈಗೆ ನಿಲುಕಿದಷ್ಟು ಗ್ರಹಿಕಾ ಎತ್ತರಕ್ಕೆ ನನಗೆ ಎಟುಕಿದಷ್ಟು ಮನದಾಳಕೆ ಬಡಿದೆಬ್ಬಿಸಿ ಕುಟುಕಿದಷ್ಟು ನನ್ನ ಬರವಣಿಗೆಯ ಅಭಿವ್ಯಕ್ತಿಯಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿರುವೆ.ಮೂಲತಃ ನಾನು ವಿಮರ್ಶಕಿ ಅಲ್ಲ. ನನಗನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ಇದಾಗಿದೆ.

ಜನ್ನ ಕವಿಯ ಯಶೋಧರ ಚರಿತೆಯಲಿ ಬರುವ ಹಿಟ್ಟಿನ ಹುಂಜ ಇಲ್ಲಿ ಕವಿ ಬಳಸಿರುವ ಪ್ರಮುಖ ಪಾತ್ರದ ರೂಪಕವಾಗಿದೆ.ಇಲ್ಲಿಯ ಹಿಟ್ಟಿನ ಹುಂಜ ಕವಿತೆಯ ನಾಯಕನ ಮನದಾಳದ ಕೂಗಾಗಿ, ಆತನ ನಿವೇದನೆಗೆ ಪ್ರತೀಕವಾಗಿ, ಆತನ ಅಸ್ತಿತ್ವವಾಗಿ ಗುರುತಿಸಲ್ಪಡುತ್ತದೆ.

ಬಾಹ್ಯವಾಗಿ ಕವಿತೆಗೆ ಬಳಸಿದ ಶಬ್ದಶಿಲ್ಪದ ಅಭಿವ್ಯಕ್ತಿ ತೀವ್ರ ತೀಕ್ಷ್ಣಮತ್ತು ಹರಿತ ಕತ್ತಿಯ ಇರಿತದಂತೆ

ವ್ಯಕ್ತಗೊಳ್ಳಲಾಗಿದೆ.ಅರ್ಥಾತ್ ಪದಗಳ ಹೆಣಿಗೆ ರೀತಿ ಜೀವದಾರದಲಿ ಪೋಣಿಸಿ ಕಟ್ಟಿದಂತಿದ್ದು

ನಿಖರತೆ ಮತ್ತು ಸ್ಪಷ್ಟತೆ ವಿವರಗಳನ್ನೊಳಗೊಂಡು ಸರಳತೆಯಲ್ಲಿ ಗಹನತೆ ತಿಳಿಸುತ್ತದೆ.

ಕಾವ್ಯದ ಒಳ ಅಂತರಂಗ ಅದರ ನಾಡಿಬಡಿತ ಗುರುತಿಸಿದಲ್ಲಿ ಇದೊಂದು ಅದ್ಭುತ ಧ್ವನಿಪೂರ್ಣ ಕವಿತೆಯಾಗಿದ್ದು ನವ್ಯದೊಂದಿಗೆ ಹೊಸ ಸೃಜನಶೀಲತೆಯತ್ತ ಸೋಪಜ್ಞತೆ ರೂಪಿಸಿದ ನವಿನತೆ ಶೈಲಿ ಇದೆ. ಹಳೆಯ ಕಥಾವಸ್ತುವಿನ ಒಂದು ರೂಪಕ ಇಲ್ಲಿ ಹೊಸಬಗೆಯದಾಗಿದೆ. ಹಿಟ್ಟಿನ ಹುಂಜ ಪದ ಮಾತ್ರ ಅಲ್ಲಿಯದಾಗಿದ್ದರೂ ಇಲ್ಲಿ ಸಂಪೂರ್ಣ ಬೇರೆಯ ಅರ್ಥದಲ್ಲಿ ಧ್ವನಿಸುತ್ತದೆ.ಬೆಳಗು ಮತ್ತು ಕೋಳಿಯ ಕೂಗು ಇಲ್ಲಿಯ ಪ್ರಮುಖ ಆಶಯ.

ನಿಜ ಕೋಳಿ (ಹುಂಜ)ಕೂಗಿದಾಗ ಬೆಳಗಾಗುತ್ತದೆ ಅಥವಾ ಬೆಳಗಾಗುವ ಮುನ್ನ ಕೋಳಿ ಕೂಗುತ್ತದೆ ಅಥವಾ ಕೋಳಿ ಕೂಗದಿದ್ದರೂ ಬೆಳಗಾಗುತ್ತದೆ ಅಥವಾ ಬೆಳಗಾದರೂ ಕೆಲವರಿಗೆ ಬೆಳಗಾಗುವುದಿಲ್ಲ ಅಥವಾ ಕೆವರಿಗೆ ಆ ಬೆಳಗು ಬೆಳಗೆನಿಸುವುದಿಲ್ಲ

ಅದು ಲೋಕಾರೂಢಿಯ ಬೆಳಗು ಮಾಮೂಲು ಬೆಳಗು ಅದೊಂದು ನಿರಂತರ ಪ್ರಕ್ರಿಯೆ . ಹತಾಶ ಜೀವಿಗಳಿಗೆ ಅದು ಬೆಳಗಲ್ಲ. ಯಾಕಾದರೂ ಬೆಳಗೋ ಎಂಬಂತೆ..!ಬೆಳಗಾಗುವ ಸಂತಸಕ್ಕಾಗಿ ಕೋಳಿ (ಹುಂಜ) ಕೂಗಬಹುದು ಬೆಳಗಿಗಾಗಿ ಅದು ಹಂಬಲಿಸಬಹುದು ಅದಕ್ಕೆ ಆ ಬೆಳಗಿನ ಅಗತ್ಯ ಇರಬಹುದು ಅದಕ್ಕಾಗಿಯೇ ಬೆಳಗಾಗಲೆಂದು ಬೆಳಕಾಯಿತು ಎಂದು ಅಥವಾ ಅದರ ನಿದ್ದೆ ಮುಗಿದು ಮೈ ಮುರಿದು ಎದ್ದುದರ ಸೂಚಕವಾಗಿ, ನಿತ್ಯದ ಕ್ರಿಯೆಗಳ ಪ್ರಾರಂಭದ ಮುನ್ನುಡಿಗಾಗಿ ಅದನ್ನು ಸೂಚಿಸುವುದಕ್ಕಾಗಿ ಅದು ಕೂಗುತ್ತಿರಬಹುದು

ಇದಿಷ್ಟು ಸೂರ್ಯನ ಹುಟ್ಟು (ಬೆಳಗು) ಹಾಗು ಹುಂಜ ಕೂಗುವ ಕ್ರಿಯೆ ಇವೆರಡರ ಸಂಬಂಧಿಕ ನೆಲೆ ಅಥವಾ ಅನುಬಂಧ ಅಥವಾ ಕಾರಣ ಮತ್ತು ಪ್ರಕಾರಣ ಅಥವಾ ಕ್ರಿಯೆ ಮತ್ತು ಪ್ರತಿಕ್ರಿಯೆ ಇಲ್ಲಿಯ ಕಾವ್ಯದ ಪ್ರಮುಖ ವಸ್ತು ಆಗಿದೆ‌.ಬೆಳಗು-ಕೂಗು ಎರಡಮಾತು ಮೇಲ್ಕಾಣುವ ಸತ್ಯ..!ಈ ಎರಡರ ಪ್ರೋಸೆಸ್ ಅಥವಾ ಪ್ರಕ್ರಿಯೆಯನ್ನೇ ಆಧಾರವಾಗಿಸಿಕೊಂಡ ಕವಿತೆ ಸ್ಥಾಯಿಭಾವ ಇಲ್ಲಿದೆ.ಹಿಂಸೆ ಅಹಿಂಸೆ ಅದೆಲ್ಲ ಬೇರೆ ವಿಚಾರ. ಜನ್ನನ ಯಶೋಧರ ಚರಿತೆಯಲ್ಲಿ ಮಾತ್ರ ಕಾಣುವಂಥದ್ದು

ಅದೇ ಹಿಟ್ಟಿನ ಹುಂಜದ ಬಲಿ. ದುಸ್ವಪ್ನ ಕಂಡೆನೆಂದು ತಾಯಿಗೆ ಸುಳ್ಳು ಹೇಳಿದ ಯಶೋಧರನಿಗೆ (ಏಕೆಂದರೆ ಆತ ಸತ್ಯ ಹೇಳಲಾರ)ತಾಯಿ ಗುರು ಅಥವಾ ಜ್ಯೋತಿಷಿಯವರನ್ನ ಭೇಟಿಯಾಗಿ ಆ ಸ್ವಪ್ನದೋಷ ನಿವಾರಣೆಗಾಗಿ ಕಂಡುಕೊಂಡ ಪರಿಹಾರ.ಅದೇ ಹುಂಜದ ಬಲಿ.ಅಹಿಂಸೆ ಪರಿಪಾಲನೆ ಇರುವುದರಿಂದ ಹಿಟ್ಟಿನ ಹುಂಜದ ಬಲಿ.ಇದು ಜನ್ನನ ಯಶೋಧರ ಚರಿತೆಯ ಕಥೆ..!

ಪ್ರಣಯ ಭಾವ ಸ್ಫುರಿಸುವ ಪ್ರೇಮ ಜಾಗೃತಗೊಳ್ಳುವ ಅಂಕುರಿಸುವ, ವಿಷಯ ವಾಂಛೆ ಉದ್ದೀಪಿಸುವ ಭಾವವನ್ನು ಇಲ್ಲಿ ಒಂದು ಕೂಗಿಗೆ ಪ್ರತಿಕ್ರಿಯೆಯಾಗಬಲ್ಲದು ಒಂದು ಪ್ರೇರಣೆ ಬೇಕು ಅನ್ನುವು ವ್ಯಕ್ತವಾಗುತ್ತದೆ.ಗುಲಾಬಿ, ಇಬ್ಬನಿ,ಮಲ್ಲಿಗೆ ಪ್ರೇಮ ಭಾವ ಜಾಗೃತಿ ಮತ್ತು ಅತೀವ ಉತ್ಕಟ ವಾಂಛೆಯನ್ನು ತಿಳಿಸುವ ರೂಪಕಗಳಾಗಿವೆ.ಪ್ರಕೃತಿಯ ಮನಮೋಹಕ ಕ್ರಿಯೆಯೂ ಪ್ರಕೃತಿ ಮತ್ತು ಪುರುಷನಲ್ಲಿ ನೆಲೆ ಹೊಂದುವ ಮಿಲನ ಕ್ರಿಯೆಯೂ ತೀವ್ರ ಆಸೆಯಾಗಿ ಇಲ್ಲಿಧ್ವನಿಸುತ್ತದೆ.ಈ ಕ್ರಿಯೆ ಇಲ್ಲದ ಹತಾಶೆ ಮತ್ತು ಆ ಕೂಗಿನ ತೀವ್ರತೆಯೇ ನೀನು ಕೂಗುವ ತನಕ ಕವಿತೆಯಾಗಿದೆ‌.

     ಕವಿ ಇಲ್ಲಿ ಬಳಸಿದ್ದು ಹಿಟ್ಟಿನ ಹುಂಜ ಅನ್ನುವ ಪದ. ಇದು ಯಶೋಧರ ಚರಿತೆಯಲ್ಲಿ ಬಂದ ಪದ. ಮುಂದಾಗಿ ಕವಿತೆ ಹೇಳಹೊರಟಿದ್ದು ಆ ಹುಂಜದ ಒಳಗಿನ ಬೆಂತರದ ಬಗ್ಗೆ. ಹಿಟ್ಟಿನ ಹುಂಜಕೆ ಆಕರ್ಷಣೆಗೊಂಡು ಅದರಲಿ ಸೇರಿದ ಒಂದು ಪ್ರಾಣ ಅಥವಾ ಬೆಂತರ ಅಥವಾ ಜೀವ ಅಥವಾ ಯಶೋಧರನ ಹಳವಂಡ ಹಾಗು ಯಶೋಧರನ ಕಾನ್ಸಿಯಸ್ ಅಥವಾ ಪ್ರಜ್ಞೆಯಾಗಿದೆ. ಇಲ್ಲಿ ಕವಿತೆಯ ನಾಯಕ ಹಿಟ್ಟಿನ ಹುಂಜದ ಕೊರಳೊಳಗೆ ನೀ ದನಿಯಾಗಿ ಬಾ ದನಿಯಾಗಬೇಕಿದ್ದರೆ ಅದರ ಉಸಿರಾಗಿ ಬಾ ಉಸಿರಾಡಲು ಪ್ರಾಣವಾಗಿ ಬಾ ಜೀವದಲಿ ಮತ್ತೊಂದು ಜೀವವಾಗಿ ಅದ್ವೈತ ಪರಿಕಲ್ಪನೆಯಾಗಿ ಒಂದೇ ಪ್ರಾಣವಾಯುವಾಗಿ ನನ್ನೊಳಗೆ ಆವೀರ್ಭವಿಸು ಅನ್ನುವ ಕರೆಯನ್ನ ಆರ್ತವಾಗಿ ಕೂಗುವ ಮತ್ತೊಂದು ದನಿಯ ಅಪೇಕ್ಷಿಸುವ ಇಚ್ಛೆ ಇದೆ.ಜನ್ನನ ಹಿಟ್ಟಿನ ಹುಂಜ ಬಲಿಯ ಕೂಗುತ್ತದೆ ಅದರಲ್ಲಿಯ ಬೆಂತರ ಕೂಗುತ್ತದೆ.ಇದು ಆದರೆ ಇಲ್ಲಿಯ ಹಿಟ್ಟಿನ ಹುಂಜ ಬೆಳಗನ್ನು ಬಯಸುತ್ತಿದೆ.

ಆಗಸದಲ್ಲಿ ಸೂರ್ಯ ಜನ್ಮ ತಳೆಯಬೇಕು.ಜನ್ಮಕ್ಕೆ ಕಾರಣವಾಗಲು ಮೊದಲು ಕೆಂಪು ಮೂಡಬೇಕು.ಅದು ಬೆಳಗಿನ ಸೂಚನೆ.ಅರುಣೋದಯ.ಅಂತಹ ಬೆಳಗು ಬೇಕಾದಲ್ಲಿ ಆ ಸುಖ ಅನುಭವಿಸಬೇಕಾದಲ್ಲಿ ಮೊದಲು ನನ್ನ ಪ್ರಾಣವಾಯು ಆಗು. ನನ್ನನು ಉದ್ದೀಪನಗೊಳಿಸು ಈ ಹಿಟ್ಟಿನ ಹುಂಜ ಕೂಗಲೊಲ್ಲದು. ಇದರಲ್ಲಿ ಬೆಂತರ ಇಲ್ಲ. ಬೆಂತರ ಅಥವಾ ಜೀವ ಅಥವಾ ನನ್ನದೇ ಭಾವಕೆ ಇದರ ಆಕರ್ಷಣೆ, ಆಸಕ್ತಿ ಆಶಕ್ತಿ ಇನ್ನೂ ಇಲ್ಲ.ತಡಬಾಡದೆ ರಕ್ತ ಚೆಲ್ಲಿ ಬೆಳಗು ಬಯಸುವುದಾದರೆ ಈ ಹುಂಜದೊಳಗೆ ಪ್ರಾಣವಾಗು ದನಿಯಾಗು  ನೆಲೆಯಾಗು…ಅನ್ನುವ ತೀವ್ರ ಹತಾಶ ಮತ್ತು ಅಭಿಲಾಷೆಯ ಕರೆಯನ್ನು ತೀಕ್ಷ್ಣ ಅಭಿವ್ಯಕ್ತಿಯಲ್ಲಿ ಕಟ್ಟಿಕೊಡುತ್ತದೆ ನೀನು ಕೂಗುವ ತನಕಕವಿತೆ.

ಪ್ರಸ್ತುತ ಕವಿತೆಯಲ್ಲಿ ಎಲ್ಲೂ ಪ್ರೇಯಸಿ, ಪ್ರಿಯತಮ ಅನ್ನುವ ಸ್ಪಷ್ಟತೆ ಇಲ್ಲದಿದ್ದರೂ ಧ್ವನಿಪೂರ್ಣ ಇರುವುದರಿಂದ ಆ ಪಾತ್ರಗಳು ಇರಬಹುದು.ಪ್ರಣಯ ಪದ ಬಳಸಿದುದರಿಂದ ಅಂತಹಬಕರೆ ಇರಬಹುದು

ಆದರೆ ಆ ಕರೆ ತನ್ನಂತರಂಗಕ್ಕೆ ತನ್ನತನವನ್ನೇ ಪ್ರಶ್ನಿಸಿಕೊಳ್ಳುವುದೂ ಆಗಿರಬಹುದು‌.ಅಂತಹ ಸಾಧ್ಯಾಸಾಧ್ಯತೆಯನ್ನೂ ಕವಿತೆ ಹೇಳುತ್ತಿದೆ.ಅನಿಸುತ್ತದೆ.ತೀವ್ರ ಒಂದು ಬಯಕೆಯ ಕೂಗು ಮತ್ತು ಅದಕ್ಕೆ ಸ್ಪಂದಿಸದ ಜೀವದ ನಿರೀಕ್ಷೆಯ ಕೂಗನ್ನು ಬಯಸಿದ ಕೂಗು ಇದಾಗಿದೆ.ಆದಾಗ್ಯೂ ತೀವ್ರ ಹತಾಶೆ ಇದ್ದಾಗಲೂ ಅಷ್ಟೇ ಆಶಾಭಾವದ ಕವಿತೆಯೂ ಹೌದಾಗಿದೆ.

ನಿಜ ಇದು ಅಸಂಗತ ಕವಿತೆಯೆ..! ಒಮ್ಮೆ ಓದಿದಾಗ ಒಂದಕ್ಕೊಂದು ಸಂಬಂಧವಿಲ್ಲ ಅನಿಸುತ್ತದೆ‌ ಆದರೆ ಜನ್ನನ ಕಥೆಯನ್ನು ಬದಿಗಿರಿಸಿ ಅಲ್ಲಿಯ ಹಿಟ್ಟಿನ ಹುಂಜ ಮತ್ತು ಬೆಂತರದ ಅರ್ಥವನ್ನಷ್ಟೇ ಬಳಸಿ ಆ ಜಾಡು ಹಿಡಿದು ಬೆಳಗು ಮತ್ತು ಹುಂಜದ ಕೂಗು ಅರ್ಥ ಬಳಸಿದಾಗ ಇದಕ್ಕೊಂದು ವಿಶೇಷ ಧ್ವನಿಪೂರ್ಣ ಅರ್ಥ ಹುಟ್ಟಿಕೊಳ್ಳುತ್ತದೆ. ಕವಿತೆಯಲ್ಲಡಗಿದ ಕಥೆ ಆ ಬೆಳಕಿನಲಿ ಕಾಣುತ್ತದೆ.ಅಂತರಂಗದ ದನಿ ಪ್ರತಿಧ್ವಯಾಗಿ ಬಹುದನಿಯಾಗಿ ಪ್ರತಿನಿಧಿಸುತ್ತದೆ. ಬಹು ಕೋನಗಳಲ್ಲಿ..! ಬಹು ನೋಟಗಳಲ್ಲಿ..!! ಒಳಗಡಗಿದ ಒಳಹು..!

ಕುವೆಂಪು ಅವರ ಒಂದು ಕವಿತೆ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ

ನಿತ್ಯವೂ ಅವತರಿಪ ಸತ್ಯಾವತಾರ

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ ಭವ ಭವದಿ ಭವಿಸಿ, , ಭವವಿದೂರ

ನಿತ್ಯವೂ ಅವತರಿಪ ಸತ್ಯಾವತಾರ

ಸಾಲುಗಳು ಈ ಸಂದರ್ಭದಲ್ಲಿ ನನಗೆ ನೆನಪಾದವು.

ಕವಿ ಆತ್ಮದೊಂದಿಗಿನ ಸಂವಾದ ಅಥವಾ ಸೆಲ್ಫ ಕಾನ್ಸಿಯಸ್ (ಸ್ವ ಪ್ರಜ್ಞೆ) ಯೊಂದಿಗಿನ ಸಂವಾದ. ನನ್ನ ದನಿಗೆ ನಿನ್ನ ದನಿಯ ಸೇರಿದಂತೆ ನಮ್ಮ ದನಿ ನೀನೇ ನಾನು ಅನ್ನುವ, ಆ ನಾನು ನನ್ನೊಂದಿಗೇನೇ ಸಂವಾದ ಇಲ್ಲಿದೆ.

ಇಲ್ಲಿ ನನ್ನದೊಂದು ಸಣ್ಣ ಆಕ್ಷೇಪವಿದೆ ರಕ್ತಚೆಲ್ಲಿ ಅನ್ನುವ ಪದ ಬಳಕೆ. ಕಾವ್ಯ ತೀವ್ರ ಅಭಿವ್ಯಕ್ತಿಗಾಗಿ ಕವಿ ಬಳಸಿರಬಹುದಾದರೂ ಪ್ರೇಮ ಮೃದು ಭಾವದ ಕೂಗಿನಲ್ಲಿ ವಿರಹದುರಿಯಲಿ ಬೇಯುವ ಮಿಲನ ಕರೆಯ ಆಶಯದಲ್ಲಿ ಅಥವಾ ಆತ್ಮನೊಂದಿಗೆ ಬೆರೆಯುವ ಅಭಿಲಾಷೆಯಲ್ಲಿ ಇಂತಹ ಪದ ಬೇಕಿತ್ತೆ ಅನ್ನುವ ಪ್ರಶ್ನೆಯಿದೆ.ಇದಕ್ಕೆ ಪೂರಕವಾಗಿ ಹಲವು ಸಾಹಿತ್ಯದಲ್ಲಿ ಈ ರೀತಿಯ ಪದ ಬಳಕೆ ನೋಡಿದ್ದೇನೆ.ಸಶಕ್ತ ಭಾಷೆ ಬಳಕೆ ಅನ್ನಬಹುದಾದರೂ ಆಯಾ ಸಂದರ್ಭಕ್ಕದು ಸೂಕ್ತ ಅನ್ನುವುದು ನನ್ನ ವಯಕ್ತಿಕ ಅನಿಸಿಕೆ..ಗೀತಾ ನಾಗಭೂಷಣರ ಬಹಳಷ್ಟು ಕಾದಂಬರಿಗಳಲ್ಲಿ ವಿಶೇಷವಾಗಿ ಸವತಿ ಶ್ರೀಗಂಧ ಅನ್ನುವ ಮೃದು ಧೋರಣೆಯ ಕಥಾವಸ್ತು ಹಂದರದ ಕಾದಂಬರಿಯಲ್ಲಿ ಸೂರ್ಯ ಮುಳುಗುವದನ್ನು ಇರುಳು ಆಗಮಿಸುವುದನ್ನು ಹೇಳಲು ಸೂರ್ಯ ಪಡುವಣದಲ್ಲಿ ರಕ್ತಕಾರಿ ಸತ್ತ (ಸೂರ್ಯಾಸ್ತ)ಮತ್ತು ಸೂರ್ಯೋದಯವನ್ನು ರಕ್ತಕಾರಿ ಎದ್ದ ಅನ್ನುವ ಬಣ್ಣನೆಯ ಮಾತಿನಲ್ಲಿ ಹೇಳುತ್ತಾರೆ.ಆದರೆ ಅಲ್ಲಿಯ ಸಂದರ್ಭ ಮತ್ತು ಕಥೆ ಮೃದು ಧೋರಣೆಯದ್ದಾಗಿದೆ

ನನಗೆ ಬಹಳ ಸಲ ಅನ್ನಿಸಿದೆ.ಈ ರೂಪಕ ಇಲ್ಲಿ ಬೇಕಿತ್ತೆ ಅಂತ.ಹಾಗೆಯೇ ನನಗೆ ಇಲ್ಲಿಯೂ ರಕ್ತಚೆಲ್ಲಿ ಅನ್ನುವ ಪದ ಕ್ಲೀಷೆ ಅನಿಸುತ್ತದೆ.ಶಕ್ತಿ ಕವಿ ಬಿರುದಾಂಕಿತ ರನ್ನ ತನ್ನ ಗದಾಯುದ್ಧದಲ್ಲಿ ಮಹಾಭಾರತದ ೧೮ ದಿನಗಳ ಯುದ್ಧ ಪ್ರಸಂಗ ವರ್ಣಿಸುವಾಗ ‘ ಯುದ್ಧದಿಂದ ಮೇಲೆದ್ದಿದ್ದ ಕೆಂಧೂಳು ಆಗಸಕ್ಕೆ ಮುಟ್ಟುತ್ತಿತ್ತು.ಅದರಿಂದ ಕೆಂಪಾದ ಸೂರ್ಯ ತನ್ನ ಧೂಳನ್ನು ಮೈದೊಳೆದುಕೊಳ್ಳಲು ಪಡುವಣದ ಸಮುದ್ರದಲ್ಲಿ ಮುಳುಗಿದ’ ಅನ್ನುವ ವರ್ಣನೆ‌ ಮಾಡುತ್ತಾನೆ.ಈ ಯುದ್ಧದ ಭೀಕರ ಸಂದರ್ಭಕ್ಕೆ ಈ ಬಣ್ಣನೆ ಮತ್ತು ತೀವ್ರತೆ ಅಭಿವ್ಯಕ್ತಿ ಭಾಷಾ ಪ್ರಯೋಗ ಸೂಕ್ತವಾದುದಾಗಿದೆ.

ಅದೇರೀತಿ ಜನ್ನ ಕವಿ ತನ್ನ ಯಶೋಧರ ಚರಿತೆಯಲ್ಲಿ ಮಾರಿ ದೇವಿಗೆ ಅಲ್ಲಿಯ ಹಸುಳೆಗಳ ಬಲಿಕೊಡುವ ಸಂದರ್ಭದಲ್ಲಿ ಬಲಿಗೆ ಸಿದ್ಧಗೊಂಡಿದ್ದ ಸ್ಥಳವನ್ನು ವರ್ಣಿಸುವಾಗ

ಮಾರಿ ಮಲಯಾನಿಳಂ ನವ

ನೀರಜವನಮೆಂಬ ಕೆಂಡದೊಳ್ ದಂಡನಮ

ಸ್ಕಾರದೆ ಬಂದಪನಿತ್ತವ

ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್

ಎಂದಿದ್ದಾನೆ.ಇಲ್ಲಿ ನೀರಜವನಮೆಂಬ ಕೆಂಡದೊಳ್

ಅನ್ನುವ ಪದ ಬಳಕೆ ಇಂತಹ ಭೀಕರ ಸನ್ನಿವೇಶಕ್ಕೆ ಸೂಕ್ತವಾದುದಾಗಿದೆ ಕೆಂಪಾದ ತಾವರೆ ಕೆಂಡದಂತೆ ಕಂಡವು.ಹಾಗು ಮಲಯ ಮಾರುತ ಮಾರಿದೇವಿಗೆ ಕೆಂಡದಲ್ಲಿ ದಂಡ ನಮಸ್ಕಾರ ಮಾಡುತ್ತ ಬಂದಂತೆ ಇತ್ತು ಅನ್ನುವುದನ್ನು ಅಲ್ಲಿಯ ವನದ ಎರಡು ಗಿಳಿಗಳು ಪರಸ್ಪರ ಮಾತಾಡಿಕೊಳ್ಳುತ್ತಿದ್ದವು ಅನ್ನುವುದನ್ನೂ,ಅಲ್ಲಿಯ ಬಲಿಯ ಸನ್ನಿವೇಶದ ಭೀಕರತೆಯನ್ನು ಈ ರೂಪಕದೊಂದಿಗೆ ಆ ರೌರವವನ್ನು ಬಣ್ಣಿಸುತ್ತಾನೆ

(ಇದು ರೌದ್ರ ರಸವೆ)

ಆದರೆ ಕವಿ ಶೇಖರ್ ಅವರು ಆಗಾಗ ಇಂತಹ ಪದಗಳನ್ನು ಅಭಿವ್ಯಕ್ತಿ ತೀವ್ರತೆ ಮತ್ತು ತೀಕ್ಷ್ಣತೆಗಾಗಿ ಪ್ರಯೋಗಿಸುವುದನ್ನು ನೋಡಿದ್ದೇನೆ.ಬಹುಶಃ ಕವಿತೆಯ ನಾಯಕನ ಅಂತಹ ಮನಸ್ಥಿತಿ ತೊಳಲಾಟ ಸಿಟ್ಟು ಆಕ್ರೋಶದಲ್ಲಿ ಭಾಷಾಭಿವ್ಯಕ್ತಿ ಇರಬಹುದು.ಆದಾಗ್ಯೂ ಮುಂದೆ ಅದು ಸುಂದರ ಆಶಯವನ್ನು,ನಿರೀಕ್ಷೆಯನ್ನು, ವಿನಂತಿಯನ್ನು ತಿಳಿಸುತ್ತದೆ.ಇರಲಿ ಅವರವರ ಭಾವ. ಇದು ನನಗೆ ಅನಿಸಿದ್ದು ನಿರ್ಭಿಡೆಯಿಂದ ವ್ಯಕ್ತಮಾಡಿರುವೆ.

ಕವಿತೆ ತನ್ನ ಹೊಸ ತಾಜಾ ಶೈಲಿಯಿಂದ ಗಮನ ಸೆಳೆಯುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ..!ಇಂತಹ ಕವಿತೆ ಕೊಟ್ಟ ಕವಿ ತೇರಳಿ ಎನ್ ಶಶಖರ್ ಅವರಿಗೆ ಮೊಟ್ಟಮೊದಲು ಅಭಿನಂದನೆಗಳು.ಇಂತಹ ಕವಿತೆ ಆಗಾಗ ಅವರು ಕೊಡುತ್ತಲೇ ಇರುತ್ತಾರೆ.ಮತ್ತೂ ಕೊಡಲಿ..!


ಅನಸೂಯ ಜಹಗೀರದಾರ

2 thoughts on “ನೀನು ಕೂಗುವ ತನಕ ತೇರಳಿ ಎನ್ ಶೇಖರ್ ಗುರುವಾಯೂರು‌

  1. ನಾನು ವಿಮರ್ಶಕಿ ಅಲ್ಲ ಅಂತ ಎಂತಾ ಅದ್ಭುತ ವಿಮರ್ಶೆ ಕೊಟ್ಟಿದ್ದೀರ ಮೇಡಂ, ಧನ್ಯೋಸ್ಮಿ ನಿಮ್ಮ ವಿದ್ವತ್ತಿಗೆ . ಸರಳ ಸುಂದರವಾದ ಕವಿತೆಯಲ್ಲಿ ಇಷ್ಟೆಲ್ಲಾ ಅಡಗಿದೆಯಾ ಅಂತ ತಿಳಿದು ಅದ್ಭುತ ಅನ್ನಿಸಿತು, ನಿಮಗೂ ಶೇಖರ್ ರವರಿಗೆ ಅಭಿನಂದನೆಗಳು.

  2. ತುಂಬಾ ತುಂಬಾ ಧನ್ಯವಾದಗಳು ಸರ್.
    ಖುಶಿಯಾಯ್ತು.ನಿಮ್ಮ ಮೆಚ್ಚುಗೆಯ ಸ್ಪಂದನೆಗೆ..!
    ಯಾವತ್ತೂ ತಮ್ಮ ಪ್ರೋತ್ಸಾಹ ಹೀಗೆ ಬಯಸುವೆ.

Leave a Reply

Back To Top