ಅಂತರ ಅನಂತರ

ಕಾವ್ಯ ಸಂಗಾತಿ

ಅಂತರ ಅನಂತರ

ಜಯಶ್ರೀ ಭ.ಭಂಡಾರಿ 

ನೋಡದೆ ಮಾತನಾಡಿದ್ದು
ಆಡದೇ ತಳಮಳಿಸಿದ್ದು
ಮೌನವೇ ಅನುಕ್ಷಣ ಆಳಿದ್ದು
ಜನ್ಮಜನ್ಮದ ಅನುಬಂಧ ಇದು
ಅಂದ ಕಡಲತಡಿಯ ಹುಡುಗ
ಹೇಳದೆ ಮಾಯವಾದದ್ದು…

ಅನುರಾಗದಲಿ ಬೇಡ ಅಂತರ
ಒಲವಧಾರೆ ಒಲಿಯಲಿ ನಿರಂತರ
ಕಡಲನಾಡಿನ ನೀ ಬಿಸಿಲನಾಡಿನ ನಾ
ಪ್ರೀತಿಯ ಅಲೆಯಲಿ ಕಡಲಾದೆವು
ಸಮಯದ ಪರಿವೆಯಿಲ್ಲದೆ
ಹಗುರಾದೆವು..ಹಾಲ್ಜೇನಾದೆವು…..

ಕಳೆದುಹೋದೆ ನೀ ಅರಿವಿಲ್ಲದೇ..
ತಿಳಿಯದೆ ನಾ ಪರಿತಪಿಸಿದೆ….
ಏನೆಲ್ಲಮಾಡಿದೆ ಎಷ್ಟೆಲ್ಲ ಹುಡುಕಿದೆ
ಅಗಲಲು ನಮ್ಮಲ್ಲಿರಲಿಲ್ಲ ಅಂತರ
ನೋವ ನೀಡಿ ಮಾಯವಾದೆ

ಕೌತುಕದಿ ಕಾಯುತಿದ್ದೆ  ಬಂದಾನೆಂದು……
ಹೇಳದೆ ಈ ರಾಧೆಗೆ ಗಾನವಾದಾನೆಂದು..
ಉಹೂಂ ನೀ ಬರಲೇ ಇಲ್ಲ
ಗಡಿಯಾರದ ಮುಳ್ಳುಗಳು
ತಿರು ತಿರುಗಿ ಸೊರಗಿದವು
ಕ್ಯಾಲೆಂಡರಿನ ದಿನಗಳು
ಭರ ಭರನೆ ಉರುಳಿದವು
ನಿನ್ನ ಸದ್ದೆ ಇಲ್ಲ…ಕಂಬನಿಗೆ
ಕೊನೆ ಇಲ್ಲ….

ಮರೆವು ಅನ್ನೊ ದಿವ್ಯೌಷಧ
ದಿವಿನಾಗಿ ನನ್ನ ಅಪ್ಪಿಕೊಂಡಾಗ
ದಿಟವಾಗಿ ದೀನಳಾಗಿ ಬದುಕುವಾಗ
ನಿರೀಕ್ಷೆಗಳನ್ನ ಮೂಟೆಕಟ್ಟಿ ಮೂಲೆಗೆಸೆದಾಗ…ನನ್ನೀ ಪ್ರೀತಿಯಲಿ ಅದ್ಯಾವ ಅಂತರ
ಕಂಡು ದೂರಾದೆ ಸಖನೇ..ಅಂತ
ಪ್ರತಿಕ್ಷಣ ಕನಲುವಾಗ….

ಕಡಲಮರಳ ಮೇಲೆ ನಿನ್ನ
ನೆನಪರಂಗೋಲಿ ಹಾಕಿ
ಕಾಲಕಳದೆ ಕಣೇ ಸಖಿ ಅಂತ
ಮರಳಿದ ಗೆಳೆಯನಿಗೆ….
ಏನ ಕೇಳಲಿ..ಏನ ಹೇಳಲಿ!?
ಅವನ ಬಾಳ ದೋಣಿಯ
ಅನೂಹ್ಯ ಯಾತ್ರಿಕಳಿಂದು…

———–

.

Leave a Reply

Back To Top