ಬೈಗುಳಾಪೇಕ್ಷೆ

ಲೇಖನ

ಬೈಗುಳಾಪೇಕ್ಷೆ

ನಿಂಗಮ್ಮ ಭಾವಿಕಟ್ಟಿ

   

 ತಂತ್ರಜ್ಞಾನದ ಕಾಲವಿದು, ಹಿರಿಯರು ತಮ್ಮ ಜವಾಬ್ದಾರಿ ತಮ್ಮವೇ ದೇಹ ಸಂಬಂಧೀ ಕಾಯಿಲೆಗಳು, ಚಿಂತೆ ಸಮಸ್ಯೆಗಳ ನಡುವೆಯೂ ಜಾಲತಾಣದಲ್ಲಿ ಒಂದಿಷ್ಟು ವಿಹರಿಸ ಬಯಸುವ ಕಾಲ. ಮಧ್ಯವಯಸ್ಕರು ಹೊರತಲ್ಲ, ಮಕ್ಕಳ ಸ್ಕೂಲು, ಫೀಸು ಮದುವೆ ಮಾಡುವುದು ಮನೆ ನಿರ್ಮಾಣದಂತಹ ‘ಸಾಧನೆ’ಯಾಗುವುದು ಇವಾಗಲೇ, ಅವುಗಳ ನಡುವೆಯೂ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಕೆಲವರಿಗಂತೂ ಒಂದು ಮೆಸೇಜ್ ರಿಂಗ್ ಗೂ ನೋಡದೇ ಇರಲಾಗದು. ಯಾರಿರಬಹುದು? ಏನಿರಬಹುದು? ಒಣ ಕುತೂಹಲ. ಮಕ್ಕಳಿಗಂತೂ ಕೇಳಲೇಬಾರದು ಕುತೂಹಲದ ಮೂಟೆ ಮೊಬೈಲ್. ಕೊರೊನಾ ಬಂದು ಮಕ್ಕಳನ್ನು ಮತ್ತಷ್ಟು ಹತ್ತಿರವಾಗಿಸಿಕೊಂಡಿತು ಜಾಲತಾಣ. ಅದಕ್ಕೇ ಅವರೆಂದೂ ಕರೋನಾಗೆ ಕೃತಜ್ಞರು. ಸಾವು ನೋವು ನಷ್ಟಗಳು ಅವರಿಗೆ ಬೇಡದ ವಿಷಯ. ಅಷ್ಟು ಅನಿವಾರ್ಯವೂ ಆಗಿದೆಯೇ? ಆ ಚರ್ಚೆ ಈಗ ಬೇಡ. ಆದರೆ ಅಷ್ಟು ಅನಿವಾರ್ಯವಲ್ಲ ಎಂಬುದಂತೂ ಸತ್ಯ. ಎಲ್ಲೂ ಸಿಗದ ಮಾಹಿತಿ, ವಿವರ, ವಿಶೇಷಗಳೆಲ್ಲ ನನ್ನ ಕೈಯಲ್ಲಿ ಎನ್ನುವ ಜಂತರ್ ಮಂತರ್ ಮೊಬೈಲ್.

 ಮೊನ್ನೆ ಸೊಸೆ ಉಗುರು ಸುತ್ತು ಎಂದು ಪೇಚಾಡುತ್ತಿರುವಾಗಲೇ ಮಗ ಮೊಬೈಲ್ ನೋಡಿ ಪರಿಹಾರ ಹೇಳಿಬಿಟ್ಟ. ‘ಅರೆ’ ಎಂದೆ ಎಲ್ಲಾ ಇರುತ್ತಮ್ಮ ಮೊಬೈಲಲ್ಲಿ ಎಂದ. ಏನು ಹೇಳಲು ಹೊರಟಿದ್ದೇನೆ ಎಂದು ಮರೆತಿದ್ದೇನೆ ಅಂದುಕೋಬೇಡಿ ಈಗ ಅಲ್ಲಿಗೇ ಬಂದೆ. ಅದೇ ಇಷ್ಟೆಲ್ಲ ಸವಲತ್ತು ಸೌಕರ್ಯ, ಸಂಪತ್ತುಗಳಿರುವಾಗಲೂ ಮಾನವ ಒಮ್ಮೊಮ್ಮೆ ಒಂಟಿತನದಿಂದ ಕುಗ್ಗಿ ಹೋಗಿರುತ್ತಾನೆ. ಎಷ್ಟು ಎಂದರೆ ಆ ಸಮಯದಲ್ಲಿ ಮೊಬೈಲ್‌ನಲ್ಲಿನ ಯಾವ ಹಿತನುಡಿಗಳೂ, ಯಾರ ಹಾಸ್ಯಗಳೂ, ಯಾವ ಲೋಕೋಕ್ತಿ, ಸುಭಾಷಿತಗಳೂ ಅವನನ್ನು ‘ಚಿಲ್’ ಮಾಡುವಲ್ಲಿ ಸೋತು ಬಿಡುತ್ತವೆ.

    ಬೇಸರವಾದರೆ ಹಾಡು, ಹರಟೆ, ಹಾಸ್ಯ ಮೂವಿ ನೋಡುತ್ತಲೋ, ಬೇಕಾದವರೊಂದಿಗೆ ವಿಡಿಯೋ ಕಾಲ್ ಮಾಡುತ್ತಲೋ ಸಮಯ ಕಳೆದು ಮನಸು ರಿಲ್ಯಾಕ್ಸ್ ಆಗಿಸಿಕೊಳ್ಳಬಹುದಾದ ಈ ಕಾಲದಲ್ಲೂ ಒಂಟಿತನ ಕಾಡುವುದೇಕೆ? ಅಂದರೆ ಮೊದಲಿನಂತೆ ಕೂಡು ಕುಟುಂಬ, ಮನೆಯವರ ಕಾಳಜಿ, ಪ್ರೀತಿ, ಸಾಂಗತ್ಯಗಳನ್ನು ಮನಸು ಬಯಸುತ್ತದೆ (ಪರೋಕ್ಷವಾಗಿ) ಎಂದೇ ಅರ್ಥ. ಆದರೆ ಒಪ್ಪಿಕೊಳ್ಳಲಾಗುತ್ತಿಲ್ಲ.

     ಮೊನ್ನೆ ನಮ್ಮವರಿಗೆ ಅವರ ಅಳಿಯ ಆಗುವವರು ಕಾಲ್ ಮಾಡಿ “ಯಾಕೋ ಬೇಸರವಾಗಿದೆ ನೋಡು ಮಾವ, ಏನು ಮಾಡಲೂ ಮನಸಿಲ್ಲ” ಎಂದು ಬೇಸರದಿಂದ ಮಾತಾಡಿದ.  ಆಶ್ಚರ್ಯವೆಂದರೆ ಆತ ಮಿಲಿಟರಿ ಎಕ್ಸ್ ಸರ್ವೀಸ್‌ಮನ್  ಹೆಂಡತಿ ಟೀಚರ್ ಇಬ್ಬರ ಸಂಬಳ, ಇಬ್ಬರು ಮಕ್ಕಳು. ಬೇರೆ ಊರಲ್ಲಿ ಓದುತ್ತಿದ್ದಾರೆ. ಹೆಂಡತಿ ಡ್ಯೂಟಿಗೆ ಹೋದಾಗ ಆತನಿಗೆ ಹೀಗೆ ಅನಿಸಿದೆ. ಅದಕ್ಕೆ ನಮ್ಮವರು “ಯಾಕೋ ನನ್ ತಂಗಿ ದುಡಿತಾಳ ಕುಂತು ಊಟ ಮಾಡೋಕೆ ಬೇಜಾರಾ? ಮನೆ ಕೆಲಸ ಮಾಡ್ಕೊಂಡು ಅರಾಮಿರು.” ಹಾಗೆ ಹೀಗೆ ಅಂತ ಹುಡುಗಾಟದ ಸಲುಗೆಯಿಂದ ಕಾಲೆಳೆದರು. ಬೈದರು ಸುಮ್ಮನೇ .ಆತ (ಅಣ್ಣ) ನಕ್ಕು ಬಿಟ್ಟ. ಕೊನೆಗೆ ಹೇಳಿದ “ ಮಾವ ಎಷ್ಟು ದಿನಗಳಾಗಿತ್ತು ನೋಡು ನಾನು ನಗದೇ, ಸಮಾಧಾನವಾಯ್ತು” ಎಂದ. ನಮ್ಮವರು ಮತ್ತೆ ಕಾಲೆಳೆದರು “ಬೈಸಿಕೋಬೇಕು ಅಂದ್ರೆ ಸಂಜೆ ಕಾಲ್ ಮಾಡು ಫ್ರೀ ಇರ್ತೀನಿ ಆಯ್ತಾ?”. “ಆಯ್ತಪಾ ಬಾಯ್” ಎಂದ ನಗುತ್ತಾ. ಈ ಸಂಭಾಷಣೆ ನನ್ನ ಚಿಂತನೆಗೆ ಹಚ್ಚಿ

ಈ ಲೇಖನಕ್ಕೆ ಕಾರಣವಾಯ್ತು

   ಎಲ್ಲಾ ಇದೆ ಆತನಿಗೆ, (ಆತನಂತೆ ನಮಗೂ) ಒಮ್ಮೊಮ್ಮೆ ಹೀಗಾಗುತ್ತದೆ. ಮನುಷ್ಯ ಸಂಘಜೀವಿ. ಒಂಟಿಯಾಗಿದ್ದಾಗ ಅದು ಹಿಂಸೆ ಆದಂತೆನಿಸುತ್ತದೆ. ಹಾಗಾದಾಗ ನಾವು ನಮಗೆ ಸರಿ ಅನಿಸಿದ್ದನ್ನು ಮಾಡಬೇಕು. ಅಣ್ಣನಂತೆ.

    ಮತ್ತೆ ಅನಿಸಿದ್ದು ಬೈಸಿಕೊಳ್ಳಲೂ ಕಾಲ್ ಮಾಡ್ತಾರಾ? ಅಂತ. ಮತ್ತು ಪ್ರೀತಿಯ ಬೈಗುಳ ನಾಲಿಗೆ ಸ್ವಚ್ಚ ಮಾಡುವ ರುಚಿ ಹೆಚ್ಚಿಸುವ ಗ್ರಂಥಿಗಳನ್ನು ಉತ್ತೇಜಿಸುವ ಉಪ್ಪಿನಕಾಯಿಯಂತೆ. ಸಂಜೆಯ  ಮಂಡಕ್ಕಿ ಮಿರ್ಚಿಯಂತೆ ಎಂದು. ಹೆಂಗಸರಿಗೆ ಗಂಡ ಮನೆ ಮಕ್ಕಳು ತನ್ನವೇ ಒಂದಿಷ್ಟು ಸಮಸ್ಯೆಗಳಿವಂತೆ ಗಂಡಸರಿಗೂ ಬೇಸರ ಖಿನ್ನತೆ ಕಾಡುತ್ತವೆ. ಆ ಖಿನ್ನತೆ ಮಧ್ಯಪಾನ, ಪಾರ್ಟಿ ಮೂವಿಯಿಂದಲೂ ದೂರಾಗಲು ಒಪ್ಪದೇ ಹತ್ತಿರದವರ ಜೋರು, ಸಲಿಗೆ, ತಮಾಷೆ, ಬೈಗುಳಗಳಿಂದ ಮನಸು ಹಗುರಾದ ಬಾವ ಮೂಡಿ ಬದುಕಿನ ಬಂಡಿ ಮತ್ತೆ ಸರಾಗವಾಗಿ ಮುನ್ನಡೆಯುತ್ತದೆ.

     ನಾವು ಚಿಕ್ಕವರಿದ್ದಾಗ ‘ಬೇರೆ ಕಡೆ ದುಡ್ಡು ಕೊಟ್ಟು ಬೈಸಿಕೊಳ್ತಾರಂತೆ’ ಅಂತ ಕೇಳಿದ್ದುಂಟು. ಈಗ ಕೊಂಚ ಬದಲಾವಣೆ, ಫೋನ್ ಮಾಡಿ ಬೈಸಿಕೊಳ್ತಾರೆ . ಈ ಬೈಗುಳ ಅಂದ್ರೆ ನೆನಪಾಯ್ತು ನಾವು ಬಾಡಿಗೆ ಮನೇಲಿದ್ದಾಗ ಮನೆ ಮುಂದಿನ ಅಜ್ಜಿ ಅಂತಿದ್ರು ‘ಮಕ್ಕಳಿಗೆ ಬೈದ್ರೆ ಅವರಿಗೆ ಸಿಟ್ಟೂ ಬಂದಿರಬಾರದು, ನಮ್ಮ ಸಿಟ್ಟೂ ಕಡಿಮೆಯಾಗಿರಬೇಕು” ಅಂತ. ಉದಾ: ‘ನಿನ್ ಬಾಯಾಗ ರೊಟ್ಟಿ ಹಾಕ್ಲಿ’  ‘ ಕೋತಿ ತಂದು ನಾಲರ ನಡುವೆ ಇಟ್ಟರಂತೆ’ ಹೀಗೆ. ಈಗೀಗ ನಾನು ಅದನ್ನೇ ಬೈದ್ರೆ ಮಕ್ಕಳು “ಅಮ್ಮಾ ಬರೇ ರೊಟ್ಟಿ ಕೊಟ್ಟರೆ ಹೇಗೆ ಒಂದಿಷ್ಟು ಪಲ್ಯನ ಹಾಕಲ್ಲ” ಎಂದು ನಗಿಸಿ ಬಂದ ಕೋಪ ಕರಗಿಸಿ ಬಿಡುತ್ತಾರೆ ಚಾಲಾಕಿಗಳು.

  ಬೈಗುಳ ನಿಜ ಅಂದ್ರೆ ಖುಷಿ ಕೊಡುತ್ತವೆ. “ಒಂದು ಕಾಲ್ ಮಾಡಿಯ?ನೆನಪಿಲ್ಲ ನಿಂಗೆ , ಸ್ವಾರ್ಥಿ ನೀನು, ಪಾಪಿ.” ಎನ್ನುವ ಜಗಳದ ಧಾಟಿಯ ಬೈಗುಳದಿಂದ ಅವರು ನಮ್ಮ ಕಾಲ್ ಗೆ ಕಾಯುತ್ತಿರುವುದನ್ನು ಪ್ರಚುರಪಡಿಸುತ್ತಾರೆ ಪರೋಕ್ಷವಾಗಿ. ಈ ಪರೋಕ್ಷೋಕ್ತಿ ತುಂಬಾ ಪರಿಣಾಮಕಾರಿ. ಎಲ್ಲವೂ ಪ್ರತ್ಯಕ್ಷವಾಗಿರಲು ಹೇಗೆ ಸಾಧ್ಯ? ಹಾಗಿರಲೂಬಾರದು. “ಮಾತಾಡಿಸಬೇಡ ಹೋಗು ಗೋರಿಲ್ಲ” ಇದೊಂದು ಬೈಗುಳ ಇಲ್ಲಿ ಮಾತಾಡಿಸಬೇಕಿತ್ತು ಎನ್ನುವ ಹಠದ ಪರೋಕ್ಷ ಒತ್ತಾಯವಿದೆ ಅವಾಗೆಲ್ಲಾ ಅದನ್ನು ಸೀರಿಯಸ್ಸಾಗಿ ಸ್ವೀಕರಿಸಿ ಕೋಪಗೊಳ್ಳಬಾರದು. ಒಂದು ಸಿನೆಮಾದಲ್ಲಿ ನಾಯಕಿ ಹುಸಿಮುನಿಸಿನಿಂದ ಇಷ್ಟು ಉದ್ದದ ಬೈಗುಳ ಸುಳ್ಳು ಪೊಳ್ಳು ಕೂಡಿಸಿ ಬೈದು ‘ ಇದರ ಅರ್ಥ ತಿಳಿದರೆ ನೀನು ನೇಣು ಹಾಕೊಂತೀಯಾ’ ಎನ್ನುವುದು ಮಜವೆನಿಸುತ್ತದೆ.

      ಆಯ್ತಲ್ಲ ಯಾರಾದ್ರೂ ಬೈದರೆ ಬಸವಣ್ಣನವರಂತೆ ಅವರು ಬಂಧುಗಳೇ ಆಗಿರುತ್ತಾರೆ . ಆ ಸಲಿಗೆ ಅವರಿಗೇ ತಾನೇ ಇರಲು ಸಾಧ್ಯ?ಬೈಗುಳ ಬಹುತೇಕ ಕಾಳಜಿಯ ಅಪೇಕ್ಷೆಯೇ ಆಗಿರುತ್ತದೆ. ಜೊತೆಗೆ ಪ್ರೀತಿಯ ಪರಮಾವಧಿಯಾಗಿರುತ್ತದೆ.

                                   ಜಸ್ಟ್ ಫೀಲ್ ಅಂಡ್ ಎಂಜಾಯ್ ಇಟ್


                                                ನಿಂಗಮ್ಮ ಭಾವಿಕಟ್ಟಿ.

One thought on “ಬೈಗುಳಾಪೇಕ್ಷೆ

  1. ಚನ್ನಾಗಿದೆ, ನಂಗೂ ಪ್ರೀತಿಯಿಂದ ಬೈರಿ ಆಯ್ತಾ…..

Leave a Reply

Back To Top