ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಅದೆಷ್ಟು ಬೇಗ ಶವಗಳೊಂದಿಗೆ ಶವಗಳಾಗುತ್ತೇವೆ ನಾವು
ಸುಳ್ಳಿನೊಂದಿಗೆ ಜೀವಿಸುತ್ತ ಸತ್ಯವನ್ನೇ ಮರೆಯುತ್ತೇವೆ ನಾವು
ನಾಜೂಕಿನ ದುನಿಯಾದಲ್ಲಿ ದಿಲ್ ಕಿ ಬಾತಿನ ಕಿಮ್ಮತ್ತೇನು ಗೊತ್ತೇ..?ಗೆಳೆಯ
ಹಣದ ಹಪಾಹಪಿಯಲ್ಲಿ ಮೌಲ್ಯಗಳಿಗೆ ಕುರುಡಾಗುತ್ತೇವೆ ನಾವು
ಲಂಚದ ಮಾತು ಸಹಜ ಹಕ್ಕಾಗಿಸಿಲ್ಲವೇ ಆ ದೇವರ ಕೆಲಸದಲ್ಲಿ…?
ದೈವವೇ ಪ್ರತ್ಯಕ್ಷವಾದರೂ ಅವನಿಗೂ ಮಾಮೂಲಿ ಕೇಳಿ ಬಿಡುತ್ತೇವೆ ನಾವು
ಮಾಫಿಯಗಳ ಲೋಕವಿದು ಎಂದೆಲ್ಲ ದೊಡ್ಡ ದನಿಯಲಿ ದೂರುತ್ತೇವಲ್ಲವೇ
ಮುಖವಾಡವ ಕಳಚಿಟ್ಟು ಕೆಲಸಕ್ಕಾಗಿ ಸದ್ದಿಲ್ಲದೇ ಹಪ್ತಾ ಕೊಡುತ್ತೇವೆ ನಾವು
ಹರಿದು ಹೋಗುವ ಹಾಳೆಯಲ್ಲಿ ಅದೆಷ್ಟು ಆದರ್ಶ ಬಿತ್ತಿದ್ದೇವಲ್ಲವೇ?
‘ದೇವ ‘ನನ್ನೇ ಬಿತ್ತಿ ಬೆಳೆಯುವ ಎದೆಯ ನೆಲವನ್ನೇ ಬರುಡಾಗಿಸುತ್ತೇವೆ ನಾವು