ಅಂಕಣ ಸಂಗಾತಿ

ಕಾವ್ಯದರ್ಪಣ

ಏನು ಜೀವನಧರ್ಮ ? ಏನು ಪ್ರಪಂಚಾರ್ಥ ?l

 ಏನು ಜೀವ ಪ್ರಂಪಂಚಗಳ ಸಂಬಂಧ ?ll

ಕಾಣದಲ್ಲಿರ್ಪುದೇ ನಾನುಮುಂಟೆ? ಅದೇನು?l

ಜ್ಞಾನ ಪ್ರಮಾಣವೇಂ ?- ಮಂಕುತಿಮ್ಮ

           – ಡಿ.ವಿ.ಜಿ.

ಕಾವ್ಯ ಪ್ರವೇಶಕ್ಕೆ ಮುನ್ನ

ಜಗತ್ತು ಭೌತಿಕ ಪ್ರಪಂಚ ಮತ್ತು ಪ್ರಕೃತಿಯ ಭಾಗವಾಗಿದೆ. ಇಲ್ಲಿ ಮಾನವನ ಚಟುವಟಿಕೆಗಳು ಸೇರಿದಂತೆ ಸಕಲ ಜೀವರಾಶಿಗಳು ಈ ಪರಿಧಿಯಲ್ಲಿ ಬರುತ್ತವೆ. ಜಗವಿಲ್ಲದೆ  ಜೀವನವಿಲ್ಲ. ಪ್ರತಿಯೊಂದು ಜೀವಿಯು ತನ್ನ ಬದುಕು ಸ್ಥಾಪಿಸಲು ಜಗವನ್ನು ಅವಲಂಬಿಸಿರುತ್ತದೆ. ಹಾಗಾಗಿ ಇಂತಹ ಜಗತ್ತು ಜನರ ಶ್ರೇಯಸ್ಸು ಬಯಸಬೇಕು. ಉಳಿದ ಜೀವಿಗಳಿಗೆ ನೆಲೆಯನ್ನು ಒದಗಿಸಬೇಕು. ಇದೆಲ್ಲಾ ಸಲೀಸಾಗಿ ನೆರವೇರಿದಾಗ ಜಗವು ಬೆಳೆದು ನಿಲ್ಲುತ್ತದೆ.

ಈ ಜಗತ್ತು ಇಂದಿನ ಸೃಷ್ಟಿಯಲ್ಲ. ಈಗಿನವರ ಬಳುವಳಿಯೂ ಅಲ್ಲ. ಅದೊಂದು ಅನಾದಿಕಾಲದಿಂದಲೂ ಅಜರಾಮರವಾಗಿ ಬೆಳೆದು ಬಂದಿರುವ ಜೀವ ಪೋಷಣಾ ಕೇಂದ್ರವಾಗಿದೆ.

ಇದು ಬೆಳೆದು ಬಂದ ಪರಿ ವಿಸ್ಮಯ ಹಾಗೂ ಚೇತೋಹಾರಿಯಾಗಿದೆ. ಅದು ನಿರಂತರವಾದ ಕಾಲಚಕ್ರವಾಗಿದ್ದು ಉರುಳುತ್ತಾ ಪ್ರತಿ ಉರುಳಿನಲ್ಲೂ ತನಗೆ ಬೇಕಾದುದನ್ನು ತಾನೆ ಪಡೆದುಕೊಂಡು ಸಾಗುತ್ತದೆ.

ಈ ಜಗತ್ತು ಎಲ್ಲರಿಗೂ ಅನಿವಾರ್ಯ. ಆದರೆ ಈ ಜಗಕೆ ಯಾರೂ ಅನಿವಾರ್ಯವಲ್ಲ. ಅದು ಯಾರ ಇರುವಿಕೆಯನ್ನು ಅವಲಂಬಿಸಿಲ್ಲ. ಸಹಜವಾಗಿ ತಂತಾನೆ ಬೆಳೆಯುತ್ತಿರುತ್ತದೆ. ನಾವು ಅದರೊಂದಿಗೆ ಹೊಂದಿಕೊಂಡು ಸಾಗಬೇಕು. ಆ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು.

ಈ ದಿನ ನಾನು ಭೀಜಿ ವಿರಚಿತ ಜಗವು ಬೆಳೆದು ಬಂದ ಪರಿ ಕುರಿತ ಕವನವೊಂದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.

ಕವಿ ಪರಿಚಯ

ಭೀಜಿ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಭೀಮರಾಯ ಹೇಮನೂರ ಅವರು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು. ಇವರು ಬಿ.ಕಾಂ. ಪದವೀಧರರಾಗಿದ್ದು ಪ್ರಸ್ತುತ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಹೊಂದಿರುವ ಜೊತೆಗೆ ಪೆಯಿಂಟಿಂಗ್ ಹಾಗೂ ಚಿತ್ರಕಲೆಗಳು ಇವರ ನೆಚ್ಚಿನ ಹವ್ಯಾಸಗಳು. ಕಾಲೇಜು ದಿನಗಳಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುವಾಗಿ ತೊಡಗಿಸಿಕೊಳ್ಳುತ್ತಿದ್ದ ಇವರು ಕಾಲೇಜಿನ ಸ್ಮರಣಸಂಚಿಕೆ ಚೇತನದ ಸಂಪಾದಕರಾಗಿ ಕೂಡ ಕಾರ್ಯ ನಿರ್ವವಹಿಸಿದ್ದರು.

“ಯಾರು ಒಳ್ಳೆಯವರು ಯಾರು ಕೆಟ್ಟವರು” ಎಂಬ ನಾಟಕವನ್ನು ರಚಿಸಿ ಆ ನಾಟಕದಲ್ಲಿ ತಾವೇ ನಾಯಕನಾಗಿ ಅಭಿನಯಿಸಿ ರಂಗ ಪ್ರದರ್ಶನ ಮಾಡುವ ಮೂಲಕ ತಮ್ಮಲ್ಲಿಯೂ ಒಬ್ಬ ನಟನಿದ್ದಾನೆ ಎಂದು ಸಾಬೀತುಪಡಿಸಿದ್ದಾರೆ. ಜೊತೆಗೆ “ಮುಳ್ಳು ಚೆಲ್ಲಿದ ಹಾದಿಗೆ” ಎಂಬ ಕವನ ಸಂಕಲನವನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಕೃತಿಗೆ ಕಲಬುರ್ಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಸಂಘದಿಂದ 2019ನೇ ಕಾವ್ಯ ವಿಭಾಗ ಪ್ರಶಸ್ತಿ ಸಂದಿದೆ. ಎಸ್-4 ಸಂಸ್ಥೆಯಿಂದ ಕೊಡಮಾಡುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

2020ರಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ದಿಲ್ಲಿ ಆಕಾಶವಾಣಿ ಆಯೋಜಿಸಿದ್ದ ರಾಷ್ಟ್ರೀಯ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 22 ಭಾಷೆಗಳ ಕವಿಗಳ ನಡುವೆ ಕನ್ನಡ ಕವನವನ್ನು ವಾಚಿಸಿದ ಹೆಗ್ಗಳಿಕೆ ಇವರದು.

ಕಾವ್ಯದ ಆಶಯ

ಇಲ್ಲಿ ಕವಿಯು ಜಗವು ಬೆಳೆದು ಬಂದ ಪರಿಯನ್ನು ವ್ಯಾಖ್ಯಾನಿಸುತ್ತಾ ಸಾಗಿದ್ದಾರೆ. ಮನೆ ನಿರ್ಮಾಣಕ್ಕೆ ಇಟ್ಟಿಗೆ ಸಿಮೆಂಟು ಮರಳು ಇದ್ದರೆ ಸಾಲದು. ಅದನ್ನು ನಿರ್ಮಿಸುವವರಿಗೆ ಅರ್ಪಣಾ ಮನೋಭಾವವಿರಬೇಕು. ಸೇವಾ ನಿಷ್ಠತೆ ಇರಬೇಕು ಎನ್ನುತ್ತದೆ ಕವಿತೆ.

ಇಲ್ಲಿ ಕವಿತೆಯು ಮಹಾಮನೆಯ ನಿರ್ಮಾಣ ಮಾಡಲು ಮಹನೀಯರನೇಕರ ಸೇವೆ ನೆನಪಿಸುತ್ತದೆ. ಅವರ ತತ್ವಾದರ್ಶಗಳು ಪ್ರಭಾವ ಬೀರಿ ಇತರರಿಗೆ ಮಾರ್ಗದರ್ಶನ ನೀಡುತ್ತವೆ ಎಂದು ನಿರೂಪಿಸುತ್ತದೆ. ಮಹಿಮಾವಂತರನೇಕರು ಜಗದ ಈ ಮನೆಯ ಬುನಾದಿಯನ್ನು ಹಾಕಿದ್ದಾರೆ. ಅವರು ತೋರಿದ ಮಾರ್ಗ ಅನುಸರಣ ಯೋಗ್ಯವಾಗಿದೆ. ಈ ಮಾರ್ಗದಲ್ಲಿ ನಾನು ಚಲಿಸಬೇಕು ಎಂಬ ಆಶಯ ವ್ಯಕ್ತ ಪಡಿಸುತ್ತಾರೆ.

 ನಾವೆಲ್ಲ ಸುರಕ್ಷಿತವಾಗಿರಲು ಜಗದ ಸ್ವಾಸ್ಥ್ಯ ಕಾಪಾಡಬೇಕು. ಇದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ನಮಗೆ ಗಾಂಧಿ ಬುದ್ಧ ಬಸವರ ನಡೆ ಸ್ಫೂರ್ತಿಯಾಗಬೇಕು ಎಂಬುದು ಕವಿಯ ಮನೋಗತವಾಗಿದೆ.

ಜಗದ ಮನೆಯ ಸುರಕ್ಷಿತವಾಗಿರಲು ಸಕಲ ಜೀವರಾಶಿಗಳಿಗೂ ಶಾಂತಿ ಮತ್ತು ಪ್ರೀತಿಯ ಧಾರೆಯೆರೆಯಬೇಕೆಂದು ಕವಿತೆ ಸಂದೇಶಸುತ್ತದೆ. ಜೊತೆಗೆ ಜಗದ ನಿರ್ಮಾಣದಲ್ಲಿ ಪ್ರತಿಯೊಬ್ಬರ  ಈ ಕರ್ತವ್ಯವನ್ನು ತಿಳಿಸುತ್ತದೆ.

ಇಲ್ಲಿ ಸಾಧಕರ ಉದಾತ್ತ ಚಿಂತನೆಗಳ ಪಾಲನೆಯಾಗಬೇಕು. ಬದಲಾಗಿ ಅವು ಕೇವಲ ಹೇಳಿಕೆಗಳಾಗಿ ಉಳಿದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಇದರಿಂದಲೇ ಜಗದೊಳಗೆ ಸಾಧನೆ ಗಗನ ಕುಸುಮವಾಗಿದೆ. ಅದು ನೈಜತೆಯನ್ನು ಪಡೆದು ಸಹಜವಾಗಿ ಕೆ ಒಗ್ಗಟ್ಟು ಸಾಮರಸ್ಯ ಸೌಹಾರ್ದತೆ ಗುಣಗಳು ಮೂಡಬೇಕು.

ನಮ್ಮ ಅಳಿವಿನ ನಂತರ ಉಳಿವು ಇರಬೇಕಾದರೆ ನಾವು ಈ ಜಗಕ್ಕೆ ಏನನ್ನಾದರೂ ವಿಶಿಷ್ಟವಾದ ಕೊಡುಗೆಯನ್ನು ನೀಡಬೇಕು. ಆ ಕೊಡುಗೆ ಸಕಲ ಜೀವ ಸಂಕುಲಕ್ಕೂ ಆಸರೆಯಾಗಿರಬೇಕು. ಬದುಕಿನ ಬೆಂಗಾವಲಾಗಿರುವಂತಿರಬೇಕು. ಮಾನವಕುಲವನ್ನು ಉದ್ಧರಿಸುವಂತಿರಬೇಕು. ಪರಿಸರವನ್ನು ಉಳಿಸಿ ಬೆಳೆಸುವಂರಬೇಕು.

ಒಟ್ಟಾರೆ ಜಗವು ಬೆಳೆದು ನಿಲ್ಲಲು ಸತ್ಯ ಶಾಂತಿ ಸಾಧನೆ ಪ್ರೀತಿ ಪ್ರೇಮದ ತೈಲವನೆರೆದು ನಿಷ್ಠೆ ಪ್ರಾಮಾಣಿಕತೆಯ ಬತ್ತಿ ಹಾಕಿ ನಿತ್ಯಾ ನಂದಾದೀಪವನ್ನು ಹಚ್ಚಬೇಕು ಎಂದು ಕವಿಯ ಮಹದಾಶಯವು ಈ ಕವಿತೆಯ ಜೀವಾಳವಾಗಿದೆ.

ಕವಿತೆಯ ಶೀರ್ಷಿಕೆ

ಜಗವು ಬೆಳೆದು ನಿಲ್ಲುವ ಪರಿ

ಈ ಕವಿತೆಯಲ್ಲಿ ಕವಿಯು ಈ ಜಗತ್ತಿನ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆ. ಈ ಜಗ ಭೌಗೋಳಿಕ ಜೈವಿಕ ಭೌತಿಕ‌ ಹಾಗೂ ಲೌಕಿಕ  ಪರಿಸರದ ಮಾತೆಯಾಗಿದೆ. ಇದು ಮನುಕುಲಾದಿಯಾಗಿ ಎಲ್ಲಾ ಜೀವಜಂತುಗಳಿಗೂ ಆಶ್ರಯ ನೀಡಿ ಸಲಹುತ್ತದೆ. ಇಲ್ಲಿ ಪಂಚಭೂತಗಳಿವೆ.  ಜೀವಿಗಳ ಉಳಿವಿಗಾಗಿ ಅಗತ್ಯವಾದ ಸಕಲ ಅಂಶಗಳು ಇವೆ. ನಾವ್ಯಾರು ಇವುಗಳನ್ನು ಸೃಷ್ಟಿಸಿಲ್ಲ. ಇವೆಲ್ಲ  ಪ್ರಕೃತಿದತ್ತ ಕೊಡುಗೆಗಳು. ಇವುಗಳ ಜೊತೆಗೆ ನಾವು ಬೆಳೆಯುತ್ತಿದ್ದೇವೆ. ಹೇಗೆ ಜಗವು ಎಲ್ಲವನ್ನು ಸರಿದೂಗಿಸಿಕೊಂಡು ಬೆಳೆದು ನಿಲ್ಲುತ್ತದೆ ಎಂಬುದೇ ಕವಿತೆಯ ಜೀವಾಳವಾಗಿದ್ದು ಜಗವು ಬೆಳೆದು ನಿಲ್ಲುವ ಪರಿ ಶೀರ್ಷಿಕೆ ತುಂಬಾ ಅರ್ಥಪೂರ್ಣವಾಗಿದೆ.

ಕವಿತೆಯ ವಿಶ್ಲೇಷಣೆ

ಜಗವು ಬೆಳೆದು ನಿಲ್ಲುವ ಪರಿ

ಜಗವು ತನ್ನಿಂತಾನೇ ಕಟ್ಟಿಕೊಳ್ಳುತ್ತದೆ

ತನ್ನ ಸುಂದರ ಭವಿಷ್ಯವನ್ನು

ಭದ್ರ ಅಡಿಪಾಯಕ್ಕೆ ಬಳಸಿಕೊಂಡು

ಮಹಾತ್ಮರ ತ್ಯಾಗ ಬಲಿದಾನವನ್ನು“.

ಈ ಜಗತ್ತಿಗೆ ತನ್ನ ಸುಭದ್ರತೆಗೆ ಅಗತ್ಯವಾದ ಪರಿಕರಗಳ ಅರಿವಿದೆ.  ಅಂತಹ ಜನರನ್ನು ಇದು ಜಗದ ಬದ್ರ ಭದ್ರತೆಗೆ ಬುನಾದಿಗೆ ಬಳಸಿಕೊಂಡು ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳುತ್ತದೆ.

ನಾವಿಲ್ಲಿ ನಿಷ್ಟ್ರಯೋಜಕರನ್ನು, ದುರ್ಮಾರ್ಗಿಗಳನ್ನು, ಅವರ ಕೆಲಸ ಕಾರ್ಯಗಳನ್ನು ಅನುಸರಿಸುವುದಿಲ್ಲ. ಅದರಿಂದ ಜಗತ್ತಿಗೆ ಹಾನಿಯೇ ಹೊರತು ಉಪಯುಕ್ತತೆ ಇಲ್ಲ. ಅದರಿಂದ ಸದಾ ಆತಂಕ ಭಾವದಲ್ಲಿ ನಾವು ಪರಿತಪಿಸಬೇಕಾಗುತ್ತದೆ. ಎನ್ನುವುದು ಕವಿಯ ಕಳವಳವಾಗಿದೆ.

ಕೆಟ್ಟವರಷ್ಟೇ ಒಳ್ಳೆಯವರು ಇರುತ್ತಾರೆ. ಅನೇಕ ನಿಷ್ಕಲ್ಮಶ ಮನಸ್ಸಿನವರು ನಿಸ್ವಾರ್ಥ ಜೀವಿಗಳು ಸಮಾಜದ ಏಳಿಗೆಗಾಗಿ, ಜನಕಲ್ಯಾಣಕ್ಕಾಗಿ ಸ್ವಹಿತ ಮರೆತು ಹೋರಾಡುವರು. ಅವರೆಲ್ಲರ ತ್ಯಾಗ ಬಲಿದಾನದಿಂದ ನಾವಿಂದು ಸುಂದರವಾದ ನಿರ್ಭಿತಿಯ ಜಗವನ್ನು ಸೃಷ್ಟಿಸಿಕೊಂಡಿದ್ದೇವೆ ಎನ್ನುವುದು ಕವಿಯ ಅಭಿಮತವಾಗಿದೆ.

ಸಾಧಕರು ಮಾತ್ರ ತಮ್ಮ ನಿರ್ಣಯಗಳಿಂದ ಜಗತ್ತನ್ನು ಪ್ರಭಾವಿಸುತ್ತಾರೆ

      ಎಂಬ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನುಡಿ ಸತ್ಯವೆನಿಸದಿರದು.

ಇಲ್ಲಿ ಸಮಾಜಮುಖಿ ವ್ಯಕ್ತಿಗಳು ಜಗದ ಬದ್ರತೆಗಾಗಿ ಸ್ವಾರ್ಥ ಮರೆತು ಅನೇಕ ಮಹನೀಯರು ಜನ ಕಲ್ಯಾಣಕ್ಕಾಗಿ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅನೇಕರು ತಮ್ಮ ಪ್ರಾಣವನ್ನು ತೆತ್ತು ಜಗದ ಉಳಿವಿಗಾಗಿ ಹೋರಾಡಿದ್ದಾರೆ. ಜಗತ್ತಿನ ಸೃಷ್ಟಿ ಹಲವಾರು ಮಹನೀಯರ ತ್ಯಾಗ ಬಲಿದಾನದ ಪ್ರತೀಕವಾಗಿದೆ.

ಅದಕ್ಕೆ ಪೂರಕವಾಗಿ ವಿವೇಕವಾಣಿ  “ಈ ಪ್ರಪಂಚಕ್ಕೆ ನೀವು ಮನುಷ್ಯರಾಗಿ ಹುಟ್ಟಿ ಬಂದಿದ್ದೀರಿಆದ್ದರಿಂದ ನಿಮ್ಮ ಸಾಧನೆಯ ಮೂಲಕ ಏನನ್ನಾದರೂ ಒಂದು ಒಳ್ಳೆಯ ಮಹತ್ಕಾರ್ಯವನ್ನು ಮಾಡಿ ಹೋಗಿ ಕೇವಲ ಕ್ರಿಮಿಕೀಟಗಳಂತೆ ಹುಟ್ಟಿ ಸತ್ತರೆ ಏನು ಪ್ರಯೋಜನ”ಎಂಬ ವಿವೇಕವಾಣಿಯನ್ನು ನಾವಿಲ್ಲಿ ಸ್ಮರಿಸಬೇಕು. ಹುಟ್ಟಿದ ನಂತರ ನಾಲ್ಕು ಜನರ ಬದುಕಿಗೆ ನೆರಳಾಗುವಂತ ಏನನ್ನಾದರೂ ಸಾಧಿಸಿ ಹೋಗಬೇಕು.

ಜಗದ ನಿರ್ಮಾಣವೆಂದರೆ ನಮ್ಮನೆಯೆ ?

ಮಾತಾಡುವುದಲ್ಲವದು ಸುಮ್ಮನೆ  !

ಸ್ವಾರ್ಥಕ್ಕೆಡೆಯಿಲ್ಲದ, ಟೊಳ್ಳಿಲ್ಲದ

ಗುಂಡಿಗಂಜದ,ಗಂಡೆದೆಯರೇ ಬೇಕು ಬುನಾದಿಗೆ.

ಜಗದ ಜಾಯಮಾನವೇ ಅಂತಹದು

ಅವರಿವರ ಉದಾಹರಿಸಲಾಗದು“.

ಜಗದ ನಿರ್ಮಾಣವೆಂಬುದು ಆಗಾದವಾದ ಕ್ರಿಯೆ. ಇಲ್ಲಿ ಸಕಲ ಚರಾಚರ ಜೀವಿಗಳಿಗೂ ನೆಲೆ ಇದೆ, ಬದುಕಿದೆ. ಆದರೆ ಅದನ್ನು ಕಟ್ಟುವುದು ಸುಲಭದ ಮಾತಲ್ಲ ಎನ್ನುವ ಕವಿ, ಜಗದ ನಿರ್ಮಾಣವೆಂದರೆ ನಮ್ಮ ಮನೆಯನ್ನು ಕಟ್ಟಿದಷ್ಟು ಸುಲಭದ ಮಾತಲ್ಲ. ಒಂದು ಮನೆಯನ್ನು ನಿರ್ಮಿಸಲು ನಾವು ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಅದೊಂದು ಮಹಾನ್ ಸಾಧನೆಯೆ ಸರಿ. ಹಾಗಿರುವಾಗ ಇಡೀ ವಿಶ್ವವನ್ನೇ ಕಟ್ಟುವುದು ಸಾಧಾರಣ ಸಂಗತಿಯೇ ಎಂದು ಕವಿ ಪ್ರಶ್ನಿಸುತ್ತಾರೆ.

ಜಗದ ನಿರ್ಮಾಣ ಸರಳವೆಂದು ಮಾತನಾಡುವುದು ನಮಗೆ ಅಭ್ಯಾಸ ವಾಗಿದೆ. ಆದರೆ ಮಾತಿನಷ್ಟು ಕೃತಿ ಸುಲಭವಲ್ಲ ಎಂಬ ಅರಿವು ನಮಗೆ ಇರಬೇಕಾಗುತ್ತದೆ. ಜಗತ್ತನ್ನು ಕಟ್ಟಲು ನಾವು ನಿಸ್ವಾರ್ಥಿಯಾಗಿರಬೇಕು. ಸ್ವಾರ್ಥ ಲಾಲಸೆಗಳ ದಾಸರಾಗಿರುವ ನಾವು ಕೇವಲ ಟೊಳ್ಳು ಮಾತುಗಳನ್ನಾಡುತ್ತಾ, ಆಡಂಬರ ತೋರುತ್ತ, ಮೇಲ್ನೋಟಕ್ಕೆ ಒಳ್ಳೆಯವರಂತೆ ನಟಿಸುತ್ತಿದ್ದು, ಮನದ ತುಂಬಾ ಸಮಯ ಸಾಧಕ ಬುದ್ಧಿ ಹೊಂದಿದ್ದು, ಲಾಭ-ನಷ್ಟಗಳ ಗುಣಿತ ಹಾಕುತ್ತಾ ನಾಡು ಕಟ್ಟಲಾಗದು. ಇವೆಲ್ಲವನ್ನೂ ಮೀರಿದ ಸೇವಾ ಮನೋಭಾವವಿರಬೇಕು. ಆದರೆ ಕವಿ ಅಂತಹ ಜನರು ಇರುವರೆ ಎಂದು ಬಹಳ ಖೇದದಿಂದ ನುಡಿಯುತ್ತಾರೆ.

ತನಗಾಗಿ ಸುರಿದರೆ ಕಣ್ಣೀರು ಬರಿ ನೀರು

ಜನಕಾಗಿ ಸುರಿದರೆ ಆಣಿಮುತ್ತು

 ತನಗಾಗಿಯಂದುದೆಲ್ಲವು ಅರಿಯ ಅಭಿಶಾಪ

ಜನಕಾಗಿಯೆನೆ ವರವು

ಎಂಬ ಡಾ. ಸಿದ್ದಯ್ಯ ಪುರಾಣಿಕ ಅವರ ಸೂಳ್ನುಡಿಯು ಜನಸೇವೆಯ ಮಹಿಮೆಯನ್ನು ಸಾರುತ್ತದೆ

ಪೊಳ್ಳು ಧೈರ್ಯ ತೋರುತ್ತಾ, ನಾಟಕ ಮಾಡುತ್ತಾ, ಶೌರ್ಯ ಪರಾಕ್ರಮವಿದೆ ಎನ್ನುವ ಬೂಟಾಟಿಕೆ ಜನರಿಂದ ದೇಶ ಕಟ್ಟಲು ಸಾಧ್ಯವಿಲ್ಲ‌.ಅಂಬೇಡ್ಕರ್ ಅವರು

 ದೇಶ ಕಟ್ಟುವ ಕೆಲಸ ನಡೆಯುವುದು

 ಸಣ್ಣ ಮನಸ್ಸಿನ ದೊಡ್ಡ ಜನರಿಂದಲ್ಲ

 ದೊಡ್ಡ ಮನಸ್ಸಿನ ಜನರಿಂದ

 ಎಂದಿರುವುದು.

ಜಗತ್ತು ಸದೃಢವಾಗಿ ಇರಬೇಕೆಂದರೆ ಅದಕ್ಕೆ ಹಾಕುವ ಬನಾದಿ ಸುಭದ್ರವಾಗಿರಬೇಕು.ಅಂತಹ ಭದ್ರತೆ ಒದಗಿಸುವ ತಾಕತ್ತು ಗುಂಡುಗಳಿಗೆ ಹೆದರುವ ಅಂಜುಬುರುಕಗೆ ಇರಲು ಸಾಧ್ಯವಿಲ್ಲ. ಅದಕ್ಕೆ ರಕ್ಷಣೆ ಒದಗಿಸಲು ಗಂಡೆದೆಯಾ ಗಂಡುಗಲಿಗಳಾಗಬೇಕು.

ಜಗದ ಜಾಯಮಾನವೇ ಅಂತಹುದು ಸಣ್ಣ ಮನಸ್ಥಿತಿಯ ಅವರಿಂದ ಏನೂ ಸಾಧಿಸಲು ಆಗಲ್ಲ. ಅದೆಲ್ಲಾ ಸಾಧ್ಯವಾಗುವುದು ವಿಶಾಲ ಮನಸ್ಥಿತಿಯ ಜನರಿಂದ. ಇಂತಹ ಜನರು ಯಾರೆಂದು ಉದಾಹರಿಸಲಾಗದು. ನಮ್ಮೊಳಗೆ ಸಾವಿರಾರು ಜನ ಇರುತ್ತಾರೆ. ಹಾಗಾಗಿ ಅವರಿವರಿಂದು ಉದಾಹರಿಸಲಸಾಧ್ಯ. ಇಲ್ಲಿ ಎಲ್ಲರೂ ಕೂಡ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಹಾಡುವಂತಿರಬೇಕು ಎಂಬುದು ಕವಿಯ ಆಶಯವಾಗಿದೆ.

ಜಗವು ತನ್ನಿಂತಾನೇ ಕಟ್ಟಿಕೊಳ್ಳುತ್ತದೆ

ಸತ್ಯ, ಧರ್ಮ ,ಅಹಿಂಸೆ ಎಂಬ ಸದೃಢ

ಸೈಜುಗಲ್ಲುಗಳನ್ನು ಬಳಸಿಕೊಂಡು

ಸತ್ಯಾಗ್ರಹವೆಂಬ ತಾತ್ವಿಕ ಸಿಟ್ಟು ಸೆಡವಿನ

ಇಟ್ಟಿಗೆಗಳನ್ನೇರಿಸಿಕೊಂಡು.

ಶಾಂತಿ, ಸಮಾಧಾನದ ಗಚ್ಚಿನೊಳಗೆ

ಗಾಂಧಿಯಂತಹವರ ಮುಚ್ಚಿಕೊಂಡು

ಹಸಿ ಹಸಿ ಗಾರೆಯ ಮೇಲೆ

ಬುದ್ಧ ಬಸವರ ಹೆಜ್ಜೆಗಳನ್ನಿರಿಸಿಕೊಂಡು“.

ಜಗವು ತನ್ನಿರುವಿಕೆಯನ್ನು ತಾನೇ ಸಾಬೀತುಪಡಿಸಿಕೊಳ್ಳುತ್ತಾ ಸಾಗುತ್ತದೆ. ಇಲ್ಲಿ ಜಗ ಎಂಬ ಪದವನ್ನು ಕವಿಯು ಪ್ರಕೃತಿ, ಮನೆ, ಕುಟುಂಬ, ಸಮಾಜ, ದೇಶ ಎಂಬ ವಿಶಾಲ ಅರ್ಥಗಳಲ್ಲಿ ಬಳಸಿದ್ದಾರೆ.

ಜಗತ್ತು ನಿಂತಿರುವುದು ಸತ್ಯಧರ್ಮ ಅಹಿಂಸೆಯ ಬಲದಿಂದ. ನಮ್ಮ ದೇಶ ಸ್ವತಂತ್ರ ಪಡೆದ ಮಾರ್ಗವೂ ಇದೆ ಆಗಿದೆ. ಈ ಸತ್ಯ ಶಾಂತಿಯ ಅಹಿಂಸೆಗಳ ಆಯುಧಗಳನ್ನು ಹಿಡಿದು, ಭಯಾನಕ ಮಾರಕಾಸ್ತ್ರಗಳನ್ನು ಎದುರಿಸಿದ ಇತಿಹಾಸ ನಮ್ಮ ಮುಂದಿದೆ. ಇಡೀ ವಿಶ್ವದಲ್ಲಿ ಭಾರತ ಶಾಂತಿ ಸತ್ಯಾಗ್ರಹದ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆದ ಹೆಗ್ಗಳಿಕೆಗೆ ಪಾತ್ರವಾದ ದೇಶ ನಮ್ಮದು. ಈ ಪಾತ್ರವನ್ನು ಸೃಷ್ಟಿಸಿದವರು ಗಾಂಧೀಜಿ ಎನ್ನುವುದು ಹೆಮ್ಮ ಎನ್ನುವ ಕವಿಗಳು ಅಂತಹ ಸಿದ್ಧಾಂತಗಳ ಮೇಲೆ ಜಗವ ನಿರ್ಮಾಣ ಮಾಡಬೇಕು ಎನ್ನುತ್ತಾರೆ.

ಇದೆಲ್ಲಾ ಸಾಧ್ಯವಾಗುವುದು ಸಹನೆ ತಾಳ್ಮೆಯಿಂದ. ಅದರ ಬದಲು ಕೋಪದ ಕೈಗೆ ಬುದ್ಧಿ ಕೊಟ್ಟರೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಅದರಿಂದ ಬರುವ ಫಲಿತ ಊಹೆಗೂ ನಿಲುಕದು. ಇದು ಅತಿ ಭಯಾನಕ ವಾಗಬಹುದು. ಅದರಿಂದ ಜಗತ್ತಿನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಅದಕ್ಕಾಗಿ ಈ ಜಗತ್ತು ತನ್ನ ಒಳಿತಿಗೆ ಪೂರಕವಾಗಿ ಅಗತ್ಯವಾದ ವಾತಾವರಣವನ್ನು ತಾನೇ ಸೃಷ್ಟಿಸಿಕೊಂಡು ಮುನ್ನಡೆಯುತ್ತದೆ. ಇಲ್ಲವಾದರೆ ಕ್ರೌರ್ಯ ಮೆರೆದು, ದುಷ್ಟತನದ ದಾಳವಾಗಿ ರಕ್ತದ ಕೋಡಿಯಲ್ಲಿರಬೇಕಾಗುತ್ತದೆ. ಅದರಲ್ಲಿ ಮುಳುಗೆದ್ದವರು ಅಂತಿಮವಾಗಿ ಯಾರು ಎಂಬ ಪ್ರಶ್ನೆ ಕಾಡುವುದು. ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಜಗತ್ತು ತನ್ನ ನಿರ್ಮಾಣಕ್ಕೆ ಪೂರಕವಾದ ವ್ಯಕ್ತಿಗಳನ್ನು ಕಾಲಕಾಲಕ್ಕೂ ಸೃಷ್ಟಿಸಿಕೊಳ್ಳುತ್ತದೆ ಎನ್ನುವ ಕವಿಗಳು, ಇದರ ಕೊಡುಗೆಯಲ್ಲಿ ಬುದ್ಧ ಗಾಂಧಿಯವರ ಇದರಲ್ಲಿ ಜನಿಸಿ ಸತ್ಯ ಅಹಿಂಸೆಯ ಬೀಜ ನೆಟ್ಟು ಅದನ್ನು ಹೆಮ್ಮರವಾಗಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ಈ ಮನೆಯ ನಿರ್ಮಾಣಕ್ಕಾಗಿ ಸಾಧಾರಣ  ಸಾಧಾರಣ ಇಟ್ಟಿಗೆಗಳು ಸಾಲದು ಧರ್ಮಪಾಲಕರು, ಸತ್ಯಸಂಧರು, ಅಹಿಂಸಾವಾದಿಗಳು ಎಂಬ ಸದೃಡವಾದ ಸೈಜುಗಲ್ಲುಗಳೇ ಕಟ್ಟಡಕ್ಕೆ ಬುನಾದಿಯಾಗಬೇಕು ಎಂದು ಕವಿ ಹೇಳುತ್ತಾರೆ.

ಸಮಾಜದಲ್ಲಿ ಅನ್ಯಾಯ ಅನಾಚಾರ ಶೋಷಣೆ ಅಸಮಾನತೆ ಭ್ರಷ್ಟತೆ ಮೋಸ ವಂಚನೆ ಪಕ್ಷಪಾತಗಳು ಶೋಷಣೆ ಕಾಡುವುದು ಸಹಜ. ಆಗ ಕೋಪೋದ್ರಿಕ್ತರಾಗಿ ಕಾನೂನನ್ನು ಕೈಗೆತ್ತಿಕೊಂಡು ಹಿಂಸಾತ್ಮಕ ರೂಪದಲ್ಲಿ ನ್ಯಾಯ ಪಡೆಯಲು ಪ್ರಯತ್ನಿಸಬಾರದು. ಸತ್ಯಾಗ್ರಹ ಎಂಬ ಸಮಾಧಾನದಿಂದ ತಾತ್ವಿಕ ಪ್ರತಿರೋಧ ವ್ಯಕ್ತಪಡಿಸಿ ಸಿಟ್ಟು ಸೆಡವುಗಳನ್ನು ಇಟ್ಟಿಗೆಗಳನ್ನಾಗಿ ಮಾಡಿಕೊಂಡು ಅದರ ಮೇಲೆ ಶಾಂತಿ ಸೌಹಾರ್ದತೆ ಸಹಬಾಳ್ವೆಯ ಕಟ್ಟಡ ನಿರ್ಮಿಸಬೇಕು ಎನ್ನುತ್ತಾರೆ.

ಜನರ ಅಮಾನುಷ ವರ್ತನೆಗಳು ಅರ್ಥವಿಲ್ಲದ ಕಂದಾಚಾರಗಳು ಮೌಢ್ಯಗಳು ಮುಂತಾದವು ಜನರನ್ನು ಇಕ್ಕಟ್ಟಿಗೆ ಸಿಲುಕಿಸಿ ನೋವನ್ನುಂಟು ಮಾಡುತ್ತದೆ. ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿ ದೇಹದ ಮೇಲೆ ತನ್ನ ನೆನಪು ಉಳಿಯುವಂತಹ ಹಸಿಬಿಸಿ ಗಾಯವನ್ನು ಸೃಷ್ಟಿಸುತ್ತದೆ. ಇಂತಹ ನೋವಿನಲ್ಲೂ ನಲಿವನ್ನು ಧಾರೆಯೆರೆದು ಮನಸ್ಸನ್ನು ಮುದಗೊಳಿಸುವುದು ಬುದ್ಧ ಬಸವರ ನಡೆಗಳು, ಸಂದೇಶಗಳು ಎನ್ನುತ್ತಾರೆ ಕವಿಗಳು.

 ಜನರನ್ನು ಸನ್ಮಾರ್ಗಕ್ಕೆ ತಂದು ಸದ್ಬುದ್ಧಿ ನೀಡುವುದು ಬಸವಣ್ಣನಂತವರ ಸಮಾನತೆಯ ತತ್ವ ,ಕಾಯಕ ತತ್ವಗಳು. ಜೊತೆಗೆ ಬುದ್ಧ ಬೋಧಿಸಿದ ಶಾಂತಿ ಮತ್ತು ಪ್ರಸನ್ನತೆಗಳು ಜನರ ಮೇಲೆ ಪ್ರಭಾವ ಬೀರಿ, ಸರಿ ದಾರಿಯಲ್ಲಿ ಜನರನ್ನು ನಡೆಸುತ್ತಾ ಜಗತ್ತು ಸಾಗುತ್ತದೆ ಎಂಬುದು ಕವಿಯ ಚಿಂತನೆಯಾಗಿದೆ.

ಜಗವು ತನ್ನಿಂತಾನೇ ಕಟ್ಟಿಕೊಳ್ಳುತ್ತದೆ

ಯಾರಿಗೂ ಕೇಡುಂಟು ಮಾಡದ

ಕಾಯಕ ಜೀವಿಗಳೆಂಬ ಕಿಟಕಿ

ಬಾಗಿಲುಗಳನ್ನು ತೆರೆದುಕೊಂಡು

ಕಾಲಕ್ಕೆ ತಕ್ಕ ಬಣ್ಣ ಬಳಿದುಕೊಂಡು“.

ಇಲ್ಲಿ ಜಗತ್ತು ಯಾರಿಗೂ ಕೇಡು ಉಂಟು ಮಾಡುವುದಿಲ್ಲ. ಅದು ತನ್ನ ಉಳಿವಿಗಾಗಿ ಹೋರಾಡುತ್ತಿರುವುದು. ಆ ಸಮಯದಲ್ಲಿ ಅದರ ಅಸ್ತಿತ್ವಕ್ಕೆ ತೊಂದರೆಯಾಗದಂತೆ ತನ್ನಿರುವಿಕೆಯನ್ನು ಸ್ಥಾಪಿಸುತ್ತದೆ. ಇಲ್ಲಿ ಮನೆಯವರು ಇತರರಿಗೆ ತೊಂದರೆಯಾಗದಂತೆ ತಮ್ಮ ಜೀವನ ನಡೆಸುತ್ತಾರೆ. ಇತರರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ತಾವು ಕೂಡ ದುಷ್ಟತನಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸುತ್ತಾರೆ.

ಜಗವೆಂಬ ಮನೆಗೆ ಕಿಟಕಿ ಬಾಗಿಲುಗಳು ಎಂದರೆ ಕಾಯಕ ಜೀವಿಗಳು ಎನ್ನುವ ಭಾವ ಕವಿಯದು. ಇಲ್ಲಿ ಕವಿಯು ಕಾಯಕಜೀವಿಗಳನ್ನು ಕಿಟಕಿ ಬಾಗಿಲುಗಳಿಗೆ ಹೋಲಿಸಿದ್ದಾರೆ. ಮನೆಯೊಳಗೆ. ಗಾಳಿ ಬೆಳಕು  ಪ್ರವೇಶಿಸಲು ಎಷ್ಟು ಮುಖ್ಯವೋ ಮನೆಯೊಂದು ಆರ್ಥಿಕವಾಗಿ ಸದೃಢವಾಗಿರಬೇಕಾಜರೆ ಕಾಯಕವೆಂಬ ಕಿಟಕಿ ಬಾಗಿಲುಗಳನ್ನು ಅಗತ್ಯಕ್ಕೆ ತಕ್ಕಂತೆ ತೆರೆದುಕೊಳ್ಳುತ್ತವೆ ಹಾಗೂ ಅವುಗಳನ್ನು ಪಾಲಿಸುತ್ತವೆ ಇದಕ್ಕೆ ಬಸವಾದಿ ಶರಣರ ಉದಾಹರಣೆಗಳು ಸಾಕಲ್ಲವೇ.

“ಬದಲಾವಣೆ ಜಗತ್ತಿನ ನಿಯಮ ನಿಜ ಆದರೆ ಈ ಬದಲಾವಣೆಯೊಂದಿಗೆ ಬೆಳೆಯುವುದೇ ನಮ್ಮ ನಿರ್ಧಾರವಾಗಬೇಕು”ಎಂಬ ಕನ್ಫ್ಯೂಷಿಯಸ್ ಮಾತುಗಳು ಬದಲಾವಣೆ ಸಕಾರಾತ್ಮಕವಾಗಿ ಸಮಾಜಮುಖಿಯಾಗಿರಬೇಕು ಎಂಬ ಅಂಶವನ್ನು ಹೊತ್ತು ತಂದಿದೆ.

ಅಲ್ಲಿ ದುಡಿಯುವ ಕೈಗಳಿರಬೇಕು. ಶ್ರಮಜೀವಿಗಳ ಉಪಸ್ಥಿತಿ ಇರಬೇಕು. ಆಗ ಮಾತ್ರ ಮನೆ ತನ್ನೆಲ್ಲ ಅಗತ್ಯಗಳನ್ನು ಪೂರೈಸಿಕೊಂಡು ಸುಖವಾಗಿ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಅಂತಹ ಜಗದ ಬಗ್ಗೆ ಕವಿಯ ಚರ್ಚಿಸುತ್ತಾರೆ.

ಜಗವು ತನ್ನಿಂತಾನೇ ಗಟ್ಟಿಕೊಳ್ಳುತ್ತದೆ

ತನ್ನಿಚ್ಛೆಗೆ ಬೇಕಾದಷ್ಟು ಗಾಳಿ, ಮಳೆ

ಬಿಸಿಲು,ಬೆಳಕು, ಬೆಳದಿಂಗಳ ತರಿಸಿಕೊಂಡು,

ಬಗೆಬಗೆಯ ಬಣ್ಣದ ಹೂವರಳಿಸಿಕೊಂಡು.

ಜಗವೊಂದು ಮನೆಯಾಗಿ ಯುಗಯುಗಕೂ

ಸಕಲ ಜೀವ ಸಂಕುಲವ ಸಾವರಿಸಿಕೊಂಡು

ಸಹಜ ಪ್ರೀತಿಯ ಆವರಿಸಿಕೊಂಡು

ಜಗವೆಂಬುದು ಕೇವಲ ಭೌತಿಕ ಜಗತ್ತು ಮಾತ್ರವಲ್ಲ. ಅದರೊಳಗೆ ನೈಸರ್ಗಿಕವಾದುದು ಕೂಡ ಅಂತರ್ಗತವಾಗಿರುತ್ತದೆ. ಇಲ್ಲಿ ಕವಿಯು ಅಗತ್ಯವಾದ ಪ್ರಕೃತಿಯ ಕೊಡುಗೆಗಳ ಕುರಿತು ಮಾತನಾಡುತ್ತಾರೆ. ಗಾಳಿ ಯಾರನ್ನು

ಕೇಳಿ ಬೀಸುವುದಿಲ್ಲ‌ಅಥವಾ‌ ಯಾರು ಹೇಳಿಲ್ಲವೆಂದು ಸುಮ್ಮನಿರುವುದಿಲ್ಲ. ಅದು ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತದೆ.

ಅದರಂತೆ ಜಲಚಕ್ರ ತಾನೇ ಸೃಷ್ಟಿಯಾಗುತ್ತದೆ. ಬಿಸಿಲಾಗಿ, ಆವಿಯಾಗಿ, ಮೋಡವಾಗಿ, ಮಳೆಯಾಗಿ, ಧರೆಯನ್ನು ಸೇರಿ ಜೀವಸಂಕುಲದ ದಾಹ ತೀರಿಸಿ, ಹಸಿರಿನ ಹಂದರ ನಿರ್ಮಿಸಿ, ಫಸಲನ್ನು ಬೆಳೆಸಿ ಜನರ ಮೊಗದಲ್ಲಿ ಜೀವಕಳೆ ತುಂಬುತ್ತದೆ.

ಅದರಂತೆ ದಿನಪನು ತನ್ನ ಕಾಯಕದ ಭಾಗವಾಗಿ, ಬಿಸಿಲು ಬೆಳಕನ್ನು ದಯಪಾಲಿಸಿ ಜೀವರಾಶಿಯನ್ನು ಪೋಷಿಸಿದರೆ, ಚಂದಿರ ಬೆಳದಿಂಗಳನ್ನು ನೀಡಿ ತನುಮನಗಳನ್ನು ಮುದ‌ಗೊಳಿಸುವನು.ಇದಕ್ಕೆ ಯಾರಪ್ಪಣೆಯುಬೇಕಾಗಿಲ್ಲ. ತನ್ನಿಚ್ಚೆಗೆ ಅನುಗುಣವಾಗಿ ನಡೆದುಕೊಳ್ಳುತ್ತವೆ ಎನ್ನುತ್ತಾರೆ.

ಇಲ್ಲಿ ಕವಿಯು ಇದೆಲ್ಲ ಪ್ರಕೃತಿಯ ಪ್ರೇಮಭಿಕ್ಷೆ, ಇದು ಸಹಜವಾದ ಪ್ರೀತಿಯನ್ನು ಜೀವರಾಶಿಗೆ ನೀಡುತ್ತದೆ. ಇಲ್ಲಿ ಯಾವುದೆ ಪೂರ್ವಗ್ರಹವಾಗಲಿ, ಸ್ವಾರ್ಥವಾಗಲಿ ಇಲ್ಲ ಎನ್ನುತ್ತಾರೆ.

ಪ್ರಕೃತಿಯೇ ಈ ವೇಳೆ ಗಾಳಿ ಬಿಸಿಲನ್ನು ನೀಡಿ, ನಿಸರ್ಗವನ್ನು ರಮಣೀಯವಾಗಿಸಿ ಮೋಹಕ ತಾಣವಾಗಿಸಿ ಎಲ್ಲರ ಮನಸೂರೆಗೊಳ್ಳುತ್ತಾ ಬಂದಿದೆ.

ಜಗದ ಗೋಡೆಗಳ ಮೇಲೆ

ಸ್ವಾರ್ಥಿಗಳ ಭಾವಚಿತ್ರಗಳಿಲ್ಲ.

ಚಿತ್ರವಿಲ್ಲದ ಭಾವ ಜಗಜಗಿಸುತ್ತಿದೆ

ನದಿ, ಹಳ್ಳ ಬಯಲು ಬೆಟ್ಟವಾಗಿ

ಹರಿದು ಹೋಗದ ಹಾಗೆ ರೂಪಿಸಿಕೊಂಡು.

ಗಂಧದಂತೆ ತೇಯ್ದವರ ಮುಂದೆ

ನಂದಾದೀಪವನ್ನಿರಿಸಿಕೊಂಡು“.

ಜಗದ ಗೋಡೆಗಳು ಎಂದರೆ ಜನರ ಚಿತ್ತ ಎಂಬರ್ಥದಲ್ಲಿ ಕವಿಯು ಪ್ರತಿಪಾದಿಸುತ್ತಾರೆ. ಜನರ ಮನಸ್ಸು ಸದಾ ಒಳಿತನ್ನು ಬಯಸುತ್ತದೆ. ಉತ್ತಮ ನಡುವಳಿಕೆಯನ್ನು ಬೆಂಬಲಿಸುತ್ತದೆ. ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದವರನ್ನು ಗೌರವಿಸುತ್ತದೆ. ಇಂತಹ ಗುಣವಂತರು, ತ್ಯಾಗಿಗಳು, ನಿಸ್ವಾರ್ಥಿಗಳು ಜನಮನದಲ್ಲಿ ಅಚ್ಚಳಿಯದೆ ಉಳಿಯುವ ತಾರೆಗಳಾಗಿರುತ್ತಾರೆ. ಇವರಿಗೊಂದು ಶಾಶ್ವತವಾದ ಸ್ಥಾನವಿರುತ್ತದೆ. ಅವರಿಗೆ ಆದರ್ಶಪ್ರಾಯ ವಾಗಿರುತ್ತವೆ. ಅದು ಎಂದಿಗೂ ಮಾಸದು. ಅವರ ವರ್ತನೆಗಳು ಜನಹಿತ ಕಾರ್ಯಗಳು ಅವರ ಇರುವಿಕೆಯನ್ನು ರುಜುವಾತು ಮಾಡುತ್ತಿರುತ್ತವೆ. ಅವರ ಅನುಪಸ್ಥಿತಿಯಲ್ಲಿ ಅವರ ಹಾಜರಾತಿ ಜನರ ಮನದಂಗಳದಲ್ಲಿ ನಿತ್ಯ ಅಮರವಾಗಿರುತ್ತದೆ.

ಬದುಕಿಗಾರ್ ನಾಯಕರು ಏಕನೊ ಅನೇಕರೋ?

ವಿಧಿಯೆ ಪೌರುಷವೋ ಧರುಮವೋ ಅಂಧಬಲವೋ?

ಕುದುರುವುದೆಂತು ವ್ಯವಸ್ಥೆಯ ಪಾಡು?

ಅದಿಗುದಿಯ ಗತಿಯೇನೊ?- ಮಂಕುತಿಮ್ಮ

ಎಂಬ ಕವಿ ನುಡಿಯು ಬದುಕಿಗೆ ನಾಯಕರಾರು ಎಂದು ಸಾರಿ ಹೇಳುತ್ತದೆ.

ಈ ಜಗತ್ತಿನ ಏಳಿಗೆಗಾಗಿ ಇಂತಹ ಅನೇಕ ಮಹಾಪುರುಷರು ಜನಿಸಿದ್ದಾರೆ. ತಮ್ಮ ತನು ಮನ ಪೂರ್ವಕವಾಗಿ ಸೇವೆಗೈದಿದ್ದಾರೆ. ಇವರೆಲ್ಲ ನಿಸ್ವಾರ್ಥಿಗಳಾಗಿ ಜಗತ್ತನ್ನು ಕಟ್ಟಿದ್ದರ ಪರಿಣಾಮ ಈ ಜಗದ ಜನರ ಮನದ ಗೋಡೆಯಲ್ಲಿ ನಿಸ್ವಾರ್ಥಿಗಳ ಹೆಸರು ಕೆತ್ತಲ್ಪಟ್ಟಿದೆ. ಅದನ್ನು ಅಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೆಂದು ಕವಿ ವಾದಿಸುತ್ತಾರೆ‌.

ಇಲ್ಲಿ ಸ್ವಾರ್ಥಿಗಳ ಚಿತ್ರಪಟವಿಲ್ಲ ಎಂಬುದು ನಾವು ಕೆಟ್ಟವರನ್ನು, ಲಾಲಸಿಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ ಎಂಬುದನ್ನು ಸೂಚಿಸುತ್ತದೆ.  ಸ್ವಹಿತ ಸಾಧಕರ ನೆರಳನ್ನು ಕೂಡ ಈ ಮನದ ಬಿತ್ತಿ ಬಯಸುವುದಿಲ್ಲ ಎನ್ನುತ್ತಾರೆ. ಈ ಸಾಲುಗಳು ಸ್ವಾರ್ಥಿಗಳಿಗೆ ಚಡಿಯೇಟು ನೀಡುತ್ತವೆ. ಸಮಾಜ ನಮ್ಮನ್ನು ಸ್ಮರಿಸರಿಸಬೇಕಾದರೇ, ಸಮಾಜಮುಖಿ ಕೆಲಸಗಳನ್ನು ಮಾಡಬೇಕು‌‌. ಆಗ ಮಾತ್ರ ಜನಾನುರಾಗಿಯಾಗಿ ಉಳಿಯಲು ಸಾಧ್ಯವಿದೆ ಎಂಬ ಸಂದೇಶ ನೀಡುತ್ತದೆ.

ಜನರ ಹೃದಯದ ಗೋಡೆಯ ಮೇಲೆ ಸ್ವಾರ್ಥಿಗಳ ಭಾವಚಿತ್ರಗಳು ಇಲ್ಲದ ಕಾರಣ ಅವರ ಮನಸ್ಸು ಪರಿಶುದ್ಧವಾಗಿ, ನಿರ್ಮಲವಾಗಿ ಪ್ರಶಾಂತ ಭಾವ ಜಗಮಗಿಸುತ್ತಿದೆ. ನದಿ ಹಳ್ಳ ಬಯಲು ಬೆಟ್ಟದಂತೆ ಅಗಾಧತೆಯನ್ನು ಹೊತ್ತು ತರುತ್ತದೆ ಎನ್ನುತ್ತಾರೆ.

ಜಗದ ಒಳಿತಿಗಾಗಿ ತನ್ನನ್ನು ಅರ್ಥೈಸಿಕೊಂಡವರನ್ನು ನಿರಂತರ ದುಡಿಯುತ್ತ, ದೇಶ ಕಟ್ಟಿದವರನ್ನು, ಜನರ ಪ್ರಗತಿಗಾಗಿ ಸೇವೆಯ ತಪವಗೈದವರನ್ನು, ಗಂಧದ ಕೊರಡಿಗೆ ಹೋಲಿಸುತ್ತಾರೆ. ನಾವು ನೂರಾರು ಕಷ್ಟಗಳನ್ನು ಸಹಿಸಿಕೊಂಡು ಜಗತ್ತಿಗೆ ಒಳಿತು ಮಾಡುತ್ತಾರೆ. ಹಾಗಾಗಿ ಅವರು ಸದಾ ಸುವಾಸನೆ ಬೀರುವ ಶ್ರೀಗಂಧ ಎನ್ನುವ ಕವಿಗಳು ಅಂತಹ ಮಹನೀಯರ ಮುಂದೆ ಪ್ರಗತಿಯ ನಂದಾ ದೀಪವನ್ನು ಹಚ್ಚಬೇಕು ಎನ್ನುತ್ತಾರೆ.

ಅವರು ಎಂದಿಗೂ ಜನರ ಮನಸ್ಸಿಂದ ದೂರಸರಿಯಲಾರು. ಇವರು ಜನಮನದಲ್ಲಿ ಎಂದಿಗೂ ಹರಿದು ಹೋಗದ, ಬಣ್ಣ ಮಾಸದ ವರ್ಣರಂಜಿತ ಸಾಧನೆಗಳ ರೂವಾರಿಗಳಾಗಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಹಾಗಾಗಿ ಅಂತಹ ನಂದಾದೀಪದಂತ ಬದುಕು ನಮ್ಮದಾಗಲಿ ನೂರಾರು ಜನರ ಬಾಳು ಬೆಳಗಲಿ ಎಂಬುದು ಕವಿಯ ಆಶಯ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಇಲ್ಲಿ ಕವಿಯ ಅದ್ಭುತವಾದ ಕಾವ್ಯ ಕಸಬುದಾರಿಕೆಯನ್ನು ಕಾಣಬಹುದು. ತುಂಬ ಮಾರ್ಮಿಕವಾಗಿ ಅಮೋಘವಾದ ರೂಪಕಗಳ ಮೂಲಕ ಕವಿಯ ಮನದೊಳಗಿನ ಭಾವಗಳಿಗೆ ಜೀವ ತುಂಬಿದ್ದಾರೆ. ಈ ಕವಿತೆಯು ಕವಿಯ ಪ್ರಬುದ್ಧ ಸಾಹಿತ್ಯ ಪ್ರೀತಿಯ ಪ್ರತಿಬಿಂಬವಾಗಿದೆ. ಈ ಸಾಲುಗಳು ಸಮಾಜದೊಂದಿಗೆ ಸಂವಾದ ನಡೆಸುತ್ತವೆ. ಜನಪರ ಚಿಂತನೆಗಳ ಕನವರಿಕೆಯ ಫಲ ಇದಾಗಿದೆ.

ಇಲ್ಲಿ ಕ್ಲಿಷ್ಟತೆಯ ಸ್ವರೂಪ ನೀಡದೆ ಸರಳ ಸುಂದರ ಪದಗಳ ಮೂಲಕ ಮಹಾನ್ ವಿಚಾರವೊಂದನ್ನು ಕಾವ್ಯವಾಗಿಸಿ ಕಾವ್ಯಾಸಕ್ತರಿಗೆ ಉಣಬಡಿಸಿದ್ದಾರೆ. ಇಲ್ಲಿ ಹೆಚ್ಚು ಗಮನ ಸೆಳೆದ ಅಂಶವೆಂದರೆ ಜಗವನ್ನು ಮನೆಯಾಗಿ ನೋಡುವ ಕವಿಯ ಕಲ್ಪನೆ ಭಿನ್ನವಾದ ಆಯಾಮವನ್ನು ಸೃಷ್ಟಿಸುತ್ತಾ ತೀಕ್ಷ್ಣವಾಗಿ ಮೂಡಿಬಂದಿದೆ.

ಪಕ್ವಗೊಂಡ ಕಾವ್ಯಯಾನದ ನೆರಳಂತೆ ಕವಿತೆ ಮೂಡಿಬಂದಿದೆ. ಭಾಷಾ ಬಳಕೆಯ ಮೇಲೆ ಕವಿಯ ಲೇಖನಿಗೆ ಹಿಡಿತವಿರುವುದು ಹಾಗೂ ದಟ್ಟವಾದ ಅನುಭವ ಸಾರವನ್ನು ಕಾವ್ಯವಾಗಿಸುವುದು ಓದುಗನ ಅರಿವಿಗೆ ಬಹುಬೇಗ ಬರುತ್ತದೆ.

ಸತ್ವಯುತವಾದ ಪದ ಭಾವಗಳಲ್ಲಿ ಸಂವೇದನೆಗಳನ್ನು ಮುತ್ತಿನಂತೆ ಪೋಣಿಸಿ, ಜಗದ ನಿರ್ಮಾಣದ ಹಾರ ವನ್ನಾಗಿ ರಚಿಸಿದ್ದಾರೆ. ಇಲ್ಲಿ ಕವಿಗೆ ಜಗತ್ತಿನ ರಚನೆ ಕೇವಲ ಜೈವಿಕವಾಗಿ, ಪ್ರಾಕೃತಿಕವಾಗಿ ಮಾತ್ರ ಗೋಚರಿಸದೆ ಮಹನೀಯರ ತತ್ವಾದರ್ಶಗಳು ಸಮಾಜ ನಿರ್ಮಾಣದ ಮೇಲೆ ಬೀರಿದ ಪ್ರಭಾವ ಮಹಾನ್ ಸಾಧಕರ ಆದರ್ಶವಾದ ನಡವಳಿಕೆ ಮತ್ತು ಅವರು ಹಾಕಿಕೊಟ್ಟ ಸನ್ಮಾರ್ಗ ಕಾಯಕ ತತ್ವಗಳು ಕವಿಗೆ ಬಹುವಾಗಿ ಕಾಡಿರುವುದು ಕವಿತೆಯ ಪ್ರಸ್ತುತತೆಯಲ್ಲಿ ಅಭಿವ್ಯಕ್ತಗೊಂಡಿದೆ.

ಹೃದಯಸ್ಪರ್ಶಿಯಾಗಿರುವ ಈ ಕವನವು ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಆ ಮೂಲಕ ಜಗದ ನಿರ್ಮಾಣದಲ್ಲಿ ಜನರ ಹೊಣೆಗಾರಿಕೆಯನ್ನು ಬಿತ್ತರಿಸುತ್ತದೆ.

ಇಲ್ಲಿ ಕವಿಯು ಕೇವಲ ಭಾವನೆಗಳಿಗೆ ಮಾತ್ರ ಪ್ರಾಶಸ್ತ್ಯ ನೀಡದೇ, ಸಾಮಾಜಿಕ ಒಳಿತಿಗೆ ಪೂರಕವಾದ ಸಂದೇಶವನ್ನು ಸೇರಿಸಿ ಕಾವ್ಯ ಕಸೂತಿ ಮಾಡಿದ್ದಾರೆ. ಇದು ಯಾವುದೇ ಒಂದು ಆಯಾಮದಲ್ಲಿ ಮಾತ್ರ ರಚನೆಯಾಗದೆ, ವೈವಿಧ್ಯಮಯವಾದ ಹೊಳಹುಗಳನ್ನು ಬಿತ್ತರಿಸುತ್ತಾ ಓದುಗರನ್ನು ಕಾಡುತ್ತವೆ. ಕವಿತೆ ಓದಿದ ಸುಮಾರು ಸಮಯದ ನಂತರವೂ ಒಂದಷ್ಟು ಸಮಯ ಅದೇ ಗುಂಗಿನಲ್ಲಿ ಓದುಗರನ್ನು ಮುಳುಗಿಸುವಂತಹ ಅಯಸ್ಕಾಂತೀಯ ಸೆಳೆತವನ್ನು ಈ ಕವಿತೆ ಒಳಗೊಂಡಿದೆ.

ಸ್ವಂತಿಕೆ ಮತ್ತು ಸೃಜನಶೀಲತೆಯ ಮೂಲಕ ಭೂತವನ್ನು ವರ್ತಮಾನದೊಂದಿಗೆ ಸಮ್ಮಿಳಲನಗೊಳಿಸಿ ಭವಿಷ್ಯದ ಜಗದ ಜನರನ್ನು ಎಚ್ಚರಿಸುವಂತೆ ಮತ್ತು ಓದುಗರಿಗೆ ಅರಿವಿನ ಧಾರೆ ಎರೆದು ಮುಂದಿನ ಪೀಳಿಗೆಗೆ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಸ್ಥಾಪಿಸುವಂತೆ ಭಾವಕೋಶದ ಅಗುಳಿ ಕಳಚಿ ಧೇನಿಸಿದ್ದರಿದ್ದರಿಂದಲೇ ಈ ಕವಿತೆ  ಸರ್ವಕಾಲಕ್ಕೂ ಪ್ರಸ್ತುತತೆಯನ್ನು ಪ್ರತಿನಿಧಿಸುತ್ತದೆ. ಇಂತಹ ಅದ್ಭುತ ಕವಿತೆ ಕಟ್ಟಿದ ಕವಿಗೊಂದು ಶಹಬಾಸ್ ಹೇಳಿಬಿಡೋಣ.

ಸ್ನೇಹಿತರೆ ಕವಿತೆಯ ವಿಶ್ಲೇಷಣೆ ನಿಮಗೆಲ್ಲಾ ಇಷ್ಟವಾಗಿದೆಯೆಂದು

ಭಾವಿಸುತ್ತಾ ಮುಂದಿನ ವಾರ ಮತ್ತೊಂದು ಕವಿ ಕಾವ್ಯದೊಂದಿಗೆ

ನಿಮ್ಮ ಮುಂದೆ ಬರಲಿದ್ದೇನೆ.


ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

Leave a Reply

Back To Top