ನಂಬಿಕೆಯು ಯಶಸ್ಸಿನ ಕೀಲಿಯಾಗಿದೆ

ಕಥಾ ಸಂಗಾತಿ

ಮಾಜಾನ್ ಮಸ್ಕಿ

ನಂಬಿಕೆಯು ಯಶಸ್ಸಿನ ಕೀಲಿಯಾಗಿದೆ

2,197 Black Baby Feet Stock Photos, Pictures & Royalty-Free Images - iStock

ನಂಬಿಕೆಯು ಯಶಸ್ಸಿನ ಕೀಲಿಯಾಗಿದೆ

ನನಗೆ ಬಹಳ ಆತ್ಮೀಯಳು ಆಗಿರುವಂತಹ ಗೆಳತಿ ಸುಮಾ. ಪ್ರವೀಣ್ ಮತ್ತು ಸುಮಾ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು ಆದರೆ ಇವರಿಗೆ ಮಕ್ಕಳೇ ಆಗುವುದಿಲ್ಲ ಎಂದು ವೈದ್ಯರು ಹೇಳಿದ್ರು. ಒಬ್ಬರು ಇನ್ನೊಬ್ಬರನ್ನು ಮಗು ಎಂದೇ ಭಾವಿಸಿಕೊಂಡು, ಮಕ್ಕಳು ಆಗುವುದಿಲ್ಲ ಎನ್ನುವ ನೋವನ್ನು ಮರೆತಿದ್ದರು. ಪ್ರವೀಣ್ ನದು ಸ್ವಂತ ಉದ್ಯೋಗ, ಆರ್ಥಿಕವಾಗಿ ಚೆನ್ನಾಗಿಯೇ ಇದ್ದರು. ಜೊತೆಗೆ ಒಂದು ಟ್ರಸ್ಟ್ ಕಡೆಯಿಂದ ಅನಾಥ ಆಶ್ರಮ ನೋಡಿಕೊಂಡು ಹೋಗುತ್ತಿದ್ದರು. ಸುಮಾನೇ ಇದನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದ್ದಳು. ಜೊತೆಗೆ ಪ್ರವೀಣ್ ನ ಸಹಕಾರ ಇತ್ತು.

ಆಗ ತಾನೇ ಹುಟ್ಟಿದ ಹೆಣ್ಣು ಕೂಸನ್ನು ಅನಾಥ ಆಶ್ರಮದ ಬಾಗಿಲಿಗೆ ಯಾರೋ ಬಿಟ್ಟು ಹೋಗಿದ್ದ ಮಗುವನ್ನು ” ಶಾಂಭವಿ “ಎಂದು ಹೆಸರಿಟ್ಟು ಪ್ರೀತಿಯಿಂದ ತಮ್ಮ ಮಗಳೆಂದೆ ಆರೈಕೆ ಮಾಡಿ ಸಲುಹುತ್ತಿದ್ದರು .ಈ ಆಶ್ರಮ ನಮ್ಮ ಮನೆಯ ಪಕ್ಕದಲ್ಲಿಯೇ ಇದೆ. ನಾನು ಒಂದು ಸಂಸ್ಥೆಯಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದೇನೆ. ಅಕ್ಕನ ಮದುವೆ ಆಗಿದೆ, ಅವಳಿಗೆ ಇಬ್ಬರು ಮಕ್ಕಳು ಆದರೆ ಸಂಸಾರದಲ್ಲಿ ಸಣ್ಣ ಪುಟ್ಟ ಕಿರಿಕಿರಿ.ನನಗೂ ವರನ್ವೇಷಣೆ ನಡೆದಿದೆ, ಈಗಾಗಲೇ ಇಬ್ಬರು ಬಂದು ನೋಡಿ ಹೋಗಿರುವರು. ಅಮ್ಮ ನನಗೆ ಎರಡು ಎಳೆ ಚಿನ್ನದ ಚೈನು ನಾನು ಹಾಕಿಕೊಳ್ಳಲಿ ಎಂದು ಕೊಟ್ಟಿದ್ದಾಳೆ. ವರ ನೋಡೋಕೆ ಬಂದಾಗಲೋ ಇಲ್ಲ ಎಲ್ಲಿಯಾದರೂ ಕಾರ್ಯಕ್ರಮಕ್ಕೆ ಹೋಗುವಾಗ ಹಾಕಿಕೊಳ್ಳಲಿ ಎಂದೋ ಗೊತ್ತಿಲ್ಲ ಆದರೆ ಚಿನ್ನದ ಸರ ನನ್ನ ಬಳಿಯೇ ಇದೆ. ಎಲ್ಲಕಿಂತಲೂ ದೊಡ್ಡ ತಲೆ ನೋವು ಅಂದ್ರೆ, ವರನ ಮುಂದೆ ಶೋ ಕೇಸ್ ಗೊಂಬೆಯಂತೆ ಕೂಡುವುದು

ಬೆಳಿಗ್ಗೆಯಿಂದ ಈ ದಿನ ಫೋನ್ ತೆಗೆದು ನೋಡಿಯೇ ಇಲ್ಲ ಎಂದೆನ್ನುತ್ತಲೇ ನೋಡಿದ್ರೆ ವಾಟ್ಸಾಪ್ ನಲ್ಲಿ ನನಗೆ ಪರಿಚಯವಿಲ್ಲದ ನಂಬರ್ ನಿಂದ ಮೆಸೇಜ್ hi, how are you ಎಂದು. ಡಿ ಪಿ ಯಲ್ಲಿಯ ಫೋಟೋ ನೋಡಿದ್ರೆ ವಿದ್ಯಾವಂತ ಎನ್ನಿಸುವ ಸುಂದರ ಯುವಕ.ಈತನನ್ನು ಎಲ್ಲಿಯೂ ನೋಡಿದ ನೆನಪಿಲ್ಲ. ಯಾರೆಂದು ಮೆಸೇಜ್ ಮಾಡಲು ಅವನ ವಾಟ್ಸಾಪ್ ತೆರೆದಾಗ ಅದರಲ್ಲಿ ಉಕ್ತಿ Faith is the key to success ” ಇದನ್ನು ಓದಿ ಮನಸ್ಸಿಗೆ ಹಿತ ಮತ್ತು ಸಂತೋಷ ಅನ್ನಿಸಿತು. ಅದೇ ಹಿತದಲ್ಲಿ ಮೃದುವಾಗಿ

” ನೀವು ಯಾರು ಅಂತ ನನಗೆ ತಿಳಿಯಲಿಲ್ಲ “

” ನಿತೀಶ್,…… ಕಂಪನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್, ಮಹಾರಾಷ್ಟ್ರದಲ್ಲಿ “ಎಂಬ ಉತ್ತರ ಆ ಕಡೆಯಿಂದ.

ನನಗೆ ಆಶ್ಚರ್ಯ ಮತ್ತು ಕುತೂಹಲ

“ನನ್ನ ನಂಬರ ನಿಮಗೆ ಹೇಗೆ ಸಿಕ್ಕಿತು, ನನ್ನಿಂದ ನಿಮಗೆ ಏನು ಕೆಲಸ ಆಗಬೇಕಿದೆ “

“ನನ್ನ ಗೆಳೆಯನ ಫೋನ್ ನಲ್ಲಿ ನಿಮ್ಮ ನಂಬರ್ ಸಿಕ್ಕಿತು “

ನಮ್ಮ ಟೀಚರ್ಸ್ ಗ್ರೂಪ್ ನಿಂದ ಸಿಕ್ಕಿರಬೇಕು ಎಂದುಕೊಂಡೆ. ಇವರು ನಮ್ಮ ರಾಜ್ಯದವರಲ್ಲ, ಮತ್ತೆ ಹೇಗೆ….ಏನೆಲ್ಲಾ ಯೋಚನೆ. ಹೀಗೆ ಪ್ರತಿ ದಿನ ಆ ಕಡೆಯಿಂದ ಇಂಗ್ಲೀಷ್ ನಲ್ಲಿ ಮೆಸೇಜ್ ಬರೋದು ಅದಕ್ಕೆ ನನ್ನಿಂದ ಇಂಗ್ಲೀಷ್ ನಲ್ಲಿ ಉತ್ತರ. ಹೀಗೆ ದಿನಗಳು ನಡೆದವು ಸ್ನೇಹ ಬೆಳೆಯುತ್ತ ಬೆಳೆಯುತ್ತ ಪ್ರೀತಿಯು ಹುಟ್ಟಿತು. ಏನೋ ಒಂದು ರೀತಿಯ ಖುಷಿ, ಹೊಸತನ, ಲವಲವಿಕೆ, ಇದನ್ನು ಗಮನಿಸಿದ ಸುಮಾ ” ಏನೇ ಏನೋ ಬದಲಾವಣೆ ಕಾಣುತ್ತಿದೆ ನಿನ್ನಲ್ಲಿ, ಏನೇ ಸಮಾಚಾರ “ಎಂದು ಕೇಳಿದಾಗೊಮ್ಮೆ ಆ ಮಾತನ್ನು ಮರೇಸುತ್ತಿದ್ದೆ ವಿನಃ ನಿತೀಶ್ ಮತ್ತು ನನ್ನ ಚಾಟಿಂಗ್ ಮಾಡುವ ವಿಷಯ ಹೇಳಲಿಲ್ಲ.

“ನಿನಗೆ ನನ್ನ ಕಡೆಯಿಂದ ಒಂದು ಸರ್ಪ್ರೈಜ್ ಗಿಫ್ಟ್ ಕಳಿಸುತ್ತಿದ್ದೇನೆ “ಎಂದ

ತಮಾಷೆ ಮಾಡುತ್ತಿರಬಹುದು ಎಂದು “ಸರಿ, ಕಳಿಸು. ಅದೇನು ಗಿಫ್ಟ್ ಕಳಿಸುತ್ತಿದ್ದೀಯ ಎಂದು ನೋಡುತ್ತೇನೆ “ಎಂದೆ

ನಾಲ್ಕು ದಿನ ಕಳೆದವು, ಸುಮಾ ಮದುವೆ ಕಾರ್ಯಕ್ರಮ ಇದೆ ಎರಡು ದಿನದಲ್ಲಿ ಬರುತ್ತೇನೆ ಎಂದು ಶಾಂಭವಿಯನ್ನು ಕರೆದುಕೊಂಡು ಹೋದಳು. ನನಗೆ ಶಾಂಭವಿ ಇಲ್ಲದೆ ಬೇಸರ ಅನ್ನಿಸುತ್ತಿತ್ತು.

ನಿಮಗೆ ನಿತೀಶ್ ಅವರು ಪಾರ್ಸಲ್ ಕಳಿಸಿದ್ದಾರೆ, ಆ ಪಾರ್ಸಲ್ ನ್ನು ನಿಮ್ಮ ಅಡ್ರೆಸ್ ಗೆ ಕಲಳಿಸುತ್ತೇವೆ ಆದರೆ ಕಳಿಸುವ ಮುಂಚೆ ನಮ್ಮ ಅಕೌಂಟ್ ಗೆ 50,000/-ರೂಪಾಯಿಗಳನ್ನು ಜಮ ಮಾಡಿದ ಮೇಲೆ ಪಾರ್ಸಲ್ ನಿಮಗೆ ತಲುಪಿಸುತ್ತೇವೆ ಇಲ್ಲ ಎಂದರೆ ಸಂಜೆಯವರೆಗೆ ನೋಡಿ ವಾಪಸ್ ಕಳಿಸಿ ಬಿಡುತ್ತೇವೆ ” ಫೋನ್ ನಲ್ಲಿಯ ಈ ಮಾತು ಕೇಳಿ ನನಗೆ ದಿಗ್ಬ್ರಮೆ ಆಯಿತು, ಏನು ಮಾಡಬೇಕು ಎಂದು ತಿಳಿಯದೆ ನಿತೀಶ್ ಗೆ ಮೆಸೇಜ್ ಮಾಡಿ ಈ ವಿಷಯ ತಿಳುಸಿದೆ.

” ಅಷ್ಟು ಹಣ ಕಟ್ಟಿ ಪಾರ್ಸಲ್ ಬಿಡಿಸಿಕೋ “ಎಂದ

“ನನ್ನನಲ್ಲಿ ಅಷ್ಟೊಂದು ದುಡ್ಡು ಇಲ್ಲ “

” baby…ಹೇಗಾದರೂ ಮಾಡಿ ಮೊದಲು ಹಣ ಕೊಡು , ನಾನು ಕಳಿಸಿದ ಉಡುಗೊರೆ ಎಷ್ಟೊಂದು ದುಬಾರಿಯದು ಇದೆ ಎಂದು ಯೋಚಿಸು ಮತ್ತು ನಿನ್ನ ಮೇಲೆ ನನಗೆ ಎಷ್ಟು ಪ್ರೀತಿ ಇದೆ ಎಂದು ಅರ್ಥ ಮಾಡಿಕೋ “

“ಆದರೆ ನನ್ನ ಬಳಿ ದುಡ್ಡು ಇಲ್ಲ, ಇಷ್ಟೊಂದು ದುಡ್ಡು ಅವಸರಕ್ಕೆ ಯಾರು ಕೊಡುತ್ತಾರೆ “

“ನಿನ್ನ ಬಳಿ ಬಂಗಾರ ಇದ್ರೆ ಅದನ್ನು ಅಡ ಇಟ್ಟು ಮೊದಲು ನಾನು ನಿನಗಾಗಿ ಕಳಿಸಿದ ಉಡುಗೊರೆ ಪಡೆದುಕೊ. ಆ ಉಡುಗೊರೆ ಎಂತಹದಿದೆ ಎಂದು ನೋಡು , ಅದರಲ್ಲಿ , ದುಡ್ಡು ಇಟ್ಟಿದ್ದೀನಿ, ಆ ದುಡ್ಡಿನಿಂದ ನಿನ್ನ ಬಂಗಾರವನ್ನು ಬಿಡಿಸಿಕೋ.ನಾನು ನಿನ್ನ ಮೇಲೆ ಇಟ್ಟಿರುವ ಪ್ರೀತಿ ಎಂತಹದು ಎಂದು ನಿನಗೆ ತಿಳಿತ್ತದೆ “

ಮೆಸೇಜ್ ಓದಿ ಕಾಲುಗಳು ನಡುಗಲು ಪ್ರಾರಂಭಿಸಿದವು.

“ಬೇಡ, ನನಗೆ ನಿನ್ನ ಯಾವ ಉಡುಗೊರೆಯೂ ಬೇಡ ” ಎಂದೆ

“ನಾನು ಕಳಿಸಿದ ಉಡುಗೊರೆ ನೀನು ತೆಗೆದುಕೊಳ್ಳಲಿಲ್ಲ ಎಂದರೆ ನಮ್ಮಿಬ್ಬರ ಗೆಳೆತನ ಇಲ್ಲಿಗೆ ಮುಗಿಯುತ್ತೆ, ಮತ್ತೆ ಯಾವತ್ತಿಗೂ ಮಾತನಾಡಬೇಡ “

ಇತ್ತ ಉಡುಗೊರೆಯು ಬೇಡ, ಅತ್ತ ಗೆಳತನ ಕಳೆದುಕೊಳ್ಳುವ ಮನಸ್ಸು ಇಲ್ಲ. ಕೈಯಲ್ಲಿ ದುಡ್ಡು ಇಲ್ಲ ಏನು ಮಾಡಬೇಕು, ಸುಮಾ ಬೇರೆ ಊರಿಗೆ ಹೋಗಿದ್ದಾಳೆ, ಅವಳ ಫೋನ್ ನಾಟ್ ರೀಚಿಯಬಲ್ ಏನು ಮಾಡೋದು. ನಿತೀಶ್ ನ ಮಾತುಗಳ ಮೇಲೆ ಧೈರ್ಯ ಮತ್ತು ನಂಬಿಕೆಯಿಂದ ನನ್ನಲ್ಲಿ ಇದ್ದ ಚೈನ್ ಅಡ ಇಟ್ಟು, ಬಂದ ಹಣವನ್ನು ಪಾರ್ಸಲ್ ಕಲಳಿಸುತ್ತೇನೆ ಎಂದ ಆ ಮೇಡಂ ಹೇಳಿದ ಅಕೌಂಟ್ ನಂಬರ್ ಜಮಾ ಮಾಡಿದೆ. ಸ್ವಲ್ಪ ಹೊತ್ತು ಬಿಟ್ಟು ಮೇಡಂ ಗೆ ಫೋನ್ ಮಾಡಿ ಹಣ ಜಮಾ ಆಗಿರುವ ಬಗ್ಗೆ ಖಾತ್ರಿ ಮಾಡಿಕೊಂಡೆ, ಸಾಯಂಕಾಲ ಎನ್ನುವುದರಲ್ಲಿ ಪಾರ್ಸಲ್ ತಲುಪುತ್ತೆ ಎಂದು ಆಶ್ವಾಸನೆ ನೀಡಿದಳು ಆ ಮೇಡಂ.

“ಹಣ ಕಟ್ಟಿದ್ದೀನಿ, ಸಾಯಂಕಾಲ ನೀನು ಕಳಿಸಿದ ಗಿಫ್ಟ್ ಬರುತ್ತದೆ ಎಂದರು “ಎಂದು ನಿತೀಶ್ ಗೆ ಮೆಸೇಜ್ ಕಳಿಸಿದೆ

“That’s good “ನಿತೀಶ್ ಹೇಳಿದ.

ಒಂದು ನಿರಾಳತೆ ಮತ್ತು ಉಡುಗೊರೆ ಏನು ಕಳಿಸಿರಬಹುದು ಎನ್ನುವ ಕುತೂಹಲದಲ್ಲಿ ದಾರಿ ಕಾಯುತ್ತ ಕುಳಿತೆ. ಸಾಯಂಕಾಲ ಮುಗಿದು ರಾತ್ರಿ ಕಳೆದರೂ ಉಡುಗೊರೆ ಬರಲಿಲ್ಲ. ಆ ಮೇಡಂ ಫೋನ್ ಸ್ವಿಚ್ ಆಫ್ ಆಗಿತ್ತು, ಇತ್ತ ನಿತೀಶ್ ನಿಂದ ಮೆಸೇಜ್ ಗೆ ಉತ್ತರವು ಬರಲಿಲ್ಲ. ವಿಪರೀತ ತಲೆ ನೋವು, ರಾತ್ರಿಯಲ್ಲ ನಿದ್ದೆ ಇಲ್ಲ, ನಿತೀಶ್ ನಿಂದ ಇಗೋ ಆಗೋ ಮೆಸೇಜ್ ಬರುತ್ತೇನೋ ಎಂದು ಫೋನ್ ಮೇಲೆಯೇ ದೃಷ್ಟಿ ಆದರೆ ಹೀಗೆ ಮೂರು ದಿನಗಳು ಕಳೆದವು ಉಡುಗೊರೆ, ಮೆಸೇಜ್ ಯಾವುದು ಬರಲಿಲ್ಲ. ಈ ಚಿಂತೆಯಲ್ಲಿ ವಿಪರೀತ ಜ್ವರ ಬಂತು.

ಕಾವೇರಿ ಜ್ವರದಲ್ಲಿ ಮಲಗಿರುವುದನ್ನು ನೋಡಿ”ಏನೇ ನಾಲ್ಕು ದಿನದಲ್ಲಿ ಎಷ್ಟೊಂದು ಬಳಲಿದ್ದೀಯಾ “ಸುಮಾಳ ದ್ವನಿ ಕೇಳುತ್ತಿದಂತೆಯೇ ಹಾಸಿಗೆಯಿಂದ ಎದ್ದು ಆಕೆಯನ್ನು ಗಟ್ಟಿಯಾಗಿ ತಪ್ಪಿಕೊಂಡು ಅಳಲಾರಂಭಿಸಿದೆ. ಸುಮಾ ಕಂಗಾಲಾಗಿ ಗಾಬರಿಯಿಂದ

“ಯಾಕೆ ಏನಾಯಿತು “ಎಂದು ನನ್ನ ತಲೆ ಬೆನ್ನು ಸವರುತ್ತಲೇ ಕೇಳಿದಳು.”ಸಮಾಧಾನ ಮಾಡಿಕೋ, ಹೇಳು ಏನಾಯಿತು ಅಂತ “ನಡೆದ ವಿಷಯವನ್ನೆಲ್ಲ ಹೇಳಿ ನಿತೀಶ್ ನ ಫೋಟೋ ತೋರಿಸಿದೆ .ಸುಮಾ ನನ್ನ ಮೊಬೈಲ್ ತನ್ನ ಕೈಗೆ ತೆಗೆದುಕೊಂಡು ದಿಟ್ಟಿಸಿ ನಿತೀಶ್ ನನ್ನು ನೋಡಿದಳು.

‘ವಿದ್ಯಾವಂತ, ಉನ್ನತ ಸ್ಥಾನದಲ್ಲಿ ಇರುವಂತೆ ಕಾಣುತ್ತಾನೆ ಮತ್ತು ನೋಡಲು ಸುಂದರವಾಗಿಯೂ ಇದ್ದಾನೆ. ಇವನನ್ನು ನೀಡಿದ್ರೆ ಇಂತಹ ಕ್ಷುಲ್ಲಕ ಕೆಲಸ ಮಾಡುವ ವ್ಯಕ್ತಿ ಅಂತ ಅನ್ನಿಸುವುದಿಲ್ಲ. ಆದರೆ ಯಾಕೆ ಹೀಗೆ ಆಯಿತು. ನಿತೀಶ್ ನ ಕೈಕೆಳಗೆ ಕೆಲಸ ಮಾಡುವವನು ಏನಾದರೂ ಇಂತಹ ಕೆಲಸ ಮಾಡಿರಬಹುದಾ. ಅಲ್ಲಿ ಯಜಮಾನನ ಬಳಿ ನಂಬಿಕೆ ಗಳಿಸಿಕೊಂಡು, ವಿಧೇಯಕ ಎಂಬಂತೆ ನಟಿಸಿ, ಅಲ್ಲಿ ಯಜಮಾನನಿಗೂ ಮೋಸ ಮತ್ತು ಕಾವೇರಿಯಂತಹ ಹುಡುಗಿಯರಿಗೂ ಮೋಸ ಮಾಡುತ್ತಿರುವನೇ….. ಏನೂ ಅರ್ಥನೇ ಆಗುತ್ತಿಲ್ಲ. ಸಿಟ್ಟಿಗೆದ್ದು ಕಾವೇರಿಗೆ ಬಯ್ಯುವ ಹಾಗೆಯೂ ಇಲ್ಲ. ಕಾವೇರಿ ಒಳ್ಳೆಯ ಸುಸಂಸ್ಕೃತೆ, ಸ್ನೇಹಮಯಿ, ಸಂಕೋಚ ಮತ್ತು ಭಯದ ಸ್ವಭಾವದವಳು. ತಿಳಿದೋ ತಿಳಿಯದೆಯೋ ತಪ್ಪಾಗಿದೆ, ಮೊದಲೇ ಭಯಗೊಂಡಿದ್ದಾಳೆ ಈಗ ಈಕೆಗೆ ಧೈರ್ಯ ಮತ್ತು ಸಮಾಧಾನ ಬೇಕು ‘ಎಂದುಕೊಳ್ಳುತ್ತಾ ಸುಮಾ ಒಂದು ದೀರ್ಘವಾದ ಉಸಿರು ಬಿಟ್ಟು”ಹೋಗಲಿ ಬಿಡೆ, ಏನೂ ಆಗಬಾರದಂತಹದು ಏನಾಗಿದೆ ದುಡ್ಡು ಕಳೆದುಕೊಂಡಿದ್ದಿಯ, ದೊಡ್ಡ ಹಣನೇ ಏನೂ ಮಾಡೊದು ಹೋಗಿದೆ, ಮುಂದೆ ಹೇಗಾದ್ರು ಜೋಡಿಸುವಂತೆ ಸಧ್ಯಕ್ಕೆ ಹೇಗಾದ್ರು ಮಾಡಿ ಹಣ ಕೊಡುತ್ತೇನೆ ಮೊದಲು ಆ ಚೈನ್ ಬಿಡಿಕೊಂಡು ಅಮ್ಮನ ಕೈಯ್ಯಲ್ಲಿ ಕೊಡು.”

“……………”ನಾನು ಮೌನವಾಗಿಯೇ ಇದ್ದೆ

“ಮರೆತು ಬಿಡು ಒಂದು ಕೆಟ್ಟ ಕನಸು ಎಂದು ತಿಳಿದು, ಮನಸ್ಸಿನ ಭಾವನೆಗಳ ಜೊತೆ ಹೀಗೆ ಆಟ ಆಡುವವರು ಇರುತ್ತಾರ….”

“ಇನ್ನು ಪ್ರಪಂಚದಲ್ಲಿ ಎಂತೆಂತಹ ನೀಚರಿದ್ದಾರೆ, ನಾವು ಎಷ್ಟು ಜಾಗರುಕರು ಆಗಿದ್ರು ಮೋಸ ಹೋಗುತ್ತೇವೆ. ಹೋಗಲಿ ಬಿಡು ಸಂಪತ್ತಿಗೆ ಸವಾಲ್ ಫಿಲ್ಮ್ ನಲ್ಲಿ ಮಂಜುಳಾ ಬಯುತ್ತಾಳಲ್ಲ ಅದಕ್ಕಿಂತ ಕೆಟ್ಟದಾಗಿ ಬೈದು ಸಮಾಧಾನ ಮಾಡಿಕೋ. ಒಳ್ಳೆಯ ಜನ ಯಾರ ಮನಸ್ಸಿನ ಭಾವನೆ ಮತ್ತು ಜೀವನದಲ್ಲಿ ಆಟ ಆಡುವುದಿಲ್ಲ, ಮೋಸನೂ ಮಾಡೋಲ್ಲ, ಅಯೋಗ್ಯರೆ ಇಂತಹ ಕೆಲಸ ಮಾಡೋದು. ಇಂತಹ ನೀಚರ ಸಲುವಾಗಿ ಯಾಕೆ ನೊಂದು ಕಣ್ಣೀರು ಹಾಕುವುದು….”ಸುಮಾಳ ಮಾತುಗಳನ್ನು ಕೇಳುತ್ತಲೇ ಶಾಂಭವಿಯ ಕಡೆಗೆ ನನ್ನ ದೃಷ್ಟಿ ಹೋಯಿತು

“ಭಾವನೆಗಳಿಗೆ ಬೆಲೆಯೇ ಇಲ್ಲ….”ಯೋಚಿಸುತ್ತಲೇ ನನಗೆ ತಿಳಿಯದಂತೆ ಮಾತುಗಳು ಹೊರ ಬಂದವು.

“ಹೌದು ಹೀಗೆ ಮುಂದೆವರೆದರೆ ರೋಬೊಗಳನ್ನು ತಯಾರು ಮಾಡುವುದು ಬೇಡ, ನಾವೇ ರೋಬೊಗಳಂತೆ ಆಗುತ್ತೇವೆ ಭಾವನೆಗಳೇ ಇಲ್ಲದ ಯಂತ್ರ ಮಾನವರು “5-10ನಿಮಿಷ ಮೌನ.ಸುಮಾ ನನ್ನನ್ನು ನೋಡಿ”ಏನು ಯೋಚಿಸುತ್ತಿದ್ದೀಯಾ “ನನ್ನ ಮುಖವನ್ನು ಒಮ್ಮೆ ಪೂರ್ಣವಾಗಿ ಉಚ್ಚಿಕೊಂಡು ಒಂದು ಸಲ ದೀರ್ಘವಾಗಿ ಉಸಿರು ತೆಗೆದುಕೊಂಡೆ”ಶಾಂಭವಿಯನ್ನು ನನಗೆ ಶಾಶ್ವತವಾಗಿ ಕೊಡು “

ನನ್ನ ಮಾತಿಗೆ ಪ್ರಶ್ನಾರ್ಥಕವಾಗಿ, ಒಂದಕ್ಕೊಂದು ಸಂಬಂಧವೇ ಇಲ್ಲದ ಮಾತಿದು ಎನ್ನುವ ರೀತಿ ನನ್ನ ಕಡೆಗೆ ನೋಡಿದಳು.”ಹೌದು ಸುಮಾ ನನಗೆ ಶಾಂಭವಿ ಬೇಕು, ಅವಳನ್ನು ನನ್ನ ಮಗಳಾಗಿ ಸಲಹುತ್ತೇನೆ.

“ಏನು ಹೇಳ್ತಾ ಇದ್ದೀಯ, ನೀನು ಈಕೆಯನ್ನು ಸಾಕಿಕೊಂಡರೆ ನಿನಗೆ ಯಾರು ಮದುವೆ ಆಗುತ್ತಾರೆ ಹೇಳು. ಅವನ್ಯಾವನೋ ಬೇವರ್ಸಿ ಮಾಡಿದ ಮೋಸಕ್ಕೆ ನಿನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿಯಾ? ಎಲ್ಲರೂ ಮೋಸ ಮಾಡುತ್ತಾರೆ ಅಂತ ತಿಳಿದುಕೊಳ್ಳಬೇಡ “

“ಎಲ್ಲರೂ ಇದ್ದರೂ ನಾನು ಈ ನೋವು ಅನುಭವಿಸಿದೆ, ಶಾಂಭವಿ ಹುಟ್ಟಿನಿಂದಲೇ ಅನ್ಯಾಯಕ್ಕೆ ಒಳಗಾಗಿದ್ದಾಳೆ ಇವಳದೇನು ತಪ್ಪು ಇದೆ ಹೇಳು? ಇನ್ನು…..ಮುಂದೆ ಅವಳ ಪರಿಸ್ಥಿತಿ ಹೇಗಿದೆಯೋ ಏನೋ. ಉತ್ತಮ ದಂಪತಿಗಳು ಬಂದು ಶಾಂಭವಿಯನ್ನು ದತ್ತು ತೆಗೆದುಕೊಳ್ಳುತ್ತಿವಿ ಅಂದ್ರೆ ನೀನು ಕೊಡುತ್ತೀಯಾ ತಾನೆ. ಹಾಗೆ ಎಂದು ನನಗೆ ಕೊಡು, ನಮ್ಮಿಬ್ಬರ ಮದ್ಯೆಯೂ ಇರುತ್ತಾಳೆ. ಇನ್ನು ನನ್ನ ಮದುವೆ ವಿಷಯ ನಾನು ಇರುವ ನಿಜ ಸ್ಥಿತಿಯನ್ನು ತಿಳಿದುಕೊಂಡು ನನ್ನ ಮೇಲೆ ನಂಬಿಕೆ, ಪ್ರೀತಿ ಇದ್ರೆ ಮಡುವೆ ಆಗಲಿ ಇಲ್ಲ ಅಂದ್ರೆ ನನ್ನ ಹಣೆಬರಹದಲ್ಲಿ ಹೇಗೆ ಇರುತ್ತೆ ಹಾಗೆ ಆಗಲಿ “

“…………..”

“ನನಗೆ ಎಮೋಷನಲ್ ಬ್ಲ್ಯಾಕ್ ಮೆಲ್ ಮಾಡಿದ ಹಣದಿಂದ ಮಜಾ ಮಾಡಿರಬಹುದು, ನಾನು ನಂಬಿ ಯಾಮಾರಿದ್ದಕ್ಕೆ ತನ್ನ ಜೊತೆಗಾರರ ಜೊತೆ ಕೂಡಿ ನನ್ನ ಬಗ್ಗೆ ಅಪಹಾಸ್ಯ ಮಾಡಿ ನಗುತ್ತೀರಬಹುದು. ನಗಲಿ, ಅವನಿಂದ ನಾನು ಜೀವನದಲ್ಲಿ ಕಲಿತುಕೊಂಡ ಪಾಠದಿಂದ ಶಾಂಭವಿಯ ಜೀವನವನ್ನು ರೂಪಿಸುವುದರಲ್ಲಿ ತಪ್ಪೇನಿದೆ?”

“ನಿನ್ನ ಮಾತು ಸರಿಯಾಗಿಯೇ ಇದೆ, ಇದೇ ನಿನ್ನ ಕೊನೆಯ ನಿರ್ಧಾರವೇ ಹೇಳು ಕಾವೇರಿ “

“ಹುಂ “

“ಅಂದರೆ ಈಗ ನೀನು ಯಾರನ್ನು ನಂಬುವುದಿಲ್ಲ “

“………….”

“ಪ್ರೀತಿಯನ್ನು ದ್ವೇಷಿಸುವಳಾದೆ ನೀ ” ಸುಮಾ ನಿರಾಶೆಯಿಂದ ನಿಟ್ಟಿಸಿರು ಬಿಟ್ಟಳು

“ನಾನು ಪ್ರೀತಿಯನ್ನು ದ್ವೇಷಿಸುತ್ತಿಲ್ಲ ಸುಮಾ, ಹೃದಯದಲ್ಲಿ ಪ್ರೀತಿಯ ಹೂ ಅರಳಿಸಿ,ಹೋಗುವಾಗ ಅದರ ಮೇಲೆ ಆಶೀಡ್ ಸುರಿದು ಹೋಗುತ್ತಾರೆ. ಸುಟ್ಟ ಜಾಗದಲ್ಲಿ ಹೂವು ಅರುಳುತ್ತದೆ ಏನು?”

ನನಗೆ ಮತ್ತೆ ನೆನಪಾಯಿತು

FAITH IS THE KEY TO SUCCESS


One thought on “ನಂಬಿಕೆಯು ಯಶಸ್ಸಿನ ಕೀಲಿಯಾಗಿದೆ

  1. ಪ್ರಸ್ತುತಕ್ಕೆ ಬೇಕಾದ ನೀತಿಪಾಠ, ಕಥೆ ತುಂಬಾ ಚೆನ್ನಾಗಿದೆ ಮೇಡಂ

Leave a Reply

Back To Top