ಅಂಕಣ ಸಂಗಾತಿ

ಗಜಲ್ ಲೋಕ

ಚೇತನ್ಅವರಚೈತನ್ಯತುಂಬಿದ

ಗಜಲ್ ಗಳು

ಚೇತನ್ ಅವರ ಚೈತನ್ಯ ತುಂಬಿದ ಗಜಲ್ ಗಳು

      ಮತ್ತೊಮ್ಮೆ ತಮ್ಮ ನಿರೀಕ್ಷೆಯಂತೆ ಇಂದು ಮತ್ತೊಬ್ಬ ಪ್ರತಿಭಾನ್ವಿತ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬಂದಿದ್ದೇನೆ. ಪ್ರತಿವಾರದಂತೆ ಈ ವಾರವೂ ಸಹ ತಾವು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವಿರಿ ಎಂದು ನಂಬಿ, ಆ ಗುರುತುಗಳನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುವೆ..

ಮುಗುಳು ನಗೆಯ ಶಿಕ್ಷೆ ಎಷ್ಟು ಕಠಿಣವಾಗಿದೆ

ಅರಳಿದ ಹೂಗಳು ಒಣಗಿ ಹೋಗಬೇಕಾಯಿತು

ಜೋಶ್ ಮಲಿಹಾಬಾದಿ

       ಆಧುನಿಕತೆಯ ಭರಾಟೆ ನಮ್ಮ ಸಮಾಜವನ್ನು ಸಾಕ್ಷರತೆಯಿಂದ ಅಲಂಕರಿಸುತ್ತಿದೆ, ಭಾಗಶಃ ಎಲ್ಲರೂ ವಿದ್ಯಾವಂತರಾಗುತಿದ್ದೇವೆ ; ಆದರೆ ಮನುಕುಲವನ್ನು ಬೆಸೆಯುವ ಕೆಲಸ ಆಗುತ್ತಿಲ್ಲ! ಈ ಕಾರ್ಯ ನಿರ್ಮಲ ವಾಙ್ಮಯ ಲೋಕದಿಂದ ಮಾತ್ರ ಸಾಧ್ಯ. ಅಂದರೆ ಓದು-ಬರಹ ಬಲ್ಲವರೆಲ್ಲರೂ ಸಾರಸ್ವತ ಲೋಕದ ಆಸಕ್ತರು ಆಗಲಾರರು ಎಂಬುದು ಸಾಹಿತ್ಯದ ಅನನ್ಯತೆಯನ್ನು ಸಾರುತ್ತದೆ. ಈ ಸಾಹಿತ್ಯ ಎನ್ನುವುದು ಜೀವಸಂಕುಲದ ನೆಮ್ಮದಿಗೆ, ಸಾಮಾಜಿಕ ವ್ಯವಸ್ಥೆಯ ಶಾಂತಿಗೆ ಕಾರಣವಾಗುತ್ತದೆ, ಕಾರಣವಾಗಬೇಕು! ಈ ಹಿನ್ನೆಲೆಯಲ್ಲಿ ಭಾವ ಸಂಗಮವು ಬರಹಗಾರರಿಗೆ ಮೊದಲು ಸಮಾಜದ ಸ್ಥಿತಿಗತಿ, ಮುಖವಾಡದ ಹಿಂದಿರುವ ಕಲುಷಿತ ಮನಸುಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತದೆ. ಮೆದುವಾದ ಭಾಷೆ ಕಲ್ಲು ಹೃದಯಗಳನ್ನು ಕರಗಿಸಬಲ್ಲದು ಎನ್ನುವುದಕ್ಕೆ ಪ್ರಪಂಚದ ಎಲ್ಲ ಭಾಷೆಗಳ ಸಾಹಿತ್ಯದ ಇತಿಹಾಸವೆ ಸಾಕ್ಷಿ. ಪ್ರತಿ ಭಾಷೆಯ ಕಾವ್ಯ ಕಾಲಕಾಲಕ್ಕೆ ತನ್ನ ಜರೂರಿಗಳಿಗೆ ಅನುಗುಣವಾಗಿ ಹೊರಗಿನ ಪ್ರೇರಣೆಗಳಿಗೆ ಒಳಗಾಗುತ್ತ ಬಂದಿದೆ. ‘ಗಜಲ್’ ತನ್ನ ಮಾತೃ ಭಾಷೆಯಾದ ಪರ್ಷಿಯಾದಲ್ಲಿ ಪ್ರಬುಧ್ಧತೆಯನ್ನು ಪಡೆದು ನಂತರ ಇತರ ಭಾಷೆಗಳಲ್ಲೂ ತನ್ನ ಅಮಲನ್ನು ಪಸರಿಸಿದೆ. ಹಲವು ಮೂಲಗಳಿಂದ ಸತುವನ್ನು ಹೀರಿ ಭಾರತದ ನೆಲದಲ್ಲಿ ಮೈದಾಳಿದ ಉರ್ದು ಭಾಷೆಯಲ್ಲೂ ಗಜಲ್ ಹೊಸ ಅವತಾರಗಳನ್ನು ತಾಳಿದೆ. ಇದು ಉಪಮೆ-ಸಂಕೇತಗಳ ಹಿನ್ನೆಲೆಯಲ್ಲಿ ಉಸಿರಾಡುತ್ತಿದ್ದು ಎಲ್ಲ ಭಾಷೆಗಳಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ, ಮೂಡಿಸುತ್ತಿದೆ. ಇದಕ್ಕೆ ನಮ್ಮ ಕನ್ನಡ ಭಾಷೆಯೂ ಹೊರತಾಗಿಲ್ಲ. ಕರುನಾಡಿನ ಮಣ್ಣಿನಲ್ಲಿ ಅಸಂಖ್ಯಾತ ಸಾಹಿತ್ಯ ಪ್ರೇಮಿಗಳು ಗಜಲ್ ಲೋಕದಲ್ಲಿ ಅಶಅರ್ ಮುಖಾಂತರ ವಿಹರಿಸುತಿದ್ದಾರೆ. ಅಂತಹ ವಿಹಾರಿಗಳಲ್ಲಿ ಶ್ರೀ ಚೇತನ್ ನಾಗರಾಳ ಅವರೂ ಸಹ ಒಬ್ಬರು.

         ‘ಚೇತನ್ ನಾಗರಾಳ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಚೆನ್ನಮಲ್ಲಪ್ಪ ಈ. ನಾಗರಾಳ ರವರು ೧೯೯೪ ರ ಮೇ ೦೫ರಂದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ ಜನಿಸಿದರು. ತಮ್ಮ ಊರಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು ನಂತರ ವಿಜಯಪುರದಲ್ಲಿ ಶಿಕ್ಷಣ ಮುಂದುವರಿಸಿ ಬಿ.ಕಾಂ. ಪದವೀಧರರಾಗಿದ್ದಾರೆ. ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿರುವ ಇವರು ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದು, ಕವಿತೆ, ಶಾಯರಿ, ಗಜಲ್ ಹಾಗೂ ಅನುವಾದ ರಂಗದಲ್ಲೂ ಕೃಷಿಯನ್ನು ಮಾಡಿದ್ದಾರೆ. “ಹೀಗೊಂದು ಯುದ್ಧ ಬುದ್ಧನೊಂದಿಗೆ” (೨೦೧೮) ಎಂಬುದು ಇವರ ಪ್ರಥಮ ಕವನ ಸಂಕಲನವಾಗಿದ್ದರೆ, “ಖಾಲಿ ಕೋಣೆಯ ಹಾಡು” (೨೦೧೮) ಎಂಬುದು ಗಜಲ್ ಸಂಕಲನವಾಗಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಇವರಿಗೆ ರಾಜ್ಯ ಮಟ್ಟದ ಬೆಳಕು ಪ್ರಶಸ್ತಿ, ಯುವಚೇತನ ಪ್ರಶಸ್ತಿ, ಯುವ ಸಾಹಿತ್ಯ ಚೇತನ ಪ್ರಶಸ್ತಿ, ಸಗರನಾಡು ಯುವ ಸಿರಿ ಪ್ರಶಸ್ತಿ, ಬೀಳಗಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ.. ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿ ಸತ್ಕರಿಸಿವೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ವಾಚನ ಮಾಡಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ.

      ಭಾವನೆಗಳನ್ನು ಬಂಧಿಸಿಡಲು ಒಳ್ಳೆಯ ಸಂಕೋಲೆಯೆಂದರೆ ಗಜಲ್ ನ ಅಶಅರ್. ರಾಗಂ ಅವರು ಹೇಳುವಂತೆ “ಗಜಲ್ ಕಮ್ಮಾರನ ಕೆಲಸ ಅಲ್ಲ, ಅದು ಕುಂಬಾರನಂತೆ ಹದವರಿಯುವ, ಕಾವ್ಯದ ಕುಡಿ ಅರಿಯುವ ಧ್ಯಾನದ ಕೆಲಸ” ಎನ್ನುವುದು ಅಕ್ಷರಶಃ ಸತ್ಯ. ಇದಕ್ಕೆ ತಪಸ್ಸು ಬೇಕು. ಅಂದಾಗ ಮಾತ್ರ ಇದು ಎದುರಿಗಿದ್ದವರ ಹೃದಯದ ಕದವನ್ನು ತಟ್ಟುತ್ತದೆ. ಇದು ಸಾಧ್ಯವಾಗಬೇಕಾದರೆ ಗಜಲ್ ಮಾತಾಗಿ ಜನಿಸಿ ಮೌನಕ್ಕೆ ಶರಣಾಗಬೇಕು. ಈ ನೆಲೆಯಲ್ಲಿ ತನ್ನದೇಯಾದ ಲೋಕವೊಂದನ್ನು ಸೃಷ್ಟಿಸಿರುವ ‘ಗಜಲ್’ ಎನ್ನುವ ಜಗನ್ಮೋಹಿನಿ ಪರಪಂಚದಲ್ಲಿಯೆ ಅತಿ ಹೆಚ್ಚು ಕೇಳುಗರ ಪರಂಪರೆಯನ್ನು ಹೊಂದಿದೆ.

ಚೇತನ್ ಅವರ ಗಜಲ್ ಗಳಲ್ಲಿ ರೂಪಕ, ಪ್ರತಿಮೆ, ನುಡಿಗಟ್ಟುಗಳ ಮೇಲಾ ಇದೆ. ಇಲ್ಲಿಯ ಶಬ್ಧಗಳು ಓದುಗರ ಮೌನವನ್ನು ಸೀಳಿ ಅವರೊಂದಿಗೆ ಅನುಸಂಧಾನಕ್ಕಿಳಿಯುತ್ತವೆ. ಮನಸ್ಸಿಗೆ ಮುದ ನೀಡುವ ಪ್ರೇಮಿ, ಕಂಬನಿ ಒರೆಸುವ ದೋಸ್ತ, ಭರವಸೆಯ ಚಾಮರ ಬೀಸುವ ಅಪ್ಪಾ, ಮಮತೆಯ ಮಡಿಲು ಚಾಚುವ ಅವ್ವ, ಮುಗ್ಧತೆಯ ಕಂದಮ್ಮ, ಬಯಲಲ್ಲಿ ಬಯಲಾಗಿರುವ ಫಕೀರ, ಹಸಿವು ನೀಗಿಸುವ ರೈತ, ಬದುಕಲು ಕಲಿಸುವ ಸೂಫಿ… ಎಲ್ಲರು ಓದುಗರೊಂದಿಗೆ ರುಬರು ಆಗುತ್ತಾರೆ. ಭಾವನಾ ಜೀವಿಯಾದ ಚೇತನ್ ಅವರು ನಮ್ಮ ಸಾಮಾಜಿಕ ವ್ಯವಸ್ಥೆಯ ಪಿಡುಗಾದ ಹಸಿ ಮಾಂಸದ ದಂಧೆಯಲ್ಲಿ ಬಲಿಪಶುವಾಗುತ್ತಿರುವ ಮಹಿಳಾ ಸಂಕುಲದ ಕುರಿತು ಅತೀವ ವ್ಯಾಕುಲತೆಯನ್ನು ವ್ಯಕ್ತಪಡಿಸಿದ್ದಾರೆ. ಗಂಡಿನ ಕಾಮಪಿಪಾಸೆಗೆ ಹೆಣ್ಣಿನ ಸಂಕುಲ ನಲುಗಿ ಹೋಗುತ್ತಿದೆ. ಸಾಮಾನ್ಯವಾಗಿ ಯಾವ ಹೆಣ್ಣೂ ಸಹ ಮೈ ಮಾರಿಕೊಳ್ಳುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಭೋಗ ಸಂಸ್ಕೃತಿಯ ಮಾಯಾ ಜಾಲಕ್ಕೆ ಸಿಕ್ಕೊ, ದೌರ್ಜನ್ಯಕ್ಕೆ ಬಲಿಯಾಗಿಯೊ ಅಥವಾ ಹಸಿದ ಒಡಲನ್ನು ಮಸಣದಿಂದ ಮನೆಗೆ ಕರೆತರಲೊ ಅಸಹಾಯಕಳಾಗಿ ಕೆಂಪು ದೀಪದಡಿಯಲ್ಲಿ ನರಳಿದ್ದೆ ಹೆಚ್ಚು. ಆದರೆ ಇಂದು ಅಪವಾದವೆಂಬಂತೆ ಕೆಲ ಮಾನಿನಿಯರು ಆ ವೃತ್ತಿಯನ್ನು ಆಲಂಗಿಸುತ್ತಿವುದು ನಾಚಿಕೆಗೇಡಿನ ಸಂಗತಿ! ವೇಶ್ಯಾವಾಟಿಕೆಯ ಕರಾಳತೆಯನ್ನು ಈ ಕೆಳಗಿನ ಷೇರ್ ಕಣ್ಣಿಗೆ ರಾಚುವಂತೆ ಪ್ರತಿಧ್ವನಿಸುತ್ತಿದೆ.

ನಿನ್ನನ್ನೇ ತಿಂದು ತೇಗಿ ಬಳಸಿದ ಬಕಾಸುರರೆಲ್ಲ ಮಹಾಂತರಾದರು

ಸೆರಗ ಹಾಸಿ ತುತ್ತುಣಿಸಿ ಜಾರಿಣಿಯಾದವಳು ನೀನು ಸಾಕಿ

ಹಸಿ ಮಾಂಸ ಭಕ್ಷಿಸುವವರೆಲ್ಲರೂ ಜಾತ್ಯಾತೀತರು, ವರ್ಗಾತೀತರು ಮತ್ತು ಧರ್ಮಾತೀತರು! ಇಲ್ಲಿ ಗಜಲ್ ಗೋ ಅವರು ಅಂತಹ ವಿಟರನ್ನು ‘ಮಹಾಂತರು’ ಎಂದು ವ್ಯಂಗ್ಯವಾಡಿದ್ದಾರೆ. ತಂದೆಯಾದವನು ಕುಟುಂಬ ತೊರೆದು ಬೀದಿಯ ಪಾಲಾದಾಗ, ತಾಯಿಯಾದಂತವಳು ತನ್ನ ಮಕ್ಕಳ ಹೊಟ್ಟೆ ಹೊರೆಯಲೋಸುಗ ಜಾರಿಣಿಯಾದಂತ ಹಲವು ಪ್ರಕರಣಗಳು ನಮ್ಮ ಮುಂದಿವೆ. ತುತ್ತು ಅನ್ನಕ್ಕೂ ಪರದಾಡುತ್ತಿರುವ ಸ್ಥಿತಿಯನ್ನು ನಿರ್ಮಿಸಿದ ನಮ್ಮ ಪೂರ್ವಜರಿಗೂ, ನಮ್ಮ ಸಮಕಾಲೀನರಿಗೂ ಧಿಕ್ಕಾರವಿದೆ!!

         ದುಡ್ಡು…ಗರ್ಭದೊಳಗಿನ ಕಂದ ಕಣ್ಣು ತೆರೆಯಲೂ ಬೇಕು, ಕಣ್ಣು ಮುಚ್ಚಿದ ಜೀವಕ್ಕೆ ದಫನ್ ಮಾಡಲೂ ಬೇಕು! ಈ ದುಡ್ಡಿನ ಹಪಾಹಪಿ ಸಂಪತ್ತಿನ ಸಂಗ್ರಹಕ್ಕಾಗಿ ವಾಮಮಾರ್ಗವನ್ನು ಶೋಧಿಸುತ್ತದೆ. ಇದರಿಂದಾಗಿಯೆ ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ತಾರತಮ್ಯ, ಆರ್ಥಿಕ ಅಸಮಾನತೆ ಹೆಚ್ಚಿ ಲಂಚಾವತಾರ ತಾಂಡವವಾಡುತ್ತಿದೆ. ಅಧಿಕಾರವೆ ಇದಕ್ಕೆ ಬ್ರಹ್ಮಾಸ್ತ್ರವಾಗಿದೆ! ಈ ಕೆಳಗಿನ ಷೇರ್ ಅಸಹಾಯಕ, ಬಡುವ, ನಿರ್ಗತಿಕರ ಬಿಸಿ ಕಂಬನಿಯನ್ನು ಸಂಕೇತಿಸುತ್ತದೆ.

ಅಕ್ರಮದ ಹಣದಲ್ಲಿ ಹೊಟ್ಟೆ ಬಿರಿವಂತೆ ತಿಂದು ತೇಗಿದವರಲ್ಲ ಹಸಿವಿನಲ್ಲೇ ಸತ್ತವರು ನನ್ನವರು

ಹಗಲಿರುಳು ದುಡಿದು ತಂದ ಒಪ್ಪತ್ತಿನ ಗಂಜಿಯಲೇ ಸ್ವರ್ಗ ಸುಖ ಕಂಡವರು ನನ್ನವರು

ಈ ಮೇಲಿನ ಷೇರ್ ನ ‘ನನ್ನವರು’ ಎನ್ನುವ ರದೀಫ್ ಗಜಲ್ ಗೋ ಅವರ ಸಾಮಾಜಿಕ ಕಳಕಳಿಯ ದ್ಯೋತಕವಾಗಿ ಮೂಡಿಬಂದಿದೆ. ಹೊಟ್ಟೆ ಬಿರಿಯುವಂತೆ ತಿಂದು ತೇಗುವವರ ಮಧ್ಯೆ ಹಸಿವಿನ ವಿಷವರ್ತುಲದಲ್ಲಿ ಸಾಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಕೆಲವರು ‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವ ಸಿದ್ಧಾಂತವನ್ನು ಪಾಲಿಸುತ್ತ, ಇದ್ದುದರಲ್ಲಿಯೆ ನಾಕವನ್ನು ನಿರ್ಮಾಣ ಮಾಡಿಕೊಂಡು ಬದುಕುತಿದ್ದಾರೆ ನನ್ನವರು ಎಂದು ತುಂಬಾ ಪ್ರೀತಿ, ಅಭಿಮಾನದಿಂದ ಚೇತನ್ ಅವರು ಸಾರಿ ಹೇಳಿದ್ದಾರೆ.

      ಪ್ರತಿ ಮನುಷ್ಯ ತನ್ನ ಜೀವನದುದ್ದಕ್ಕೂ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಬಯಸುತ್ತಾನೆಯಾದರೂ ಅವನು ಹೆಚ್ಚು ಕ್ರಮಿಸುವ ದಾರಿ ನೋವಿನ ಕಡಲಲ್ಲಿಯೇ! ಅಂತೆಯೇ ‘ಕಂಬನಿ’ ಎಂಥವರನ್ನೂ ತಡೆದು ನಿಲ್ಲಿಸುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ‘ಗಜಲ್’ ಕಂಬನಿ ಒರೆಸುವ ಮೆದು ಬೆರಳಾಗಿ, ಹೃದಯವನ್ನು ಸಂತೈಸುವ ಹೆಣ್ಣಾಗಿ ನಮ್ಮ ಎದೆಯಂಗಳದಲ್ಲಿ ಶಾಶ್ವತವಾಗಿ ನೆಲೆ ನಿಂತಿದೆ. ಇಂಥಹ ಹತ್ತಾರು ‘ಗಜಲ್’ಗಳನ್ನು ಚೇತನ್ ನಾಗರಾಳ ಅವರು ಬರೆಯಲಿ, ಅವರಿಂದ ನಮ್ಮ ಗಜಲ್ ಮೆಹಫಿಲ್ ಗೆ ಮತ್ತಷ್ಟು ಕಳೆ ಬರಲಿ ಎಂದು ಶುಭ ಹಾರೈಸುತ್ತೇನೆ.

ಯುಗಗಳಿಂದ ಅವಳನ್ನು ನೋಡದೆ ಜೀವಂತವಾಗಿದ್ದೇನೆ

ನನ್ನ ಹೃದಯದಿಂದ ಅವಳು ಮರೆಯಾಗಲೆ ಇಲ್ಲ

ಜಾವೇದ್ ನಸೀಮಿ

        ಗಜಲ್ ಸರೋವರದ ವಿಹಾರ ತಮ್ಮ ಮನಕ್ಕೆ ಖುಷಿ ನೀಡುತ್ತಿದೆ ಎಂದುಕೊಂಡಿರುವೆ.. ಆದರೂ ಏನೂ ಮಾಡೋದು, ಟೈಮ್ ಟೈಮ್ ಕೀ ಬಾತ್ ಹೈ ಅಲ್ಲವೇ…? ಹಾಗಾಗಿ ಇಂದಿನ ಈ ಬರಹಕ್ಕೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ತಮ್ಮ ಮುಂದೆ ಹಾಜರಾಗುವೆ ಎಂದು ಪ್ರಮಾಣ ಮಾಡುತ್ತ, ಇಲ್ಲಿಂದ…..!!


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top