ಪುಸ್ತಕ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಸಾಂಗತ್ಯ ~ 3
ದಿ ಲಾಸ್ಟ್ ಲೆಕ್ಚರ್
ಶೀರ್ಷಿಕೆ _ ದಿ ಲಾಸ್ಟ್ ಲೆಕ್ಚರ್
ಮೂಲ ಲೇಖಕರು ರಾಂಡಿ ಪಾಶ್ ಮತ್ತು ಜೆಫ್ರಿ ಜೆಸ್ಲೋ
ಕನ್ನಡಕ್ಕೆ ಎಸ್ ಉಮೇಶ್
ಪ್ರಕಾಶಕರು ಧಾತ್ರಿ ಪ್ರಕಾಶನ ಮೈಸೂರು
ಪ್ರಥಮ ಮುದ್ರಣ ೨೦೦೮
ಡಾ. ರ್ಯಾಂಡಿ ಪಾಶ್ ಅಮೆರಿಕದ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ . ಅಲ್ಲದೆ ವರ್ಜಿನಿಯಾ ವಿಶ್ವವಿದ್ಯಾನಿಲಯ ಅಡೋಬ್ ಗೂಗಲ್ ವಾಲ್ಟ್ ಡಿಸ್ನಿ ಅಂತಹ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸಿದವರು ಜಗತ್ತಿನ ಮಹಾನ್ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಇವರು ಅಲೈಸ್ ಸಾಫ್ಟ್ವೇರ್ ನ ಸೃಷ್ಟಿಕರ್ತ .ತಮ್ಮ ೪೭ನೆಯ ವಯಸ್ಸಿನಲ್ಲಿ ಮೇದೋಜಿರಕ ಕ್ಯಾನ್ಸರ್ ಎಂದು ತಿಳಿದಾಗ ಹಾಗೂ ಅದು ಮಾರಣಾಂತಿಕ ಎಂದು ಗೊತ್ತಾದಾಗ ಈತ ಮೂರು ಪುಟ್ಟ ಮಕ್ಕಳ ತಂದೆ .
ಸಾಮಾನ್ಯವಾಗಿ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ತಮ್ಮ ಉಪನ್ಯಾಸಕರಿಗೆ ಕಡೆಯದಾಗಿ ಒಂದು ಉಪನ್ಯಾಸ ನೀಡುವ ಅವಕಾಶ ಕಲ್ಪಿಸುತ್ತದೆ. ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನ ಸಾಧ್ಯತೆಗಳನ್ನು ಬಿಂಬಿಸುವ ಹಾಗೂ ಹಚ್ಚಿಕೊಳ್ಳುವ ವೇದಿಕೆ. ತನ್ನ ಗುಣಪಡಿಸಲಾಗದ ಕಾಯಿಲೆಯ ಬಗ್ಗೆ ತಿಳಿದ ರ್ಯಾಂಡಿ ಸೆಪ್ಟೆಂಬರ್ ನಲ್ಲಿ ತನಗೆ ನಿಗದಿಯಾಗಿದ್ದ ಈ ಉಪನ್ಯಾಸದ ಕಾರ್ಯಕ್ರಮದಲ್ಲಿ ತನ್ನ ಬದುಕನ್ನು ತೆರೆದಿಟ್ಟ ತನ್ನ ಕನಸುಗಳನ್ನು ಹಂಚಿಕೊಂಡ ಒಂದು ಗಂಟೆಯ ಕಾರ್ಯಕ್ರಮವೇ ದಿ ಲಾಸ್ಟ್ ಲೆಕ್ಚರ್ ಈ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣಗೊಂಡು ಯೂಟ್ಯೂಬ್ನಲ್ಲಿ ತುಂಬಾ ಜನಪ್ರಿಯವಾಗಿದೆ. ನಂತರ ವಾಲ್ ಸ್ಟ್ರೀಟ್ ಪತ್ರಿಕೆಯವರದಿಗಾರ ಜೆಫ್ರಿ ಜಸ್ಲೋ ಸಹಕಾರದೊಂದಿಗೆ ಆ ಉಪನ್ಯಾಸದ ವಿಸ್ತೃತ ರೂಪವನ್ನು ” ದಿ ಲಾಸ್ಟ್ ಲೆಕ್ಚರ್” ಪುಸ್ತಕ ರೂಪದಲ್ಲಿ ತರಲಾಯಿತು . ಹಾಗೂ ಅದೂ ಸಹ ಬೆಸ್ಟ್ ಸೆಲ್ಲರ್ ಪಟ್ಟಿ ಸೇರಿತು . ತಮ್ಮ ಅಮೆರಿಕೆಯ ಪ್ರವಾಸದಲ್ಲಿ ಸ್ವತಃ ಸಾಫ್ಟ್ವೇರ್ ರಂಗದಲ್ಲಿರುವ ಉಮೇಶ್ ಅವರು ಈ ಪುಸ್ತಕವನ್ನು ಓದಿ ಅದರ ಪ್ರಭಾವದಿಂದ ಹೊರಬರಲಾಗದೆ ಹಕ್ಕುಸ್ವಾಮ್ಯಗಳನ್ನು ಪಡೆದು ಕನ್ನಡಕ್ಕೆ ಅನುವಾದಿಸಿದ್ದಾರೆ .ಕನ್ನಡ ಸಾಹಿತ್ಯ ಅಭಿಮಾನಿಗಳ ಅದೃಷ್ಟ ಇಂತಹದ್ದೊಂದು ಮೌಲ್ಯಯುತ ಪುಸ್ತಕದ ಓದು ನಮಗೆ ಲಭ್ಯವಾಯಿತು. “ಪಿಟ್ಸ್ ಬರ್ಗ್ ನ ಸಂತ” ಎಂದೇ ಹೆಸರಾದ ರ್ಯಾಂಡಿ ಪಾಶ್ ಅವರ ಜೀವನ ಯಶೋಗಾಥೆಯ, ಯಶಸ್ಸಿನ ಹಿಂದಿನ ಪರಿಶ್ರಮದ ಕಥೆಯೊಂದಿಗೆ ಸಾವು ನಿಶ್ಚಿತವಾದ ವ್ಯಕ್ತಿಯ ಮನೋ ವಿಪ್ಲವದ ಬಗೆಗೂ ಉಳಿದ ಜೀವನವನ್ನು ಸಾರ್ಥಕವಾಗಿ ಕಳೆಯುವ ಬಗ್ಗೆಗೂ ವಿವರಿಸಿರುವ ಬಗ್ಗೆ ಅನನ್ಯ . .ಎಲ್ಲರಲ್ಲೂ ಸ್ಫೂರ್ತಿ ತುಂಬಿ ಬದುಕಿನ ಹೋರಾಟಕ್ಕೆ ಅತ್ಯಗತ್ಯ ಬಲ ತುಂಬುವ ನುಡಿಗಳು . ಅನುವಾದವೂ ಅಷ್ಟೇ ತುಂಬಾ ಸಮರ್ಥ ಸತ್ವಯುತ ಅಭಿವ್ಯಕ್ತಿ. ಓದಿನ ಓಘಕ್ಕೆ ಎಲ್ಲೂ ಭಂಗ ಬಾರದಂತೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕದ ಸ್ಥೂಲ ಪರಿಚಯ ಮಾಡಿಕೊಡುವುದಷ್ಟೇ ನನ್ನ ಕೆಲಸ . ಅಂತರ್ಗತ ಭಾವನೆಗಳ ಅನುಭವ ನನ್ನಿಂದ ಕಟ್ಟಿಕೊಡಲು ಸಾಧ್ಯವಿಲ್ಲ. ಒಂದು ತಿನಿಸು ರುಚಿಯಾಗಿದೆ ಎಂದು ಅದನ್ನು ಬಗೆಬಗೆಯಲ್ಲಿ ವರ್ಣಿಸಬಹುದು . ಆದರೆ ಆ ರುಚಿಯ ಸ್ವಾದದ ಅನುಭವ ಪಡೆಯಲು ನಾವೇ ತಿನ್ನಲೇ ಬೇಕು ತಾನೆ? ಹಾಗೆಯೇ .ಅದಕ್ಕೆ ಪುಸ್ತಕ ಓದುವಿಕೆಯೊಂದೇ ಪರಿಹಾರ .
ಒಟ್ಟು ಆರು ಭಾಗಗಳಲ್ಲಿ ಅರವತ್ತೊಂದು ಅಧ್ಯಾಯಗಳಲ್ಲಿ ರಾಂಡಿಯ ಆಲೋಚನಾ ಲಹರಿಗಳು ಓದುಗನೆಡೆಗೆ ಹರಿದು ಬರುತ್ತವೆ. ಅವರ ಬಾಲ್ಯದ ಕನಸುಗಳು, ಕಲಿತ ಪಾಠಗಳು, ಮಾಡಿದ ಸಾಹಸಗಳು ಬೇರೆಯವರಿಗೆ ಕೊಟ್ಟ ಪ್ರೋತ್ಸಾಹ, ನಮ್ಮ ಬದುಕನ್ನು ಸ್ಮರಣಾರ್ಹ ಮಾಡಿಕೊಳ್ಳುವುದು ಹೇಗೆ ……ಹೀಗೇ…….
ಮೊದಲ ಭಾಗವಾದ “ಲಾಸ್ಟ್ ಲೆಕ್ಚರ್” ನಲ್ಲಿ ತನ್ನ ಉಳಿದ ಅಲ್ಪ ಜೀವಿತದ ಸಮಯವನ್ನು ತಿನ್ನುವ ಈ ಲಾಸ್ಟ್ ಲೆಕ್ಚರ್ ನ ಗೊಡವೆಯೇ ಬೇಡ ಎಂದು ಪತ್ನಿ ಹೇಳುವಾಗ ನನ್ನ ನೆನಪೂ ಸಹ ಉಳಿಯದ ವಯಸ್ಸಿನ ಮೂರು ಮಕ್ಕಳಿಗೆ ತಾನು ಮುಂದಿನ ಇಪ್ಪತ್ತು ವರ್ಷಗಳಲ್ಲಿ ಕಲಿಸಬಹುದಾದ ಪಾಠ ಹೇಳಬಹುದಾದ ಮಾತುಗಳನ್ನು ಈ ರೂಪದಲ್ಲಿ ಸಂಗ್ರಹಿಸಿಡುವುದಾಗಿ ಹೇಳಿ ಒಪ್ಪಿಸುತ್ತಾರೆ. ರ್ಯಾಂಡಿಯ ಮಕ್ಕಳಿಗೆ ಮಾತ್ರವಲ್ಲದೆ ಬೇರೆ ತಂದೆ ತಾಯಿಯರೂ ಅವರ ಮಕ್ಕಳೂ ಇದರಿಂದ ಲಾಭ ಪಡೆಯುವಂತಾಗಿದ್ದು ಈಗ ಚರಿತ್ರೆ .
ಬಾಲ್ಯದ ಕನಸುಗಳನ್ನು ಸಾಕಾರಗೊಳಿಸುವುದು
ತಮ್ಮ ತಂದೆ ತಾಯಿಯರ ನಿರಾಡಂಬರ ಜೀವನ ಬೀರಿದ ಪ್ರಭಾವ, ಬಾಲ್ಯದಲ್ಲಿ ತಮ್ಮ ಕೋಣೆಯಲ್ಲಿ ತಾವೇ ಬಿಡಿಸಿದ ಚಿತ್ರಗಳ ಬಗ್ಗೆ ಭಾವನಾತ್ಮಕ ಬೆಳಕು ಚೆಲ್ಲುತ್ತಾರೆ . ತಮ್ಮಲ್ಲಿದ್ದ ಸುಪ್ತ ಪ್ರತಿಭೆಗೆ ಕನಸಿಗೆ ತಮ್ಮ ಪೋಷಕರು ನೀರೆರೆದದ್ದನ್ನು ಸ್ಮರಿಸಿಕೊಳ್ಳುತ್ತಾರೆ. ತಮ್ಮ ಫುಟ್ಬಾಲ್ ಕೋಚ್ ಗ್ರಹಾಂ ಅವರ ವ್ಯಕ್ತಿತ್ವ, ಡಿಸ್ನಿಲ್ಯಾಂಡ್ ನೋಡಿದ ಒಂಬತ್ತನೆಯ ವಯಸ್ಸಿನಲ್ಲಿ ತಾವೂ ಅದರ ಅಂಗವಾಗಿ ಕೆಲಸ ಮಾಡಬೇಕೆನ್ನುವ ಕನಸು ಆಮೇಲೆ ನನಸಾಗಿದ್ದು .ವಿಶ್ವಕೋಶ ಉಪಯೋಗಿಸಿದ ಕೃತಜ್ಞತೆಗೆ ತಾವೂ ಅದಕ್ಕೆ “virtual reality”ಯ ಬಗ್ಗೆ ಲೇಖನ ಬರೆಯುವ ಸಂದರ್ಭ ಒದಗಿದ್ದನ್ನು ವಿವರಿಸುತ್ತಾರೆ. ತಮ್ಮ ಕನಸುಗಳೆಲ್ಲಾ ನನಸಾಗಿದ್ದಕ್ಕೆ ತಾವು ಅದೃಷ್ಟಶಾಲಿ ಎಂದೂ ಅದಕ್ಕೆ ಬಂಪರ್ ಲಾಟರಿ ಹೊಡೆದಿದೆ ಎಂದೂ ಹರ್ಷ ಪಡುತ್ತಾರೆ .ಚಿಕ್ಕಂದಿನಿಂದ ಕಲೆ ಹಾಕಿದ್ದ ಸಾಫ್ಟ್ ಗೊಂಬೆಗಳನೆಲ್ಲ ತಮ್ಮ ಲಾಸ್ಟ್ ಲೆಕ್ಚರ್ ವೇದಿಕೆಯಲ್ಲಿ ಎಲ್ಲರಿಗೂ ಹಂಚುತ್ತಾರೆ .ಗೋಡೆಯ ಮೇಲೆ ಮಕ್ಕಳು ಪೆನ್ಸಿಲ್ ಬಣ್ಣದ ಕ್ರೆಯಾನ್ಸ್ ಗಳಿಂದ ಗೀಚಿದರೆ ಮತ್ತೆ ಬಣ್ಣ ಹೊಡೆಸಲು ಖರ್ಚಾಗುತ್ತದೆಎಂದು ಅದನ್ನು ತಡೆಯುವ ಪೋಷಕರು ಈ ಅಧ್ಯಾಯಗಳಿಂದ ಕಲಿಯುವುದು ತುಂಬಾನೇ ಇದೆ .ಮಕ್ಕಳ ಸೃಜನಶೀಲತೆಗೆ ಕಲ್ಪನೆಗೆ ಹೊಸ ಆಯಾಮ ಕೊಟ್ಟು ಗರಿಗೆದರಿ ಹಾರಲು ಅವಕಾಶ ಮಾಡಿಕೊಡಬೇಕು ಆಗಲೇ ಹೊಸ ಹೊಸ ಆಲೋಚನೆಗಳು ಆವಿಷ್ಕಾರಗಳು ಹುಟ್ಟುವುದು. ಬಾಲ್ಯ ತಾನಾಗಿ ವಿಕಸಿಸುವ ಸುಮವಾಗಬೇಕೇ ವಿನಃ ಬಲವಂತದಿಂದ ಅರಳಿಸಲು ಹೊರಟರೆ ದಳಗಳು ಉದುರುತ್ತವೆ ತಾನೇ? ಮಕ್ಕಳಿಂದ ಬಾಲ್ಯವನ್ನು ಕಸಿದುಕೊಂಡು ನಾವು ಮಾಡುತ್ತಿರುವುದು ಈಗ ಇದೇ ಕೃತ್ಯ .
ಸಾಹಸ ಮತ್ತು ಕಲಿತ ಪಾಠಗಳು
ಜೀವನದ ಸಕಾರಾತ್ಮಕ ಪಾಠವನ್ನು ಹೇಳುವ ” ಪಾರ್ಕ್
೮ ಗಂಟೆಯವರೆಗೂ ತೆರೆದಿರುತ್ತದೆ” ಅಧ್ಯಾಯ. ಕ್ಯಾನ್ಸರ್ ಪೀಡಿತರಾಗಿದ್ದರೂ ಜಗದ ಸಂತೋಷವೆಲ್ಲ ತನ್ನದೇ ಎಂದು ಅನುಭವಿಸುವ ವ್ಯಕ್ತಿ ರಾಂಡಿ. ತನ್ನ ಜೀವನದ ‘ಡಚ್ ಅಂಕಲ್’ ಆಗಿದ್ದ ಪ್ರಾಧ್ಯಾಪಕ ಆ್ಯಂಡಿ ವ್ಯಾನ್ ಡಾಮ್ ಅವರನ್ನು ನೆನಪಿಸಿಕೊಳ್ಳುತ್ತಾರೆ . ವಸ್ತುವಿಗಿಂತ ವ್ಯಕ್ತಿ ಮುಖ್ಯ ಎನ್ನುವ ರಾಂಡಿ ತನ್ನ ಅಕ್ಕನ ಮಕ್ಕಳಿಗೆ ಈ ವಿಷಯ ಅರಿವು ಮೂಡಿಸಲು ಹೊಸ ಕಾರಿನ ಹಿಂದಿನ ಆಸನದ ಮೇಲೆ ಬೇಕೆಂದು ಸೋಡಾ ಸುರಿಯುತ್ತಾರೆ .ಗ್ಯಾರೇಜಿನಲ್ಲಿ ಎರಡು ಕಾರುಗಳು ಜಜ್ಜಿ ಹೋದಾಗಲೂ ವಿಚಲಿತರಾಗದೆ ಪತ್ನಿಯ ಮೇಲೆ ಕೋಪಗೊಳ್ಳದೆ ಇದ್ದ ಪ್ರಸಂಗವೂ ಮನ ತಟ್ಟುತ್ತದೆ. ಪತ್ನಿ ಜೈ ಮೇಲಿನ ಅವರ ಪ್ರೀತಿ ಕಾಳಜಿಯೂ ಅದ್ಭುತ ಮದುವೆಯ ದಿನವೇ ಗಾಳಿ ತುಂಬಿದ ಬಲೂನ್ ಹಾರಾಟ ಸ್ವಲ್ಪದರಲ್ಲೇ ಅಪಘಾತ ತಪ್ಪಿದ್ದು ಸಹ ಅವರ ಸಾಹಸ ಪರತೆಯ ನಿದರ್ಶನ. ಇನ್ನು ಮಗನ ಜನನದ ಪ್ರಸಂಗದಲ್ಲಿ ಪತ್ನಿಗೆ ಧೈರ್ಯ ನೀಡುವ ರೀತಿ ಸ್ತುತ್ಯಾರ್ಹ. ಬದುಕು ನಿಯಮಿತ ರೀತಿಯಲ್ಲೇ ಸಾಗಬೇಕು ನಿಜ ಆದರೆ ಒಮ್ಮೊಮ್ಮೆ ಪಥದಿಂದ ಪಕ್ಕಕ್ಕೆ ಸರಿದು ಅಲ್ಲಿನ ಥ್ರಿಲ್ ಅನುಭವಿಸಬೇಕು. ಜೀವನದ ಸಂತೋಷವನ್ನು ಮೊಗೆಮೊಗೆದು ಸವಿಯಬೇಕು ಎಂಬುದು ಇವರ ಸಿದ್ಧಾಂತ. ಆಗ ಬಾಳು ಏಕತಾನತೆಯ ಪರಿಧಿಯಿಂದ ಹೊರಬಂದು ಜೀವನದ ಸವಿ ಅರ್ಥವಾಗುತ್ತದೆ.
ಪರರ ಕನಸನ್ನು ಚಿಗುರಿಸುವುದು
ಇಲ್ಲಿ ಹಣಕ್ಕೂ ಸಮಯಕ್ಕೂ ತುಲನಾತ್ಮಕವಾಗಿ ವಿಮರ್ಶಿಸುತ್ತಾ ಕೆಲವೊಂದು ತಮಗೆ ತಿಳಿದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ನಿಜಕ್ಕೂ ಅಳವಡಿಸಿಕೊಳ್ಳಲೇ ಬೇಕಾದ ಸಂಗತಿಗಳನ್ನು, ತಮ್ಮಿಂದ ಪ್ರೇರಿತರಾದ ವಿದ್ಯಾರ್ಥಿಗಳು, ಶಿಕ್ಷಣದಲ್ಲಿ ಅವರು ಅಳವಡಿಸಿಕೊಂಡ ಕ್ರಮಗಳು, ಸುದೀರ್ಘ ಕಾಲ ಪ್ರಾಧ್ಯಾಪಕರಾಗಿದ್ದಾಗಿನ ಅನುಭವಗಳನ್ನು ಇಲ್ಲಿನ ಅಧ್ಯಾಯಗಳಲ್ಲಿ ವಿವರಿಸುತ್ತಾರೆ ರ್ಯಾಂಡಿ .ತಮ್ಮ ನವನವೋನ್ಮೇಶಿ ಆಲೋಚನೆಗಳು ಹೊಸ ಕ್ರಮಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಸೆಳೆದಿದ್ದರು. ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಪ್ರವೇಶ ಕೊಡಲು ನಿರಾಕರಿಸಿದ ವಿದ್ಯಾರ್ಥಿಯೊಬ್ಬರು ಇವರಿಟ್ಟ ನಂಬಿಕೆಯ ಮೂಲಕ ಪ್ರವೇಶ ಪಡೆದು ನಂತರ ಮಹಾನ್ ಸಾಧಕರಾಗಿದ್ದು ಇತಿಹಾಸ. ಇವರಿಗೆ ಮಹಾನ್ ಶಿಕ್ಷಕ ಉಪಾಧಿ ದೊರೆತದ್ದು ಖಂಡಿತ ಅತಿಶಯ ಅಲ್ಲವೇ ಅಲ್ಲ
ನಿಮ್ಮ ಬದುಕನ್ನು ಸ್ಮರಣೀಯ ಗೊಳಿಸಿಕೊಳ್ಳುವ ರೀತಿ
ತೋರಿಕೆ ಆಡಂಬರಕ್ಕಿಂತ ಶ್ರದ್ಧೆ ಮುಖ್ಯ ಎನ್ನುವ ರ್ಯಾಂಡಿ ಪ್ರೀತಿಪಾತ್ರರ ಕೆಲವೊಂದು ನಡವಳಿಕೆ ಅಸಹನೀಯವೆನಿಸಿದಾಗ ಶ್ವೇತ ಪತಾಕೆ ತೋರಿಸಿ ಒಪ್ಪಂದ ಮಾಡಿಕೊಳ್ಳಿ ಎನ್ನುವ ರೀತಿ ಕುತೂಹಲ ತರಿಸುತ್ತದೆ .ಶ್ರಮದ ದುಡಿಮೆಗೆ ಒತ್ತು ಕೊಡಿ ಎನ್ನುತ್ತಾ ಹಲವಾರು ವ್ಯಕ್ತಿತ್ವ ವಿಕಸನದ ನೀತಿ ಮಾತುಗಳನ್ನು ಹೇಳುತ್ತಾ ‘ಮೊದಲ ಪೆಂಗ್ವಿನ್ ನೀವಾಗಿರಿ’ ಎಂದು ಹೇಳುವ ಅಧ್ಯಾಯ ತುಂಬಾ ಮೆಚ್ಚುಗೆಯಾಯಿತು. ಅವರ ಜೀವನದ ಪುಟ್ಟಪುಟ್ಟ ರೋಚಕ ಸಂಗತಿಗಳು ಕಲಿಸಿದ ನೀತಿ ಮುಂದೆ ಬದುಕಿನಲ್ಲಿ ತಾನು ಅದನ್ನು ಬೆಳೆಸಿಕೊಂಡು ಯಶಸ್ವಿಯಾದ ರೀತಿ ನಿಜಕ್ಕೂ ಖುಷಿ ತರುತ್ತದೆ. ಈ ತರಹದ ಮನೋಭಾವ ಇದ್ದುದರಿಂದಲೇ ಈ ಮಟ್ಟಕ್ಕೆ ಬೆಳೆಯಲು ವಿಜಯ ಸಾಧಿಸಲು ನೆರವಾಗಿದ್ದು ಎಂಬ ಅರಿವು ಮೂಡಿಸುತ್ತದೆ . ಬದಲಾಗಿಸಲಾಗದ್ದನ್ನು ಅಂತೆಯೇ ಸ್ವೀಕರಿಸುವ ಗುಣ ಬೆಳೆಸಿಕೊಂಡರೆ ಬದುಕಿನ ಎಷ್ಟೋ ವಿಪ್ಲವ ಗೊಂದಲಗಳು ಮಾಯವಾಗುತ್ತದೆ. ಸ್ವಲ್ಪವಾದರೂ ಮನಶಾಂತಿ ಸಿಗುತ್ತದೆ
ಕೊನೆಯ ನುಡಿ
ಈ ಭಾಗವನ್ನು ಓದುವಾಗಲಂತೂ ಹರಿಯುವ ಕಣ್ಣೀರನ್ನು ನಿಯಂತ್ರಿಸಲು ಆಗಲೇ ಇಲ್ಲ . ತನ್ನ ಸಾವು ಸಮೀಪದಲ್ಲೇ ಎಂದು ತಿಳಿದಿರುವ ತಂದೆ ತನ್ನ ಮಕ್ಕಳ ಬಗ್ಗೆ ಕಾಣುವ ಕನಸು, ತನ್ನ ನೆನಪು ಅವರಲ್ಲಿ ಉಳಿದಿರಲಿ ಎಂದು ತಾನು ಇಲ್ಲದಿದ್ದಾಗಲೂ ತನ್ನ ಆಲೋಚನೆ ಯೋಚನೆ ಅವರಿಗೆ ಅರಿವಾಗಲಿ ಎಂದು ಕೊಟ್ಟ ತನ್ನ ಮಕ್ಕಳಿಗಾಗಿ ಸಿದ್ಧಪಡಿಸಿದ ಲಾಸ್ಟ್ ಲೆಕ್ಚರ್ ಇದು ಎಂದು ಹೇಳುತ್ತಾರೆ. ಒಂದು ವಿಧದಲ್ಲಿ ಕ್ಯಾನ್ಸರ್ನಿಂದಾಗಿ ತನ್ನ ಸಾವು ತಿಳಿದು ಸಂಸಾರಕ್ಕೆ ಬೇಕಾದ ಯೋಜನೆ ಸೌಲಭ್ಯ ಮಾಡಲು ಅನುಕೂಲವಾಯಿತು . ಅನಿರೀಕ್ಷಿತ ಸಾವಾಗದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ಕ್ಯಾನ್ಸರ್ಗೆ ನಾನು ಋಣಿ ಎನ್ನುತ್ತಾರೆ . ಉಪನ್ಯಾಸದ ಹಿಂದಿನ ದಿನ ಪತ್ನಿ ಜೈ ಅವರ ಹುಟ್ಟುಹಬ್ಬ ಇದ್ದು ಆಚರಿಸಲಾಗಿರುವುದಿಲ್ಲ . ರೋಗಿಯನ್ನು ಎಲ್ಲರೂ ಗಮನಿಸುತ್ತಾರೆ ಆದರೆ ಅವರನ್ನು ನೋಡಿಕೊಳ್ಳುವ ಮನೆಯವರ ಶ್ರಮ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿ ವೇದಿಕೆಯ ಮೇಲೆ ಕೇಕ್ ಕತ್ತರಿಸಲು ಹೇಳುತ್ತಾರೆ ರ್ಯಾಂಡಿ . ಆಗ ಆಕೆ ಭಾವಪರವಶಳಾಗಿ ಕಣ್ಣೀರು ಸುರಿಸುತ್ತಾ “ರ್ಯಾಂಡಿ ನೀನು ಸಾಯಬೇಡ” ಎಂದು ಹೇಳುವ ಸಂದರ್ಭವಂತೂ ………………….
ಇಷ್ಟು ಸೊಗಸಾದ ಕೃತಿ ನಾನು ಹೇಳಿರುವುದು ಬರೀ ಟ್ರೇಲರ್ ಅಷ್ಟೇ ಪುಸ್ತಕ ಓದಿದಾಗ ಮಾತ್ರ ಅದರ ಪೂರ್ಣ ಪ್ರಭಾವದ ಅರಿವಾಗುತ್ತದೆ . ರ್ಯಾಂಡಿ ಪಾಶ್ ಅವರು ಈ ಲಾಸ್ ಲೆಕ್ಚರ್ ನ ನಂತರ ಹತ್ತು ತಿಂಗಳು ಬದುಕಿದ್ದು ಜುಲೈ ೨೫ ೨೦೦೮ ರಂದು ನಿಧನ ಹೊಂದಿದರು.
ಈ ಉಪನ್ಯಾಸವನ್ನು ಒಂದು ಕೋಟಿ ಜನ ವೀಕ್ಷಿಸಿದ್ದಾರೆ ಈ ಪುಸ್ತಕದ ಮೂವತ್ನಾಲ್ಕು ಲಕ್ಷ ಪ್ರತಿಗಳು ಮಾರಾಟವಾಗಿವೆ ಮುನ್ನುಡಿಯಲ್ಲಿ ಶ್ರೀ ವಿಶ್ವೇಶ್ವರ ಭಟ್ ಹೇಳಿದಂತೆ “ಪುಸ್ತಕ ಓದುತ್ತಾ ಓದುತ್ತಾ ಒಮ್ಮೊಮ್ಮೆ ತುಂಬಾ ಖುಷಿಯಾಗಿ ನಗು ಬರುತ್ತದೆ ಒಮ್ಮೊಮ್ಮೆ ಅಚ್ಚರಿಯೊಂದು ಕೈಹಿಡಿದು ಜೊತೆಯಾಗುತ್ತದೆ ಹಲವು ಸಂದರ್ಭಗಳಲ್ಲಂತೂ ದುಃಖ ಒತ್ತರಿಸಿಕೊಂಡು ಬಂದು ಕಂಬನಿ ಕಪಾಳಕ್ಕಿಳಿಯುತ್ತದೆ” . ಅಕ್ಷರಶಃ ನಿಜ .
ಎಷ್ಟೋ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನ ಓದಿರಬಹುದು ಅಳವಡಿಸಿಕೊಳ್ಳಲು ಇಷ್ಟ ಪಟ್ಟಿರಲೂ ಬಹುದು ಆದರೆ ಈ ಪುಸ್ತಕದ ಅನುಭವ ತುಂಬಿದ ನುಡಿಗಳು ವಾಸ್ತವತೆಗೆ
ಹತ್ತಿರದ ಮಾತುಗಳು ಕೃತಿಗಳು ಬರೀ ಬೋಧನೆ ಎಂದೆನಿಸದೆ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ಬದುಕಿನ ಸಂತಸವನ್ನು ಮತ್ತಷ್ಟು ಆಸ್ವಾದಿಸಲು ಕರೆನೀಡುತ್ತದೆ. ಇನ್ನೇನು ಸಾಯುತ್ತೇನೆ ಎನ್ನುವ ವ್ಯಕ್ತಿಯ ಜೀವನದ ಬಗೆಗಿನ ದೃಷ್ಟಿಕೋನ ಅಚ್ಚರಿ ಮೂಡಿಸುತ್ತದೆ ವಿಸ್ಮಯ ತರಿಸುತ್ತದೆ ನಾವೇಕೆ ಹೀಗೆ ಯೋಚಿಸಬಾರದು ನಡೆಯಬಾರದು ಎಂಬ ಭಾವನೆಯನ್ನು ಮೂಡಿಸುತ್ತದೆ .
.ಏನೂ ಇಲ್ಲ ಎಂದರೆ ಏನೂ ಇಲ್ಲದ ಎಲ್ಲಾ ಇದೆ ಎಂದರೆ ಎಲ್ಲಾ ಇದೆ ಎನ್ನಿಸುವಂತಹ ಒಂದು ರೀತಿಯ ವಿಕ್ಷಿಪ್ತತೆ ಉಂಟಾದರೂ ಆಗಬಹುದು . ಅದೇ ಈ ಕೃತಿಯ ವೈಶಿಷ್ಟ್ಯವೇನೋ ಎಂದು ನನಗನ್ನಿಸುತ್ತದೆ . ಕೃತಿ ಗೆಲ್ಲುವುದೂ ಇಲ್ಲಿಯೇ.
“ತುಂಬಿದ ನಗೆಯೊಂದನ್ನು ಹೊತ್ತುಕೊಂಡೇ ಈ ಸುಂದರ ಲೋಕವನ್ನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತೇನೆ ನಿಮ್ಮ ಹಾರೈಕೆ ನನ್ನೊಂದಿಗಿರಲಿ” ಎಂದು ವಿಷಾದದಿಂದ ಹೇಳದೆ ವಾಸ್ತವಿಕತೆಯ ಕಟು ಸತ್ಯವನ್ನು ತೆರೆದ ಪುಸ್ತಕವನ್ನಾಗಿ ಮಾಡಿದ ವ್ಯಕ್ತಿ ರ್ಯಾಂಡಿ ಎನ್ನುತ್ತಾರೆ ಅನುವಾದಕ ಶ್ರೀ ಉಮೇಶ್. ಆ ತೆರೆದ ಪುಸ್ತಕವನ್ನು ನಮ್ಮ ಕನ್ನಡದಲ್ಲೇ ಓದಲು ಅನುವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು ಉಮೇಶ್ ಅವರೇ. ನಿಮ್ಮ ಪ್ರಯತ್ನ ನಿಜಕ್ಕೂ ಸಾರ್ಥಕ.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು
ಮೇಡಂ ಇಂಥ ಒಂದು ಜೀವನ್ಮುಖಿ ಕೃತಿಯ ಪರಿಚಯ ಮಾಡಿಸಿದ್ದಕ್ಕೆ ತಮಗೆ ಧನ್ಯವಾದಗಳು. ಆ ಪುಸ್ತಕವನ್ನು ಓದುವ ಕುತೂಹಲ ಹೆಚ್ಚಾಗಿದೆ ಕನ್ನಡದಲ್ಲಿ ಓದಲು ಅನುವು ಮಾಡಿಕೊಟ್ಟ ಉಮೇಶ್ ಸರ್ ಅವರಿಗೂ ಧನ್ಯವಾದಗಳು.