ಅಂಕಣ ಸಂಗಾತಿ

ಕಾವ್ಯದರ್ಪಣ

“ದೃತರಾಷ್ಟ್ರನಂತಅಂದತ್ವ”

ಎಲ್ಲಿದೆ ನಂದನ ಎಲ್ಲಿದೆ ಬಂಧನ

ಎಲ್ಲಾ ಇದೆ ನಮ್ಮೊಳಗೆl

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತಸವಿಯಿದೆ ನಾಲಿಗೆಗೆll

         – ಜಿ.ಎಸ್. ಶಿವರುದ್ರಪ್ಪ

ಕಾವ್ಯ ಪ್ರವೇಶಿಕೆಯ ಮುನ್ನ

ಧೃತರಾಷ್ಟ್ರ ಭೀಷ್ಮನ ತಮ್ಮ ವಿಚಿತ್ರವೀರ್ಯನ ಮೊದಲ ಪತ್ನಿ ಅಂಬಿಕೆಯ ಮಗ. ಹುಟ್ಟು ಕುರುಡನಿವ. ಈ ಜಗತ್ತನ್ನು ನೋಡಲು ಅಸಮರ್ಥರಾಗಿದ್ದನು. ಬೌದ್ಧಿಕವಾಗಿ ಮಾತ್ರ ಅವನು ದೃಷ್ಟಿಹೀನನಲ್ಲ. ಆಂತರಿಕವಾಗಿ ಕೂಡ ಅಂಧನಾಗಿದ್ದ. ಅವನಲ್ಲಿ ಕುರುಡುತನ ಎಷ್ಟಿತ್ತೆಂದರೆ ತನ್ನ ಮುಂದೆ ಬೆಳಕಿನ ಹೊನಲೇ ಪ್ರಜ್ವಲಿಸುತ್ತಿದ್ದರೂ ಮೂಢನಾಗಿ ಅದನ್ನೆಲ್ಲ ತಿರಸ್ಕರಿಸಿ ಕತ್ತಲೆಯ ಕೂಪದಲ್ಲಿ ನರಳುವಂತಹ ಸಂದರ್ಭಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಿದ್ದ. ಇದಕ್ಕೆಲ್ಲ ಕಾರಣ ಅವನ ಪುತ್ರ ವ್ಯಾಮೋಹ. ದುರ್ಯೋಧನನ ಮೇಲೆ ಅವನಿಗಿದ್ದ ಪುತ್ರ ವ್ಯಾಮೋಹ. ಅತಿ ಕಾಳಜಿ ಮಾಡುತ್ತ ಅವನು ತಪ್ಪು ಮಾಡಿದಾಗಲೂ ಅದನ್ನು ತಿದ್ದಿ ಅವನನ್ನು ಸರಿದಾರಿಗೆ ತರಲು ಪ್ರಯತ್ನ ಮಾಡಲಿಲ್ಲ.

ದುರ್ಯೋಧನ ಶಕ್ತಿಶಾಲಿ ಹಾಗೂ ಬಲಾಢ್ಯ ಮಗನಾಗಿದ್ದ. ಆದರೂ ಧರೆಯ ಮೇಲೆ ಬಹುದಿನ ಬಾಳಲಾಗಲಿಲ್ಲ. ಅದಕ್ಕಾಗಿ ಯಾರಾದರೂ ತಮ್ಮ ಮಕ್ಕಳ ಮೇಲೆ ಅತಿಯಾದ ಆಸೆಯನ್ನು ಇಟ್ಟುಕೊಂಡು ಅವರು ತಪ್ಪು ಮಾಡಿದಾಗಲೂ ತಿದ್ದದೇ ಪ್ರೋತ್ಸಾಹಿಸುವ ತಂದೆಯನ್ನು ಧೃತರಾಷ್ಟ್ರನಂತಹ ಪುತ್ರ ವ್ಯಾಮೋಹಿ ಎನ್ನುತ್ತಾರೆ. ಧೃತರಾಷ್ಟ್ರ ಕುರುಡನಾಗಿದ್ದರೂ ತನ್ನ ಅಂತಃಶಕ್ತಿ ವಿವೇಚಿಸಿದ್ದರೆ ಅವನ ಮಕ್ಕಳ ಸರ್ವನಾಶಕ್ಕೆ ಅವನೇ ಮುನ್ನುಡಿ ಬರೆಯುವಂತೆ ಆಗುತ್ತಿರಲಿಲ್ಲ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ದುರ್ಯೋಧನನ ವಿಷಯದಲ್ಲಿ ಆಗಿದ್ದು ಅದೇ. ದೃತರಾಷ್ಟ್ರನ ಎಲ್ಲೆ ಮೀರಿದ ಪ್ರೀತಿ ವಾತ್ಸಲ್ಯಗಳು ದುರ್ಯೋಧನನ ಜೀವನಕ್ಕೆ ಮುಳುವಾದವು.

ಮಕ್ಕಳು ಮಕ್ಕಳು ತಪ್ಪು ಮಾಡುವುದು ಸಹಜ ಅದರಲ್ಲೂ ದುರ್ಯೋಧನನಿಗೆ ಶಕುನಿ ಅಂತ ಕುತಂತ್ರಿ ಮಾವನಿದ್ದಾಗ ಅವನನ್ನು ತಿದ್ದಿ ಬುದ್ಧಿ ಹೇಳುವ ಕೆಲಸ ಮಾಡದೆ ಮಗನ ದುಷ್ಟ ಕಾರ್ಯಗಳಿಗೆಲ್ಲ ಕುಮ್ಮಕ್ಕು ಕೊಡುತ್ತಾ ಸಾಗಿದ ಪರಿಣಾಮವೇ ನೂರು ಮಕ್ಕಳ ತಂದೆಯಾದರು ಎಲ್ಲರನ್ನೂ ಯುದ್ಧದಲ್ಲಿ ಕಳೆದುಕೊಂಡು ಪುತ್ರ ಶೋಕದಲ್ಲಿ ನಿರಂತರವಾಗಿ ಮುಳುಗಬೇಕಾಯಿತು.

ದುರ್ಯೋಧನನ ಮನದ ತುಂಬಾ ಈರ್ಷೆಯೆ ತುಂಬಿ ತುಳುಕುತ್ತಿತ್ತು. ಇದಕ್ಕೆಲ್ಲ ಶಕ್ತಿ ತುಂಬುತ್ತಾ ಸಾಗಿದ ದೃತರಾಷ್ಟ್ರ, ಮೋಸದ ದ್ಯೂತ (ಪಗಡೆಯಾಟ), ದ್ರೌಪದೀ ವಸ್ತ್ರಾಪಹರಣ ಮುಂತಾದ ಘಟನೆಗಳು ಕಣ್ಣ ಮುಂದೆ ನಡೆಯುತ್ತಿದ್ದರೂ ಪ್ರಶ್ನಿಸಿದೆ ಮಗನಿಗೆ ಬುದ್ಧಿ ಹೇಳದೇ ಪಾಂಡವರು ತನ್ನ ತಮ್ಮನ ಮಕ್ಕಳೆಂದು ಯೋಚಿಸದೆ, ರಾಜನೆಂಬುದನ್ನು ಮರೆತು ರಾಜನೀತಿಯನ್ನು ಪಾಲಿಸದೆ ತನ್ನ ಪುತ್ರನ ಪರವಾಗಿ ನಿಂತು ನ್ಯಾಯಸಮ್ಮತವಲ್ಲದ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದ. ಅವರ ಏಳಿಗೆಯನ್ನು ಆಶಿಸುತ್ತಾ ಅವನಿಗೆ ಅನುಕೂಲವಾಗುವಂತ ತೀರ್ಮಾನಗಳನ್ನು ತೆಗೆದುಕೊಂಡು ಮಕ್ಕಳ ಪರ ತೀರ್ಪು ಕೊಡುತ್ತಾ ಸಾಗಿದ್ದರ ಪರಿಣಾಮವೇ ಘನಘೋರ ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಒಬ್ಬಂಟಿಯಾಗಿ ದುರ್ಯೋಧನ ಮರಣ ಹೊಂದುವಂತಾಯಿತು. ಇದಕ್ಕೆಲ್ಲಾ ದುರ್ಯೋಧನನ ತಪ್ಪಿನಷ್ಟೇ ಧೃತರಾಷ್ಟ್ರ ನ ತಪ್ಪು ಕೂಡ ಮುಳುವಾಯಿತು.ಮದ ಮತ್ಸರಕ್ಕೆ ದುರ್ಯೋಧನ ಬಲಿಯಾದರೆ ,ಮಕ್ಕಳ ಮೇಲಿನ ಕುರುಡು ವ್ಯಾಮೋಹಕ್ಕೆ ದೃತರಾಷ್ಟ್ರ ಪುತ್ರರನ್ನು ಕಳೆದುಕೊಳ್ಳಬೇಕಾಯಿತು.

ಕವಿ ಪರಿಚಯ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಮಹೇಶ್ ಹೆಗಡೆ ಅವರು ಹವ್ಯಾಸಿ ಬರಹಗಾರರು. ಬಿ.ಕಾಮ್ ಪದವಿಧರರಾದ ಇವರು ವೃತ್ತಿಯಲ್ಲಿ ಕೃಷಿ ಅನುಸರಿಸುತ್ತಾ ಜೊತೆ ಜೊತೆಗೆ ಸಾಹಿತ್ಯ ಕೃಷಿಯನ್ನುಮಾಡುತ್ತಾ ಸಾಗುತ್ತಿರುವ ಪ್ರತಿಭಾವಂತ ಕವಿಗಳು.ಇವರು ಕವನ ,ಗಝಲ್, ಭಕ್ತಿಗೀತೆ ,ಭಾವಗೀತೆ, ಜಾನಪದ ಗೀತೆಗಳನ್ನು ರಚಿಸುವ ಮೂಲಕ ಕನ್ನಡ ಸೇವೆ ಮಾಡುತ್ತಿದ್ದಾರೆ.

ಕವಿತೆಯ ಆಶಯ

ಧೃತರಾಷ್ಟ್ರನನ್ನು ಪುತ್ರ ವ್ಯಾಮೋಹಕ್ಕೆ ರೂಪಕವನ್ನಾಗಿ ಬಳಸಿಕೊಂಡು ಸಮಾಜಕ್ಕೆ ಹೆತ್ತವರಿಗೆ ಒಂದು ಉತ್ತಮ ಸಂದೇಶ ನೀಡುವ ದಾರಿಯಲ್ಲಿ ಕವಿತೆ ಸಾಗುತ್ತದೆ. ಧೃತರಾಷ್ಟ್ರ ದೈಹಿಕವಾಗಿ ಕುರುಡನಾಗಿದ್ದ ಆದರೆ ನಾವು ಮಾನಸಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿಯೂ, ನೈತಿಕವಾಗಿಯೂ ಕೂಡ ಅಂಧರಾಗಿದ್ದೇವೆ ಎಂಬುದರ ಅರಿವು ಮೂಡಿಸುವ ಆಶಯ ಈ ಕವಿತೆಯದು.

ಧೃತರಾಷ್ಟ್ರ ನಿಗೆ ಪುತ್ರ ವ್ಯಾಮೋಹ ಮೇಲೆ ಮೈಮನಗಳನ್ನು ಆವರಿಸಿದ್ದರೆ ನಮಗೆ ಅಜ್ಞಾನದಿಂದ ಅತಿಯಾಸೆ, ಮೋಸ, ವಂಚನೆ, ಅನ್ಯಾಯ ಜಾತೀಯತೆ, ಕ್ರೌರ್ಯ ಮುಂತಾದ ಮೌಢ್ಯಗಳು ನಮ್ಮನ್ನು ಕಣ್ಣಿದ್ದು ಕುರುಡಾಗಿಸಿವೆ ಎನ್ನುವ ಮೂಲಕ ಆ ಪೊರೆ ಕಳಚಬೇಕೆಂಬುದು ಕವಿಯ ಮಹದಾಸೆಯಾಗಿದೆ.ಆ ಮೂಲಕ ನಮ್ಮ ಅಂತರಂಗದ ಕಣ್ಣುಗಳನ್ನು ತೆರೆದು ಸಮಾಜವನ್ನು ನೋಡಬೇಕು. ಆಗ ಮಾತ್ರ ನಮ್ಮ ಮುಂದೆ ನಡೆಯುವ ವಿದ್ಯಮಾನಗಳು ನಮಗೆ ಪಾರದರ್ಶಕವಾಗಿ ಕಾಣಲು ಸಾಧ್ಯ ಎಂದು ಕವಿ ಬಯಸುತ್ತಾರೆ. ದೃತರಾಷ್ಟ್ರನಂತೆ ಸ್ವಾರ್ಥಿಗಳಾಗಿ ಸ್ವಾರ್ಥ ಸಾಧನೆಗಾಗಿ ತರೇವಾರಿ ವೇಷ ತೊಟ್ಟು ಅಮಾಯಕ ಜನರನ್ನು , ಸಜ್ಜನರನ್ನು ವಂಚಿಸಿದ ಪರಿಯನ್ನು ಕವಿತೆ ಹೊತ್ತು ತಂದಿದ್ದು ಮನುಜನ ಜಾಣ ಕುರುಡುತನವನ್ನು ವ್ಯಂಗ್ಯವಾಗಿ ಕವಿತೆ ವಿಡಂಬನೆ ಮಾಡುತ್ತಾ ಸಾಗುತ್ತದೆ.

ದುಷ್ಟರ ಸಂಹಾರಕ್ಕೆ ಭಗವಂತನೇ ಧರೆಗಿಳಿದು ಬರಬೇಕಂತೆ. ಧರೆಯ ಜನರೆಲ್ಲ ಮಾನವರೂಪದ ರಾಕ್ಷಸರೆ ಆಗಿರುವಾಗ ಯಾರನ್ನು ಸಂಹಾರಕ್ಕೆ ಕರೆತರಬೇಕು ಎಂದು ಕವಿ ಪ್ರಶ್ನಿಸುತ್ತಾರೆ. ಇಲ್ಲಿ ಮನುಷ್ಯ ತನ್ನ ಉದ್ದೇಶ ಈಡೇರಿಸಿಕೊಳ್ಳಲು ಯಾವ ರೀತಿಯ ಕೀಳು ಮಟ್ಟಕ್ಕಾದರೂ ಇಳಿಯಬಲ್ಲ ಎಂಬುದನ್ನು ಓದುಗರ ಮುಂದಿಡುವ ಪ್ರಯತ್ನ ಈ ಕವಿತೆಯಾಗಿದೆ.

ಒಟ್ಟಾರೆ ಬಹುರೂಪಿ, ಬಹುವೇಷ ತೊಟ್ಟ ಗೋಸುಂಬೆಗಳಾದ ಮಾನವನ ಕುರುಡುತನವನ್ನು ಬಗೆದಷ್ಟು ಜನರು ಈ ಬಗ್ಗೆ ವೈಚಾರಿಕವಾಗಿ ಚಿಂತಿಸಿ ತಪ್ಪುಗಳಿಂದ ಹೊರಬಂದು ಮುಚ್ಚಿದ ಆಂತರಿಕ ದೃಷ್ಟಿಯನ್ನು ತೆರೆದು ಮಾನವೀಯ ನೆಲೆಯಲ್ಲಿ ಸಮಾಜವನ್ನು ಸ್ವಾಸ್ತ್ಯವಾಗಿ ಕಟ್ಟಬೇಕು ಎಂಬುದು ಈ ಕವಿತೆಯ ಆಶಯವಾಗಿದೆ.

ಕವಿತೆಯ ಶೀರ್ಷಿಕೆ

ಈ ಶೀರ್ಷಿಕೆಯು ಕವಿತೆಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಇಲ್ಲಿ ಕವಿಯು ಧೃತರಾಷ್ಟ್ರನ ಮಗನ ಮೇಲಿನ ವ್ಯಾಮೋಹದ ಕುರುಡನ್ನು ಪ್ರಸ್ತುತ ವಿದ್ಯಮಾನಕ್ಕೆ ಹೋಲಿಸಿ ಹೇಳುವಲ್ಲಿ ಶೀರ್ಷಿಕೆ ಸತ್ಯವೆನಿಸದಿರದು.

ಕವಿತೆಯ ವಿಶ್ಲೇಷಣೆ ಕವಿತೆ

ದೃತರಾಷ್ಟ್ರನಂತ ಅಂದತ್ವ

ಕುರುಡು ಧೃತರಾಷ್ಟ್ರ ನತದೃಷ್ಟನಲ್ಲವೇ ಅಲ್ಲ

ಸಾರಿ ಸಾರಿಹೇಳುತ್ತೇನೆ…!!

ಅವನೇ ನಿಜವಾದ ಅದೃಷ್ಟಶಾಲಿ….

ಕಣ್ಣಿದ್ದೂ ಕುರುಡನಲ್ಲವೇ ನಾನಿಲ್ಲಿ…”

ಇಲ್ಲಿ ಕವಿ ದೈಹಿಕ ಅಂಧತ್ವ ಮತ್ತು ಬೌದ್ಧಿಕ ಅಂಧತ್ವಗಳ ನಡುವೆ ಹೋಲಿಕೆ ಮಾಡುತ್ತಾರೆ. ಅದಕ್ಕಾಗಿ ಪೌರಾಣಿಕ ಪಾತ್ರದಲ್ಲಿ ಹುಟ್ಟು ಕುರುಡನಾದ ಧೃತರಾಷ್ಟ್ರನನ್ನು ಮತ್ತು ಕಂಗಳಿದ್ದು ಕುರುಡಾಗಿರುವ ನಮ್ಮಗಳನ್ನು ಸಮೀಕರಿಸುತ್ತಾ ಸಾಗಿದ್ದಾರೆ. ದೇವರು ಎಲ್ಲ ಅಂಗಾಂಗಗಳನ್ನು ಕೊಟ್ಟ ಮನುಷ್ಯ ಅದೃಷ್ಟಶಾಲಿಯೆಂದು ಬೀಗುತ್ತೇವೆ.  ಯಾವುದಾದರೂ ಒಂದು ಅಂಗ ಊನವಾದರೆ ದುರದೃಷ್ಟವಂತ ಎಂದೆಲ್ಲಾ ಅನುಕಂಪ, ಸಹಾನುಭೂತಿ ತೋರುತ್ತೇವೆ. ಅಂತಹುದೇ ಒಂದು ಕರುಣಾಜನಕ ಸ್ಥಿತಿ ಧೃತರಾಷ್ಟ್ರನಿಗೂ. ಆದರೆ ಇಲ್ಲಿ ಕವಿಯು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಕುರುಡನಾಗಿ ಹುಟ್ಟಿರುವ ದೃತರಾಷ್ಟ್ರ ನತದೃಷ್ಟನಲ್ಲ ಎಂದು ಸಾರಿ ಸಾರಿ ಹೇಳುತ್ತಾ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುತ್ತಾರೆ .ಅದಕ್ಕೆ ಕವಿಯು ನೀಡುವ ಕಾರಣ ನಿಜಕ್ಕೂ ಕಣ್ಣಿದ ನಮಗೆಲ್ಲ ನಾಚಿಕೆಗೇಡಿತನ  ತರಿಸುತ್ತದೆ.

ಧೃತರಾಷ್ಟ್ರ ಕಣ್ಣಿಲ್ಲದೆ ಏನನ್ನು ನೋಡಲಿಲ್ಲ, ನಾವು ಕಣ್ಣುಗಳಿದ್ದರೂ ಸರಿಯಾಗಿ, ನ್ಯಾಯಯುತವಾಗಿ, ಪ್ರೀತಿಯ ಮನದಿಂದ, ಅಂತರಂಗದ ಕಣ್ಣುಗಳನ್ನು ತೆರೆದು ಮನುಷ್ಯನನ್ನು, ಅವನಲ್ಲಿರುವ ಸದ್ವಿಚಾರ ಸನ್ನಡತೆಯನ್ನು ಗುರುತಿಸಲಿಲ್ಲ. ನಮ್ಮ ಕಣ್ಣುಗಳು ಅನ್ಯಾಯ ಅನಾಚಾರ ಭ್ರಷ್ಟತೆ ಮೋಸ ಕಪಟ ವಂಚನೆಗಳಿಗೆ ಬಲಿಯಾಗಿ ಒಳಿತನ್ನು ಗುರುತಿಸದೆ ಸನ್ಮಾರ್ಗದಲ್ಲಿ ನಡೆಯದೆ ಅಂಧರಾಗಿ ವರ್ತಿಸುತ್ತಿದ್ದೇವೆ. ಹಾಗಾದರೆ ಧೃತರಾಷ್ಟ್ರನಿಗೂ ನಮಗೂ ನಮಗೂ ಏನು ವ್ಯತ್ಯಾಸವಿಲ್ಲ. ಈ ನಮ್ಮ ಎಲ್ಲಾ ಅನಾಚಾರಗಳನ್ನು ನೋಡಿದಾಗ ಇದೆಲ್ಲ ನೋಡಲು ಸಾಧ್ಯವಾಗದ ದೃತರಾಷ್ಟ್ರನೆ ಅದೃಷ್ಟಶಾಲಿಯೆಂದು ಕವಿ ಮನವು ಆಲಾಪಿಸುತ್ತದೆ.

ಕಣ್ಣಿದ್ದರೇನು ಬಂತು ಒಳಗಣ್ಣು ಮುಚ್ಚಿರಲು?

ಏನು ನೋಡಿದೆ, ಎಷ್ಟು ಅರಿತೆ..?

ಅನ್ಯಾಯ ನೋಡಿಯೂ ಕಾಣದಂತಿದ್ದೇನೆ.

ನನ್ನ ಕೈ ನಾನೇ ಹಿಸುಕಿ ಮಿಸುಕಾಡಿದ್ದೇನೆ,

ಹೇಡಿಯಂತೆ.,ಮೂಕನಂತೆ.

ಅತ್ತ ಗಾಂಧಾರಿಯೂ ಅಲ್ಲ..

ಇತ್ತ ಧೃತರಾಷ್ಟ್ರನೂ ಅಲ್ಲ..!

ಕಂಡರೂ ಹೇಳಲರಿಯೆ, ನಿಮ್ಮದು ನೈಜವಲ್ಲ.. ವೇಷ..

ಏಕೆಂದರೆ, ನಾ ಧರಿಸಿದ್ದೂ ಅದನ್ನೇ..!!”

ನಮಗೆ ಎರಡು ಕಣ್ಣುಗಳಿವೆ. ಆದರೆ ನಮ್ಮೊಳಗಿನ ಒಳಗಣ್ಣು ಮುಚ್ಚಿದೆ. ಇದರಿಂದ ನಾವು ಜಗತ್ತಿನಲ್ಲಿರುವ ಯಾವುದೇ ಅನ್ಯಾಯವನ್ನು ಸರಿಪಡಿಸದೇ ನಮ್ಮ ಮುಂದೆ ಅದರ ಮೆರವಣಿಗೆ ಸಾಗುತ್ತಿದ್ದರೂ, ಕಂಡರೂ ಕಾಣದಂತೆ ಪಕ್ಕಕ್ಕೆ ಸರಿಯುತ್ತೇವೆ. ಇದಕ್ಕೆಲ್ಲ ಕಾರಣ ನಮ್ಮೊಳಗಿನ ಸ್ವಾರ್ಥ.ಅದನ್ನು ಪ್ರಶ್ನಿಸಲು ಮುಂದೆ ಹೋದರೆ ಸರಿಪಡಿಸಲು ಪ್ರಯತ್ನಿಸಬೇಕು. ಆಗ ಆ ದಾರಿಯಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಒಂದಷ್ಟು ಜನರ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ. ದುರ್ಮಾರ್ಗಿಗಳನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂದು ಭಾವಿಸಿ ಅಸಹಾಯಕರಂತೆ ತನ್ನ ಕೈ ತಾನೇ ಹಿಸುಕಿ ಕೊಳ್ಳುತ್ತಾ ಬಾಯಿ ಇದ್ದರೂ ಪ್ರತಿಭಟಿಸಿದೆ ಕೆಟ್ಟದ್ದನ್ನು ಬೆಂಬಲಿಸುತ್ತಾ ಸಭ್ಯನ ಮುಖವಾಡ ಧರಿಸಿ ನೈಜ ವೇಷವನ್ನು ಮರೆಮಾಚಿಕೊಂಡು ಬದುಕುತ್ತೇವೆ ಎಂದು ಕವಿ ಕ್ರೋಧ ಭಾವ ತಾಳುತ್ತಾರೆ.

ಗಾಂಧಾರಿ ಮತ್ತು ದೃತರಾಷ್ಟ್ರನಂತೆ ನಾವೇನು ಎದುರಿಗೆ ನಡೆಯುವ ವಿದ್ಯಮಾನಗಳನ್ನು ಗ್ರಹಿಸದೆ ಏನನ್ನು ಅರಿಯದ ಅಂದರಲ್ಲ. ನಮ್ಮ ಸಮ್ಮುಖದಲ್ಲಿ ಘನಗೋರ ಪಾಪ ಕೃತ್ಯಗಳು ನಡೆಯುತ್ತಿದ್ದರೂ, ಗಾಂಧಾರಿ ಕಣ್ಣುಗಳಿಗೆ ಪಟ್ಟಿಕಟ್ಟಿಕೊಂಡರೆ, ದೃತರಾಷ್ಟ್ರನ ಕಣ್ಣಿಗೆ ಪೊರೆ ಆವರಿಸಿ ನೋಡಲು ಆಗುತ್ತಿರಲಿಲ್ಲ. ನಾವು ಕೂಡ ಇಂದು ಹಾಗೆ ವರ್ತಿಸುತ್ತಿರುವುದು ನಮ್ಮ ಅಂಧತ್ವದ ಪ್ರತೀಕವಾಗಿದೆ.

ಕವಿಯ ಈ ವಿಡಂಬನೆ ವಾಸ್ತವಿಕ ಬದುಕಿಗೆ ಬಹಳ ಹತ್ತಿರವಿದೆ. ತಪ್ಪು ಮಾಡಿದವರು ಮಾತ್ರ ತಪ್ಪಿತಸ್ಥನಲ್ಲ. ಅದನ್ನು ಬೆಂಬಲಿಸುವವರು, ಪ್ರೋತ್ಸಾಹಿಸುವವರು, ಕಂಡರೂ ಕಾಣದಂತೆ ನಾಟಕ ಮಾಡುವವರೂ, ಕೂಡ ಶಿಕ್ಷೆಗೆ ಅರ್ಹನಾಗುತ್ತಾನೆ‌ ಎಂಬುದು ಕವಿಯ ಮನದಿಂಗಿತ. ಮನುಷ್ಯ ತನಗೆ ಕಂಡ ಸತ್ಯವನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾನೆ .ಇತರ ದಾಕ್ಷಿಣ್ಯಕ್ಕೆ ಒಳಗಾಗಿ ತನ್ನ ಸ್ವಾಭಿಮಾನವನ್ನು ಬಲಿಕೊಟ್ಟು ಎಲ್ಲರೊಳಗೊಬ್ಬನಾಗಿರಲು ಬಯಸುತ್ತಾನೆಯೇ ಹೊರೆತು ಸತ್ಯಾನ್ವೇಷಣೆಯಲ್ಲಿ ಅನ್ಯಾಯವನ್ನು ಪ್ರತಿಭಟಿಸುವಲ್ಲಿ ದೈರ್ಯದ ಹೆಜ್ಜೆ ಇಡಲಾರ.

ಬಾಳೇ ಒಂದು ಮೋಹಕ ಪಾಶ

ಬದುಕಲಾಗಿಲ್ಲಿ ತರಾವರಿ ವೇಷ

ಅನ್ಯರಿಗಾಗಿ ಮೊಗದಲ್ಲಿ ಕೃತಕ ತೋಷ

ಹುಡುಕಿದೆ, ಬಹಳ ದೋಷವಿದೆ ಅನ್ಯರಲ್ಲಿ….

ನನ್ನ ನಾನರಿಯಲೋ ಸೋತೆ!….ಜಾಣಗುರುಡು.”

ನಾವು ಈ ಮೋಹಪಾಶದಲ್ಲಿ ಬಂದಿಯಾಗಿದ್ದೇವೆ. ಭ್ರಮೆಯಲ್ಲೇ ಬದುಕುತ್ತಿದ್ದೇವೆ. ಅಸತ್ಯವನ್ನು ಸತ್ಯವೆಂದು ನಂಬುತ್ತೇವೆ. ಜಗದ ಮಾಯೆಗೆ ಒಳಗಾಗಿ ಸರಿ-ತಪ್ಪುಗಳನ್ನು ತೀರ್ಮಾನಿಸ ದಷ್ಟು ಮರುಳಾಗಿದ್ದೇವೆ. ಅದಕ್ಕಾಗಿಯೇ ನಾವು ತರಾವರಿ ವೇಷ ತೊಡಬೇಕಾಗಿದೆ ಎನ್ನುತ್ತಾರೆ ಕವಿಯು ನಮ್ಮೊಳಗೆ ಕೊಳೆತು ನಾರುವಷ್ಟು ಕೆಟ್ಟದ್ದು ತುಂಬಿರುತ್ತದೆ. ಆದರೂ ಅದನ್ನು ಮರೆಮಾಚಿ ಬೇರೆಯವರ ಮುಂದೆ ಸುಗಂಧ ಲೇಪಿಸಿಕೊಂಡು ಮೊಗದಲ್ಲಿ ಬಲವಂತದ, ಕೃತಕವಾದ ಆನಂದ ಖುಷಿ ತುಂಬಿಕೊಂಡು ಎಲ್ಲವೂ ಸರಿ ಇದೆ ಏನು ಕೊರತೆ ಇಲ್ಲವೆಂದು ಸಾಬೀತುಪಡಿಸಿ ಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ.

ಹಾಗಾಗಿ ನಾವು ನಮ್ಮೊಳಗಿನ ಹುಳುಕುಗಳನ್ನು ಕಾಣದಂತೆ ಪರದೆ ಕಟ್ಟಿಕೊಂಡು, ಅನ್ಯರಲ್ಲಿ ಇರುವ ತಪ್ಪುಗಳನ್ನು ಹುಡುಕುತಿರುತ್ತೇವೆ ಎಂದು ಅಸಮಾಧಾನ ಪಡುತ್ತಾರೆ. ಬೇರೆಯವರ ತಪ್ಪುಗಳನ್ನು ಹುಡುಕಿ ತೋರುವ ನಮಗೆ ನಮ್ಮ ತಪ್ಪುಗಳು ಅರಿವಿಲ್ಲವೆಂದು ಅರ್ಥವಲ್ಲ. ನಮ್ಮನ್ನು ನಾವು ಅರಿಯಲು ಸೋತಿಲ್ಲ ಆದರೆ ಜಾಣ ಕುರುಡುತನ ತೋರುತಿದ್ದೇವೆ ಎಂದು ಕವಿ ಪ್ರತಿಪಾದಿಸುತ್ತಾರೆ.

ದಶಾವತಾರವಂತೆ ದುಷ್ಟ ಸಂಹಾರಕ್ಕೆ

ಕರೆದರೆ ಓಗೊಟ್ಟು ಓಡಿ ಬರುವನಂತೆ

ಎಲ್ಲಾ ಅಸುರ ವೇಷಗಳು ನನ್ನೊಳಗೇ ಇರುವಾಗ

ಸಂಹಾರಕ್ಕೆ ನಾ ನಿನ್ನ ಹೇಗೆಕರೆಯಲಿ ಹೇಳು..”

ಭಕ್ತರ ಭಕ್ತಿಯಿಂದ ಪ್ರಾರ್ಥಿಸಿದಾಗ ದುಷ್ಟರ ಸಂಹಾರಕ್ಕೆ ಆ ಭಗವಂತ ಧರೆಗಿಳಿದು ಬರುತ್ತಾನೆ. ಒಬ್ಬೊಬ್ಬ ಅಸುರವರನ್ನು ಸಂಹರಿಸಲು ಶ್ರೀಹರಿ ಒಂದೊಂದು ಅವತಾರವನ್ನು ಎತ್ತಿ ಬಂದು ಭಕ್ತರನ್ನು ಪೊರೆಯುತ್ತಾನೆ. ಆದರೆ ಇಂದು ನಮ್ಮೆಲ್ಲರಲ್ಲೂ ಒಬ್ಬೊಬ್ಬ ಅಸುರ ಇದ್ದಾನೆ. ನಮ್ಮ ಮನದ ತುಂಬಾ ರಾಕ್ಷಸ ಗುಣ ರಾರಾಜಿಸುತ್ತಿದೆ. ಹಾಗಿರುವಾಗ ನಾನು ಆ ಭಗವಂತ ನನ್ನ ಹೇಗೆ ಭಿನ್ನವಿಸಲಿ. ನಾನು ಹೊರಜಗತ್ತಿಗೆ ನರನಂತೆ ಕಂಡರೂ ನನ್ನೊಳಗೆ ರಾಕ್ಷಸ ಗುಣಗಳಿವೆ. ಆದರೆ ಅದು ಯಾರಿಗೂ ಕಾಣಿಸದ ಕಾರಣ ನಾನು ಸುರನಂತೆ ವೇಷಧರಿಸಿರುವೆ. ನನಗೆ ಸತ್ಯ ಗೊತ್ತಿದೆ. ನಾನು ತೊಟ್ಟಿರುವುದು ಕೇವಲ ಸೋಗಿನ ಮುಖವಾಡ ಎಂದು. ಹಾಗಿರುವಾಗ ನಾನು ದುಷ್ಟ ಸಂಹಾರಕ್ಕೆ ಆ ದೇವನನ್ನು ಹೇಗೆ ಬರಮಾಡಿಕೊಳ್ಳಲಿ. ಒಂದು ವೇಳೆ ಅವನು ಬಂದರೆ ಅವನ ಮೊದಲ ಬಲಿ ನಾನಾಗುವೆ ಆದ್ದರಿಂದ ನಾನು ಭಗವಂತನನ್ನು ಕರೆಯಲಾರೆ ಎನ್ನುತ್ತಾರೆ ಕವಿಗಳು.

ಇಲ್ಲಿ ಕವಿ ಅವರೊಬ್ಬರ ಬಗ್ಗೆ ಮಾತನಾಡುತ್ತಿಲ್ಲ. ಸಾರ್ವತ್ರಿಕವಾಗಿ ಮನುಷ್ಯರಲ್ಲಿರುವ ಕೆಟ್ಟ ಹಾಗೂ ದುಷ್ಟ ಗುಣಗಳನ್ನು ಕುರಿತು ಚರ್ಚಿಸುತ್ತಾರೆ. ಮನುಷ್ಯರ ಮನಸ್ಸು ಪ್ರೀತಿ ಪ್ರೇಮ ಸ್ನೇಹ ಸೌಹಾರ್ದತೆ ಶಾಂತಿ ಪ್ರಾಮಾಣಿಕತೆಯ ಗುಣಗಳಿರುವ ದೇವಾಲಯ ಆಗಬೇಕು. ಆದರೆ ಇಂದು ಮದ ಮತ್ಸರ ಅನ್ಯಾಯ ಅನಾಚಾರ ಕ್ರೌರ್ಯ ರಕ್ತಪಾತಗಳೆಂಬ ರಾಕ್ಷಸತ್ವದ ಗುಣಗಳ ಆಗರವಾಗಿವೆ ಎಂದು ವಿಷಾದಭಾವ ವ್ಯಕ್ತಪಡಿಸುತ್ತಾರೆ.

ಶಕುನಿಯೂ ಧರಿಸಿದ್ದ ಆಪ್ತ ನೆಂಟನ ವೇಷ

ಇತಿಹಾಸ ವಾಸ್ತವ ಭವಿಷ್ಯ ಯಾವುದೂ ಹೊರತಲ್ಲ

ಎಲ್ಲಾ ಒಂದೇ

ಗೋಸುಂಬೆಗಳೇ ಸಮಯಕ್ಕೆ ತಕ್ಕಂತೆ.

ನಕ್ಕುಬಿಡುವೆ..!!

ಬೇಯಬೇಕಲ್ಲವೇ ಇಲ್ಲಿ ನನ್ನ ಬೇಳೆ..?!

ಕಾಗೆ ಬಂಗಾರವಾದರೇನು,

ಹೊಳಪಷ್ಟೇ ಮುಖ್ಯ ಲೋಕಕ್ಕೆ…”

ಈ ಜಗತ್ತು ಬಹು ವೇಷಿಗಳ ನಾಟಕರಂಗ. ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂದರ್ಭೋಚಿತವಾಗಿ ನಾನಾ ವೇಷಗಳನ್ನು ತೊಟ್ಟು ಬದುಕಿನ ರಂಗಮಂದಿರದಲ್ಲಿ ಅಭಿನಯಿಸುತ್ತಾರೆ, ಎನ್ನುತ್ತಾ ಕವಿ ಇದಕ್ಕೆ ಕಾಲ ಸೀಮೆಗಳ ಹಂಗು ಇಲ್ಲವೆಂದು ನಿರೂಪಿಸುತ್ತಾ ಶಕುನಿಯ ನಿದರ್ಶನ ಕೊಡುತ್ತಾರೆ.

ಶಕುನಿಗೆ ಕೌರವರ ಮೇಲೆ ಆಗಾಧವಾದ ಕೋಪ ಆಕ್ರೋಶ ಆವೇಶಗಳಿದ್ದರೂ ಅವೆಲ್ಲವನ್ನೂ ಮರೆಮಾಚಿ ಮೇಲ್ನೋಟಕ್ಕೆ ತನ್ನ ತಂಗಿ ಗಾಂಧಾರಿ, ಭಾವ ದೃತರಾಷ್ಟ್ರ ಮತ್ತು ಸೋದರಳಿಯ ದುರ್ಯೋಧನ ಮೇಲೆ ಅಪಾರವಾದ ಪ್ರೇಮವಿರುವಂತೆ ನಟಿಸುತ್ತಾ ಅವರ ಹಿತೈಷಿಯಂತೆ ನಡೆದುಕೊಳ್ಳುತ್ತಾ ಅವರೊಂದಿಗೆ ಇದ್ದು ಅವರನ್ನು ಸರ್ವನಾಶ ಮಾಡಲು ಪ್ರಯತ್ನಿಸುವ ಬಗೆಯನ್ನು ಪ್ರಸ್ತಾಪಿಸುತ್ತಾರೆ. ಇದು ಗತಕಾಲದ ಘಟನೆಯೆಂದು ನಿರ್ಲಕ್ಷಿಸುವುದು ಬೇಡ. ಪ್ರತಿ ಕಾಲಘಟ್ಟದಲ್ಲೂ ಶಕುನಿಯಂತೆ ಸಾವಿರಾರು ಕುತಂತ್ರಿಗಳು ಹುಟ್ಟಿ ನಮ್ಮೊಳಗೆ ಒಬ್ಬರಾಗಿ ಹಿತ ಶತೃತ್ವ ಸಾಧಿಸುತ್ತಾರೆ ಎಂದು ಕವಿ ಜನರ ವೇಷ ಕಳಚುತ್ತಾರೆ.

ಗೋಸುಂಬೆಗಳು ಎಷ್ಟು ಸುಂದರವಾಗಿ ವರ್ಣ ರಂಜಿತ‌ ಎನಿಸಿದರೂ ಅವುಗಳ ಬಣ್ಣ ಸ್ಥಿರವಲ್ಲ. ಅವು ಬಣ್ಣ ಬದಲಿಸುತ್ತವೆ .ಹಾಗೆ ವೇಷ ತೊಟ್ಟವರು ಸಂದರ್ಭಕ್ಕೆ ತಕ್ಕಂತೆ ನಟಿಸುವವರು ಅವರು ನಗಲೇ ಬೇಕಲ್ಲವೇ. ಕಾರಣ ಅವರ ಬೇಳೆ ಬೇಯಿಸಿಕೊಳ್ಳಲು ಅಂದರೆ ಉದ್ದೇಶದ ಕಾರ್ಯಸಾಧನೆಗಾಗಿ ಹೊಂಚು ಹಾಕುವರು ಎನ್ನುವ ಕ್ರೋಧ ಕವಿಯದು.

ಈ ಲೋಕ ಎಂದಿಗೂ ಅಪ್ಪಟ ಬಂಗಾರವನ್ನು ಬಯಸುವುದಿಲ್ಲ. ಅದಕ್ಕೆ ಕಾಗೆಬಂಗಾರವಾದರೂ ಸಾಕು ಅದು ಹೊಳೆಯಬೇಕಷ್ಟೇ ಎನ್ನುತ್ತಾರೆ. ಅಂದರೆ ಇಲ್ಲಿ ಜನರು ಒಳಮನಸ್ಸಿನಲ್ಲಿ ಏನಾದರು ದೂರಾಲೋಚನೆಯ ಮಾಡುತ್ತಿದ್ದರು ಪರವಾಗಿಲ್ಲ. ಅದು ಯಾರಿಗೂ ತಿಳಿಯುವುದಿಲ್ಲ. ಎಲ್ಲರ ಮುಂದೆ ಸದ್ಗುಣಿಗಳಂತೆ ಬಂಡಾರ ತೊಟ್ಟರೆ ಸಾಕು ಎನ್ನುವ ಕವಿ ಸಮಯಸಾಧಕರ ಅವಕಾಶವಾದಿತನವನ್ನು ಕಟುವಾಗಿ ಟೀಕಿಸುತ್ತಾರೆ.

ತೊಡಬೇಕು ಬಹು ಬಗೆಯ ವೇಷಗಳ ಪ್ರತಿನಿತ್ಯ.

ಬದುಕಬೇಕಲ್ಲವೇ? ಆಸೆಗಳ ಕ್ಷಾತ್ರತನವ ಹೊತ್ತು..!?

ಅಂತಿಮದಲ್ಲೂ ಸಾಗಲೇಬೇಕು..,

ನನ್ನ ನಿಜ ವೇಷವನ್ನು ನಾ ಕಳೆದುಕೊಂಡು,

ನನ್ನ ಹೊರಗಣ್ಣನ್ನು ಅವನು ವೇಷ ಸಾಕೆಂದು ಮುಚ್ಚಿದಾಗ.”

ನಾವು ಪ್ರತಿ ನಿತ್ಯದ ಬದುಕಿನಲ್ಲಿ ವೇಷಗಳನ್ನು ತೊಟ್ಟೆ ತೊಡುತ್ತೇವೆ. ಕಾರಣ ಪ್ರಾಮಾಣಿಕವಾಗಿ ಬದುಕಿ ತೋರಿಸುವ ಕಲೆ ನಮ್ಮಲ್ಲಿಲ್ಲ. ನಮ್ಮದೇನಿದ್ದರೂ ತೋರಿಕೆ ಜೀವನ ಎನ್ನುವ ಕವಿ ಆಸೆಗಳ ಮೂಟೆಯನ್ನು ಹೊತ್ತು ಮಿತಿಯಿಲ್ಲದೆ, ಅಂಕುಶವಿಲ್ಲದೆ ಬೇಕಾಬಿಟ್ಟಿ ಮನಸ್ಸನ್ನು ಹರಿಯಬಿಟ್ಟು ಬದುಕುತ್ತಿದ್ದೇವೆ .ಅದು ಎಷ್ಟೇ ಆದರೂ ಮಾಯಾಮೃಗವಲ್ಲವೇ ಕೈಗೆ ಸಿಗದು ಅದನ್ನು ಹಿಡಿಯಲು ನಾವು ಅದನ್ನು ಮೀರಿಸುವ ವ್ಯಾಘ್ರಗಳ ವೇಷ ತೊಟ್ಟು ಸಾಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಾವು ಒಮ್ಮೆ ವೇಷ ತೊಟ್ಟರೆ ಮುಗಿಯಿತು ನಾವೆಂದಿಗೂ ಅದನ್ನು ಕಳಚಿ ಹೊರಜಗತ್ತಿನ ಮುಂದೆ ಬೆತ್ತಲಾಗಲು ಬಯಸುವುದಿಲ್ಲ. ಒಂದು ವೇಷದ ಜೊತೆ ಮತ್ತೊಂದು ವೇಷವನ್ನು ಸೇರಿಸುತ್ತಾ ನಮ್ಮ ಜೀವನದ‌ ಅಂತ್ಯ ಕಾಲದವರೆಗೂ ಅದನ್ನು ಅನಿವಾರ್ಯವಾಗಿ ಪಾಲಿಸಬೇಕಾಗುತ್ತದೆ. ಅದರ ಹೊರತಾಗಿ ಬೇರೆ ಯಾವ ಮಾರ್ಗವೂ ಇರುವುದಿಲ್ಲ ಎನ್ನುವ ಕವಿ ಈ ತೊಟ್ಟ ವೇಷ  ಮರೆಯಲಾಗುವುದಿಲ್ಲ ಅವನು ಈ ಜಗತ್ತು ಹೋಗುವವರೆಗೂ ಅವನ ಸಂಗಾತಿಯಾಗಿ ಇರುತ್ತದೆ ಎಂದು ಹೇಳುತ್ತಾರೆ‌

ಆದುದರಿಂದ ಇಲ್ಲಿ ಕವಿಯು ವೇಷ ತೊಡುವ ಮುನ್ನ ಜನರಿಗೆ ಆದರೆ ಹಿಂದಿನ ಸಾಧಕ-ಬಾದಕಗಳನ್ನು ತಮ್ಮ ಕವಿತೆಯ ಮೂಲಕ ಅರ್ಥೈಸುತ್ತಾ ಜನರಿಗೆ ವೇಷದಂತೆ ಎಚ್ಚರಿಕೆಯ ಗಂಟೆ ಬಾರಿಸುತ್ತಾರೆ.

ಕವಿತೆಯಲ್ಲಿ ನಾ ಕಂಡ ಕವಿ ಬಾವ

ಈ ಕವಿತೆಯಲ್ಲಿ ಕವಿಯ ಸಾಮಾಜಿಕ ಹೊಣೆಗಾರಿಕೆಯ ಪ್ರತಿಬಿಂಬವಾಗಿ ಮೂಡಿಬಂದಿದೆ. ಸಮಾಜದಲ್ಲಿನ ದುಷ್ಟ ಗೋಮುಖ ವ್ಯಾಘ್ರಗಳ ಬಗ್ಗೆ ಕವಿ ಕ್ರೋಧವನ್ನು ತಮ್ಮ ಬರಹದ ಮೂಲಕ ವ್ಯಕ್ತಪಡಿಸುತ್ತಾರೆ. ಮನುಷ್ಯ ಬೌದ್ಧಿಕವಾಗಿ ಅಂಧನಾದಾಗ ಉಂಟಾಗುವ ಕ್ರೂರತೆಯ ಅನಾವರಣವನ್ನು ಮಾಡುತ್ತಾ ಸಾಗಿದ್ದಾರೆ. ಎಲ್ಲವನ್ನು ಕುರುಡಾಗಿ ನಂಬುತ್ತಾ ತನ್ನ ಮಗನ ತಪ್ಪುಗಳನ್ನು ಪ್ರೋತ್ಸಾಹಿಸುತ್ತಾ ಒಳನೋಟದ ಅಂತಃಸತ್ವವನ್ನು ಕಳೆದುಕೊಂಡು ಇಂದಿನ ಜನರ ಮುಂದೆ ಕವಿ ವ್ಯಂಗ ಭಾವದಲ್ಲಿ ವಿಡಂಬನೆ ಮಾಡುತ್ತಾರೆ.

ಕುತಂತ್ರಿಯಾದ ಶಕುನಿಯಂತ ಜನರು ನಮ್ಮ ಮುಂದೆ ಬಹಳಷ್ಟಿದ್ದರೂ ನಾವು ಅದನ್ನು ಗುರುತಿಸಲಾಗದು. ದುರ್ಯೋಧನನಂತೆ ಅವರ ಮಾತುಗಳನ್ನು ಸುಲಭವಾಗಿ ನಂಬಿ ಸತ್ಯ ಪ್ರಾಮಾಣಿಕತೆಯಿಂದ ದೂರಸರಿದು ಮುಖವಾಡಗಳಾಗಿ ಬಾಳುತ್ತೇವೆ ಎಂಬುದು ಇದರಿಂದ ತಿಳಿಯುತ್ತದೆ.

ಇಲ್ಲಿ ಕವಿಗೆ ಭಾಷೆಯ ಹಿಡಿತ ತುಂಬಾ ಚೆನ್ನಾಗಿ ದಕ್ಕಿದ್ದು ಅದನ್ನು ಸಮರ್ಥವಾಗಿ ಪೌರಾಣಿಕ ಪಾತ್ರಗಳ ಮೂಲಕ ಸಮಾಜದ ಅಂಧತ್ವವನ್ನು ನಿರೂಪಿಸಲು ಸಮರ್ಥವಾಗಿ ಬಳಸಿಕೊಂಡಿರುವುದು ಕವಿಯ ಸಾಧನೆಯಾಗಿದೆ.

ಇಲ್ಲಿ ಕವಿ ಕುರುಡುತನದ ಪರಮಾವಧಿ ಕೇವಲ ಇತಿಹಾಸದಲ್ಲಿ ಮಾತ್ರ ಅಲ್ಲ ಅದು ಕಾಲಚಕ್ರದಲ್ಲಿ ಭೂತ,ವರ್ತಮಾನ,ಭವಿಷ್ಯತ್ ಕಾಲಗಳಲ್ಲೂ ನಿರಂತರ ಕಾಡುವ ಅನಿಷ್ಟವೆಂದು ಪ್ರತಿಪಾದಿಸುತ್ತ ಅದಕ್ಕೆ ಪರಿಹಾರ ಬೇಕೆಂಬ ಹಂಬಲ ಹೊಂದಿರುವ ಧೃತರಾಷ್ಟ್ರ ಅಂಧತ್ವದಿಂದ ಮಾಡಿದ ತಪ್ಪಿಗೆ ಕೈಕೈ ಹಿಸುಕಿಕೊಳ್ಳುತ್ತಿದ್ದ. ನಾವು ಹಾಗೆ ಮಾಡಿದರೆ ನಮ್ಮ ತಪ್ಪಿಗೆ ಪರಿಹಾರವಾದರೂ ಏನು ಎಂದು ಪ್ರಶ್ನಿಸುತ್ತಾರೆ.ಇಲ್ಲಿ ಕವಿಯ ಅಂತಃಕರಣ ಭಾವ ಹಾಗೂ ಸಂವೇದನಾಶೀಲ ಗುಣವು ಎದ್ದುಕಾಣುತ್ತದೆ. ಜಗದ ವೇಷಗಳಿಗೆ ಇವರ ಲೇಖನಿ ಬಿಕ್ಕಳಿಸುತ್ತದೆ.

ಇಲ್ಲಿ ಕವಿಯ ಅನುಭವದ ಮೂಸೆಯಿಂದ ಜೀವಂತಿಕೆ ಪಡೆದ ಕವಿತೆಯನ್ನು ಭೂತಕಾಲದ ಘಟನೆಗಳನ್ನು ವರ್ತಮಾನದಲ್ಲಿ ತಳಕು ಹಾಕಿಕೊಂಡು ಭವಿಷ್ಯದ ಎಚ್ಚರಿಕೆಯ ಗಂಟೆಯಾಗಿ ಸಮಾಜಕ್ಕೆ ದಾರಿತೋರುವ ನಂದಾದೀಪದಂತೆ ರೂಪಿಸಿದ್ದಾರೆ.

ನೈತಿಕ ಅಧಃಪತನಕ್ಕೇ ರೋಸಿಹೋದ ಕವಿ ಭಾವ ಮಾನವೀಯ ಮೌಲ್ಯಗಳ  ಉಚ್ಛ್ರಾಯ ಸ್ಥಿತಿಯನ್ನು ಆಶಿಸುತ್ತದೆ. ತುಂಬಾ ಕಾಳಜಿ ಮತ್ತು ಕಳಕಳಿಯ ಮೂಲಕ  ಕಾವ್ಯ ಹೊಸೆದ ಪರಿ ಅಭಿನಂದನಾರ್ಹವಾಗಿದೆ.

ಸ್ನೇಹಿತರೆ ನಿಮ್ಮೆಲ್ಲರಿಗೂ ಇಂದು ನಮ್ಮೊಳಗಿನ ಅಂಧತ್ವದ ಅರಿವನ್ನು ಈ ಕವಿತೆ‌ ಮೂಡಿಸಿದೆ ಎಂದು ಭಾವಿಸುತ್ತಾ ನಿಮ್ಮ ಕಣ್ಣಿಗೆ ಕಟ್ಟಿರುವ ದೂರ ಸರಿಸಿ ಪ್ರಜ್ಞಾಪೂರ್ವಕವಾಗಿ ಬದುಕುವಿರಿ ಎಂದು ಭಾವಿಸಿ ಮುಂದಿನ ವಾರ ನಾನು ತರುವ ಮತ್ತೊಂದು ಹೊಸ ಕವಿ ಕಾವ್ಯ ವಿಚಾರವನ್ನು ಓದುವ ನಿರೀಕ್ಷೆಯೊಂದಿಗೆ ನನ್ನ ಇಂದಿನ ಬರಹವನ್ನು ಧನ್ಯವಾದಗಳೊಂದಿಗೆ

ಮುಗಿಸುತ್ತಿದ್ದೇನೆ.


ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

One thought on “

  1. ನನ್ನ ಕವನಕ್ಕೆ ಅತ್ಯುತ್ತಮ ವಿಮರ್ಶೆ ನೀಡಿ, ಅರ್ಥಪೂರ್ಣವಾಗಿಸಿದಿರಿ. ಮನಃಪೂರ್ವಕ ಧನ್ಯವಾದಗಳು ಮೇಡಂ

Leave a Reply

Back To Top