ಅಮರುಶತಕ

ಪುಸ್ತಕ ಸಂಗಾತಿ

ಅಮರುಶತಕ

ಅಮರುಶತಕ

ಅನುವಾದ :ರಾಮಪ್ರಸಾದ್ ಕೆ  ವಿ.(ಸಂಸ್ಕೃತ ದಿಂದ)

ಪ್ರಕಟಣೆ :

ಸಾಹಿತ್ಯ ಅಕಾದೆಮಿ

ಭಾಷಾಂತರ ವಿಭಾಗ

ಬೆಂಗಳೂರು.

ಬೆಲೆ ; ರೂ 185/-

ಪುಟ ;  137.

ಸಾಹಿತ್ಯಾಸಕ್ತರೇ,

ಅಮರುಕನ ಹೆಸರಿನ ಮೊದಲ ಪ್ರಸ್ತಾಪ ಕ್ರಿ.ಶ 800 ರ ವೇಳೆಯಲ್ಲಿ ವಾಮನ ನೆಂಬ ಲಾಕ್ಷಣಿಕನೋರ್ವ ಬರೆದ ‘ಕಾವ್ಯಾಲಂಕಾರ ಸೂತ್ರ’ ಎಂಬ ಪುಸ್ತಕದಲ್ಲಿ ಬರುವುದರಿಂದ, ಈತ ಎಂಟನೆಯ ಶತಮಾನಕೂ ಹಿಂದಿನ ಸಂಸ್ಕೃತ ಕವಿ ಎಂದು ವಿದ್ವಾಂಸರ ಅಭಿಪ್ರಾಯ. ಅಂದಿನ ಜನ ಸಾಮಾನ್ಯರ ಬದುಕಿನ ಪ್ರೀತಿ ಪ್ರೇಮ ಸರಸ ವಿರಸಗಳ ಚಿತ್ರಣಗಳನು ಕಟ್ಟಿಕೊಡುವ ಒಂದು ಮುಕ್ತಕ ಕಾವ್ಯವಿದು.

ಒಂದೊಂದು ಮುಕ್ತಕವೂ ಸ್ವತಂತ್ರಪೂರ್ಣ. ಯಾವುದೂ ಯಾವುದರ ಮುಂದುವರಿಕೆಯಲ್ಲ. ಸುಮಾರು 174 ಮುಕ್ತಕಗಳು ಲಭ್ಯವಿದ್ದರೂ ಸಹ, ಅನುವಾದಕರು ಖಚಿತವಾಗಿ ಅಮರುಕನದೇ ಎನುವಂತಹ ನೂರು ಮುಕ್ತಕಗಳನು ಸರಳ ಕನ್ನಡದಿ ಸುಲಭವಾಗಿ ಓದಲು ಅನುವಾಗುವಂತೆ ಅನುವಾದಿಸಿದ್ದಾರೆ. ಪ್ರತಿ ಮೂಲ ಸಂಸ್ಕೃತದ ಮುಕ್ತಕದ ಸಹಿತ ಕನ್ನಡಾಕ್ಷರದ ಸಂಸ್ಕೃತ ಪದ್ಯ, ಹಾಗೂ ಲೇಖಕರ ಕನ್ನಡಾನುವಾದ, ಪ್ರತಿ ಪುಟದ ಕೆಳಗೆ ಅನುವಾದಕರ ಟಿಪ್ಪಣಿಯನ್ನೂ ನೀಡಿರುತ್ತಾರೆ.

ಅಮರುಕನ ಪ್ರತಿಯೊಂದು ಪದ್ಯವನೂ ಓದಿದಾಗ ಒಂದೊಂದು ತೆರನಾದ ಅನುಭವವನ್ನು ನೀಡುತ್ತದೆ. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ಅಗಲಿಕೆಯ ಆತಂಕ ದುಗುಡ ದುಮ್ಮಾನಗಳ ಎಲ್ಲಾ ಭಾವನೆಗಳನ್ನು ಮೂಡಿಸುವಲ್ಲಿ ಅಮರುಕನಿಗೆ ಅಮರುಕನೇ ಸಾಟಿ ಎಂದು ವಿದ್ವಾಂಸರ ಅಭಿಪ್ರಾಯ.

ಗಜಲ್ ರಚನೆಕಾರರಿಗೆ ಒಳ್ಳೆಯ ಮಾಹಿತಿ ಆಗಬಹುದೆಂಬ ಏಕೈಕ ಉಧ್ಧೇಶ ನನ್ನದು. ನಾನು ವಿಮರ್ಶಕ/ ಮುನ್ನಡಿಕಾರನಲ್ಲ. ಕೇವಲ ಕನ್ನಡ ಪರಿಚಾರಕ.

ಅಮರುಕನ ಮಕ್ತಕಗಳು ಲಾಲಿತ್ಯಪೂರ್ಣ ಶುದ್ದ ಸಂಸ್ಕೃತದಿ ಇದ್ದು, ಅಂದಿನ ಪ್ರಸಿದ್ದ ಸಂಸ್ಕೃತ ವಿದ್ವಾಂಸರಾದ ವಿದ್ಯಾಕರ, ಜಲ್ಹಣ , ವಲ್ಲಭದೇವರುಗಳ ಹಲವಾರು ಕೃತಿಗಳಲ್ಲಿ ಉಲ್ಲೇಖಿತವಾಗವೆಯಂತೆ.

ಕ್ರಿ.ಶ 1410 ರಲ್ಲಿ ವಿಜಯನಗರ ಸಂಸ್ಥಾನಕೆ ಸೇರಿದ ‘ದೇವರಾಯ’ ಎಂಬಾತನೂ, ಕ್ರಿ.ಶ 1665ರಲ್ಲಿ ಮೈಸೂರು ರಾಜರಾಶ್ರಿತ ‘ಚಿಕ್ಕೋಪಾದ್ಯಾಯ ಎಂಬ ಮಹನೀಯರು ಕನ್ನಡಕ್ಕೆ ಅನುವಾದ ಮಾಡಿರುವರಾದರೂ ಪ್ರತಿಗಳು ಲಭ್ಯವಿಲ್ಲ.

ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿದ್ದ ಶಾಂತರಾಜ ಪಂಡಿತರು “ಅಮರುಕ ಟೀಕೆ” ಎಂಬ ಗ್ರಂಥ ಲಭ್ಯವಿದೆಯಂತೆ.

ಈಚಿನ ಕಾಲಕ್ಕೆ ಗಂಗಾಧರ ಶಾಸ್ತ್ರಿ ಯವರ ಗದ್ಯಾನುವಾದ, ಎಸ್.ವಿ. ಪರಮೇಶ್ವರ ಭಟ್ಟರ ಪದ್ಯರೂಪದ ಅನುವಾದ ವಿತ್ತಂತೆ.

ಈ ಕೃತಿ ನನಗೆ ಕಾಕತಾಳೀಯ ವೆಂಬಂತೆ ಶ್ರೀ ಶಂಕರಾಚಾರ್ಯರ ಜಯಂತಿಯಂದು ಲಭ್ಯವಾಯಿತು.

ಅಮರುಕನಿಗೂ ಶಂಕರರಿಗೂ ಸಂಬಂಧಿಸಿದ ಒಂದು ದಂತ ಕತೆ ಇದೆ.

ಮಂಡನ ಮಿಶ್ರರೆಂಬ ಪಂಡಿತರಿಗೂ ಶಂಕರಾಚಾರ್ಯರಿಗೂ ಸಂವಾದ ನಡೆದಾಗ, ತೀರ್ಪುಗಾರರಾದ ಮಂಡನ ಮಿಶ್ರರ ಪತ್ನಿ ‘ಉಬಯ ಭಾರತಿ’ಯವರು, ಸಾಂಸಾರಿಕ ಜೀವನಕೆ ಸಂಬಂಧಿಸಿದ ಪ್ರಶ್ನೆ  ಕೇಳಿದಾಗ,ಆದಿಶಂಕರರು ಉತ್ತರಿಸಲಾಗದೆ ಕಾಲಾವಕಾಶ ಪಡೆದು, ಅಕಾಲ ಮರಣಕ್ಕೆ ತುತ್ತಾದ ಅಮರುಕ ನೆಂಬ ಕಾಶ್ಮೀರಿ ರಾಜನ ದೇಹಕ್ಕೆ ಪರಕಾಯ ಪ್ರವೇಶಮಾಡಿ,ದಾಂಪತ್ಯ ಜೀವನದ ಅನುಭವಗಳಿಸಿ ಹಿಂದಿರುಗಿ ಸರಿ ಉತ್ತರಗಳ ನೀಡಿದ ಪ್ರಸಂಗವಿದೆ. ಆ ಅಮರುಕ ಈತನೇ ಎಂಬ ನಂಬಿಕೆಯಿದೆ. ಕಾಲಮಾನ ಸ್ವಲ್ಪ ಹೊಂದುವುದರಿಂದ ನಂಬುತ್ತಾರೆ.

ಎನೇ ಆದರೂ ಏಳನೆಯ ಶತಮಾನದ ಸಂಸ್ಕೃತ ಸಾಹಿತ್ಯಕೃತಿ,ಕನ್ನಡಾನುವಾದದಿ ಲಭ್ಯವಿರೆ ಸಾಹಿತ್ಯಾಸಕ್ತರಿಗೆ ಸಂತೋಷದ ವಿಚಾರ. ನಾನು  ತರೆಸಿದ್ದು ಅಮೂಲ್ಯ ಪುಸ್ತಕ  ಬೆಂಗಳೂರು. ಪೋನ್ಮಾಡಿದರೆ ಕಳುಹುವರು.

ತಮ್ಮ ಅವಗಾಹನೆಗಾಗಿ ಕೆಲವು ಪುಟಗಳ ಫೋಟೋ ನೀಡಿರುವೆ.

ವಂದನೆಗಳೊಂದಿಗೆ,


 ಬಾಗೇಪಲ್ಲಿ

Leave a Reply

Back To Top