ಅಂಕಣ ಸಂಗಾತಿ

ಚಾಂದಿನಿ

ವಾಕ್-ಟಾಕಿಂಗೋ ಇಲ್ಲಾ ಟಾಕ್-ವಾಕಿಂಗೋ
ಚಂದ್ರಾವತಿಯವರ ಚಾಂದಿನಿ ಅಂಕಣದ ಹೊಸಬರಹ

ವಾಕ್-ಟಾಕಿಂಗೋ

ಇಲ್ಲಾ

ಟಾಕ್-ವಾಕಿಂಗೋ

Indian Senior Woman Female On Morning Walk Along With Dog Stock Photo -  Download Image Now - iStock

ನಮ್ಮ ಕಾಂಪೌಂಡ್‌ನಲ್ಲಿ ನಾಲ್ಕೈದು ಮನೆಗಳು. ಸಂಜೆಯ ವೇಳೆಗೆ ನಮ್ಮೆಲ್ಲರದು ವಾಕಿಂಗ್ ನಡೀತದೆ. ನಾವೆಲ್ಲ ಎಲ್ಲೆಲ್ಲಿ ಹೇಗೇಗೆ ಯಾವ್ಯಾವ ವೇಷದಲ್ಲಿದ್ದೇವೆಯೋ ಹಾಗಾಗೆ ಅಲ್ಲಲ್ಲೇ ವಾಕಿಂಗ್. ನಾನು ಹೆಚ್ಚಾಗಿ ಮೇಲೆ ಟೆರೇಸಲ್ಲಿ. ನಮ್ಮ ಮನೆ ಓನರ್ ಚಿಕ್ಕಮ್ಮ ಕೆಳಗಡೆ ಅಂಗಳದಲ್ಲಿ. ಪಕ್ಕದ ಮನೆ ಹುಡುಗಿ ಒಮ್ಮೊಮ್ಮೆ, ಮೇಲೆ, ಕೆಲವೊಮ್ಮೆ ಕೆಳಗೆ, ಸ್ವಲ್ಪ ಹೊತ್ತಲ್ಲಿ ಸೈಕಲ್ ಓಡಿಸುವ ಮಗುವಿನೊಂದಿಗೆ ರಸ್ತೆಯಲ್ಲಿ ಹೇಗೇಂತ ಇಲ್ಲ. ಅಲ್ಲಿ ಇಲ್ಲಿ ಓಡಾಡಿಕೊಂಡು. ಕೆಳಗಡೆ ಮನೆಲಿರುವ ಮಗು ಮತ್ತು ಅವಳಮ್ಮ ಸೊಳ್ಳೆ ಹೊಡೆಯುತ್ತಾ ಜಗಲಿಯಲ್ಲಿ.

ಈ ಮಧ್ಯೆ ಪೂರ್ವಕ್ಕಿರುವ ಮನೆಯ ಅಮ್ಮ ನೀರೊಲೆಗೆ ಬೆಂಕಿಹಾಕುತ್ತಾ, ಇಲ್ಲವಾದರೆ ತೆಂಗಿನಕಾಯಿ ಸಿಪ್ಪೆ ತೆಗೆಯುತ್ತಾ, ಅಥವಾ ಅಂಗಳ ಗುಡಿಸುತ್ತಾ ನಡುನಡುವೆ ಓಡಾಡುತ್ತಾ ಪುಟ್ಟಪುಟ್ಟ ವಾಕಿಂಗ್. ಅವರ ವಯಸ್ಸಾದ ಪತಿಯವರದ್ದು ರಭಸದ ವಾಕಿಂಗ್. ಮಧ್ಯೆಮಧ್ಯೆ ಯಾರಾದರೂ ಕೇಳುಗರಿದ್ದರೆ ಅವರ ಸರ್ವೀಸ್ ವೇಳೆಗಿನ ರೋಚಕ ಕತೆಗಳು. ಪಶ್ಚಿಮಕ್ಕಿರುವ ಮನೆಯ ಅಕ್ಕ ಅವರ ಪತಿಯೊಂದಿಗೆ ಹೂವು ಕೊಯ್ಯುತ್ತಾ, ಬೆಕ್ಕಿಗೆ ತಿಂಡಿ ಕೊಡುತ್ತಾ, ಮನೆ ಎದುರು ಬಂದು ನಿಂತು ಅಂಬಾ ಎಂದು ಕೂಗುವ ದನವನ್ನು ಮಾತನಾಡಿಸುತ್ತಾ, ವಾಕ್ ಮಾಡುತ್ತಾ…… ಹೀಗೆ ಎಲ್ಲರೂ ಅವರವರ ಶಕ್ತ್ಯಾನುಸಾರ ವಾಕಿಂಗೇ ವಾಕಿಂಗು. ಒಮ್ಮೊಮ್ಮೆ ಈ ವಾಕಿಂಗ್ ಜತೆಯಲ್ಲಿ ಟಾಕಿಂಗೂ ಇರ್ತದೆ. ಕೆಲವೊಮ್ಮೆ ನಮ್ಮ ವಾಕಿಂಗು ಟಾಕಿಂಗಲ್ಲೇ ಮುಗಿದು ಹೋಗುತ್ತೆ. ಹಾಗಾಗಿ ಇದನ್ನು ವಾಕ್-ಟಾಕಿಂಗೋ ಇಲ್ಲಾ ಟಾಕ್-ವಾಕಿಂಗೋ ಅಂತ ಸ್ಪಷ್ಟವಾಗಿ ನಿರ್ಧರಿಸಲು ಸ್ವಲ್ಪ ಕಷ್ಟವಿದೆ.

ಲಾಕ್-ಡೌನ್ ಟೈಮಲ್ಲಿ ಈ ಸಂಜೆಯ ಕಾರ್ಯಕ್ರಮ ಬಹಳ ಗೌಜಿಯಲ್ಲಿ ನಡೆಯುತ್ತಿತ್ತು. ಟ್ಯೂಶನ್ – ಹೋಂ ವರ್ಕ್ ಇಲ್ಲದ ಮಕ್ಕಳು. ಕೆಲಸ ಇಲ್ಲದ ದೊಡ್ಡವರು. ಅತ್ತಲಿಂದ ಇತ್ತಲಿಂದ ಎಲ್ಲ ಸೇರಿಕೊಂಡು ಫುಲ್ಲ್ ಗಲಗಲ. ಒಂದು ಕಡೆಯಿಂದ ಶೆಟ್ಲ್, ಇನ್ನೊಂದು ಕಡೆಯಿಂದ ಕೇರಂ. ಮತ್ತೊಂದೆಡೆ ಲೂಡಾ. ಅದರ ಮಧ್ಯೆ ಮೋಸದಾಟ ಅನ್ನುವ ದೂರಿನೊಂದಿಗೆ ಚಿಕ್ಕ ಮಕ್ಕಳ ಅಳು. ಸ್ವಲ್ಪ ದೊಡ್ಡ ಮಕ್ಕಳ ತುಂಟ ನಗು. ಒಟ್ಟಿನಲ್ಲಿ ಹೊತ್ತು ತಿರುಗಿ ಸಾಯಂಕಾಲವಾಗಿ ಕತ್ತಲಾಗುವ ತನಕ ಬೇರೆಯೇ ರಂಗು. ನಮಗೆಲ್ಲ ಕೊರೋನಾ ಅಭ್ಯಾಸ ಆಗಿ, ಕೊರೋನಾಗೆ ನಾವು ಅಭ್ಯಾಸ ಆಗಿ ಲಾಕ್‌ಡೌನ್, ವೀಕೆಂಡ್ ಕರ್ಫ್ಯೂ ಎಲ್ಲ ಇತಿಹಾಸಕ್ಕೆ ಸೇರಿ ಮರಳಿ ಮಾಮೂಲಿ ಸ್ಥಿತಿ ಆದ ಮೇಲೆ ನಮ್ಮ ವಾಕಿಂಗೂ ಹಿಂದಿನಂತೆ ಹಳೆಯ ಫ್ಯಾಶನ್ನಿಗೆ ಮರಳಿದೆ.

ಹಾಗಾಗಿ ಯಾವುದರತ್ತಲೂ ಗಮನ ಇಲ್ಲದಂತೆ, ಕಿವಿಗೆ ಬ್ಲೂಟೂತ್ ಸಿಕ್ಕಿಸಿ ಹಾಡೋ, ಪ್ರವಚನವೋ ಕೇಳುತ್ತಾ ಗಡದ್ದಿನಿಂದ ಕೈ ಬೀಸಿ, ಕಾಲು ಕುಣಿಸಿ, ಬೆವರು ಬಿಚ್ಚುವಂತೆ ನಾನು ನಡೆಯುವುದುಂಟು. ಆಗ ಯಾರಾದರೂ ನನ್ನನ್ನು ಕರೆದರೆ, ಬಯ್ದರೆ, ಬೊಬ್ಬೆ ಹೊಡೆದರೆ, ಗುಂಡು ಹೊಡೆದರೆ, ಊರು ಮೇಲೆ ಊರೇ ಬಿದ್ದರೂ ನನಗೆ ಗೊತ್ತಾಗುವುದಿಲ್ಲ. ಇವಳಿಗೇನಾಯ್ತು, ಬೆಳಗ್ಗೆ ಸರಿಯಾಗೇ ಇದ್ದಳಲ್ಲಂತಾ ಅನುಮಾನದಿಂದ ನನ್ನತ್ತ ನೋಟ ಹರಿಸುವವರೂ ಇದ್ದಾರೆ. “ಅಬ್ಬ ನಿಮ್ಮನ್ನು ಕೂಗಿ ಕೂಗಿ ಸಾಕಾಯ್ತು” ಅಂತ ಯಾರಾದರೂ ಎದು ಬಂದು ನಿಂತರೆ, ಮೆಲ್ಲನೆ ಕಿವಿಯಿಂದ ಬ್ಲೂಟೂತ್ ತೆಗೆದು, “ಎಂತಾ ಏನಾದರೂ ಹೇಳಿದ್ರಾ” ಅಂತ ನಾನು ಮುಖವನ್ನು ಮುಂಚಾಚಿ ಜೋರಾಗಿ ಕೇಳುವಾಗ, “ಹೋ ಇದನ್ನು ಕಿವಿಗೆ ಹಾಕೊಂಡಿದ್ದೀರಾ, ಇನ್ನೆಲ್ಲಿಗೆ ಕೇಳುವುದೂ” ಅನ್ನುತ್ತಾ ಮತ್ತೆ ಮುದದಿಂದ ಹೇಳಲು ಆರಂಭಿಸುತ್ತಾರೆ.

ನಮ್ಮ ಮನೆಯ ಎಡಬದಿಗೆ ಬಟ್ಟೆ ಒಗೆಯುವ ಕಲ್ಲು ಇದೆ. ಹೆಚ್ಚಾಗಿ ನಮ್ಮ ವಾಕಿಂಗ್ ವೇಳೆಯ ವೀಟಿಂಗ್ ಪಾಯಿಂಟ್ ಈ ಕಲ್ಲು. ಕಿಚನ್ ಕ್ಯಾಬಿನೆಟ್ ಇದ್ದಂತೆ ನಮ್ಮದು ‘ಒಗಿವಕಲ್ಲು ಕ್ಯಾಬಿನೆಟ್’. ಹೆಚ್ಚಾಗಿ ಮಧ್ಯಾಹ್ನದ ಅಡುಗೆ, ಸಾರು-ಪಲ್ಯಗಳ ಬಗ್ಗೆ ಡಿಸ್ಕಶನ್. ಯಾವ ತರ್ಕಾರಿ, ಹೇಗೆ ಕತ್ತರಿಸಿದ್ದು, ಹೇಗೆ ಮಾಡಿದ್ದು. ಅದಕ್ಕೆ ಮಸಾಲೆ ಎಂತ. ಅರೆದದ್ದಾ, ಹಸಿಮೆಣಸು ಕತ್ತರಿಸಿ ಹಾಕಿ, ಕಾಯಿ ತುರಿದು ಹಾಕಿದ್ದಾ, ಈರುಳ್ಳಿ ಉದ್ದಕ್ಕೆ ಕತ್ತರಿಸುವುದಾ ಇಲ್ಲ ಚಿಕ್ಕಚಿಕ್ಕದಾ,  ಒಗ್ಗರಣೆ ಎಂತಾ …. ಹೀಗೆ. ಇದರೊಟ್ಟಿಗೆ ಇತರ ಮದುವೆ, ಸಭೆ – ಸಮಾರಂಭ, ಭಜನೆ, ಜಾತ್ರೆ, ಭಾಗವತ, ಭೂತದ ಕೋಲ, ಹೊಸ ಡ್ರೆಸ್, ಬ್ಲೌಸ್ ಸರಿ ಹೊಲಿಯದೆ ಹಾಳುಮಾಡಿ ಹಾಕಿದ ಟೈಲರ್, ವಿಷ್ಣು ಸಹಸ್ರನಾಮ…… ಹೀಗೆ ನಮ್ಮ ಮೀಟಿಂಗ್ ಎಜೆಂಡಾಗೆ ‘ಸ್ಕೈ ಈಸ್ ದಿ ಓನ್ಲೀ ಲಿಮಿಟ್’!

ಅದೊಂದು ಸಂಜೆ ನಮ್ಮ ಚಿಕ್ಕಮ್ಮ ಎಲ್ಲರ ಮುಖ ಕಾಣುವಂತೆ ಒಗಿವ ಕಲ್ಲಿನ ಮೇಲೆ ಕುಳಿತಿದ್ದರು. ಸಭಾಪತಿಯಂತೆ. ನಾನು ಮೇಲೆ ಟೆರೇಸಲ್ಲಿ ಇದ್ದೆ, ಆಚೆ ಮನೆ ಅಮ್ಮ ಅವರ ಕಾಂಪೌಂಡಲ್ಲಿ ಇದ್ದರು. ಈಚೆ ಮನೆ ಹುಡುಗಿ ಕೆಳಗೆ ಅಂಗಳದಲ್ಲಿ. ಕೆಳಗೆ ಮನೆ ತಾಯಿಮಗು ಅವರ ಮನೆ ಜಗಲಿಯಲ್ಲಿ. ನಮ್ಮ ಕ್ಯಾಬಿನೆಟ್ ಚಾಲ್ತಿಯಲ್ಲಿತ್ತು. ನಾವೆಲ್ಲ ಡೀಪಾದ ಡಿಸ್ಕಶನ್‌ನಲ್ಲಿದ್ದೆವು. ಅಷ್ಟೊತ್ತಿಗೆ ಮನೆ ಒಳಗೆ ಮೊಬೈಲ್ ಒತ್ತುತ್ತಿದ್ದ ಚಿಕ್ಕಪ್ಪ ಎಲೆ-ಅಡಿಕೆ ತಿನ್ನಲು ವಿಳ್ಯದೆಲೆ ಕೊಯ್ಯುವ ಸಲುವಾಗಿ ಮೊಬೈಲ್ ಪಕ್ಕಕ್ಕಿಟ್ಟು ಮನೆಯಿಂದ ಹೊರ ಬಂದರು. ಈ ಒಗಿವಕಲ್ಲು ಇರುವುದು ತೆಂಗಿನ ಮರದ ಬುಡದಲ್ಲಿ. ತೆಂಗಿನ ಮರದಲ್ಲಿ ಒಣಗಿದ ಮಡಲು (ಹೆಡಲು), ಒಣಗಿದ ತೆಂಗಿನಕಾಯಿ ನೇತಾಡುತ್ತಿತ್ತು. ನಾವು ಯಾರೂ ಇದನ್ನು ಅಷ್ಟಾಗಿ ಗಮನಿಸಿರಲಿಲ್ಲ. ಚಿಕ್ಕಪ್ಪ ಬಂದವರೇ, ಚಿಕ್ಕಮ್ಮನಿಗೆ “ಆ ಕಲ್ಲಲ್ಲಿ ಕೂತದ್ದಾ, ಅಷ್ಟೂ ಗೊತ್ತಾಗುದಿಲ್ವಾ, ಬೇರೆಲ್ಲಿ ಕೂತ್ಕೊಳ್ಳಲು ಜಾಗ ಇಲ್ವಾ…. ಮಡಲೋ ತೆಂಗಿನ ಕಾಯೋ ತಲೆ ಮೇಲೆ ಬಿದ್ದರೆ ನಂಗೆ ಗಂಜಿಗೆ (ಊಟಕ್ಕೆ) ಗತಿಯಿಲ್ಲದಾದೀತು” ಅನ್ನುತ್ತಾ ಕಾಳಜಿ ಮಿಶ್ರಿತ ಪ್ರೀತಿಯಿಂದ ಗದರುತ್ತಾ ವೀಳ್ಯದೆಲೆ ಕೊಯ್ಯಲು ಆರಂಭಿಸಿದರು. ಚಿಕ್ಕಪ್ಪ ಹೀಗೆ ಹೇಳುತ್ತಿರುವಂತೆ ಚಿಕ್ಕಮ್ಮ ಹೋ ಹೌದಲ್ಲಾಂತ ಹೇಳುತ್ತಾ ಕಲ್ಲಿನಿಂದ ಪಟಕ್ಕನೆ ಮೇಲೆದ್ದರು. ನಾನು ಎಂತ ಚಿಕ್ಕಪ್ಪಾ ನೀವು ಹಾಗೆ ಹೇಳುವುದಾ ……. ಬ್ಲಾ….. ಬ್ಲಾ…. ಬ್ಲಾ….. ಬ್ಲಾ… ಅಂತ ಹೇಳಿದೆ. ಅಷ್ಟೊತ್ತಿಗೆ ಸೂರ್ಯ ಕಂತಿಯಾಗಿತ್ತು. ಹಾಗಾಗಿ ನಮ್ಮ ಕ್ಯಾಬಿನೆಟ್ ಕಲಾಪ ‘ಸಿನೆ ಡೈ (Sine Die)’ ಆಗಿ ಮುಂದೆ ಹೋಯಿತು. ವಾಪಾಸ್ ನಾವು ನಮ್ಮನಮ್ಮ ಬಿಲಕ್ಕೆ ಸೇರಿಕೊಂಡೆವು.

ವಾಕಿಂಗಲ್ಲಿ ಎಷ್ಟ್ ಪರ್ಸಂಟ್ ವಾಕಿಂಗ್ ಮತ್ತು ಎಷ್ಟ್ ಪರ್ಸೆಂಟ್ ಟಾಕಿಂಗ್ ಅಂತ ಹೇಳುವಂತಿಲ್ಲ. ಅದ್ ಹೇಗೇ ಇದ್ದರೂ ವಾಕಿಂಗ್ ಶೂ ಕಳಚಿದ ಮೇಲೆ ಬಂದು ಒಂದು ಐದು ನಿಮಿಷ ಕುರ್ಚಿಯಲ್ಲಿ ಕುತ್ತ ದೆವ್ವದಂತೆ ಕುಳಿತು ಮೊಬೈಲ್ ನೋಡಿ ನಂತರ ಎದ್ದು ಬೇರೆ ಕೆಲಸದಲ್ಲಿ ತೊಡಗುವುದು ನನ್ನ ರುಟೀನ್. ಹಾಗೆ ಕುಳಿತುಕೊಳ್ಳುವಾಗ ಆಯಾ ದಿನದ ಮಾತು-ಕತೆ, ಒಗಿವ ಕಲ್ಲಿನ ಕ್ಯಾಬಿನೆಟ್ ಮೀಟಿಂಗ್ ವಿಷಯ ಎಲ್ಲ ತನ್ನಷ್ಟಕೆ ಮನದಲ್ಲಿ ‘ಸಮ್ಮಪ್’ ಆಗಿ ಮುಖದಲ್ಲೊಂದು ಒಂದು ಸಣ್ಣ ನಗು. ಅಂತೆಯೇ ಆ ದಿನವೂ ಬಂದು ಕುಳಿತಿದ್ದೆ. ಚಿಕ್ಕಪ್ಪನ ಡಯಲಾಗ್ “ಗೆಂಜಿಗೆ ಗೆತಿ ಇಲ್ಲದಾದು” ಸುಳಿಯಿತು. ನಂಗೂ ಅನಿಸಿತು, ಹೌದಲ್ಲಾ….. ನಂಗೆ ಸಾರಿಗೆ ಗತಿ? (ಯಾಕೆಂದರೆ ಹೆಚ್ಚಾಗಿ ನನಗೆ ಸಾರು, ತಿಂಡಿ ತಿನಿಸುಗಳನ್ನು ಕೊಟ್ಟು ಸಲಹುವುದು ಚಿಕ್ಕಮ್ಮನೇ ಅಲ್ಲವೇ)


ಚಂದ್ರಾವತಿ‌ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

Leave a Reply

Back To Top