
ಅಂಕಣ ಸಂಗಾತಿ
ಚಾಂದಿನಿ
ಮನೆಯೊಳಗೆ ಫ್ರಿಜ್ಜೋ; ಫ್ರಿಜ್ಜೊಳಗೆ ಮನೆಯೋ….
ಕಳೆದ ಬಾರಿ ನನ್ನಲ್ಲಿಗೆ ಬಂದಿದ್ದ ಅಕ್ಕನ ಮಗಳು ಪುಟ್ಟಕ್ಕ ನನ್ನ ಫ್ರಿಜ್ಜ್ ಓಪನ್ ಮಾಡಿದಳು. ಸಹಿಸಲಾರದ ಶೆಕೆಯ ವೇಳೆಗೆ ಫ್ರಿಜ್ಜ್ ಬಾಗಿಲು ಓಪನ್ ಮಾಡಿ ಅದರೊಳಗೆ ಮುಖ ಹುದುಗಿಸಿ ನಿಲ್ಲುವುದು ಅವಳ ಬಹಳ ಪ್ರಿಯವಾದ ಕ್ರಿಯೆ. ಅವಳು ಬಾಗಿಲು ತೆಗೆಯುವಾಗ ದಡಬಡನೆ ಹಲವಾರು ಸಾಮಾನುಗಳು ಕೆಳಕ್ಕುದುರಿದವು. ಎಬ್ಬಾ ಇದು ಎಂತಾಂಟೀ ಎಷ್ಟೊಂದು ಸಾಮಾನು ನಿಮ್ಮಲ್ಲೀಂತ ಅಚ್ಚರಿಯ ರಾಗ ಎಳೆದಳು.
ನನ್ನದು ಒಂದು ಸಾಮಾನ್ಯವಾದ ಚಿಕ್ಕ 175 ಲೀಟರ್ ಕೆಪಾಸಿಟಿಯ ಫ್ರಿಜ್. ಅದರ ಡೋರಲ್ಲಿ ಹಿಡಿಯುವಷ್ಟು ಕಾಲು ಕೇಜಿ ಅಳತೆಯ ಬೇಳೆ, ಕಡ್ಲೆ, ರಾಜ್ಮಾ, ಹುರುಳಿ, ಅಲಸಂಡೆ ಬೀಜ, ಒಣ ಮೆಣಸು, ಧನಿಯಾ, ಜೀರಿಗೆ…. ಹೀಗೆ ಅಗತ್ಯ ಸಾಮಾನುಗಳು ತುಂಬಿದ್ದವು. ಅದರ ಮಧ್ಯೆ, ಹಾಲು, ಮೊಸರು, ಉಪ್ಪಿನಕಾಯಿ, ಶುಂಠಿ, ನಿಂಬೆಹಣ್ಣು, ಹಸಿ ಮೆಣಸು ಹೀಗೆ ಸ್ವಲ್ಪ ಸ್ವಲ್ಪ… ಅವರ ಮನೆಯಲ್ಲೋ… ಎರಡೆರಡು ಕಿಚನ್. ಹೋದಲ್ಲಿ ಬಂದಲ್ಲಿ, ಗೋಣಿಚೀಲದಲ್ಲಿ, ಡಬ್ಬದಲ್ಲಿ, ಅಟ್ಟದಲ್ಲಿ, ಸ್ಲಾಬ್ ಕೆಳಗೆ ಹೀಗೆ ಎಲ್ಲೆಂದರಲ್ಲಿ ತರಾವರಿ ಸಾಮಾನೋ ಸಾಮಾನು! ಜೀಪಿನಲ್ಲಿ ಲೋಡುಗಟ್ಲೆ ಹೋಗುತ್ತದೆ. ನಾನೋ ಕಾಲ್ ಕೇಜಿ, ನೂರು ಗ್ರಾಂ ಲೆಕ್ಕದಲ್ಲಿ ಮನೆ ದಿನಸಿ ತರುವವಳು. ತುಂಬ ತಂದಿಟ್ಟು ಹುಳ ಸೇರುವಂತೆ ಮಾಡುದೇಕೇ ಬೇಕಾದಾಗ ಫ್ರೆಶ್ ತರಬಹುದಲ್ಲಾ ಎಂಬುದು ನನ್ನ ಲೆಕ್ಕಾಚಾರ. ಒಮ್ಮೆ ದಿನಸಿ ಅಂಗಡಿಗೆ ಹೋಗಿ ಬಿವಿಕೆ ಬ್ರಾಂಡಿನ ಒಂದು ಕೇಜಿ ಅಕ್ಕಿ ಕೊಡಿ ಅಂದೆ. ಬರೀ ಒಂದು ಕೆಜಿ ಅಕ್ಕಿ ಅಂದುದಕ್ಕೆ ಅಲ್ಲಿದ್ದವರೆಲ್ಲ ನನ್ನನ್ನು ಬಹಳ ಕರುಣೆ ಅನುಕಂಪದಿಂದ ನೋಡಿದರು.
ಈ ತಂಗಳ ಪೆಟ್ಟಿಗೆಯಲ್ಲಿ ಇರಿಸಿದ ಆಹಾರ ವಸ್ತುಗಳನ್ನು ಸೇವಿಸಬಾರದು ಎಂಬ ಸಂದೇಶಗಳು ವಾಟ್ಸಾಫ್, ಇಮೇಲ್ ಫಾರ್ವರ್ಡ್‌ಗಳನ್ನೆಲ್ಲ ಓದಿ, ನೋಡಿ ತರಕಾರಿ ಕೊಂಡು ತಂದ ಬಳಿಕ ಫ್ರಿಜ್ಜಲ್ಲಿ ಇರಿಸದೆಯೇ ತಾಜಾವಾಗಿ ತಿನ್ನಬೇಕು ಎಂದು ಹೊರಗೆ ಇರಿಸುವುದು. ಅದುಬೇಕು, ಇದುಬೇಕು ಅಂತ ಕಂಡಕಂಡದ್ದನ್ನೆಲ್ಲ ಹಣಕೊಟ್ಟು ತರುವುದು. ಇವತ್ತೇ ಮಾಡಬೇಕು, ನಾಳೆಗೇ ಮುಗಿಸಬೇಕು ಅಂತ ತಂದರೂ ಒಮ್ಮೆಗೆ ಎಷ್ಟೂ ಅಂತ ಮಾಡಲಾಗುತ್ತದೆ. ಅದಲ್ಲದೆ ಏನಾದರೂ ಯೋಜನೆ ಹಮ್ಮಿಕೊಂಡಾಗಲೇ ಕೆಲಸ ಜಾಸ್ತಿ. ಇಲ್ಲವೇ ಅಕ್ಕ ಏನಾದರೂ ಪಾರ್ಸೆಲ್ ಕಳುಹಿಸುತ್ತಾಳೆ. ಇಲ್ಲವಾದರೆ ಓನರ್ ಚಿಕ್ಕಮ್ಮ ಏನಾದರೂ ಕರೆದು ಕೊಡುತ್ತಾರೆ. ಹಾಗಾಗಿ ಹೊರಗೇ ಇರುವ ತರಕಾರಿ ಬಾಡಿಹೋಗಿ ಸುರುಟಿ ಮುರುಟಲು ಆರಂಭವಾದಾಗ, ಛೇ… ತರಕಾರಿ ಹಾಳಾಗ್ತಿದೆಯಲ್ಲಾಂತ ತೆಗೆದು ಫ್ರಿಜ್ಜೊಳಗೆ ತುರುಕಿ ಬಿಡುವುದು. ಮತ್ತೆ ಯಾವಾಗಲಾದರೂ ನೆನಪಾದಾಗ ತೆಗೆದು ನೋಡಿದರೆ ಅದು ಪದಾರ್ಥ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ನೇರವಾಗಿ ಕಸಕ್ಕೆ ಹೋಗುತ್ತದೆ!
ಒಮ್ಮೆ ಹಾಗಲಕಾಯಿ ತಂದಿದ್ದೆ. ಹಸುರಸುರಾಗಿ ತಾಜಾತಾಜಾವಾಗಿ ನುಲಿಯುತ್ತಿತ್ತು. ಎಂದಿನದೇ ಗೋಳು. ತಂದ ಕೂಡಲೇ ಮೇಲೋಗರ ಮಾಡಲು ಏನೋ ಅಡ್ಡಿ ಆಯ್ತು. ಎರಡು ದಿನ ಕಳೆದ ಬಳಿಕ ನೆನಪಾಗಿ ತೆಗೆದು ಕತ್ತರಿಸಿದರೆ ಒಳಗಡೆ ತುಂಬ ಹುಳಗಳು ಮಿಜಿಮಿಜಿ ಅನ್ನುತ್ತಿವೆ. ಭಯಂಕರ ಹೇಸಿಗೆ ಆಯಿತು ಅದನ್ನು ನೋಡಿ. ಹೇಗೆ ಕತ್ತರಿಸಿದೆನೋ ಹಾಗೇ ಜೋಡಿಸಿ ತಕ್ಷಣ ಒಯ್ದು ತೆಂಗಿನ ಬುಡಕ್ಕೆ ಹಾಕಿದೆ. ನನ್ನ ಚಾಕುವಿಗೆ ಡೆಟ್ಟಾಲ್ ಹಚ್ಚಿ ಎರಡೆರಡು ಬಾರಿ ತೊಳೆದರೂ ಮನಸ್ಸಿಗೆ ಏನೋ ಅಸಮಾಧಾನ. ಒಳ್ಳೆ ಏಸಿ ರೂಮಲ್ಲಿ ಕೂತಂತೆ ಕುಶಿ ಆಗಿರಬೇಕು ಹುಳಗಳಿಗೆ. ಏನೋ ಮಾತಾಡುವಾಗ ಹಾಗಲ ಕಾಯಿ ಒಳಗೆ ಹುಳವಿದ್ದ ಸಂಗತಿ ಹೇಳಿದೆ ಚಿಕ್ಕಮ್ಮನಿಗೆ. ಹಾಗಲ ಕಾಯಿಯಲ್ಲೂ ಹುಳ ಆಗುತ್ತಾ ಅಂತ ನಾನೇ ಒಂದು ಹುಳ ಎಂಬ ಲುಕ್ ಕೊಟ್ರು. ಈಗಿನ ಹಾಗಲ, ಕಿತ್ತಳೆ, ಸೇಬು, ಬಾಳೆಹಣ್ಣು ಎಲ್ಲದರಲ್ಲೂ ಹುಳ ಆಗುತ್ತವೆ. ಆದರೆ ತದ್ವಿರುದ್ಧ ಎಂಬಂತೆ ಸಾಮಾನ್ಯಕ್ಕೆ ಹುಳ ಇರುವ ಕಾಲಿಫ್ಲವರಲ್ಲಿ ಮಾತ್ರ ಹುಳ ಇಲ್ಲ.
ನಾನಿಲ್ಲಿ ಮನೆ ಮಾಡಿದಾಗ ಫ್ರಿಜ್ಜ್ ತಗೊಳ್ಳುವ ವೇಳೆಗೆ ನಂಗ್ಯಾಕೆ ದೊಡ್ಡ ಫ್ರಿಜ್, ಬರೀ ಹಾಲು ಮೊಸರು ಇಡಲಷ್ಟೇ. ಸಣ್ಣದು ಸಾಕು. ದೊಡ್ಡದು ತಗೊಂಡರೆ ಸುಮ್ಮನೆ ಜಾಗ ತಿನ್ನುತ್ತೆ ಅಂತ ಸಣ್ಣದನ್ನೇ ತಂದಿದ್ದೆ. ಈಗ ಅರ್ಜೆಂಟಿಗೆ ಫ್ರಿಜ್ಜೇ ಅನ್ನಪೂರ್ಣೇಶ್ವರಿ. ಆವಾಗೆಲ್ಲ ಸ್ವಲ್ಪ ದೊಡ್ಡ ಪ್ರಿಜ್ಜೇ ತಗೊಂಡು ಬಿಡಬೇಕಿತ್ತು ಅಂತ ಅವಲತ್ತುಕೊಳ್ಳುವುದುಂಟು. ಈ ಕಂಪ್ಲೇಂಟಿಲ್ಲದ ಪಾಪದ ಫ್ರಿಜ್ಜನ್ನು ಏಕಾಏಕೀ ಟರ್ಮಿನೇಟ್ ಮಾಡಲು ಮನಸೊಪ್ಪುವುದಿಲ್ಲ. ಅದು ಯಾವಾಗಲೂ ಫುಲ್ ಲೋಡೆಡ್. ಅದರೊಳಗೆ ಏನೆಲ್ಲ ಉಂಟು ಏನು ಇಲ್ಲ ಅಂತ ಹೇಳಲಸಾಧ್ಯ. ಕೊಬ್ಬರಿ ಕಾಯಿಯಿಂದ ಹಿಡಿದು, ಎಲೆಅಡಿಕೆಗೆ ಹಾಕುವ ಸುಣ್ಣದ ತನಕ ಎಲ್ಲವನ್ನು ತುರುಕಿಬಿಡುವುದು.
ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಇರಿಸಿದ ಮೇಲೆ ಅರ್ಜೆಂಟಿಗೆ ಎಲ್ಲ ಎಳೆದು ಹಾಕುವುದು. ಆಮೇಲೆ ಹಾಗೇ ಮರಳಿ ನೂಕಿ ಬಿಡುವುದು. ಒಂದು ಚೂರೂ ಜಾಗ ಇಲ್ಲದೆ ಫ್ರಿಜ್ಜ್ ಬಸುರಿಯಂತೆ ಯಾವಾಗಲೂ ಹೊಟ್ಟೆ ತುಂಬಿಕೊಂಡೇ. ಆದರೂ, ಏನಾದರೂ ಉಳಿದದ್ದು ಇದ್ದರೆ ಅದನ್ನು ಹೇಗಾದರೂ ಜಾಗ ಮಾಡಿ ಫ್ರಿಜ್ಜೊಳಗೆ ಸೇರಿಸುವುದು ಹೆಂಗಳೆಯರ ಒಂದು ಟ್ಯಾಲೆಂಟೇ ಸರಿ. ಕೆಲವೊಮ್ಮೆ ಪಾತ್ರೆಯ ತಳದಲ್ಲಿರುವ ಒಂಚೂರು ಸಾರು ಬಡಿಸುವ ಸೌಟು ಸಮೇತವೇ ಫ್ರಿಜ್ಜಿಗೆ ನುಗ್ಗುತ್ತದೆ. ನನ್ನ ಪ್ರಕಾರ ಫ್ರಿಜ್ಜಂತು ಬುದ್ಧಿವಂತೆಯೇ ಸರಿ. ಅಕ್ಕಪಕ್ಕದಲ್ಲೇ ಹಾಲೂ ಮೊಸರೂ ಇದ್ದರೂ ಪರಸ್ಪರ ಸ್ಪರ್ಷದಿಂದ ಹಾಲು ಮೊಸರಾಗುವುದು ಬಹಳ ಕಡಿಮೆ.
ಒಂದು ಪಾತ್ರೆ ಮತ್ತೊಂದಕ್ಕೆ ಮುಚ್ಚಳ ಆಗುವಂತೆ ಪೇರಿಸಿ, ಇನ್ನೊಂದಕ್ಕೆ ತಾಗದಂತೆ, ಹೊರಗಡೆ ಒಂದೂ ಉಳಿಯದಂತೆ ನೀಟಾಗಿ ಫ್ರಿಜ್ಜೊಳಗೆ ಯಾವ ಕೈ ಜೋಡಿಸಿಟ್ಟಿದೆಯೋ ಅದೇ ಕೈ ಅವುಗಳನ್ನು ಹೊರಗೆ ತೆಗೆಯುವುದು ಸೇಫ್. ಇದರ ಅರಿವಿಲ್ಲದ ಗಂಡು ಕೈ ಏನಾದರೂ ಹೋಗಿ ಒಂದಕ್ಕೊಂದು ತಗಲಿ ಹೊರಗೆ ಬಿದ್ದು, ಇಲ್ಲವೇ ಒಳಗೆಯೇ ಬಿದ್ದು ಹಾಲೋ ಸಾರೋ ಚೆಲ್ಲಿ ಗಂಡ ಹೆಂಡಿರಿಗೆ ಒಂದೊಳ್ಳೆ ಜಗಳಕ್ಕೆ ಕಾರಣ ಆದರೂ ಆದೀತು!
ಒಮ್ಮೆ ಫ್ರೆಂಡೊಬ್ಬನ ಮನೆಗೆ ಹೋಗಿದ್ದೆ. ಮನೆ ತೋರಿಸುತ್ತಾ, ಅದು ಅಷ್ಟು ರೂಪಾಯಿಯ ಟಿವಿ. ಇದು ಇಷ್ಟು ರೂಪಾಯಿಯ ವಾಶಿಂಗ್ ಮೆಶೀನ್, ಫ್ರಿಜ್ಜು ನಲುವತ್ತು ಸಾವಿರದ್ದು, ಕರೆಂಟಿಲ್ಲದಿದ್ದರೂ ಇನ್ವರ್ಟರಲ್ಲಿ ಓಡುತ್ತೆ ಎಂದೆಲ್ಲ ಕೊಚ್ಚಿಕೊಂಡ. ನನಗೆ ಪುಸಕ್ಕ ನಗು ಬಂತು. ಫ್ರಿಜ್ಜು ಇನ್ವರ್ಟರಲ್ಲಿ ರನ್ ಆಗೋದೇನು ನಿಜ. ಆದರೆ ಆ ಮನೆಯಲ್ಲಿ ಇನ್ವರ್ಟರೇ ಇಲ್ಲ!
ಮೊದಮೊದಲೆಲ್ಲ ಎಲ್ಲಾ ಫ್ರಿಜ್ಜುಗಳು ಸಾಮಾನ್ಯಕ್ಕೇ ಒಂದೇ ನಮೂನೆ ಇರುತ್ತಿದ್ದವು. ಆಮೇಲಾಮೇಲೆ ಬಗೆಬಗೆಯ ಫ್ರಿಜ್ಜುಗಳು ಬರಲಾರಂಭಿಸಿದವು. ನಮುನೆ ನಮೂನೆಯ ಚಿತ್ತಾರದವು, ಗಾತ್ರದವು. ಸಿಂಗಲ್ ಡೋರ್, ಡಬ್ಬಲ್ ಡೋರ್, ಟ್ರಿಪ್ಪಲ್ ಡೋರ್, ನಾಲ್ಕು ಡೋರ್ ಹೀಗೆ…… ಫ್ರಿಜ್ಜಿನ ಲಕ್ಷಗಟ್ಟಲೆ ರೇಟಿಗೆ ಒಂದು ಸಣ್ಣ ಸೈಟ್ ತಗೊಂಡು ಮನೆ ಕಟ್ಟಿಸಬಹುದು. ಅಷ್ಟೊಂದು ರೇಟಿನ ಫ್ರಿಜ್ಜುಗಳಿವೆಯಂತೆ. ಮೆನೆಘಿನಿ ಲಾ ಕ್ಯಾಂಬುಸಾ (Meneghini La Cambusa) ಎಂಬುದು ಇಡೀ ವಿಶ್ವದಲ್ಲೇ ಬಾರೀ ದುಡ್ಡಿನ ಫ್ರಿಜ್ಜ್ ಅಂತೆ. ಇದಕ್ಕೆ ಸುಮಾರು 41,500 ಡಾಲರ್ ಬೆಲೆ. ಅಂದರೆ ಅಂದಾಜು ಮೂವತ್ತು ಲಕ್ಷ. ದೊಡ್ಡ ನಗರದಲ್ಲಿ ಒಂದು ಸಿಂಗಲ್ ಬೆಡ್ ರೂಂ ಫ್ಲಾಟ್ ಖರೀದಿಸಬಹುದು. ಈ ಫ್ರಿಜ್ಜಲ್ಲಿ ಕಾಫಿ ಮೇಕರ್, ಐಸ್ ಮೇಕರ್, ವಸ್ತಗಳ ಅಗತ್ಯಕ್ಕೆ ತಕ್ಕಂತೆ ತಣ್ಣಗೆ- ಬೆಚ್ಚಗೆ ಇರಿಸುವಂತ ಉಗ್ರಾಣ, ಒಂದು ಫ್ಲಾಟ್ ಸ್ಕ್ರೀನ್ ಟಿವಿ ಸಹಿತ ಇದರಲ್ಲಿ ಇರುತ್ತದಂತೆ. ಜಾಗ ಇಲ್ಲದ ಸಣ್ಣಸಣ್ಣ ಮನೆಗಳಲ್ಲಿ ಎಲ್ಲವನ್ನೂ ಇದರಲ್ಲಿ ಪೇರಿಸಿಡುವುದು ಸುಲಭ. ಜಾಹೀರಾತುಗಳಲ್ಲಿ ಬೀರುವಿನಂತಹ ಫ್ರಿಜ್ಜ್ ನೋಡಿ ಎಷ್ಟು ದೊಡ್ಡ ಫ್ರಿಜ್ಜೂಂತ ಬಾಯ್ಬಿಟ್ಟು ನೋಡಿದ್ದ ನನಗೆ, ಈ ಗೋಡೆ ಕಪಾಟಿನಂತಿರುವ 8.2 ಫೀಟ್ ಆಗಲದ, 500 ಕಿಲೋ ತೂಕದ, 750 ಲೀಟರ್ ಕೆಪಾಸಿಟಿಯ ಫ್ರಿಜ್ಜಿನ ಚಿತ್ರ ನೋಡಿ, ಮನೆ ಒಳಗೆ ಪ್ರಿಜ್ಜಲ್ಲ, ಪ್ರಿಜ್ಜೊಳಗೆ ಮನೆ ಎಂದೆನಿಸಿತು. ನನ್ನಂತವಳಾದರೆ ಅದರೊಳಗೆ ಸೀದಾ ಸ್ಟೌವ್ವನ್ನೇ ನುಗ್ಗಿಸಿ ಇಡಬಹುದೋ ಏನೋ!
ಚಂದ್ರಾವತಿ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ