ಅಂಕಣ ಸಂಗಾತಿ
ಗಜಲ್ ಲೋಕ
ಕಲ್ಲಹಳ್ಳಿಯ ಗಜಲ್ ಭಾವ ಮೀಟಿದಾಗ….
ಗಜಲ್ ಗುನುಗುವ ಎಲ್ಲ ಹೃದಯಗಳಿಗೆ ಗಜಲ್ ಪ್ರೇಮಿಯ ದಿಲ್ ಸೆ ಸಲಾಂ. ಇಂದು ನಾನು ಮತ್ತೊಮ್ಮೆ ಗಜಲ್ ಬೆಡಗಿಯೊಂದಿಗೆ ತಮ್ಮ ಮುಂದೆ ಹಾಜರಾಗಿದ್ದೇನೆ, ತಮ್ಮೊಂದಿಗೆ ಗಜಲ್ ಮಾಧುರ್ಯವನ್ನು ಹಂಚಿಕೊಳ್ಳಲು ; ಜೊತೆ ಜೊತೆಗೆ ಹೆಜ್ಜೆ ಹಾಕಲು.. ಬನ್ನಿ, ಮತ್ತೇಕೆ ತಡ…!!
“ಹೃದಯಕ್ಕಾದ ಗಾಯ ಯಾರಿಗೂ ಕಾಣಿಸದು
ವೈದ್ಯನಿಗೆ ಗಾಯದ ವಾಸನೆಯೂ ತಿಳಿಯದು“
–ಮಿರ್ಜಾ ಗಾಲಿಬ್
ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯವೆಂದರೆ ಸಂಸ್ಕೃತಿ. ಇದು ಎಲ್ಲರನ್ನು ಸಮಾನವಾಗಿ ಕಾಣುವ ಗುಣ ಹೊಂದಿದೆ, ಹೊಂದಿರಬೇಕು ಸಹ! ಸರ್ವ ಜನಾಂಗದ ಶಾಂತಿಯ ತೋಟವೇ ಇದರ ಮೂಲ ಧ್ಯೇಯ. ಇದನ್ನು ಸಮಾಜದ ಎಲ್ಲ ಚಟುವಟಿಕೆಗಳಲ್ಲಿ ಕಾಣುವ ಹಂಬಲ ಇದೆಯಾದರೂ ಸಾರಸ್ವತ ಲೋಕದ ಪರಂಪರೆಯಲ್ಲಿ ಹೆಚ್ಚೆಚ್ಚು ಗುರುತಿಸಲು ಸಾಧ್ಯವಾಗಿದೆ. ಈ ಅಕ್ಷರ ಲೋಕವು ಮನುಷ್ಯನನ್ನು ಸಂವೇದನಶೀಲರನ್ನಾಗಿಸುತ್ತದೆ. ಇದು ಶಕ್ತಿಯುತ ಭಾವನೆಗಳ ಓಘವಾಗಿದ್ದು, ಇದರಲ್ಲಿ ವಿಹರಿಸುವುದರಿಂದ ಓದುಗರ ಮೈ-ಮನವು ತಂಪಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಆ ತನು-ಮನಕ್ಕೆ ಯಾವುದೇ ರೀತಿಯ ಬೆಂಕಿಯು ಸಹ ಬೆಚ್ಚಗಾಗಿಸಲು ಸಾಧ್ಯವಿಲ್ಲ!! ಈ ದಿಸೆಯಲ್ಲಿ ಅವಲೋಕಿಸಿದಾಗ ಶಬ್ದದ ಸಾಂಗತ್ಯವು ಮನುಷ್ಯನನ್ನು ನಗುವಂತೆ ಮಾಡುತ್ತದೆ, ಅಳುವಂತೆಯು ಮಾಡುತ್ತದೆ, ಆಕಳಿಸುವಂತೆಯೂ ಮಾಡುತ್ತದೆ ಮತ್ತು ಮನುಷ್ಯನ ಕಾಲ್ಬೆರಳ ಉಗುರುಗಳನ್ನು ಮಿನುಗುವಂತೆ ಕೂಡ ಮಾಡುತ್ತದೆ. ಈ ನುಡಿ ಜಾತ್ರೆಯ ಹೃದಯ ಭಾಗವೆಂದರೆ ‘ಕಾವ್ಯ’. ಕಾವ್ಯವು ಭಾಷೆಯ ಉಳಿವುಳ್ಳ ಅಮೃತಶಿಲೆ. ಇದು ಬಣ್ಣ-ಬಣ್ಣದ ಕ್ಯಾನ್ವಾಸ್ ಹೊಂದಿದೆ. ಇಲ್ಲಿ ಕವಿ ಬಣ್ಣಗಳ ಬದಲು ಪದಗಳೊಂದಿಗೆ ಸರಸವಾಡುತ್ತಾನೆ. ಬರಹಗಾರರು ತಮ್ಮ ವಿಚಾರಗಳನ್ನು-ಭಾವಗಳನ್ನು ಸರಳವಾಗಿ ನಿರೂಪಿಸಲು, ವಿವರಿಸಲು, ವಾದಿಸಲು ಅಥವಾ ವ್ಯಾಖ್ಯಾನಿಸಲು ಗದ್ಯವನ್ನು ಬಳಸಬಹುದು, ಬಳಸುತ್ತಾರೆ, ಬಳಸುತಿದ್ದಾರೆ. ಆದರೆ ಕಾವ್ಯದ ರಚನೆಗೆ ಹಲವಾರು ಸಕಾರಣಗಳಿವೆ. ಕಾವ್ಯವು ಗದ್ಯಕ್ಕಿಂತ ಅಕ್ಷರಶಃ ಭಿನ್ನವಾಗಿದ್ದು, ಭಾವನೆಗಳನ್ನು ಸ್ಫುರಿಸುತ್ತದೆ. ಇದು ವಿಶಿಷ್ಟವಾಗಿ ಸಹೃದಯ ಓದುಗರಲ್ಲಿ ಸಂತೋಷ, ದುಃಖ, ಕೋಪ, ಮತ್ಸರ, ಪ್ರೀತಿ… ಮುಂತಾದ ತೀವ್ರತರವಾದ ಭಾವನೆಗಳನ್ನು ಕೆರಳಿಸುತ್ತದೆ. ಇಂಥಹ ಕಾವ್ಯದ ಪ್ಯಾರಲಲ್ ರೂಪಗಳು ಜಗತ್ತಿನ ಹೆಚ್ಚಿನ ಭಾಷೆಯ ಸಾಹಿತ್ಯದ ಮಡಿಲಲ್ಲಿ ತುಗುಯ್ಯಾಲೆ ಆಡುತ್ತಿವೆ. ಬೆವರಿನ ಮಳೆಯನ್ನೇ ಸುರಿಸುವ ಅರಬ್ ನಾಡಿನಲ್ಲಿ ‘ಗಜಲ್’ ತಂಗಾಳಿಯನ್ನು ಸೂಸಿದೆ, ಸೂಸುತ್ತಿದೆ ಎಂದರೆ ಇದರ ತಂಬೆಲರಿನ ಆಳ ಅನುಭವ ಆಗದೆ ಇರದು. ಇದು ಅಶಅರ್ ಓದುಗರನ್ನು, ಕೇಳುಗರನ್ನು “ಆಹ್-ಹಾ!” ಎಂದು ಅಚ್ಚರಿಗೊಳಿಸುವ ಆಪ್ತ ಸಾಮರ್ಥ್ಯವನ್ನು ಹೊಂದಿದೆ. ಅನುಭವವನ್ನು ಬಹಿರಂಗ ಪಡಿಸುವಿಕೆ, ಅದರ ಒಳನೋಟ ಮತ್ತು ಧಾತು ರೂಪದ ಸತ್ಯ ಹಾಗೂ ಸೌಂದರ್ಯದ ಹೆಚ್ಚಿನ ತಿಳುವಳಿಕೆಯನ್ನು ನೀಡುತ್ತದೆ. ಇಂಥಹ ‘ಗಜಲ್’ ಕರುನಾಡಿನಲ್ಲಿ ಶ್ರೀಗಂಧದ ಪರಿಮಳದಂತೆ ಹಬ್ಬಿದೆ. ಅಸಂಖ್ಯಾತ ಗಜಲ್ ಗೋ ಅವರಿಂದ ಗಜಲ್ ಗುಲ್ದಸ್ತಗಳು ರೂಪ ಪಡೆದಿವೆ, ಪಡೆಯುತ್ತಿವೆ. ಆ ಗುಲ್ದಸ್ತಗಳ ಕಂಪು ನಾಡಿನಾದ್ಯಂತ ಹರಡುತ್ತಿರುವವರಲ್ಲಿ ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ ಅವರೂ ಒಬ್ಬರು!
‘ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಜಗತ್ತಿನಲ್ಲಿ ಚಿರಪರಿಚಿತರಾಗಿರುವ ನಾರಾಯಣಪ್ಪ ಎಂ. ರವರು ೧೯೮೨ ರ ಅಗಸ್ಟ್ ೦೧ರಂದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬಲ್ಲಿ ಜನಿಸಿದ್ದಾರೆ. ಎಂ.ಎ., ಬಿ.ಇಡಿ ಪದವಿ ಹೊಂದಿರುವ ಶ್ರೀಯುತರು ಪ್ರಸ್ತುತ ಮಾಲೂರು ತಾಲ್ಲೂಕಿನ ಎಳೇಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ನೆಚ್ಚಿನ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಕಾವ್ಯದಲ್ಲಿ ಆಸಕ್ತಿ ಹೊಂದಿದ್ದ ಇವರು ಕ್ರಮೇಣವಾಗಿ ಕಾವ್ಯವನ್ನೇ ತಮ್ಮ ನೆಚ್ಚಿನ ಸಾಹಿತ್ಯ ಪ್ರಕಾರವನ್ನಾಗಿ ಮಾಡಿಕೊಂಡು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತ ಇಂದು ದಾಪುಗಾಲಿಟ್ಟಿದ್ದಾರೆ. ದಲಿತ-ಬಂಡಾಯ ಚಳುವಳಿಗಳ ಚಿಂತನೆಯ ಪ್ರಭಾವದಿಂದ ಇವರ ಸಾಹಿತ್ಯದ ಹೆಜ್ಜೆ ಗುರುತುಗಳು ಗಾಢವಾಗಿ ಬೇರೂರಿವೆ. ಕಾವ್ಯ, ವಚನ, ಮುಕ್ತಕ ಹಾಗೂ ಗಜಲ್ ಪ್ರಕಾರ ಸೇರಿದಂತೆ ಕನ್ನಡದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಇವರು ‘ಬೆಂಗಾಡು’, ‘ಉತ್ತೀತಿಯ ಹಾಡು’, ಎಂಬ ಕವನ ಸಂಕಲನಗಳನ್ನು ಹಾಗೂ ‘ಎದೆಯೊಳಗಿನ ಇಬ್ಬನಿ’, ‘ಕಲ್ಲಹಳ್ಳಿ ಗಜಲ್’, ಎಂಬ ಗಜಲ್ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಉತ್ತಮ ಶಿಕ್ಷಕರೊಂದಿಗೆ ಒಳ್ಳೆಯ ಸಂಘಟಕರಾದ ಕಲ್ಲಹಳ್ಳಿಯವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿ ನಾಡಿನ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ಗೋವಿಂದ ದಾಸ ಪ್ರಶಸ್ತಿ, ಕುವೆಂಪು ಅನಿಕೇತನ ಪ್ರಶಸ್ತಿ, ಬೆಳಕು ಸಾಹಿತ್ಯ ಪ್ರಶಸ್ತಿ, ಕರುನಾಡ ಕಣ್ಮಣಿ ಪ್ರಶಸ್ತಿ, ರಾಜ್ಯಮಟ್ಟದ ಶ್ರೀ ಹೊನ್ಕಲ್ ಪುರಸ್ಕಾರ… ಪ್ರಮುಖವಾಗಿವೆ. ಇವರು ಮೈಸೂರು ಹಾಗೂ ಕಲಬುರಗಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ಕವಿಗೋಷ್ಠಿ, ಜನನುಡಿ ಮಂಗಳೂರು, ಮೇ ಸಾಹಿತ್ಯ ಸಮ್ಮೇಳನ ಧಾರವಾಡ, ಕೋಲಾರದಲ್ಲಿ ಜರುಗಿದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಹಾಗೂ ಕನಕಗಿರಿಯಲ್ಲಿ ನಡೆದ ಮೊದಲ ಗಜಲ್ ಸಮ್ಮೇಳನದ ಗಜಲ್ ಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದು ಜನಮನ್ನಣೆಯನ್ನು ಗಳಿಸಿದ್ದಾರೆ.
‘ಗಜಲ್’ ಒಂದು ಕಲಾತ್ಮಕ ರಚನೆಯಾಗಿದ್ದು, ತೀವ್ರವಾದ ಭಾವನೆಗಳಿಂದ ಕೂಡಿದ್ದು ಓದುಗರ ವಲಯದಲ್ಲಿ ಸಂಚಲನವನ್ನು ಉಂಟುಮಾಡುತ್ತದೆ. ಇದು ನಾವು ಯೋಚಿಸುವುದಕ್ಕಿಂತಲೂ ಪ್ರಬಲವಾಗಿದೆ ಮತ್ತು ತಾಜಾವಾಗಿದೆ. ಇದು ಸುಲಭವಾದ ವಿವರಣೆಯನ್ನು ನಿರಾಕರಿಸುತ್ತದೆ. ಮಾತನ್ನೂ ಮೀರಿದ ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ ಇದರ ಪಾತ್ರ ಮಹತ್ವದ್ದು. ನೂರು ಪದಗಳಲ್ಲಿ ಹೇಳಲಾಗದ್ದನ್ನು ಒಂದೇ ಒಂದು ಷೇರ್, ಅಶಅರ್ ನಲ್ಲಿ ಹೇಳಬಹುದು. ಪ್ರೀತಿಯ, ಸುಖದ ಕ್ಷಣಗಳನ್ನು ಗುನುಗುವಂತೆ ನೋವನ್ನು ಕೂಡಾ ಪದೇ ಪದೆ ಮನದೊಳಗೆ ಅನುಭವಿಸುವಂತೆ ಮಾಡುವುದೇ ಇದರ ಹೆಗ್ಗಳಿಕೆಯಾಗಿದೆ. ಇಂಥಹ ಅನುಪಮ ಗಜಲ್ ಪರಂಪರೆಯಲ್ಲಿ ಗಜಲ್ ಗೋ ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ ಅವರ ಪಾತ್ರವೂ ಇದೆ. ಇವರು ತಮ್ಮ ಸುತ್ತ ಮುತ್ತಲಿನ ಜನರ ಬದುಕಿನ ಸಮುದಾಯದ ಆಕ್ರಂದನಗಳನ್ನು ಗಜಲ್ ಮೂಲಕ ಅಭಿವ್ಯಕ್ತಿಸಿದ್ದಾರೆ. ವಿಶೇಷವಾಗಿ ಮನುಷ್ಯ ಪ್ರೀತಿ, ಸಾಮಾಜಿಕ ಸ್ಪಂದನೆ, ಸಾಮಾಜಿಕ ಸಂವೇದನೆಗಳನ್ನು ಇವರ ಗಜಲ್ ಗಳಲ್ಲಿ ಕಾಣುತ್ತೇವೆ.
“ಪದಗಳಿಂದ ಭರಿಸಲಾಗುತ್ತಿಲ್ಲ ಎದೆಯ ಬೇಗೆ
ಭಾವಾಗ್ನಿ ಜ್ವಾಲೆ ಧಗಧಗಿಸುತ್ತಿದೆ ಪರ್ವತದ ಹಾಗೆ“
ಹೃದಯ ಇರುವವರೆಗೆ, ಹೃದಯ ಇರುವವರಿಗೆ ನೋವು ಸದಾ ಕಾಡುತ್ತಲೆ ಇರುತ್ತದೆ, ಅದ್ಯಾವತ್ತಿಗೂ ಜೀವಂತವಿರುತ್ತದೆ. ಈ ನೋವನ್ನು ಸಂತೈಸುವಲ್ಲಿ ಗಜಲ್ ಇನ್ನಿತರ ಕಾವ್ಯ ಪ್ರಕಾರಗಳಿಗಿಂತಲೂ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಮಾರ್ಗದಲ್ಲಿ ಮೇಲಿನ ಷೇರ್ ಅನ್ನು ಗಮನಿಸಿದರೆ ಅರ್ಥ ಮನದಟ್ಟಾಗುತ್ತದೆ. ಪದಗಳಿಗೆ ನೋವಿನ ಬೇಗೆಯನ್ನು ಭರಿಸುವ ಶಕ್ತಿ ಇಲ್ಲ ಎನ್ನಬೇಕಾದರೆ ಆ ನೋವಿನ ಆಳ ಎಷ್ಟಿರಬೇಕು ಎನ್ನುವುದು ಎಂಥವರಿಗಾದರೂ ಅರಿವಾಗದೆ ಇರದು. ಈ ಷೇರ್ ನಲ್ಲಿ ನಾರಾಯಣಪ್ಪ ನವರು ತಳಸಮುದಾಯದ ನೋವಿನ ಬೇಗೆಗೆ ಚಾಮರ ಬೀಸುವ ಕೆಲಸವನ್ನು ಮಾಡಿದ್ದಾರೆ.
ಸಾಹಿತ್ಯ ಮತ್ತು ಸಾಹಿತಿಯ ಸಾಮಾಜಿಕ ಜವಾಬ್ದಾರಿ ಎಂದರೆ ಅಂದಂದಿನ ಸಾಮಾಜಿಕ ವ್ಯವಸ್ಥೆಗೆ ಸ್ಥಿತಪ್ರಜ್ಞರಾಗಿ ಹಾಗೂ ಪೂರ್ವಾಗ್ರಹ ಪೀಡಿತರಾಗದೆ ಸ್ಪಂದಿಸುವುದು! ಇಂಥಹ ಸಾಮಾಜಿಕ ಬದ್ಧತೆ ಶ್ರೀಯುತರಲ್ಲಿ ಗುರುತಿಸಬಹುದು. ಗೆಲಿಲಿಯೊ, ಸಾಕ್ರೆಟಿಸ್…ಅವರ ಕಾಲಘಟ್ಟದಿಂದಲೂ ಸತ್ಯವನ್ನು ದಪನ್ ಮಾಡುವ ಪ್ರಯತ್ನದ ಭರದಲ್ಲಿ ಅಸಂಖ್ಯಾತರ ಉಸಿರು ನಿಲ್ಲಿಸುವ ಕೃತ್ಯಗಳು ನಡೆಯುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಅವರ ಕೊಲೆಯಾದಾಗ ಆ ಕೊಲೆಯನ್ನು ಖಂಡಿಸುತ್ತ ಗಜಲ್ ಗೋ ಅವರು ಬರೆದ ಷೇರ್ ಈ ರೀತಿಯಲ್ಲಿದೆ.
“ಎಷ್ಟು ಸುತ್ತು ಹಾರುತಾವೊ ಹಾರಲಿ ನಮ್ಮ ಗುಂಡಿಗೆಗಳು ಸೋಲವು
ನಾನು ಗೌರಿ ನಾವೆಲ್ಲರೂ ಗೌರಿ ನಿಮ್ಮ ಬಂದೂಕುಗಳು ಸಾಲವು“
ಕಾರ್ಥೂಸ್, ಗುಂಡುಗಳು ವಿಚಾರವಂತರ ಧ್ವನಿಯನ್ನು ಅಡಗಿಸಬಹುದೆ ಹೊರತು ವಿಚಾರಗಳನ್ನಲ್ಲ ಎಂಬ ಸಂದೇಶವನ್ನು ಈ ಷೇರ್ ಪ್ರತಿಧ್ವನಿಸುತ್ತದೆ.
ಬೆಣ್ಣೆಯಲ್ಲಿ ಕುದಲು ತೆಗೆಯುವ ಕೆಲಸ ಎಲ್ಲರಿಗೂ ಬರುವುದಿಲ್ಲ. ಈ ಮಾತು ಕಾವ್ಯಕ್ಕೂ ಸಹ ತುಂಬಾ ಚೆನ್ನಾಗಿ ಅನ್ವಯಿಸುತ್ತದೆ. ಮೃದು, ಮಧುರ ಭಾವಗಳ ಸಂಗಮವಾದ ಗಜಲ್ ಬೆಡಗಿಯ ಆರಾಧನೆ, ರಚನೆ ಶ್ರೀಯುತ ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ ಅವರಿಂದ ಮತ್ತಷ್ಟು, ಮೊಗೆದಷ್ಟೂ ರೂಪುಗೊಳ್ಳಲಿ ಎಂದು ತುಂಬು ಹೃದಯದಿಂದ ಶುಭ ಕೋರುತ್ತೇನೆ.
“ತಲೆ ರೋಸಿಹೋಗಿದೆ ಬದುಕಿನ ಹಣಾಹಣಿಯಿಂದ
ಧಿಕ್ಕಾರ ಹೇಳಬಹುದು ಬದುಕಿಗೆ ಅಸಹಾಯಕತೆಯಿಂದ“
–ಸಾಹಿರ್ ಲುಧಿಯಾನ್ವಿ
ಕಾಲಚಕ್ರ ತಿರುಗಿದಂತೆ ನಾವು ಸಹ ಅದರೊಂದಿಗೆ ಹೆಜ್ಜೆ ಹಾಕಲೆಬೇಕಲ್ಲವೆ..!! ಹಾಕದಿದ್ದರೆ ನಡೆದೀತೆ…? ಇವಾಗ ಹೋಗಿ,
ಮತ್ತೆ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಬಂದು ನಿಲ್ಲುವೆ, ಗಜಲ್ ಗಾರುಡಿಗರ ಹೆಜ್ಜೆ ಗುರುತುಗಳೊಂದಿಗೆ!! ನಿರೀಕ್ಷಿಸುವಿರಲ್ಲವೆ… ಗೊತ್ತು, ನನ್ನನ್ನು ಸ್ವಾಗತಿಸಲು ಸಿದ್ಧರಿರುವಿರೆಂದು. ಹೋಗಿ ಬರುವೆ, ಬಾಯ್, ಸೀ ಯುವ್..!!
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ