ಅಂಕಣ ಸಂಗಾತಿ

ದೂರದೂರಿಂದ ತವರ ಬಗ್ಗೆ

ಹುಣಸೇಮರ ಮತ್ತು ತಂತ್ರಜ್ಞಾನ

ನಾನು ಪ್ರೈಮರಿ ಸ್ಕೂಲಿನಲ್ಲಿದ್ದಾಗ ಹುಣಸೆಹಣ್ಣಿನ ಸೀಸನ್ನು ಬಂತಂದರೆ ಸಾಕು, ಜೀರಿಗೆ ಮೆಣಸಿನಪುಡಿ, ಉಪ್ಪು ಜೋಡಿಸಿಕೊಂಡು ಎಲ್ಲವನ್ನೂ ಕಾಗದಕ್ಕೆ ಮುದುರಿಟ್ಟು ಸ್ಕೂಲ್ ಬ್ಯಾಗ್ ಗೆ ಪೇರಿಸಿಕೊಂಡೇ ಸ್ಕೂಲ್ ಕಡೆ ಹೊರಡುತ್ತಿದ್ದುದು. ಹುಣಸೆಹಣ್ಣು ಒಮ್ಮೊಮ್ಮೆ ಭೇದಿ ತರಿಸುವಷ್ಟು ತಿನ್ನುತ್ತಾ ಇದ್ದೆವು ಆಗ.  ಇನ್ನೂ ಹಣ್ಣಾಗುವುದಕ್ಕೂ ಕಾಯದೇ, ಹುಣಸೆಯ ಚಿಗುರು ಬಂದಾಗ ಎಲೆಯ ಚಿಗುರನ್ನೇ ಚಿವುಟಿ ತಿನ್ನುವುದರಿಂದ ಶುರುವಾಗಿ, ಹೀಚುಕಾಯಿ, ದೋರಗಾಯಿ ಯಾವುದೂ ಆದೀತು, ಒಟ್ಟು ಹುಣಸೆಮರದ ಕಾಂಡ ತೊಗಟೆ ಬಿಟ್ಟು ಮಿಕ್ಕಿದ್ದೆಲ್ಲ ತಿನ್ನತಕ್ಕಂಥಾ ಪದಾರ್ಥ ಅನ್ನುವುದು ನಮ್ಮ ಆಗಿನ ತಿಳುವಳಿಕೆ. ಈ ನಮ್ಮ ಚಟಕ್ಕೆ ಸದಾ ಹುಣಸೆಮರದಲ್ಲಿ ನೇತುಕೊಂಡಿರುತ್ತಿದ್ದ ನನ್ನ ಗೆಳೆಯರ ಗುಂಪಿಗೆ ಹಿರಿಯರೊಬ್ಬರು ಬಹಳ ಸಲೀಸಾಗಿ ತಡೆಯಾಜ್ಞೆ ಹೇರಿದ್ದರು.  ಏನಿಲ್ಲ ಒಂದೇ ಮಾತು.  “ಹೇಯ್, ಯಾವಾಗ ನೋಡಿದ್ರೂ ಹುಣಸೇಮರದ ಮೇಲೇ ಕೂತಿರ್ತಿರಾ, ನಿಮಗಷ್ಟೂ ಗೊತ್ತಾಗಲ್ವಾ?  ಹುಳಿ ಅಂದ್ರೆ ದೈಯ-ಪಿಶಾಚಿಗಳಿಗೆ ಪ್ರಾಣವಂತೆ. ಅದಕ್ಕೆ ಯಾವಾಗಲೂ ಹುಣಸೆಮರಕ್ಕೆ ಬಂದು ನೇತಾಕಂಡಿರ್ತವಂತೆ. ಇನ್ನೂ ಯಾವ್ದೂ ಮಾತಾಡಿಸಿಲ್ಲ ಅನ್ಸ್ತದೆ; ಮಾತಾಡಿಸಿದಾಗ ಗೊತ್ತಾಗ್ತದೆ ತಡೀರಿ!” ಅಂದಿದ್ದಷ್ಟೇ. ಅಲ್ಲಿಂದ ಹುಣಸೆಮರವನ್ನ ದೈಯ-ಪಿಶಾಚಿಗಳ ಸುಪರ್ದಿಗೇ ಬಿಟ್ಟಿದ್ದೆವು.

ಮನುಷ್ಯನ ಆವಿಷ್ಕಾರ ಆಧುನಿಕತೆ, ಇಂದು ಮಂಗಳಗ್ರಹದಷ್ಟು ದೂರದ ತನಕ ತಲುಪಿದೆ. ಸೌರಮಂಡಲದ ಅನೇಕ ವಿದ್ಯಮಾನಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಿಕೊಳ್ಳುವ ಹಂತವನ್ನು ತಲುಪಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಭೂಮಂಡಲವನ್ನು ಒಂದು ಪುಟ್ಟಹಳ್ಳಿಯಷ್ಟೇ ವ್ಯಾಪ್ತಿಯೇನೋ ಅನ್ನುವುದು ವಾಸ್ತವವನ್ನಾಗಿಸಿದೆ. ಮಹಾ ಕಂಟಕಗಳಂತಹ ಆರೋಗ್ಯದ ಸಮಸ್ಯೆಗಳನ್ನು ತಕ್ಕಮಟ್ಟಿಗೆ ನಿಭಾಯಿಸುವ ವೈದ್ಯಕೀಯ ವ್ಯವಸ್ಥೆ ಲಭ್ಯವಿದೆ. ಯಾವುದೇ ಸಾಮಾನ್ಯ ಅಗತ್ಯವನ್ನೂ ಪೂರೈಸಿಕೊಳ್ಳುವಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ತಂತ್ರಜ್ಞಾನ ಬಹುತೇಕ ಬಂದಿದೆ.  ಮಾಹಿತಿ ತಂತ್ರಜ್ಞಾನದ ಬಗ್ಗೆ ಹೆಚ್ಚಿನದು ಹೇಳುವ ಅಗತ್ಯವೇ ಇಲ್ಲ.  ಯಾಕೆ ಅಂದರೆ, ಈ ಬರಹವನ್ನು ನೀವು ಓದುತ್ತಿರುವುದೂ ತಂತ್ರಜ್ಞಾನದ ಯಾವುದೋ ಒಂದು ಶಾಖೆಯ ಸಹಾಯದಿಂದಲೇ ಅನ್ನುವುದು, ನಾನಿದನ್ನು ಬರೆದು ನಿಮ್ಮ ತನಕ ತಲುಪಿಸುತ್ತಿರುವುದೂ ತಂತ್ರಜ್ಞಾನದ ಪರಿಕರಗಳ ಸಹಾಯದಿಂದಲೇ ಅನ್ನುವುದರ ಬಗ್ಗೆ ಹೇಳಬೇಕಾದ ಅಗತ್ಯವೇಇಲ್ಲ.

ಇಷ್ಟೆಲ್ಲಾ ಸಾಧಿಸಿರುವ ಮನುಷ್ಯ ಪ್ರಭೇದಕ್ಕೆ ತನ್ನ ಸಾಮರ್ಥ್ಯಗಳ ಆಳ ಅಗಲಗಳ ಬಗ್ಗೆ ಪರಿಜ್ಞಾನ ಎಷ್ಟಿರಬಹುದು ಅಂತ ಯೋಚಿಸಿದರೆ ಬೇಸರವಾಗುತ್ತದೆ.  ಈಚಿನ ದಿನಗಳಲ್ಲಿ ನಾವು ಅಂತರಿಕ್ಷದ ಉಪಗ್ರಹಗಳ ಮೂಲಕ ಭೂಮಿಯನ್ನು ಸಾವಿರಾರು ಮೈಲಿಗಳಾಚೆಯಿಂದ ನೇರಪ್ರಸಾರದ ವಿಡಿಯೋ ನೋಡುವುದು ಸಾಧ್ಯವಿದೆ.  ಚಂದ್ರನ ಮೇಲೆ ಹೋಗಿ ಸಿನಿಮಾ ಶೂಟಿಂಗ್ ಮಾಡಬಹುದಾದ ಕಾಲ ದೂರವೇನೂ ಇಲ್ಲ. ರಾಕೆಟ್ ಪ್ರಯಾಣ ದುಡ್ಡು ಕೊಟ್ಟರೆ ಸಾಮಾನ್ಯರಿಗೂ ಲಭ್ಯವಾಗುವ ದಿನಮಾನದಲ್ಲಿ ನಾವು ಬದುಕುತ್ತಿದ್ದೀವಿ.ಕೋವಿಡ್ ನಂತಹ ಮಹಾಮಾರಿ ಖಾಯಿಲೆಗೆ ಎಂಟು ಹತ್ತು ತಿಂಗಳುಗಳೊಳಗಾಗಿ ಲಸಿಕೆ ಕಂಡು ಹಿಡಿಯುವುದು ಸಾಧ್ಯವಾಗಿದೆ. ಅರ್ಧ ಸೆಕೆಂಡಿನ ವಿಳಂಬವಿಲ್ಲದಷ್ಟು ವೇಗದಲ್ಲಿ ಮಾಹಿತಿಯು ಭೂಮಿಯ ಒಂದು ತುದಿಯಿಂದ ಅದರ ವಿರುದ್ಧ ತುದಿಗೆ ತಲುಪುವ ಸಾಧ್ಯತೆಯ ಬಗ್ಗೆ ಜನಸಾಮಾನ್ಯರಿಗೆಲ್ಲ

ಇಂಟರ್ನೆಟ್ ಮೂಲಕ ತಿಳಿದಿದೆ.ಇಪ್ಪತ್ತೊಂದನೆಯ ಶತಮಾನದಲ್ಲಿ ಇಡೀ ಜಗತ್ತಿಗೇ ಹಿಂದೆಂದಿಗಿಂತಲೂ ಹೆಚ್ಚಿನ ವಿಜ್ಞಾನದ ಅರಿವಿದೆ. ಪ್ರತಿಯೊಬ್ಬ ವ್ಯಕ್ತಿಯನ್ನೂ ಸಹ ವಿಜ್ಞಾನ ಇಂದು ತಲುಪುವುದು ಸಾಧ್ಯವಾಗಿದೆ.

ಇಷ್ಟೆಲ್ಲಾ ವೈಜ್ಞಾನಿಕ ಪ್ರಗತಿ ಆಗಿದ್ದರೂ ಸಹ ಬಹುತೇಕರ ಮನೋಭಾವ ವೈಜ್ಞಾನಿಕತೆಯ ಕಡೆ ತಿರುಗುವುದರಲ್ಲಿ ನಿತ್ಯವೂ ಎಡವುತ್ತದೆ.  ಆಧುನಿಕ ಆವಿಷ್ಕಾರಗಳ ಉಪಯೋಗದಿಂದಲೇ ಕಂದಾಚಾರಗಳನ್ನು ಮತಭಾವಗಳನ್ನು, ಭಯ, ಭ್ರಾಂತಿ ಮೌಢ್ಯಗಳನ್ನೂ ಜನರಲ್ಲಿ ತುಂಬುವುದಕ್ಕೆ ವಿಜ್ಞಾನ-ತಂತ್ರಜ್ಞಾನಗಳನ್ನೇಬಳಸಿಕೊಳ್ಳಲಾಗುತ್ತಿದೆ.  ಬೆಳಗಾಗೆದ್ದರೆ ಟಿವಿಯಲ್ಲಿ ಜ್ಯೋತಿಷ್ಯ, ರಾಶಿಫಲ ಪ್ರಸಾರವಾಗುವುದು. ಮೊಬೈಲಿಗೆ ದಿನಕ್ಕೊಂದು ಬಣ್ಣದ, ದಿನಕ್ಕೊಂದು ದೇವರ ದರ್ಶನದ ಭಾಗ್ಯ ಫಾರ್ವರ್ಡ್ ಗಳಿಂದ ಆಗುತ್ತಿರುತ್ತದೆ.  ಸುಳ್ಳುಗಳ ಸರಮಾಲೆಗಳನ್ನೇ ಪೋಣಿಸಿ ಎಡಬಿಡದಂತೆ ಫಾರ್ವರ್ಡ್ ಮಾಡಿ ಸತ್ಯ ಏನು ಅನ್ನುವ ಯೋಚನೆಯೂ ಬರದಷ್ಟು ಫಾರ್ವರ್ಡ್ ಹೊರೆಯನ್ನು ಹೇರಿ ಆಧುನಿಕ ಸಾಮಾಜಿಕ ಮಾಧ್ಯಮಗಳೆಂಬುವು ಹರಡುವ ಸುಳ್ಳುಗಳನ್ನು ವಿವೇಚನೆಯಿಂದ ಒಮ್ಮೆ ನೋಡಿದರೆ ಅವು ಫಾರ್ವರ್ಡ್ ಸಂದೇಶಗಳೋ ಅಥವಾ ಹುಣಸೆಮರಕ್ಕೆ ನೇತುಬಿದ್ದಂತೆ ನಮ್ಮ ಸೆಲ್-ಫೋನ್ಗಳಿಗೆ ನೇತು ಬೀಳುವ ಭೂತ-ಪಿಶಾಚಿಗಳೋ ಅನ್ನುವಷ್ಟು ಅನುಮಾನವಾಗುತ್ತದೆ.

ಇದರಲ್ಲಿ ಅತಿಶಯವಾದದು ಏನೂ ಇಲ್ಲ…  ಈ ಮೊದಲೇ ಹೇಳಿದ ಜ್ಯೋತಿಷಿಗಳು ಚುನಾವಣೆ ಹೊಸ್ತಿಲಲ್ಲಿ ಸೆಲ್ಫೋನ್ಗಳಿಗೆ ತಗುಲಿಕೊಳ್ಳುವ ಈ ಹುಣಸೆಮರದ ಭೂತವನ್ನು ಬಿಡಿಸುವುದಕ್ಕಾಗಿ, ಚುನಾವಣೆಯ ಸುತ್ತುಗಳೆಲ್ಲಾ ಮುಗಿದು ಫಲಿತಾಂಶವೂ ಬಂದಾದನಂತರ, ಸೆಲ್ಪೋನ್ ಪೀಡಾ ಪರಿಹಾರಕ್ಕೆ ಕೂಡಲೇ ಸಂಪರ್ಕಿಸಿ ಅನ್ನುವ ಬಿಸಿಬಿಸಿ ಸುದ್ದಿಯನ್ನು ಟಿವಿನ್ಯೂಸ್ ಟಿಕರ್ (ಸ್ಕ್ರಾಲರ್), ಸೆಲ್ಫೋನ್ಗಳಲ್ಲೇ  ಹರಿಬಿಟ್ಟು ಶಾಂತಿ ಪರಿಹಾರಕ್ಕೂ ಮುಂದಾಗಬಹುದೇನೋ.  ಹೀಗೆ ಹುಡುಕುತ್ತಾ ಹೊರಟರೆ ಇಪ್ಪತ್ತೊಂದನೇ  ಶತಮಾನ ನಮ್ಮೆದುರಿಟ್ಟಿರುವ“ಆಧುನಿಕ ಭ್ರಾಂತಿಗಳು ಮತ್ತು ಮೌಢ್ಯಗಳು”ಅನ್ನುವ ವಿಚಾರದ ಮೇಲೆ ಒಂದು ಪಿ ಎಚ್ ಡಿ ಪ್ರಬಂಧ ಮಂಡಿಸಬಹುದಾದಷ್ಟು ಸರಕುಗಳು ಸಿಗುವುದರಲ್ಲಿ ನನಗೆ ಕಿಂಚಿತ್ ಅನುಮಾನವಿಲ್ಲ.

ಇನ್ನು ಶಾಲೆ ಕಾಲೇಜುಗಳಲ್ಲೇನು ನಡೆಯುತ್ತಿದೆ ಅನ್ನುವುದಕ್ಕೆ ಬಹು ದೊಡ್ಡ ರಾದ್ಧಾಂತವೇ ನಮ್ಮ ನಾಡಿನಾದ್ಯಂತ ನಡೆದು ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ! ಎಲ್ಲಿಂದ ಎಲ್ಲಿಗೆ ಬಂದು ತಲುಪಿದ್ದೀವಿ?  ಮೊನ್ನೆ ಒಬ್ಬ ಹೀಗೆ ಒಂದು ಸುಳ್ಳು ಸುದ್ದಿ ಫಾರ್ವರ್ಡ್ ಮಾಡಿದ್ದನ್ನು ʼಇದು ಸುಳ್ಳುʼ ಎಂದರೂ ಕೇಳದ ಹಾಗೆ,  ಅದು ಹೇಗೆ ಹೇಳ್ತೀಯಾ?  ನೀನೊಬ್ಬನೇನಾ ಪಂಡಿತಾ? ನಿನಗೊಬ್ಬನಿಗೇನಾ ಎಲ್ಲ ಗೊತ್ತಿರೋದು ಹಾಗಾದರೆ?  ನಾವು ಇಲ್ಲಿ ಏನೂ ಹೇಳುವ ಹಾಗೇಇಲ್ಲವಾ? ಅಂತ ಹಾರುತ್ತಾ ಆಕ್ರಮಣ ಮಾಡಿದ.  ಈಗ ಸಂದರ್ಭ ಹೇಗಾಗಿದೆಯೆಂದರೆ ಇದು ಸುಳ್ಳು ಅನ್ನುವುದನ್ನು ಕಂಡುಹಿಡಿದು ಹೇಳಲು ಹೊರಟರೆ, ದಿನಕ್ಕೆ ಅದೇ full time ಕೆಲಸ ಆಗುವಷ್ಟು!  ಅಂದರೆ ಎಂಟುಗಂಟೆ ಸಾಕಾಗುತ್ತದೆ ಅಂದುಕೊಳ್ಳಬೇಡಿ….   ಎಂಟುಗಂಟೆ ಸಾಮಾನ್ಯ ಡ್ಯೂಟಿ ಮುಗಿಸಿ ಇನ್ನೂ ಆಚೆಗೆ ನಾಲ್ಕಾರು ಗಂಟೆ ಓವರ್ ಟೈಮ್ ಕೂಡ ಸಿಗಬಲ್ಲದು . ಈ ಕುರಿತಾಗಿಯೂ ನನಗೆ ಕಿಂಚಿತ್ ಅನುಮಾನವಿಲ್ಲ.

ಯಾಕೆ ಹೀಗಾಗಿದ್ದೇವೆ? ವಿಜ್ಞಾನದ ಪ್ರಗತಿಯ ಸಾಕ್ಷಿಗಳು ಹೆಜ್ಜೆಹೆಜ್ಜೆಗೂ ಸಿಗುತ್ತಲಿರುವಾಗ, ಯಾರೋ ಬೆರಳೆಣಿಕೆಯಷ್ಟು ಜನರ ಸ್ವಾರ್ಥಸಾಧನೆಗಾಗಿ, ಪಟ್ಟಭದ್ರತೆಯಿಂದಾಗಿ ಹುಟ್ಟುಹಾಕುವ ಭ್ರಾಂತಿ, ಮೌಢ್ಯ, ಮಂಕುಬೂದಿಗಳನ್ನೇ ನಮ್ಮ ಮೆದುಳುಗಳಿಗೆ ಮೆತ್ತಿಕೊಳ್ಳುತ್ತಾ ಇದ್ದೇವಲ್ಲವಾ?  ಹೀಗೇ ಮುಂದುವರಿದರೆ ನಮ್ಮ ಮುಂದಿನ ತಲೆಮಾರಿಗೆ ಇಪ್ಪತ್ತೊಂದನೆಯ ಶತಮಾನದ ಅಸಾಧಾರಣ ಆವಿಷ್ಕಾರಗಳು, ಆಶ್ಚರ್ಯಕರವಾದ ನಿತ್ಯಸತ್ಯವಾದಂತಹ ವೈಜ್ಞಾನಿಕ ಸಾಕ್ಷಿಗಳು ಯಾವ ರೀತಿಯಲ್ಲಿ ಉಪಯೋಗವಾಗಬಲ್ಲವು?  ಬೆಳಗಾದಾಗಿನಿಂದ ರಾತ್ರಿಯ ತನಕವೂ ಎಲ್ಲಾ ದಿಕ್ಕುಗಳಿಂದ ಈ ಮೌಢ್ಯದಿಂದ ಉಂಟಾಗುವ ಮಾಲಿನ್ಯ ಕ್ರೌರ್ಯಗಳನ್ನು ಸೇವಿಸಿ ನಾವೆಲ್ಲಾ ನೆಮ್ಮದಿಯಿಂದ ನಿದ್ರಿಸುವುದು ಸಾಧ್ಯವಾ?  ಈ ಕಾಲದ ಸೌಲಭ್ಯಗಳನ್ನು ನೋಡಿದರೆ ಹಿಂದೆ ಮಾನವ ಜನಾಂಗಕ್ಕೆ ಕನಸಿನಲ್ಲೂ ಸಹ ಊಹಿಸಿರಲಾರದ ಸವಲತ್ತುಗಳು ಎಲ್ಲರಿಗೂ ಸಿಗಬಹುದಾದ ಒಂದು ಸಾಧ್ಯತೆಯನ್ನೇ ಆಗದ ಹಾಗೆ ನಮ್ಮ ಸಮಾಧಿಯನ್ನು ನಾವೇ ಕಟ್ಟಿಕೊಳ್ಳುತ್ತಾ ಇದ್ದೀವಾ?  ಯಾಕಂದರೆ ಈ ರೀತಿಯ ಮೌಢ್ಯ ಹಿಂದೆಲ್ಲಾ ಅರಿವಿನ  ಕೊರತೆಯಿಂದ ಉಂಟಾಗಿತ್ತು… ಈಗ ಅರಿವು ಎಲ್ಲರಲ್ಲೂ ಮೂಡಿಸಬಹುದಾದಷ್ಟುಸಾಮರ್ಥ್ಯ ನಮ್ಮದಾಗಿದೆ. ಆದರೆ ಹಿಂದಿನ ಯಾವ ತಲೆಮಾರಿನವರೂ ಸಹ ಮುಳುಗಿರದಷ್ಟುಆಳವಾದಮೌಢ್ಯದೊಳಗೆ ನಾವು ಮುಳುಗಿಹೋಗುತ್ತಿದ್ದೇವೆಯಲ್ಲಾ. ಯಾಕೆ ಹೀಗೆ?  ಇಲ್ಲಿ ಸೂಚ್ಯವಾಗಿ ಭ್ರಾಂತಿ, ಮೌಢ್ಯ, ಅಂಧಕಾರಗಳನ್ನುಹೇಳಿದೆನಷ್ಟೇ.  ಇದರ ಮೂಲವನ್ನು ಹುಡುಕಿ ಹೊರಟರೆ ಸಿಗುವುದು ನಮ್ಮ ಪಿತ್ರಾರ್ಜಿತರು ‍ಗಳನ್ನು ಮತ, ಧರ್ಮ ಜಾತಿಗಳು ಮತ್ತು ಆ ಮೂಲಕ ಜನಸಾಮಾನ್ಯರ ಮೇಲೆ ಬೀಳುವ ಮಂಕುಬೂದಿ.  ಈಚೀಚೆಗೆ ಅದು ಬೂದಿಯ ಹಾಗೆ ಉದುರುತ್ತಲಷ್ಟೇ ಇಲ್ಲ. ಉಸಿರುಗಟ್ಟಿ ಹೋಗುವ ಹಾಗೆ ಗುಡ್ಡೆಗಟ್ಟಲೆ ಬೀಳುತ್ತಲಿದೆ. ಈ ಜಾತಿ ಮತ ಧರ್ಮಗಳ ಎಳೆಯನ್ನು ಹಿಡಿದು ಹೊರಟರೆ ಇಲ್ಲೇ ಒಂದು ಪಿ ಎಚ್ ಡಿ ಪ್ರಬಂಧ ಮಂಡಿಸಬೇಕಾದೀತೇನೋ. ಸಧ್ಯಕ್ಕೆ ಇಷ್ಟು ತಿಳಿದು ಈ ಕುರಿತು ಸ್ವಲ್ಪ ಯೋಚಿಸಿರೋಣ.  ಮುಂದೆ ಮತ್ತೆ ಇದೇ ಎಳೆ ಹಿಡಿದು ಏನ್ ನಡೀತಾ ಇದೆ ಇಲ್ಲಿ ಅಂತ ತಿಳಿಯಲು ಪ್ರಯತ್ನಿಸೋಣ.



ಅಶ್ವತ್ಥ.

Leave a Reply

Back To Top