ಪುಸ್ತಕ ಸಂಗಾತಿ
ಬೀಳಗಿಯವರ ಸಾಲುಗಳಲ್ಲಿ ಉಸಿರು ಹುಡುಕುತ್ತ….!
: “The crown of literature is poetry.”
–William Somerset Maugham
ಭಾಷೆ ಮಾನವನಿಗೆ ಮಾತ್ರ ಸಾಧಿಸಲ್ಪಡಬಹುದಾದ ಒಂದು ಸಂಕೀರ್ಣ ಸಂವಹನ ಮಾಧ್ಯಮವಾಗಿದ್ದು ಎರಡು ಜೀವಿಗಳ ನಡುವಿನ ಸಂಪರ್ಕ ಸಾಧನವಾಗಿದೆ. ಇದು ಚಿಂತನಶೀಲ ಹಾಗೂ ಚಲನಶೀಲವಾಗಿದ್ದು ಕಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಮಾನವನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದರ ದಾಖಲೆಯ ಒಂದು ರೂಪವೇ ಸಾಹಿತ್ಯ. ಅಂತೆಯೇ ಸಾಹಿತ್ಯ ಎನ್ನುವುದು ಯಾವುದೇ ಭಾಷೆಯನ್ನಾಡುವ ಸಮುದಾಯಗಳಲ್ಲಿ ಬರವಣಿಗೆಯ ರೂಪದಲ್ಲೋ ಅಥವಾ ಮಾತಿನ ನೆಲೆಯಲ್ಲೋ ಅಂದರೆ ಜಾನಪದ ರೂಪದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಿರುತ್ತದೆ. ಇದು ಒಂದು ಸಮುದಾಯದ, ಪ್ರಾದೇಶಿಕತೆಯ, ಸಿದ್ಧಾಂತದ, ಸಂಸ್ಕೃತಿಯ ಹಾಗೂ ಮನೋಭಿವೃದ್ಧಿಯ ಪ್ರತಿನಿಧಿ ಹಾಗೂ ಅಭಿವೃದ್ಧಿಯ ಸಂಕೇತವಾಗಿದೆ. ಇದು ಸಕಲ ಮಾನವ ಸಮುದಾಯದ ಸದಸ್ಯರಿಗೂ ಹತ್ತಿರವಾಗಿದೆ. ಈ ದಿಸೆಯಲ್ಲಿ ಸಾಹಿತ್ಯಕ್ಕೆ ಭಾಷೆ, ಪ್ರದೇಶ, ರಾಜ್ಯ, ರಾಷ್ಟ್ರದ ಹಂಗಿಲ್ಲ. ಅಂತೆಯೇ ಒಂದು ಭಾಷೆಯ ಜನಪ್ರಿಯ ಸಾಹಿತ್ಯ ಪ್ರಕಾರಗಳು ಜಗತ್ತಿನಾದ್ಯಂತ ಪಸರಿಸುತ್ತಿವೆ. ಉರ್ದು, ಪರ್ಷಿಯನ್, ಆಂಗ್ಲ, ಜಪಾನ್…. ಮುಂತಾದ ಭಾಷೆಗಳ ಹಲವು ಸಾಹಿತ್ಯ ರೂಪಗಳು ನಮ್ಮ ಕನ್ನಡ ಭಾಷೆಯಲ್ಲಿ ಪ್ರಚಲಿತದಲ್ಲಿವೆ. ಹೀಗಂದ ಮಾತ್ರಕ್ಕೆ ಬೇರೆ ಭಾಷೆಗಳಲ್ಲಿರುವ ಸಾಹಿತ್ಯ ರೂಪಗಳಿಗೆ ಹೋಲುವ ಪ್ರಕಾರಗಳು ನಮ್ಮಲ್ಲಿ ಇರಲಿಲ್ಲವೆಂದಲ್ಲ. ಇದ್ದವು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಜಪಾನ್ ಸಾಹಿತ್ಯ ರೂಪವಾದ ‘ಹೈಕು’. ನಮ್ಮಲ್ಲಿಯ ಚುಟುಕು, ಹನಿಗವನಗಳು ಈ ‘ಹೈಕು’ ವಿಗೆ ಹೋಲುತ್ತವೆ. ಆದರೆ ಅವುಗಳಿಗೆ ಇರದಂತಹ ನಿರ್ದಿಷ್ಟ ಲಕ್ಷಣಗಳು, ಸ್ವರೂಪಗಳು ‘ಹೈಕು’ ಪ್ರಕಾರಕ್ಕೆ ಇವೆ. ಜಪಾನ್ ಭಾಷೆಯಲ್ಲಿ ‘ಸಿಲೆಬಲ್’ ಎಂದು ಕರೆದಿರುವುದನ್ನು ನಾವು ‘ಅಕ್ಷರ’ ಎಂದು ಕರೆಯುತಿದ್ದೇವೆ. ಜಪಾನಿನ ಅಧ್ಯಾತ್ಮಿಕ ವಿಚಾರಗಳನ್ನು ವ್ಯಕ್ತಪಡಿಸಲು ಹುಟ್ಟಿದ ಲಯವೇ ಹೈಕು. “Haiku is the picture painted with words”. ಈ ಒಂದು ವಾಕ್ಯ ಸಾಕಲ್ಲವೇ ಹೈಕುವಿನ ಸ್ವರೂಪ ತಿಳಿಯಲು. ಇದೊಂದು ಅತಿ ಸಣ್ಣ ಕಾವ್ಯ ಪ್ರಕಾರ. ದಾರ್ಶನಿಕತೆ, ಅಂತರ್ ದೃಷ್ಟಿ, ಕಲ್ಪನಾವಿನ್ಯಾಸವೇ ಇದರ ಜೀವಾಳ. ಸಂಕ್ಷಿಪ್ತತೆಯೇ ಹೈಕುವಿನ ಮುಖ್ಯ ಗುಣ. ಇದರಲ್ಲಿ ಶಬ್ಧ ಸಂದಣಿಗೆ ಅವಕಾಶವಿಲ್ಲ. ಸಾಸಿವೆಯಲ್ಲಿ ಸಾಗರವನ್ನು ಅಡಗಿಸಿದಂತೆ ಇದರ ರಚನೆ. ಇದು ಅಹಂ ಕಳಚಿಟ್ಟು ಬಯಲಲ್ಲಿ ಬಯಲಾಗುವ ಅಧ್ಯಾತ್ಮವನ್ನು ನಿರೀಕ್ಷಿಸುತ್ತದೆ, ಬಯಸುತ್ತದೆ. ಇದು ಚಿಂತನಶೀಲ, ಅತೀಂದ್ರಿಯ, ಕ್ಷಣಿಕತೆಯ ಅಭಿವ್ಯಕ್ತಿ. ಮೂರು ಸಾಲಿನಲ್ಲಿ ಬರೆದು ೬ ಸೆಕೆಂಡ್ಸ್ ನಲ್ಲಿ ಓದುವ ಕಾವ್ಯ. ಇದರಲ್ಲಿ ಒಂದನೆಯ ಮತ್ತು ಮೂರನೇ ಸಾಲುಗಳಲ್ಲಿ ಐದು ಅಕ್ಷರಗಳಿದ್ದು ಎರಡನೆಯ ಸಾಲಿನಲ್ಲಿ ಏಳು ಅಕ್ಷರಗಳು ಬರುತ್ತವೆ. ಇದೊಂದು ಹದಿನೇಳು ಅಕ್ಷರಗಳ ಕಾವ್ಯಮಾಲೆ. ಬೃಹತ್ತಾದ ಅರ್ಥವನ್ನು ಕಿರಿದಾದ ೧೭ ಅಕ್ಷರಗಳಲ್ಲಿ ಅರ್ಥ ಬಿಂಬಿಸುವ ಸಾಹಿತ್ಯ ಪ್ರಕಾರ. ೧೭ಅಕ್ಷರಗಳು ಇರಬೇಕು, ಇರುತ್ತವೆ ಎಂಬುದು ಇದರದೊಂದು ಸರಳ ನಿಬಂಧನೆ. ಈ ನಿಬಂಧನೆಯ ಆಂತರ್ಯದಲ್ಲಿ ಅಕ್ಷರಗಳ ಔಚಿತ್ಯ, ವ್ಯಾಕರಣದ ಬಂಧ ಹಾಗೂ ಕಾವ್ಯದ ಧ್ವನಿ ಮುಖ್ಯವಾಗಿ ಇರಲೇಬೇಕು.
“ಸರಿಗ ಮಪ
ಸಾರೇಗಾ ಮಪದ ನೀ
ಸರಿಗ ಮಪ”
ಇದರಲ್ಲಿ ಹೈಕುವಿನ ಬಾಹ್ಯ ಲಕ್ಷಣಗಳು ಇವೆಯಾದರೂ ಆಂತರಿಕ ಲಕ್ಷಣಗಳು ಇಲ್ಲದ ಕಾರಣ ಇದನ್ನು ಹೈಕು ಎಂದು ಕರೆಯಲಾಗದು. ಅಕ್ಷರಗಳ ಜೋಡಣೆಯೊಂದನ್ನೇ ಹೈಕು ಎನ್ನಲಾಗದು. ಕಿರಿದರಲ್ಲಿ ಹಿರಿದು ಅಡಗಿರಬೇಕು. ಕನ್ನಡಿಯಲ್ಲಿ ಆನೆಯನ್ನು ತೋರಿಸುವ ಕೆಲಸ ಹೈಕು ಮಾಡುತ್ತದೆ, ಮಾಡಬೇಕು. ಕೆಲವೇ ಪದಗಳಲ್ಲಿ ಕವಿ ತಾನು ಅನುಭವಿಸಿದ ಜೀವನಾನುಭವಗಳನ್ನು ಸುಂದರವಾಗಿ ಕಟ್ಟಿಕೊಡುವುದು ಅತ್ಯಂತ ಪ್ರಯಾಸದ ಕೆಲಸ. ಈ ಪ್ರಯಾಸ ದೈಹಿಕತೆಯದಲ್ಲ, ಮಾನಸಿಕತೆಯದು. ಇದೊಂದು ಜಾಣ್ಮೆಗೆ ಓರೆಗಚ್ಚುವ ಸೃಜನಶೀಲ ಕುಸುರಿ ಕಾರ್ಯವಾಗಿದೆ. ‘ಹಿಡಿದರೆ ಹಿಡಿ ತುಂಬ, ಬಿಟ್ಟರೆ ಜಗದ ತುಂಬ’ ಎನ್ನುವುದು ಹೈಕುವಿನ ಮಹತ್ವವನ್ನು ಸಾರುತ್ತದೆ. ಬಾಶೋ ಅವರು ಹೇಳಿದ ಮಾತು ಸಹ ಇದನ್ನೇ ಧ್ವನಿಸುತ್ತದೆ. “೩ ರಿಂದ ೫ ಹೈಕು ಬರೆದವರು ಕವಿ, ೧೦ ಹೈಕು ಬರೆದವರು ಮಹಾಕವಿ….!”
ಕನ್ನಡ ಭಾಷೆಯು ಮೊದಲಿನಿಂದಲೂ ಇತರ ಭಾಷೆಯ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಳ್ಳುತ್ತ ಬಂದಿದೆ. ಇತ್ತೀಚೆಗಂತೂ ತುಸು ಹೆಚ್ಚೇ ಅದಕ್ಕೆ ವೇದಿಕೆಯನ್ನು ಒದಗಿಸುತ್ತಿದೆ!! ‘ಹೈಕು’ ಎನ್ನುವ ಜಪಾನೀಸ್ ಕಾವ್ಯ ಪ್ರಕಾರ ಇಂದು ಕನ್ನಡಮ್ಮನ ಮನಸೂರೆಗೊಂಡು, ಮಾನಸಪುತ್ರಿಯಾಗಿ ಪರಿವರ್ತನೆಯಾಗುತ್ತಿದೆ! ಅಂತೆಯೇ ಕನ್ನಡದಲ್ಲಿ ಹಲವಾರು ಲೇಖಕರು ‘ಹೈಕು’ಗಳನ್ನು ಬರೆಯುತ್ತ ‘ಹೈಕು ಮಾಸ್ಟರ್ಸ್’ ಆಗುತ್ತಿದ್ದಾರೆ. ಅವರಲ್ಲಿ ಶ್ರೀ ಸಿದ್ಧಲಿಂಗಪ್ಪ ಬೀಳಗಿ ಅವರೂ ಒಬ್ಬರು. ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಗದ್ಯ ಮತ್ತು ಪದ್ಯಗಳೆರಡರಲ್ಲೂ ಆಸಕ್ತಿ, ಅಭಿರುಚಿಯನ್ನು ಹೊಂದಿದ್ದು ವಿಶೇಷವಾಗಿ ಕತೆ, ಕವನ, ಚಿಂತನೆ, ಸಂಪಾದನೆ ಹಾಗೂ ಹೈಕು ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. “ಹಿಮದಡಿಯ ಕುದಿಮೌನ”, “ಸಾವಿರದ ಸಾಲುಗಳು”, ಎಂಬ ಹೈಕು ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರಸ್ತುತ ‘ಸಾವಿರದ ಸಾಲುಗಳು’ ಹೈಕು ಸಂಕಲನವು ವೈವಿಧ್ಯಮಯ ೩೩೪ ಹೈಕುಗಳನ್ನು ಹೊಂದಿವೆ. ಇಲ್ಲಿ ‘ಸಾವಿರದ’ ಎಂಬ ಪದವು ತುಂಬಾ ವಿಶಿಷ್ಟವಾಗಿ ಬಳಕೆಯಾಗಿದೆ. ಒಂದು ಸಮಗ್ರ ಹೈಕುಗಳು ಹೊಂದಿರುವ ಸಾಲುಗಳು… ಅಂದರೆ ೧೦೦೨ ಸಾಲುಗಳು ಎಂಬುದು, ಮತ್ತೊಂದು ‘ಸಾವು ಇರದ’ ಎಂಬ ಅರ್ಥದಲ್ಲಿ ಇಲ್ಲಿಯ ಸಾಲುಗಳಿಗೆ ಸಾವೆಂಬುದೆ ಇಲ್ಲ ಎಂಬುದು. ಈ ದಿಸೆಯಲ್ಲಿ ‘ಸಾವಿರದ ಸಾಲುಗಳು’ ಕೃತಿ ಓದುಗರ ಪ್ರೀತಿಗೆ ಪಾತ್ರವಾಗಿದೆ, ಪಾತ್ರವಾಗುತ್ತದೆ. ಈ ಸಂಕಲನವು ಅರ್ಥವತ್ತಾದ ಹೈಕುಗಳನ್ನು ಹೊಂದಿದ್ದು, ಪ್ರೀತಿ, ಪ್ರೇಮ, ಪ್ರಣಯ, ವ್ಯಂಗ್ಯ, ವಿಡಂಬನೆ, ಸಾಮಾಜಿಕ ವ್ಯವಸ್ಥೆ, ಮೌಢ್ಯತೆ, ವೈಚಾರಿಕ ಚಿಂತನೆ, ಉಪದೇಶ, ಮಾನವೀಯತೆ, ಸಂಬಂಧಗಳ ನೈಜತೆ, ತಣ್ಣನೆಯ ಬಂಡಾಯ… ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.
ಅರಿವು, ವಿಚಾರ, ಸಾಹಿತ್ಯ, ತತ್ವಶಾಸ್ತ್ರ ಮತ್ತು ವಿಜ್ಞಾನಗಳ ಇತಿಹಾಸದಲ್ಲಿ ‘ಬರಹಗಾರ’ ಎಂಬ ಪರಿಕಲ್ಪನೆಯು ವ್ಯಕ್ತೀಕರಣದ ಸಂಯೋಗದಿಂದ ರೂಪ ಪಡೆಯುತ್ತದೆ. ಈ ನಿಟ್ಟಿನಲ್ಲಿ ನಾವು ಯೋಚಿಸಿದಾಗ ‘ಕಲೆ’ ಎನ್ನುವಂತದ್ದು ಜೀವನವನ್ನು ಧ್ಯಾನಿಸುತ್ತದೆ, ಹಂಬಲಿಸುತ್ತದೆಯೆ ಹೊರತು ಸಾವನ್ನಲ್ಲ. ನಿರ್ಜೀವ ಶಾಶ್ವತ ಮೌಲ್ಯಗಳ ಕುರಿತು ಮಾತನಾಡುವುದು ಸರಳದಾರಿ. ಆದರೆ ಶಾಶ್ವತ ಸತ್ಯದ ಪರಿಕಲ್ಪನೆಯು ಕೊನೆಯಿರದ ಸಮುದ್ರ. ಪ್ರತಿಯೊಬ್ಬರೂ ರಾಗ-ದ್ವೇಷಗಳನ್ನು ಜಯಿಸಬೇಕಾಗಿದೆ. ಆತ ತನ್ನೊಂದಿಗೆ ಇತರರನ್ನೂ ಗೆಲ್ಲಬೇಕು. ಈ ದಾರಿಯಲ್ಲಿ ಬೀಳಗಿಯವರ ಹೈಕುಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ.
“ಹೆಣದ ಮೇಲೂ
ಆರೋಪ-ಪ್ರತ್ಯಾರೋಪ
ಸ್ಮಶಾನ ಮೌನ”
ಇಲ್ಲಿ ಮೇಲಿನ ಮೂರು ಸಾಲು ಮನುಷ್ಯನ ನೂರು ವರ್ಷಗಳ ಇತಿಹಾಸವನ್ನು ಸಾರುತ್ತಿವೆ. ಮನುಷ್ಯ ಶಿಲಾಯುಗದಿಂದ ವೈಜ್ಞಾನಿಕ ಯುಗಕ್ಕೆ ಬಂದಿದ್ದಾನೆಯಾದರೂ ಮಧ್ಯೆದಲ್ಲಿಯೇ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಬಂದಂತಿದೆ. ಹೊತ್ತು-ಗೊತ್ತು ಇಲ್ಲದೆ ಎಲ್ಲೆಂದರಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತ ಕಾಲಹರಣದೊಂದಿಗೆ ಮಾನಸಿಕ ಶಾಂತಿಗೆ ಕೊಳ್ಳಿ ಇಡುತ್ತಿರುವುದನ್ನು ಇಲ್ಲಿಯ ಹೈಕು ಸಂಕೇತಿಸುತ್ತಿದೆ.
ಸಾಮಾಜಿಕ ವಿಚಾರಗಳ ಕ್ಷೇತ್ರದಲ್ಲಿ ರೂಢಿಗತವಾಗಿರುವ ಅಭ್ಯಾಸ ಬಲಗಳು ವಿಜ್ಞಾನವನ್ನು ಹಿಂದಿಕ್ಕುತ್ತಿವೆ! ಸಾಮಾಜಿಕ ರಂಗದಲ್ಲಿ ನಡೆಯುವ ಘಟನೆಗಳ ನಿರೂಪಣೆಯ ಕಾಲದಲ್ಲಿ ಅಧಿಕಾರ ಲಾಲಸೆ, ಪ್ರಭುತ್ವಕಾಮನೆ… ಮುಂತಾದವುಗಳಿಂದ ವೈಜ್ಞಾನಿಕ ಮನೋಭಾವ ಹಿಂದಡಿಯಿಟ್ಟು ಮೌಢ್ಯತೆ ಮುಂದಡಿಯಿಡುತ್ತಿದೆ. ವೈಜ್ಞಾನಿಕ ಅರಿವಿನ ಅನ್ವಯದ ಪರಿಣಾಮವಾಗಿಯೇ ನಡೆಯುವ ಘಟನೆಗಳನ್ನೂ ನಾವಿನ್ನೂ ಅವೈಜ್ಞಾನಿಕ ದೃಷ್ಟಿಯಲ್ಲಿಯೆ ಪರಿಶೀಲಿಸುತಿದ್ದೇವೆ. ಇದು ದುರಂತವಾದರೂ ನಗ್ನ ಸತ್ಯ!! ಇಂಥಹ ಅನಾಚಾರಗಳನ್ನು ತಡೆಯಲು ಬುದ್ಧ, ಬಸವಣ್ಣನವರು ಪ್ರಯತ್ನಿಸಿದ್ದರಾದರೂ ನಮ್ಮ ಜನ ಮಾತ್ರ ಮೌಢ್ಯತೆಯ ಆಚರಣೆಯಿಂದ ಹೊರ ಬಂದಿಲ್ಲ. ಇದಕ್ಕೊಂದು ನಮ್ಮ ನಾಡಿನ ಸಾರ್ವತ್ರಿಕ ಉದಾಹರಣೆಯೆಂದರೆ ಹಾವಿಗೆ ಹಾಲೆರೆಯುವುದು!! ಅಂದು ಬಸವಣ್ಣನವರು ಹೇಳಿದ ಮಾದರಿಯಲ್ಲಿಯೆ ಇಲ್ಲಿ ಹೈಕು ಮಾಸ್ಟರ್ ಬೀಳಗಿಯವರು ಹೇಳಿದ್ದಾರೆ.
“ಕಲ್ಲ ನಾಗಕೆ
ಎರೆದ ಹಾಲು; ಭಕ್ತಿ
ನೆಲದ ಪಾಲು”
ಈ ಹೈಕುವಿನ ಅರ್ಥವನ್ನು ಬಿಡಿಸಿ ಹೇಳಬೇಕಾಗಿಲ್ಲ. ಸುಲಿದ ಬಾಳೆಯ ಹಣ್ಣಿನಂತೆ ಸರಳವಾಗಿದೆ.
“ಎಲ್ಲ ಮನುಷ್ಯರೂ ಬುದ್ಧಿಜೀವಿಗಳೇ; ಆದರೆ ಸಮಾಜದಲ್ಲಿ ಎಲ್ಲರೂ ಬುದ್ಧಿಜೀವಿಗಳ ಕಾರ್ಯ ನಿರ್ವಹಿಸುವುದಿಲ್ಲ” ಎಂಬ ಆಂಟೋನಿಯೋ ಗ್ರಾಮ್ಷಿಯವರ ಹೇಳಿಕೆ ಅಕ್ಷರಶಃ ಸತ್ಯ. ಇಂದು ಮೌಲ್ಯಗಳ ಪಾಲನೆಗಿಂತ ಮೌಲ್ಯಗಳ ‘ಪಲ್ಲಟ’ಗಳೆ ಹೆಚ್ಚಾಗುತ್ತಿವೆ. ಬೆತ್ತಲೆ ಲೋಕದಲ್ಲಿ ಬಟ್ಟೆ ತೊಟ್ಟವನೆ ಹುಚ್ಚ ಎಂಬಂತಾಗಿದೆ ಇಂದಿನ ಸ್ಥಿತಿ! ಇದನ್ನು ಶ್ರೀಯುತರ ಒಂದು ‘ಹೈಕು’ ಮುಖೇನ ಅರಿಯಬಹುದು.
“ಮನಕಂಜುವ
ಜನ; ನೆರಳಲಿದ್ದೂ
ಬೆವರುವರು”
‘ಮೂರು ಬಿಟ್ಟವನು ದೇವರಿಗಿಂತ ದೊಡ್ಡವನು’ ಎಂಬ ಲೋಕಾರೂಢಿಯ ಮಾತು ನಮ್ಮ ಆತ್ಮಸಾಕ್ಷಿಯ ಸಾವನ್ನು ಸಾರುತ್ತಿದೆ. ಮೌಲ್ಯಗಳ ಪಾಲನೆ ಕಷ್ಟಸಾಧ್ಯ ಎಂಬ ದಿನಮಾನಗಳಲ್ಲಿ ನಾವು ಬದುಕುತ್ತಿರುವುರನ್ನು ಮೇಲಿನ ‘ಹೈಕು’ ಕೂಗಿ ಹೇಳುತ್ತಿದೆ.
ಎಲ್ಲ ಕಾವ್ಯಕ್ಕೂ ‘ಪ್ರೀತಿ’ಯೇ ಸಂಜೀವಿನಿ. ಇದು ವ್ಯಕ್ತಿತ್ವವನ್ನು ಒಂದು ನಿರ್ದಿಷ್ಟ ಅಚ್ಚಿನಲ್ಲಿ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೀಳಗಿಯವರು ಗಂಡು-ಹೆಣ್ಣಿನ ಮಧ್ಯದಲ್ಲಿರುವ ಪ್ರೀತಿಯ ಕುರಿತು ಹಲವಾರು ‘ಹೈಕು’ಗಳನ್ನು ಬರೆದಿದ್ದಾರೆ. ಪ್ರೀತಿ ಒಬ್ಬ ವ್ಯಕ್ತಿಯೊಡನೆ ಮಾತ್ರ ಒಂದಾಗಲು, ಪೂರ್ಣವಾಗಿ ಬೆರೆತುಹೋಗಲು ಬಯಸುತ್ತದೆ. ಪ್ರೇಮವೆಂದರೆ ಇಬ್ಬರು ಅಪರಿಚಿತರ ನಡುವೆ ಆ ಕ್ಷಣದವರೆಗೆ ಇದ್ದ ಗೋಡೆ ಥಟ್ಟನೆ ನಿರ್ನಾಮವಾಗುವುದು. ಇಂಥಹ ಪ್ರೀತಿಯಲ್ಲಿ ಬಡತನದ ಅನುಭೂತಿ ಇರುವುದಿಲ್ಲ. ಅಲ್ಲೇನಿದ್ದರೂ ಬರೀ ಶ್ರೀಮಂತಿಕೆಯದ್ದೆ ಕಾರುಬಾರು. ಅಂತೆಯೇ ಇಲ್ಲೊಂದು ‘ಹೈಕು’ ಗಮನಿಸೋಣ ಬನ್ನಿ.
“ಭಿಕಾರಿಯಲ್ಲ
ಗೆಳತಿ; ತುಟಿ ತುಂಬ
ಮುತ್ತುಗಳಿವೆ”
ಮೇಲೆ ಉಲ್ಲೇಖಿಸಿದ ‘ಹೈಕು’ಗಳೊಂದಿಗೆ ಇನ್ನೂ ಹಲವಾರು ‘ಹೈಕು’ಗಳಿವೆ. ಅವೆಲ್ಲವುಗಳು ಓದುಗರ ಜ್ಞಾನದ ಕ್ಷೀತಿಜವನ್ನು ವಿಸ್ತರಿಸುತ್ತ, ಕಾವ್ಯದ ಅನುಭೂತಿಯನ್ನು ಒದಗಿಸುತ್ತವೆ. ಕೆಲವೊಂದು ಚಿಂತನೆಗೆ ನೂಕುತ್ತವೆ. ಇಲ್ಲೆಲ್ಲ ಹೈಕು ಮಾಸ್ಟರ್ ಅವರ ಅನುಭವ ಬರಹ ರೂಪಕ್ಕೆ ಇಳಿದಿದೆ! ಇಲ್ಲಿ ವಸ್ತು ವೈವಿಧ್ಯತೆ ಇದ್ದರೂ ಪ್ರಕೃತಿ, ಆಧ್ಯಾತ್ಮ, ಝೆನ್ ವಿಚಾರಧಾರೆಗಳ ಕೊರತೆ ಕಂಡು ಬರುತ್ತಿದೆ. ‘ಹೈಕು’ ಎಂದರೆ ಒಂದು ಸಾಲಿನ ಮೂರು ತುಕುಡಿಗಳ ಸಮಾಗಮವಲ್ಲ. ಇದೊಂದು ಪರಸ್ಪರ ಪೂರಕ ಹಾಗೂ ವಿರುದ್ಧವಾದ ಎರಡು ಇಮೇಜ್ ಗಳ ಸುಂದರ ಚಿತ್ರ. ಇದು ಯಾವತ್ತೂ ಸ್ಟೇಟ್ಮೆಂಟ್ ಆಗಬಾರದು. ಈ ದಿಸೆಯಲ್ಲಿ ಸಿದ್ಧಲಿಂಗಪ್ಪ ಬೀಳಗಿಯವರು ಚೂರು ಗಮನ ಹರಿಸಿದ್ದೆಯಾದರೆ ‘ಕ್ಲಾಸಿಕ್ ಹೈಕುಗಳ’ ಕಲಾಕೃತಿಯೊಂದು ಸಿದ್ಧಗೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಿರಿಯರಾದ ಬೀಳಗಿಯವರಿಂದ ‘ಹೈಕು ಲೋಕ’ ದೇದೀಪ್ಯಮಾನವಾಗಿ ಹೊಳೆಯಲಿ ಎಂದು ಶುಭ ಕೋರುತ್ತೇನೆ.
“The difficulty of literature is not to write, but to write what you mean.”
–Robert Louis Stevenson
ಡಾ. ಮಲ್ಲಿನಾಥ ಎಸ್. ತಳವಾರ