ಅಂಕಣ ಸಂಗಾತಿ

ಸಕಾಲ

Black and White Abstract Painting · Free Stock Photo

ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆಯಂತೆ ಅಂತಗೊತ್ತಿದ್ದರು,ಕ್ಷಣಿಕ ಲಾಭಕ್ಕೆ ಹಗಲು ಇರುಳು ಚಿಂತಿಸುತ್ತ,ಕೈಲಾಗದ ಕೆಲಸಕೆ ಮೈ ಪರಚಿಕೊಳ್ಳುತ್ತ ತನ್ನೊಟ್ಟಿಗೆ ಇತರರಿಗೂ ತುರಿಕೆಯ ಹಸ್ತಾಂತರಿಸುವ ತುರಕಿಗಿಡದ ಗುಣ ಹೊಂದಿದವರು ನಮ್ಮ ಆಸುಪಾಸು
ಮೇಲ್ನೋಟಕ್ಕೆ ಮುಖವಾಡ.ಅಂತರಂಗದಲಿ ಅವರ ದಳ್ಳುರಿ ಕರುಳ ಸುಟ್ಟು ಅದರ ಹೋಗೆ ಪರರ ಕಣ್ಪರದೆಯ ಮೇಲೆ ಬಿಂಬವಾಗಿ ಮೂಡಿಸಿ,ಅದು ಸತ್ಯವೆಂಬ ಭಾವ ತೇಲಿಸಿ ಉದರಾಗ್ನಿಯ ಕಿಡಿಹಚ್ಚಿ ಸುಖಪಡುವ ವಿಕೃತ ಗೋಮುಖ ವ್ಯಾಗ್ರಗಳಿಗೆ ಉದರ ಶಮನದ ಔಷಧೀಯ ಉಣಬಡಿಸುವ ಅನಿವಾರ್ಯತೆ ಹಿಂದಿಗಿಂತ ಇಂದು ಹೆಚ್ಚಿದೆ.

ಮನಸ್ಸನ್ನು ಮರ್ಕಟಕ್ಕೆ ಹಿರಿಯರು ಹೋಲಿಸಿದ್ದಾರೆ. ಚಂಚಲ ಮನಸ್ಸು ತನಗಿಲ್ಲದ ಸುಖ ತನ್ನ ಆಸುಪಾಸು ಅನುಭವಿಸಬಾರದೆಂದು ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಟೀಕೆ, ನಿಂದನೆಗಳಿಗೆ ಹಾತೊರೆದು ಅವರ ಮೇಲಿನ‌ ಅಸಮಾಧಾನ,ಅಸೂಯೆಯನ್ನು ಎಲುಬಿಲ್ಲದ ನಾಲಿಗೆಯಲ್ಲಿ ಮಂತ್ರ ಜಪಿಸಿದಂತೆ ಪಠಿಸುತ್ತಲೇ ಇರುತ್ತಾನೆ.ಆಗ ಅವನ ಒಡನಾಡಿಗಳಿಗೂ ಮುಜುಗರ.ಸಹಿಕೊಳ್ಳುವ ಕರ್ಮ.ಮುಂದೊಂದು ದಿನ ಬಿಟ್ಟು ಹೋಗುವ ಅನಿವಾರ್ಯ.ಎಷ್ಟು ಸಂಕಷ್ಟ ಕೌರವಗೆ, ಪಾಂಡವರಿಗೆ ರಾಜ್ಯಕೊಡಲು ಒಪ್ಪದೇ ಅವರನ್ನು ಅರಣ್ಯ ಪಾಲು ಮಾಡಿ ಕೆಲದಿನಗಳು ಹೊಟ್ಟೆ ಕಿಚ್ಚು ಪಟ್ಟಿದ್ದು ಕ್ಷಣಗಣನೆಗೆ ಮಾತ್ರ ಕೌರವ ಖುಷಿಪಟ್ಟನೇ ಹೊರತು,18 ದಿನದ ಕುರುಕ್ಷೇತ್ರದ ಮಹಾಯುದ್ಧದ ಸಮಯದಲ್ಲಿ ಎಲ್ಲವನ್ನು ಕಳೆದುಕೊಂಡು ಒಂಟಿಯಾಗಿ ಒಡಲೊಳಗಿನ ಕಿಚ್ಚು ಇಡೀ ಕುರುವಂಶವನ್ನು ಅವನತಿಯ ಅಂಚಿಗೆ ತಂದಿದ್ದನ್ನು ಯಾರು ಮರೆಯಲಾರರು.

ಬೆನ್ನಿಗೆ ಬಿದ್ದ ಬೇತಾಳದಂತೆ ಈ ಹೊಟ್ಟೆಕಿಚ್ಚು.ಪಾಠ ಕಲಿತರೂ ಬಿಡದ ರೋಗವಿದು. ಕಗ್ಗದೊಡೆಯ ಶ್ರೀ ಡಿ.ವಿ.ಜಿಯವರ ಕಗ್ಗದ ಭಾವ ಅರಿತಷ್ಟು ಕಡಿಮೆಯೇ ..

ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ |
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ||
ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ |
ದಿಟ್ಟಿಸುತ ಕರುಬುವೆಯೋ – ಮಂಕುತಿಮ್ಮ

ಹೊಟ್ಟೆಯೊಂದರ ತೋಳಲಾಟ ಸಾಲದು ಎಂದೋ ಏನೋ ವಿಧಿಯು ನರನಲ್ಲಿ ಹೊಟ್ಟೆಕಿಚ್ಚಿನ ಕಿಡಿಯನ್ನು ಹೊತ್ತಿಸಿದ್ದಾನೆ.ಅದು ಹೊಟ್ಟೆ ತುಂಬಿದ ನಂತರ ತೋಳ ಮಲಗೀತೋ ಏನೋ ಆದರೆ ನೀನು ಮಾತ್ರ ಮತ್ತೊಬ್ಬರನ್ನು ಗಮನಿಸುತ್ತ ಹೊಟ್ಟೆಕಿಚ್ಚು ಪಡುತ್ತಿರು.. ಎಂದು ಸೃಷ್ಟಿ ಮಾಡಿದ್ದಾನೆಂಬ ಚಿಂತೆ ಕಾಡದಿರದು. ಹೀಗಾಗಿ ಇದು ಹುಟ್ಟಿನಿಂದ ಬೆನ್ನಿಗೆಬಿದ್ದ ಬೇತಾಳದಂತೆ.

ಮನುಷ್ಯನಿಗೆ ಮುಖ್ಯವಾಗಿ ಕಾಡುವ ಹಲವಾರು ಸಮಸ್ಯೆಗಳಲ್ಲಿ,ಇವೊಂದಿಷ್ಟು ಆಸು ಪಾಸು ಹಾದು ಹೋಗುವ ಸಮಸ್ಯೆ ಅಷ್ಟೇ.

೧) ಮೊದಲನೆಯದು ಹೊಟ್ಟೆಯದು. ಹೊಟ್ಟೆಪಾಡಿಗೋಸ್ಕರ ಮನುಷ್ಯ ಮಾಡದ ಕೆಲಸವಿಲ್ಲ, ಪಡದ ಬವಣೆಯಿಲ್ಲ.

೨) ಎರಡನೆಯದು ಭಾಗವತರು ಹೇಳುವಂತೆ
ಮೃತವೃತ್ತಿ, ಪ್ರಮೃತ ವೃತ್ತಿ,ಸತ್ಯಾನೃತವೃತ್ತಿ ಹಾಗೂ ಶ್ವಾನ ವೃತ್ತಿಗಳು.

೩) ಉದರದಲ್ಲಿ ಹೊಟ್ಟೆಕಿಚ್ಚನ್ನು ಕಾಪಾಡಿಕೊಂಡಿವೆ. ತಿರಿದು ತಿನ್ನುವುದು, ದೈನ್ಯದ,ಅವಮಾನದ ಬದುಕೇ ಮೃತ ವೃತ್ತಿ.

೪) ಕಷ್ಟಪಟ್ಟು ದುಡಿದು ತಿನ್ನುವುದು ಪ್ರಮೃತ ವೃತ್ತಿ.

೫) ಸುಳ್ಳು-ಸತ್ಯಗಳ ಬೆರಕೆ ಮಾಡಿ, ಮೋಸ ಮಾಡಿ ಬದುಕುವುದು ಸತ್ಯಾನೃತ ವೃತ್ತಿ.

೬) ಹೊಟ್ಟೆಪಾಡಿಗಾಗಿ ಅಯೋಗ್ಯರಿಗೆ ಅಡ್ಡಬಿದ್ದು ಬದುಕುವುದು ನೀಚ ಸೇವೆ, ಅದೇ ನಾಯಿಬಾಳು, ಶ್ವಾನವೃತ್ತಿ.

ಈ ಮೇಲಿನ ಮನಸ್ಸುಳ್ಳವರು ಹೇಗಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.ಇದಕ್ಕಿಂದ ದೊಡ್ಡದಾದ ಸಮಸ್ಯೆಯೊಂದಿದೆ. ಅದು ಹೊಟ್ಟೆಕಿಚ್ಚಿನ ಸಮಸ್ಯೆ. ಹೊಟ್ಟೆ ತುಂಬಿದಾಗ ದೇಹ ಸಾಕು ಎನ್ನುತ್ತದೆ, ಇನ್ನು ತಿನ್ನುವುದು ಅಸಾಧ್ಯ ಎನ್ನುತ್ತದೆ, ಸ್ವಲ್ಪ ಕಾಲವಾದರೂ ಸುಮ್ಮನಿರುತ್ತದೆ. ಆದರೆ ಮನಸ್ಸಿನಲ್ಲಿ ಇದೆಯಲ್ಲ ಆ ಹೊಟ್ಟೆಕಿಚ್ಚು, ಒಂದು ಕ್ಷಣವೂ ಮನುಷ್ಯನನ್ನು ಸುಮ್ಮನಿಡಗೊಡುವುದಿಲ್ಲ. ತನಗೆ ತೃಪ್ತಿಯಿದ್ದರೂ ಮತ್ತೊಬ್ಬರ ಸಂತೋಷವನ್ನು ಕಂಡಾಗ ಕುದಿದು ಹೋಗುತ್ತದೆ. ಪಕ್ಕದ ಮನೆಯ ವಿನ್ಯಾಸ,ಬಂಗಾರ, ವಸ್ತ್ರ,ಟಿ.ವಿ,ಬೈಕ್, ಕಾರು, ಕಂಡಾಗ ತನ್ನದು ಅವರದ್ದಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿರಬೇಕೆಂದು ಬಯಸುತ್ತದೆ. ತಾನು ಚೆನ್ನಾಗಿದ್ದರೂ ಪಕ್ಕದವರು ಸಂತೋಷವಾಗಿದ್ದರೆ ಹೊಟ್ಟೆ ಉರಿಯುತ್ತದೆ.

ಸಿರಿವಂತನಿಗೆ ಆಸ್ತಿ ಪಾಸ್ತಿಗೇನೂ ಕೊರತೆಯಿಲ್ಲ. ಅಪಾರ ಹಣವನ್ನು ಗಳಿಸಿ ಅರಮನೆಯಂಥ ಮನೆಯನ್ನು ಕಟ್ಟಿಕೊಂಡು, ಭೋಗ ಜೀವನದಲ್ಲಿ ಯಾವುದೇ ಕೊರತೆ ಇರದಿದ್ದರೂ, ಅವನಿಗಿದ್ದ ಸಮಸ್ಯೆ ತನ್ನ ಮನೆಯ ಮಾಳಿಗೆಯ ಮೇಲೆ ನಿಂತು ನೋಡಿದರೆ ಅವನ ತೋಟದ ಕೆಲಸ ಮಾಡುವ ಮಾಲಿಯು ತನ್ನ ಮನೆಯ ಜಗಲಿ ಮೇಲೆ ಸುಖವಾಗಿ ನಿದ್ರಿಸುವುದು ಕಾಣುತ್ತದೆ.ಯಾವ ಸೌಲಭ್ಯಗಳನ್ನು ಹೊಂದಿರದ ಮಾಲಿ ನಿಶ್ಚಿಂತೆಯಿಂದ ಮಲಗಿರಲು ಹೇಗೆ ಸಾಧ್ಯ? ತಾನು ಅಷ್ಟು ಕೋಟಿ ಗಳಿಸಿ,ಅಧಿಕಾರ ಪಡೆದು ಮೆರೆದರೂ ಅವನ ಹಾಗೆ ಗಾಢ ನಿದ್ರೆ ತನಗೊಂದು ದಿನ ಬಂದಿಲ್ಲವೆಂಬುದೆ ಅವನ ಹೊಟ್ಟೆಯುರಿಗೆ ಕಾರಣ. ನೆಮ್ಮದಿ ಕೆಡಲು ಇಷ್ಟು ಸಾಕು.

ಅದಕ್ಕೆಕಗ್ಗ ಹೇಳುತ್ತದೆ.ತೋಳ ಸದಾ ಆಹಾರವನ್ನು ಹುಡುಕುವ ಪ್ರಾಣಿ,ಹೊಟ್ಟೆ ತುಂಬಿದರೂ ನಾಳೆಗೋಸ್ಕರ ಆಹಾರವನ್ನು ಹುಡುಕಲು ತಡಕಾಡುವ ಪ್ರಾಣಿ. ಅಂಥ ಪ್ರಾಣಿಯೂ ಕೆಲವೊಮ್ಮೆ ತೃಪ್ತಿಯಿಂದಿರಬಹುದೇನೋ, ಆದರೆ ಮನುಷ್ಯ ಮಾತ್ರ ಮತ್ತೊಬ್ಬರನ್ನು ಕಂಡು ತನ್ನಲ್ಲಿರದ್ದನ್ನು ಅವರಲ್ಲಿ ಕಂಡು ಸಂಕಟಪಡುತ್ತಾನೆ.

ಹೊಟ್ಟೆ ಹೊರೆಯುವುದು ಕಷ್ಟವಾದರೂ,ಪರವಾಗಿಲ್ಲ ಸಹಿಸಿಕೊಂಡು,ತಣ್ಣೀರ ಪಟ್ಟಿ ಹಾಕಿಕೊಂಡು ಇರಬಹುದು.ಆದ್ರೆ ಹೊಟ್ಟೆಕಿಚ್ಚನ್ನು ನಿಭಾಯಿಸುವುದು ನಿಗ್ರಹಿಸುವುದು ಅಷ್ಟು ಸುಲಭವಲ್ಲ.ಹೊಗಳುವಿಕೆಯ ವಿಷಮ ಸ್ಥಿತಿ ಉದರದಾಟಿ ಕಂಠದಲಿ ಅವಿತ ಹಾಲಾಹಲದಂತೆ.ಇಂತವರಿಂದ ದೂರ ಇರಲು ಪ್ರಯತ್ನ ಮಾಡಲು ಆಗದು.ಎಲ್ಲಿದ್ದರೂ ಹೇಗಿದ್ದರೂ ಇವರಂತಾ ಮನೋಭಾವದವರು ಫಿನಿಕ್ಸ ಪಕ್ಷಿಯ ಹಾಗೆ ಹುಟ್ಟುತ್ತಲೇ ಇರುತ್ತಾರೆ.ಕಾಡುತ್ತಲೆ ಇರುತ್ತಾರೆ. ನೊಂದುಕೊಂಡಷ್ಟು ಸುಖ ಅವರಿಗೆ.

ಅಂತವರ ಕುಹಕ ನೋಟ,ಮಾತುಗಳಿಗೆ,ಅಸಹಜ ವರ್ತನೆಗಳಿಗೆ ತಲೆಕೆಡಿಸಿಕೊಳ್ಳದೇ ನಮ್ಮೊಳಗಿನ ಉದರಕ್ಕೆ ಪ್ರೀತಿ,ಸ್ನೇಹ,ವಿಶ್ವಾಸ ತುಂಬುವ ಕೆಲಸ ನಿಧಾನವಾದರೂ ಮಾಡುತ್ತಿದ್ದಷ್ಟು ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ….ಹೊಟ್ಟೆಕಿಚ್ಚು ಹೊಟ್ಟೆ ಹುಣ್ಣಾಗಿ ಪರಿವರ್ತನೆಯಾಗದಂತೆ ಬೆರೆವ ಭಾವ ಅರಿತಷ್ಟು ಒಳಿತಲ್ಲವೆ ಬಾಳಿಗೆ…..
——————————

ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

10 thoughts on “

  1. Hottekichhige maddilla.anthavra bagge talekedisikolluvudu bittu munde sagabeku ashte.nice article

    1. ಹೊಟ್ಟೆ ಕಿಚ್ಚು ಅವರ ಅಂತರಾಳದಲ್ಲಿ ಅಗ್ನಿ ಹೊತ್ತಿಸಿ ಅವರು ಒಡಲನ್ನು ಸುಡುತ್ತದೆ. ಉತ್ತಮ ಹಾಗೂ ಪ್ರಸ್ತುತ ಸಂದರ್ಭದಲ್ಲಿ ಉಪಯುಕ್ತ ಲೇಖನ

  2. ಖಂಡಿತ ಸತ್ಯವಾಗಿದೆ..
    ಉದರ ನಿಮಿತ್ತಂ..
    ಬಹುಕೃತ ವೇಶಂ..
    ಎನ್ನುವಂತಿದೆ ನವಜಾಯಮಾನ..

  3. ಮನುಷ್ಯನ ಜೀವನದ ಒಳ ಹಾಗೂ ಹೊರ ಮರ್ಮಗಳ ಸೊಗಸಾಗಿ ತೆರೆದಿಟ್ಟಿರುವೆ ಸಹೋದರಿ.

  4. ತುಂಬಾ ಸುಂದರ ಲೇಖನ ರೀ ಮೇಡಂ . ಅತೃಪ್ತಿ, ಅಸಮಾಧಾನ,ಗಳ್ಳನ್ನೇ ತುಂಬಿ ಕೊಂಡ ಮಾನವನ ಬದುಕಿನ ಅಂತರಂಗ, ಬಹಿರಂಗ ದ ಮಜಲುಗಳನ್ನು ತೋರಿಸಿಕೊಟ್ಟಿದ್ದು ಅತೀ ಸುಂದರ ಮನೋಜ್ಞವಾಗಿ ಮೂಡಿಬಂದಿದೆ.

  5. ಹೊಟ್ಟೆಕಿಚ್ಚನ್ನು ವಿಧಗಳನ್ನು ನೈಜವಾಗಿ ಚಿತ್ರಿಸಿದ್ದೀರಿ .ಪ್ರಸ್ತುತ ಸಾಮಾಜಿಕ ವಾಗಿ ನಡೆಯುತ್ತಿರುವ ಅನುಭವಗಳನ್ನು ಪದಗಳಲ್ಲಿ ವರ್ಣಿಸಿದ್ದೀರಿ .ಅತ್ಯದ್ಭುತವಾದ ಲೇಖನ

  6. ಸಾರ್ಥಕ ಬದುಕಿಗೆ ಸಾಹಿತ್ಯ ಸಂಗಾತಿ ನಿಜ.ಯಾವಾಗ? ಈ ಲೇಖನ ಓದಿದಾಗ ನಾ..? ಎಂಬ ಪ್ರಶ್ನೆ. ಅಲ್ಲ ಮನುಷ್ಯ ಎಂದ ಮೇಲೆ ಕೇಳುವುದಿದೆಯೆ ಲೇಖಕಿಯರು ಬಿಂಬಿಸಿದಂತೆ ಯಾರಲ್ಲಿ ಯಾವ ರೀತಿ ಹೇಗೆ ಮುಖವಾಡ ಇದೆಯೊ ತಿಳಿಯದು.ಅಲ್ಲದೆ ಹೊಟ್ಟೆಕಿಚ್ಚು ಪರರನ್ನು ಸುಡುವುದಕ್ಕಿಂತ ಆಲೋಚಿಸಿದವನ ಬದುಕೆ ನಾಶ ಮಾಡುತ್ತದೆ.ಹಾಗಾಗಿ ಓದಿದರೆ ಆಗಿಲ್ಲ ಓದಿದನ್ನು ತನ್ನಲ್ಲಿ ಅಳವಡಿಸಿಕೊಂಡಾಗ ಈ ಸಾಹಿತ್ಯ ಸಂಗಾತಿಯಾಗಲು ಸಾಧ್ಯ.ಪ್ರಸ್ತುತ ಲೇಖನ ಚೆನ್ನಾಗಿ ಮೂಡಿಬಂದಿದೆ

Leave a Reply

Back To Top