ತೇಜಸ್ವಿ

ಕಾವ್ಯ ಸಂಗಾತಿ

ತೇಜಸ್ವಿ

ಕಾಂತರಾಜು ಕನಕಪುರ

(ಇಂದು ಪೂರ್ಣಚಂದ್ರ ತೇಜಸ್ವಿಯವರ ಪುಣ್ಯಸ್ಮರಣೆಯ ಹದಿನೈದನೇ ವರ್ಷದ ನೆನಪಿನಲ್ಲಿ)

ಚಿತ್ರಕೂಟದಲಿರುವ ನಿರುತ್ತರ
ಮೌನವಾಗಿದೆ ನೀಡದೆ ಯಾವ ಮರುತ್ತರ
ನೀವಿಂದಿಗೆ ದಿಟದ ಮನೆಗೈದು
ಸಂದಿವೆ ವರ್ಷ ಹದಿನೈದು

ತಿಳಿವಿನ ಕೊಳವು ಬತ್ತಿ ಹೋದಾಗ
ಅರಿವಿನ ಸಲಿಲವೇ ನೀವಾದಿರಿ ಆಗ
ಆಲೋಚನೆಯ ಅದ್ಭುತ ಲೋಕವ ಹರಡಿ
ಹೇಳುತಲಿದ್ದಿರಿ, ನೀವದರೊಳು ಹೊರಡಿ

ಅಧಿಕಾರದ ಅಹಮಿಕೆಯ ಗದ್ದುಗೆಗೆ
ಸದಾಕಾಲವೂ ಪರಾಙ್ಮುಖ
ಬದುಕಿನ ಮಜಲುಗಳನು ತೋರುವುದರಲಿ
ಯಾವತ್ತಿಗೂ ನೀವು ದಶಮುಖ

ತೋರಿಸಲು ನಮಗೆ ಸುತ್ತ-ಮುತ್ತಲಿನ
ನಿಜವಾದ ಮಾಯಾಲೋಕವನು
ಹಿಡಿದಿರಿ ಸಾಹಿತ್ಯ, ಶಿಕಾರಿ, ಛಾಯಾಗ್ರಾಹಣವೆಂಬ
ವಿವಿಧ ಸ್ವರೂಪದ ನೆಪಗಳನು

ಸಿಕ್ಕಿದರು ನಿಮಗೆ ತೋರಲು ನಾಡು-ಕಾಡಿನ ಸಂಕ್ಟ
ಪ್ಯಾರ, ಮಾರ, ಮುನಿಯ, ಮಂದಣ್ಣ ಮತ್ತು ಎಂಗ್ಟ
ಚೀಂಕ್ರ, ಬೈರ, ಮಾಸ್ತಿ, ಕಾಳಪ್ಪನಲ್ಲದೆ, ಕಿವಿಯ
ಕಣ್ಣುಗಳಿಂದಲೂ ತೋರಿದಿರಿ ಬದುಕಿನ ಪರಿಯ

ಇಂದಾಗಿದೆ ನಮ್ಮದೇ ಊರು
ನೀವು ಅಂದು ತೋರಿದ್ಧ ಕೆಸರೂರು
ಉಣ್ಣುವುದು ದ್ವೇಷ ಉಸಿರಾಡುವುದು ತ್ವೇಷ
ಕಲಹಪ್ರಿಯರ ಆಡುಂಬೊಲವಾಗಿದೆ ಈ ದೇಶ

ಎಚ್ಚರಿಸಿದ್ದಿರಿ ಸಮಾಜವನು
ಮಾತು-ಕೃತಿಗಳ ಮೂಲಕ ನೀವಂದು
ಕೇಳುವವರಿಲ್ಲ ದುಷ್ಟರನು
ಅವರಿಗೆಲ್ಲೆಲ್ಲೂ ಜೈಕಾರವೇ ಇಂದು

ಅವರಿಗೇ ಸಲ್ಲುತ್ತಿದೆ ಎಲ್ಲರಿಂದಲೂ
ಎಲ್ಲೆಡೆಯಿಂದಲೂ ಸಲಾಮು
ಸುಖ ನಿದ್ದೆಯಲ್ಲಿದ್ದಾರೆ ಹಚ್ಚಬೇಕಾದವರು
ಆದ ಗಾಯಗಳಿಗೆ ಮುಲಾಮು

ಸಪ್ಪಗಾದ ನಾಡಿಗಾಗಿ
ಉಪ್ಪು ತರಹೋಗಿಹ ಓರುಗರೇ
ತೇಜಸ್ವಿಯವರೇ… ನಿಜವಾದ ಓಜಸ್ವಿಯವರೇ…
ಒಳಮನಸು ಕೇಳುತಿದೆ, ಬತ್ತದ ಭರವಸೆಯಲಿ
ಮತ್ತೆ ನೀವು ಹುಟ್ಟಿ ಬರುವಿರೇ?!
:-ಕಾಂತರಾಜು ಕನಕಪುರ

(ಇಂದು ಪೂರ್ಣಚಂದ್ರ ತೇಜಸ್ವಿಯವರ ಪುಣ್ಯಸ್ಮರಣೆಯ ಹದಿನೈದನೇ ವರ್ಷದ ನೆನಪಿನಲ್ಲಿ)

Leave a Reply

Back To Top