ಅಂಕಣ ಸಂಗಾತಿ

ಕಾವ್ಯದರ್ಪಣ

ಆಶಾ ಮಯ್ಯ

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನುl

ಅಸಮಂಜಸದಿ ಸಮನ್ವಯ ಸೂತ್ರ ನಯವll

ವೆಸನಮಯ ಸಂಸಾರದಲಿ ವಿನೋದವ ಕಾಣ್ವl

ರಸಿಕತೆಯ ಯೋಗವೆಲೊಮಂಕುತಿಮ್ಮ“ll

       ಡಿ.ವಿ.ಜಿ.

(ಮಂಕುತಿಮ್ಮನ ಕಗ್ಗ)

ಕಾವ್ಯ ಪ್ರವೇಶಿಕೆಯ ಮುನ್ನ

ಜೀವನ ಎಂದ ಮೇಲೆ ಸಹಜತೆ ಇರಬೇಕುಜೊತೆಗೆ ನೈಜತೆಯ  ಪ್ರದರ್ಶನ ಮಾಡಬೇಕು. ಅದರ ಬದಲು ಮುಖವಾಡ ತೊಡಬಾರದು. ಅಸಹಜ ಮತ್ತು ಸುಂದರವಾದ ಮೊಗ ನಮ್ಮದಾಗಿರುವಾಗ ಮುಖವಲ್ಲದ ಮುಖವಾಡ ಧರಿಸಿ ಸಮಾಜವನ್ನು ವಂಚಿಸುವುದು, ಮುಗ್ಧರನ್ನು ಯಾಮಾರಿಸುವುದು, ಅಸಹಾಯಕರ ಮೇಲೆ ಗೋಮುಖ ವ್ಯಾಘ್ರಗಳಂತೆ ದಾಳಿ ಮಾಡುವುದು ಮಾನವಕುಲಕ್ಕೆ ಶೋಭೆಯಲ್ಲ. ಮನುಷ್ಯರಾಗಿ ನಮ್ಮಲ್ಲಿ ಹಲವಾರು ದೌರ್ಬಲ್ಯಗಳು ಇರುವವು. ಆದರೆ ಅವುಗಳು ತಪ್ಪು ಎಂದು ತಿಳಿದಾಗ ಸರಿಪಡಿಸಿಕೊಂಡು ತಿದ್ದಿಕೊಂಡು ನಡೆಯುವುದು ಅನಿವಾರ್ಯ ಎಂಬುದಕ್ಕಿಂತ ಅತ್ಯಗತ್ಯ ಎಂದರೇನೇ ಸೂಕ್ತ ಆಗುತ್ತದೆ. ಅಂತಹ ಕಪ್ಪಾದ ಗುಣಗಳಿಗೆ ಉತ್ತಮಿಕೆಯ ರಂಗಿನ ಬಣ್ಣಗಳನ್ನು ಬಳಿಯಬೇಕು ಎಂಬುದು ಇವತ್ತಿನ ದಿನಮಾನಕ್ಕೆ ತುಂಬಾ ಅಗತ್ಯವಾಗಿದೆ.

ಮನುಜ ಇತರರಲ್ಲಿ ಬದಲಾವಣೆ ಬಯಸುವ ಬದಲು ಸ್ವ ಸುಧಾರಣೆಗೆ ಪ್ರಯತ್ನಿಸಿದರೆ ಸಮಾಜ ತಂತಾನೆ ಪರಿವರ್ತನೆಯಾಗುತ್ತದೆ. ಆಗ ಕೆಡುಕು ದುಷ್ಟತನದ ಮಸಿ  ಮರೆಯಾಗಿ ಒಳ್ಳೆಯ ವ್ಯಕ್ತಿತ್ವ ರೂಪುಗೊಂಡು ಬದುಕಿನ ಬಣ್ಣ ರಂಗೇರುತ್ತದೆ. ಹೌದು ಸ್ನೇಹಿತರೆ ಇಂದು ನಾನು ರಂಗಿನ ಬರಹದ ಮೂಲಕ ರಂಗೇರಿಸುವ ಕವಿತೆಯೊಂದನ್ನು ನಿಮ್ಮ ಮುಂದೆ ತಂದು  ಚರ್ಚಿಸಲಿರುವೆ.

ಕವಿ ಪರಿಚಯ

ಶ್ರೀಮತಿ ಆಶಾ ಮಯ್ಯ ಇವರು ಪುತ್ತೂರಿನ ಪ್ರಗತಿಪರ ಕೃಷಿಕ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿರುವ ಡಿ. ಶಿವಪ್ರಸಾದ್ ಮಯ್ಯ ಅವರ ಧರ್ಮಪತ್ನಿ.

      ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿಯೂ, ಪದವಿ ಶಿಕ್ಷಣವನ್ನು ಬಂಟ್ವಾಳದ ಎಸ್. ವಿ.ಎಸ್. ಕಾಲೇಜಿನಲ್ಲೂ ಪೂರೈಸಿದರು. ನಂತರ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು, ಮೈಸೂರು ಮುಕ್ತ  ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಅಲ್ಲದೇ ಡಿಪ್ಲೋಮ ಇನ್ ಕಂಪ್ಯೂಟರ್ ಅಪ್ಲಿಕೇಶನ್ ತರಬೇತಿ ಕೂಡ ಮಾಡಿದ್ದಾರೆ. ಬರವಣಿಗೆ, ಡ್ರಾಯಿಂಗ್, ಕಸೂತಿ, ರಂಗೋಲಿ, ಹಾಡುಗಾರಿಕೆ ಇವರ ಚಿಕ್ಕ ಪುಟ್ಟ ಹವ್ಯಾಸಗಳು. ಪುಸ್ತಕಗಳು ಅಂದ್ರೆ ಪ್ರಾಣ. ಓದುವುದು ಇಷ್ಟದ ಹವ್ಯಾಸ.

 ಕಳೆದ ಮೂರುವರೆ ವರುಷದಿಂದ ಭಾವಗೀತೆಕವನ, ಕಥೆ, ಲೇಖನ, ರುಬಾಯಿ, ಗಝಲ್, ಷಟ್ಪದಿ, ಮುಕ್ತಕ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಬರೆಯುತ್ತ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆಶಾಮಯ್ಯ ಅವರು 2021 ರಲ್ಲಿಕಾವ್ಯ ಸಿಂಧುಎಂಬಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.‌ ಪ್ರಸ್ತುತ ಕವಿತೆಯನ್ನು ಇದೆ ಪುಸ್ತಕದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ

ಇವರು ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಜ್ಯಮಟ್ಟದ ಅಂತರ್ಜಾಲ ಕವನ ಸ್ಪರ್ಧೆಯಲ್ಲಿ ಸತತ ಎರಡು ಬಾರಿ  ತೃತೀಯ ಸ್ಥಾನ ದೊರಕಿದೆ. ಈಗಾಗಲೇ ಇವರಿಗೆ ನವಪರ್ವ ಸವ್ಯಸಾಚಿ ಪ್ರಶಸ್ತಿ 2020 ಮತ್ತು ಸಜ್ಜನ ಚಂದನ ಸದ್ಭಾವನಾ  ಪ್ರಶಸ್ತಿ 2020 ಹಾಗೂ 2022 ನೇ ಸಾಲಿನ ಚಂದನ ಸೌರಭ ಪ್ರಶಸ್ತಿ ಲಭಿಸಿದೆ.

ಕವಿತೆಯ ಶೀರ್ಷಿಕೆ

ಬಳಿಯಬೇಕಿದೆ ರಂಗು

 ಮಸಿಯನಳಿಸುತಲಿ

ಶೀರ್ಷಿಕೆ ಬದಲಾವಣೆಯನ್ನು ಬಯಸುತ್ತದೆ. ಬದುಕಿನ ಎಲ್ಲ ಭಾವಬಂಧಗಳಿಗೂ ನವಚೈತನ್ಯ ತುಂಬಬೇಕು. ಮಾನವೀಯ ನೆಲೆಗಟ್ಟಿನಲ್ಲಿ ಸಮಾಜಕ್ಕೆ ಹಾನಿಕರವೆನಿಸಿದ ತಪ್ಪುಗಳನ್ನು ಮುಂದುವರಿಸದೆ ಅವುಗಳ ಅಂತ್ಯಕ್ಕೆ  ನಾಂದಿ ಹಾಡಬೇಕು. ಹಳೆಯ ಎಲೆಗಳು ಉದುರಿ ಮಾಮರವು ಚಿಗುರುವಂತೆ ನವ ನಾವಿನ್ಯತೆಯ ಉತ್ತಮ ಬಾಳ ದಾರಿಯ ಕಂಡುಕೊಳ್ಳಬೇಕು. ನಿಟ್ಟಿನಲ್ಲಿ ಶೀರ್ಷಿಕೆ ಬಹಳ ಒಪ್ಪವಾಗಿ ಒಪ್ಪಿದೆ. ಇಲ್ಲಿ ಬಳಿಯಬೇಕಿದೆ ರಂಗು ಎಂಬ ಮೆಟಫರ್ ಬದಲಾವಣೆಯ, ಪರಿವರ್ತನೆಯ ರೂಪದಲ್ಲಿ ಮೂಡಿಬಂದಿದೆ.

ಕವಿತೆಯ ಆಶಯ

ಪರಿವರ್ತನೆಯ ಆಶಯ ಬಯಸಿ ಜೀವಂತಿಗೆ ಪಡೆದ ಕವಿತೆಬಳಿಯಬೇಕಿದೆ ರಂಗು ಮಸಿಯನಳಿಸಿಎಂಬುದು.ಇಲ್ಲಿ ಕವಯತ್ರಿ ಬದುಕಿನ ಎಲ್ಲ ಆಯಾಮಗಳನ್ನು ಓದುಗರ ಮುಂದಿಡುತ್ತಾರೆ. ಅದನ್ನು ಓದಿ ಜೀರ್ಣಿಸಿಕೊಂಡ ಮನುಜ ತನ್ನ ಜೀವನದ ಕಲೆಗಳನ್ನು ಅಳಿಸಿ ಕೊಂಡು ಸುಂದರವಾದ ರಂಗು ರಂಗಿನ ಬಣ್ಣಗಳನ್ನು ಬಳಿದುಕೊಂಡು  ಸಾಮಾಜಿಕವಾಗಿ, ಆರೋಗ್ಯಕರವಾಗಿ, ಭಾವನಾತ್ಮಕವಾಗಿ ಸಮಾಜವನ್ನು ತಹಬದಿಗೆ ತಂದು ತಪ್ಪುಗಳನ್ನು ಸರಿಸಿ ಅವರ ನಾಲಿಗೆಯಿಂದ ಸತ್ಯ ಹೇಳಿಸುವ ಪ್ರಯತ್ನ ಕವಯತ್ರಿಯದಾಗಿದೆ.

ಇಲ್ಲಿ ಕವಯತ್ರಿ ಜೀವನದ ನಾನಾ ಮುಖಗಳನ್ನು, ಮುಖವಾಡಗಳನ್ನು ಕಳಚುವ ಹೆಜ್ಜೆಯಿಟ್ಟಿದ್ದಾರೆ. ಬಾಳದಾರಿಯಲ್ಲಿ ನಾನಾ ಮಜಲುಗಳಲ್ಲಿ ನಮಗೆ ಎಲ್ಲಾ ರೀತಿಯ ಜನರು ಎದುರಾಗುತ್ತಾರೆ. ವಂಚಿಸುವವರು, ಮೋಸ ಮಾಡುವವರು ಸೇರಿರುತ್ತಾರೆ. ನಾವು ಅವರನ್ನು ಬದಲಾವಣೆಯೆಡೆಗೆ ಮುಖ ಮಾಡಿಸಬೇಕು. ಬದುಕಿನ ರಂಗಮಂದಿರದಲ್ಲಿ ಸತ್ಯ ಮಿಥ್ಯಗಳ ಪ್ರದರ್ಶನಗಳೆರಡನ್ನು ಕಾಣಬಹುದು. ಆಗ ಅಸತ್ಯದಲ್ಲಿ ಇರುವವರನ್ನು ಸತ್ಯವೆಂಬ ಬೆಳಕಿನಡೆಗೆ ಸಾಗಿಸಬೇಕೆಂದು ಕವಿತೆ ಬಯಸುತ್ತದೆ.

ದಾರಿಯೂ ಹೂವಿನ ಹಾಸಿಗೆಯಲ್ಲ ಕಲ್ಲು ಮುಳ್ಳುಗಳಿಂದ ಕೂಡಿದ ಕಠಿಣವಾದ ದುರ್ಗಮ ಮಾರ್ಗವಿದು. ಸತ್ಯದ ದಾರಿಯು ಕಷ್ಟವಾದರೂ, “ಮನಸ್ಸಿದ್ದರೆ ಮಾರ್ಗಎಂಬ ನಾಣ್ಣುಡಿಯಂತೆ ಅದರಲ್ಲಿ ಸಾಗಿ ಬಂದರೆಹೊಳೆಯುವ ಸ್ಪಟಿಕದಂತೆನಳನಳಿಸುತ್ತೇವೆ. ದಾರಿಯನ್ನು ಕ್ರಮಿಸುವಾಗ ಎಡರು ತೊಡರುಗಳು ಬಂದರೂ ಅವೆಲ್ಲವನ್ನು ಮುಂಜಾವಿನ ಮಂಜಿನಂತೆ ಎಂದು ಭಾವಿಸಬೇಕು” .ಸುಖ ಎಂಬುದು ಬಂದಾಗ ಕಷ್ಟಗಳು ಸೂರ್ಯನಾಗಮನಕ್ಕೆ ಹಿಮಮಣಿಯು ಕರಗಿ ನೀರಾಗುವಂತೆ ಜಾರಿಹೋಗುತ್ತವೆ.

ಹಲವಾರು ಬಿಡಿಸಲಾರದ ಬಂಧನಗಳನ್ನು ಮನುಜ ಸಹಜ ಆಸೆ ಆಕಾಂಕ್ಷೆಗಳನ್ನು ಪ್ರಸ್ತಾಪಿಸುತ್ತಾ, ಕುವೆಂಪುರವರು ಬಯಸಿದಸರ್ವ ಜನಾಂಗದ ಶಾಂತಿಯ ತೋಟವನ್ನು ಮಾಡುವ ಹಂಬಲ ಕವಯತ್ರಿಯ ಲೇಖನಿಯದ್ದಾಗಿದೆ. ಬಹಳ ಪ್ರಮುಖವಾಗಿ ಕಂದಾಚಾರಗಳಲಿ ಮುಳುಗಿರುವ ಜನರನ್ನು ವೈಚಾರಿಕ ಆಲೋಚನೆಗಳಲ್ಲಿ ಮುಳುಗಿಸಿ ಪ್ರೀತಿ ಪ್ರೇಮದ ರಂಗನ್ನು ಬಳಿಯಬೇಕು ಎಂಬುದು ಕವಿತೆಯ ಆಶಯವಾಗಿದೆ.

ಕವಿತೆಯ ವಿಶ್ಲೇಷಣೆ

ಚದುರಿದ ಬಣ್ಣಗಳು ಹರಡಿರುವ ಕನಸುಗಳು

 ಆಗೊಮ್ಮೆ ಈಗೊಮ್ಮೆ ದುಮ್ಮಿಕ್ಕುವ ಭಾವಗಳು

 ಬಾಳೆಂಬ ಯಾನದಲ್ಲಿ ಚಿತ್ತಾರವ ಮೂಡಿಸಲು

 ಬಳಿಯಬೇಕಿದೆ ರಂಗು ಮಸಿಯನಳಿಸುತಲಿ

ಬಾಳ ಯಾನದಲ್ಲಿ ಬಣ್ಣಗಳಿದ್ದರೆ ಮೆರುಗು ಬೆರಗು. ಬಣ್ಣಗಳಿಲ್ಲದ ಬದುಕು ಕಳೆಹೀನ, ಫಲಗಳಿಲ್ಲದ ಬರಡು ವೃಕ್ಷದಂತೆ‌, ಹುಣ್ಣಿಮೆ ಕಾಣದ ರಾತ್ರಿಯಂತೆ. ಎಲ್ಲಿ ನೋಡಿದರೂ ನಶೆಯೆ ನಶೆ.ಕಂಗಳ ಸುತ್ತ ಕಾರ್ಗತ್ತಲು. ಜೀವನದಲ್ಲಿ ಬಣ್ಣ ಬಣ್ಣದ ಕನಸುಗಳು ಹರಡಿವೆ. ಅವುಗಳನ್ನು ನನಸು ಮಾಡಿಕೊಳ್ಳುವುದು ತುಂಬಾ ಮುಖ್ಯ. ಕನಸುಗಳಿಲ್ಲದ ಬದುಕು ಗುರಿಯಿಲ್ಲದ ಪಯಣದಂತೆ. ಹಾಗಾಗಿಯೇ ಅಬ್ದುಲ್ ಕಲಾಮ್ ಅವರುಕನಸು ಕಾಣಿರಿಎಂದಿರುವುದು

ಜೊತೆಗೆ ಬಾಳೆಂಬ ಪಯಣದಲ್ಲಿ ಎಲ್ಲಾ ನೀರಸತೆ ಹೋಗಲಾಡಿಸುವುದು ಅನಿವಾರ್ಯ. ನಮ್ಮ ಮನಸ್ಸು ಒಂದು ವಿಶಾಲ ಸಾಗರದಂತೆ. ಇದರ ತುಂಬಾ ಭಾವಗಳ ಆರ್ಭಟ.ಇದರಲ್ಲಿ ಕೆಲವು ನಮಗೆ ಖುಷಿ ಕೊಡುತ್ತವೆ. ಮತ್ತೆ ಕೆಲವು ದುಃಖವನ್ನು ತರುತ್ತವೆ. ಅವುಗಳನ್ನು ತಡೆಯುವ ಶಕ್ತಿ ನಮಗಿಲ್ಲ. ಆದರೆ ಧುಮ್ಮಿಕ್ಕುವ ಭಾವಗಳನ್ನು ನಮ್ಮ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸದಿಂದ ಯಶಸ್ವಿಯಾಗಿ ಎದುರಿಸಬಹುದು ಎಂದು ಹೇಳುತ್ತಾರೆ ಕವಯತ್ರಿ. ಭಾವಗಳಿಗೆ ಸೋತು ಬದುಕನ್ನು ಜಿಗುಪ್ಸೆಯಲ್ಲಿ ಸಿಲುಕಿಸಿಕೊಂಡು ಅಂದಾಜಿಗೂ ಸಿಗದಂತಹ ನೋವನ್ನು ಉಂಡು ಬದುಕುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ಬಾಳೆಂಬ ಯಾನದಲ್ಲಿ ಕಾಮನಬಿಲ್ಲಿನ ರಂಗು ಚೆಲ್ಲಬೇಕು. ನಿತ್ಯದೂಟವಾಗಿರುವ  ಅವಮಾನ, ಕಷ್ಟ, ದಬ್ಬಾಳಿಕೆಗಳನ್ನು ಪಕ್ಕಕ್ಕೆ ಸರಿಸಿ ಸಂತೋಷ, ಉಲ್ಲಾಸ ಉತ್ಸಾಹಗಳೆಂಬ ರಂಗವಲ್ಲಿಯ ಬಿಡಿಸಿ ಯೋಗ್ಯವಾದ ಬಣ್ಣಗಳಲ್ಲಿ ನಿತ್ಯ ಮಿಂದೇಳಬೇಕೆಂದು ಕವಯತ್ರಿ ಬಯಸುತ್ತಾರೆ.

ನಿನ್ನೆಯ ನೆನಪುಗಳು ನಾಳೆಯ ಲಾಲಸೆಗಳು

  ಕ್ಷಣವು ಕಂಡಂಥ ವಾಸ್ತವದ ಮಜಲುಗಳು

 ತೋರಿಕೆಯ ಚಿತ್ರಣದ ಹಲವು ಮುಖಗಳಿಗೆ

 ಬಳಿಯಬೇಕಿದೆ ರಂಗು ಕಲೆಯ ನಳಿಸುತಲಿ

ಭೂತ ಎಂಬುದು ಕೊರಗು ದಿಂಬುಅದನ್ನು ನೆನೆದು ದಿಂಬಿಗೆ ತಲೆಯಾನಿಸಿದಷ್ಟು ಕಣ್ಣೀರಿನಲ್ಲಿ ತೊಯ್ಯುವೆವು.‌ಗತಿಸಿದ ಕಾಲವದು ಭೂಗತವಾದಂತೆ. ಅದರ ನೆನಪುಗಳನ್ನು ಬಗೆದಷ್ಟು ಇಂದಿನ ದಿನ ಮಂಕಾಗುವುದು. ಅದರಿಂದಲೇ ನಮ್ಮ ಜನಪದರುಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲಎಂದಿರುವುದು. ಪ್ರತಿದಿನವೂ ಹೊಸ ಹುಟ್ಟು ಎಂದು ಭಾವಿಸಿ ನಿನ್ನೆಯ ಕಹಿ ಘಟನೆಗಳನ್ನು ಮರೆತು ನವ ದಿನವನ್ನು ಸ್ವಾಗತಿಸಬೇಕು.

ನಾವು ವಾಸ್ತವದ ಅರಿವಿನಲ್ಲಿ ಬದುಕು ಸಾಗಿಸಬೇಕು. ಇದು ನಮ್ಮದು ಅದನ್ನು ಪೂರ್ಣವಾಗಿ ಸಾರ್ಥಕಪಡಿಸಿಕೊಳ್ಳಬೇಕು. ನಾಳೆ ಎಂಬುದೊಂದು ಭರವಸೆ. ಇಂದು ಮಲಗಿದವರು ಮುಂಜಾನೆ ಸೂರ್ಯೋದಯ ನೋಡುವ ಯಾವುದೇ ಖಾತ್ರಿಯಿಲ್ಲ. ಹಾಗಿದ್ದೂ ನಮ್ಮ ಇಂದಿನ ದಿನವನ್ನು ಕ್ಷಣವನ್ನು ನಿರರ್ಥಕವಾಗಿ ಕಳೆದು ಕೊಳ್ಳುವುದು ದಡ್ಡತನದ ಪರಮಾವಧಿಯಾಗಿದೆ.

ನಾಳೆಯ ಬಗ್ಗೆ ಕನಸುಗಳನ್ನು ಇಟ್ಟುಕೊಂಡು ಇಂದು ಜಿಪುಣತನ ಮಾಡುತ್ತ ಬದುಕುವುದು ಮೂರ್ಖತನ. ಹಾಗಂತಾ ಭರವಸೆಯು ಕುಂದಬಾರದು. ನಾಳೆಯ ನಮ್ಮ ಗುರಿ ಅದನ್ನು ತಲುಪಲು ಪ್ರಾಮಾಣಿಕವಾದ ಪರಿಶ್ರಮ ಹಾಕಬೇಕು. ನಿನ್ನೆ ಇಂದು ನಾಳೆಗಳ ಹೋರಾಟದಲ್ಲಿ ನಮಗೆ ಹಲವಾರು ಮುಖವಾಡ ತೊಟ್ಟು ಜನಗಳೇ ಎದುರಾಗುವರು. ಅವರ ಗೋಮುಖ ವ್ಯಾಘ್ರಕ್ಕೆ ಬಲಿಪಶುಗಳಾಗದೆ ಅವರ ಸಜ್ಜನಿಕೆಯ ಪೋಷಾಕು ಕಳಚಿ, ನೈಜತೆಯನ್ನು ಮೀರಿಸುವ ದೊಂಬರಾಟಕ್ಕೆ ಕಡಿವಾಣ ಹಾಕಿ ಅವರ ನಾಟಕಗಳೆಂಬ ಕಲೆಯ ನಳಿಸುತಲಿ ಬಾಳಿಗೆ ಭೂತ, ವರ್ತಮಾನ, ಭವಿಷ್ಯಕ್ಕೆಲ್ಲ ರಂಗನ್ನು ಬಳಿದು ವರ್ಣಮಯವಾಗಿಸಬೇಕು ಎನ್ನುತ್ತಾರೆ ಕವಯತ್ರಿ.

ನಮಗೆ ಜೀವನದಲ್ಲಿ ಇಷ್ಟಿದ್ದರೆ ಮತ್ತಷ್ಟು ಬೇಕು ಎಂಬ ಆಸೆ, ಮತ್ತಷ್ಟಿದ್ದರೆ ಮಗದಷ್ಟು ಪಡೆಯುವ ಹಂಬಲ, ಮಗದಷ್ಟು ಇದ್ದರೆ ಮತ್ತೊಂದಿಷ್ಟು ಸೇರಿಸುವ ಆಸೆಯೆಂಬ ಮಾಯಜಿಂಕೆ ಹಿಂದೆ ಓಡುವುದೆ ಮನುಜನ ಸಹಜ ಗುಣವಾಗಿದೆ. ಪಯಣದಲ್ಲಿ ದಣಿವನ್ನು ಲೆಕ್ಕಿಸುವುದಿಲ್ಲ. ನಷ್ಟವಾದ ಸಮಯ ಅಮೂಲ್ಯವಾದ ಸುಂದರ ಕ್ಷಣಗಳನ್ನು ಅಲ್ಹಾದಕರವಾಗಿ ಆನಂದವನ್ನು ಕಳೆಯಬೇಕಾಗಿರುವುದನ್ನು ವ್ಯರ್ಥ ಮಾಡಿಕೊಂಡು ಎಲ್ಲವೂ ಮುಗಿದ ಮೇಲೆ ಪರಿತಪಿಸುತ್ತೇವೆ ಎಂಬ ಆತಂಕ ಕವಯತ್ರಿಯದಾಗಿದೆ.

ಸತ್ಯ ಮಿತ್ಯದ ನಟನೆ ಕಲ್ಲುಮುಳ್ಳಿನ ಪಥವು

 ದಟ್ಟ ಮಂಜಿನ ಮುಸುಕು ತೊಟ್ಟಿಕ್ಕುವ ಜಲವು

 ಕಾಣದ ದಾರಿಯಲ್ಲಿ ಬರವಸೆಯ ಮೂಡಿಸಲು

 ಬಳಿಯಬೇಕಿದೆ ರಂಗು ತಮವನಳಿಸುತಲಿ

ಜೀವನ ಒಂದು ನಾಟಕ ರಂಗ

ನಾವೆಲ್ಲ ಅದರೊಳಗಣಪಾತ್ರದಾರಿಗಳು. ನಟ ಭಯಂಕರ ಎನಿಸಿಕೊಳ್ಳುವಂತಹ ಚಾಕಚಕ್ಯತೆ ಮನುಷ್ಯನಿಗಿದೆ. ಅದು ಯೋಗ್ಯ ರೀತಿಯಲ್ಲಿ ಬಳಕೆಯಾದರೆ ನಮ್ಮ ಸಮಾಜಕ್ಕೆ ಒಬ್ಬ ಪ್ರತಿಭಾವಂತ ಕಲಾವಿದ ದಕ್ಕಾಂತಾಗುತ್ತದೆ. ಸತ್ಯದ ದಾರಿಯಲ್ಲಿ ತನ್ನ ಪ್ರತಿಭೆಯ ಅನಾವರಣ ಮಾಡಬೇಕು. ಬದಲಾಗಿ ಜೀವನವನ್ನು ನಾಟಕವಾಗಿಸಿಕೊಂಡು ಸತ್ಯ ಮರೆಮಾಚಿ, ಮಿಥ್ಯದ ನಟನೆ ತೋರುವುದು ಸಾಮಾಜಿಕವಾಗಿ ಆತಂಕಕಾರಿ ಎನ್ನುವ ಕವಯತ್ರಿ ನಮ್ಮ ಜೀವನಪಥದಲ್ಲಿ ಕಲ್ಲುಮುಳ್ಳುಗಳು ನಡೆವ ದಾರಿಯ ತುಂಬಾ ತುಂಬಿವೆ. ಅದಕ್ಕೆ ಹೆದರಿ ಹಿಂಜರಿಯದೆ ಅದನ್ನು ಹೂವಿನ ಪಥವನ್ನಾಗಿ ಮಾಡಿಕೊಳ್ಳಬೇಕು.ಇಲ್ಲವೇ ಮುಳ್ಳುಗಳನ್ನು ತುಳಿದುನಡೆಯುವ ಎದೆಗಾರಿಕೆ ಬೇಕು ಎಂಬುದು ಕವಿತೆಯ ಸಾಲುಗಳ ಸಂದೇಶವಾಗಿದೆ.

ಜೀವನದಲ್ಲಿ ಭರವಸೆ ಕಳೆದುಕೊಂಡು ಮಂಜು ಆವರಿಸಿದಾಗ ಬದುಕಿನ ದಾರಿ ಕಾಡುವುದಿಲ್ಲ. ಬೆಳಕಿನ ಕಿರಣ ಕಾಣದೇ ಮುಸುಕು ಆವರಿಸಿ ನೀರಾಗಿ ಹರಿಯುತ್ತದೆ. ಅಂದರೆ ಗುರಿ ಕಾಣದ ಆಶಯಗಳು, ನಿರಾಸೆ ಮೂಡಿಸಿಭೂಗತವಾದಾಗ ಮತ್ತೊಮ್ಮೆ ಬಾಳಲಿ ಬದುಕುವ ಆಶಾಕಿರಣ ಮೂಡಿಸಿ ಭರವಸೆ ತುಂಬಿ ಮುತ್ತಿದ ತಮವನ್ನು ಸರಿಸಿ ರಂಗು ಬಳಿಯಬೇಕಿದೆ ಎನ್ನುತ್ತಾರೆ ಕವಯತ್ರಿ.

ಭವದ ಬಂಧನದ ಜಿಗಿತ ಆಸೆಗಳ ಕಾಗುಣಿತ

 ವರ್ಣಗಳ ತಕದಿಮಿತ ಪ್ರೀತಿಯ ಭೋರ್ಗರೆತ

 ಹಿತ ಮಿತದ ಜೀವನ ಸಮರಸದ ಸವಿ ಭಾಷ್ಯಕೆ

 ಬಳಿಯಬೇಕಿದೆ ರಂಗು ಹುಸಿಯನಳಿಸುತಲಿ

ಜೀವನ ಬಂಧಗಳ ಆಗರ. ಇಲ್ಲಿ ಮನುಷ್ಯ ತಂದೆ ,ತಾಯಿ, ಅಕ್ಕ, ತಂಗಿ, ಅಣ್ಣ,ತಮ್ಮ, ಬಂಧು,ಬಾಂಧವರು, ಸಂಬಂಧಿಕರು, ಸ್ನೇಹಿತರು, ಹಣ, ಆಸ್ತಿ, ನಗ,ನಾಣ್ಯಗಳು, ನೆರೆಹೊರೆಯವರು ಮುಂತಾದ ಬಂಧನಗಳ ಸಂಕೋಲೆಯಲ್ಲಿ ಸಿಲುಕಿದ್ದಾನೆ. ಆಸೆಗಳ ಜಿಗಿತವಿಫುಲವೆಂದೆ ಹೇಳಬಹುದು. ತನಗಾಗಿ, ತನ್ನವರಿಗಾಗಿ, ಮುಂದಿನ ತಲೆಮಾರಿಗೆ ಆಗುವಷ್ಟು ಕೂಡಿಸಿಡಬೇಕೆಂಬ ಮನೋಕ್ಲೇಶ ಮನುಜನದಾಗಿದೆ. ಪ್ರತಿವಸ್ತುವಿನ ಮೇಲೆ ವ್ಯಾಮೋಹ, ವ್ಯಕ್ತಿಗಳ ಮೇಲೆ ಆಪ್ಯಾಯಮಾನತೆ, ಬೆಳೆಸಿಕೊಳ್ಳುತ್ತಾನೆ ಎನ್ನುತ್ತಾರೆ ಆಶಾ ಮಯ್ಯರವರು.

ವರ್ಣಗಳ ತಕದಿಮಿತ ಎಂದರೆ ಬಣ್ಣದ ಬೆರಗಿನ ಬದುಕು. ಇದು ಎಲ್ಲರಿಗೂ ಅರ್ಥವಾಗುತ್ತದೆ. ಕಣ್ಣುಮುಂದೆ ರಂಗುರಂಗಾಗಿ ರಾರಾಜಿಸುತ್ತಿದ್ದರೆ ವಸ್ತು ಸೆಳೆಯುತ್ತದೆ. ಮೋಹಪಾಶದಲ್ಲಿ ಬಂದಿಸುತ್ತದೆ. ಅದರ ಹೊಳಪಿಗೆ ಮರುಳಾಗಿ ಅದರ ಸೆಳೆತಕ್ಕೆ ತಕದಿಮಿತ ಎಂದು ಕುಣಿಯುತ್ತೇವೆ.

ಹಾಗೇ ಮುಂದುವರೆದು ಕವಯತ್ರಿ ಮೇಲು ಕೀಳೆಂಬ ಭಾವಗಳನ್ನು ದೂಳಿಪಟ ಮಾಡಿಮಾನವ ಕುಲ ತಾನೊಂದೆ ವಲಂಎಂಬ ಪಂಪ ವಾಣಿಯಂತೆ, ಜಾತಿ ಮತ್ಸರಗಳನ್ನು ಮರೆತು ಸಾಮರಸ್ಯದಿಂದ ಸಹಬಾಳ್ವೆಯ ಬದುಕು ಸಾಗಿಸಿ ಇತಿಹಾಸದ ಪುಟಗಳನ್ನು ಸೇರುವಂತಹ ಸಮರಸದ ಸವಿ ಭಾಷ್ಯವನ್ನು ಬರೆಯಬೇಕಿದೆ ಎನ್ನುವರು.‌

ನೂರು ಮತದ ಹೊಟ್ಟು ತೂರಿ

ಎಲ್ಲಾ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ

ನನ್ನ ಚೇತನ

ಆಗು ನೀ ಅನಿಕೇತನ

ಎಂಬ ಕುವೆಂಪು ವಾಣಿ ಅರಿತು ನಡೆಯೋ ಮನುಜ ಎನ್ನುತ್ತಾ

ಅಂತಹ ಜಾತ್ಯಾತೀತ ರಂಗನು ಜನಗಳಿಗೆ ಬಳಿಯಬೇಕು ಎಂಬುದನ್ನು ಕವಯತ್ರಿ ತನ್ನ ಕವಿತೆಯ ಮೂಲಕ ವ್ಯಕ್ತಪಡಿಸಿದ್ದಾರೆ.

ಅಂಧಕಾರದ ಕೂಪ ಅಜ್ಞಾನದ ತಿರುವುಗಳು

 ಅರಿವಿರದ ಮೌಡ್ಯತೆಯ ಕರಿದಾದ ನೆರಳುಗಳು

 ಚಂಚಲದ ಮನದೊಳಗೆ ಪಕ್ವತೆಯ ಪಡೆಯಲು

 ಬಳಿಯಬೇಕಿದೆ ರಂಗು ಕೊಳೆಯನಳಿಸುತಲಿ

ಶತಶತಮಾನಗಳಿಂದಲೂ ಅಜ್ಞಾನದ ಅಂಧಕಾರದ ಕೂಪದಲ್ಲಿ ಬಿದ್ದು ನೆರಳುವ ಜನರೇ ಹೆಚ್ಚು. ಜಾತಿ, ಮತ, ಧರ್ಮ, ಸಮಾನತೆ, ಲಿಂಗ ಬೇಧಗಳ ಅನಿಷ್ಟ ಸಾಮಾಜಿಕ ಕಟ್ಟುಪಾಡುಗಳಲಿ ಸಿಲುಕಿ ಶೋಷಿತರಾಗುತ್ತಿದ್ದಾರೆ.

ಯಾವುದನ್ನು ವೈಜ್ಞಾನಿಕವಾಗಿ ಯೋಚಿಸುವುದಿಲ್ಲ. ಚಿಂತನೆಗೊಳಪಡಿಸುವುದಿಲ್ಲ. ಇತರರು ಹೇಳಿದ್ದನ್ನು ಕುರುಡಾಗಿ ನಂಬಿ, ಅದನ್ನೇ ಸತ್ಯವೆಂದು ಪಾಲಿಸುತ್ತಾರೆ ಎನ್ನುವ ಕವಯತ್ರಿ ಅಜ್ಞಾನದ ತಿರುವುಗಳಿಗೆ ಬಲಿಯಾಗುತ್ತಾರೆ‌. ಹಿಂದಿನಿಂದ ಬಂದ ಆಚರಣೆಗಳು, ಆಚಾರ, ವಿಚಾರಗಳು, ಪದ್ಧತಿಗಳನ್ನು ಮೂಕರಂತೆ ನಂಬಿ ಅದರೊಳಗಿನ ತಿರುಳನ್ನು ಹೆಕ್ಕಿ ತೆಗೆಯದೆ ಎಲ್ಲವನ್ನು ಒಪ್ಪಿಕೊಂಡು ಅಪ್ಪಿಕೊಂಡು ಅನುಸರಿಸುತ್ತಾರೆ ಎಂಬ ವಿಷಾದ ಕವಯತ್ರಿಯದಾಗಿದೆ.

ಹಾಗೆ ಮುಂದೆ ಸಾಗಿ ಕವಯತ್ರಿ ಮನುಷ್ಯನ ಚಂಚಲ ಮನಸ್ಸು ಕುರಿತು ಚರ್ಚಿಸುತ್ತಾರೆ. ಮನಸ್ಸು ಒಂದೆಡೆ ಸ್ಥಿರವಾಗಿ ನಿಲ್ಲುವುದಿಲ್ಲ. ಅದು ಗಾಳಿಯಂತೆ ರಭಸವಾಗಿ ಚಲಿಸುತ್ತದೆ. ಈಗ ಇಲ್ಲಿರುವ ಚಿತ್ತ ಕ್ಷಣಮಾತ್ರದಲ್ಲಿ ಬೇರೆಂದು ಕಡೆ ದಾವಿಸುತ್ತಲೆ ಇರುತ್ತದೆ. ಲಂಗು ಲಗಾಮಿಲ್ಲದ ಕುದುರೆಯಂತೆ ಒಡಾಡುತ್ತಿರುತ್ತದೆ. ಅಡ್ಡಾದಿಡ್ಡಿ ಮನಸ್ಸಿನೊಳಗೆ ಸ್ಥಿರತೆಯನ್ನು ಸಾಧಿಸಬೇಕಾಗಿದೆ. ಮನದೊಳಗೆ ಸೇರಿರುವ ಮದ, ಮತ್ಸರ, ಕಾಮ, ಕೋಧಗಳನಳಿಸಿ ರಂಗಿನಿಂದ ಚಿತ್ತವನ್ನು ಸಲಹಬೇಕಿದೆ ಎಂಬುದು ಕವಯತ್ರಿಯ ಗುರಿಯಾಗಿದೆ.

ಜೀವನದ ಬಣ್ಣಗಳು ಮೌಲ್ಯಯುತ ಸಾರಗಳು

 ರಾಗ ದ್ವೇಷವು ತುಂಬಿ ನಗುತ್ತಿರುವ ವಚನಗಳು

 ನಿತ್ಯದ ಬದುಕಿನಲ್ಲಿ ಹೊಸತನವ ಮೂಡಿಸಲು

 ಬಳಿಯಬೇಕಿದೆ ರಂಗು ನಶೆಯನಳಿಸುತಲಿ

ಸ್ನೇಹ, ಪ್ರೀತಿ ,ವಾತ್ಸಲ್ಯ ,ಮಮತೆ, ಶಾಂತಿ, ಸಹನೆ, ತ್ಯಾಗ, ಸಹಕಾರ,ಅನಬಂಧಗಳು ಮುಂತಾದ ಜೀವನದ ಬಣ್ಣಗಳುನಮಗೆ ಮೌಲ್ಯಯುತವಾದ ಸಂದೇಶಗಳನ್ನು ಸಾರುತ್ತವೆ. ಅವುಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು ಕೆಲವರ ಮೊಗದಲ್ಲಿ ರಾಗ ದ್ವೇಷಗಳು ತುಂಬಿವೆ. ಇದನ್ನು ಬುಡಸಹಿತ ಕಿತ್ತೊಗೆದು ಅನುರಾಗವನ್ನು ಜನತೆಯಲ್ಲಿ ಬಿತ್ತಬೇಕು. ಕ್ರೌರ್ಯ, ಅಟ್ಟಹಾಸ, ದಬ್ಬಾಳಿಕೆ, ದೌರ್ಜನ್ಯಗಳು ಮಾನವನ ದುರ್ಬಲತೆಗಳು. ಅವುಗಳನ್ನು ಮೆಟ್ಟಿನಿಂತು ಪ್ರೇಮವನ್ನು ಆರಾಧಿಸಬೇಕು ಎಂದು ಕವಯತ್ರಿ ಬಯಸುತ್ತಾರೆ.

ನಮ್ಮ ಪ್ರತಿ ನಿತ್ಯದ ಬದುಕಿನಲ್ಲಿ ಅಂಟಿಕೊಂಡಿರುವ ಇಂತಹಜಾಡ್ಯಗಳನ್ನು ಗುಡಿಸಿ ಹಾಕಬೇಕು. ಜೀವನದಲ್ಲಿ ಹೊಸತನ ಮೂಡಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಹೊಸ ಬದಲಾವಣೆ ತುಂಬಬೇಕು ಎಂಬುದು ಕಾವ್ಯದ ಮಹದಾಸೆಯಾಗಿದೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಸದಾ ಹಸನ್ಮುಖಿಯಾಗಿ ಲವಲವಿಕೆಯಿಂದ ಬರಹದಲ್ಲಿ ತೊಡಗಿರುವ ಕವಯತ್ರಿ ಆಶಾ ಮಯ್ಯರವರು ಸಾತ್ವಿಕ ಸ್ವಭಾವ ಹೊಂದಿದ್ದು ಅವರ ಸಾಹಿತ್ಯ ರಚನೆಯಲ್ಲಿ ಇಂತಹ ಗುಣಗಳನ್ನು ನಾವು ಕಾಣಬಹುದು. ಬಳಿಯಬೇಕಿದೆ ರಂಗು ಮಸಿಯನಳಿಸುತಲಿ ಕವಿತೆಯಲ್ಲಿ ಏನಿಲ್ಲ ಎಂದು ಪ್ರಶ್ನಿಸಿದರೆ ಉತ್ತರ ಎಲ್ಲವೂ ಇದೆ ಎಂದು ನಾನು ನಿರ್ಭಯವಾಗಿ ಹೇಳುತ್ತೇನೆ.

ಆಧ್ಯಾತ್ಮಿಕ ಸ್ಪರ್ಶದೊಂದಿಗೆ ಮಾರ್ಮಿಕವಾಗಿ ಮೂಡಿ ಬಂದಿರುವ ಕವಿತೆಯಲ್ಲಿ ಕವಯತ್ರಿಯ ಮನೋಗತ ವ್ಯಕ್ತವಾಗಿದೆ. ಇವರು ಅಪಾರ ಪ್ರಮಾಣದಲ್ಲಿ ಜೀವನ ಪ್ರೇಮವನ್ನು ಹೊಂದಿದ್ದು ಅದನ್ನು ಸಕಲ ಜನರನ್ನು ಕಾಣಬೇಕೆಂದು ಕವಿತೆಯ ಮೂಲಕ ಆಶಿಸುತ್ತಾರೆ. ಕವಿತೆ ಓದಿದಾಗ ಅವರ ಲೋಕ ಜ್ಞಾನ ಅರಿವಿಗೆ ಬರುತ್ತದೆ. ಹೊರಜಗತ್ತಿನ ಅಂಕುಡೊಂಕುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅವುಗಳನ್ನು ಸುಧಾರಿಸುವ ಹೊಸ ಹೊಸ ಪಥಗಳನ್ನು ಚರ್ಚಿಸುತ್ತಾ ಬಂದಿರುವುದು ಅಭಿನಂದನಾರ್ಹವಾಗಿದೆ.

ಕವಿತೆಯಲ್ಲಿ ಕವಯತ್ರಿಯ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ.ಸಹಬಾಳ್ವೆಯ ಸಮಾಜ ನಿರ್ಮಾಣದ ಆಶೋತ್ತರಗಳಿಗೆ ಪೂರಕವಾಗಿದೆ.‌ಪದ ಜೋಡಣೆ ಮತ್ತು ಅರ್ಥ ಸಂಯೋಜನೆಗಳೆರಡರ

ಸಹ ಸಂಬಂಧ ಸೊಗಸಾಗಿ ಮೂಡಿಬಂದಿದೆ. ಕಾವ್ಯ ರಚನಾ ಶೈಲಿಯು ಬಹಳ ಆಪ್ತವೆನಿಸುತ್ತದೆ.

ಅಮೋಘವಾದ ರೂಪಕಗಳಲ್ಲಿ ಲಾಲಿತ್ಯಪೂರ್ಣವಾಗಿ ತನ್ನ ಮನದ ಭಾವಗಳನ್ನು ಅಕ್ಷರ ರೂಪಕ್ಕಿಳಿಸಿ ಹೆಣೆದಿರುವ ಅದ್ಭುತ ಶಬ್ದಭಂಡಾರ ಕಾವ್ಯಾಭಿವ್ಯಕ್ತಿಯೆ ಕವಿತೆಯಾಗಿದೆ. ಇಲ್ಲಿ ಕವಯತ್ರಿ ಬಹುದೊಡ್ಡ ಪರಿವರ್ತನೆಯನ್ನು ಬದುಕಿನ ವೈವಿಧ್ಯಮಯ ಮಜಲುಗಳಲ್ಲಿ ಕಾಣಲು ಬಯಸುತ್ತಾರೆ. ಬಹುಶಃ ಆಶಯವೇ ಕವಿತೆಯನ್ನ ಗೆಲ್ಲಿಸಿ ಬಿಟ್ಟಿದೆ ಎನಿಸುತ್ತದೆ. ಒಟ್ಟಿನಲ್ಲಿ ಕವಿತೆ ಜೀವನ ಸಾರ ಬಿಂಬಿಸುವ ಒಂದು ಗ್ರಂಥದಂತೆ ಭಾಸವಾಗುತ್ತದೆ.

ಇಂತಹ ಮತ್ತಷ್ಟು ಮಗದಷ್ಟು ಬರಹ ಇವರಿಂದ ರಚನೆಯಾಗಲಿ ಎಂಬುದು ನನ್ನ ಸದಾಶಯವಾಗಿದೆ.

ಪ್ರಿಯ ಓದುಗರೆ ನಿಮಗೆ ಬರಹಇಷ್ಟವಾಗಿದೆ ಎಂದು ಭಾವಿಸುತ್ತಾ

ಮುಂದಿನ ನನ್ನ ಬರಹದ ನೀರೀಕ್ಷೆಯಲ್ಲಿದ್ದು ಓದಿ ಪ್ರೋತ್ಸಾಹಿಸುವಿರೆಂಬ ಆಶಾಭಾವ ನನ್ನದು. ಎಲ್ಲರಿಗೂ ನಮಸ್ಕಾರ.

ಅನುಸೂಯ ಯತೀಶ್

One thought on “

  1. ನಿಮ್ಮ ವಿಮರ್ಶೆಯಿಂದ ನನ್ನ ಕವಿತೆಗೆ ಒಂದು ಗರಿ ಮೂಡಿತು.. ತುಂಬು ಮನದ ಧನ್ಯವಾದಗಳು ಮೇಡಂ

Leave a Reply

Back To Top