ಅಂಕಣ ಸಂಗಾತಿ

ಕಾವ್ಯದರ್ಪಣ

ಅನುಸೂಯ ಜಹಗೀರದಾರ್

ನಗುವುದು ಸಹಜ ಧರ್ಮ ನಗಿಸುವುದು ಪರಧರ್ಮl

 ನಗುವ ಕೇಳುತ ನಗುವುದತಿಶಯದ ಧರ್ಮll

 ನಗುವ ನಗಿಸುವ ನಗಿಸಿ ನಗುತ ಬಾಳುವ ವರವl

ಮಿಗ ನೀನು ಬೇಡಿಕೊಳೋಮಂಕುತಿಮ್ಮll”

            ಡಿ.ವಿ.ಜಿ.

      ( ಮಂಕುತಿಮ್ಮನ ಕಗ್ಗ)

ಕಾವ್ಯ ಪ್ರವೇಶಿಕೆಯ ಮುನ್ನ

 ನವರಸಗಳಲ್ಲಿ ನಗೆಗೆ ವಿಶೇಷ ಸ್ಥಾನಮಾನವಿದೆ. ನಲಿವು ಸಂತೋಷ ವಿನೋದವನ್ನು ವ್ಯಕ್ತಪಡಿಸುವ ಮಾಧ್ಯಮ ಈ ನಗು. ಈ ನಗುವಿನಲ್ಲಿ ಹೂನಗೆ, ಮಂದಹಾಸ ನಗೆ, ಮುಗ್ಧ ನಗೆ, ಅಟ್ಟಹಾಸ ನಗೆ, ಪರಿಹಾಸ್ಯ ನಗೆ,ಕುಹಕ ನಗೆ, ವ್ಯಂಗ್ಯ ನಗೆ, ನಿಷ್ಕಲ್ಮಶ ನಗೆ, ಕಣ್ಣಂಚಿನ ನಗೆ, ಮೊಗದಗಲ ನಗೆ, ಸಂಕೋಚ ನಗೆ, ನಾಚಿಕೆ ನಗೆ, ರಸಿಕ ನಗೆಗಳಿವೆ.

“ನಗು ಮನುಜನ ಸುಂದರ ಆಭರಣ” ಮನುಷ್ಯನು ಹುಟ್ಟಿದಾಗಿನಿಂದ ಕಲಿತಿರುವ ಮುಖಭಾವ ಎಂದರೆ ನಗು. ಯಾರು ಎಷ್ಟೇ ಸುಂದರವಾಗಿರಲಿ ಸುರದ್ರೂಪಿ ಯಾಗಿರಲಿ ಅವರ ಸೌಂದರ್ಯಕ್ಕೆ ಮೆರಗು ಬರುವುದು, ಹೊಳಪು ತರಲು ಅವರ ಮೊಗದ ಮೇಲಿರುವ ನಗುವಿನಿಂದ ಮಾತ್ರ ಸಾಧ್ಯ.ನಗುವನ್ನು ಬಹಳ ದೂರದಿಂದಲೂ ಗುರುತಿಸಬಹುದು. ಇದಕ್ಕೆ ಭಾಷೆಯ ಹಂಗಿಲ್ಲ, ಜಾತಿಯ ತಳುಕಿಲ್ಲ,ಗಡಿ ಸೀಮೆಯ ಬೇಧವಿಲ್ಲ. ಇಡೀ ಜಗತ್ತಿನಲ್ಲಿ ಸಂತೋಷಕ್ಕೆ ಇರುವ ಒಂದೇ ಒಂದು ಸಾರ್ವತ್ರಿಕ ಭಾಷೆಯೆಂದರೆ ಅದು ನಗು ಮಾತ್ರ. ನಗುವಿಗೆ ಕಟುಕನ ಕೈಯಿಂದಲೂ ಖಡ್ಗ ಜಾರಿಸುವ ಅಗಾಧ ಶಕ್ತಿಯಿದೆ. ಬುದ್ಧನ ಮಂದಸ್ಮಿತ ಶಾಂತಚಿತ್ತದ ನಗು ಹಿಂಸಕ ಹಾಗೂ ಕ್ರೂರಿಯಾದ ಅಂಗುಲಿಮಾಲನನ್ನು ಸೆಳೆದು ಅಹಿಂಸೆಯ ದಾರಿಯಲ್ಲಿ ನಡೆಸಿದ್ದನ್ನು ನಾವು ಸ್ಮರಿಸಬಹುದು.

ನಕ್ಕ ಸಾಯ್ರೊ

ನಕ್ಕ ಸಾಯ್ರಿ

ನಕ್ಕ ಸತ್ರ

ನಕ್ಷತ್ರ ಅಕ್ಕೀರೀ

ಎಂಬ ಬೇಂದ್ರೆ ವಾಣಿಯು ನಗುವಿನ

ಪ್ರಾಮುಖ್ಯತೆಯ ಅರಿವನ್ನು ನಮಗೆ

ಮೂಡಿಸುತ್ತದೆ.

ನಾವು ನಮ್ಮ ಎದುರಿಗೆ ಯಾರೇ ಬಂದರೂ ಮೊದಲು ತೋರುವ ಭಾವವೇ ನಗು. ನಗುವಿನ ಮೂಲಕ ನಾವು ಸ್ನೇಹ ತೋರಬಹುದು, ಧನ್ಯವಾದ‌‌ ಅರ್ಪಿಸಬಹುದು, ಸ್ವಾಗತಿಸ ಕೋರಬಹುದು, ಬೀಳ್ಕೊಡಬಹುದು .ಯಾವುದೇ ಜಗಳ ಅಥವಾ ನೋವಿಗೂ ನಗುವಿನಿಂದ ಮೂಲಮು ಹಚ್ಚಬಹುದು.

ನಗು ಎಂಬುದು ನಮಗೆ ಸಹಜವಾಗಿ ಹೃದಯಪೂರ್ವಕವಾಗಿ ಮೂಡಿಬರಬೇಕೆ ಹೊರತು ನಾಟಕೀಯವಾದ ನಗುವಿನಿಂದ ಏನೂ ಪ್ರಯೋಜನವಿಲ್ಲ.

ಸಹಜ ನಗು ಮರೆಯಾಗಿ

ಕೃತಕ ನಗು ಜಗವನಾವರಿಸಿದೆ”

ಆದ್ದರಿಂದ ಮನದುಂಬಿ ನಗಬೇಕು. ನಗು ಸಾಂಕ್ರಾಮಿಕವಾದುದು ಹಾಗಾಗಿ ನಾವು ನಗುತಿರಬೇಕು ಇತರರನ್ನು ನಗಿಸುತ್ತಿರಬೇಕು. ನಗು ಎಂಬುದು ಹಸುಗೂಸಿನಿಂದ ಹಿಡಿದು ಯುವಕರು, ವಯಸ್ಕರು ಹಾಗೂ ವಯೋವೃದ್ಧರವರೆಗೂ ಎಲ್ಲರಲ್ಲೂ ಕಾಣುವ ಸಹಜವಾದ ಗುಣ.

“ನಾವು ನಗುವ ವ್ಯಕ್ತಿಯನ್ನು ನೋಡಿದಾಗ ಅವರ ಮುಖಭಾವವನ್ನು ತಿಳಿದುಕೊಳ್ಳಲು ನಮ್ಮ ಮೆದುಳು ಕೂಡ ನಗುವನ್ನು ಮರುಸೃಷ್ಟಿ ಮಾಡುತ್ತದೆ” ಎಂಬುದು ತಜ್ಞರ ಅಭಿಪ್ರಾಯ. ಅಂದರೆ ನಮ್ಮ ಎದುರಿಗಿದ್ದವರನ್ನು ನಗಿಸುತ್ತದೆ ಇದರಿಂದ ನಮ್ಮ ಬಾಂಧವ್ಯ ವೃದ್ಧಿಸುತ್ತದೆ, ಸ್ನೇಹ ಗಟ್ಟಿಯಾಗಲು ವೇದಿಕೆಯಾಗುತ್ತದೆ.  ಭರವಸೆಯ ಹಾದಿಯಾಗುತ್ತದೆ. ನಗುವಿನ ವಿನಿಮಯದೊಂದಿಗೆ ಮಾನವ ಪ್ರೇಮ ಪ್ರಾರಂಭವಾಗುತ್ತದೆ. ಮುಕ್ತಾಯವೂ ಕೂಡ ತೃಪ್ತ ನಗುವಿನೊಂದಿಗೆ ಅಂತ್ಯಗೊಳ್ಳುತ್ತದೆ. ಅಂದರೆ ನಗು ಆದಿ ಅಂತ್ಯಗಳ ನಡುವಿನ ಸೇತುವೆಯಾಗಿದೆ.

ನಾರಿ ನಿನ್ನ

ಮಾರಿ ಮ್ಯಾಗ

ನಗಿ ನವಿಲು ಆಡತಿತ್ತ

ಬೇಂದ್ರೆ

ಎಂಬ ಅಜ್ಜನ ಮಾತು ನಗೆಯು ನವಿಲಿನಷ್ಟು  ಸುಂದರ ಎಂದು ಸಾರಿ ಹೇಳುತ್ತದೆ.

ಇಂದಿನ ಒತ್ತಡ ಮತ್ತು ಜಂಜಡ ಕಾರ್ಯವೈಖರಿಯಲ್ಲಿ ಸಿಲುಕಿರುವ ಮನುಜ ನಗೆಮೊಗದ ವ್ಯಕ್ತಿಗಳ ಸಂಘವನ್ನು ಬಯಸುತ್ತಾನೆ. ಈ ನಗು ಆರೋಗ್ಯ ಹೆಚ್ಚಿಸುವ ವರದಾನವಾಗಿದೆ.

“ನಗು ಯೌವ್ವನದ ಸಂಕೇತ” ಎಂದು ವಿಜ್ಞಾನ ಸಾಬೀತುಪಡಿಸಿದೆ. ನಾವು ನಗುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಹೃದಯದ ಒತ್ತಡ ಕಡಿಮೆಯಾಗಿ ಮನಸ್ಸಿನ ಕಿನ್ನತೆ ದೂರ ಆಗುತ್ತದೆ. ಪ್ರಯೋಜನಕಾರಿಯಾಗಿರುವ ನಗುವನ್ನ ನಾವು ಅಪ್ಪಿಕೊಂಡು ಒಪ್ಪಿಕೊಳ್ಳದಿದ್ದರೆ ನಮ್ಮ ಬದುಕಿಗಾದರೂ ಸಾರ್ಥಕತೆ ಇದೆಯೇ? ಹೌದು ಸ್ನೇಹಿತರೆ ನಗೆ ಎಂಬುದು ನಗ ನಾಣ್ಯಗಳನ್ನು ಮೀರಿದ ಪರಮಶ್ರೇಷ್ಠ ಆಸ್ತಿಯಾಗಿದೆ. ಇಂದು ನಾನು ನಗೆಯ ಬಗ್ಗೆ ಚರ್ಚಿಸುತ್ತಿರುವುದರಿಂದ ನಿಮಗೀಗಾಗಲೇ ತಿಳಿದಿದೆ ನಾನಿಂದು ನಗೆಗೆ ಸಂಬಂಧಪಟ್ಟಂತಹ ಕವಿತೆಯೊಂದನ್ನು ನಿಮಗೆ ಉಣಬಡಿಸಲಿದ್ದೇನೆ.

ಕವಿ ಪರಿಚಯ

ಹಿಂದುಸ್ತಾನಿ ಸಂಗೀತ ಕಲಾವಿದೆ ಮತ್ತು ಕವಯತ್ರಿ ಹಾಗೂ ಬರಹಗಾರರಾದ ಅನುಸೂಯ ಜಹಗೀರದಾರ್ ಅವರು ಕೊಪ್ಪಳ ದವರು. ಇವರು ಎಂ.ಎ. ಬಿ.ಎಡ್ ಶಿಕ್ಷಣ ಪಡೆದು ವೃತ್ತಿಯಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡಪರ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಒಡಲಬೆಂಕಿ”  ಎಂಬ ಕವನ ಸಂಕಲನ (೨೦೧೪) ಪ್ರಕಟವಾಗಿದ್ದು ೨೦೧೫ ರಲ್ಲಿ ಇದಕ್ಕೆ ಡಾ‌ ಡಿ ಎಸ್ ಕರ್ಕಿ ಪ್ರಶಸ್ತಿ ಸಂದಿದೆ.

ಗಜಲ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉರ್ದು ಸಾಹಿತ್ಯ ರಾಣಿಯನ್ನು ಕನ್ನಡ ಸಾರಸ್ವತ ಲೋಕದಲ್ಲಿ ಆರಾಧಿಸುತ್ತಾ ೨೦೨೧ ರಲ್ಲಿ “ಆತ್ಮಾನುಸಂಧಾನ” ಎಂಬ‌ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ. ಅದೇ ವರ್ಷ “ನಿಹಾರಿಕೆ” ಹನಿಗವಿತೆಗಳ ಸಂಕಲನ ಲೋಕಾರ್ಪಣೆಗೊಂಡು ಓದುಗರ ಕೈಸೇರಿದೆ. “ಪರಿವರ್ತನೆ” ಎಂಬ ಕಥಾ ಸಂಕಲನ ಮುದ್ರಣ ಹಂತದಲ್ಲಿದ್ದು ಸಾಹಿತ್ಯಾಸಕ್ತರನ್ನು ರಂಜಿಸಲು ಸಿದ್ಧಗೊಂಡಿದೆ.

ಇವರಿಗೆ ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿಗಳು ಮುಡಿಗೇರಿವೆ. ಜೊತೆಗೆ ಹಲವು ಸಾಹಿತ್ಯ ಸಂಘಟನೆಗಳು ಮತ್ತು ಸಾಹಿತ್ಯಿಕ ಬಳಗಗಳಿಂದ ಹಲವಾರು ಪ್ರಶಸ್ತಿಗಳು ಬಹುಮಾನಗಳಿಗೆ ಇವರು ಭಾಜನರಾಗಿದ್ದಾರೆ.

ಕವಿತೆಯ ಆಶಯ

ನಗೆ ಹ್ಯಾಂಗಿರಬೇಕು ಅಂದ್ರೆ

 ಹಗೆಯ ಮನಸಿನ ಧಗೆ

 ಹೊರಗಾ ಹಾಕಂಗಿರಬೇಕು

      – .ರಾ. ಬೇಂದ್ರೆ

“ನಕ್ಕರೆ ಅದೇ ಸ್ವರ್ಗ” ಎಂಬ ನಾಣ್ಣುಡಿಯೇ ನಗುವಿನ ಮಹತ್ವವನ್ನು ಸಾರುತ್ತದೆ. ನಾವೆಲ್ಲ ಬಾಲ್ಯದಲ್ಲಿದ್ದಾಗ ನಗುವೇ ನಮ್ಮ ಮುಗ್ಧತೆಯ ಸಂಕೇತವಾಗಿತ್ತು. ಮನದುಂಬಿ ನಗುತ್ತಿದ್ದೆವು.”ನಗು ನಮ್ಮ ಜೀವನದ ಮೂಲ ಮಂತ್ರ” ಆಗಿರಬೇಕು. ಆದರೆ ಜವಾಬ್ದಾರಿಗಳು ಹೆಗಲೇರಿ ಇಂದಿನ ದಿನಮಾನಗಳಲ್ಲಿ ನಗುವು ಕೇವಲ ಬಯಸಿದ ಹಾಗೆ ರೂಪುಗೊಂಡಿದೆ. ನಗು ಮನದಾಳದಲಿ ತುಂಬಿರಬೇಕು. ವಿಪರ್ಯಾಸವೆಂದರೆ ಇಂದು ನಾವು ನಗುವನ್ನು ದುಡ್ಡು ಕೊಟ್ಟು ಬಲವಂತವಾಗಿ ಕೊಂಡುಕೊಳ್ಳುವ ದಾರಿಯಲ್ಲಿ ಇದ್ದೇವೆ. ಆದರೂ ನಗುವಿಗೆ ನಿರ್ಬಂಧಗಳು, ಲಿಂಗಬೇಧಗಳು ಅಂಟಿಕೊಂಡಿವೆ. ಮನೆಯಲ್ಲಿ ನಗುವಿಗೂ ಕಡಿವಾಣ ಗಳಿವೆ. ಇಂತಹ ಕಟ್ಟುಕಟ್ಟಳೆಗಳ ಗೋಡೆಗಳು ಎತ್ತರವಾಗಿ ಬೆಳೆದು ನಗುವನ್ನು ಭೂಗತ ಮಾಡುತ್ತವೆ. ಮನಸೋಇಚ್ಛೆ ನಗುವಂತಿಲ್ಲ, ನಗುವಿನ ಶಬ್ದ ಯಾರಿಗೂ ಕೇಳಿಸಬಾರದು ಎಂಬೆಲ್ಲ ಲಕ್ಷ್ಮಣ ರೇಖೆಗಳು ನಮ್ಮೊಳಗಿನ ಸಹಜ ನಗುವನ್ನು ನುಂಗಿಹಾಕಿ ಕೇವಲ ತೋರ್ಪಡಿಕೆ ನಗುವಿಗೆ ನಮ್ಮನ್ನು ಸೀಮಿತಗೊಳಿಸಿವೆ. ಮುಗ್ಧತೆಯ ನಗುವಿಂದು ಮಾಯವಾಗಿದೆ ಎನ್ನುವ ಕವಯತ್ರಿ ಕಾಲಾಂತರದಲ್ಲಿ ನಗೆಯ ಪರಿವರ್ತನೆಯಾಗಿದೆ. ನಗೆಯೊಂದಿಗೆ ಇರುವಂತಹ ತಾರತಮ್ಯ, ನಗೆಯಿಂದ ಆದಂತಹ ಕೆಡುಕುಗಳು, ನಗೆಯ ವಿಧಗಳು ಹಾಗೂ ನಗೆಯ ಮಹತ್ವವನ್ನು ಈ ನಗೆ ಕವಿತೆ ಯುದ್ಧಕ್ಕೂ ಸಾರುವ ಮೂಲಕ ಎಲ್ಲರೊಳಗೂ ನಗೆಯನ್ನು ಮರು ಸೃಷ್ಟಿಸುವುದು ಕವಿತೆಯ ಪ್ರಮುಖವಾದ ಆಶಯವಾಗಿದೆ.

ಕವಿತೆಯ ಶೀರ್ಷಿಕೆ ನಗು

ಕವಿತೆಯ ಶೀರ್ಷಿಕೆ “ನಗು” ಈ ಪದ ನಮ್ಮ ಕಿವಿಗೆ ಬಿದ್ದೊಡನೆ ನಮಗರಿವಿಲ್ಲದೆ ನಮ್ಮೊಳಗೊಂದು ಮಂದಹಾಸ ಮಿಂಚಿ ಮರೆಯಾಗುತ್ತದೆ. ಅಂತಹ ಅದ್ಭುತವಾದ ಅಮೋಘವಾದ ಶಕ್ತಿ ನಗುವಿಗಿದೆ. ಅಳುವನ್ನು ಯಾರೂ ಬಯಸುವುದಿಲ್ಲ ಆದರೆ ನಗು ಎಲ್ಲರನ್ನು ಸೆಳೆಯುತ್ತದೆ. ವರ್ಷಾಂತರಗಳ ದ್ವೇಷವನ್ನು ಮೆಟ್ಟಿ ಸ್ನೇಹ ಹಸ್ತ ಚಾಚಲು ಈ ಒಂದು ನಗು ಸೇತುವೆಯಾಗಬಲ್ಲದು. “ಬುದ್ಧ ನಗುವಿನಿಂದಲೇ ಜಗವನ್ನು ಗೆದ್ದ”. ನಗು ಮಾನವನಿಗೆ ಮಾತ್ರ ಗೊತ್ತಿರುವ ಪ್ರಕೃತಿದತ್ತ ವರದಾನವಾಗಿದೆ. ಈ ಕವಿತೆಗೆ ಶೀಷಿಕೆ ತುಂಬಾ ಒಪ್ಪವಾಗಿ ಹೊಂದುತ್ತದೆ.

ಕವಿತೆಯ ವಿಶ್ಲೇಷಣೆ

        “ನಗು

ಹೀಗೊಮ್ಮೆಅಂದುಕೊಳ್ಳುತ್ತೇನೆ..,

ಈಚೆಗೆ ಹಾಸ್ಯೋತ್ಸವಗಳ ಕೇಕೆ ಇದೆ ..ನಗೆ ಹಬ್ಬಗಳಿವೆ…!

ಆಗೆಲ್ಲಬೇರೆಯೇ..ಇತ್ತು..

ಮೆಲುಕು ಹಾಕುತ್ತೇನೆ

ಈ ಸಾಲುಗಳಲ್ಲಿ ಕವಯತ್ರಿ ಹಿಂದಿನ ನಗುವಿಗೂ ಈಗಿನ ನಗುವಿಗೂ ಇರುವ ವ್ಯತ್ಯಾಸಗಳನ್ನು ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಹಿಂದೆ ನಗುವಿಗೆ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುತ್ತಿರಲಿಲ್ಲ. ಜನರು ತಾವು ಮಾಡುವ ಕಾಯಕದಲ್ಲಿ ಸಂತೋಷ, ಹರುಷ ಕಾಣುತ್ತಿದ್ದರು. ಸದಾ ಮೊಗದಾವರೆಯಂತೆ ವದನ ಅರಳಿ ನಳನಳಿಸುತ್ತಿತ್ತು. ಇದಕ್ಕೆ ನಮ್ಮ ವಚನಾದಿ ಶರಣರಿಗಿಂತಲೂ ನಿದರ್ಶನ ಬೇಕೆ. ನಮ್ಮ ‌ಹಿರಿಯರು ಒಂದು ಪುಟ್ಟ ಸಮಾರಂಭ ಮಾಡಿದರೂ ಸಾಕು ಬಂಧು ಬಾಂಧವರೆಲ್ಲಾ, ಕುಟುಂಬದವರೆಲ್ಲ ಸೇರಿ ಕುಣಿದು ಕುಪ್ಪಳಿಸುತ್ತಿದ್ದರು. ನಗೆಯೊಳೆಯನ್ನೆ ಹರಿಸುತ್ತಿದ್ದರು. ಪ್ರತಿಯೊಂದು ವಿಚಾರಗಳಲ್ಲೂ ಖುಷಿಯನ್ನು ಹುಡುಕುತಿದ್ದರು. ಜನತೆಗೆ ಮನೋರಂಜನೆಯ ಸೌಲಭ್ಯಗಳು ಈಗಿನಂತಿರಲಿಲ್ಲ. ಆದರೂ ಜನಪದ ಕಲೆಗಳು,ರಂಗ ನಾಟಕಗಳು ಅವರ ಪ್ರತಿಭೆಯ ಅನಾವರಣ ಮಾಡುವ ಜೊತೆಗೆ ಜನರಿಗೆ ನಗೆಯ ಮಾಧ್ಯಮವಾಗಿದ್ದವು. ಮನೆ ತುಂಬಾ ಮಕ್ಕಳು ಓಡಾಡಿಕೊಂಡು ಕಿಲಕಿಲ ನಗುತ್ತಾ ಮನೆಯವರನ್ನು ನಗಿಸುತ್ತಿದ್ದರು.ಇಂದು ಮಕ್ಕಳಿಗೆ ಉಸಿರುಗಟ್ಟಿಸುವಷ್ಟು ನಿರ್ಬಂಧಗಳ ನಿಯಮಗಳಿವೆ. ಅವುಗಳೊಳಗೆ ಬಂಧಿಯಾಗಿ ನಗುವನ್ನು ಮರೆತಿದ್ದೇವೆ.ಗತ ಕಾಲಕ್ಕೆ ಹೋಲಿಸಿದರೆ ಇಂದಿನ ಕಥೆಯೆ ಬೇರೆ ಜನರಿಗೆ ನಗಲು ಪುರುಸೊತ್ತಿಲ್ಲ, ಇದ್ದರೂ ಗೌರವ ಪ್ರತಿಷ್ಠೆಗಳನ್ನು ನೆಪದಲ್ಲಿ ಮುಖವಾಡದ ನಗುವನ್ನು ಮಾತ್ರ ತೋರಬಲ್ಲರು.

ಬಳಸಿದಂತೆಲ್ಲಾ

 ಬೆಳೆಯುವ

ಅಕ್ಷಯ ಪಾತ್ರೆ

ನಗು

     Bhiಚಿ

ಹಾಗಾಗಿ ನಿತ್ಯನಗುತಿರಿ.

“ನಗು ಆರೋಗ್ಯಕ್ಕೆ ಭದ್ರಬುನಾದಿ” ಇದ್ದಂತೆ. ಆಧುನೀಕರಣದ ಒತ್ತಡದಲ್ಲಿ ಮುಳುಗಿರುವ ಜನತೆಗೆ ಸಹಜ ನಗು ಮಾಯವಾಗಿದೆ. ಕೃತಕ ನಗುವನ್ನು ಅನುಭವಿಸುವಂತಾಗಿದೆ. ಅದಕ್ಕಾಗಿ ನಾವಿಂದು ನಗೆ ಸಂಘಗಳನ್ನು ಮಾಡಿಕೊಂಡು, ನಗೆ ಕಾರ್ಯಕ್ರಮಗಳನ್ನು, ನಗೆಹಬ್ಬ ಗಳನ್ನು ಆಯೋಜಿಸಿ ನಗಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಉತ್ಸವಗಳನ್ನು ಏರ್ಪಡಿಸಿ, ಕಲಾವಿದರನ್ನು ಕರೆಸಿ ಅವರು ಹೇಳುವ ಘಟನೆ, ವಿಷಯ, ನಟನೆ, ವಿವರಣೆಗಳಿಗೆ ಬಲವಂತವಾಗಿ ನಗುತ್ತಿದ್ದೇವೆ. ಬೆಳಗಿನ ಸಮಯದಲ್ಲಿ ಉದ್ಯಾನವನಗಳಲ್ಲಿ ಜನರು ಸೇರಿ “ನಗೆ ವ್ಯಾಯಾಮ”ಗಳಲ್ಲಿ ಭಾಗವಹಿಸಿ ನಗುತ್ತಿದ್ದಾರೆ. ಆದರೆ ಇದು ಮನ ತೃಪ್ತಿ ನೀಡದು. ಹಾಗಾಗಿ ನಾವು ಸದಾ ಮನದಲ್ಲಿ ನಗಬೇಕು. ನಕ್ಕು ಮನಸ್ಸು ಹಗುರ ಆಗಬೇಕು ಎಂಬುದು ಕವಿತೆಯ ಆಶಯವಾಗಿದೆ.

ಹೆಣ್ಣು ನಗಬಾರದು ಗಂಡು ಅಳಬಾರದು

ನಕ್ಕಲ್ಲವೆ ದ್ರೌಪದಿ ಕೆಡುಕನ್ನು ಎಳೆದುಕೊಂಡದ್ದು

ಕೌರವೇಂದ್ರನ ಹಗೆಯಾಗಿ ಮಹಾಭಾರತ ಕಥೆ ಆದದ್ದು..

ಹದಿನೆಂಟು ದಿನಗಳ ರೌದ್ರ ಭೀಕರ ರಣರಂಗ

ಪರ್ವಗಳಾಗಿ ಕಥೆಯ ಹೂರಣವಾಗಿದ್ದು..

ರಕ್ತ ರಾತ್ರಿಗಳಾಗಿ ಜನಮಾನಸದಲಿ ಹಸಿಗೊಂಡಿದ್ದು…!!”

 ಇಲ್ಲಿ ಕವಯತ್ರಿ ಹಿಂದಿನ ಪೌರಾಣಿಕ ಘಟನೆಯೊಂದನ್ನು ಓದುಗರ ಮುಂದಿಟ್ಟಿದ್ದಾರೆ. “ಹೆಣ್ಣು ನಗಬಾರದು,ಗಂಡು ಅಳಬಾರದು” ಎಂಬ ಜನಪದ ವಾಣಿಯನ್ನು ಪ್ರಸ್ತಾಪಿಸುತ್ತಾ ದ್ರೌಪದಿ ಮತ್ತು ಕೌರವೇಂದ್ರನ ಹಗೆಯೆ ಮಹಾಭಾರತ ಕುರುಕ್ಷೇತ್ರ ಸಂಗ್ರಾಮಕ್ಕೆ ನಾಂದಿಯಾಯ್ತು ಎನ್ನುತ್ತಾರೆ.

ನಗುವಿನಿಂದ ಒಳಿತು ಕೆಡಕುಗಳು ಎರಡು ಉಂಟಾಗುತ್ತವೆ. ಆದರೆ ನಗೆಯ ಸಂದರ್ಭಗಳ ಅರಿವು ಮನುಜನಿಗೆ ಇರಬೇಕು. ಪಾಂಡವರಿಗೆ ನಿರ್ಮಿಸಲಾಗಿದ್ದ ಇಂದ್ರಪ್ರಸ್ಥ ಅರಮನೆಯನ್ನು ನೋಡಲು ಬಂದ ಸುಯೋಧನ ಭ್ರಮೆಗೆ ಒಳಗಾಗಿ ಅರಮನೆ ಪ್ರವೇಶಿಸಲು ಭ್ರಮಿಸಿ ಪರದಾಡುತ್ತಿದ್ದಾಗ ಅದನ್ನು ಕಂಡ ದ್ರೌಪದಿ ಗಹಗಹಿಸಿ ನಗುತ್ತಾಳೆ. ಆ ಮೂಲಕ ದ್ರೌಪದಿ ಕೆಡಕನ್ನು ತಾನೇ ಆಹ್ವಾನಿಸಿಕೊಂಡಳು ಎಂಬುದು ಕವಯತ್ರಿಯ ಮನದಿಂಗಿತ.ಆ ಅವಮಾನಕ್ಕೆ ಕ್ರೋಧಗೊಂಡ ದುರ್ಯೋಧನ ಸೇಡು ತೀರಿಸಿಕೊಳ್ಳಲು ಪಣ ತೊಡುತ್ತಾನೆ. ಇದರಿಂದ ಹದಿನೆಂಟು ದಿನಗಳ ಕಾಲ ಸಂಗ್ರಾಮ ನಡೆದು ಮಾನವಕುಲ ನರಳುವಂತಾಯಿತು ಎಂಬುದು ಕವಯತ್ರಿಯ ಪ್ರತಿಪಾದನೆಯಾಗಿದೆ.

ಅದೇನು ನಗೆ.. ! ನಗುತ್ತಾರಾ ಹಾಗೆ..!

ಗಂಡುಬೀರಿ ಅಂದಾರು..!”

ಅಜ್ಜಮ್ಮನ ಅಂಬೋಣವಾಯ್ತು..

ನಗುವೆಂಬುದು ನನಗಾಗ ಬಂಧನ

ಈ ಕವಿತೆಯ ಸಾಲುಗಳಲ್ಲಿ ಕವಯತ್ರಿ ಕೌಟುಂಬಿಕ ಹಿನ್ನೆಲೆಯಲ್ಲಿ ನಗೆಯನ್ನು  ಚರ್ಚಿಸಿದ್ದಾರೆ. ಹಿಂದಿನ ದಿನಗಳಲ್ಲಿ ಮನೆಯಲ್ಲಿ ಯಾರು ಸ್ವೇಚ್ಛೆಯಾಗಿ ನಗುವಂತಿರಲಿಲ್ಲ. ಅಲ್ಲೆಲ್ಲ ಹಿರಿಯರ ಬೇಲಿ ಮುಳ್ಳಿನಂತೆ ಚುಚ್ಚುತ್ತಿತ್ತು. ಅದರಲ್ಲೂ ವಿಶೇಷವಾಗಿ ಈ ನಿಯಮ ಹೆಣ್ಣುಮಕ್ಕಳಿಗೆ ಹೆಚ್ಚು ಅನ್ವಯ. ಮನೆಮಂದಿಗೆ ಕೇಳುವಂತೆ ನಗುವಂತಿರಲಿಲ್ಲ. ಅಪ್ಪಿತಪ್ಪಿ ನಕ್ಕರೆ ಅಜ್ಜಿಯಿಂದ ಬೈಗುಳಗಳ ಸುರಿಮಳೆಯಾಗುತ್ತಿತ್ತು. ಗಂಡುಬೀರಿ ಎಂಬ ಬಿರುದು ಬೇರೆ ಲಭಿಸುತ್ತಿತ್ತು. ಹೀಗೆಲ್ಲ ನಗುತ್ತಿದ್ಧರೆ ಬೇರೆಯವರು ಏನೆಂದುಕೊಂಡಾರು ಎಂಬ ನೀತಿಬೋಧೆಯಾಗುತ್ತಿತ್ತು. ಹೀಗೆ ನಗುವಿಗೆ ದಿಗ್ಬಂಧನಗಳನ್ನು ವಿಧಿಸಿ ಸಹಜ ನಗುವನ್ನು ಮಣ್ಣುಪಾಲು ಮಾಡಿತ್ತು ಎನ್ನುತ್ತಾರೆ ಕವಯತ್ರಿ.

ನಗೆಗೆ ಬಗೆಬಗೆಯ ವರ್ಣಗಳು

ನಗೆಗೆ ಲಿಂಗ ಭೇದಗಳು

ನಗುಅಳು ಬೇಲಿಯಾದದ್ದು

ಭಾವಗಳು ತಳವೂರಿ ಕುಳಿತದ್ದು

ಇನ್ನೆಂದೂ ಮೇಲೇಳದಂತೆ..

ಮಡುವಿನಲ್ಲಿ ಸೆಳೆದು ಬೇರೂರಿದ್ದು..!”

ನಗೆಗೆ ಬಗೆ ಬಗೆಯ ವರ್ಣಗಳು ಎನ್ನುವ ಮೂಲಕ ಕವಯತ್ರಿ ನಗೆಯ ಪ್ರಕಾರಗಳನ್ನು ಓದುಗರ ಮುಂದಿಟ್ಟಿದ್ದಾರೆ. ನಗಲೂ ಕೂಡ ಗಂಡು ಹೆಣ್ಣುಗಳಿಗೆ ಸಮಾಜವು ಸಮಾನ ಪ್ರಾತಿನಿಧ್ಯ ನೀಡಿಲ್ಲ. ನಗೆಗೆ ಲಿಂಗ ತಾರತಮ್ಯದ ನೆರಳಿದೆ. ಅವರುಗಳಿಗೆ ನಮ್ಮ ಭಾವನೆಗಳನ್ನು ಮನಸಾರೆ ವ್ಯಕ್ತಪಡಿಸಲು ಅವಕಾಶ ನೀಡದೆ, ಜಡವಾಗಿ ಮನದಾಳದ ಬಯಲಲ್ಲಿ ಇನ್ನೆಂದು ಮೇಲೇಳದಂತೆ ತಳವೂರಿ ಕುಳಿತಿವೆ ಎನ್ನುತ್ತಾರೆ.

ಅದಕ್ಕೆಂದೇ‌…ಇರಬೇಕು..,

ನಗುವೆಂಬುದು ಬಾಗಿಲ ಒಳಗೆ ಅವಿತುಹೋಯ್ತು..

ಗಂಟಲೊಳಗೆ ಹೂತುಹೋಯ್ತು.

ನಾಲ್ಕು ಗೋಡೆಯೊಳಗೆ..

ಸ್ನಾನದ ಕೋಣೆಯೊಳಗೆ..

ನಕ್ಕದ್ದು..ಸದ್ದು ಕೇಳದೆ ಇದ್ದದ್ದು..

ಅವಳಿಗೊಂದೇ ಅದು ಗೊತ್ತಾದದ್ದು…!!

ನೀರೊಳಗಿನ ವೀಣೆಯ ನಾದವಾದುದುಹಳೆಯ ಮಾತು…!”

ಇಷ್ಟೆಲ್ಲ ಬಂಧ ನಿರ್ಬಂಧಗಳ ನಡುವೆ ನಗುವಿಗೆ ಪ್ರಭುದ್ದವಾಗಿ ಅರಳಲು ಅವಕಾಶವಾದರೂ ಎಲ್ಲಿದೆ ಹೇಳಿ? ಅದಕ್ಕಾಗಿಯೇ ಕವಿ ಭಾವ ನಗುವೆಂಬುದು ಬಾಗಿಲೊಳಗೆ ಅವಿತುಹೋಯ್ತು ಎಂದು ಉದ್ಘರಿಸಿರುವುದು. ನಗುವಾಗ ಶಬ್ದ ಮಾಡಬಾರದು, ಹೊರಗೆ ಇತರ ಮನೆಯವರಿಗೆ ಕೇಳಿಸಬಾರದು ಎಂದು ತಡೆಗೋಡೆ ಕಟ್ಟಿದಾಗ ನಗುವು ಗಂಟಲೊಳಗೆ ಉಳಿದುಹೋಯಿತು ಎನ್ನುತ್ತಾರೆ.

ಅಳುವ ಕಡಲೊಳು

ತೇಲಿ ಬರುತಲಿದೆ

 ನಗೆಯ ಹಾಯಿದೋಣಿ

     – ಗೋಪಾಲ ಕೃಷ್ಣ ಅಡಿಗ

ಸಾಲುಗಳು ಮತ್ತೇ ಮತ್ತೇ ನೆನಪಾಗುತ್ತವೆ

ಕೆಲವೊಮ್ಮೆ ನಗುವನ್ನು ಸ್ನಾನದ ಕೋಣೆಯೊಳಗೆ ನೀರಿನ ಕಲರವದೊಂದಿಗೆ ಬೆರೆಸಿ ನಾಲ್ಕು ಗೋಡೆಗಳ ಒಳಗೆ ನಗುತ್ತಾರೆ. ಹಾಗಾಗಿ ನಕ್ಕರು ಶಬ್ದಬಾರದು, ಬಂದರೂ ನೀರಲ್ಲಿ ಬೆರೆತು ಹೊರಜಗತ್ತಿಗೆ ಅದು ಕೇಳಿಸದು. ಅವಳು ನಕ್ಕಿದ್ದು ಅವಳಿಗೆ ಮಾತ್ರವೇ ತಿಳಿಯುವುದು ಎಂದು ಬಾತ್ರೂಮ್ ನಗೆಯ ಬಗ್ಗೆ ಸೊಗಸಾಗಿ ವಿವರಿಸಿದ್ದಾರೆ.

ಕುಲು ಕುಲು ಜುಳು ಜುಳು,..

ಸಾಂಕೇತಿಕ ದನಿಗಳು ಗಿರಕಿ ಹೊಡೆದವು

ಮುದುಡಿ ಕುಳಿತವು..ಅಲ್ಲೇ…!”

ನಗು ಎಂದರೆ ಶಬ್ದೋತ್ಪತ್ತಿ, ಮನದಾಳದ ಸಂತೋಷ ಅಭಿವ್ಯಕ್ತಿ. ಎಲ್ಲಾ ನಗುವೂ ಒಂದೇ ತೆರನಾಗಿರುವುದಿಲ್ಲ. ಕುಲು ಕುಲು ನಗು, ಗಹಗಹಿಕೆಯ ನಗು ತನ್ನದೇ ಆದ ಧ್ವನಿಯುತ್ಪತ್ತಿ ಮಾಡಿ ಸಾಂಕೇತಿಕ ಶಬ್ದವನ್ನು ಉತ್ಪತ್ತಿ ಮಾಡುತಿದ್ದವು. ಆದರೆ ಅವೆಲ್ಲ ಇಂದು ಭೂಗತವಾದ ಇತಿಹಾಸವೇ ಸರಿ. ಹಿಂದೆ ಜನರು ತೋರ್ಪಡಿಕೆ ಹಾಗೂ ಸೌಜನ್ಯತೆಯ ನೆರಳಿನಲ್ಲಿ ಅರ್ಥಹೀನ ಚಿಂತೆ ಮಾಡದೆ ಮುಕ್ತವಾಗಿ, ಸ್ವತಂತ್ರವಾಗಿ ನಗುತ್ತಿದ್ದರು. ಬಹುಶಃ ಆದೇ ಕಾರಣ ಅವರು ಆಯಸ್ಸು ಹೆಚ್ಚಾಗುತ್ತಿತ್ತು. ಮನದ ಖುಷಿಯನ್ನೆಲ್ಲಾ ನಗುವಿನ ಮೂಲಕ ಹೊರ ಹಾಕಿ ನಿತ್ಯವೂ ತೇಜಸ್ಸಿನಿಂದ ಕೂಡಿದ ಜಾತಾತನದ ಮನಸ್ಸನ್ನು ಹೊಂದಿರುತ್ತಿದ್ದರು.

ಆದರೆ ಇಂದು ನಕ್ಕರು ಸೌಜನ್ಯವಿಲ್ಲ ದವರು, ಅನಾಗರಿಕರು ಎಂದು ಭಾವಿಸುವ ಜನಗಳ ಮಧ್ಯೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ‌. ಅತಿಯಾದ ನಾಗರಿಕತೆಯ ಸೋಗಿನಿಂದ ನಗೆ ತರಂಗಗಳು ಗಿರಿಕಿ ಹೊಡೆದವು ಎನ್ನುತ್ತಾ ನಗು ಅರಳದೆ ಅಲ್ಲೇ ಮುದುಡಿ ಕೂತಿದೆ ಎನ್ನುತ್ತಾರೆ.

ಚಾರದೀವಾರಿನೊಳಗಿನದು.. ಹುಚ್ಚುನಗೆಯಾಗಿ

ಪೆಚ್ಚುನಗೆಯಾಗಿ..

ಕಣ್ಣೀರು ಒತ್ತರಿಸಿತಲ್ಲ..

ಒಮ್ಮೊಮ್ಮೆ..ಅದ

ಮನತಣಿದಾಗ ಮೆಚ್ಚುನಗೆ

ಭಯವಿಲ್ಲದಿದ್ದಾಗ ಬಿಚ್ಚುನಗೆ

ಶೂನ್ಯ ಆವರಿಸಿದಾಗ ಖಾಲಿನಗೆ..

ಸುಖಾ ಸುಮ್ಮನೆ ಹುಸಿನಗೆ ಚೆಲ್ಲುನಗೆ ನಕ್ಕವು..!”

ಕೆಲವೊಮ್ಮೆ ನಮಗರಿವಿಲ್ಲದೆ ಹುಚ್ಚು ನಗೆ ನಗುತ್ತೇವೆ. ಮಗದೊಮ್ಮೆ ಸಪ್ಪೆಯಾಗಿ ಅಂದರೆ ನೀರಸ ಭಾವದಲ್ಲಿ ನಗುತ್ತೇವೆ. ಭಾವಗಳು ತುಂಬಿ ಮನದೊಳಗೆ ಒಮ್ಮೊಮ್ಮೆ ನಗುವಿನಲ್ಲೂ ಕಣ್ಣೀರು ಬರುವುದು. ಹುಚ್ಚು ನಗು,ಪೆಚ್ಚು ನಗೆಗಳ ಜೊತೆಗೆ ಕವಯತ್ರಿ ಮತ್ತಷ್ಟು ಭಾಗಗಳಿಗೆ ಸೃಜಿಸುವ ನಗೆಗಳ ವಿಧಗಳನ್ನು ಪಟ್ಟಿಮಾಡುತ್ತ ಹೋಗಿದ್ದಾರೆ. ಮನಸ್ಸು ತಿಳಿದು ತೃಪ್ತವಾಗದಿದ್ದಾಗ ಇತರರು ಮೆಚ್ಚಿಕೊಳ್ಳುವಂತಹ ನಗೆ ಬರುತ್ತದೆ. ಭಯ ಮುಕ್ತ ವಾತಾವರಣವಿದ್ದಾಗ ಮನಸು ಬಿಚ್ಚಿ ನಗುತ್ತಾರೆ ಎನ್ನುತ್ತಾರೆ. ಶೂನ್ಯ ಭಾವ ಆವರಿಸಿದಾಗ, ಮುಂದೇನು ಎಂದು ತಿಳಿಯದಿದ್ದಾಗ, ಗುರಿಮುಟ್ಟಲು ಆಗದಿದ್ದಾಗ, ಖಾಲಿಯೆನಿಸಿ ಶೂನ್ಯ ನಗು ಬರುವುದೆಂದು ಹೇಳುತ್ತಾರೆ. ಇದು ಕೇವಲ ನಗೆಯ ಮುಖಭಾವವಷ್ಟೆ. ಕೆಲವೊಮ್ಮೆ ಸುಖಾಸುಮ್ಮನೆ ಹುಸಿನಗೆ ಮತ್ತು ಚೆಲ್ಲು ನಗೆಗಳಿಗೂ ಕಾರಣವಾಗುತ್ತದೆ.

ಕೆಲವರೊಂದಿಗೆ….,

ಸರಸನಗೆ, ಮುಗುಳ್ನಗೆ, ಬಿಸುನಗೆ,

ಮೆಲುನಗೆ..ನಸುನಗೆ..

ಬಂಧದ ಕೊಂಡಿ ಜೋಡಿಸಿಕೊಂಡವಲ್ಲ ಹಾಗೆ..!”

ಹಲವರೊಂದಿಗೆ…,

ಕೊಂಕುನಗೆ, ಬಿಂಕನಗೆ, ಚುಚ್ಚುನಗೆ, ಕೆಚ್ಚುನಗೆ

ಒರಟು ನಗೆ ..

ಅನುಬಂಧದ ಕೊಂಡಿ ಕಳಚಿಕೊಂಡವಲ್ಲ..ಹೀಗೆ..!”

ಜನಗಳ ನಡುವೆ ಬಾಂಧವ್ಯದ ಕೊಂಡಿಯಾಗಿ ನಗೆ ಕೆಲಸ ಮಾಡುತ್ತದೆ. ನಲ್ಲ ನಲ್ಲೆಯರು ಹಾಗೂ ದಂಪತಿಗಳ ನಡುವೆ ಸರಸದ ನಗೆ ಮೂಡಿದರೆ, ಪರಿಚಯದವರು ಎದುರಾದಾಗ ಮುಗುಳುನಗೆ ಹಾಗೆ ನಸು ನಗೆಗಳು ಹೊರಹೊಮ್ಮುತ್ತವೆ.

ನಗೆ ಸಂಬಂಧಗಳನ್ನು ಹೊಲಿಯುವ ಸೂಚಿಯಾಗಿದೆ. ನಗೆಯ ಸ್ವರೂಪಗಳು ಸಾಮರಸ್ಯದ ಸೌಹಾರ್ದತೆಯ ಕೊಂಡಿ ಕಳಚಲು ಕಾರಣವಾಗುತ್ತದೆ ಎನ್ನುತ್ತಾರೆ. ಕೆಲವೊಮ್ಮೆ ಅಣಕಿಸಲು ಕೊಂಕು ನಗೆ ಬೀರುತ್ತಾ ಎದುರಿಗಿರುವವರನ್ನು ಅಣಕ ಮಾಡಿದರೆ, ಮತ್ತೆ ಕೆಲವು ಲಲನೆಯರು ಒನಪು ವಯ್ಯಾರ ತೋರುತ್ತಾ ಬಿಂಕದ ನಗೆ ತೋರುತ್ತಾರೆ. ಮಗದಷ್ಟು ಜನ ಕಷ್ಟ ನೋವು ಬಡತನದಲ್ಲಿರುವವರಿಗೆ ಬಲವಂತರು ಸಿರಿವಂತರು ಸೌಂದರ್ಯವಂತ ಇತರರನ್ನು ನಗೆಯಿಂದ ಚುಚ್ಚುತ್ತಾರೆ. ಮಗದೊಂದಷ್ಟು ಜನರು ಮುಂದಿನ ಗುರಿ, ಹಿಡಿದ ಕಾಯಕ, ಸಾಧಿಸಿಯೇ ತೀರುತ್ತೇನೆ ಎಂಬ ಕೆಚ್ಚುನಗೆ ನಕ್ಕರೆ,  ಕೆಲವೊಂದಿಷ್ಟು ಮಂದಿ ಇತರರ ಮನಸ್ಸಿಗೆ ನೋವಾಗುವಂತೆ ಒರಟ ನಗೆಯಾಡುತ್ತಾರೆ. ನಗೆಯ ಪ್ರಕಾರಗಳು ಬಹಳಷ್ಟು ಇವೆಯಾದರೂ ಅವುಗಳ ನಡುವೆ ಸಾಕಷ್ಟು ವೈರುಧ್ಯಗಳು ಇದ್ದು ಅವು ಉಂಟು ಮಾಡುವ ಪರಿಣಾಮಗಳು ವಿಭಿನ್ನವಾಗಿವೆ.

ನಗುವ ರಸಪಾಕದೊಳು ಎಷ್ಟು ಪಾಲಿತ್ತೋ ಅಷ್ಟೇ ಅಲ್ಲವೇ ಸಿಕ್ಕಿದ್ದು..ದಕ್ಕಿದ್ದು..!

ಸುಖಸಾಗರದಿ ಅವರವರ ಬೊಗಸೆ ಇದ್ದಷ್ಟೇ..ಜಲ..!”

ನಗುವೆಂಬುದು ರಸಪಾಕದಂತೆ ಎನ್ನುತ್ತಾ ಪ್ರತಿಯೊಬ್ಬರಿಗೂ ಎಷ್ಟು ಸಿಗಬೇಕಿತ್ತು ಅಷ್ಟು ಅವರ ಪಾಲಿಗೆ ಸಿಕ್ಕಿದೆ. ಅಂದರೆ ಅವರು ಬಯಸಿದಷ್ಟು ಬಳಸಿದಷ್ಟು ನಗೆ ದಕ್ಕಿದೆ ಎನ್ನುತ್ತಾ ನಗೆಯ ಸುಖಸಾಗರ ಎಂಬ ರೂಪಕದ ಮೂಲಕ ಬೊಗಸೆಯಿದ್ದಷ್ಟು ಅಂದರೆ ನಾವು ಅನುಭವಿಸಿದಷ್ಟು ಅವರ ಪಾಲಿಗೆ ಇರುತ್ತದೆ ಎನ್ನುತ್ತಾರೆ ಕವಯತ್ರಿ. ಈ ನಗೆಯನ್ನು ಶಕ್ತಿಮೀರಿ ಹೊಂದಿರಿ ಎಂಬ ಮಾರ್ಮಿಕ ಬೋಧೆ ಕವಯತ್ರಿಯದಾಗಿದೆ.

ಕೂಸುಗಳು ಕೂಸಿನಂಥವರು

ಮುಗ್ಧ ನಗೆಯಲಿ ಮಿಂದರು..

ವಿಡಂಬನೆ, ಕ್ರೂರತೆ, ಅಟ್ಟಹಾಸದ ಗಹಗಹಿಸುವಿಕೆ ಧಾಂಡಿಗರ ಪಾಲಾಯ್ತು..!”

ಕೂಸುಗಳು ಮುಗ್ಧತೆಯ ಪ್ರತಿರೂಪ.

 ಅವರ ನಗು ನಿಷ್ಕಲ್ಮಶ, ಕಪಟವರಿಯದ ಸೌಮ್ಯ ನಗೆ ಮಕ್ಕಳದು ಎನ್ನುವ ಕವಯತ್ರಿ ಜೊತೆಗೆ ಕೂಸಿನಂತಹ ಮನಸ್ಥಿತಿಯ ಜನರಿದ್ದು ಇವರೆಲ್ಲ ಮುಗ್ಧವಾಗಿ ನಗುವರು ಎನ್ನುತ್ತಾರೆ. ಮತ್ತೊಂದು ಆಯಾಮದಲ್ಲಿ ನಗೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ. ಇತರರನ್ನು ವ್ಯಂಗ್ಯ ಮಾಡುತ್ತಾ, ಕ್ರೌರ್ಯ ತೋರುತ್ತಾ, ಕ್ರೂರವಾಗಿ ಗಹಗಹಿಸಿ ನಗುವುದು ದಾಂಡಿಗರ ಪಾಲಿನ ನಗುವಾಗಿದೆ.

ನಗುವು ಹೂವರಳಿದಂತೆ

ಕಂದೀಲ ಕದಿರಂತೆ..

ಚಂದ್ರಾಮ ನಕ್ಕಾಗಲ್ಲವೆ.. ಬೆಳದಿಂಗಳು..

ಎಂದೆಲ್ಲ..ಬಣ್ಣನೆ..ಇತ್ತಲ್ಲ..!

ಹಾಗಾದಲ್ಲಿ..,

ಚಕೋರಗಳು ನಗುತ್ತಿದ್ದವೆ..?!

ಖಗ ಮಿಗಗಳು ನಗುತ್ತವೆಯೆ…?!”

ನಗುವೆಂಬುದು ಹೂವಂತೆ ಸಹಜ ಸುಂದರವಾಗಿ ಅರಳಬೇಕು. ಕಂದೀಲಿನ ಬೆಳಗಿನ ಪ್ರಭೆ ಬೀರಬೇಕು ಎನ್ನುವ ಕವಯತ್ರಿ ಬೆಳದಿಂಗಳನ್ನು  ಚಂದ್ರನ ನಗುವೆಂಬ ರೂಪಕದಲ್ಲಿ ತೋರಿಸಿದ್ದಾರೆ. ತಾರೆಗಳು ನಗುತ್ತಿದ್ದವೆ?  ಪ್ರಾಣಿ ಪಕ್ಷಿಗಳು ನಗುತ್ತವೆಯೆ?  ಎಂದು ಕವಯತ್ರಿಯ ಪ್ರಶ್ನೆಯೊಂದನ್ನು ಓದುರೊಳಗೆ ಹುಟ್ಟುಹಾಕಿ ಚಿಂತನೆಯಲ್ಲಿ ಮುಳುಗಿರುತ್ತಾರೆ.

ನಗುವುದು ಸ್ವಧರ್ಮ

ನಗಿಸುವುದು ಪರಧರ್ಮ

ಅಂದವರು ..

ನಕ್ಕು ನಗಿಸುತ್ತ ಮಣ್ಣಾಗಿ

ಹೋದವರು

ಅಳುತ್ತಲೇ ನಕ್ಕು

ನಗುತ್ತಲೇ ಅತ್ತು

ನಾಣ್ಯದ ಎರಡು ಮುಖ

ಮಾಡಿದವರು….ನಾವು…!”

ನಗುವುದು ಸ್ವಧರ್ಮ, ನಗಿಸುವುದು ಪರಧರ್ಮ ಎನ್ನುವ ಕವಿವಾಣಿಯನ್ನು ಪ್ರಸ್ತಾಪಿಸುತ್ತಾ ಅವರು ಎಲ್ಲರನ್ನೂ ನಗಿಸುತ್ತ ಮಣ್ಣಾದರು. ಆದರೆ ನಾವು ಅಳುತ್ತಾ ನಗುವಂತೆ ತೋರ್ಪಡಿಸಿಕೊಳ್ಳುತ್ತೇವೆ, ನಗುವಿನಲ್ಲೂ ಅಳುತ್ತೇವೆ ಎನ್ನುವ ಕವಯತ್ರಿ ಅಳು ನಗು ಎರಡು ಜೊತೆಯಾಗಿ ಸಾಗುವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವಿವರಿಸುತ್ತಾರೆ.

ಅತಳ ವಿತಳ ಸುತಳ ರಸಾತಳ ತಳಾತಳ, ಮಹಾತಳ,ಪಾತಾಳ ಏಳು ಲೋಕದಲಿ..

ಸಮಸ್ತ ಚರಾಚರಗಳಲಿ..,

ಎಂಬತ್ನಾಲ್ಕು ಲಕ್ಷ ಜೀವಕೋಟಿ ರಾಶಿಯಲಿ..,

ನಗುವೆಂಬುದು ಹೇಗಿರಬಹುದು..?!

ನಗೆ ವಿಶ್ವವ್ಯಾಪಕವಾಗಿ‌…

ಶಬ್ದಗಳು ಮಾರ್ದನಿಸಿರಬಹುದಲ್ಲ..!”

ಇಲ್ಲಿ ಕವಯತ್ರಿ ನಗುವಿನ ಸರ್ವ ವ್ಯಾಪಕತೆಯ ಬಗ್ಗೆ ಚರ್ಚಿಸುತ್ತಾ, ಅತಳ ವಿತಳ ಪಾತಾಳ ಸೇರಿದಂತೆ ಏಳು ಲೋಕಗಳಲ್ಲೂ ನಗುವಿದೆ ಎನ್ನುತ್ತಾರೆ. ಎಂಬತ್ನಾಲ್ಕು

 ಜೀವರಾಶಿಯಲ್ಲಿ, ಅದರ ಸಮಸ್ತ ಚರಾಚರಗಳಲ್ಲೂ ನಗುವಿದೆ ಎನ್ನುವುದಾದರೆ ಅವುಗಳ ನಗು ಹೇಗಿರಬೇಕೆಂಬ ಕುತೂಹಲಕಾರಿ ವಿಷಯವನ್ನು ಓದುಗರ ಮುಂದಿಡುತ್ತಾರೆ.

ಯಾರಾದರೂ ಗಮನಿಸುತ್ತಾರೆಂದು..

ನಿಗಾವಹಿಸುತ್ತಾರೆಂದು.

ನಿರ್ವಹಿಸುವುದೇ ಆಯ್ತು..!

ನಾವು..ನಗದೇಆಗ..!!

ಬಾಯ್ತುಂಬಾ ನಗಬೇಕಿತ್ತು

ಅಂದಂದಿನದು ಅಂದಂದೇ ಆಗಬೇಕಿತ್ತು…!!”

ನಮಗೆ ನಗುವ ಸಂದರ್ಭಗಳು ಹೇರಳವಾಗಿ ದೊರೆತರೂ, ಮನಸ್ಸು ಉಕ್ಕಿ ಬಂದರೂ ನಾವು ಮಾತ್ರ ಮಾಡ್ರನ್ ಶೈಲಿಗೆ ಒಗ್ಗಿ ಕೊಂಡು ಸಮಾಜದ ಕಣ್ಣೋಟಕ್ಕೆ ಹೆದರಿ ಬೆದರಿ ನಗೆಯನ್ನು ತಡೆ ಹಿಡಿಯುತ್ತಾ, ಸಮಾಜದಲ್ಲಿನ ಸ್ಥಾನಮಾನ ನಿರ್ವಹಿಸುತ್ತಾ, ಗಮನಿಸುವ ಕಣ್ಣುತಪ್ಪಿಸಿ ಬಾಳುವ ಜರೂರತ್ತಿಗೆ ಒಳಗಾಗಿ ನಗುವನ್ನು ಮನದೊಳಗೆ ಸಮಾಧಿಯಾಗಿಸಿದ್ದೆವು. ಆದರೆ ಕಾಲ ಮಿಂಚಿ ಹೋದ ಮೇಲೆ ಈಗ ನಾವು ಅಂದಂದಿನ ನಗುವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಖುಷಿಯನ್ನು ಅನುಭವಿಸಿಬೇಕಿತ್ತು ಇಲ್ಲದಿದ್ದರೆ ಮುಂದೆ ಪಶ್ಚಾತ್ತಾಪದ ಜ್ವಾಲೆಯಲ್ಲಿ ಬೇಯಬೇಕಾಗುತ್ತದೆ ಎನ್ನುತ್ತವೆ ಈ ಸಾಲುಗಳು.

ಈಗೀಗ ಅನಿಸುತ್ತಿದೆ …,

ಸಾವು ಆವೀರ್ಭವಿಸುವಾಗಲೂ ನಕ್ಕುಬಿಡಬೇಕು

ಸುತ್ತ ಇದ್ದವರೂ ನಕ್ಕುಬಿಡಲಿ

ಸಮಾರಾಧನೆ  ಸಮಯದಲೂ

ತರ್ಪಣ ಕೊಡುವಾಗಲೂ…!”

ನಗುವನ್ನು ಯಾವುದೇ ಕಾರಣಕ್ಕೂ ಮುಂದೂಡದಂತೆ ಸಲಹೆ ನೀಡುತ್ತಾರೆ. ಹಿಂದೆ ನಗುವನ್ನು ನಿಯಂತ್ರಿಸಿದ್ದಕ್ಕೆ  ವ್ಯಥೆಗೊಂಡು, ಸಂದರ್ಭ, ಸಮಯ, ಗಳಿಗೆ, ಮುಹೂರ್ತ ನೋಡದೆ ನಕ್ಕು ಬಿಡಬೇಕು ಎನ್ನುವ ಕವಯತ್ರಿ, ಸಾವು ನಮ್ಮನ್ನು ಅಪ್ಪುತ್ತದೆ ಎಂದು ಅರಿವಾದಾಗಲೂ ನಾವು ನಗುನಗುತ ಅದನ್ನು ಸ್ವೀಕರಿಸಬೇಕು ಎನ್ನುತ್ತಾರೆ. ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸತ್ತವರ ಸುತ್ತಲೂ ಸೇರಿರುವವರು, ಸಮಾರಾಧನೆ ಸಮಯದಲ್ಲಿ, ತರ್ಪಣ ಕೊಡುವಾಗಲೂ ಅಳದೇ ನಗುವಿನಿಂದಲೇ ಅವರನ್ನು ಹೊಸ ಲೋಕಕ್ಕೆ ಬೀಳ್ಕೊಡಬೇಕು ಎನ್ನುತ್ತಾರೆ.

ನಗುವೊಂದು ರಸಪಾಕ ಅಳುವೊಂದು ರಸಪಾಕl

ನಗುವಾತ್ಮ ಪರಿಮಳವ ಪಸರಿಸುವ ಕುಸುಮll

ದುಗುಡವು ಆತ್ಮವ ಕಡೆದು ಸತ್ವವ ಎತ್ತುವ ಮಂತುl

ಬಗೆದು ಎರಡ ನುಂ ಭುಜಿಸು

ಮಂಕುತಿಮ್ಮll

ಎಂಬ ನಮ್ಮ ಡಿ.ವಿ.ಜಿ. ಯವರ ಕಗ್ಗದ ನುಡಿಮುತ್ತು ನಮಗೆ ಪ್ರೇರಣೆಯಾಗದಿರುವುದೆ .

ಭಾಷ್ಪಾಂಜಲಿ ಆನಂದವಾಗಿಬಿಡಲಿ

ಕವಿ ಮಿತ್ರರು..ಹಿತೈಷಿಗಳು ಸಹೃದಯರೆಲ್ಲ ಸೇರಿದ

ಶ್ರದ್ಧಾಂಜಲಿ ಸಭೆಯಲಿ..”

ನಗುತ್ತ ಸಾವ

ಆಲಂಗಿಸಿದವಳೆಂದೂ

ಸುದ್ದಿಯಾಗಿಬಿಡಲಿ..”

ವಿಶೇಷವಾಗಿ…,

ಅವನೂ…,

ಶ್ರದ್ಧಾಂಜಲಿ ಸಭೆಯಲಿದ್ದು

ನಗುವ ಹೂವೊಂದನು ನನ್ನ ಚಿತ್ತ ಚಿತ್ರಕೆ

ಮುಡಿಸಲಿ..!!”

ಸತ್ತವರಿಗೆ ಅರ್ಪಿಸುವ ಭಾಷ್ಪಾಂಜಲಿ ಪುಷ್ಪಾಂಜಲಿ ಶ್ರದ್ಧಾಂಜಲಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುತ್ತ ಅಂತಹ ಸಂದರ್ಭದಲ್ಲಿ ಸಹೃದಯರು, ಕವಿಮಿತ್ರರು,, ಬಂಧು ಬಾಂಧವರು, ಹಿತೈಷಿಗಳು, ನಗುತ್ತಾ ಕಳುಹಿಸಿಕೊಡಿ ಎನ್ನುತ್ತಾರೆ ಇದರಿಂದ ಸಾವನ್ನು ನಗುವಿನಿಂದಲೇ ಅಪ್ಪಿಕೊಂಡಳು ಎಂದು ಅವಳ ಬಗ್ಗೆ ಸುದ್ದಿಯಾಗಲೀ ಎಂಬುದು ಇವರ ವಾದವಾಗಿದೆ.

ನನ್ನ ಶ್ರದ್ಧಾಂಜಲಿ ಸಭೆಯಲ್ಲಿ ನನ್ನನ್ನು ಹಾಜರಿದ್ದು ಹೂವನ್ನು ಮನಸಿನ ಚಿತ್ರಕ್ಕೆ ಮುಡಿಸಿದೆ ಎನ್ನುತ್ತಾರೆ.

ಜಗವೆಲ್ಲ ಮಲಗಿರಲು

ಜಗದಳುವು ನನಗಿರಲು

ನಾ ನಕ್ಕು ಜಗವಳಲು

ನೋಡಬಹುದೇ

ಈಶ್ವರ ಸಣಕಲ್ಲ ಅವರ ಕೋರಿಕೆ

ಪದ್ಯದ ಸಾಲುಗಳು ಸಾಮಾಜಿಕ ನಗುವನ್ನು ಬಯಸುತ್ತವೆ.

ಹುಸಿನಗುತ‌‌ ಸಂದೇಶ

ನಸುನಗುತಬಾಳೋಣ

ತುಸು ನಗುತತೆರಳೋಣ

     – .ರಾ. ಬೇಂದ್ರೆ

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಹಚ್ಚೋದಾದರೆ ದೀಪವನ್ನು

ಹಚ್ಚು ಬೆಂಕಿಯನ್ನಲ್ಲಾ

ಆರಿಸೋದಾದ್ರೆ ನೋವನ್ನೇ

ಆರಿಸು ನಗುವನ್ನಲ್ಲಾ

ಎಂಬ ಅಂಬಿಕಾತನಯದತ್ತರ ಸಾಲುಗಳು ಕವಯತ್ರಿಯ ಮನೋಗತಕ್ಕೆ ಪ್ರೇರಣಿ ನೀಡಿವೆ .

ಕವಯತ್ರಿಯು ನಗುವಿನ ಸ್ವತಃ ಸುತ್ತಿಕೊಂಡಿರುವ ವಿಚಾರ ಸರಣಿಗಳನ್ನು ತಮ್ಮ ಗಂಭೀರವಾದ ಮತ್ತು ಗಹನವಾದ ಅಭಿವ್ಯಕ್ತಿಯ ಮೂಲಕ ವಿಸ್ತೃತವಾಗಿ ಚಿತ್ರಿಸಿದ್ದಾರೆ. ದುಃಖದ ಎದುರು ನಿಂತಾಗ ನಗುವನ್ನು ಜೀವಪರವಾಗಿ, ಚೈತನ್ಯದಾಯಿಯಾಗಿ ಬಿಂಬಿಸಿದ್ದಾರೆ. ನಗು ಅಳುವಿನ ಬೆಳಕು ಕತ್ತಲೆ ಯಾಟದಲ್ಲಿ ಅಂಧಕಾರವನ್ನು ಮೆಟ್ಟಿನಿಂತು ನಗುವು ಪ್ರಜ್ವಲಿಸಿದೆ. ಇವರು ವೈಯಕ್ತಿಕ ನೆಲೆಯಲ್ಲಿ ನಗುವನ್ನು ಚರ್ಚಿಸುವ ಜೊತೆಗೆ ಸಾಮಾಜಿಕ ಬದುಕಿನೊಂದಿಗೆ ಸಮೀಕರಿಸಿ ಸಾಗಿರುವುದರಿಂದ ಇದೊಂದು ಸಾರ್ವತ್ರಿಕ ಕವಿ ಭಾವದ ಅನಾವರಣವಾಗಿದೆ.

ಈ ಚಿರಚೇತನ ರಸಗಂಧವಾದ ನಗುವನ್ನು ವೈವಿಧ್ಯಮಯವಾದ ಆಯಾಮಗಳಲ್ಲಿ ವರ್ಣಿಸುವಲ್ಲಿ ಕವಯತ್ರಿಯು ಸಾಹಿತ್ಯ ಪ್ರೌಢಿಮೆ ಮೆರೆದಿದ್ದಾರೆ. ಇನ್ನೂ ಪ್ರತಿಮೆ ಜನ ಜೀವನದ ಸಂಕೇತವೆಂದು ಪ್ರತಿಪಾದಿಸಿದ್ದಾರೆ. ಕವಿತೆಯು ಯಾವುದೇ ರೂಪಕಗಳ ಅಲಂಕಾರವಿಲ್ಲದೆ ಸಹಜ ಸುಂದರವಾಗಿ ನಗುವಿನಷ್ಟೇ ನವಿರಾಗಿ ಮೂಡಿಬಂದಿದೆ. ಇಲ್ಲಿ ಕವಯಿತ್ರಿಯ ಬದುಕಿನ ಅನುಭವ ನಗೆಯ ಮಜಲುಗಳನ್ನು ತೆರೆದಿಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಈ ಕವಿತೆ ಪ್ರತಿ ಓದುಗನಿಗೂ ತನ್ನದೇ ಜೀವನ ಗಾಥೆಯಂತೆ ಕಾಣುತ್ತದ್ದೆ. ಮನುಷ್ಯ ಮತ್ತು ನಗುವಿನ ನಡುವಿನ ಸಂಬಂಧ ಗಾಢವಾಗಿದೆ. ಜೀವನದ ಪ್ರತಿ ಕ್ಷಣವನ್ನು ಉಲ್ಲಾಸ ಉತ್ಸಾಹದಲ್ಲಿ ಕಳೆಯಲು ಪ್ರೇರಿಪಿಸುವುದು ಈ ಸುಂದರವಾದ ಕವಿತೆಯ ಆಶಯವಾಗಿದೆ.

ಸ್ನೇಹಿತರೆ ನೀವೆಲ್ಲರೂ ನಗುವಿನ ಕವಿತೆಯನ್ನು ಓದಿ ನೀವು ಸಹ ನಗುವೆಂಬ‌ ಕಿರೀಟ ಧರಿಸಿಕೊಂಡು ಹರ್ಷದ ಕಡಲಲ್ಲಿ ತೇಲುತ್ತೀರೆಂಬ  ಆಶಾಭಾವದೊಂದಿಗೆ ಮುಂದಿನ ವಾರದ ನನ್ನ ಬರಹದ ಓದುವ ನಿರೀಕ್ಷೆಯಲ್ಲಿ ನಿಮ್ಮೆಲ್ಲರನ್ನು ನೆನೆಯುತ್ತ ನಮ್ಮೆಲ್ಲರಿಗೂ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇನೆ.


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

Leave a Reply

Back To Top