ಅಂಕಣ ಬರಹ

ಗಜಲ್ ಲೋಕ

ಗಜಲ್ಪ್ರೇಮಿಗಳನ್ನುಸೃಷ್ಟಿಸಿದ

ಅಲ್ಲಾಗಿರಿರಾಜ್ ಕನಕಗಿರಿ…

ಹಲೋ…. ಗಜಲ್ ಮನಸುಗಳಿಗೆ ಗಜಲ್ ಭಕ್ತನ ಚೆಂದನೆಯ ನೆನಕೆಗಳು..!! ಇಂದು  ನಾನು ಮತ್ತೊಮ್ಮೆ ಗಜಲ್ ಮಾಯಾಂಗನೆಯ ಸೆರಗು ಹಿಡಿದು ತಮ್ಮ ಮುಂದೆ ಬಂದು ನಿಂತಿದ್ದೇನೆ, ಈ ಗುಲ್ಜಾರ್ ನ ಮಾಲಿಯಾಗಿ. ಬನ್ನಿ, ಹೂಗಳೊಂದಿಗೆ ಮಾತನಾಡೋಣ, ತಮಗೆಲ್ಲರಿಗೂ ತುಂಬು ಹೃದಯದಿಂದ  ಸ್ವಾಗತಿಸುತ್ತಿರುವೆ ; ಜೊತೆ ಜೊತೆಗೆ ಹೆಜ್ಜೆ ಹಾಕಲು…!! ಬರುವಿರಲ್ಲವೆ.. ಬನ್ನಿ…!!

ನನ್ನ ಕಥೆಯೂ ವಿಚಿತ್ರವಾಗಿದೆ, ಅವಳು ಹೆಜ್ಜೆ ಹೆಜ್ಜೆಗೂ ನನ್ನ ಜೊತೆಗಿದ್ದಳು

ಅವಳಿಗೆ ಹೃದಯದ ತುಮುಲವನ್ನು ಹೇಳಲಾಗಲಿಲ್ಲ, ಹೃದಯದ ಕಲೆಯನ್ನು ತೋರಿಸಲಾಗಲಿಲ್ಲ

          ‌                   –ಹಿಲಾಲ್ ಫರೀದ್

          ಬದ್ಧತೆ ಮತ್ತು ಅಸ್ತಿತ್ವ ಮನಷ್ಯನ ಯಶೋಗಾಥೆಯ ಚಕ್ರಗಳು. ಇವುಗಳ ಏರುಪೇರಿನಿಂದಾಗಿಯೇ ಮನುಷ್ಯನ ಬಾಳಿನಲ್ಲಿ ಶಾಂತಿ-ಸಮೃದ್ದಿ ಕಣ್ಣಾಮುಚ್ಚಾಲೆ ಆಡುತ್ತಿರುತ್ತವೆ. ಭಾವಕ್ಕೆ ದೇಹ ತೋರುವ ಪ್ರತಿಕ್ರಿಯೆ ಇನ್ನಿತರ ಪ್ರಾಣಿಗಳಿಗಿಂತಲೂ ಮನುಷ್ಯನಲ್ಲಿ ಭಿನ್ನವಾಗಿರಲು ಇದುವೇ ಕಾರಣ. ಇದರಲ್ಲಿ ‘ಅಭಿವ್ಯಕ್ತಿ’ ಮುನ್ನೆಲೆಗೆ ಬಂದು ಪರಂಪರೆ ಕಾವಲಿಗೆ ನಿಲ್ಲುತ್ತದೆ. ವ್ಯಕ್ತಿಯು ತನ್ನ ಅನುಭವ, ಅಮೂರ್ತ ರೂಪದ ಭಾವನೆ, ಆಲೋಚನೆ, ಬಯಕೆ, ಚಿಂತನೆಗಳಿಗೆ ಸಾಮಾಜಿಕವಾಗಿ ಅಂಗೀಕೃತವಾದ ಯಾವುದೇ ಒಂದು ಮಾಧ್ಯಮದಲ್ಲಿ, ತಕ್ಕ ಮಟ್ಟಿಗೆ ಖಚಿತವಾದ, ಮೂರ್ತವಾದ ರೂಪವನ್ನು ಕೊಡುವ ಕ್ರಿಯೆ… ಇದೆಲ್ಲವೂ ಸಾಧ್ಯವಾಗಲು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ನೆರಳೆ ಕಾರಣ!! ವಿಶೇಷವಾಗಿ ಇದರಲ್ಲಿ ‘ಸಾಹಿತ್ಯ’ದ ಪಾತ್ರ ಅನಿರ್ವಚನೀಯ. ಸಾಹಿತ್ಯದ ಮೂಲ ವಾರಸುದಾರನಾದ ‘ಕವಿ’ಯನ್ನು ನಾವು ಎಲ್ಲ ಭಾಷೆಗಳಲ್ಲಿ ಕಾಣುತ್ತೇವೆ. ಕವಿಯಿಂದ ವಿರಚಿತವಾದ ಕಾವ್ಯದ ಅನುಭವ, ಆನಂದ ಬ್ರಹ್ಮಾನಂದಕ್ಕೆ ಸಮಾನ ಎನ್ನಲಾಗುತ್ತದೆ. ಅಂತೆಯೇ ಕವಿ ಕಾವ್ಯ ಜಗತ್ತಿನ ಬ್ರಹ್ಮ, ರಸಋಷಿಯೇ ಸರಿ. ಈ ಕಾವ್ಯ ಛಂದಸ್ಸಿಗೆ ಬದ್ಧವಾದ ವಿಶಿಷ್ಟವಾದ ಭಾಷೆಯ ಬಳಕೆಯನ್ನು ಹೊಂದಿರುತ್ತದೆ. ಕಾವ್ಯದ ಉಡುಗೆಯಲ್ಲಿ ಅನುಪಮವಾಗಿ ಕಂಗೊಳಿಸುವ ಹಲವು ಪ್ರಕಾರಗಳಲ್ಲಿ ‘ಗಜಲ್’ ಮುಂಚೂಣಿಯಲ್ಲಿದ್ದು, ಕರುನಾಡಿನಲ್ಲಿ ‘ಶ್ರೀಗಂಧ’ದಂತೆ ಹರಡಿದೆ, ಹರಡುತ್ತಿದೆ. ಪರ್ಷಿಯನ್ ಸಂಸ್ಕೃತಿಯ ಅತಿಥಿ ಸತ್ಕಾರವನ್ನು ಮೈಗೂಡಿಸಿಕೊಂಡಿರುವ ಗಜಲ್ ಹೃದಯಗಳ ಮಿಡಿತವನ್ನು ಅರಿತು ಇಡೀ ಮನುಕುಲವನ್ನು ಬೆಸೆಯುವ ಆಹ್ಲಾದಕರ ಸೇತುವೆಯಾಗಿದೆ. ಒಂದು ರೀತಿಯಲ್ಲಿ ತನಗೆ ತಾನೆ ಮಾಡಿಕೊಳ್ಳುವ ಒಂದು ಅಲೌಕಿಕ ಸ್ವಾರಾಧನೆಯಾಗಿದೆ. ಬಾಳಿನ ಸುಖ-ದುಃಖ, ಪ್ರಕೃತಿಯ ಸೌಂದರ್ಯ, ಸಮಸ್ತ ಭೂಲೋಕದ ತೆರೆಯ ಹಿಂದಿರುವ ಒಂದು ಮಹಾ ಪವಿತ್ರ ವ್ಯಕ್ತಿತ್ವದಲ್ಲಿ ನಮಗುಂಟಾಗುವ ವೇದನಾಪೂರ್ವಕವಾದ ಪ್ರೇಮ, ಭಕ್ತಿಯಂತಹ ದಿವ್ಯಭಾವಗಳು ಪ್ರತಿಭಾ ಸಂಪನ್ನನಾದ ಗಜಲ್ ಗೋ ಎದೆಯಲ್ಲಿ ಉದ್ರೇಕವಾದಾಗ, ಹಸುರು ನೆಲದಿಂದ ಉಕ್ಕಿ ನೆಗೆಯುವ ಬುಗ್ಗೆಯಂತೆ ನಿರಂತರವಾಗಿ, ನಿರಾಯಾಸವಾಗಿ ಚಿಮ್ಮಿ ಹೊಮ್ಮುವ ಭಾವನಾತ್ಮಕವಾಗಿ ಲಲಿತ ಪದಗಳ ಮನೋಹರವಾದ ಇಂಪಾದ ವಸಂತ ನೃತ್ಯವೆ, ಸುಗ್ಗಿಯ ಕುಣಿತವೆ ಗಜಲ್. ಇಂತಹ ಗಜಲ್ ಆರಾಧಿಸುವ, ಪ್ರೀತಿಸುವ ಗಜಲ್ ಗೋ ಅವರಲ್ಲಿ ಶ್ರೀ ಅಲ್ಲಗಿರಿರಾಜ್ ಕನಕಗಿರಿ ಅವರು ಒಬ್ಬರು. ಗಜಲ್ ಓದುಗರ ಬಳಗವನ್ನು ಸೃಷ್ಟಿಸಿ, ಜನಸಾಮಾನ್ಯರೊಂದಿಗೆ ಅನುಸಂಧಾನಗೈದ ಹಾಗೂ ಸಾಹಿತ್ಯ ವಲಯದಲ್ಲೂ ಅದರ ತಂಗಾಳಿಗೆ ಕಾರಣರಾದವರಲ್ಲಿ ಕನಕಗಿರಿಯ ಅಲ್ಲಗಿರಿರಾಜ್ ಅವರು ಪ್ರಮುಖರು.‌

      ಶ್ರೀ ಅಲ್ಲಗಿರಿರಾಜ್ ರವರು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ 1972 ರ ನಾಗರಪಂಚಮಿಯ ಸೋಮವಾರದಂದು ಜನಿಸಿದ್ದಾರೆ. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣವನ್ನು ಕನಕಗಿರಿಯಲ್ಲಿ ಮುಗಿಸಿದ ಇವರು ವಿದ್ಯಾರ್ಥಿ ದಿಶೆಯಿಂದಲೇ ಕಥೆ, ಕಾದಂಬರಿ, ಕವನ, ಲೇಖನ, ಐತಿಹಾಸಿಕ ವಿವರಗಳ ಕುರಿತು ಹೆಸರು ಮಾಡಿದ್ದರು. ಗಂಗಾವತಿಯಲ್ಲಿ ಬಿ.ಎ. ಸ್ನಾತಕ ಪದವಿ ಮುಗಿಸಿ ಅಕ್ಷರ ಅರಿವಿಗಾಗಿ ಸಾಕ್ಷರತಾ ಆಂದೋಲನದಲ್ಲಿ ಬೀದಿ ನಾಟಕ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ದೇಶದ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಶ್ರೀಯುತರು ಹಲವು ಬಾರಿ ಇಡೀ ಭಾರತವನ್ನು ಸುತ್ತಿದ್ದಾರೆ. ರಾಜ್ಯದ ಸ್ಲಂ ಜನರ ಮತ್ತು ದಲಿತ ಅಲ್ಪಸಂಖ್ಯಾತರ ಬದುಕಿನ ಹಕ್ಕಿಗಾಗಿ ಮತ್ತು ಉತ್ತರ ಭಾರತದ ಆದಿವಾಸಿ ಸಮುದಾಯಗಳ ಹಾಗೂ ಕರ್ನಾಟಕ ದೇವದಾಸಿಯರ ಬಾಳಿನ ಹಕ್ಕು ಮತ್ತು ಬದಲಾವಣೆಗಾಗಿ ಹೋರಾಟ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ತಮ್ಮ ಲೇಖನಿಯಿಂದ ಮೌಢ್ಯತೆ, ಕಂದಾಚಾರಗಳನ್ನು ಖಂಡಿಸಿ ವೈಚಾರಿಕತೆ ಸಾರುವ ಕೆಲಸವನ್ನು ಮಾಡಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಅವರ ಕವನ ಸಂಕಲನ “ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ” ಎನ್ನುವುದು. ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದರೂ ಕನ್ನಡ ನಾಡಿನ ಜನರು ಇವರನ್ನು ಗಜಲ್ ಕಾರರೆಂದೆ ಗುರುತಿಸಿರುವುದು ಹೆಚ್ಚು. ‘ನೂರ್ ಗಜಲ್’, ‘ಸಂದಲ್’, ’99 ಗಜಲ್’, ‘ಸುರೂರ್ ಗಜಲ್’, ‘ಆಜಾದಿ ಗಜಲ್’, ‘ಫಕೀರ್ ಗಜಲ್’, ‘ಸಾಕಿ ಗಜಲ್’, …. ದಂತಹ ಹಲವು ಗಜಲ್ ಸಂಕಲನಗಳನ್ನು ಗಜಲ್ ಲೋಕಕ್ಕೆ ಅರ್ಪಿಸಿದ್ದಾರೆ. ಕನ್ನಡ ಗಜಲ್ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆ ಅಪಾರ. ಸಾಹಿತ್ಯ, ಸುಮಾಜ ಹಾಗೂ ಮಾಧ್ಯಮ ಸೇವೆಗಾಗಿ ಇವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ರಾಜ್ಯಮಟ್ಟದ ‘ಮೃತ್ಯುಂಜಯಶ್ರೀ ಪ್ರಶಸ್ತಿ, ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ ‘ಕಲ್ಲಚ್ಚು ಪ್ರಶಸ್ತಿ’, ‘ಕನಕ-ಶರೀಫ’ ಕಾವ್ಯ ಪ್ರಶಸ್ತಿ…. ಮುಂತಾದವುಗಳು ಮುಖ್ಯವಾಗಿವೆ.

        ಗಜಲ್ ಗೋಯಿಯಲ್ಲಿ ‘ಕಲ್ಪನೆ’ ಎನ್ನುವುದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಭಾವನೆಗಳೆ ಇದರ ಆತ್ಮ, ಹರ್ಫ್ ಅಂದರೆ ಶಬ್ದಗಳೇ ಇದರ ದೇಹ. ಇದರಲ್ಲಿ ಉಪದೇಶ ಐಚ್ಚಿಕವೇ ಹೊರತು ಸರ್ವಮಾನ್ಯವಲ್ಲ. ಇದು ಉಪದೇಶ ಮಾಡಲು ಹೊರಡದೆ ಓದುಗರನ್ನು, ಬರೆಯುವವರನ್ನು ; ಕೇಳುಗರನ್ನು ಮೈಮರೆಸಿ ತನ್ನತ್ತ ಸೆಳೆದುಕೊಂಡು ವಶಮಾಡಿಕೊಳ್ಳುತ್ತದೆ. ಇದು ಕೇವಲ ಬೌದ್ಧಿಕ ಸಿಂಗಾರವಲ್ಲ. ಏಕಾಂತದ ಧ್ಯಾನದಿಂದ ಹೊರಸೂಸುವ ಮಂಜುಳಗಾನ. ಇದು ಹಳೆಯದನ್ನು ಹೊಸತು ಮಾಡಿ ನಮ್ಮ ಭಾವನೆಗಳಿಗೆ ನಿತ್ಯಯೌವ್ವನವನ್ನು ದಾನ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಅಲ್ಲಾಗಿರಿರಾಜ್ ಅವರ ಗಜಲ್ ಗಳು ಸದಾ ಸಮಾಜಮುಖಿಯಾಗಿದ್ದು, ನೋವಿಗೆ ಸ್ಪಂದಿಸುತ್ತವೆ. ದೇವರು, ಧರ್ಮ, ಬಡತನ, ಶೋಷಣೆ, ರಾಜಕೀಯ ಅರಾಜಕತೆ, ಸ್ತ್ರೀ ಸಂವೇದನೆ, ಕಾರ್ಮಿಕರ ನೋವು ಇವರಿಗೆ ಹೆಚ್ಚು ಹೆಚ್ಚು ಕಾಡಿದಂತಿವೆ!!

ಸ್ವರ್ಗದ ಭಿಕ್ಷೆ ಬೇಡಬೇಡ ಫಕೀರ್ ಅದು ನಿನ್ನ ಜೋಳಗಿಯಲಿ ಪ್ರೇಮವಾಗಿ ಮಲಗಿದೆ

ಕತ್ತಲಿಗೆ ಶಾಪ ಹಾಕಬೇಡ ಫಕೀರ್ ಅದರೊಳಗೆ ದಣಿದ ಹಗಲು ಮಗುವಾಗಿ ಮಲಗಿದೆ

ಮನುಷ್ಯ ತನ್ನ ಅನುಕೂಲಕ್ಕಾಗಿ ಏನು ಬೇಕಾದರೂ ಸೃಷ್ಟಿಸುತ್ತಾನೆ, ಏನು ಬೇಕಾದರೂ ಅಲ್ಲಗಳೆಯುತ್ತಾನೆ. ಅನುಕೂಲಸಿಂಧುವಿನ ಮಾನಸ ಪುತ್ರನೆ ಈ ಮನುಷ್ಯ. ನಂಬಿಕೆಯ ಬೀಜದೊಂದಿಗೆ ತನಗೆ ಬೇಕಾದ ಫಸಲನ್ನು ತೆಗೆದು ವೈಭೋಗದ ಜೀವನವನ್ನು ಸಾಗಿಸಿಕೊಂಡು ಬಂದಿದ್ದಾನೆ. ಸ್ವರ್ಗ-ನರಕಗಳೆಂಬ ಮಾಯಾ ಲೋಕ ಬೇರೆಲ್ಲೂ ಇಲ್ಲ, ನಮ್ಮೊಂದಿಗೆ ; ನಮ್ಮ ವಿಚಾರಗಳ ಅಡಿಯಲ್ಲಿಯೇ ಜೀವಂತವಾಗಿದೆ. ಇದನ್ನೇ ಗಜಲ್ ಗೋ ಅವರು ಈ ಒಂದು ಷೇರ್ ನಲ್ಲಿ ತುಂಬಾ ಅರ್ಥ ಪೂರ್ಣವಾಗಿ ಹೇಳಿದ್ದಾರೆ. ಸ್ವರ್ಗ ಎನ್ನುವಂತದ್ದು ಫಕೀರನ ಜೋಳಿಗೆಯಲ್ಲಿ ಪ್ರೇಮವಾಗಿ ಮಲಗಿದೆ ಎನ್ನುತ್ತಾರೆ. ಇಲ್ಲಿಯ ‘ಫಕೀರ್’ ಎಂಬ ಶಬ್ದವು ಉನ್ನತ ವ್ಯಕ್ತಿತ್ವದ ಕೈಗನ್ನಡಿಯಾಗಿದೆ, ಸಂತನ ಸಾತ್ವಿಕ ನೆಲೆಯಾಗಿದೆ.‌ ಇದರೊಂದಿಗೆ ಕತ್ತಲಿನ ಕುರಿತು ತಾತ್ವಿಕ ಚಿಂತನೆಯನ್ನು ಕಟ್ಟಿ ಕೊಟ್ಟಿದ್ದಾರೆ. ಕತ್ತಲು ಎನ್ನುವ ಮಾತೃ ಹೃದಯಿ ದಣಿದ ಹಗಲಿಗೆ ಜೋಗುಳ ಹಾಡಿ ಮಲಗಿಸಿದೆ ಎಂಬುದು ಸೂಫಿಸಂ ಸೆಲೆಯನ್ನು ಹೊಂದಿದೆ. ಈ ಮೇಲಿನ ಷೇರ್ ನಲ್ಲಿ ಸಮಾಜದ ಅಂಕು ಡೊಂಕಿಗೆ ಪ್ಯಾರಲಲ್ ಆಗಿ ಆಧ್ಯಾತ್ಮಿಕ ಬೆಳಕಿನ ಹೊಳಪು ನೀಡಿದ್ದಾರೆ.

      ಮನುಷ್ಯನ ಬೌದ್ದಿಕ ದಿವಾಳಿತನಕ್ಕೆ ಫಲವತ್ತಾದ ಭೂಮಿಯು ಬರಡಾಗಿ ಬೋರಿಡುತ್ತಿದೆ. ಮನೆ-ಮನಗಳಲ್ಲಿ ಮಸಣದ ಸೂತಕ ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಿದೆ. ಅಂತೆಯೇ ಇಂದು ಊರ ತುಂಬೆಲ್ಲ, ಗಲ್ಲಿ ಗಲ್ಲಿಗಳಲ್ಲಿ ಅಮೃತದ ಪ್ಯಾಲಾಗಳಿಗಿಂತಲೂ ವಿಷದ ಬಟ್ಟಲುಗಳೆ ಗೋಚರಿಸುತ್ತಿವೆ ಎಂದು ಶ್ರೀಯುತರು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನು ಅವರ ಒಂದು ಷೇರ್ ನ ಮುಖಾಂತರ ಚರ್ಚಿಸಬಹುದು. 

ಊರ ತುಂಬ ವಿಷದ ಬೀಜಗಳು ಮೊಳಕೆ ಒಡೆಯುತ್ತಿವೆ ನೋಡು ಬಾ ಸಖಿ

ಸಂಬಂಧಗಳೇ ಉಣ್ಣುವ ಗಂಗಾಳದಲಿ ವಿಷ ಕಕ್ಕುತ್ತಿವೆ ನೋಡು ಬಾ ಸಖಿ

ಈ ಮೇಲಿನ ಷೇರ್ ಮನುಷ್ಯನ ದ್ವಿಮುಖವನ್ನು ನಗ್ನಗೊಳಿಸುವುದರ ಜೊತೆಗೆ ಸಾಮಾಜಿಕ ವ್ಯವಸ್ಥೆಯ ಹುಳುಕುಗಳನ್ನು ಬಯಲಿಗೆಳೆಯುತ್ತಿದೆ. ಊರ ತುಂಬೆಲ್ಲ, ಜನರ ಎದೆಯ ತುಂಬೆಲ್ಲ ವಿಷದ ಬೀಜಗಳು ಮೊಳಕೆಯೊಡೆದು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ, ಅರಾಜಕತೆಯನ್ನು ಸೃಷ್ಟಿಸಿವೆ, ಸೃಷ್ಟಿಸುತ್ತಿವೆ. ಈ ಕಾರಣಕ್ಕಾಗಿಯೇ ಮನುಷ್ಯ ಮನುಷ್ಯರ ನಡುವಿನ ಬಂಧಗಳು ಶಿಥಿಲಗೊಂಡು ಉಣ್ಣುವ ತಟ್ಟೆಗಳಲ್ಲಿ ವಿಷವನ್ನು ಸುರಿಸುತ್ತಿವೆ ಎಂಬುದನ್ನು ಈ ಷೇರ್ ಧ್ವನಿಸುತ್ತಿದೆ. ಮನುಷ್ಯ ರೂಪದ ದಾನವನನ್ನು ಗುರುತಿಸುವ, ಅವನ ಮನಸನ್ನು ಪರಿವರ್ತಿಸುವ ಕೆಲಸ ಕಾರ್ಯಗಳು ಇಂದು ನಡೆಯಬೇಕಾಗಿದೆ.

      ಗಜಲ್ ಬೇಗಂ ಸಾಹೇಬಾಳನ್ನು ಪ್ರೀತಿಸುವ, ಆರಾಧಿಸುವ ಹಾಗೂ ಗಜಲ್ ನೊಂದಿಗೆ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವ ಶ್ರೀ ಅಲ್ಲಾಗಿರಿರಾಜ್ ಕನಕಗಿರಿ ಅವರಿಂದ ಉತ್ತಮೋತ್ತಮ ಸಮಾಜಮುಖಿ ಚಿಂತನೆಯ ಗಜಲ್ ಗಳು ರೂಪುಗೊಳ್ಳಲಿ, ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

ಇವಾಗ ನಾವು ದೂರವಾದರೂ ಯಾವಗಲಾದರೂ ಕನಸಿನಲ್ಲಿ ಭೇಟಿಯಾಗುತ್ತೇವೆ

ಒಣಗಿದ ಹೂವುಗಳು ಪುಸ್ತಕಗಳಲ್ಲಿ ಕಂಡುಬರುವಂತೆ ಭೇಟಿಯಾಗುತ್ತೇವೆ

                          –ಅಹ್ಮದ್ ಫರಾಜ್

ಗಡಿಯಾರದ ಮುಳ್ಳುಗಳು ತಿರುಗುತಿವೆ ಮೌನವಾಗಿ. ಆ ಮುಳ್ಳಿನ ಮೊನಚಿಗೆ ಎಲ್ಲರೂ ತಲೆ ಬಾಗಲೆ ಬೇಕಲ್ಲವೇ…!!

ಮತ್ತೆ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಬಂದು ನಿಲ್ಲುವೆ, ಗಜಲ್ ಗಾರುಡಿಗನ ಹೆಜ್ಜೆ ಗುರುತುಗಳೊಂದಿಗೆ!! ನಿರೀಕ್ಷಿಸುವಿರಲ್ಲವೆ… ಗೊತ್ತು, ನನ್ನನ್ನು ಸ್ವಾಗತಿಸಲು ಸಿದ್ಧರಿರುವಿರೆಂದು.

ಎಲ್ಲರಿಗೂ ಹೃನ್ಮನದಿ ವಂದನೆಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top