ಅಂಕಣ ಸಂ|ಗಾತಿ
ಕಾವ್ಯದರ್ಪಣ
ಕಾವ್ಯಪ್ರವೇಶಿಕೆಯಮುನ್ನ
“ಬದುಕುವುದು ಪುರುಷಾರ್ಥ
ಬದುಕುವುದೇ ಪರಮಾರ್ಥ
ಬದುಕು ಸರ್ವಾರ್ಥಗಳ ಸಾಧನವು
ಇಲ್ಲಿ! ಬೆದಕು
ಬದುಕನು ಪಡೆವೆ ವಿಧವಿಧದ
ನಿಧಿಗಳನ್ನು ಬೆದಕದವ ಬೆಪ್ಪ
ಸರಿ ಮರುಳಸಿದ್ಧ“
– ಡಾ. ಸಿದ್ದಯ್ಯ ಪುರಾಣಿಕ
ಬದುಕೆಂಬುದು ಸುಂದರವಾದ ರಸಾನುಭವ. ಅದರ ಸ್ವಾದವನ್ನು ಸವಿಯುವುದೇ ಜೀವನ. ಒಮ್ಮೆ ಗತಿಸಿದ ಬದುಕು ಆಶಿಸಿದರು ಮತ್ತೆಂದೂ ಸಿಗದು. ಅಂಗಲಾಚಿದರು ನಮ್ಮ ಕೈಗೆ ನಿಲುಕದು. ನಮ್ಮ ಕೈಯಲ್ಲಿರುವಾಗ ಅದನ್ನು ವ್ಯರ್ಥ ಮಾಡಿ ಅವಿವೇಕಿಗಳಾಗದೆ ಜಾಣತನದಿಂದ ಬದುಕಿನ ಪರಿಪೂರ್ಣತೆ ಸಾಧಿಸಬೇಕು.ಬದುಕು ಉಕ್ಕೇರುವ ಸಾಗರದಂತೆ. ಸಾಗರಕ್ಕೆ ಏರಿಳಿತಗಳಿರುವಂತೆ ಬದುಕಲ್ಲೂ ಸಮಸ್ಯೆಗಳು ಸವಾಲುಗಳು ಇದ್ದೇ ಇರುತ್ತವೆ. ಅವೆಲ್ಲವನ್ನು ಮೆಟ್ಟಿ ಬದುಕಿನ ಸಾರ್ಥಕತೆ ಪಡೆದು ಪ್ರಶಾಂತ ಸಾಗರವಾಗಿಸಿಕೊಳ್ಳುವುದು ಮನುಷ್ಯನ ಚಾಣಕ್ಷತನದ ಮೇಲೆ ನಿಂತಿರುತ್ತದೆ.
“ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬಾ
ಕುದುರೆ ನೀನು
ಅವನು ಹೇಳಿದಂತೆ ಪಯಣಿಗರು“
_ ಡಿ . ವಿ . ಜಿ .
ಬದುಕು ಜಂಜಡಗಳ ಸರಮಾಲೆ.ಆ ಸರದ ಒಂದೊಂದು ಮುತ್ತು ಚಲಿಸಬೇಕಾದ ಬದುಕಿನ ಪಥದ ಮೆಟ್ಟಿಲುಗಳಿದ್ದಂತೆ . ಅಲ್ಲಿ ಸಹಸ್ರ ಸಂಘರ್ಷಗಳು ಆಹ್ವಾನ ನೀಡುತ್ತಿರುತ್ತವೆ. ಅದಕ್ಕಾಗಿಯೆ ಬಾಳೊಂದು ಭಾವಗೀತೆ ಎಂದು ಕವಿಯು ಹೇಳಿರುವುದು. ನಮ್ಮ ಅಂಗೈ ಮುಷ್ಟಿಯಲ್ಲಿ ಬದುಕನ್ನು ಹಿಡಿದಿಡುತ್ತೇವೆ ಎಂಬ ಕಲ್ಪನೆ ಹಾಸ್ಯಸ್ಪದವಾಗಿದೆ . ನಮ್ಮ ಬಾಳ ದಾರಿಯ ತುಂಬಾ ಅಸಂಖ್ಯ ಆಕರ್ಷಣೆಗಳು ವಾಂಛೆಗಳು ನಮ್ಮನ್ನು ಸುತ್ತುವರೆದು ಬಂಧಿಸುತ್ತವೆ. ಇವುಗಳಿಂದ ಮುಕ್ತಿ ಪಡೆಯಲು ನಾವು ನಿಸ್ವಾರ್ಥ ಜೀವನ ಸಾಗಿಸಬೇಕು.
ಕವಿ ಪರಿಚಯ
ಡಾ. ವಸಂತಕುಮಾರ್ ಕಡ್ಲಿಮಟ್ಟಿರವರು ಬಾಗಲಕೋಟೆ ಜಿಲ್ಲೆಯ ಕಮತಗಿಯವರು. ಪ್ರಸಕ್ತ ಇಳಕಲ್ ನಿವಾಸಿ. ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ “ನಾನ್ ಫಿಕ್ಷನಲ್ ಪ್ರೋಸ್ ಇನ್ ಇಂಡಿಯನ್ ಇಂಗ್ಲೀಷ್ ಲಿಟರೇಚರ್ ಪ್ರಾಮ್ 1857 ಟು 1947 “ಎಂಬ ವಿಷಯಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು ಪ್ರಸ್ತುತ SVM ಪದವಿ ಕಾಲೇಜಿನಲ್ಲಿ ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರೆಸೆಂಟೇಷನ್ ಕೊಡುವ ಜೊತೆಗೆ ಜರ್ನಲ್ ಗಳಲ್ಲಿ ಸಂಶೋಧನ ಲೇಖನಗಳನ್ನು ಬರೆದ ಹೆಗ್ಗಳಿಕೆ ಇವರದು.
ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನ್ಮೋಖರಾದ ಇವರಿಗೆ ಓದಿನ ಅಭಿರುಚಿ ಬಹಳವಿದ್ದು ಅಧ್ಯಯನಶೀಲ ಗುಣದವರು. ಚಿಂತನೆ, ಕವನ ಕವಿತೆ ರಚಿಸುವುದು ಇವರ ಇಷ್ಟದ ಹವ್ಯಾಸಗಳು. ಡಾ. ವಸಂತ ಕುಮಾರ್ ಕಡ್ಲಿಮಟ್ಟಿ ಅವರು ಹೆಚ್ಚಾಗಿ ಇಂಗ್ಲೀಷ್ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದು ಅದರ ಪ್ರಭಾವವನ್ನು ಅವರ ಕವಿತೆಗಳಲ್ಲಿ ಕಾಣಬಹುದು. ಇವರ ಮತ್ತೊಂದು ಸಾಧನೆಯೆಂದರೆ ಇಂಗ್ಲೀಷ್ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡದಲ್ಲಿ ಇಂಗ್ಲೀಷ್ ಕವಿಗಳ ಸಾಹಿತ್ಯವನ್ನು ಓದಲು ಅವಕಾಶ ಮಾಡಿಕೊಡುತ್ತಿರುವುದು.
ಸದ್ಯದಲ್ಲಿಯೇ ಕವನ ಸಂಕಲನವೊಂದನ್ನು ಹೊರತರುವ ಆಶಯ ಇವರದಾಗಿದೆ.
ಕವಿತೆಯ ಆಶಯ
“ಪ್ರಶ್ನೆ ಇಲ್ಲದ ಬದುಕೊಂದು ಬದುಕೆ?
ನನಗಿಲ್ಲ ಪೂರ್ಣವಿರಾಮವನ್ನರಸಿ ನಡೆಯುವ ಬಯಕೆ
ಈ ಪ್ರಶ್ನೆಯ ಕೆಳಗೆ ಮಡಿಸಿರುವ ಸಂಶಯದ ನೆರಳ
ಬಿಚ್ಚಿ ನಡೆಯುವುದು ನನಗಿಷ್ಟ“
– ಜಿಎಸ್ ಶಿವರುದ್ರಪ್ಪ
ಮೇಲಿನ ಕವಿ ವಾಣಿಯಲ್ಲಿ ಪ್ರಶ್ನೆಗಳು ಉತ್ತರಗಳ ಕೀಲಿಕೈ ಪ್ರಶ್ನಿಸದೆ ಹೇಗೆ ಉತ್ತರ ನಿರೀಕ್ಷಿಸಲಾಗದು. ಆ ನಿಟ್ಟಿನಲ್ಲಿ ಕವಿತೆ ಯುದ್ಧಕ್ಕೂ ಕವಿಗಳು ತಮಗೆ ಸರಿಯೆನಿಸಿತು ವಿಷಯವನ್ನು ಪ್ರಶ್ನಿಸುತ್ತಾ ಸಾಗಿದ್ದಾರೆ. ಅಂತಿಮವಾಗಿ ಬದುಕಿನ ಮಹದಾಶಯ ತುಂಬುತ್ತಾ ಸಾಗುತ್ತಿರುವುದು ಸ್ತುತ್ಯಾರ್ಹ ಸಂಗತಿ.
ಜೀವನದಲ್ಲಿ ಯಾವುದೂ ನಮ್ಮ ಕೈಯಲ್ಲಿ ಇಲ್ಲ .ಕಾಲಾಯ ತಸ್ಯೈ ನಮಃ ಎಂಬಂತೆ ಸಮಯ ಸಂದರ್ಭಕ್ಕನುಗುಣವಾಗಿ ಬದುಕನ್ನು ಹೊಂದಾಣಿಕೆ ಮಾಡಿಕೊಂಡು ಸಾಗಬೇಕು. ಕಾಲವೆ ಕೆಲವು ಗೊಂದಲಗಳನ್ನು ಬಗೆಹರಿಸುತ್ತದೆ .
ನಮ್ಮ ಬದುಕಿನ ಸುತ್ತ ಹಲವು ಗುಣ ಸ್ವಭಾವಗಳು ಇರುವ ಜನಗಳು ಇರುತ್ತಾರೆ. ಅವರ ಕಾರ್ಯಗಳ ಬಗ್ಗೆ ತಲೆಬಿಸಿ ಮಾಡಿಕೊಳ್ಳದೆ ನಮ್ಮ ಬದುಕನ್ನು ನಮ್ಮಿಷ್ಟದಂತೆ, ಆತ್ಮಸಾಕ್ಷಿಗನುಗುಣವಾಗಿ ನಡೆಸಬೇಕು. ಸಂಕಷ್ಟಗಳ ಸರಮಾಲೆಯೊಳಗೆ ಬಂಧಿಯಾಗಿ ಪರಿತಪಿಸುತ್ತಾ, ದುಃಖ ದುಮ್ಮಾನಗಳಲಿ ಬಂದು ನೋಡದ ಸಂಬಂಧಗಳ ಬಗ್ಗೆ ವಿನಾಕಾರಣ ಕೊರಗುವ ಬದಲು ಬದುಕಿನ ದಾರಿಯಲ್ಲಿ ನೆರವಾಗುವವರೊಂದಿಗೆ ಖುಷಿಯಾಗಿರಬೇಕು ಎಂಬುದು ಕವಿತೆ ಸಾರವಾಗಿದೆ.
ತಿಳಿದವರು ಹೇಳುವುದು ಒಂದು ಅವರ ಅನುಯಾಯಿಗಳು ಪಾಲಿಸುವುದು ಮತ್ತೊಂದು. ಅಲ್ಲಿಂದ ಇಲ್ಲಿಗೆ ವಿಚಾರಗಳು ತಲುಪುವ ವೇಳೆಗೆ ಆಗುವ ಸೋರಿಕೆ ಬಗ್ಗೆ ಕವಿಮನಸ್ಸು ತೀವ್ರವಾಗಿ ಕ್ರೋದಗೊಂಡಿದೆ .ಹುಟ್ಟು ಸಹಜ ಸಾವು ಅನಿವಾರ್ಯವಾದರೂ ಇವುಗಳ ನಡುವಿನ ನಿರಂತರ ಪಯಣದಲ್ಲಿ ಸಾವು ಹೀಗೆ ಆಗಬೇಕೆಂದು ಬಯಸುವುದು ಅರ್ಥಹೀನ ಆಸೆ ಎಂಬುದು ಈ ಕವಿತೆಯ ಪ್ರಬಲ ಆಶಯವಾಗಿದೆ.
ಕವಿತೆಯ ಶೀರ್ಷಿಕೆ
ಬನ್ನಿ ಬದುಕಿಬಿಡೋಣ
“ಪ್ರೀತಿ ಮತ್ತು ಶಾಂತಿಯೇ ಬದುಕು“
– ಗೌತಮಬುದ್ಧ
ಬದುಕೊಂದು ಅರ್ಥಪೂರ್ಣ ಕವನ
ಅರಿತು ಕವಿತೆ ಗೀಚಿದವನ ಬಾಳು ಪಾವನ
ಈ ನಿಟ್ಟಿನಲ್ಲಿ ಜೀವನವನ್ನು ಜಗಮೆಚ್ಚಿದ ಕಾವ್ಯವಾಗಿಸುವುದು ಒಂದು ಧ್ಯಾನವೇ ಸರಿ. ಇಲ್ಲಿ ಕವಿತೆಯ ಶೀರ್ಷಿಕೆಯಲ್ಲಿನ ಬದುಕಿಬಿಡೋಣ ಒಮ್ಮೆ ಎಂಬ ಸಂದೇಶ ಬದುಕನ್ನು ಅರ್ಥಪೂರ್ಣವಾಗಿ ನಡೆಸಬೇಕೆಂಬುದು. ಬನ್ನಿ ಎಂಬ ಕರೆಯೇ ವಿಶಿಷ್ಟವಾಗಿ ಎಲ್ಲರನ್ನೂ ಅರ್ಥಪೂರ್ಣವಾಗಿ ಬದುಕಲು ಆಹ್ವಾನಿಸುತ್ತದೆ.ಈ ನಿಟ್ಟಿನಲ್ಲಿ ಬದುಕಿಬಿಡೋಣ ಬನ್ನಿ ಶೀರ್ಷಿಕೆಯು ಅರ್ಥಪೂರ್ಣವಾಗಿದೆ.
ಕವಿತೆಯ ವಿಶ್ಲೇಷಣೆ
” ಬದುಕಿಬಿಡೋಣ ಬನ್ನಿ “
೧
ಬರುವುದು ಬಂದಾಗಿದೆ,
ಹೋಗಿದ್ದೂ ಹೋಗಾಗಿದೆ,
ಬರಬೇಕಾದ್ದು ಇನ್ನೂ ಬರಲೇಬೇಕಾಗಿದೆ,
ಇದ್ದುದ್ದನ್ನ ಕಳೆದುಕೊಂಡು ಬದುಕು ಶಪಿಸಿ ಸಾಧಿಸುವುದೇನಿದೆ?
ಬನ್ನಿ,
ಬದುಕನ್ನ ಒಂದು ಸಾರಿ ಬದುಕಿಬಿಡೋಣ…
ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ ಎಂಬ ಕವಿವಾಣಿಯ ಪ್ರಜ್ಞೆ ಇದ್ದರೂ ಮನುಜ ಹುಡುಕಾಟದಲ್ಲೆ ತನ್ನ ಬದುಕನ್ನು ಸಾಗಿಸುತ್ತಾನೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಕವಿಯು ಬದುಕಿನ ತಾತ್ಪರ್ಯವನ್ನು ಈ ರೀತಿ ವರ್ಣಿಸಿದ್ದಾರೆ.
ಬದುಕು ಅನಿರೀಕ್ಷಿತ ಘಟನೆಗಳ ಆಗರ. ಯಾವಾಗ ಏನು ಸಂಭವಿಸುತ್ತದೆ ಎಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ ಅಚಾನಕ್ಕಾಗಿ ತಿರುವುಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಉಂಟಾದ ನಷ್ಟ ಅವಮಾನ ಕಷ್ಟ ಏನೇ ಇರಲಿ ಅದಕ್ಕೆ ಅಂಜದೆ ಅಳುಕದೆ ಕಳೆದುಕೊಂಡಿದ್ದಕ್ಕೆ ಪರಿತಪಿಸುತ್ತಾ ಕೂರಬಾರದು ಎಂದು ಕಿವಿಮಾತು ಹೇಳುತ್ತಾ ಬದುಕಿನ ಅರ್ಥವನ್ನು ಅನಾವರಣ ಮಾಡಿದ್ದಾರೆ. ಭೂತಕಾಲಕ್ಕೆ ಸೆಡ್ಡುಹೊಡೆದು, ವರ್ತಮಾನದಲ್ಲಿ ಆತಂಕಪಡುತ್ತಾ ಭವಿಷ್ಯದ ಭಯದ ನಿರೀಕ್ಷೆಯಲ್ಲಿ ಕೈ ಕಟ್ಟಿ ಕುಳಿತು, ಇರುವುದನ್ನು ಕಳೆದುಕೊಂಡು ಆಮೇಲೆ ಬದುಕು ಬರಡಾಯಿತು, ಎಲ್ಲವೂ ವ್ಯರ್ಥವಾಯಿತೆಂದು ಬಡಬಡಿಸುತ್ತಾ ಮುಂದಿನ ದಿನಗಳನ್ನು ಕರಾಳವಾಗಿ ಸಿಕೊಂಡು ಗತಿಸಿದ ಘಟನೆಗಳಿಗೆ ಶಪಿಸುತ್ತಾನೆ. ಹಣೆ ಬರಹಕ್ಕೆ ಹೊಣೆ ಯಾರೆಂದು ನಂಬುತ್ತಾ ಕೂತರೆ ಈ ಬದುಕಿಗೆ ಅರ್ಥವಿಲ್ಲ ವ್ಯರ್ಥವಷ್ಟೆ ಎನ್ನುತ್ತಾರೆ ಕವಿಗಳು.
ಇಲ್ಲಿ ಸಂಭವಿಸಿದ ಎಲ್ಲಾ ದುರ್ಗತಿಗಳಿಗೂ ಯಾರನ್ನು, ಯಾವುದನ್ನು ಹೊಣೆ ಮಾಡುತ್ತಾ ಸುಖ ಶಾಂತಿ ನೆಮ್ಮದಿ ಸಂತೋಷಗಳನ್ನು ಧೂಳಿಪಟ ಮಾಡಿ, ಪ್ರಸಕ್ತ ಜೀವನವನ್ನು ಕಾಲಹರಣ ಮಾಡಿ ಕೊರಗುವುದರಲ್ಲಿ ಅರ್ಥವಿಲ್ಲ. ಕಷ್ಟಗಳು ಮನುಷ್ಯನಿಗೆ ಬಾರದೇ ಕಲ್ಲಿಗೆ ಬರುತ್ತವೆಯೆ ಎಂಬ ನಾಣ್ಣುಡಿಯನ್ನು ಕವಿ ಇಲ್ಲಿ ಪ್ರತಿಪಾದಿಸುತ್ತಾರೆ. ಇದರಿಂದ ಸಾಧಿಸುವುದಾದರೂ ಏನಿದೆ ಎಂದು ಎಲ್ಲರನ್ನು ಚಿಂತನೆಗಳಿಗೊಳಪಡಿಸಿ ಸತ್ಯದ ದರ್ಶನ ಮಾಡಿಸುತ್ತಾರೆ. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಬನ್ನಿ ಬದುಕನ್ನು ಒಂದು ಸಾರಿ ಬದುಕಿಬಿಡೋಣ ಎಂದು ಕವಿ ಇಲ್ಲಿ ಕರೆ ನೀಡಿದ್ದಾರೆ.
“ಒಂದು ಕಾಲದ ಒಳಿತು
ಕೆಡಕಿನಸಬಹುದು ಇನ್ನೊಂದು
ಕಾಲದೊಳಂತೆ ಹಳೆಯ ಕೆಡುಕು
ಸಂದರ್ಭ ಮಹಿಮೆಯಲಿ
ಒಳಿತಾಗಿ ತೋರಬಹುದಂದಿಗೆ
ಸ್ಪೃಹಣೀಯ ಮರುಳಸಿದ್ಧ“
ಎಂಬ ಸಿದ್ಧಯ್ಯ ಪುರಾಣಿಕರ ಸೂಳ್ಳುಡಿಯು ಹೊಸ ಭರವಸೆಯ, ಆಶಾವಾದದ ಮನೋಭಾವವನ್ನು ಸೃಷ್ಟಿಸುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಕವಿತೆಯ ಸಾಲುಗಳು ಇಲ್ಲಿ ಜೀವ ತಳೆದಿವೆ.
೨
ತೇಗಿದ್ದವರು ತೆಗಳುತ್ತಾರೆ,
ತುಳಿದವರು ತಳದಲ್ಲೇ ಇರುತ್ತಾರೆ,
ಗುಣವರಿಯದವರು ಗುಲ್ಲೆಬ್ಬಿಸುತ್ತಾರೆ,
ತಮ್ಮ ಬದುಕುವ ಬದುಕ ಮರೆತವರೆದುರು
ಸುಂದರ ಬದುಕಿನ ಕನಸಿನ ಬಗ್ಗೆ ಹೇಳಿದರೇನು ಪ್ರಯೋಜನ?
ಬನ್ನಿ,
ನಮ್ಮ ಬದುಕನ್ನ ಒಂದು ಸಾರಿ ಬದುಕಿಬಿಡೋಣ…
ಜೀವನ ಹಲವು ಮುಖವಾಡಗಳ ಪ್ರತಿಬಿಂಬ. ಇಲ್ಲಿ ವಿಭಿನ್ನ ಗುಣಸ್ವಭಾವದ ವ್ಯಕ್ತಿಗಳು ಎದುರಾಗುತ್ತಾರೆ.
“ಹೊಟ್ಟೆ ತುಂಬಿದವರ ಹವ್ಯಾಸಗಳೇ ಬೇರೆ
ಹಸಿದ ಹೊಟ್ಟೆಯವರ ಅಭಿಲಾಷೆಗಳೇ ಬೇರೆ
ಹೊಟ್ಟೆ ತುಂಬಿದವರಸಿ ಬೇಕು ಕಾವ್ಯ ಶಾಸ್ತ್ರ ವಿನೋದ
ಹಸಿದವರಿಗೆ ಬೇಕು ಹಿಟ್ಟು ಹಣಗಳ ಪ್ರಸಾದ
ಹೊಟ್ಟೆ ತುಂಬಿದವರು ಹುಟ್ಟುಹಾಕಿದ ಸಭ್ಯತೆ ಸಂಸ್ಕೃತಿಗಳು
ಹಸಿದವರಿಗೆ ಹಿಡಿಸಬಲ್ಲುವೇನಯ್ಯಾ“
– ಡಾ. ಸಿದ್ದಯ್ಯ ಪುರಾಣಿಕ್
ಅವರ ನುಡಿಯು ಹಸಿವಿನ ಮಹಿಮೆಯನ್ನು, ಹಸಿದವರ ಮನದಾಳವನ್ನುಸಾರಿ ಹೇಳುತ್ತದೆ.
“ದೊಡ್ಡವರೊಳೂ ಉಂಟು ಸಣ್ಣತನ ಬಹಳಷ್ಟು ದುಡ್ಡಿರುವವರೊಳು ಉಂಟು ಜೀನತನವು”
ಎಂಬ ನುಡಿಯು ಜಿಪುಣಾಗ್ರೇಸರ ಸಿರಿವಂತರ ಗುಣಗಾನ ಮಾಡುತ್ತದೆ.ಈ ಮಾತು ಹೊಟ್ಟೆ ತುಂಬಿದವರ ಮನೋಭಾವ ವರ್ಣಿಸುತ್ತದೆ.
ಇಲ್ಲಿ ಅಂಬೇಡ್ಕರ್ ರವರ ಮಾತೊಂದು ಸಂದರ್ಭೋಚಿತವಾಗಿ ನೆನಪಾಗುತ್ತದೆ.
” ದೇಶ ಕಟ್ಟುವ ಕೆಲಸ ನಡೆಯುವುದು
ಸಣ್ಣ ಮನಸ್ಸಿನ ದೊಡ್ಡಜನರಿಂದಲ್ಲ
ದೊಡ್ಡ ಮನಸ್ಸಿನ ಸಣ್ಣಜನರಿಂದ“
ತೇಗಿದವರು ತೆಗಳುತ್ತಾರೆ ಎಂಬ ನುಡಿಯು ಇಲ್ಲಿ ಕವಿಯ ಸಾತ್ವಿಕ ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಶ್ರೀಮಂತರು ಉಳ್ಳವರು ಸೊಕ್ಕಿನಿಂದ ಉಳಿದವರನ್ನು ನಿರ್ಲಕ್ಷಿತ ಭಾವದಲ್ಲಿ ಅವಮಾನಿಸುವ ಪರಿ ಇಲ್ಲಿ ವ್ಯಕ್ತವಾಗಿದೆ. ತೇಗುವಷ್ಟು ತಿಂದರೂ ಕೂಡ ಬಹಳಷ್ಟನ್ನು ಜನರಿಗೆ ಪರರಿಗೆ ನೀಡುವ ಮನೋಭಾವ ಇಲ್ಲದಿರುವುದಕ್ಕೆ ಕವಿ ಅಸಮಾದಾನಗೊಳ್ಳುತ್ತಾರೆ.
ಬದುಕು ಕಬ್ಬಿಣದ ಕಡಲೆಯಂತೆ ಎಂದು ಭಾವಿಸಬಾರದು. ನಮ್ಮ ಸಾಧನೆಗೆ ತಡೆಗೋಡೆಯಾದವರು, ನಮ್ಮ ಆತ್ಮವಿಶ್ವಾಸಕ್ಕೆ ತಣ್ಣೀರೆರಚಿದರು, ಮನಸ್ಸಿನ ಜನರು ಇವರಿಂದ ಏನೂ ಸಾಧಿಸಲಾಗದು. ಇವರು ಸದಾ ತಮ್ಮ ಸಂಕುಚಿತ ಚಿಂತನೆಗಳ ಮೂಲಕ ಪಾದದಡಿಯಲ್ಲಿ ಇರುತ್ತಾರೆ ಎಂದು ಕವಿ ಪ್ರದಿಪಾದಿಸುತ್ತಾರೆ.
“ಜನನ ಕೈಯೊಳಗಿಲ್ಲ
ಮರಣ ಕೈಯೊಳಗಿಲ್ಲ
ನಿನಗಿರುವ ಜೀವನವೇ ನಿನ್ನ ಕೈಯಲ್ಲಿ
ಘನತೆಯನ್ನು ನೀಡದಕೆ
ಘನ ಕಾರ್ಯಗಳ ಮಾಡಿ
ಮನುಜರಿಗೆ ಮುದ ನೀಡಿ
ಮರುಳಸಿದ್ಧ“
ಎಂಬಂತೆ ಘನತೆಯಿಂದ ವರ್ತಿಸುತ್ತ ಉತ್ತಮ ಕಾರ್ಯಗಳನ್ನು ಮಾಡಬೇಕು. ಆದರೆ ಇದರ ಮೌಲ್ಯವನ್ನು ಅರಿಯದ ಅಧಮರು ಇತರರಲ್ಲಿ ವಿಶೇಷತೆ ಒಳ್ಳೆಯ ಗುಣ ಸ್ವಭಾವ ಗುರುತಿಸದೆ ಅವರ ಬಗ್ಗೆ ಅಲ್ಲಿ ಇಲ್ಲಿ ಬಾಯಿಗೆ ಬಂದಂತೆ ಆರೋಪಗಳನ್ನು ಮಾಡುತ್ತಾ, ಅನುಮಾನಗಳನ್ನು ಸೃಷ್ಟಿಸುತ್ತಾ, ಅಪಪ್ರಚಾರ ಮಾಡುತ್ತಾರೆ. ಇಂತಹವರಿಗೆ ತಮ್ಮ ಬದುಕಿನ ಗುರಿಯ ಬಗ್ಗೆ ಜವಾಬ್ದಾರಿ ಇರುವುದಿಲ್ಲ. ತಮ್ಮ ಬದುಕಿನ ಮೌಲ್ಯವನ್ನು ಅರಿಯದೆ ಇಂತಹ ಮೂಢರ ಬಳಿ ನಮ್ಮ ಸುಂದರ ಬದುಕಿನ ಬಗ್ಗೆ ನಾವು ಕಾಣುವ ಕನಸುಗಳನ್ನು ಹೇಳಿಕೊಂಡರೆ ಏನು ಪ್ರಯೋಜನ ಎಂದು ಕವಿ ಪ್ರಶ್ನಿಸುತ್ತಾ ಅದು ಗೋರ್ಕಲ್ಲ ಮೇಲೆ ಮಳೆ ಹೊಯ್ದಂತೆ ಎಂದಿದ್ದಾರೆ .ಇದರಿಂದ ಯಾವುದೇ ಫಲವನ್ನು ನಾವು ನಿರೀಕ್ಷಿಸಲಾಗದು ಎಂದು ಕಿವಿಮಾತು ಹೇಳುತ್ತಾರೆ. ಅದಕ್ಕಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸದ್ಯ ಬದುಕಿನ ಅಮೂಲ್ಯ ಕ್ಷಣವನ್ನು ಸವಿಯುತ್ತಾ ಪ್ರಯೋಜನಕಾರಿಯಾಗಿ ಬದುಕಿ ಬಿಡೋಣ ಬನ್ನಿ ಎಂದು ಆಶಿಸುತ್ತಾರೆ.
೩
ಅರಿತವರು ಕೈ ಹಿಡಿಯುತ್ತಾರೆ,
ಹೊಂದಿಕೊಂಡವರು ಜೊತೆಯಾಗುತ್ತಾರೆ,
ಹಿರಿಯರಾದವರು ಮಾರ್ಗವಾಗುತ್ತಾರೆ,
ಬದುಕಹಾದಿಯಲಿ ಹಲವರಿರುವಾಗ ಸಂಬಂಧಿಗಳ ನೆನದು ಪಡೆಯುವುದೇನಿದೆ?
ಬನ್ನಿ,
ಬದುಕನ್ನ ಒಂದು ಸಾರಿ ಬದುಕಿಬಿಡೋಣ…
ನಮಗಾಗಿ ನಾವು ಜೀವಿಸುವುದಕ್ಕಿಂತ ಪರರಿಗಾಗಿ ಬದುಕುವುದು ಜೀವನದ ಧ್ಯೇಯವೆಂದು ಅರಿತವರು ಭಾವಿಸಿ ಕಷ್ಟದಲ್ಲಿರುವವರಿಗೆ ಊರುಗೋಲಾಗುತ್ತಾರೆ.
ಸಮರಸವೇ ಜೀವನ ಎಂಬ ಕವಿವಾಣಿಗನುಗುಣವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಜೊತೆಯಾಗಿ ಸಾಗುವ ಮನೋಭಾವದ ವ್ಯಕ್ತಿಗಳು ಜೀವನ ಪಯಣದಲ್ಲಿ ಸಹಭಾಗಿಗಳಾಗಿರುತ್ತಾರೆ.
“ಅನ್ಯರಾದವರು ನನಗೆ ನನ್ನವರೆ
ಎನ್ನುತ್ತಾ ಬನ್ನಬಡುವುದು ಬೇಡ
ಅನ್ಯರೇ ನಾಳೆ ನಿನ್ನವರು
ಆದಾರೂ ನಿನ್ನಾಚಿಗಾದರು
ನಿನ್ನ ನೀ ನಂಬಿದರೆ ಮರುಳಸಿದ್ಧ“
ಹಿರಿಯರಾದವರು ಮಾರ್ಗವಾಗುವರು ಎನ್ನುವಲ್ಲಿ ಹಿರಿಯ ಪದವು ವಯೋಮಿತಿಗೆ ಮಾತ್ರ ಸಂಬಂಧಿಸಿಲ್ಲ ಇದು ಗುಣ ಧರ್ಮಗಳಿಗೆ ಹಿರಿಯರಾದವರ ಬಗ್ಗೆ ಹೇಳುತ್ತಾ ಬದುಕಿನ ಸರಿ ಮಾರ್ಗದಲ್ಲಿ ಜನತೆಯನ್ನು ಮುನ್ನಡೆಸುತ್ತಾರೆ ಎಂದಿದ್ದಾರೆ. ಹಾಗೆ ನಮ್ಮಲ್ಲಿ ಹಲವು ಮಾನವೀಯ ಮನಗಳಿರುವ, ಬಯಸಿದಾಗ ಕಷ್ಟಕ್ಕೆ ಹೆಗಲಾಗದ, ಭಾವನೆಗಳಿಗೆ ಸ್ಪಂದಿಸದ ಸಂಬಂಧಗಳಿಗಾಗಿ ನಾವು ಪ್ರಾರ್ಥಿಸುತ್ತಾ ಬಾಂಧವ್ಯ ಪಡೆಯಲು ಪ್ರಯತ್ನ ಮಾಡುವುದರಿಂದ ಏನು ಪ್ರಯೋಜನವಿಲ್ಲ ಎಂಬುದು ಕವಿಯ ಭಾವವಾಗಿದೆ.
೪
ಓದಿರುವುದು ಅರ್ಥವಾಗಿದೆ,
ತಿಳಿಯದಿರುವುದು ಅನುಭವವಾಗಿದೆ,
ಕಲಿಕೆ ಸಾಗಿಸಲು ಸ್ಥೈರ್ಯವಿದೆ,
ಅರಿವಿನ ಹಾದಿ ಸಿಕ್ಕಿದೊಡೆ ಯಾರದೋ ಹಿಂಬಾಲಕರಾಗುವ ಅವಶ್ಯಕವೇನಿದೆ?
ಬನ್ನಿ,
ನಮ್ಮ ಬದುಕನ್ನ ಒಂದು ಸಾರಿ ಬದುಕಿಬಿಡೋಣ…
ಅನಕ್ಷರಸ್ಥರಿಗೆ ಯಾವುದೆ ನಿಯಮ ಕಾನೂನುಗಳ ಅರಿವಿರುವುದಿಲ್ಲ. ಇತರರು ಹೇಳಿದ್ದನ್ನು ಸತ್ಯವೆಂದು ನಂಬುತ್ತಾರೆ, ಮೋಸ ಹೋಗುತ್ತಾರೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜನತೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಪಡೆದು ಸಾಕ್ಷರರಾಗಿದ್ದಾರೆ. ಇವರು ಬೇರೆಯವರು ಹೇಳಿದ ವಿಚಾರಗಳನ್ನು ಮೂಢರಂತೆ ನಂಬಿ ವೈಚಾರಿಕವಾಗಿ ಆಲೋಚಿಸುತ್ತಾ ಸರಿ ತಪ್ಪುಗಳನ್ನು ಗುರುತಿಸಿ ನಡೆಯುತ್ತಾರೆ. ಎಂಬ ಭಾವದಲ್ಲಿ ಕವಿ ಓದಿರುವುದು ಅರ್ಥವಾಗಿದೆ ಎಂದಿದ್ದಾರೆ. ಅನುಭವವೇ ಶಿಕ್ಷಣ ಎನ್ನುತ್ತಾರೆ ತಜ್ಞರು ಆ ದೃಷ್ಟಿಕೋನದಲ್ಲಿ ಪುಸ್ತಕದಲ್ಲಿ ದೊರೆಯದ ಜ್ಞಾನವನ್ನು ಕೂಡ ನಾವು ಜೀವನಾನುಭವದಿಂದ ಪಡೆಯಬಹುದು ಎಂಬುದಕ್ಕೆ ಅನುಭವದಿಂದ ತಿಳುವಳಿಕೆ ಲಭಿಸಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದಿನಂತೆ ಈಗ ಕಲಿಕೆಗೆ ಯಾವುದೇ ಆಚಾರ,ವಿಚಾರ ಲಿಂಗ ಜಾತಿ ಮತಗಳ ಬಂಧನವಿಲ್ಲ. ಸರ್ವರು ಶಿಕ್ಷಣ ಪಡೆಯಲು ಸಮಾನ ಅವಕಾಶಗಳಿವೆ ಹೀಗಿರುವಾಗ ನಮ್ಮೆಲ್ಲರ ಹರಿವನ್ನು ಸದುಪಯೋಗಪಡಿಸಿಕೊಂಡು ನಮ್ಮದೇ ದಾರಿಯಲ್ಲಿ ನಡೆಯಬೇಕೆಂಬುದು ಕವಿತೆಯ ಸಾರವಾಗಿದೆ. ತನ್ನರಿವೆ ಗುರು ಆಗಿರುವಾಗ ಮತ್ಯಾರನ್ನೋ ಓಲೈಸುತ್ತಾ ಬದುಕುವ ಅನಿವಾರ್ಯತೆಯಾದರೂ ಏನಿದೆ ಬದುಕಿಗೆ ಎಂದು ಪ್ರಶ್ನಿಸಿದ್ದಾರೆ.
೫
ದಾರ್ಶನಿಕರು ಹೇಳಿ ಹೋಗಿದ್ದಾರೆ,
ಬಾಲಂಗೋಚಿಗಳು ಕೆಡಿಸಿ ಮುನ್ನಡೆದಿದ್ದಾರೆ,
ಇರುವುದನ್ನ ಹೇಳಲು ದೇವ ಬಾಯಿ ಕೊಟ್ಟಿರುವಾಗ ಸುಮ್ಮನಿದ್ದು ಮೂಗನೆಣಿಸಿಕೊಂಡು ಬಾಳುವ ಪ್ರಮೇಯವೇಕೆ?
ಬನ್ನಿ,
ನಮ್ಮ ಬದುಕನ್ನ ಒಂದು ಸಾರಿ ಬದುಕಿಬಿಡೋಣ…
ಅನೇಕ ದಾರ್ಶನಿಕರು ಉದಾತ್ತ ತತ್ವ, ಆದರ್ಶಗಳು, ಚಿಂತನೆಗಳು, ಜೀವನ ಮೌಲ್ಯಗಳು ,ಸಂಸ್ಕೃತಿ ,ನಾಡು, ನುಡಿಯ ಬಗ್ಗೆ ತಮ್ಮ ಆದರ್ಶಗಳು ಸಿದ್ಧಾಂತಗಳನ್ನು ಸಂದರ್ಭೋಚಿತವಾಗಿ, ಸಮಾಜಮುಖಿಯಾಗಿ ,ಜನಪರ ಕಾಳಜಿಯಿಂದ ನಮಗೆ ನೀಡಿ ಹೋಗಿದ್ದಾರೆ . ವಿಪರ್ಯಾಸವೆಂದರೆ ಅವರ ಬಾಲಂಗೋಚಿಗಳು ಅಂದರೆ ಅನುಯಾಯಿಗಳು ಸ್ವಾರ್ಥಕ್ಕೆ ಬಿದ್ದು ಈ ಎಲ್ಲ ವಿಚಾರಗಳನ್ನು ತಮ್ಮ ಅನುಕೂಲಸಿಂಧು ಮಾಡಿಕೊಂಡು ತಮಗೆ ಲಾಭವಾಗುವಂತೆ ಅವುಗಳನ್ನು ವಿಶ್ಲೇಷಣೆ ಮಾಡುತ್ತಾ ಮಂಕುಬೂದಿ ಎರಚುತಿದ್ದಾರೆ ಎಂದು ಹೇಳುವ ಮೂಲಕ ಇಲ್ಲಿ ಕವಿಯು ಜಾಗೃತಿಯ ಕಹಳೆಯನ್ನು ಊದಿದ್ದಾರೆ.
ಯಾರಾದರೂ ತಪ್ಪು ಬೋಧನೆ ಮಾಡುವಾಗ ಸರಿಯಾದವರು ತಿಳಿದಿದ್ದರೂ ಅದನ್ನು ಪ್ರಶ್ನಿಸದೆ ಮೌನವಾಗಿರಲು ಆ ದೇವರು ನಮಗೆ ಬಾಯಿ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕವಿಯು ಸತ್ಯದ ಅನ್ವೇಷಣೆಯನ್ನು ಆಶಿಸುತ್ತಾರೆ. ಕಣ್ಣು ಮುಚ್ಚಿಕೊಂಡು ಹೇಳಿದ್ದನ್ನೆಲ್ಲಾ ಒಪ್ಪುತ್ತಾ ಕುರಿಯಂತೆ ತಲೆಯಾಡಿಸದಿರಲು ಸಲಹೆ ನೀಡುತ್ತಾರೆ. ಆ ಮೂಲಕ ಜನತೆಯನ್ನು ಒಳಿತು ಕೆಡುಕಿನ ಪರಾಮರ್ಶೆಯಲ್ಲಿ ಮುಳುಗಿಸಿ ಬದುಕನ್ನು ವಿಮರ್ಶಾತ್ಮಕವಾದ ನೆಲೆಯಲ್ಲಿ ಕೊಂಡೊಯ್ದು ಒಮ್ಮೆ ಬದುಕಿಬಿಡೋಣ ಬನ್ನಿ ಎಂಬುದು ಕವಿಯ ಆಹ್ವಾನವಾಗಿದೆ.
೬
ಯಾವುದೋ ಒಂದೂರಲ್ಲಿ ಹುಟ್ಟಿದೆವು,
ಇನ್ಯಾವುದೋ ಒಂದೂರಲ್ಲಿ ಸಾಯುವೆವು,
ಊರೂರುಗಳಲಿ ಅಲೆಯುವುದನಿವಾರ್ಯವಾದಾಗ,
ಸ್ವಂತ ಊರಲಿ ಸುಂದರ ಹೆಣದ ಗೋರಿಯಾಗಲು ಹವಣಿಸುವುದರಲೇನಿದೆ?
ಬನ್ನಿ,
ಬದುಕನ್ನ ಒಂದು ಸಾರಿ ಬದುಕಿಬಿಡೋಣ…
ಬದುಕು ನಶ್ವರ ನಾವು ಇಂದು ಈ ಊರಲ್ಲಿ ಇರುತ್ತೇವೆ. ನಾಳೆ ಮತ್ತೊಂದು, ನಾಡಿದ್ದು ಮಗದೊಂದು ಅಂದರೆ ನೆಲೆ ಇಲ್ಲದ ಪಯಣ ಈ ಬದುಕು. ಈ ಅಲೆದಾಟಗಳ ನಡುವೆ ನಮ್ಮ ಉಸಿರು ಎಲ್ಲಿ ಯಾವಾಗ ನಿಲ್ಲುತ್ತದೆ ಅರಿತವರಾರು? ಹಾಗಿರುವಾಗ ನಾವು ನಮ್ಮದು ಎಂದು ಹಪಹಪಿಸುತ್ತಾ ಅಭೀಕ್ಷೆಗಳ ಹಿಂದೆ ಬಿದ್ದು ಒದ್ದಾಡುವ ದಾದರೂ ಏಕೆಂದು ಕವಿ ಪ್ರಶ್ನಿಸುತ್ತಾರೆ.
“ಗೋರಿಯನ್ನು ಸಿಂಗರಿಸೆ
ಎಲುಬು ಚೆಲುವಾಗುವುದೆ ? ಮಾರಿಯನ್ನು ಮೆರೆಸಿದರೆ
ಸಾವು ತಪ್ಪುವುದೆ ?
ನೀರಿನಿಂದ ತೊಳೆದರೆ ಒಳಗು
ಮಡಿಯಾಗುವುದೆ ಚಾರಿತ್ರದಿಂ
ಶುದ್ದಿ ಮರುಳಸಿದ್ಧ“
ಕವಿತೆಯಲ್ಲಿ ನಾ ಕಂಡ ಕವಿ ಭಾವ
ಕವಿಯ ಗಟ್ಟಿತನ ಈ ಕವಿತೆಯ ಸಾರವಾಗಿದೆ. ಕವಿಯು ಹೆಚ್ಚಾಗಿ ತಾತ್ವಿಕ ಹಾಗೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾವ್ಯ ರಚಿಸಲು ಆಶಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಈ ಕವಿತೆ. ಒಂದು ಸಾರಿ ಬದುಕಿ ಬಿಡೋಣ ಬನ್ನಿ ಎನ್ನುವಲ್ಲಿ ಬದುಕು ಒಮ್ಮೆ ಮಾತ್ರ ಬರುವುದು. ಅದು ಸಿಕ್ಕಾಗ ಸಾರ್ಥಕತೆ ಪಡೆಯಬೇಕೆಂಬುದು ಕವಿತೆಯ ಮಹದಾಸೆಯಾಗಿದೆ. ಹಳೆಯ ಪರಿಭಾಷೆಯನ್ನು ಹೊಸ ದೃಷ್ಟಿಕೋನದಿಂದ, ಆಯಾಮಗಳಿಂದ ನೋಡಿದ ಕಾರಣ ಕವಿಯು ಇಲ್ಲಿ ಬದುಕು ಎಂಬ ಪರಿಚಿತ ಶೀರ್ಷಿಕೆಯನಿಡಿದು ಎಂದು ಯಾರಿಗೂ ಬೇಸರಿಸಿದೆ ಓದಿಸಿಕೊಂಡು ಹೋಗುವಂತೆ ನವ ನವೀನ ಆಲೋಚನೆಗಳನ್ನು ಮನದಲ್ಲಿ ಬಿತ್ತಿದ್ದಾರೆ. ಸೂಕ್ಷ್ಮಗ್ರಾಹಿ ಚಿಂತನಾಶೀಲ ಬರಹಗಾರರಾದ ಡಾಕ್ಟರ್ ವಸಂತಕುಮಾರ್ ಕಡ್ಲಿಮಟ್ಟಿ ಅವರ ವಾಸ್ತವಿಕ ಪರಿಸ್ಥಿತಿಯ ವಿಶ್ಲೇಷಣೆಯೊಂದಿಗೆ ಸುಂದರವಾಗಿ ಮೂಡಿಬಂದಿದೆ ವಿನಹ ಯಾವುದೇ ಪದಪುಂಜಗಳ ವೈಭವೀಕರಣವಿಲ್ಲ. ಸರಳ ನಿರೂಪಣೆಯ ಹಿಂದೆ ಸಂಕೀರ್ಣ ಅರ್ಥದ ಛಾಯೆಯಿದೆ. ಸಾಮಾಜಿಕ ಸಂವೇದನೆಗಳಿಗೆ ಇವರ ಮನಸ್ಸು ಸ್ಪಂದಿಸಿದ ಪ್ರತೀಕವಾಗಿ ಈ ಕವಿತೆ ಧ್ವನಿಸಿದೆ. ಬದುಕಿನೊಂದಿಗೆ ವೈಚಾರಿಕವಾಗಿ ಕವಿತೆಯ ಮೂಲಕ ಮುಖಾಮುಖಿಯಾಗುವ ಕವಿಯು ಎಲ್ಲವನ್ನು ಒಪ್ಪಿಕೊಳ್ಳದೆ ತಪ್ಪು ಕಂಡಾಗ ಪ್ರತಿರೋಧಕ ಬಂಡೆಯಂತೆ ದೃಢವಾಗಿ ನಿಲ್ಲಬೇಕು ಎನ್ನುತ್ತಾರೆ . ಇಲ್ಲಿ ಕವಿಯು ಜೀವ ಜಗತ್ತಿನೊಂದಿಗೆ ಕವಿತೆಯ ಭಾವ ಜಗತ್ತಿನ್ನು ಸಮೀಕರಿಸಿ ನಮ್ಮ ಬದುಕಿನ ಶೈಲಿ ಹೇಗಿರಬೇಕು ಜಗದ ಜನರ ಮನೋಧರ್ಮ ಹೇಗಿರುತ್ತದೆ ಎಂಬ ವಿಚಾರಗಳನ್ನು ತಮ್ಮದೇ ಆದ ನಿಲುವು ಸಿದ್ಧಾಂತಗಳ ಮೂಲಕ ಪ್ರತಿಪಾದಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಕಾವ್ಯ ತನುಮನಗಳಿಗೆ ಮುದ ನೀಡಿದರೆ ಸಾಲದು ಓದುಗರ ಮೆದುಳನ್ನು ಚುರುಕುಗೊಳಿಸುವುದು ಈ ಕವಿತೆಯ ಪ್ರಧಾನ ಆಶಯವಾಗಿದೆ.
ಅನುಸೂಯ ಯತೀಶ್
ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ