
ವ್ಯಾಲಂಟೈನ್ ವಿಶೇಷ

ರಾಧಾ ತನ್ನನ್ನು ತಾನು ಕಳೆದುಕೊಂಡು ಬಹಳ ದಿನಗಳೇ ಆಗಿಹೋಗಿದ್ದವು. ಎಲ್ಲಿ, ಹೇಗೆ, ಯಾವಾಗ? ಎಂದು ಯೋಚಿಸುತ್ತ ಕೂತರೆ ಮಧುರ ನೆನಪುಗಳ ಸುರಿಮಳೆ. ಮೊಗದ ತುಂಬಾ ನಗು ನಾಚಿ ಕೆಂಪಾಗುತ್ತಿತ್ತು.ಜೊತೆಗೇ ಒಂದಷ್ಟು ಕ್ಷಣಗಳೂ ಕೂಡ ನನ್ನನ್ನೇಕೆ ಮರೆಯುತ್ತೀಯ ಎಂದು ಕೇಳುತ್ತಿತ್ತು.
“ಯೌವನ” ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸುವರ್ಣಕಾಲ. ಅರಿವಿಗೇ ಬಾರದಂತೆ ಯೌವ್ವನ ಒಳಗೊಳಗೇ ರೂಪ ತಳೆಯುತ್ತದೆ. ಹೃದಯ ಬಡಿತ ಹೆಚ್ಚುತ್ತಾ, ಹೆಚ್ಚುತ್ತಾ ಹೃದಯವನ್ನು ಹೆಚ್ಚಾಗಿ,ಹುಚ್ಚಾಗಿ ಪ್ರೀತಿಸುತ್ತೇವೆ. ಜಗತ್ತಿನಲ್ಲಿ ಹೃದಯಕ್ಕಿಂತ ಸುಂದರವಾಗಿ ಯಾವುದೂ ಕಾಣುವುದಿಲ್ಲ.ರೂಪ ಹಾವ-ಭಾವ, ನಡವಳಿಕೆ, ಪ್ರತಿಭೆ ಎಲ್ಲಕ್ಕೂ ಯೌವನದ ಹೃದಯ ಚೈತನ್ಯ ತುಂಬುತ್ತದೆ.
ಎಲ್ಲವನ್ನೂ ದ್ವೇಷವನ್ನು ಕೂಡ ಮರೆಸಿ ಪ್ರೀತಿ ಚಿಗುರಿಸುವ ಏಕಮಾತ್ರ ಪರ್ವಕಾಲ ಯೌವನ. ರಾಧಾಳಿಗೆ ಅರಿಯದಂತೆ ಯೌವ್ವನ ಸದ್ದು-ಗದ್ದಲ ಮಾಡಿಬಿಟ್ಟಿತ್ತು. ಆಗತಾನೆ ಚಿಗುರೊಡೆಯುತ್ತಿದ್ದ ಅವಳ ಪ್ರೇಮ “ಐ ಲವ್ ಯು” ಇನ್ನುವ ಹೃದಯದ ಭಾಷೆಗೆ ಮಾರುಹೋಗಿದ್ದಂತೂ ನಿಜ.
ರಾಧಾಳನ್ನು ಮರುಳು ಮಾಡಿ ಪ್ರೇಮದ ಬಲೆ ಬೀಸಿ ಸೆರೆಹಿಡಿದ ಸುಂದರನ ಬಗ್ಗೆ ತಿಳಿಯಲು ತಾವೂ ಕೂಡ ಕಾತುರರಾಗಿದ್ದೀರಿ ಅಂದುಕೊಳ್ಳುತ್ತೇನೆ.
ಮತ್ತೆ ಮತ್ತೆ ಓದಿಸಿಕೊಳ್ಳುವ ಪದ್ಯದಂತೆ
ಮತ್ತೆ ಮತ್ತೆ ತಿರುಗಿ ನೋಡಬೇಕೆನಿಸುವ ಬಣ್ಣದ ಚಿಟ್ಟೆಯಂತೆ
ನೋಡಿದಷ್ಟೂ ಮೈಮನ ಸೆಳೆದುಕೊಳ್ಳುವ ಹೊಳೆವ ಮುತ್ತಿನಂತ ರಾಜಕುಮಾರ. ತನ್ನ ಪುಟ್ಟ ಹೃದಯದಲ್ಲಿ ಅವಳಿಗೊಂದು ವಿಶಾಲ ಅರಮನೆಯೊಂದನ್ನು ಕಟ್ಟಿ ಪಟ್ಟದರಸಿಯನ್ನಾಗಿ ಸ್ವೀಕರಿಸಿದ ಯುವರಾಜ. ಅವನ ಜೀವನದ ಆಸೆಗಳು, ಕನಸುಗಳು, ಶಕ್ತಿ ಸಾಮರ್ಥ್ಯ, ಉದ್ದೇಶಗಳು, ಕಷ್ಟ-ಸುಖ ಏನನ್ನೂ ತಿಳಿದುಕೊಳ್ಳದೆ ರಾಧಾ ಅವನ ಮನದ ಸಂಗಾತಿಯಾಗಿ ಜೊತೆಯಾಗಿ ಬಿಟ್ಟಿದ್ದಳು. ಉಕ್ಕುವ ಕಡಲಿನ ಅಲೆ ಗಳನ್ನು ತಡೆಯುವರುಂಟೆ?
ಐ ಲವ್ ಯು ಎಂಬ ಅವಳ ಪ್ರೇಮದ ಕರೆಗೆ ಮರುಮಾತಿಲ್ಲದೆ ಅವನೂ ಕೂಡ ಕಂಗಳಲ್ಲಿ ಒಪ್ಪಿಗೆ ಸೂಚಿಸಿಬಿಟ್ಟಿದ್ದ.ಅಲ್ಲಿಂದೀಚೆಗೆ ಸಂಭ್ರಮದ ಕ್ಷಣಗಳಿಗೆ ಪಾರವೇ ಇರಲಿಲ್ಲ.ಪ್ರತಿಕ್ಷಣವೂ ಪ್ರೇಮ ಪಾಠವನ್ನು ಹೇಳುವುದು ಮತ್ತು ಕೇಳುವುದು ಅಭ್ಯಾಸವಾಗಿಹೋಗಿತ್ತು.ಹಾಗೆಂದ ಮಾತ್ರಕ್ಕೆ ಅವರು ಸದಾ ಜೊತೆಗಿರುತ್ತಿದ್ದರು ಎಂದಲ್ಲ.ಮನದ ಮೂಲೆಯಲ್ಲಿ ಬಡಿವ ಹೃದಯ ಮಾತ್ರ ಅವನನ್ನು ಜಪಿಸುತ್ತಿತ್ತು. ಅವನನ್ನು ಸೇರುವ ಗಳಿಗೆಗಾಗಿ ಮನಸ್ಸು ಹಾತೊರೆಯುತ್ತಿತ್ತು. ಸುತ್ತಲು ಎಷ್ಟೇ ಜನರಿದ್ದರೂ ಇಬ್ಬರೇ ಇರುವಂತೆ ಮನಸ್ಸು ಭ್ರಮಿಸುತ್ತಿತ್ತು. “ಲೋಕವೆ ಹೇಳಿದ ಮಾತಿದು ಪ್ರೇಮದ ಸಾರವೇ ಕೇಳಿದು ನಾಳಿನ ಚಿಂತೆಯಲ್ಲಿ ಬಾಳಬಾರದು ಪ್ರೀತಿಯ ಮೂಲವೆಲ್ಲಿ ಕೇಳಬಾರದು ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು” ಎನ್ನುವ ಹಂಸಲೇಖರವರ ಈ ಹಾಡನ್ನು ಸದಾ ಹೃದಯ ಗುನುಗುತ್ತಿತ್ತು.ಈ ಹಾಡು ಹೃದಯದ ಹಾಡಾಗಲು ಕೂಡ ಕಾರಣವಿತ್ತು.ಅದೇನೆಂದರೆ ಅವಳು ಮರೆತರು ಅವಳನ್ನು ಮರೆಯದೆ ಬೆನ್ನಿಗಂಟಿದ ಕಹಿ ಕ್ಷಣಗಳು.ಇದೇನಪ್ಪಾ ಸ್ವಚ್ಛಂದದ ಪ್ರೇಮಲೋಕದಲ್ಲಿ ಬಿರುಗಾಳಿ ಹೇಗೆ ಎದ್ದುಬಿಟ್ಟಿತು ಎಂದುಕೊಂಡಿರಾ?
ಏನೇ ಸಮಸ್ಯೆ ಇದ್ದರೂ ಯಾರ ಬಗ್ಗೆಯೂ ಯೋಚಿಸದೆ ಅವಳು ಮನಸ್ಸನ್ನು ಅವನ ಕೈಗೆ ಒಪ್ಪಿಸಿ ಬಿಟ್ಟಿದ್ದಳು. ಅವನೂ ಸಹ ಹೃದಯವನ್ನು ಅವಳ ಕೈಯಲ್ಲಿ ಇರಿಸಿ ನಿಟ್ಟುಸಿರು ಬಿಡುತ್ತಿದ್ದ. ಆದರಿಲ್ಲಿ ಅವರಿಬ್ಬರು ಮರೆತು ಹೋಗಿದ್ದು, ಯೋಚಿಸದೆ ಬಿಟ್ಟದ್ದು ಅವರಿಬ್ಬರ ಮಧ್ಯೆ ಬಂದು ನಿಲ್ಲುವ ಜಾತಿಯೆಂಬ ಪೆಡಂಭೂತವನ್ನು.
ರಾಧಾಳಿಗೆ ಬಾಲ್ಯದಲ್ಲಿ ಅವಳ ತಂದೆ ದಿನಕ್ಕೊಂದು ಕಥೆಗಳನ್ನು ಹೇಳಿಯೇ ನಿದ್ದೆ ಮಾಡಿಸುತ್ತಿದ್ದರು. ಅವುಗಳಲ್ಲಿ ಅವಳಿಗೆ ತೀರ ಇಷ್ಟವಾದ ಮತ್ತು ಪ್ರಭಾವ ಬೀರಿದ ವ್ಯಕ್ತಿಯೆಂದರೆ ಅದು “ಕ್ರಾಂತಿಕಾರಿ ಬಸವಣ್ಣ”
ಬಸವಣ್ಣನವರು 12ನೇ ಶತಮಾನದ ತತ್ವಜ್ಞಾನಿ ಯಾಗಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಅವರು ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಅಲ್ಲದೆ ಶಿವ ಭಕ್ತಿ ಚಳುವಳಿಯಲ್ಲಿ ಕವಿಯೂ ಆಗಿದ್ದ ಇವರು ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸುತ್ತಿದ್ದರು. ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಡನಂಬಿಕೆಗಳು ಹೀಗೆ ಹತ್ತು ಹಲವು ಕಲುಷಿತ ಪದ್ಧತಿಗಳನ್ನು ನಿರಾಕರಿಸಿದರು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಸವಣ್ಣ ತಮ್ಮ ಎಂಟನೇ ವಯಸ್ಸಿನಲ್ಲಿ ಕೂಡಲಸಂಗಮ ಗುರುಕುಲವನ್ನು ಸೇರಿದರು.ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳನ್ನು ಅವರು ಬೆಂಬಲಿಸಲಿಲ್ಲ.
ಸಮಾಜದಲ್ಲಿ ನಡೆಯುತ್ತಿದ್ದ ಹಿಂಸಾಚಾರ, ಮೂಢನಂಬಿಕೆಗಳು ಮತ್ತು ಜಾತಿ ಆಧಾರದ ಮೇಲೆ ನಡೆಯುತ್ತಿದ್ದ ಅನ್ಯಾಯ ಇವುಗಳನ್ನೆಲ್ಲಾ ವಿರೋಧಿಸಿ ಅವುಗಳನ್ನೆಲ್ಲ ತೊಡೆದುಹಾಕುವ ನಿರ್ಧಾರ ಮಾಡಿದ್ದರು. ಗುಲಾಮರಂತೆ ಬದುಕುತ್ತಿದ್ದ ಮಹಿಳೆಯರಿಗಾಗಿ ಸಮಾನ ಸಾಮಾಜಿಕ ಮತ್ತು ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿದರು. ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳನ್ನು ಹೆಚ್ಚು ಹೆಚ್ಚು ಮಾಡಿಸುವ ಮೂಲಕ ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಗೆ ಶ್ರಮಿಸಿದರು.
ಹೀಗೆ ರಾಧಾಳ ತಂದೆ ಹೇಳಿಕೊಡುತ್ತಿದ್ದ ಕಥೆಗಳಿಂದ ಹೆಚ್ಚು ಪ್ರಭಾವಿತಳಾದ ರಾಧಾ ತಾನು ಕೂಡ ಸಮಾಜದಲ್ಲಿನ ದುಷ್ಟ ಪದ್ಧತಿಗಳ ವಿರುದ್ಧ ತಿರುಗಿ ನಿಲ್ಲಬೇಕು ಎಂದು ಕೊಳ್ಳುತ್ತಿದ್ದಳು.ಅಷ್ಟರಲ್ಲೇ ಅವಳ ಅರಿವಿಗೇಬಾರದೆ ಬೇರೊಂದು ಜಾತಿಯ ಹುಡುಗನನ್ನು ಪ್ರೀತಿಸಿ ಬಿಟ್ಟಿದ್ದಳು. ಆ ಪ್ರೀತಿಯ ಬೇರು ಮಣ್ಣಲ್ಲಿ ಬೇರೂರಿ ಬೆಳೆದು ಚಿಗುರುವವರೆಗೂ ಹುಚ್ಚು ಆಸೆಗಳು, ಕನಸುಗಳು ಅವಳಲ್ಲಿ ಮನೆಮಾಡಿದ್ದವು. ಆದರೆ ಚಿಗುರಿದ ಪ್ರೀತಿಯ ಗಿಡವೊಂದಕ್ಕೆ ನೀರೆರೆಯುವ ವೇಳೆಗೆ ಅವಳು ಮರೆತುಹೋಗಿದ್ದ ಜಾತಿಯೆಂಬ ವಿಲನ್ ನೆನಪಾಗಿಬಿಟ್ಟಿದ್ದ.
ಯೌವನದ ಬಿಸಿ ರಕ್ತದಲ್ಲಿ ಉಸುರುತ್ತಿದ್ದ ಉಸಿರು ಅವಳಿಗೆ ಹೇಳುತ್ತಿದ್ದ ಪಾಠ ಮಾತ್ರ ಒಂದೇ. ಸಮಾಜದ ದುಷ್ಟ ಪದ್ಧತಿಗಳ ವಿರುದ್ಧ ತಿರುಗಿ ನಿಲ್ಲಬೇಕೆಂಬ ಛಲ. ಇದರೊಟ್ಟಿಗೆ ಬೆಳೆದ ಅವಳ ಪ್ರೀತಿಯ ಮರ ಗಟ್ಟಿಯಾಗಿ, ಎತ್ತರವಾಗಿ ಆಕಾಶವನ್ನು ಮುಟ್ಟುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಮನದ ಮೂಲೆಯಲ್ಲೊಂದು ಎಚ್ಚರದ ಗಂಟೆ ಬಾರಿಸತೊಡಗಿತು.
ಅವಳ ಮತ್ತು ಅವನ ನಡುವೆ ಜಾತಿಯ ಗೋಡೆಯೊಂದು ಒಮ್ಮೆಲೆ ತಲೆಯೆತ್ತಿತು. ಈ ಗೋಡೆಯನ್ನು ಉರುಳಿಸುವುದಾದರೂ ಹೇಗೆ? ತಂದೆ-ತಾಯಿ ಯಾರಾದರೂ ನನ್ನ ಸಹಾಯಕ್ಕೆ ಬರುವರೇ ಎಂಬಿತ್ಯಾದಿ ಚಿಂತೆಗಳು ಕಾಡತೊಡಗಿದವು.
ಆಗ ಅವಳು ತನ್ನ ತಂದೆಯ ಮನಸ್ಸಿನಲ್ಲಿರುವ ಆಸೆಗಳು, ಕನಸುಗಳು, ಜಾತಿಯ ಬಗೆಗಿನ ನಂಬಿಕೆಗಳು ಎಲ್ಲದರ ಬಗ್ಗೆ ಹೆಚ್ಚು ತಿಳಿಯಲು ಮುಂದಾದಳು.ತನ್ನ ತಂದೆಗೆ ನೇರವಾದ ಕೆಲವು ಪ್ರಶ್ನೆಗಳನ್ನು ಕೇಳಿದಳು.ಅಪ್ಪ ನಾವೂ ಕೂಡ ಬಸವಣ್ಣನವರು ಹೇಳಿದಂತೆ ಅಂತರ್ಜಾತಿಯ ವಿವಾಹ ಮಾಡಿಕೊಳ್ಳಬಹುದೇ?
ಮಗಳೇ ಅಂತರ್ಜಾತಿಯ ವಿವಾಹವೇನೋ ಒಳ್ಳೆಯದೆ ಆದರೆ….
ಆದರೆ ಏನಪ್ಪಾ ಹೇಳಿಎಂದಳು.
ಆದರೆ ಅವೆಲ್ಲ ನಮ್ಮಂತವರಿಗಲ್ಲಮ್ಮ
ಹಾಗಂದರೆ ಏನು ಅಂತ ಸ್ವಲ್ಪ ಬಿಡಿಸಿ ಹೇಳಿ ಅಂದಳು
ಬಹಳ ಬೇಸರದಿಂದಲೇ ತಂದೆ ಮಗಳಿಗೆ ವಿವರಿಸುತ್ತಾ ಹೋದರು. ಅಂತರ್ಜಾತಿ ವಿವಾಹ ನಿಜಜೀವನದಲ್ಲಿ ತುಂಬಾ ಕಷ್ಟದ ಕೆಲಸ. ಸಮಾಜ ಇನ್ನೂ ಬದಲಾಗಿಲ್ಲ ಯಾರೂ ತಮ್ಮ ಜಾತಿಯನ್ನು ಬಿಟ್ಟು ಮತ್ತೊಂದು ಜಾತಿಗೆ ಮದುವೆಯಾಗುವುದನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ.ತಂದೆ-ತಾಯಿ, ಬಂಧು-ಬಳಗ, ಸಮಾಜ ಎಲ್ಲರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಎಲ್ಲರಿಂದ ದೂರ ಉಳಿದು ಬದುಕು ನಡೆಸಬೇಕಾಗುತ್ತದೆ. ಹೀಗೆ ಬದುಕುವುದು ಸುಲಭದ ಮಾತೆ? ನೀನು ಈ ವಿಚಾರದಲ್ಲಿ ಜಾಗೃತೆಯಿಂದ ಇರುವುದು ಒಳ್ಳೆಯದು ಎಂದು ಹೇಳುತ್ತಲೇ ಎದ್ದು ನಡೆದರು.
ಹೀಗೆ ಎದ್ದು ನಡೆದ ತಂದೆಯ ಮುಖದಲ್ಲಿ ಹಿಂದೆಂದೂ ಕಾಣದ ಬೇಸರ ಮತ್ತು ಚಿಂತೆಗಳನ್ನು ಗಮನಿಸಿದಳು. ಅವಳ ಎದೆಯಲ್ಲಿ ಉಕ್ಕುತ್ತಿದ್ದ ಪ್ರೇಮದ ಅಲೆಗಳೆಲ್ಲಾ ಒಂದು ಗಳಿಗೆ ಹಿಮ್ಮೆಟ್ಟಿದ ಹಾಗಾಯಿತು.ತಾನು ಕಟ್ಟಿಕೊಂಡ ಕನಸುಗಳೆಲ್ಲ ಒಡೆದ ಕನ್ನಡಿಯ ಚೂರಾದವು. ತಲೆಯ ಮೇಲೆ ಸಿಡಿಲು ಬಡಿದರೂ ಬದುಕಲೇಬೇಕಾದ ಅನಿವಾರ್ಯತೆ ಎದುರಾಯಿತು. ಮುಂದಿನ ಜೀವನವನ್ನು ನೆನೆದು ಕಣ್ಣೀರಾದಳು.
ತನಗೆದುರಾದ ತೊಂದರೆಯನ್ನು ಯಾರ ಬಳಿ ಹೇಳಿಕೊಳ್ಳುವುದು? ತಂದೆ-ತಾಯಿಯೇ, ಪ್ರಿಯಕರನೇ? ಯಾವುದೊಂದೂ ಅರ್ಥವಾಗದೆ ಚಿಂತೆಯಲ್ಲಿ ಮುಳುಗಿದಳು. ಎಲ್ಲವೂ ಗೊಂದಲಮಯ ಅನ ಅನ್ನಿಸಿತು.
ಇನ್ನು ತಾಯಿಯ ಬಳಿ ಈ ವಿಷಯ ಪ್ರಸ್ತಾಪಿಸಬೇಕೆಂದು ಅವಳಿಗನ್ನಿಸಲಿಲ್ಲ. ಕಾರಣ ತಾಯಿ ಹೆಚ್ಚು ಸಂಪ್ರದಾಯಸ್ಥರಾಗಿದ್ದರು. ಇನ್ನು ಪ್ರಿಯಕರನ ಬಳಿ ಹೇಳುವುದು ಹೇಗೆ? ಅವನು ತೀರ ಸೂಕ್ಷ್ಮಮತಿ ಆಗಿದ್ದು ಮದುವೆ ಯಾಗುವ ನಿರ್ಧಾರ ಬದಲಿಸಿಬಿಟ್ಟರೆ ಎಂಬ ಭಯ ಕಾಡತೊಡಗಿತು.
ತಾನು ಕಷ್ಟಪಟ್ಟು ನೀರೆರೆದು ಬೆಳೆಸಿದ ಪ್ರೀತಿಯ ಮರ ಒಣಗಿಹೋಗುತ್ತಿರುವುದನ್ನು ಅಸಹಾಯಕಳಂತೆ ದಿನಾಲು ನೋಡುವಂತಾಯಿತು. ಆದರೆ ಅವನ ಮೇಲೆ ಹುಟ್ಟಿಕೊಂಡ ಪ್ರೀತಿ ಮಾತ್ರ ಎಳ್ಳಷ್ಟೂ ಕರಗಲಿಲ್ಲ.ಎಣ್ಣೆ ಮುಗಿದರೂ ಆರದ ದೀಪದ ಬತ್ತಿಯಂತೆ ಅವಳಲ್ಲಿ ಪ್ರೀತಿ ಬೆಳಗುತ್ತಿತ್ತು. ಇಲ್ಲಿ ಯಾರು ನನಗೆ ಮುಖ್ಯ ತಂದೆ-ತಾಯಿ,ತನ್ನಿಷ್ಟದ ಹುಡುಗ ಎಂದು ಕೇಳಿಕೊಂಡಾಗ ಇಬ್ಬರು ತನ್ನ ಎರಡು ಕಣ್ಣುಗಳಂತೆ ಕಂಡರು. ಹೀಗಿರುವಾಗ ಯಾವ ಕಣ್ಣನ್ನು ತಾನೇ ಕಳೆದುಕೊಂಡಾಳು?
ನನಗೆ ಯಾರೂ ಬೇಡ ಒಂಟಿಯಾಗಿಯೇ ಇರಬೇಕು ಅನ್ನಿಸಿತು.ಜೊತೆಯಲ್ಲೇ ಹುಟ್ಟಿಕೊಂಡ ಖಿನ್ನತೆ ಅವಳನ್ನು ಕಾಡತೊಡಗಿತು.ಈ ಸಮಸ್ಯೆಯಿಂದ ಹೊರಬರುವುದು ಹೇಗೆಂದು ತಿಳಿಯದೆ ಒದ್ದಾಡಿದಳು.ಆದರೆ ಅವಳ ಖಿನ್ನತೆಯನ್ನು ಗುಣಪಡಿಸಿದ್ದು ಮತ್ತದೇ ಪ್ರೀತಿಯ ಸಂಭ್ರಮ. ಸಾಕು ಎನ್ನುವಷ್ಟು ಮೊಗೆಮೊಗೆದು ಕೊಡುತ್ತಿದ್ದ ಅವನ ಪ್ರೀತಿ ಅವಳನ್ನು ದೂರ ಆಗಲು ಬಿಡಲಿಲ್ಲ.
ಅವಳು ಹೇಳದೆಯೇ ಅವಳ ಮನಸ್ಸಿನ ಚಿಂತೆಗೆ ಕಾರಣವನ್ನು ತಿಳಿದುಕೊಂಡಿದ್ದ ಮುರಳಿ ತನ್ನನ್ನು ಮರೆತರೂ ನಾನು ನಿನ್ನ ಮೇಲೆ ಬೇಸರಪಟ್ಟುಕೊಳ್ಳುವುದಿಲ್ಲ ಎಂಬ ಮಾತುಗಳ ಮುಖಾಂತರ ಅವಳಿಗೆ ಸಾಂತ್ವನ ಹೇಳಿದ. ಇದು ಅವನ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚು ಮಾಡಿತು.
ಅಲ್ಲಿಂದೀಚೆಗೆ ಅವಳು ತನ್ನ ಯೋಚನೆಗಳನ್ನು ಬದಿಗಿರಿಸಿ ಮತ್ತೆ ಅರಳಿನಿಂತ ಹೂವಾಗಿ ಕಾಣತೊಡಗಿದಳು.ದಿನದಿಂದ ದಿನಕ್ಕೆ ಅವನಿಗೆ ಹೆಚ್ಚು ಹೆಚ್ಚು ಹತ್ತಿರವಾದಳು.ತನ್ನ ಪ್ರೇಮದ ರಥವನ್ನು ಹೂತುಹೋಗದ ಹಾಗೆ ಧೈರ್ಯವಾಗಿ ಮುನ್ನಡೆಸಬೇಕೆಂದು ಪಣತೊಟ್ಟಳು.
ಅದೊಂದು ದಿನ ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಂಡು ತನ್ನ ತಾಯಿಯ ಬಳಿ ಪ್ರೇಮದ ವಿಚಾರವನ್ನೆಲ್ಲ ತಿಳಿಸಿದಳು. ಅಲ್ಲಿಗೆ ಅವಳ ಚಿಂತೆಗಳು ಮುಗಿಯಲಿಲ್ಲ ಆರಂಭವಾದವು.ಮನೆಯಲ್ಲಿದ್ದ ಸಂತೋಷ ಮಾಯವಾಗಿ ದುಃಖ ಮಡುಗಟ್ಟಿತ್ತು. ತಾಯಿ-ತಂದೆ ಇಬ್ಬರು ಮನಮುಟ್ಟುವಂತೆ ತಿಳಿಹೇಳಿದರು. ಈ ಮದುವೆ ಬೇಡವೆಂದು ಬೇಡಿಕೊಂಡರು. ಹಿರಿಯರನ್ನು ಕರೆಸಿ ಬುದ್ಧಿ ಹೇಳಿಸಿದರು.ಅದೇನೋ ಅಷ್ಟರಲ್ಲಿ ರಾಧಾಳ ಮನಸ್ಸು ಕಲ್ಲುಬಂಡೆಯಂತೆ ಗಟ್ಟಿಯಾದ ನಿರ್ಧಾರ ಮಾಡಿಬಿಟ್ಟಿತ್ತು. ತಾನು ಮದುವೆಯಾದರೆ ಅವನನ್ನೇ, ಇನ್ನಾರ ಮುಂದೆಯೂ ಕುತ್ತಿಗೆಯನ್ನು ಒಡ್ಡಲಾರೆ ಎಂದು ಹೇಳಿದಳು.ಅಪ್ಪ ಅಮ್ಮನ ಮನಸ್ಥಿತಿಯೂ ಬದಲಾಗದೆ ಮಗಳಿಂದ ದೂರವಾದರು.
ಇತ್ತ ಮುರಳಿಯ ಮನೆಯವರಿಂದ ಮದುವೆಗೆ ಯಾವ ವಿರೋಧವೂ ಇರಲಿಲ್ಲವಾದ್ದರಿಂದ ಮದುವೆ ತಯಾರಿ ನಡೆದೇ ಬಿಟ್ಟಿತು. ಮದುವೆಗೆ ಹೇಗೋ ಅಪ್ಪ-ಅಮ್ಮ ಬಂದೇ ಬರುವರೆಂದು ರಾಧಾ ನಂಬಿಕೊಂಡಿದ್ದಳು.ಆದರೆ ಸಂಭ್ರಮದ ಮದುವೆಯಲ್ಲಿ ತಂದೆ-ತಾಯಿ, ಬಂಧು-ಬಳಗ ಇಲ್ಲದೆ ಕಣ್ಣೀರಿಡುವಂತಾಯಿತು.
ತನ್ನವರನ್ನೆಲ್ಲ ಕಳೆದುಕೊಂಡು ಮೌನಕ್ಕೆ ಶರಣಾದಳು.ಆದರೆ ಅವಳ ಎಲ್ಲಾ ನೋವುಗಳಿಗೂ ಪರಿಹಾರ ನೀಡುತ್ತಿದ್ದುದು ಮಾತ್ರ ಮುರಳಿಯ ಮಿತಿಮೀರಿದ ಒಲವು.ತಂದೆ-ತಾಯಿ ಇವರೊಟ್ಟಿಗೆ ರಾಜಿ ಮಾಡಿಕೊಂಡರು.ಆದರೆ ಬಂಧುಬಳಗದವರು ಇವಳನ್ನು ದೂರವಿಟ್ಟರು.
ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ ಮೇಲೂ ರಾಧಾಳಿಗೆ ಪ್ರೇಮ ವಿವಾಹ ಮತ್ತು ಅಂತರ್ಜಾತೀಯ ವಿವಾಹದ ಬಗ್ಗೆ ಅಭಿಪ್ರಾಯಗಳು ಬದಲಾಗಲಿಲ್ಲ.ತಾನು ಮಾಡಿದ್ದು ತಪ್ಪು ಎಂದು ಅವಳಿಗೆ ಅನಿಸಲಿಲ್ಲ. ಬದಲಾಗಿ ತನ್ನ ರೀತಿ ಪ್ರೀತಿಸಿ ಅಂತರ್ಜಾತಿಯ ವಿವಾಹ ಮಾಡಿಕೊಳ್ಳ ಬಯಸಿದವರಿಗೆ ಎದುರಾಗಬಹುದಾದ ಕಷ್ಟಗಳು ಸವಾಲುಗಳು ಮತ್ತು ಪರಿಹಾರಗಳು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮತ್ತೆ ಯೋಚಿಸುವತ್ತ ಮಗ್ನಳಾದಳು ರಾಧಾ…
ಮುರಳಿಯ ಒಲವು ರಾಧಾಳ ಎಲ್ಲ ಯೋಚನೆಗಳನ್ನು ಮರೆಸುವ ಮುದ್ದಾಗಿತ್ತು….
ಒಲವು
One thought on “”