ಪುಸ್ತಕ ಸಂಗಾತಿ
ಪ್ರಣಯದ ಬೆನ್ನೇರಿ… ಕಾದಂಬರಿ ನಂರುಷಿ ಕಡೂರು
ಗುರುಗಳೇ ಕಾದಂಬರಿ ಓದಿದೀರಾ ಎಂದು ಆಗಾಗ ಫೋನು ಮಾಡಿ ಕೇಳುವ ಆತ್ಮೀಯ ನಮ್ಮ ನಂರುಷಿಯ ಈ ಕಾದಂಬರಿ ನಿದ್ದೆ ಬಾರದೇ ಚಡಪಡಿಸುವ ನಿರವ ರಾತ್ರಿ ಯಲಿ ಓದಿಗೆತ್ತಿಕೊಂಡೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದಾಗ ನಿನ್ನೆ ಮಧ್ಯರಾತ್ರಿ ಮುಗಿದು ಬೆಳಗಿನೆಡೆಗೆ ಜಾರುವ ಸಮಯ ೧-೨೦ ಆಗಿತ್ತು.
ತಮ್ಮ ಕಡೂರನ್ನೇ ಕೇಂದ್ರ ಪ್ರಜ್ಞೆಯಾಗಿಟ್ಟುಕೊಂಡು ಆ ಪುಟ್ಟ ಊರಿನಿಂದ ಎಂಟನೇ ತರಗತಿ ಓದಲು ಹೋಗುವ ಒಂದಷ್ಟು ಕ್ಲಾಸ್ ಮೇಟ್ ಹುಡುಗ ಹುಡುಗಿಯರ ಒಂದು ತಂಡ. ಅವರೊಂದಿಗೆ ದೇವೇಂದ್ರ ಎಂಬ ಈ ಕಾದಂಬರಿಯ ನಿರೂಪಕನು ಕಥೆ ಹೇಳುತ್ತಾ ಸಾಗುವುದು. ಕಾದಂಬರಿಯನು ಇಷ್ಟು ಸಲಿಸಾಗಿ ಬರೀಬಹುದಾ ಅಂತ ನನಗೆ ಆಶ್ಚರ್ಯ ಮೂಡಿಸುವಂತಹ ಈ ಸರಳ ಕಥಾ ತಂತ್ರ ಇಷ್ಟವಾಯಿತು.ನಾನೇಕೆ ಕಾದಂಬರಿ ಬರೀಬಾರದು ಅನ್ನೋ ಧ್ಯಾನಸ್ಥ ಮನಸು ಕಾದಂಬರಿಯನು ಇಡಿಯಾಗಿ ಆಪೋಶನ ತೆಗೆದುಕೊಂಡಿತು ಅಂದ್ರೆ ಸುಳ್ಳಲ್ಲ.
ನಾನು ಸಾವಿರಾರು ಕಾದಂಬರಿಗಳನು ಓದಿದವನು.ಆದರೆ ಇಲ್ಲಿವರೆಗೆ ಒಂದೇ ಒಂದು ಅಂತಹ ಬರವಣಿಗೆಯೆಡೆಗೆ ಸಾಹಸ ಮಾಡಿದವನಲ್ಲ.ಕಳೆದ ವರ್ಷ ಸುರಪುರದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕರ ಪುರಸ್ಕಾರ ನನಗೆ ಅರಮನೆಯಲ್ಲಿ ನೀಡಿ ಅವರೆಲ್ಲಾ ಅಭಿನಂದನೆಗಳ ಮಾತು ಆಡುವಾಗ ಈ ಸಿದ್ಧರಾಮ ಹೊನ್ಕಲ್ ಅವರು ನಮ್ಮ ಈ ಸುರಪುರದಲ್ಲೆ ಓದಿ ಬೆಳೆದವರು.ದೊಡ್ಡ ಲೇಖಕ ಆಗಿ ನಾಡಿನಾದ್ಯಂತ ಹೆಸರು ಮಾಡಿದಾರೆ.ಇವರು ನಮ್ಮ ಸುರಪುರದ ಶೂರ ದೊರೆ ರಾಜಾ ವೆಂಕಟಪ್ಪ ನಾಯಕರ ಕುರಿತು ಒಂದು ಐತಿಹಾಸಿಕ ಕಾದಂಬರಿ ಯಾಕೆ ಬರೆಯಬಾರದು ಎಂದು ಅಂದು ಅನೇಕರು ತಮ್ಮ ಮಾತುಗಳಲ್ಲಿ ಹೇಳಿ ನನ್ನೊಳಗೆ ಒಂದು ಸವಾಲೇ ಸೃಷ್ಠಿಸಿದರು. ಆದರೆ ಗಜಲ್ ಗುಂಗಿನಲ್ಲಿ ತೇಲುತ್ತಾ ಇದ್ದ ನಾನು ಆ ಸವಾಲು ಸ್ವೀಕರಿಸಲಿಲ್ಲ. ನಾನು ಮಾತನಾಡುವ ಸಂದರ್ಭ ಬಂದಾಗ ಅವರಿಗೆಲ್ಲರಿಗೂ ಮುಂದಿನ ವರ್ಷದ ಒಳಗೆ ಒಂದು ಕಾದಂಬರಿ ಬರೆಯಿಸಿ ಕೊಡುವೆ.ಆದರೆ ನನಗೆ ಕಾದಂಬರಿ ಬರೆಯಲು ಬಾರದೇನೋ ಅಂತ ಹೇಳಿ ಇದೇ ನಮ್ಮ ನಂರುಷಿಯ ಚಿತ್ರದುರ್ಗ ಜಿಲ್ಲೆಯ ಹೆಸರಾಂತ ಕಾದಂಬರಿಕಾರ ಡಾ.ಬಿ.ಎಲ್.ವೇಣು ಅವರಿಗೆ ಒಪ್ಪಿಸಿ ಆ ಕಾದಂಬರಿ ಬರೆಯಿಸಲು ಒಂದಷ್ಟು ಅಳಿಲು ಸೇವೆ ಸಲ್ಲಿಸಿ ಅವರು ಕೊಟ್ಟ ಪ್ರಶಸ್ತಿಯ ಜವಾಬ್ದಾರಿ ಕಡಿಮೆ ಮಾಡಿಕೊಂಡೆ. ಅದು ಇಷ್ಟರಲ್ಲೆ ಅರಮನೆಯಲ್ಲಿ ಬಿಡುಗಡೆ ಆಗಲಿದೆ.ಈ ಮಾತೆಲ್ಲ ಯಾಕೆ ನೆನಪಾದವು ಅಂದ್ರೆ ಕಾದಂಬರಿ ಬರೀಯೋದು ಅಂದ್ರೇನೇ ಒಂದು ಭಯವಿದ್ದ ನನಗೆ, ನನಗೆ ಸದಾ ಗುರುಗಳೆ ಅನ್ನೋ ಪ್ರೀತಿ ಗೌರವ ತೋರುವ ಈ ಹುಡುಗರೇ ಕಾದಂಬರಿ ಬರೀತಿದಾರೆ.ಗುರು ಅನಿಸಿಕೊಂಡ ನಾನೆಂತಹ ಗುರು ಎಂಬ ಯೋಚನೆಯಲ್ಲಿ ಈ ಕಥೆ ಹೇಳಬೇಕಾಯಿತು. ಚಿತ್ರದುರ್ಗದವರಿಗೆ ಈ ಕಾದಂಬರಿ ಪ್ರಕಾರ ಒಲಿದಿದೆಯಾ? ತರಾಸು,ವೇಣು,ಈಗ ನಮ್ಮ ನಂರುಷಿ…ಇಂತಹ ಅನೇಕರು ನೆನಪಾದರು.
ಈ ಕಾದಂಬರಿ ಹೈಸ್ಕೂಲ್ ಓದಿನಿಂದ ಆರಂಭವಾಗಿ ದಿನಾ ಆರು ಮೈಲಿ ನಡೆದುಕೊಂಡೋ,ಸೈಕಲ್ ಹೊಡೆದುಕೊಂಡೋ ಅಥವಾ ನಟರಾಜ್ ಸರ್ವಿಸ ಬಸ್ ಹತ್ತಿ ಕೊಂಡೋ ಓಡಾಡುವ ಒಂದು ಬಡ, ಮಧ್ಯಮ ವರ್ಗದ ಹುಡುಗರ ಓದಿನೊಂದಿಗೆ ಆರಂಭವಾಗಿ ಅವರು ಪದವಿ ಮುಗಿಸುವದರ ಒಳಗೆ ಆ ಹುಡುಗ ಹುಡುಗಿಯರ ಮಧ್ಯೆ ಅರಳುವ ನವಿರು ಪ್ರೇಮ,ಭಿನ್ನ ಲಿಂಗದೆಡೆಗಿನ ಪರಸ್ಪರ ದೈಹಿಕ ಆಕರ್ಷಣೆ ಹೀಗೆ ಸಂತು ಸೌಮ್ಯಳ ಪಾತ್ರಗಳ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.ಈ ಹಸಿಬಿಸಿ ಅಪ್ರಾಪ್ತ ವಯಸ್ಸಿನ ಮಧುರ ಭಾವಗಳು ಮುಂದೆ ಓದು ಮುಗಿಸಿ ಪಕ್ವತೆಯೆಡೆಗೆ ಸಾಗುವ ಈ ಪ್ರಣಯದ ಬೆನ್ನೇರಿ ಕಾದಂಬರಿಯು ಇಂತಹ ನಮ್ಮ ನಿಮ್ಮ ಎಲ್ಲರ ಬಾಲ್ಯವನ್ನು ನೆನಪಿಸುತ್ತವೆ.ನೆನಪಿಸುವುದೇ ಕಾದಂಬರಿಯ ಯಶಸ್ಸು.
ನನಗೆ ತಿಳಿದಂತೆ ನಾಲ್ಕನೇ ತರಗತಿ ಓದುವಾಗಿನಿಂದಲೇ ಅಂದ್ರೆ ಸುಮಾರು ಹತ್ತನೇ ವಯಸ್ಸಿನಲ್ಲಿ ಈ ಭಾವಗಳು ಎಲ್ಲರ ಮನದಲಿ ಸುಕೋಮಲವಾಗಿ ಮೂಡಿದ್ದು ಬೆಳೆದು ದೊಡ್ಡವನಾದ ಮೇಲೆ ಹೊರಳಿ ನೋಡಿದಾಗ ನನ್ನ ಅನುಭವಕ್ಕೆ ಬಂದಿವೆ.ನಿಮಗೂ ನೆನಪಾಗಬಹುದು ನಿಮ್ಮ ಒಳಗೆ ಕಂಡುಕೊಳ್ಳಿ.ಆ ಬಾಲ್ಯವೇ ಹಾಗೇ.ನಮಗಿಷ್ಟವಾದ ವ್ಯಕ್ತಿ ಅಂದು ಯಾವ ಡ್ರೆಸ್ ತೊಟ್ಟಿದ್ದರು.ಅದರ ಬಣ್ಣ, ಕ್ಲಾಸಲಿ ಪಕ್ಕ ಕುಳಿತಾಗ ಅವರಿಂದ ಅಂದು ಹೊರ ಸೂಸಿದ ಆ ಘಮ ಇಂದಿಗೂ ನನಗೆ ನೆನಪಿವೆ.ಈಗಲೂ ಅಂತಹ ಇಷ್ಟವಾದ ವ್ಯಕ್ತಿಗಳ ಸಾಹಚರ್ಯ,ಅವರ ಭೇಟಿ,ಉಟ್ಟ ಬಟ್ಟೆಯ ಬಣ್ಣ,ಮಾತು,ಹೀಗೆ ಮೇಮೋರಿಯಲಿ ಶೇಖರಣೆ ಆಗುವವು.ಇದು ಅಂದಿನಿಂದ ಇಂದಿನವರೆಗೂ ನೆನಪಿಡುವ ಕಾರಣದಿಂದಾಗಿ ಲೇಖಕ ಆದವ ಬೇಕಾದಾಗ ಬೇಕಾದ್ದು ಬರೆಯಲು ಅವೆಲ್ಲ ಸಹಾಯಕ್ಕೆ ಬರುವವು.ಅದೊಂದು ಮೋಹಕ ಕಣಜ. ಬೇಕಾದಾಗ ಹೆಕ್ಕಬಹುದು. ಅಂಥವು ಈ ನಂರುಷಿಯ ಕಾದಂಬರಿಯಲಿ ಅಲ್ಲಲ್ಲಿ ಕಂಡು ಬಂದಿವೆ.
ತಮ್ಮ ಕುಂಬಾರ ಜನಾಂಗದ ಕಸುಬು,ಅವರ ಉಣಿಸು ತಿನಿಸು. ಚಹಾ, ಮಂಡಕ್ಕಿ,ಹೀಗೆ ಅಪಾರ ಜೀವನ ಪ್ರೇಮ. ತಮ್ಮ ಕಡೂರಿನ ಪರಿಚಯ,ಅಲ್ಲಿಯ ನೆಲ ಜಲ ಬದುಕು, ಚುನಾವಣೆ ರಾಜಕೀಯ ಹೀಗೆ ಎಲ್ಲವನ್ನೂ ಪರಿಚಯಿಸುತ್ತಾರೆ.
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ
ಮಾರಿಸಳು ಗಾಯಗಳ ನೀವಳಿಷ್ಟಗಳ
ಮೈಯ ನೀಂ ಮರೆಯೆ ನೂಕುವಳಾಗ ಪಾತಾಳಕೆ
ಪ್ರಿಯ ಪೂತನಿಯವಳು-ಮಂಕುತಿಮ್ಮ
ಎಂದು ಪ್ರೇಮವೆಂಬುದು ಒಂದು ಮಾಯೆ ಅಂದುಕೊಂಡರೆ ಮಾಯೇ.ಅದೇ ಸಾರ್ಥಕತೆ ಅಂದುಕೊಂಡು ತಲ್ಲಿನರಾದರೆ ಸಾರ್ಥಕತೆ,ಉರುಟಾ ಹೊಡೆದರೆ ಪಾತಾಳಕ್ಕೆ ತಳ್ಳುವಳು ಎಂಬ ಎಚ್ಚರಿಕೆ ನೀಡುವ ಇಂತಹ ಸಾಲುಗಳು ಅಲ್ಲಲ್ಲಿ ಕಾದಂಬರಿಯ ಪೋಷಣೆಗೆ ಪೂರಕವಾಗಿ ಚಿಂತನೆಗೆ ಹಚ್ಚುತ್ತವೆ.
ಹೀಗೆ ಡಿವಿಜಿ ಮುಂತಾದವರ ತನ್ನ ಓದಿನ ಸಾಲುಗಳನ್ನು ಉದಾಹರಿಸುತ್ತಾ ಕಾದಂಬರಿ ಪ್ರಣಯದ ಬೆನ್ನೇರಿ ಸಾಗುವ ಮಾರ್ಗದಲ್ಲಿ ಹಲವು ವಿಶೇಷತೆಗಳನು ಪರಿಚಯಿಸುವದು.ಆ ಕಾರಣಕ್ಕೆ ಈ ನಂರುಷಿಯ ಬಗ್ಗೆ ,ಆತನ ನೆನಪಿನಾಳದ ಬಗ್ಗೆ, ಗ್ರಹಿಕೆಯ ಬಗ್ಗೆ ಒಂದು ಅಭಿಮಾನ ಮೂಡಿಸುತ್ತದೆ. ಹೀಗೆ ಸರಳವಾಗಿ ಒಂದು ಕಾದಂಬರಿ ನಾನು ಬರೆಯಬಹುದಲ್ಲ ಎಂಬ ಭರವಸೆ ಓದಿ ಮುಗಿಸಿದಾಗ ಮೂಡಿಸುವದು ಈ ಕಾದಂಬರಿಯ ಸಾರ್ಥಕತೆ ಅಂತ ನಾನಂತೂ ಮನಸಾರೆ ನಮ್ಮ ನಂರುಷಿಗೆ ಅಭಿನಂದನೆಗಳು ಹೇಳುವೆ.ಇನ್ನೂ ಆಳವಾಗಿ ಚಿಂತಿಸುವ, ದಟ್ಟ ಅನುಭವ ಕಟ್ಟಿಕೊಡುವ, ಇದಕ್ಕಿಂತಲೂ ತುಸು ಹೆಚ್ಚಿನ ಕಲಾತ್ಮಕತೆಯನ್ನು ಒಳಗೊಂಡ ಕಾದಂಬರಿ ಖಂಡಿತಾ ನಂರುಷಿ ಬರಿಯುವ ನಂಬಿಕೆ ನನಗಿದೆ.ಆಲ್ ದಿ ಬೆಸ್ಟ್ ನಮ್ಮ ನಂರುಷಿ.
ಸಿದ್ಧರಾಮ ಹೊನ್ಕಲ್