ಅಂಕಣ ಬರಹ
ಗಜಲ್ ಲೋಕ
ನೆಗಳಗುಳಿಯವರ
ವಿಶಿಷ್ಟ ಛಾಪಿನ ಗಜಲ್ ಲೋಕ
.
.
“ಬಾಗಿಲೆ ಇಲ್ಲದ ಗೋಡೆಗಳಿಲ್ಲದ ಮನೆ ಕಟ್ಟುವುದಿದೆ ನನ್ನಾಸೆ
ನೆರೆ ಹೊರೆ ಬೇಡ ಕಾವಲುಗಾರರು ಬೇಡವೆ ಬೇಡ ಆಚೀಚೆ“
–ಮಿರ್ಜಾ ಗಾಲಿಬ್
ಅದೆನೋ ಕಾತುರ, ನಿಮ್ಮೊಂದಿಗೆ ಮಾತನಾಡಲು. ಅಂತೆಯೇ ನೇಸರನನ್ನು ಓವರ್ ಟೇಕ್ ಮಾಡಿ ಇಂದು ಭಾಷಾ ವೈಶಿಷ್ಟ್ಯದ ಗಜಲ್ ಗೋ ಒಬ್ಬರೊಂದಿಗೆ ಬಂದಿದ್ದೇನೆ, ನಿಮ್ಮೊಂದಿಗೆ ಅನುಸಂಧಾನಗೈಯಲು. …. ಏನಾಯ್ತು, ಯಾಕೆ ಈ ತೀಕ್ಷ್ಣ ನೋಟ… ಓಹೋ..! ಇನ್ನೂ ವಿಶ್ ಮಾಡಿಲ್ಲವೆಂದು ಯೋಚಿಸುತ್ತಿರುವಿರಾ.. ಅದ್ಹೇಗೆ ಮರೆಯುವೆ ಹೇಳಿ ನಿಮ್ಮನ್ನು.. ನನ್ನ ಎಲ್ಲ ಗಜಲ್ ಪ್ರೇಮಿಗಳಿಗೆ ಗಜಲ್ ಮಧುಶಾಲೆಯ ದ್ವಾರಪಾಲಕನ ಶುಭ ದಿನ…!!
ಜ್ಞಾನದಲ್ಲಿ ಇಲ್ಲ ಕಲೆಯ ನಿಜವಾದ ಮೌಲ್ಯಗಳು, ಅದು ಇರುವುದು ಕಲೆಯನ್ನು ಪ್ರೇರೆಪಿಸುವಂತಹ ಮನಸ್ಥಿತಿಗಳಲ್ಲಿ. ಈ ನೆಲೆಯಲ್ಲಿ ಕಾವ್ಯದ ಸಾರ್ಥಕತೆಯಿರುವುದು, ಅದನ್ನು ಓದುವಾಗಿನ ಸಂದರ್ಭಕ್ಕಿಂತ ಆನಂತರ ಅದು ಉಂಟುಮಾಡುವ ಪರಿಣಾಮದಲ್ಲಿ. ಕಾರಣ ಕಾವ್ಯದ ಸಾಧ್ಯತೆಗಳು ಅದರೊಳಗೆ ಇರುವಂತೆ, ಅದರ ಹೊರಗಡೆ ಸಾಂಸ್ಕೃತಿಕ ಪರಂಪರೆಯಲ್ಲಿಯೂ ಮೂಡಲ್ಪಟ್ಟಿರುತ್ತವೆ, ಮೂಡಬೇಕು ಕೂಡ! ಕವಿಯ ಅನುಭವವೆಂದರೆ ಅದು ಆಗಸದಿಂದ ಉದುರಿ ಬೀಳುವಂತದ್ದಲ್ಲ, ಕವಿ ಉದ್ಭವ ಮೂರ್ತಿಯಂತೂ ಅಲ್ಲವೇ ಅಲ್ಲ. ಅವರಿಗೆ ದೊರೆಯುವ ಅನುಭವ ಸಮಾಜದ ಮುಖ್ಯವಾಹಿನಿಯಿಂದಲೆ. ಈ ಕಾರಣಕ್ಕಾಗಿಯೇ ಒಂದು ಶ್ರೇಷ್ಠ ಕಲಾಕೃತಿ ಪ್ರಕಟವಾಗುವುದು ಪರಂಪರೆಯ ಮೂಸೆಯಲ್ಲಿ, ಅದು ಆಯ್ದುಕೊಂಡ ಭಾಷೆಯಲ್ಲಿ. ಭಾಷೆಯು ಆಲೋಚನೆಗೆ ಒಂದು ಹೊದಿಕೆಯಾಗಿದ್ದು, ಸಹೃದಯ ಓದುಗರೊಂದಿಗೆ ಅನುಷಂಗಿಕವಾಗಿ ಮುಖಾಮುಖಿಯಾಗುತ್ತದೆ. ಈ ಕಾರಣಕ್ಕಾಗಿಯೇ “ಯುಗದ ಭಾಷೆ ಎಂದೂ ಕಾವ್ಯ ಭಾಷೆಯಾಗಿಲ್ಲ” ಎಂದಿದ್ದಾರೆ ಆಂಗ್ಲ ಭಾಷೆಯ ಚಿಂತಕ. ಗ್ರೇ. ಕಾವ್ಯದ ಭಾಷೆ ತೀವ್ರ ಭಾವಗಳ ಸ್ವಚ್ಛಂದ ಪ್ರವಾಹ. ಅರ್ಥ ಎಂಬುದು ಒಂದು ನಿರ್ದಿಷ್ಟ ಸಮಯದಲ್ಲಿ ಬಳಕೆಯಾಗುವ ಪದಗಳ ಕ್ರಿಯೆ, ಪ್ರತಿಕ್ರಿಯೆಗಳ ಫಲಿತಾಂಶವೇ ಹೊರತು ಮೊದಲೇ ಸಿದ್ಧವಾಗಿರುವ ಅಂಶವಲ್ಲ. ಈ ಹಿನ್ನೆಲೆಯಲ್ಲಿ ಸರಳವಾದ ಪದಗಳು, ಸುಲಭವಾದ ಉಚ್ಚಾರಣೆ ಹಾಗೂ ಸಾಮಾನ್ಯವಾಗಿ ಸಂಧಿಪದಗಳಿಲ್ಲದ ಶೈಲಿಯನ್ನು ಮೈಗೂಡಿಸಿಕೊಂಡು ಬಂದಿರುವ ಗಜಲ್ ಸುಕುಮಾರಿ ನಮ್ಮ ಕಣ್ಣಮುಂದೆ ಬರುತ್ತಾಳೆ, ಬಂದಿದ್ದಾಳೆ. ಈ ಗಜಲ್ ಜೀವಂತಿಕೆಯಿಂದ ಕೂಡಿದ್ದು ರಸ, ಧ್ವನಿಗಳ ಆಗರವಾಗಿದೆ. ಜನಪದದಂತೆ ಕಾಲಾಂತರದಲ್ಲಿಯೂ ಲವಲವಿಕೆಯಿಂದ ಕೂಡಿರಲು ಇದುವೇ ಕಾರಣವೆಂದರೆ ತಪ್ಪಾಗಲಾರದು. ಈ ದಿಸೆಯಲ್ಲಿ ತಮ್ಮ ವಿಶಿಷ್ಟ ಪದಗಳ ಬಳಕೆಯಿಂದ ತಮ್ಮದೇ ಲೋಕವನ್ನು ಸೃಷ್ಟಿಸಿಕೊಂಡಿರುವ ಡಾ. ಸುರೇಶ್ ನೆಗಳಗುಳಿಯವರು ಗಜಲ್ ಕಾರವಾನ್ ನಲ್ಲಿ ವಿಶಿಷ್ಟವಾಗಿ ಕಾಣಿಸುತ್ತಾರೆ.
ಡಾ ಸುರೇಶ ನೆಗಳಗುಳಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಶ್ರೀ ತಿಮ್ಮಣ್ಣ ಭಟ್ಟ ಮತ್ತು ಶ್ರೀ ಮತಿ ಸಾವಿತ್ರಿ ಅಮ್ಮ ಇವರ ಕೊನೆಯ ಪುತ್ರರಾಗಿ ೧೯೫೭ ರಂದು ಜನನಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ- ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಡ್ಯನಡ್ಕ, ಜನತಾ ಪ್ರೌಢ ಶಾಲೆ ಅಡ್ಯನಡ್ಕ ಮತ್ತು ಪಿ.ಯು. ಅಭ್ಯಾಸವನ್ನು ಲೋಕ ಸೇವಾ ಸಂಸ್ಥೆಗಳು ಅಳಿಕೆಯಲ್ಲಿ ವ್ಯಾಸಂಗ ಮಾಡಿ ಆಯುರ್ವೇದ ಪದವಿಯನ್ನು ಉಡುಪಿಯಲ್ಲಿ, ಆಧುನಿಕ ವೈದ್ಯ ಪದವಿ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನಲ್ಲಿ ಪಡೆದಿದ್ದಾರೆ. ಪ್ರಸ್ತುತ ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ , ಚರ್ಮರೋಗಗಳ ವಿಶೇಷ ಕ್ಷಾರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಪಾದರಸದಂತಹ ವ್ಯಕ್ತಿತ್ವವುಳ್ಳ ನೆಗಳಗುಳಿಯವರು ಹಲವಾರು ವೈದ್ಯಕೀಯ ಸಮ್ಮೇಳನಗಳಲ್ಲಿ ಸಂಘಟಕರಾಗಿ ದುಡಿದು ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ರಾಜ್ಯ- ಅಂತರರಾಜ್ಯ ವೈದ್ಯ ವಿದ್ಯಾರ್ಥಿಗಳ ಪರೀಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ಹತ್ತಾರು ಕಡೆ ಶೈಕ್ಷಣಿಕ ಸೇವೆಯನ್ನೂ ಸಲ್ಲಿಸಿದ್ದಾರೆ. ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಹಲವಾರು ಸಂಘ, ಸಂಸ್ಥೆಗಳಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ನೇಮಕಗೊಂಡು ನಾಡಿಗೆ ಅವಿಸ್ಮರಣಿಯ ಸೇವೆಯನ್ನು ನೀಡಿದ್ದಾರೆ. ಹಲವಾರು ವೈದ್ಯ ಲೇಖನ ಹಾಗೂ ವೈದ್ಯಕೇತರ ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆಯೂ ಕೂಡ. “ಧೀರತಮ್ಮನ ಕಬ್ಬ” ಎಂಬ ಕಗ್ಗ ಮಾದರಿಯ ಮೂರು ಹನಿಗವನಗಳ ಸಂಕಲನ, (ಮೂರನೇ ಸಂಪುಟ ಮುಕ್ತಕಗಳು) “ಗೋ ಗೀತೆ” ಎಂಬ ಗೋವಿನ ಮಹತ್ವ ಸಾರುವ ನೂರು ಚುಟುಕಗಳ ಸಂಕಲನ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ಕವನಗಳನ್ನು ಸಂಗ್ರಹಿಸಿ “ತುಷಾರ ಬಿಂದು” ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಇವುಗಳೊಂದಿಗೆ “ಪಡುಗಡಲ ತೆರೆಮಿಂಚು”
“ನೆಗಳಗುಳಿ ಗಜಲ್ಸ್” ಎಂಬ ಗಜ಼ಲ್ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಈ ಗಜಲ್ ಸಂಕಲನಗಳು ವಿವಿಧ ಭಾಷೆಯ ಗಜಲ್ ಗಳನ್ನು ಹೊಂದಿರುವುದು ಶ್ರೀಯುತರ ಭಾಷಾ ಪ್ರೇಮ, ಭಾಷಾ ವೈಶಿಷ್ಟ್ಯವನ್ನು ಸಾರುತ್ತಿವೆ. ಕನ್ನಡ ಭಾಷೆಯ ಗಜಲ್ ಗಳೊಂದಿಗೆ ಆಂಗ್ಲ, ಮಲೆಯಾಳಿ, ಹಿಂದಿ, ತುಳು… ಭಾಷೆಗಳ ಗಜಲ್ ಗಳು ಹಾಗೂ ಮಂಗಳೂರು ಭಾಷೆ, ಹವ್ಯಕ ಭಾಷೆಯಂತಹ ಪ್ರಾದೇಶಿಕ ಭಾಷೆಗಳ ಗಜಲ್ ಗಳು ಇವರ ಲೇಖನಿಯಿಂದ ಮೂಡಿಬಂದಿರುವುದು ವಿಶೇಷನಿಯ!!
ಸದಾ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ, ತೊಡಗಿಸಿಕೊಂಡಿರುವ ಡಾ. ಸುರೇಶ್ ಅವರಿಗೆ ಹತ್ತು ಹಲವಾರು ಪ್ರಶಸ್ತಿ, ಸನ್ಮಾನಗಳು ; ಪುರಸ್ಕಾರಗಳು ಸಂದಿವೆ. ಹಲವು ಸಾಹಿತ್ಯಿಕ ಸಂಘಟನೆಗಳಲ್ಲಿ, ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ವೈದ್ಯಕೀಯ ರಂಗದಲ್ಲಿ ಮೂಡ ಬಿದ್ರೆಯ ವೈದ್ಯ ಸಂಘದ ಅಧ್ಯಕ್ಷ ಪದವಿ, ವೈದ್ಯ ಸನ್ಮಾನ. ಗಡಿನಾಡ ವೈದ್ಯ ರತ್ನ ಪ್ರಶಸ್ತಿ.. ಸೇರಿದಂತೆ ಸಾಹಿತ್ಯ ವಲಯದಲ್ಲಿ
ರಾಜ್ಯ ಮಟ್ಟದ ಶ್ರೇಷ್ಠ ಯುವ ಬರಹಗಾರ,
ಕಾವ್ಯ ವಿಭೂಷಣ, ರಾಜ್ಯ ಮಟ್ಟದ ಕೆ ಎಸ್ ನ ಕಾವ್ಯ ಸನ್ಮಾನ, ಭಕ್ತಿಗೀತೆ ರಚನೆಗೆ ಧರ್ಮಜ್ಯೋತಿ, ಹೊಯ್ಸಳ ರಾಜ್ಯ ಪ್ರಶಸ್ತಿ, ಮೈಸೂರಲ್ಲಿ ಪ್ರಜಾರತ್ನ, ಖಿದ್ಮಾ ಬಳಗದ ಕಥಾರ್ಸಿಸ್ ಕಾವ್ಯ ಪುರಸ್ಕಾರ, ರೋಸ್ಟಮ್ ಡೈರೀಸ್ ಬಳಗದ ಕಾವ್ಯ ಡಿಂಡಿಮ ಪುರಸ್ಕಾರ, ಹುಬ್ಬಳ್ಳಿಯ ಬಸವ ಸೇವಾ ಪ್ರಶಸ್ತಿ , ಮೂಡುಬಿದಿರೆಯ ಹವ್ಯಕ ಪುರಸ್ಕಾರ… ಇವುಗಳೊಂದಿಗೆ ಹಲವಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಯ ಗೌರವವೂ ಇವರಿಗೆ ಲಭಿಸಿವೆ. ಅವುಗಳಲ್ಲಿ ೨೦೨೦ ರ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ಅವೀಸ್ಮರಣಿಯವಾಗಿದೆ.
‘ಕಾವ್ಯಂ ಆನಂದಮಯ’ ಎನ್ನುವ ಪುರಾತನರ ಮಾತು ಗಜಲ್ ಮಿತಭಾಷಿಗೆ ಅಕ್ಷರಶಃ ಹೋಲುವಂತಿದೆ. ಇದು ಬ್ರಹ್ಮಾಸ್ವಾದ ಸದೃಶ್ಯ ಆನಂದವನ್ನು ಉಂಟು ಮಾಡುತ್ತದೆ, ಮಾಡಬೇಕು ಸಹ! ಈ ಆನಂದ ರಸಸ್ವಾದನದಿಂದ ಆಗುವುದು. ವಿಶೇಷವಾಗಿ ಈ ರಸವು ಪ್ರೇಮದೃಷ್ಟಿಯಿಂದಲೂ, ರಮಣೀಯತಾದರ್ಶನದಿಂದಲೂ ಪ್ರವಹಿಸುತ್ತದೆ. ಆನಂದ, ರಸ, ಪ್ರೇಮ, ರಮಣೀಯತೆಗಳು ಗಜಲ್ ಚಿರಯೌವ್ವನೆಯ ಚತುರ್ಮುಖಗಳಾಗಿವೆ. ಇದರಲ್ಲಿ ಆನಂದವು ದೇವ, ರಸವೂ ಜೀವ, ಪ್ರೇಮವು ಭಾವ ಹಾಗೂ ರಮಣೀಯತೆಯು ಜಗವಾಗಿ ಆವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಗಜಲ್ ಗೋ ಡಾ. ಸುರೇಶ್ ನೆಗಳಗುಳಿ ಅವರು ತಮ್ಮ ಗಜಲ್ ಗಳಲ್ಲಿ ತೀರದ ಬಯಕೆಗಳು, ಪ್ರೇಮದ ತುಡಿತ, ವಿರಹದ ತಳಮಳ, ಮಿಲನದ ಭಾವದೀಪ್ತಿ, ಬಡತನದ ಬೇಗೆ, ಹಸಿವು, ಐಷಾರಾಮಿ ಜೀವನ, ಮನೋಲ್ಲಾಸ, ತೃಪ್ತಿ-ಸಂತೃಪ್ತಿ-ಅತೃಪ್ತಿ, ಸಿರಿತನ, ಅಸಹನೆ… ಒಟ್ಟಾರೆ ದೈನಂದಿನ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಶ್ರೀಯುತರು ‘ಸುರೇಶ’, ‘ಈಶ’, ‘ನೆಗಳಗುಳಿ’,… ಎಂಬ ಹಲವಾರು ತಖಲ್ಲುಸ್ ನಾಮ ಬಳಸಿರುವುದು ಅವರ ಗಜಲ್ ಗಳಿಂದ ಮನನವಾಗುತ್ತದೆ.
“ಮಾವಿನ ಮರದಲ್ಲಿ ಗಿಣಿಗಳೆರಡು ಸರಸದಲ್ಲಿ ಜಗ ಮರೆತಿವೆ
ಒಲವಿನ ನಲ್ಲೆಯ ಬಿಸಿಯಪ್ಪುಗೆಯ ಸಮಯವೀಗ ಅನಿಸುತ್ತದೆ“
ಈ ಮೇಲಿನ ಷೇರ್ ಗಮನಿಸಿದಾಗ ಮನುಷ್ಯನ ಮನಸ್ಸು ಸದಾ ವಸಂತ ಋತುವಿನ ಜಪದಲ್ಲಿ ಇರುತ್ತದೆ ಎಂಬುದು ಮನವರಿಕೆಯಾಗುತ್ತದೆ. ಇಲ್ಲಿ ಗಜಲ್ ಗೋ ಅವರು ಗಿಳಿಗಳನ್ನು ಪ್ರೀತಿಯ ಪರಿಧಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಮಿಸ್ರಾ-ಎ-ಊಲಾ ದಲ್ಲಿಯ ‘ಭಾವ’ ಮಿಸ್ರಾ-ಎ-ಸಾನಿ ಯಲ್ಲಿ ಫಲ ನೀಡಿದೆ. ಪರಪಂಚ ಎಷ್ಟೇ ಗೀಜಗನ ಗೂಡಾದರೂ, ನೋವಿನ ಅಲೆಗಳಲ್ಲಿ ಮುಳುಗಿ ಹೋದರೂ ಮನುಷ್ಯ ಅವೆಲ್ಲವನ್ನೂ ಮರೆತು ಆನಂದದಲ್ಲಿ ತೇಲಾಡಬೇಕಾದರೆ ಅದಕ್ಕಿರುವ ಒಂದೇ ಒಂದು ಭಾವದ ಉಯ್ಯಾಲೆ ಎಂದರೆ ಅದು ನಲ್ಲ/ನಲ್ಲೆಯ ಬಾಹುಗಳ ಅಕ್ಷಯ ತೊಟ್ಟಿಲು! ಆ ತೊಟ್ಟಿಲಲ್ಲಿ ಇದ್ದರೆ ಬೇರೇನೂ ಬೇಕಾಗದು ಮನಸ್ಸಿಗೆ!!
ನಾವಿಂದು ಇಪ್ಪತ್ತೊಂದನೆಯ ಶತಮಾನದಲ್ಲಿ ಇದ್ದೇವೆ, ವೈಜ್ಞಾನಿಕ ಯುಗದಲ್ಲಿ ಜೀವಿಸುತಿದ್ದೇವೆ ಎಂಬುದು ಎಷ್ಟು ದಿಟವೋ ಅಷ್ಟೇ ಸತ್ಯ ಬೌದ್ಧಿಕತೆಯ ದೀಪದ ಕೆಳಗಡೆ ಅಂಧಕಾರ, ಅಜ್ಞಾನ, ಅಹಂಗಳ ಕತ್ತಲೆ ಆವರಿಸಿರುವುದು. ‘ಆಸೆಯೇ ದುಃಖಕ್ಕೆ ಮೂಲ” ಎನ್ನುವ ಗೌತಮ ಬುದ್ಧನ ವಿಚಾರಧಾರೆಯನ್ನು ಪೂಜಿಸುವ ಬುದ್ಧಿವಂತ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ನಿರಾಸಕ್ತಿ ತೋರಿಸುತ್ತಾ ಬಂದಿದ್ದಾನೆ. ಈ ಆಶಯವನ್ನು ನೆಗಳಗುಳಿಯವರ ಒಂದು ಷೇರ್ ನಲ್ಲಿ ಗಮನಿಸಬಹುದು.
“ಆಸೆಗಳ ಮಳೆ ಬರಲಿ ಧಾರಾಕಾರ ಎನುವ ಭಾವವು ಮನುಜಗೆ
ಮೀಸೆ ಮಣ್ಣಾಗಿ ಹೋದರೂ ಶೂರನೆನುವ ಹಾಸವು ಮನುಜಗೆ“
ಮನುಷ್ಯ ಸದಾ ಪ್ರತಿಷ್ಟೆ ಯ ಕೂಪದಲ್ಲಿ ಈಜಾಡಲು ಬಯಸುವ, ಬಯಸುತ್ತಿರುವ ಪ್ರಾಣಿ. ಕವಿ ಮಾತ್ರ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾನೆ ಎಂದು ನಂಬಲಾಗಿರುವ ಈ ಸಮಾಜದಲ್ಲಿ ಪ್ರತಿ ಮನುಷ್ಯನ ಅಂತರಂಗ ವಾಸ್ತವತೆಗಿಂತ ಭ್ರಮೆಯ ಉದ್ಯಾನವನದಲ್ಲಿ ಸುತ್ತಾಡುತಿರುತ್ತದೆ. ಈ ಕಾರಣಕ್ಕಾಗಿಯೇ ಅಲ್ವಾ “ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ” ಎನ್ನುವ ಗಾದೆಮಾತು ಇನ್ನೂ ನಮ್ಮೊಂದಿಗೆ ಜೀವಂತವಾಗಿರೋದು.
ಗಜಲ್ ಗಂಗೆ ಇಂದು ಸಹೃದಯ ರಸಿಕರ ಹೃದಯದಲ್ಲಿ ಸದಾ ಹರಿಯುತಿದ್ದಾಳೆ. ಕನ್ನಡ ಕಾವ್ಯ ಲೋಕವನ್ನು ಈ ಗಜಲ್ ಮತ್ತಷ್ಟು ಮೊಗೆದಷ್ಟೂ ಶ್ರೀಮಂತಗೊಳಿಸುತ್ತಿದೆ. ಈ ಸಿರಿತನದಲ್ಲಿ ಪ್ರತಿಯೊಬ್ಬ ಗಜಲ್ ಗೋ ಅವರ ಪಾಲಿದೆ! ಈ ದಿಸೆಯಲ್ಲಿ ಸದಾ ಹೊಸತನಕ್ಕೆ ತುಡಿಯುವ, ನವ ನವೀನ ಪದಗಳೊಂದಿಗೆ ಆಟವಾಡುವ ನೆಗಳಗುಳಿ ಅವರಿಂದ ಇನ್ನಷ್ಟೂ ಗಜಲ್ ಗಳು ರೂಪುಗೊಳ್ಳಲಿ ಎಂದು ಶುಭ ಕೋರುವೆ.
“ನಿನ್ನ ಮಧು ನೆನಪು ಬರುತಿತ್ತು ರಾತ್ರಿಯಿಡೀ
ಬೆಳದಿಂಗಳು ನೋಯಿಸುತಿತ್ತು ರಾತ್ರಿಯಿಡೀ“
–ಫೈಜ್ ಅಹ್ಮದ್ ಫೈಜ್
ಅಲ್ವಿದಾದ ಸಮಯ ಬಂತೆಂದು ಬೇಸರವೇ…ಬೇಸರಿಸದಿರಿ, ಮುಂದಿನ ವಾರ ಮತ್ತೆ ಬರುವೆ, ಮತ್ತೊಬ್ಬ ಗಜಲ್ ಗೋ ಅವರ ಪರಿಚಯದೊಂದಿಗೆ. ಅಲ್ಲಿಯ ತನಕ ತುಂಬು ಹೃದಯದ ಧನ್ಯವಾದಗಳು….
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ