ಅಂಕಣ ಬರಹ

ಗಜಲ್ ಲೋಕ

ಶೆಟ್ಟರ್ ಅವರ ಗಜಲ್ ನಿಶೆಯಲ್ಲೊಂದು ಸುತ್ತು

ನಮಸ್ಕಾರ ಗಜಲ್ ಮನಸುಗಳಿಗೆ…

ತಮ್ಮ ನಿರೀಕ್ಷೆಯನ್ನು ಹುಸಿ ಮಾಡದೆ, ಗಜಲ್ ಆಗಸದಿ ಹೊಳೆಯುತ್ತಿರುವ ‘ತಾರೆ’ಯೊಂದಿಗೆ ನಿಮ್ಮ ಮುಂದೆ ಹಾಜರಾಗಿದ್ದೇನೆ.‌ ತಮ್ಮ ತಾಳ್ಮೆಯೊಂದಿಗೆ ಸರಸವಾಡದೆ ‘ತಾರೆ’ಯನ್ನು ಪ್ರಸ್ತುತ ಪಡಿಸುವೆ. ಇನ್ನು ಮುಂದೆ ನೀವುಂಟು, ನಿಮ್ಮ ತಾರೆಯುಂಟು….!!

ಒಬ್ಬ ತತ್ವಶಾಸ್ತ್ರಜ್ಞ ವಿಚಾರಗಳ ಮೂಲಕ ಚಿಂತಿಸ್ತಾನೆ. ನಾನೊಬ್ಬ ಕಲಾವಿದ; ಯಾಕಂದ್ರೆ ಶಬ್ದಗಳ ಮೂಲಕ ನಾನು ಚಿಂತಿಸ್ತೇನೆ, I think through words”.

                                        –ಆಲ್ಬರ್ಟ್ ಕಾಮ್ಯೂ

            ‘ಸೃಜನಶೀಲತೆ’ ಎನ್ನುವುದು ಬೆಂದ ಭಾವಗಳ ಅನುಪಮವಾದ ಒಂದು ಮೂರ್ತ ರೂಪ. ಇದರಲ್ಲಿ ಕಲೆ-ಸಾಹಿತ್ಯ-ಸಂಗೀತಗಳ ಸಂಗಮವಾದ ಸಾಂಸ್ಕೃತಿಕ ಲೋಕವೂ ಸೇರುತ್ತದೆ. ಮನದೊಳಗಿನ ಭಾವಗಳ ತಾಕಲಾಟಕ್ಕೆ ಯಾವುದೇ ಮುಹೂರ್ತದ ಹಂಗು ಇರುವುದಿಲ್ಲ. ಪಂಚಭೂತಗಳಂತೆ ಸದಾ ಪ್ರವಹಿಸುತಿರುತ್ತದೆ, ಪ್ರವಹಿಸುತ್ತಿರಬೇಕು. ಪ್ರಸ್ತುತದಲ್ಲಿ ‘ಬರಹ’ ಬಯಸುವುದು ಶ್ರದ್ಧೆ, ಬದ್ಧತೆಯನ್ನೆ ಹೊರತು ಓಲೈಕೆಯ ಮಾಲೆಯನ್ನಲ್ಲ. ಬರೆಯಬೇಕು ಎಂದು ಕುಳಿತರೆ ‘ಕಲಾಕೃತಿ’ ಮೂಡುವುದಿಲ್ಲ, ಬದಲಿಗೆ ವರದಿಯೊಂದು ಸಿದ್ಧವಾಗಬಹುದು, ಸಿದ್ಧವಾಗುತ್ತದೆ. ಆದರೆ ‘ಕಾವ್ಯ’ ಎನ್ನುವ ಮಂಜಿನ ಹನಿ ಹೃದಯಕ್ಕೆ ಮುದ ನೀಡುವುದು ತನ್ನ ಅಂತರಂಗದ ಕಲರವದಿಂದ ಮಾತ್ರ!! ಇದು ಎಲ್ಲ ಭಾಷೆಯ ‘ಸರಸ್ವತಿ’ಗೂ ಅನ್ವಯಿಸುತ್ತದೆ. ‘ಗಜಲ್’ ಎನ್ನುವುದು ಕ್ಷೀರ ಸಾಗರದಿಂದ ಹೆಪ್ಪುಗಟ್ಟಿರುವ ಬೆಣ್ಣೆಯ ಮುದ್ದೆ. ಅದು ಪ್ರೀತಿಯ ಕಾವಿನಿಂದಲೆ ತುಪ್ಪ ಆಗುವುದು, ಅದರಿಂದಲೆ ಮೈ-ಮನವು ಉಲ್ಲಾಸಿತಗೊಳ್ಳುವುದು!! ಈ ಬೆಣ್ಣೆಯ ಹೈನುಗಾರಿಕೆಗೆ ನಮ್ಮ ಕನ್ನಡ ಮಣ್ಣು ‘ವಸಂತ ಕಾಲ’ವನ್ನೆ ಸೃಷ್ಟಿಸಿದೆ, ಸೃಷ್ಟಿಸುತ್ತಿದೆ. ಇಂದು ನಕ್ಷತ್ರಗಳೊಪಾದಿಯಲ್ಲಿ ‘ಗಜಲ್’ ಗಳು ಹಗಲಿರುಳೆನ್ನದೆ ವಾಙ್ಮಯ ಬಾಂದಳದಲ್ಲಿ ಮಿನುಗುತ್ತಿವೆ.‌ ಹಲವಾರು ಗಜಲ್ ಗೋ ರವರು ಗಜಲ್ ಉದ್ಯಾನವನವನ್ನು ನಿರ್ಮಿಸಿ ಮಾಲಿಯಂತೆ ಸುಮ ಬೀರುವ ಲತೆ-ಬಳ್ಳಿಗಳನ್ನು ಬೆಳೆಸುತಿದ್ದಾರೆ. ಅಂತಹ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಸಂಖ್ಯಾತ ಗಜಲ್ ಗೋ ಅವರಲ್ಲಿ ಶ್ರೀಮತಿ ನಿರ್ಮಲಾ ಶೆಟ್ಟರ್ ಅವರೂ ಕೂಡ ಒಬ್ಬರು!!

     ‘ಪುಲಿಗೆರೆ’ಗೆ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟವಾದ ಸ್ಥಾನವಿದೆ.‌ ಅಂತಹ ‘ಪುಲಿಗೆರೆ’ಯೆ ಇಂದಿನ ‘ಲಕ್ಷ್ಮೇಶ್ವರ’. ಇದು ಗದಗ್ ಜಿಲ್ಲೆಯಲ್ಲಿಯ ಐತಿಹಾಸಿಕ ನಗರ. ಇಂತಹ ಅನುಪಮ ಪರಂಪರೆಯೊಂದಿರುವ ತಾಣದಲ್ಲಿ 1975ರ ಅಗಸ್ಟ 15 ರಂದು ನಿರ್ಮಲ ಶೆಟ್ಟರ್ ಅವರು ಜನಿಸಿದ್ದಾರೆ. ಇಂತಹ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದ ಶೆಟ್ಟರ್ ಅವರು ತಮ್ಮ ಪ್ರೌಢಶಾಲಾ ದಿನಗಳಿಂದಲೆ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಗದಗ ಜಿಲ್ಲೆಯಾದ್ಯಂತ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ, ಸಾಹಿತ್ಯಿಕ ವಾತಾವರಣವನ್ನು ತಮ್ಮೊಳಗೆ ನಿರ್ಮಿಸಿಕೊಳ್ಳುತ್ತಲೆ ಲಕ್ಷ್ಮೇಶ್ವರದಲ್ಲಿ ಬಿ.ಎ. ಪದವಿಯನ್ನು ಪಡೆದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. (ಹಿಂದಿ) ಸ್ನಾತಕೋತ್ತರ ಪದವಿಯನ್ನು ಮುಗಿಸಿ ; ನಂತರ ವೃತ್ತಿಗಾಗಿ ಬಿ.ಇಡಿ ಪದವಿಯನ್ನು (ಹಿಂದಿ) ಪೂರೈಸಿದ್ದಾರೆ.‌ ಬಾಲ್ಯದಿಂದಲೆ ಬರಹದಲ್ಲಿ ಅಭಿರುಚಿಯನ್ನು ಹೊಂದಿದ್ದು, ಕಥೆಯನ್ನು ಬರೆದು ಅನುಪಮಾ ನಿರಂಜನ ಬಹುಮಾನ, ಪ್ರಜಾವಾಣಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದು ಗದ್ಯ ಪ್ರಕಾರದಲ್ಲಿಯೂ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಬೇರೆ ಬೇರೆ ವಿಷಯಗಳನ್ನು ಕುರಿತು ಅನೇಕ ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಇವುಗಳೊಂದಿಗೆ ವಿಮರ್ಶೆ, ಅನುವಾದ, ವ್ಯಾಖ್ಯಾನ..ಮುಂತಾದ ಅಭಿವ್ಯಕ್ತಿ ಮಾರ್ಗಗಳಲ್ಲಿಯೂ ನಿರಾಯಾಸವಾಗಿ ಕ್ರಮಿಸಿದ್ದಾರೆ, ಕ್ರಮಿಸುತಿದ್ದಾರೆ. ಆದರೆ ಇವರನ್ನು ಸಾಹಿತ್ಯ ವಲಯ ಕವಯಿತ್ರಿ ಎಂದೇ ಗುರುತಿಸಿದೆ!! “ಬೆಳಕಿನೊಡನೆ ಪಯಣ”, “ಸರಹದ್ದುಗಳಿಲ್ಲದ ಭೂಮಿಯ ಕನಸು” ಎಂಬ ಎರಡು ಕವನ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ನಾಡಿನಾದ್ಯಂತ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನವನ್ನು ಮಾಡಿ ಸಹೃದಯರ ಮನವನ್ನು ಗೆದ್ದಿದ್ದಾರೆ. “ನಿನ್ನ ಧ್ಯಾನಿಸಿದ ಮೇಲೂ” ಎಂಬುದು ಶ್ರೀಯುತರ ಗಜಲ್ ಸಂಕಲನವಾಗಿದೆ. ‘ಬರವಣಿಗೆ ಎಂಬುದು ಜವಾಬ್ದಾರಿಯ ಕೆಲಸ’ ಎನ್ನುವ ನಿರ್ಮಲಾ ರವರು ಸದ್ಯ ಹಿಂದಿ- ಕನ್ನಡ ಕಥೆಗಳ ಅನುವಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಹತ್ತು ಹಲವಾರು ಸಂಘ ಸಂಸ್ಥೆಗಳು ಅಭಿಮಾನದಿಂದ ಸನ್ಮಾನಿಸಿ ಗೌರವಿಸಿವೆ. ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ‘ಮುದ್ದಣ್ಣ’, ‘ರತ್ನಾಕರವರ್ಣಿ’, ‘ಅನಾಮಿಕ ದತ್ತಿ ಪ್ರಶಸ್ತಿ’, ಹಾಗೂ ಸೇಡಂ ನಿಂದ ಕೊಡಮಾಡುವ ‘ಅಮ್ಮ ಪ್ರಶಸ್ತಿ’, ಸಂದಿವೆ.

            ಮನುಷ್ಯನ ದೇಹದಲ್ಲಿ ‘ಹೃದಯ’ಕ್ಕೆ ಅನುಪಮವಾದ ಸ್ಥಾನವಿದೆ. ಆ ಹೃದಯದ ಹೊರತು ದೇಹಕ್ಕೆ ಯಾವುದೇ ಬೆಲೆಯಿಲ್ಲ. ಈ ನೆಲೆಯಲ್ಲಿ ‘ಕಾವ್ಯ’ ಇಡೀ ಸಾಹಿತ್ಯದ ಜೀವಾಳವೆಂದೆ ಹೇಳಲಾಗುತ್ತದೆ. ಕಾವ್ಯವೆಂದರೆ ಹೃದಯಗಳ ಪಿಸುಮಾತು, ಹೃದಯವೆಂದರೆನೆ ಪ್ರೀತಿಯ ಆಗರ ; ಪ್ರೀತಿಯೆಂದರೆ ಮನುಕುಲದ ಬದುಕು. ಈ ಕಾರಣಕ್ಕಾಗಿಯೇ ‘ಕಾವ್ಯ’ ಜನಮಾನಸದ ನಾಲಿಗೆಯ ಮೇಲೆ ಇಂದಿಗೂ ನಲಿಯುತಿದೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಗಜಲ್. ಈ ಗಜಲ್ ನ ಹಲವು ಅಶಅರ್ ಪಾಮರರಿಂದ ಪಂಡಿತರ ಬಾಯಿಯಲ್ಲಿ ‘ಜನಪದ’ದಂತೆ ಜೀವಂತ ಇವೆ. ಈ ದಿಸೆಯಲ್ಲಿ ‘ಗಜಲ್’ ಎಂದರೆ ಜನಜೀವನದ ನಾಡಿಮಿಡಿತವಾಗಿದೆ. ಸಹೃದಯ ರಸಿಕರ ಮನದಂಗಳದಲ್ಲಿ ಜೋಕಾಲಿ ಆಡುತ್ತಿರುವ ಸಿಂಡರೇಲಾ ಅಂದರೆ ಅದು ನಮ್ಮ ಗಜಲ್. ಈ ಮಾರ್ಗದಲ್ಲಿ ಶ್ರೀಮತಿ ನಿರ್ಮಲ ಶೆಟ್ಟರ್ ಅವರ ಗಜಲ್ ಗಳು ಖುಷಿ ನೀಡುವ ಸಂಗತಿಗಳಾಗಿ, ಓಲೈಸುವ ಪ್ರೇಮಿಯಾಗಿ, ನೋವಿನಲ್ಲಿ ಸಂತೈಸುವ ಹಾಗೂ ಸಂಭಾಳಿಸುವ ಆಪ್ತ ಸಂಗಾತಿಯಾಗಿ ನಾಡಿನಾದ್ಯಂತ ಬೇರೂರಿವೆ.

ಜಾತಿ ಮತ ಕೋಮುಗಳ ಗಲಭೆ ನಮ್ಮದೇ ಸೃಷ್ಟಿ

ಏನು ನೆಪ ಮಾಡಿದರು ಏನನ್ನೊ ಅರಿತೇ ಸಿಗಬೇಕಿದೆ

ಮನುಷ್ಯ ಇನ್ನಿತರ ಪ್ರಾಣಿಗಳಿಗಿಂತಲೂ ಭಿನ್ನವಾಗಿರೋದು ಬೌದ್ಧಿಕ ವಿಕಸನದಿಂದಾಗಿ. ಹಲವು ಬಾರಿ ಈ ಬೌದ್ಧಿಕತೆಯೆ ನಿಸರ್ಗದ ವಿರುದ್ಧ ಹೆಜ್ಜೆ ಇಡಲು ಕಾರಣವಾಗುತ್ತಿರುವುದು ದುರಂತ. ಜಾತಿ-ಮತ ಎಂಬ ನೇಣುಗಂಬದ ಹಗ್ಗವನ್ನು ಹೊಸೆದವನು ಮನುಷ್ಯನೆ. ಅಂತೆಯೇ ಇಲ್ಲಿ ಗಜಲ್ ಗೋ ಅವರು ಜಾತಿ, ಮತಗಳ ಬೆಂಕಿ ಹಚ್ಚಿ ಕೋಮುಗಳ ಗಲಭೆ ಸೃಷ್ಟಿಸಿ ಮೈ ಕಾಯಿಸಿಕೊಳ್ಳುವವರು, ಮೈ ಸುಟ್ಟುಕೊಳ್ಳುತ್ತಿರುವವರೂ ನಾವೆ ಎಂದು ಹೇಳಿದ್ದಾರೆ. ಈ ಎಲ್ಲ ಅವಾಂತರಗಳನ್ನು ದಾಟಿ ವಿಶ್ವಮಾನವರಾಗಿ ಬೆಳೆಯಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ. ಸಂಕುಚಿತ ಪ್ರೀತಿಯನ್ನೂ ಮೀರಿದ ಸಾಮಾಜಿಕ ಬದ್ಧತೆ, ಕಳಕಳಿ ಅಗತ್ಯವಿದೆ ಎಂಬ ಮನುಜಮತದ ಸಂದೇಶ ಈ ಷೇರ್ ನಲ್ಲಿದೆ.‌

     ಇಂದು ನಾವು ಜಾಗತಿಕ, ವೈಜ್ಞಾನಿಕ ಯುಗದಲ್ಲಿ ಜೀವಿಸುತಿದ್ದೇವೆ ಎಂಬುದು ಹಲವು ಬಾರಿ ಒಣ ಹೆಮ್ಮೆಯ ಮಾತು ಎಂದನಿಸದೆ ಇರದು. ಇಂದಿಗೂ ಮನುಷ್ಯನ ಮನಸ್ಸು ಹೊಯ್ದಾಟ, ತೊಳಲಾಟ, ಅಶಾಂತಿ, ಸ್ವಾರ್ಥ, ದ್ವಂದ್ವಗಳ ಸಂತೆಯಾಗಿದೆ.‌ ನಡೆ-ನುಡಿಯಂತೂ ರೈಲು ಹಳಿಗಳಂತೆ ಸಮಾನಾಂತರ ರೇಖೆಯಲ್ಲಿ ಸಾಗುತ್ತಿವೆಯೆ ಹೊರತು ಒಂದೆಡೆ ಸೇರುತ್ತಲೆ ಇಲ್ಲ!! ಇದನ್ನು ಶೆಟ್ಟರ್ ಅವರ ಒಂದು ಷೇರ್ ನ ಮೂಲಕ ಅನುಸಂಧಾನ ಮಾಡಬಹುದು.

ಹಗಲು ರಾತ್ರಿ ಎಲ್ಲೆಂದರಲ್ಲಿ ದೇವರಲಿ ಬೇಡುವರು ನಾವು

ಬಾಗಿಲೆದರು ಬಂದವರಿಗೆ ಭಿಕ್ಷುಕರೆಂದು ಕಳಿಸುವರು ನಾವು

ಈ ಇಬ್ಬಂದಿತನ ಮನುಷ್ಯನಲ್ಲಿ ಬಿಟ್ಟು ಬೇರೆ ಯಾರಲ್ಲಿ ಇರಲು ಸಾಧ್ಯ..? ಬಡತನದ ಬೇಗೆಯಲ್ಲಿ ಬೆಂದು ತುತ್ತು ಅನ್ನಕ್ಕಾಗಿ ಮನೆ ಮನೆ ತಿರುಗುವ ಭಿಕ್ಷುಕರನ್ನು ಕಂಡು ಮೂಗು ಮುರಿಯುವ, ಅಸಹ್ಯ ಪಟ್ಟುಕೊಳ್ಳುವ ಎಷ್ಟೋ ಜನರು ಕಂಡ ಕಂಡ ದೇವರಿಗೆ ಕೈ ಮುಗಿಯುತ್ತ, ತಮ್ಮ ಅಹವಾಲು ಅರ್ಪಿಸುತ್ತ ತಾವೂ ಕ್ಲಾಸಿಕಲ್ ಭಿಕ್ಷುಕರು ಎಂಬುದನ್ನು ಮರೆಯುತ್ತಿರುವುದನ್ನು ಈ ಷೇರ್ ಸಶಕ್ತವಾಗಿ ಹಿಡಿದಿಟ್ಟಿದೆ. ಇದು ಗಜಲ್ ಗೋ ಅವರ ಜೀವನ ಶ್ರದ್ಧೆ, ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುತ್ತದೆ.

          ಶ್ರೀಮತಿ ನಿರ್ಮಲ ಶೆಟ್ಟರ್ ಅವರ ಗಜಲ್ ಗಳು ತಳಮಳದ, ಕಳವಳದ, ವಿಷಾದದ, ನೋವಿನ ಉದ್ಯಾನವನದಲ್ಲಿ ಸಹಜವಾಗಿ ಜೀವ ತಳೆದು, ನಲಿಯುತ್ತ, ಹಾಡುತ್ತ ತೇಲಿಬಂದ ಪತಂಗಗಳಾಗಿವೆ. ಉಸುರಿನ ಒಳಸುಳಿಗಳ ಒಸರಿದ ಹಾಡು ಇವರ ಗಜಲ್ ನ ಸ್ಥಾಯಿ ಭಾವವಾಗಿದೆ. ಕನವರಿಕೆಯನ್ನು ಗಜಲ್ ಆಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಶ್ರೀಯುತರಿಂದ ಇನ್ನೂ ಹತ್ತು ಹಲವಾರು ಗಜಲ್ ಗಳು ರೂಪುಗೊಳ್ಳಲಿ, ಸಂಕಲನದ ಚೆಹರೆಯಲ್ಲಿ ಪ್ರಕಟಗೊಂಡು ಸಹೃದಯರ ಮನ ತಣಿಸಲಿ ಎಂದು ಶುಭ ಕೋರುತ್ತೇನೆ.

ನಾನು ಮನುಷ್ಯ ಸ್ವಭಾವದವನಾಗಿದ್ದೇನೆ, ಮನುಷ್ಯನಾಗಿ ಹುಟ್ಟಿದ್ದೇನೆ 

ನನಗೆಷ್ಟು ಸಾಧ್ಯವೋ ಅಷ್ಟು ಪಾಪಮಾಡಬಲ್ಲೆ ಎನ್ನುವ ಅಭಿಮಾನ ನನಗಿದೆ

                                –ಮಿರ್ಜಾ ಗಾಲಿಬ್

          ಮುಂದಿನ ವಾರ ಅಂದರೆ ಗುರುವಾರ, ಮತ್ತೊಬ್ಬ ತಮ್ಮ ಕುತೂಹಲ ತಣಿಸುವ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುವೆ. ಅಲ್ಲಿಯವರೆಗೂ ತುಂಬು ಹೃದಯದ ಧನ್ಯವಾದಗಳು…


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top