ಗಜಲ್
ದೇವರಾಜ್ ಹುಣಸಿಕಟ್ಟಿ


ಮಳೆಯಾಗಿಯಾದರೂ ಇರುಳೆಲ್ಲ ಸುರಿದು ಬಿಡು ಒಮ್ಮೆ
ಕಂಬನಿಯಾಗಿಯಾದರೂ ಕಣ್ಣಿಂದ ಹರಿದು ಬಿಡು ಒಮ್ಮೆ
ನೆನಪುಗಳಿಗೆ ಹೃದಯದ ಪ್ರತಿ ಬಡಿತವನೆ ಚೆಂದಾ ಕಟ್ಟಿರುವೆ ನಾನು
ಕನಸಾಗಿಯಾದರೂ ಕಣ್ಣ್ ರೆಪ್ಪೆಯಲಿ ಸುಳಿದು ಬಿಡು ಒಮ್ಮೆ
ಏಕಾಂತದಲ್ಲಿ ನೆಟ್ಟ ಮೈ ಮನದ ಹೂವ್ ಬಳ್ಳಿ ಹೂವ್ ಬಿಟ್ಟಿತೇ..?
ತಂಗಾಳಿಯಾಗಿಯಾದರೂ ಒಂದು ಸಂಜೆ ಸ್ಪರ್ಶಿಸಿ ಕರೆದು ಬಿಡು ಒಮ್ಮೆ
ಕಣ್ಣುಗಳು ಕೂಡುವಲ್ಲಿಗೆ ಹೃದಯ ಬೆರೆತಿದ್ದವು ಅವುಗಳ ತಪ್ಪೇನಿತ್ತು…?
ಮರೀಚಿಕೆಯಾಗಿಯಾದರೂ ಮೈ ಮರೆತಿರುವಾಗ ಬಂದು ಮೆರೆದು ಬಿಡು ಒಮ್ಮೆ
ದೇವನ ಹೃದಯದರಮನೆಯು ಬಟಾ ಬಯಲು ಗೊತ್ತೇ ನಿನಗೆ..?
ದೀವಿಗೆಯಾಗಿಯಾದರೂ ಬಯಲ ನೆಲದಿ ಬೆಳಕ ಹನಿದು ಬಿಡು ಒಮ್ಮೆ
ಹೃದಯ ಸ್ಪರ್ಶಿ ಗಜಲ್ .