ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ (1831-1897)

ಭಾರತದಲ್ಲಿ ಬೇರುಬಿಟ್ಟಿರುವ ಜಾತಿ ಮತ್ತು ವರ್ಗ ತಾರತಮ್ಯಗಳು ಅಮಾನವೀಯ ವಾತವರಣವನ್ನು ಸೃಷ್ಟಿಸಿವೆ. ದಲಿತರು, ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತರು ಹೀಗೆ ಶೋಷಿತ ಸಮುದಾಯಗಳನ್ನು ನ್ಯಾಯೋಚಿತವಾದ ಹಕ್ಕು ಮತ್ತು ಸವಲತ್ತಗಳಿಂದ ವಂಚಿಸುತ್ತಿರುವದು ಎಲ್ಲಾ ಕಾಲಕ್ಕೂ ಸಾಗಿಕೊಂಡು ಬಂದಿದೆ. ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಜಾತಿವಿರೋಧಿ ಆಂದೋಲನದಲ್ಲಿ ಕಾಣಿಸಿಕೊಂಡ ಏಕೈಕ ಮಹಿಳೆ ಸಾವಿತ್ರಿಬಾಯಿ ಪುಲೆ. ಪತಿ ಜ್ಯೋತಿಬಾ ಪುಲೆ ಅವರ ಹೋರಾಟಕ್ಕೆ ಆಸರೆಯಾಗಿ ನಿಂತ ಸಾವಿತ್ರಿಬಾಯಿ, ಲೇಖಕಿಯಾಗಿ, ಶಿಕ್ಷಕಿಯಾಗಿ ಅದಕ್ಕಿಂತ ಮುಖ್ಯವಾಗಿ ಸನಾತನ ನಂಬಿಕೆಗಳಿಂದ ವಿಜೃಂಭಿಸುತ್ತಿದ್ದ ಆ ಕಾಲದ ಸಾಮಾಜಿಕ ಹೋರಾಟಗಾರ್ತಿಯಾಗಿ ದಮನಿತರ ಬದುಕಿನಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿದವಳು. ಮೇಲ್ವರ್ಗದ ನಿಂದನೆ, ಬೆದರಿಕೆಗಳನ್ನು ಸಾವಿತ್ರಿಬಾಯಿ ಆತ್ಮ ಬಲದಿಂದಲೇ ಎದುರಿಸಿದಳು. ಜ್ಯೋತಿಬಾ ಪುಲೆಯವರ ಒಡನಾಡಿಯಾಗಿ ಮಾತ್ರವಲ್ಲ, ಸ್ವತಂತ್ರ ವ್ಯಕ್ತಿತ್ವದ ಅಚಲ ಹೋರಾಟಗಾರ್ತಿ ಸಾವಿತ್ರಿಬಾಯಿ ಪುಲೆ, ಗಂಡನ ಮರಣಾನಂತರ ಸತ್ಯಶೋಧಕ ಸಮಾಜವನ್ನು ದಿಟ್ಟವಾಗಿ ಮುನ್ನಡೆಸಿದಳು.

ಖಂಡೋಜಿ ನೇವಸೆ ಪಾಟೀಲರ ಹಿರಿಯ ಮಗಳಾಗಿ ಸಾವಿತ್ರಿಬಾಯಿ ಪುಲೆ 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂನಲ್ಲಿ ಜನಿಸಿದರು. ಆ ಕಾಲದಲ್ಲಿ ಶಾಲೆಗಳು ಇರಲಿಲ್ಲವಾದ್ದರಿಂದ ಶಿಕ್ಷಣ ದೊರೆಯಲಿಲ್ಲ. ಆಗ ಜಾರಿಯಲ್ಲಿದ್ದ ಬಾಲ್ಯವಿವಾಹಕ್ಕೆ ಸಾವಿತ್ರಿಬಾಯಿಯು ಕೂಡ ಒಳಗಾಗಿದ್ದರು. ತನ್ನ 9ನೇ ವಯಸ್ಸಿನಲ್ಲಿ ತನ್ನಗಿಂತಲೂ 4 ವರ್ಷಹಿರಿಯರಾದ ಜೋತಿಬಾ ಪುಲೆಯವರೊಂದಿಗೆ ವಿವಾಹವಾಗಿತ್ತು. ಜೊತಿಬಾ ಫುಲೆ ಅಕ್ಷರ ಕಲಿಯದೇ ಇದ್ದ ತನ್ನ ಬಾಳ ಸಂಗಾತಿಯನ್ನು ತಾನೇ ಶಿಕ್ಷಕನಾಗಿ ಅಕ್ಷರ ಕಲಿಸಿದರು. ಸಾವಿತ್ರಿಬಾಯಿ ಪುಲೆಗೆ ಮನೆಯ ಮೊದಲ ಪಾಠಶಾಲೆಯಾಯಿತು.

ಸಾವಿತ್ರಿ ಬಾಯಿ ಮನೆಯಲ್ಲಿಯೇ ಅಕ್ಷರ ಕಲಿತು, ಓದಿಬರೆಯುವಂತಾದರೆ ಅತ್ತ ಜೋತಿಬಾ ಪುಲೆಯವರು ಪುಣೆಯ ಸ್ಕಾಟಿಷ್ ಮಿಷನ್ ಸ್ಕೂಲಿನಲ್ಲಿ ಓದು ಮುಂದುವರಿಸಿದರು. ಅನಂತರ ಸದಾಶಿವ ಗೋವಂದೆ, ವಾಳ್ವೇಕರ್ ಮತ್ತಿತರ ಗೆಳೆಯರೊಂದಿಗೆ ಸೇರಿ ಅಕ್ಷರಕಲಿಯದೇ ಇರುವಂತಹ ಹುಡುಗಿಯರಿಗೆ ಶಾಲೆ ಶುರುಮಾಡುವ, ಅಕ್ಷರ ಕಲಿಯಲಾರದ ಅಸ್ಪøಶ್ಯರಿಗೂ ಶಾಲೆ ತೆರೆಯುವ ಆಶಯ ಹುಟ್ಟಿತು. ಅವರ ಕನಸುಗಳಿಗೆ ಪೂರಕವಾಗಿ ಆಗ ಮಹಾರಾಷ್ಟ್ರದಲ್ಲಿ ಸುಧಾರಣೆಯ ಗಾಳಿ ತೀವ್ರವಾಗಿ ಬೀಸುತ್ತಿತ್ತು. ಪಾಶ್ಚಾತ್ಯ ಶಿಕ್ಷಣಕ್ಕೆ ತೆರೆದುಕೊಂಡ ಮಧ್ಯಮವರ್ಗದ ಕೆಲವು ತರುಣರು ಭಾರತೀಯ ಸಮಾಜದ ಮಹಿಳೆಯರಗೆ ತೋರಿಸುತ್ತಿರುವ ತಾರತಮ್ಯದ ಬಗೆಗೆ ದನಿಯೆತ್ತಿದ್ದರು. ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿ ಪದ್ಧತಿ, ದೇವದಾಸಿ ಪದ್ಧತಿಗಳನ್ನು ವಿರೋಧಿಸಿ ಬರಹ-ಹೋರಾಟ ಶುರಾವಾಗಿತ್ತು. ಭಾರತೀಯ ಮಹಿಳೆಯರನ್ನು ಕಾಡುವ ಸಮಸ್ಯೆಗಳ ಗುರುತಿಸಿ ಪುರುಷರು ದನಿಯತ್ತತೋಡಗಿದ್ದರು. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಸಾರ್ವಜನಿಕ ಶಿಕ್ಷಣದ ಅವಶ್ಯಕತೆ, ಅದರಲ್ಲೂ ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಏನೆಬುಂದು ಅರಿವಾಗತೊಡಗಿತ್ತು. ನಿಧಾನವಾಗಿ ಶಾಲೆಗಳು ಶರುವಾಗತೊಡಗಿದ್ದವು.

ಅನಕ್ಷರಸ್ಥ ವಧುವಾಗಿ ಫುಲೆ ಮನೆಗೆ ಕಾಲಿಟ್ಟ 9 ವರ್ಷದ ಪಟ್ಟ ಸಾವಿತ್ರಿ 17ವರ್ಷ ತುಂಬುವುದರಲ್ಲಿ ಇತರ ಹೆಣ್ಣುಮಕ್ಕಳಿಗೂ ಅಕ್ಷರ ಕಲಿಸುವ ಮಹಾದಾಸೆ ಹೊತ್ತು ಶಿಕ್ಷಕ ತರಬೇತಿ ಮುಗಿಸಿ ಭಾರತದ ಮೊತ್ತಮೊದಲ ಶಕ್ಷಿಕಿಯಾಗಿ ಹೊರಹೊಮ್ಮಿದರು. ಶಿಕ್ಷಕಿಯ ತರಬೇತಿ ಮುಗಿಸಿ ಸಾವಿತ್ರಿಬಾಯಿ ಒಂಬತ್ತು ವಿದ್ಯಾರ್ಥಿಗಳೊಂದಿಗೆ 1849ರಲ್ಲಿ ಮೊದಲ ಶಾಲೆ ಪುಣೆಯ ಭಿಡೆವಾಡಿಯಲ್ಲಿ ಶುರುಮಾಡಿದರು. ಅದರಲ್ಲಿ ದಲಿತ, ಮುಸ್ಲಿಂ ಹೆಣ್ಣುಮಕ್ಕಳೇ ಹೆಚ್ಚಾಗಿ ಇದ್ದರು.

ಸಾವಿತ್ರಿಬಾಯಿಯು ಜೋತಿಬಾರೊಡನೆ ಸೇರಿಕೊಂಡು ಒಂದಾದಮೇಲೊಂದರಂತೆ ಸರಣೆ ಶಾಲೆಗಳನ್ನು ತೆರೆದರು. ಶಾಲೆಗೆ ಬರುವ ಮಕ್ಕಳ ಕಲಿಕೆಗೆ ಅವಶ್ಯವಾದ ಭೋಧನೆ ಸಾಮಗ್ರಿಯಿಂದ ಹಿಡಿದು ಎಲ್ಲದರ ಮೇಲುಸ್ತುವಾರಿ ವಹಿಸಿಕೊಂಡರು. ಧಾರ್ಮಿಕ-ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ಸಾವಿತ್ರಿ ತಾನು ಮಾಡುತ್ತಿರುವ ಕೆಲಸವನ್ನು ವ್ರತವೆಂದೇ ತಿಳಿದು ಅಚಲ ಶ್ರದ್ಧೆಯನ್ನಿಟ್ಟುಕೊಂಡು ದಣಿವರಿಯದೆ ದುಡಿದರು.ಆದರೆ ಹೆಣ್ಣುಮಕ್ಕಳಿಗೆ ಮನೆಗೆಲಸ, ವ್ರತಕತೆ, ಹಾಡುಹಸೆ, ಪುರಾಣಪಠಣಗಳನ್ನು ಹೇಳಿಕೊಡುವುದು ಬಿಟ್ಟು ಅಕ್ಷರ ವಿಚಾರಗಳ ಕಿಡಿ ಹೊತ್ತಿಸುವುದು ಸಂಪ್ರದಾಯವಾದಿಗಳಿಗೆ ಸುತಾರಂ ಇಷ್ಟವಾಗಲಿಲ್ಲ. ಅವರು ಸಾವಿತ್ರಿಗೆ ನಾನಾ ತೆರೆನಾದÀ ಹಿಂಸೆ ಕೊಡಲು ಸುರುಮಾಡಿದರು. ಶಾಲೆಗೆ ಹೋಗುವಾಗ ಪ್ರತಿದಿನ ಹಿಂದಿನಿಂದ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿದ್ದರು. ಅವಮಾನಕರವಾಗಿ ಕೂಗುತ್ತಿದ್ದರು. ದಾರಿ ಮೇಲೆ ನಡೆದು ಬರುವಾಗ, ಕಲ್ಲು, ಮಣ್ಣು, ಸಗಣೆ ಉಂಡೆಗಳು ತೂರಿ ಬರುತ್ತಿದ್ದವು. ಮೊದಮೊದಲು ಸಹನೆಯಿಂದ ಅವರ ಪೀಡನೆಗಳನ್ನೆಲ್ಲ ಸಹಿಸಿದ ಸಾವಿತ್ರಿ ಎದೆಗುಂದದೆ ಪಾಠ ಹೇಳಿದರು. ಒಂದು ಹಳೆ ಸೀರೆ ಉಟ್ಟು ಮತ್ತೊಂದು ಸೀರೆ ಒಯ್ಯುತ್ತಿದ್ದ ಆಕೆ ಶಾಲೆಗೆ ಹೋದನಂತರ ಸೀರೆ ಬದಲಿಸಿ ಕೆಲಸ ಮಾಡುತ್ತಿದ್ದರು. ಮೂದಲಿಕೆಯ ಮಾತು ಕೇಳಿಬಂದರೂ ‘ನಮ್ಮ ಆತ್ಮಸಾಕ್ಷಿಗೆ ಹಾಗೂ ದೇವರ ಇಚ್ಚೆಗೆ ಅನುಗುಣವಾಗಿ ನಡೆದುಕೊಂಡಿದ್ದೇವೆ’ ಎಂದು ಉತ್ತರಿಸುತ್ತಿದ್ದರು. ಆದರೆ ಪ್ರತಿದಿನ ಶಾಲೆಗೆ ಹೋಗುವಾಗ ನಿಂದನೆಗಳನ್ನು ಕೇಳಿಕೇಳಿ ಒಂದು ಹಂತದಲ್ಲಿ ಸೂಕ್ಷ್ಮ ಮನದ ಸಾವಿತ್ರಿ ಕೈಚೆಲ್ಲಿದರು. ಆಗ ಅವರ ಬೆಂಬಲಕ್ಕೆ ನಿಂತು ಧೈರ್ಯ ಹೇಳದ ಜೋತಿಬಾ ಸಂದರ್ಭವನ್ನು ದಿಟ್ಟವಾಗಿ ಎದುರಿಸಲು ಸೂಚಿಸಿದರು. ಕಿಡಿಗೆಡಿಗಳ ಬೆಜವಾಬ್ದಾರಿಯ ನಡವಳಿಕೆಗಳು ಉತ್ತಮ ಗುರಿ ಹೊಂದಿದ ಹೋರಾಟವನ್ನು ಕಂಗೆಡಿಸಬಾರದು; ಬೇಕೆಂದೇ ಅವಮಾನಿಸುವವರೆದುರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ತಿಳಿಹೇಳಿದರು. ತಮ್ಮ ದೀರ್ಘ ಹೋರಾಟದ ದಾರಿಯಲ್ಲಿ ಇಂಥ ಸಣ್ಣಪುಟ್ಟ ಕಿರಿಕಿರಿಗಳು ಪರೀಕ್ಷೇಯೆಂದು ತಿಳಿಯಬೇಕೆಂದು ಸವಿತ್ರಿಗೂ ಅನಿಸಿತು. ಉದಾತ್ತತೆಯೊಡನೆ ಅವಶ್ಯವಿರುವಲ್ಲಿ ದಿಟ್ಟತನವೂ ಅವಶ್ಯವೆಂದು ಅವರ ತಾಯಿಮನಸು ಅರಿತುಕೊಂಡಿತು. ಈ ತಿಳುವಳಿಕೆ ಮೂಡಿದ್ದೇ ಕಲ್ಲು ಬಿಸಾಡುತ್ತಿದ್ದವರನ್ನು ಒಂದುದಿನ ಸಾವಿತ್ರಿ ತಾವೇ ಹಿಡಿದು ತಿಳಿಸಿ ಬುದ್ಧಿಹೇಳಿದರು. ನಂರತ ನಿಂದನೆಗಳು ಕಲ್ಲು ತೂರಾಟಗಳು ಕ್ರಮೇಣ ನಿಂತುಹೋದವು.

ಆದರೆ ಗಂಭೀರ ಸ್ವಭಾವದ ಸಹನಾಮಯಿ ಮಹಿಳೆ ಸಾವಿತ್ರಿಬಾಯಿ ಶಾಲೆಯಲ್ಲಾಗಲಿ, ಹಾಸ್ಟೆಲಿನಲ್ಲಾಗಲೀ ಎಂದೂ ವಿದ್ಯಾರ್ಥಿಗಳನ್ನು ನಿಂದಿಸಿದವರಲ್ಲ. ಶಿಕ್ಷಿಸಿದವರಲ್ಲ. ಗ್ರಾಮೀಣ ಭಾಗದ ಅನಕ್ಷರಸ್ಥ ಕುಟುಂಬದ ಮಕ್ಕಳಿಗೆ ಕಲಿಕೆ ಸುಲಭವಾಗಲೆಂದು ನಾನಾ ಉಪಾಯ ಬಳಿಸಿ ಕಲಿಸುತ್ತಿದ್ದರೂ ಶಾಲೆಯನ್ನು ಅರ್ಧಕ್ಕೆ ಬಿಟ್ಟು ಹೋಗುವವರು ಇದ್ದರು. ಅರ್ಧಕ್ಕೆ ಶಾಲೆ ನಿಲ್ಲಿಸುವುದನ್ನು ತಡೆಯಲು ವಿದ್ಯಾರ್ಥಿಗಳಿಗೆ ಭತ್ಯೆ ಕೊಡುವುದು, ಪಾಠ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಮಾಡುವುದು, ಸುಲಭದಲ್ಲಿ ನೆನಪಿಡುವ ವಿಧಾನ ಹೇಳಿಕೊಡುವುದು, ಮಕ್ಕಳ ತಾಯ್ತಂದೆಯರಿಗೆ ಶಿಕ್ಷಣದ ಪ್ರಾಮುಖ್ಯತೆ ಕುರಿತು ತಿಳಿ ಹೇಳುವುದು, ಪಾಲಕರಿಗೂ ಅಕ್ಷರ ಕಲಿಸುವುದು ಮುಂತಾದ ಮಾರ್ಗಗಳನ್ನು ಸಾವಿತ್ರಿಬಾಯಿ ಅನುಸರಿಸಿದರು. ಮಕ್ಕಳು ಶಾಲೆ ಮುಗಿಸಿದ ನಂತರ ಉದ್ಯೋಗ ಮಾಡಲು ಅನುಕೂಲವಾಗುವಂತೆ ಕೆಲವು ಕೈಕೆಲಸಗಳನ್ನೂ ಕಲಿಸುತ್ತಿದ್ದರು. ಅರ್ಧಕ್ಕೆ ಓದು ನಿಲಿಸುವುದನ್ನು ತಡೆಯಲು ಜಾತ್ರಾ-ಖೆತ್ರಾ ವಿಧಾನವನ್ನು ಅನುಸರಿಸಿದರು. ಸಂತೆ, ಜಾತ್ರೆ, ತೀರ್ಥಕ್ಷೇತ್ರವೆನ್ನದೆ ಎಲ್ಲಡೆ ಶಿಕ್ಷಣದ ಮಹತ್ವ ಸಾರುವ ವಿಷಯವನ್ನು ಪ್ರಚಾರ ಮಾಡತೊಡಗಿದರು. ಮಕ್ಕಳಲ್ಲಿ ಓದುವ ಹುಚ್ಚು ಬೆಳೆಸಿದರು. ಅವರ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಯಾವುದೋ ಸ್ಪರ್ಧೆಯಲ್ಲಿ ಬಹುಮಾನ ಪಡೆದಾಗ, ಅದನ್ನು ಸ್ವೀಕರಿಸಲು ವೇದಿಕೆ ಹತ್ತಿದಳು. ಮುಖ್ಯ ಅತಿಥಿಗಳ ಬಳಿ ನಮಗೆ ಬೊಂಬೆ ಬೇಡ ;ನಮ್ಮ ಶಾಲೆಗೆ ಗ್ರಂಥಾಲಯ ಕೊಡಿ ಎಂದು ಕೇಳಿದಳಂತೆ!.

ಜೋತಿ ಬಾ ಪುಲೆ ಮತ್ತು ಸಾವಿತ್ರಿಬಾಯಿ ಪುಲೆ ತಾವೇ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸರಣಿ ಶಾಲೆಗಳನ್ನು ಶುರುಮಾಡಿದರು. ನೇಟಿವ್ ಫೀಮೆಲ್ ಸ್ಕೂಲ್-ಪುಣೆ ಎನ್ನುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯಾದರೆ ಸೊಸೈಟಿ ಫಾರ್ ಪ್ರಮೋಟಿಂಗ್ ಎಜುಕೇಷನ್ ಆಫ್ ಮಹಾರ್ಸ್ ಆಂಡ್ ಮಾಂಗ್ಸ್ ಎನ್ನುವುದು ಅಸ್ಪøಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಯಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ವಿದ್ಯಾರ್ಥಿಗಳು ಸಾವಿತ್ರಿಬಾಯಿ ಪುಲೆಯವರ ಶಾಲೆಯಲ್ಲಿ ಕಲಿಯುತ್ತಿದ್ದರು. 1852ರಲ್ಲಿ ಶಿಕ್ಷಣ ಇಲಾಖೆಯು ಮಾದರಿ ಶಿಕ್ಷಕಿ ಎಂದು ಸಾವಿತ್ರಿಬಾಯಿಯವರನ್ನು ಸನ್ಮಾನಿಸಿತು. 1853ರಲ್ಲಿ ಈ ಶಾಲೆಗಳಲ್ಲಿ ಕಲಿತ ಒಟ್ಟು 237 ವಿದ್ಯಾರ್ಥಿನಿಯರು ಪುಣೆಯ ಕಾಲೇಜಿನಲ್ಲಿ ಪರಿಕ್ಷೆ ಬರೆದರು. ಪರೀಕ್ಷೆ ಬರೆಯಲು ಹೋದ ಹೆಣ್ಣುಮಕ್ಕಳನ್ನು ನೋಡವ ಕೂತೂಹಲದಿಂದ ಪುಣೆಯ ಕಾಲೇಜಿನ ಕಂಪೌಡಿನೊಳಗೆ 3000ಜನ, ಹೊರಗೆ ಕೆಲವು ಸಾವಿರ ಜನ ನೆರೆದಿದ್ದರು!

ಭಾರತದಲ್ಲಿ ಮೊಟ್ಟ ಮೊದಲ ಮಹಿಳಾ ಪಾಠಶಾಲೆಯನ್ನು ಸ್ಥಾಪಿಸಿದ ಸಾವಿತ್ರಿಬಾಯಿ 1852ರಲ್ಲೇ ‘ಮಹಿಳಾ ಸೇವಾ ಮಂಡಳಿ’ ಎಂಬ ಮಹಿಳಾ ಸಂಘವನ್ನು ಕೂಡ ಸ್ಥಾಪಿಸಿದರು. ಮಾನವ ಹಕ್ಕುಗಳ ಬಗ್ಗೆ, ಇತರೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಹಿಳೆಯರನ್ನು ಜಾಗೃತಗೊಳಿಸುವುದಕ್ಕೆ ಈ ಸಂಸ್ಥೆ ಬಹಳ ಪ್ರಯತ್ನ ಮಾಡಿತು. ಮಹಿಳೆಯರಿಗೆ ಲಿಂಗಸಂಬಂಧಿಯಾಗಿ ಎದುರಾಗುವ ಸಮಸ್ಯೆಗಳ ಜೊತೆ ಜಾತಿ ಮತ್ತು ಪಿತೃಸ್ವಾಮ್ಯ ವ್ಯವಸ್ಥೆಯ ಶೋಷಣೆ ಕೂಡಾ ನಡೆಯುತ್ತಿದೆಯೆಂಬ ವಾಸ್ತವನ್ನು ಒಬ್ಬ ಮಹಿಳೆಯಾಗಿ ಆಕೆ ಪೂರ್ಣವಾಗಿ ಅರ್ಥಮಾಡಿಕೊಂಡಿದ್ದರು. ಮಹಿಳೆಯರ ಪ್ರತ್ಯೇಕ ಸಮಸ್ಯೆಗಳ ಮೇಲೆ ನಡೆದ ಹಲವು ಚಳುವಳಿಗಳಲ್ಲಿ ಆಕೆ ಪಾಲು ಹಂಚಿಕೊಂಡಳು. ವಿಧವೆಯರ ಮೇಲಿನ ತಾರತಮ್ಯಕ್ಕೂ, ಅಕ್ರಮ ಸಂತಾನ ಮಕ್ಕಳ ಹತ್ಯೆಗಳ ವಿರುದ್ಧ ಪ್ರಚಾರವನ್ನು ನಡೆಸಿದ್ದಳು. ವಿಧವಾ ವಿವಾಹದ ಅಗತ್ಯವನ್ನು ಸಾರಿ ಹೇಳಿದ್ದಲ್ಲದೇ ಅಪಾರ ಪ್ರೋತ್ಸಾಹವನ್ನು ನೀಡಿದಳು. ತಬ್ಬಲಿ ಮಕ್ಕಳಿಗಾಗಿ ಅನಾಥಾಲಯವನ್ನು ಸ್ಥಾಪಿಸಿದಳು. ದಿಕ್ಕಿಲ್ಲದ ಮಹಿಳೆಯರಿಗೂ ಮಕ್ಕಳಿಗೂ ಸಾವಿತ್ರಿಬಾಯಿಯ ಮನೆಯೇ ಒಂದು ಪುನರ್ವಸತಿ ಕೇಂದ್ರವಾಗಿ ಬದಲಾಯಿತು. ವಿಧವೆಯರ ತಲೆಗೂದಲು ಬೋಳಿಸುವ ಆಚಾರಣೆಗೆ ಸಹಕರಿಸುವುದಿಲ್ಲವೆಂದು ಕ್ಷೌರಿಕರನ್ನು ಪ್ರತಿಭಟನೆ ಮಾಡುವಂತೆ ಪ್ರೋತ್ಸಾಹಿಸಿದಳು. ಅಷ್ಟೆ ಅಲ್ಲದೇ ಸತ್ಯ ಶೋಧಕ ಸಮಾಜವನ್ನು ನಿರ್ವಹಿಸಿದ ಮುಖ್ಯ ನಾಯಕರಲ್ಲಿ ಸಾವಿತ್ರಿವಾಯಿ ಕೂಡಾ ಒಬ್ಬರು. ಆ ಸಂಸ್ಥೆಯ ದೈನಂದಿನ ಕಾರ್ಯ ಕಲಾಪಗಳೆಲ್ಲ ಆಕೆಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದವು. ಸಂಸ್ಥೆಯ ಮಹಿಳಾ ವಿಭಾಗಕ್ಕೆ ಆಕೆ ನಾಯಕಿಯಾಗಿದ್ದರು. ಸಮಾಜದ ಕಾರ್ಯಕಾರ್ತರನ್ನು ಹಲವು ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸುವುದಕ್ಕೆ ಆಕೆ ಶ್ರದ್ಧೆ ವಹಿಸಿದಳು. ಆಕೆಗಿರುವ ಸಮಗ್ರ ದೃಷ್ಟಿಕೋನ, ಬದ್ಧತೆ, ಸಾಮಜಿಕ ಆಚರಣೆಯಂತಹ ಗುಣಗಳನ್ನು ಸತ್ಯಶೋಧಕ ಸಮಾಜದ ಕಾರ್ಯಕರ್ತರು ಅಪಾರವಾಗಿ ಗೌರವಿಸುತ್ತಿದ್ದರು. ಅವರ ಮನವಿಯ ಮೇರೆಗೆ, 1890 ರಲ್ಲಿ ಜ್ಯೋತಿಬಾ ಪುಲೆ ಮರಣಾನಂತರ ಸಾವಿತ್ರಿಬಾಯಿ ಆ ಸಂಸ್ಥೆಯ ನಾಯಕತ್ವದ ಹೊಣೆಯನ್ನು ಸ್ವೀಕರಿಸಿದಳು. ಮುಂದೆ 1897 ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಪುಲೆ ಅವರೇ ಆ ಕಾಯಿಲೆಯ ಸೋಕಿಗೆ ಬಲಿಯಾಗಿ ತೀರಿಕೊಂಡರು.

ಜಾತಿ ರಹಿತ ಸಮಾಜಕ್ಕಾಗಿ ಕನಸುಕಾಣುತ್ತಿದ್ದ ಫುಲೆದಂಪತಿಗಳನ್ನು ಹೊಸ ಅರಿವಿನೊಂದಿಗೆ, ಹೊಸ ಬೆಳಕಿನೊಂದಿಗೆ ತಿಳಿಯುವುದು ಭಾರತೀಯರಿಗೆ ಅವಶ್ಯಕವಾಗಿದೆ. ಭಾರತೀಯ ಸಮಾಜದ ಕೆಡುಕುಗಳ ಮೂಲವನ್ನು ಅರ್ಥಮಾಡಿಕೊಂಡು ಬದಲಾವಣೆಗಾಗಿ ಹೋರಾಡಿದ; ಹಲವು ಅಡೆತಡೆಗಳ ನಡುವೆ ಹುಡುಗಿಯರ ನಾಲಿಗೆಯ ಮೇಲೆ ಅಕ್ಷರ ಬರೆದ ಮೊದಲ ಗುರು ಸಾವಿತ್ರಿ ಬಾಯಿ ಫುಲೆ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಧರ್ಮ ಕೊಡಮಾಡುವ ಪಾಪಪುಣ್ಯ-ಸ್ವರ್ಗನರಕಗಳ ಲೆಕ್ಕಾಚಾರವನ್ನು ಧಿಕ್ಕರಿಸಿ ನಿಂತು ಅಕ್ಷರ ಕಲಿಯಬಾರದವರಿಗೆ ಓದುಬರಹ ಕಲಿಸಿದ ಸಾವಿತ್ರಿಬಾಯಿ ಮಹಾನ್ ಶಿಕ್ಷಕಿಯಷ್ಟೆ ಅಲ್ಲ, ಹೃದಯವಂತ ತಾಯಿಯೂ ಆಗಿದ್ದಾರೆ ಅಂತಹ ಒಂದು ತಾಯ್ತನದ ಚೇತನದ ಶಿಸ್ತು, ಬದ್ಧತೆ, ತ್ಯಾಗ ಮತ್ತು ಸಹನೆಯ ಜೀವನ ಪಾಠಗಳನ್ನು ಓದಿಕೊಳ್ಳಬೇಕಾದ, ಅವರ ಚೈತನ್ಯವು ವಿಶ್ವದ ಎಲ್ಲಡೆ ಹರಡಿಸಬೇಕಾದ ತುರ್ತ ಪರಿಸ್ಥಿತಿ ಮತ್ತೆ ಬಂದಿದೆ


ಡಾ.ಸುರೇಖಾ ರಾಠೋಡ್


ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

2 thoughts on “

  1. ಸಾವಿತ್ರಿಬಾಯಿ ಜ್ಯೋತಿಬಾ ಪುಲೆ ಅವರಿಗೆ ಮನೆಯಿಂದ ಹೊರಗೆ ಹಾಕಿದಾಗ ಪುಲೆ ದಂಪತಿಗಳಿಗೆ ಅನ್ನ ಆಶ್ರಯ ನೀಡಿ ತನ್ನ ಮನೆಯೊಳಗೇ ಶಾಲೆ ತೆರೆದಿದ್ದು ಫಾತಿಮಾ ಶೇಕ್ ಮತ್ತು ಅವರ ಅಣ್ಣ ಉಸ್ಮಾನ್ ಶೇಕ್ ಅವರು. ಸಾವಿತ್ರಿ ಬಾಯಿ ಅವರ ಅನಾರೋಗ್ಯ ಸಂದರ್ಭದಲ್ಲಿ ಫಾತಿಮಾ ಬೋಧನೆಯನ್ನ ಮುಂದುವರಿಸಿ ಅವರಿಗೆ ಸ್ಥಯ್ರ್ಯ ತುಂಬಿದ್ದು ಶೇಕ್ ಸಹೋದರ ಸಹೋದರಿಯರು ಎಂಬುದು ಇತಿಹಾಸ ಸತ್ಯ. ಆದರೂ ಅವರ ಕೊಡುಗೆ ಇತಿಹಾಸದಲ್ಲಿ ಮರೆಮಾಚುತ್ತಿರು ವದು ಶೋಚನೀಯ ಸಂಗತಿ
    ಎ ಎಸ್. ಮಕಾನದಾರ

  2. ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಕ್ ರನ್ನು ಮರೆಯುವಂತಿಲ್ಲ. ಅವರು ಶಿಕ್ಷಣಕ್ಕೆ ನೀಡಿ ಕೊಡುಗೆಯನ್ನು ಮಹಿಳಾ ಸಮುದಾಯದ ಸ್ಮರಿಸಬೇಕಾಗಿದೆ ಮತ್ತು ಗೌರವಿಸಬೇಕಾಗಿದೆ.

Leave a Reply

Back To Top