ಆ ತಾಯಿ- ಈ ತಾಯಿ

ಕಾವ್ಯ ಸಂಗಾತಿ

ಆ ತಾಯಿ- ಈ ತಾಯಿ

ಶೋಭಾ ಹಿರೇಕೈ

ಇಲ್ಲಿ ಈ ತಾಯಿ
ಗೇಣುದ್ದದ ಫ್ರಾಕಿನಿಂದಲೂ ಕಾದಿಟ್ಟುಕೊಂಡ
ಬಟ್ಟೆ ಗಂಟನು ಬಿಚ್ಚಿ
ಬೆಳ್ಳಿ ಉಡುದಾರ, ಲೋಲಾಕು
ಕಾಲ್ಕಡಗ,ಕೈಬಳೆ
ಪುಟ್ಟ ಗೆಜ್ಜೆಯ ಪಟ್ಟಿಯನ್ನೆಲ್ಲ
ಹಣೆಗೊತ್ತಿಕೊಂಡು,
ಅವಳ ಅಂಬೆಗಾಲಿನ ನೆನಪನ್ನು ಮಗಳು ಮಿಂದ
ಸಂಭ್ರಮಕೆ ತಂದ
ಮೊದಲ ಸೀರೆಯ ಝರಿಯ ಮೇಲೆಲ್ಲಾ..
ಹರಡಿಟ್ಟುಕೊಂಡು ಬಿಕ್ಕುತಿದ್ದಾಳೆ…

ಬಿಕ್ಕಳಿಕೆಯಾದರೆ ನಿಲ್ಲಿಸಬಹುದಿತ್ತು
ಈ ಬಿಕ್ಕುವಿಕೆಗಾವ ಮದ್ದು?

ಬೆಳಬೆಳಗ್ಗೆಯೇ ಎದ್ದು
ರಂಗೋಲಿಯ ಬೊಟ್ಟು ಬೊಟ್ಟನೂ ಬಿಡದೆ
ಅಂಗಳದ ತುಂಬೆಲ್ಲ … ಬಣ್ಣವನ್ನೇ ಬಿತ್ತಿ ಹೋದ ಮಗಳು,
ಮುಸ್ಸಂಜೆ ಯ ದೀಪ ಹಚ್ಚಲು ಬಾರದೆ
ಸೂತಕದ ಹಣತೆಯೇ ಆಗಿ ಹೋದ
ಹಣೆ ಬರಹವ ನೆನೆದು
ಹನಿಗಣ್ಣಲೇ..ಹಲುಬುತ್ತಾಳೆ ಈ ತಾಯಿ
” ಹೆರ ಬೇಡಿರೇ ಅವ್ವ ಹೆರ ಬೇಡಿರೇ…
ಇಂಥ ಭಾಗ್ಯಕೆ ಹೆಣ್ಣ ಹೆರಬೇಡಿರೆ.”

ಅಲ್ಲಿ….
ಆ ತಾಯಿ,
ಕದವಿಕ್ಕಿಕೊಂಡೇ.. ಕಲ್ಲಾಗಿಹೋಗಿದ್ದಾಳೆ
ಮೊನ್ನೆ ಮೊನ್ನೆವರೆಗೂ
ತನ್ನ ಸೀರೆ ಸೆರಗಿನ ಚುಂಗ ಹಿಡಿದೇ..
ಮಲಗುತ್ತಿದ್ದ ಮಗ
ಕಾಮಿಯಾದುದೆಲ್ಲಿ?
ಕೊಲ್ಲುವಂತ ಕ್ರೂರಿಯಾದುದೆಲ್ಲಿ?
ತನ್ನ ಎದೆ ಹಾಲೇ.ನಂಜೇರಿ ವಿಷವಾದುದೆಲ್ಲಿ?

ಉತ್ತರಿಸುವವರಿಲ್ಲದೆ ಬರೀ
ಕಲ್ಲೆಸೆತದ ನೋವಿಗೆ
ಕಲ್ಲೇ…. ಆಗಿದ್ದಾಳೆ
ಮತ್ತಲ್ಲೇ ಕೂಗುತ್ತಾಳೆ,
“ಹೆರ ಬೇಡಿರೆ ಅವ್ವ ಹೆರಬೇಡಿರೇ
ಇಂಥ ಭಾಗ್ಯಕೆ ಗಂಡ ಹೆರಬೇಡಿರೆ..”
——————_—————————

3 thoughts on “ಆ ತಾಯಿ- ಈ ತಾಯಿ

 1. ವರ್ತಮಾನಕೆ ಮುಖಾಮುಖಿಯಾಗುವ ಕವಿತೆ ಇದು …ಹೆಣ್ಣು ,ಗಂಡು ಇಬ್ಬರನ್ನೂ ಹೆರುವವಳು‌ ತಾಯಿ. ಎರಡು ಭಿನ್ನ ಮನಸ್ಥಿತಿಯನ್ನು ತಾಯಿಯಾಗಿ ಕಾಣುವ ಕಾಣ್ಕೆ ದೊಡ್ಡದು.
  ಈ ಕವಿತೆ ನಿತ್ಯವೂ ಉಳಿಯುವಂತಹದ್ದು. ನಿತ್ಯವೂ ಅತ್ಯಾಚಾರದ ಕಹಿ ಸುದ್ದಿಗಳು, ಹೆಣ್ಣು ಮಕ್ಕಳು
  ಕಾಣೆಯಾಗುವ ಆತಂಕದ ಸುದ್ದಿಗಳ
  ವಾತಾವರಣದ ಇವತ್ತಿನ ಸನ್ನಿವೇಶದಲ್ಲಿ ….ಹೆಣ್ಣು ಮತ್ತು ಗಂಡು ಹೆರುವ ಇಬ್ಬರು ತಾಯಂದಿರನ್ನು ಕವಯಿತ್ರಿ ಶೋಭಾ ನಾಯ್ಕ ಮುಖಾಮುಖಿಯಾಗಿಸುತ್ತಾರೆ.
  ತಾಯ್ತನವೇ ಈ ಕವಿತೆಯ ಜೀವಾಳ.
  ಹಣೆಬರಹ ಎಂಬ ಸಾಂಪ್ರದಾಯಿಕ ಹೇರುವಿಕೆಯನ್ನು ಕವಯಿತ್ರಿ ದಾಟಿಲ್ಲ ಎನಿಸಿದರೂ, ಎದೆಯ ಹಾಲು ನಂಜೇರುವಿಕೆಗೂ, ಗಂಡು ಮಗುವಿನ ಕ್ರೂರ ವರ್ತನೆಗೂ ತಳುಕು ಹಾಕಿ ಪ್ರಶ್ನೆಯೊಂದನ್ನು ಎತ್ತಿದ್ದಾರೆ.
  ಮಗ ಕಾಮಿಯಾದುದು ಎಲ್ಲಿ? ಯಾವಾಗ ಎಂಬ ಭಾವನಾತ್ಮಕ ಪ್ರಶ್ನೆಯನ್ನು ಸಮಾಜದ ಎದುರು ಇಡುತ್ತಾರೆ . ಇಲ್ಲಿ ಸಮಾಜದ ನೈತಿಕ ಪ್ರಶ್ನೆಯೂ ಇದೆ. ಸಮಾಜಶಾಸ್ತ್ರದ ಬಗೆ ಹರಿಯದ ಪ್ರಶ್ನೆಯೂ ಇದೆ.‌
  “ತಾಯ ಮೊಲೆಹಾಲು ವಿಷವಾದೊಡೆ ಇನ್ನಾರಿಗೆ ದೂರಲಿ , ಕೂಡಲ ಸಂಗಮದೇವಾ” ಎಂದು ಬಸವಣ್ಣ ೧೨ ನೇ ಶತಮಾನದಲ್ಲಿ ಎತ್ತಿದ ಪ್ರಶ್ನೆಯೂ ಕನ್ನಡ ಸಾಹಿತ್ಯದಲ್ಲಿದೆ. ಆ ಪ್ರಶ್ನೆ ಇಂದಿಗೂ ಸನಾತನ ಸಂಪ್ರದಾಯದ ಎದುರು ಪ್ರಶ್ನೆಯಾಗಿಯೇ ಉಳಿದಿದೆ. “ಮೊಲೆಯುಂಬ ಭಾವತಪ್ಪಿ ಅಪ್ಪಿದೊಡೆ ತಲೆಯ ಕೊಂಬ ನಮ್ಮ ಕೂಡಲ ಸಂಗಮದೇವಾ” ಎಂತಲೂ‌ ಬಣವಣ್ಣ ಎಚ್ಚರಿಸಿದ್ದಾನೆ. ಬಸವಣ್ಣ ವ್ಯವಸ್ಥೆಯ ವಿರುದ್ಧ ಎತ್ತಿದ ಪ್ರಶ್ನೆಗಳನ್ನೇ ಕವಯಿತ್ರಿ ಶೋಭಾ ”..ಆ ತಾಯಿ…..ಈ ತಾಯಿ ” ಕವಿತೆಯ ಮೂಲಕ ಎತ್ತಿದ್ದಾರೆ.

  ಈ ಕವಿತೆ ಎಲ್ಲಾ ತಾಯಂದಿರನ್ನು, ಸಮಾಜವನ್ನು ಕಾಡಲಿ…

 2. ನಿಜವಾಗಿಯೂ ಕಾಡುವ ಕವಿತೆ….ಆ ತಾಯಿ ಈ ತಾಯಿ ಯ ನಿಟ್ಟುಸಿರ…. ಬಿಸಿ ಓದುಗರಿಗೆ ತಾಕದೇ ಇರುವುದಿಲ್ಲ…

Leave a Reply

Back To Top