ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ

ಹುಡುಕಾಟ

ಅವನನ್ನು ಹುಡುಕುತ್ತಿದ್ದೆ
ನಿತ್ಯ ನಿರಂತರವಾಗಿ
ಅವನಿಗಾಗಿ ಹಂಬಲಿಸುತ್ತಿದ್ದೆ
ಅವನು ಕಾಣದೆ ಕೊರಗಿ

ಹೋದಲ್ಲೆಲ್ಲ, ಬಂದಲ್ಲೆಲ್ಲ
ಎಲ್ಲಿಯೂ ಇರುವಿಕೆಯ
ಕುರುಹು ಕಾಣಲಿಲ್ಲ
ಹುಡುಕುವಲ್ಲೆಲ್ಲ
ಅವನು ಸಿಗಲೇ ಇಲ್ಲ
ಬಹುಶಃ ಅಲ್ಲೆಲ್ಲ ಇರಲೇ ಇಲ್ಲ

ಆದರೂ ಹುಡುಕ ಹೊರಟೆ
ಮಸೀದಿ, ಮಂದಿರ,
ಇಗರ್ಜಿಗಳ ಒಳಗೆ
ಬೆಟ್ಟದ ಶಿಖರದ ತುತ್ತ ತುದಿಯ ಮೇಲೆ
ಗುಹೆ, ಕಣಿವೆ, ಕಂದರಗಳ ನಡುವೆ
ಹಿಮದ ಹರಳಲ್ಲೂ
ಮರಳ ಕಣಕಣದಲ್ಲೂ
ನದಿಯ ಅಲೆಗಳಲ್ಲಿ
ಕಡಲ ಕಿನಾರೆಯಲ್ಲಿ
ಮುಗಿಲ ಮಾರುತದಲ್ಲಿ
ಹೊರಗೆಲ್ಲಿಯೂ ಅವನ
ಅಸ್ತಿತ್ವ ಕಾಣದಾದೆ

ಒಂದೆಡೆ ಕುಳಿತೆ
ಬುದ್ದನಂತಾಗಿ
ಮಾಯೆಯ ಲೋಕದ
ಹೊರ ಕಣ್ಣು ಮುಚ್ಚಿದೆ
ಒಳ ಅರಿವಿನ ಕಣ್ಣು ತೆರೆದೆ
ನನ್ನ ಅಂತರಂಗದೊಳಗೆ ಇಣುಕಿದೆ
ಅವನನ್ನು ಶೋಧಿಸಿದೆ
ಬೆಳಕೊಂದನು ಕಂಡೆ
ಎಲ್ಲೂ ಕಾಣದ ಅವನ
ನನ್ನೊಳಗೆ ನಾ ಕಂಡು
ಪಾವನನಾದೆ

ನಿಜ!
ಅವನು ಎಲ್ಲೆಡೆಯೂ ಇದ್ದ,
ಇದ್ದಾನೆ ಮತ್ತು ಇರುತ್ತಾನೆ
ಅಣು ರೇಣು ತೃಣಕಾಷ್ಠಗಳಲ್ಲಿ
ಇದ್ದೂ ಇಲ್ಲದಂತಾಗಿ

ಸದಾ… ಸರ್ವದಾ…
ಅವನಕಾಣುವ ಕಣ್ಣು
ಕುರುಡಾಗಿರ ಬಾರದಷ್ಟ

*****************

ಪ್ರೀತಿ ಹಂಚುತ ಸಾಗು


ಮೋಜಿನ ಕುದುರೆ ಏರಿ
ಮನಸು ಹೊರಟಿದೆ ಸವಾರಿ
ಕಾಣದೂರಿಗೆ ಯಾವ ದಾರಿ?
ಕಾಣಿಸು ಪ್ರಭುವೆ ಒಂದು ಸಾರಿ
ತಂದಾನ ತಾsನನ… ತಾನೇ ತಂದಾsನ…

ಕಂಡದ್ದು ತಪ್ಪಿಲ್ಲಿ
ಕಾಣದ್ದೆ ಸರಿ ಇಲ್ಲಿ
ಕಂಡು ಕಾಣದ ಆಟಕೆ
ದೇವನೆ ಮೂಕ ಸಾಕ್ಷಿ ಇಲ್ಲಿ
ತಂದಾನ ತಾsನನ… ತಾನೇ ತಂದಾsನ…

ಒಳಗೊಂದು ಹೊರಗೊಂದು
ಮುಖವೊಂದು ಮುಖವಾಡ ಹಲವು
ನೀತಿವಂತರಿಗಿದು ಕಾಲವಲ್ಲ
ಸುಳ್ಳೆ ಸತ್ಯವಿಲ್ಲಿ, ಈ ಕಲಿಗಾಲದಲ್ಲಿ
ತಂದಾನ ತಾsನನ… ತಾನೇ ತಂದಾsನ…

ಎಷ್ಟು ಉಂಡರೂ ಹಸಿವಿಲ್ಲಿ
ಉಟ್ಟರೂ ಬೆತ್ತಲೆಯೇ
ಆಲಯದ ದಾಸರೆ ಎಲ್ಲಾ
ಬಯಲಾಗುವವರಾರಿಲ್ಲವಲ್ಲ
ತಂದಾನ ತಾsನನ… ತಾನೇ ತಂದಾsನ…

ಬದುಕಿಗೆ ಕಷ್ಟ ನೂರು
ಹಲವು ಬಂಧಗಳ ತೇರು
ಸಂಕೋಲೆ ಬಿಡಿಸಿ ಹಕ್ಕಿಯಾಗಿ ಹಾರು
ಅನುಭವದಿ ಮಾಗಿ ಹಣ್ಣಾಗು
ತಂದಾನ ತಾsನನ… ತಾನೇ ತಂದಾsನ…

ಬಿಸಿಲಿಗೆ ನೆರಳಿಲ್ಲಿ
ನೆರಳಿಗೂ ಸಾವಿಲ್ಲಿ
ಯಾವ ಜಾತಿ, ಯಾವ ಧರ್ಮ
ಮನುಜರೆಲ್ಲರೂ ಒಂದೇ ಜಗದಲ್ಲಿ
ತಂದಾನ ತಾsನನ… ತಾನೇ ತಂದಾsನ…

ಕೊರಳಿಗೆ ಹಾಡು
ಕೊಳಲಿನ ಜಾಡು
ಜೀವ ಮರಳಿ ಮಣ್ಣಿಗೇನೆ
ಪ್ರೀತಿ ಹಂಚುತ ಸಾಗು
ತಂದಾನ ತಾsನನ… ತಾನೇ ತಂದಾsನ…

*******

ಕತ್ತಲ ನೆರಳು

ಕಿಟಕಿಯ ಆಚೆ ನೋಡುತ್ತೇನೆ
ಅಲ್ಲೊಂದು ಬಣ್ಣದ ಚಿತ್ತಾರದ ಚಿಟ್ಟೆ
ಚಂಚಲವಾಗಿ ಹಾರುತ್ತಿದೆ
ಅರಳಿ ನಗುವ ಹೂಗಳ ಮೇಲೆ
ನನ್ನ ಮನಸ್ಸಿನ ರೂಪಕವಾಗಿ

ಕಾಣದ ಲೋಕವೊಂದು
ಕರಬೀಸಿ ಕರೆಯುತ್ತಿದೆ
ಹಕ್ಕಿಯಾಗಿ ರೆಕ್ಕೆ ಹರಡಿ
ಹಾರಿ ಬಾ ಎಂದು
ಉಳಿದಿರುವೆ ಬಂಧಿಯಾಗಿ

ಕವಾಯತ್ತು ನಡೆಸಿವೆ ನೆನಪುಗಳು
ಕನಸುಗಳ ಜೊತೆಗೂಡಿ
ಮಸ್ತಕದಲ್ಲಿ ಒನಕೆ ಕುಟ್ಟುವ ಶಬ್ಧ
ಬದುಕಿರುವೆ ಸಾವಾಗಿ

ಸುತ್ತಮುತ್ತಲೂ, ಎತ್ತಲೂ
ಪ್ರಶ್ನೆಗಳು ಕಾಡುತ್ತಿವೆ
ಉತ್ತರ ಕಾಣದೆ
ಬೆಳಕಿನ ನೆರವು ಪಡೆದು
ಕತ್ತಲ ನೆರಳಾಗಿ

ವಿಧಿ ಮಲಗಿದೆ
ಕಾಲು ಚಾಚಿ ಹಾಸಿಗೆಯಲ್ಲಿ
ಭವಿಷ್ಯದ ಭಯವಾಗಿ
ವಾಸ್ತವದ ಖಯಾಲಿನಲಿ
ಕಡು ವೈರಿಯಾಗಿ


ಜಬೀವುಲ್ಲಾ ಎಮ್. ಅಸದ್

Leave a Reply

Back To Top